|| ವೃತ್ತ ||

ಆದಿ ಗುರೂಪದೇಶ ವಚನಾರ್ಥಮನೊಮ್ಮೆ ವಿವೇಕ ದೃಷ್ಟಿಯಿಂ
ಭೇದಿಸಿ ನೋಡೆ ತತ್ವಮಸಿಯೆಂದುದಲಾವ್ಯತಿರೇಕ ಬುದ್ಧಿಯಿಂ
ವಾದಿಸಿ ಕಾಣ್ಬ ನಿಶ್ಚಯಮದೇಸ್ವಯ ಮೇಲು ಶಿವಾತ್ಮಲಿಂಗ ವೆಂ
ದೋದುವದೇ ನಿಜೈಕ್ಯಪದ ಸಿದ್ಧಿಗೆ ಕಾರಣಿಕಂ ಶಿವಾಧವಾ.  

        

ಒಂದಕೊಂಬತ್ತ ನುಡಿದು ಕಣ್ಣ ಕೆಂಚನೆಮಾಡಿ
ಗಂಡುಗೆದಱಿ ಮಡು ಹಿಕ್ಕಿ ಕೆಲವರ ಕಂಡಡೆ
ಅಂಜುವೆ ವಾಸರಿಸುವೆ.
ಓದಿದನೆಂಬ ಭಂಗವಾದರಾಗಲಿ
ಕೂಡಲಸಂಗನ ಶರಣರನುಭಾವವಿಲ್ಲ
ದವರ ಹೊಲ ಮೇರೆಯ ಹೊಂದೆ
ಹೊಲನ ಬಿಟ್ಟೋಡುವೆ.

         

ವಚನದ ರಚನೆಯ ಅನುಭಾವಕ್ಕೆ ಬಲ್ಲೆವೆಂದಂಬರು
ವಚನವಾವುದು ರಚನೆಯಾವುದು ಅನುಭಾವವಾವುದು ಹೇಳಿರಣ್ಣಾ
ವಚನ ಆತ್ಮ ತೃಷೆಯನಱಿಯಬಲ್ಲಡೆ
ರಚನೆ ಸ್ಥಾವರ ಜಂಗಮದಲ್ಲುದಯವಾಗಿರಬಲ್ಲಡೆ
ಅನುಭಾವ ಅರಿಷಡ್ವರ್ಗಂಗಳಿಚ್ಛೆಗೆ ಹರಿಯಬದಿರಬಲ್ಲಡೆ ಅನುಭಾವ.
ಇಂತಲ,ದೆ ವೇದ ಶಾಸ್ತ್ರಾಗಮಂಗಳ ಬಲ್ಲೆವೆಂದು ನುಡಿವಾತ
ಅನುಭಾವಿಯಲ್ಲ
ಅವು ಬ್ರಹ್ಮನ ಎಂಜಲು.
ಸತ್ವರಜ ತಮವನೊತ್ತಿ ನಿಂದಲ್ಲಿ ಸಹಜ ನೆಲೆಗೊಂಬುದು
ಇದನಱಿಯದೆ ವಿದ್ಯಾಭ್ಯಾಸವ ಬಲ್ಲೆನೆಂದು ನುಡಿವಾತನನು
ಭಾವಿಯೆ ? ಅಲ್ಲ.
ಆತನಿದಿರನಂಬಿಸಿ ಉಂಬ ಉದರಪೋಷಕನಯ್ಯಾ,
ಕೂಡಲಚನ್ನ ಸಂಗಮದೇವಾ.

         

ನಿರಾಳವೆಂಬ ಕೂಸಿಂಗೆ ಬೆಣ್ಣೆಯನಿಟ್ಟು ಹೆಸರಿಟ್ಟು
ಕರೆವರಾರೋ      ಅಕಟಕಟಾ ಶಬ್ದದ ಲಜ್ಜೆಯ ನೋಡಾ
ಗುಹೇಶ್ವರನನಱಿಯದ ಅನುಭಾವಿಗಳೆಲ್ಲರ ತರಕಟ ಕಾಡಿತ್ತು.

ಮಾರಥದ ಮೇಲೆನಿಂತುದ ಭೇದಿಸಬಾರದಯ್ಯಾ
ಸ್ವರಶಬ್ದವಾದಿಗಳು ಹರಿಯತಾನಱಿಯರಾಗಿ
ಹರಿವಿರಿಂಚಿಗಳಿಗೆ ತೂರ್ಯವೆಲ್ಲಿಯದೋ ?
ತನುಮುಖದನುಭಾವಿಗಳಿವರು
ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗದಲ್ಲಿ
ವಾಗದ್ವೈತವ ನುಡಿವರಲ್ಲದೆ ನಿಜವೆಲ್ಲಿಹದೋ ?

ಶಬ್ದಸುಖಕ್ಕೆ ಮೆಚ್ಚಿ ಮಾತಂಗೆ ಮಾತನೆ ಕೊಟ್ಟು ಕೆಟ್ಟೆನಯ್ಯಾ.
ಅನುಭಾವ ಅಕ್ಕೆಯಾಗದೆ ಬೆಬ್ಬನೆ ಬೆಱಿತೆನಯ್ಯಾ.
ಅಮೃತದ ಕೊಡನ ತುಂಬಿ ಒಡೆಯಹೊಯಿದು ಅಱಸಲುಂಟೆ ?
ಸ್ವಾಮಿ ಭೃತ್ಯ ಸಂಬಂಧವೆನ್ನ ಭಕ್ತಿ
ಪ್ರತ್ಯುತ್ತರ ನಾಯಕನರಕ ಕೂಡಲಸಂಗಮದೇವಾ.

ನಾದದ ಉತ್ಪತ್ಯ ಸ್ಥಿತಿ ಲಯವನು ಹೇಳಿದಡೇನು ಕೇಳಿದಡೇನು
ಎಲೆಮರುಳೆ
ಬಿಂದು ದಳದ ಉತ್ಪತ್ಯ ಸ್ಥಿತಿ ಲಯವ ಹೇಳಿದಡೇನು ಕೇಳಿದಡೇನು
ಎಲೆಮರುಳೆ
ಮಧ್ಯದ ಉತ್ಪತ್ಯ ಸ್ಥಿತಿ ಲಯವನು ಹೇಳಿದಡೇನು
ಎಲೆಮರುಳೆ
ಮುಗಿಲಗದ ಅಂಬರ ವಾಯುವಗ್ನಿ ಜಲಧರೆಯ ಹೊತ್ತು ಕೊಂಡು
ಅವ ಹೇಳಿದಡೇನು ಕೇಳಿದಡೇನು ಎಲೆಮರುಳೆ
ಗುಹೇಶ್ವರಲಿಂಗದ ಬಾಧೆಗೊಳಗಾಗಿ ಇವೆಲ್ಲವನುಂಟು ಮಾಡಲಱಿಯನಾಗಿ
ಇಲ್ಲೇನುತಿರ್ದೆನಯ್ಯಾ.

ಅಧಾರ ಸ್ವಾಧಿಷ್ಟಾನ ಮಣಿಪೂರಕ ಅನಾಹತ ವಿಶುದ್ಧಿ ಅಗ್ನೇಯದ ಮಾತ
ಹೇಳಿದಡೇನು ಕೇಳಿದಡೇನು ?
ತನ್ನಲ್ಲಿದ್ದುದ ತಾನಱಿಯದನ್ನಕ್ಕ ಹೀಳಿದಡೇನು ಕೇಳಿದಡೇನು ?
ಅನ್ಮನಿಯ ರಭಸದ ಮನ ಪವನದಲ್ಲಿದ್ದು
ಚನ್ನಮಲ್ಲಿಕಾರ್ಜುನಯ್ಯನ ಭೇದಿಸದನ್ನಕ್ಕ.

ಫಲದ ಸವಿಯ ವೃಕ್ಷವಱಿದಡೆ ಕೊಡುವುದೆ ಇದಿರಿಂಗೆ ?
ಅಶನದ ಸವಿಯ ಮಡಕೆಯಱಿದಡೆ ಪುಗುವುದೆ ಉಂಬುವದರಿಗೆ ?
ಲಿಂಗಸಂಗಿಯಾದಡೆ ಕಂಡಕಂಡವರಲ್ಲಿ ಉಲಿವನೆ ?
ನಿರಂಗವನೈದಿದ ಮಂಗಲೋತ್ತರನಂತೆ
ಇದರ ಸಂಗ ಲಿಂಗೈಕ್ಯವು ಹಿಂಗದೆ ನಿಷ್ಕಳಂಕ ಮಲ್ಲಿಕಾರ್ಜುನಾ.

ನೆಲದತ್ತ ಮುಂದಣ ಬಾಗಿಲ ಮೂಱುಮೊನೆಯ ಶೂಲದ ಮೇಲೊಂದು
ದೇಗುಲ
ಆಲಿಂಗದೊಳಗಣ ಹುವ್ವಿನ ಕಲ್ಲಿನಲ್ಲಿ ಸಿಲುಕಿರ್ದುದೊಂದು
ನಾದಮೂರುತಿ ಲಿಂಗ
ಒಂದು ಮಾತನಾಡಿದಡೆ ನುಡಿವದು ಗುಹೇಶ್ವರಲಿಂಗ ಮೆಚ್ಚಲು.
ಬಹುಮಾತಿನ ಮಾಲೆಯ ಅನುಭವಕ್ಕೆ ನಾಚುವೆ ಕಾಣಾ,
ಸಂಗನಬಸವಣ್ಣಾ.

೧೦

ನುಡಿದಡೆ ಮುತ್ತಿನ ಹಾರದಂತಿರಬೇಕು
ನುಡಿದಡೆ ಮಾಣಿಕ್ಯದ ದೀಪ್ತಿ ಯಂತಿರಬೇಕು.
ನುಡಿದಡೆ ಸ್ಫಟಿಕದ ಶಲಾಕೆಯಂತಿರಬೇಕು.
ನುಡಿದಡೆ  ಲಿಂಗಮೆಚ್ಚಿ ಅಹುದೆನಬೇಕು,
ನುಡಿಯೊಳಗಾಗಿ ನಡೆಯದಿರ್ದಡೆ
ಕೂಡಲಸಂಗಮದೇವನೆಂತೊಲಿವನವ್ವಾ ?

೧೧

ನಿಕ್ಷೇಪದ ನಿಕ್ಷೇಪಿಸುವಲ್ಲಿ ಮತ್ತಾರು ಅಱಿಯಬೇಕೆಂಬುದರೆಂದವು
ಕಡೆಯೆ
ಶಿವಪ್ರಸಂಗವನೊಂದ ನುಡಿಯಲಾಗದು.
ಮೀಱಿ ನುಡಿದೆನಾದಡೆ ಸದಾಶಿವ ಮೂರ್ತಿಲಿಂಗಕ್ಕೆ ದೂರು.      

೧೨

ಅಭಾಸದ ಮಾತಲ್ಲ. ಶೋತ್ರದ ಸುಖವಲ್ಲ.
ಶಾಸ್ತ್ರದನುಭಾವದ ಮಾತು ಮುನ್ನಲ್ಲ.
ಒಳಗಣಮಾತಲ್ಲ, ಹೊಱಗಣ ಮಾತಲ್ಲ.
ಇದಱಂಗವನಱಿಯದೆ ಅನುಭಾವವ ಮಾಡಿ ಫಲವೇನೋ
ಗುಹೇಶ್ವರನೆಂಬಲಿಂಗ ಉಪಮಾತೀತ ನೋಡಾ.

೧೩

ಪರಮಾರ್ಥದ ಪರೀಕ್ಷೆಯನಱಿಯದೆ
ನಿಂದಿಸಿನುಡಿದವರ ಕಂಡಡೆ ಏನೆಂಬೆನು
ಅರಿಳಿಯಮರದ ಉಲುಹೆಂಬೆನು.
ಮೂಗುಜಾತಿಯ ಶಬ್ದ ವೆಂಬೆನು.
ಸಕಳೇಶ್ವರದೇವಾ ನಿಮ್ಮನುಭಾವವನಱಿಯದವರ ಕಂಡೆನಾಡಡೆ
ಹಳಿ ಹಳಿ ಯೆಂಬೆನು

೧೪

ಜ್ಞಾನದ ಉಬ್ಬುಕೊಬ್ಬಿನಲ್ಲಿ ಉರಿವುತ್ತಿರ್ದರೆಲ್ಲರು
ನಾಮನಾಸ್ತಿ ಯಾಗದು; ತನುಗುಣ ನಾಸ್ತಿಯಾಗದು.
ಕರಣಾದಿಗುಣಂಗಳು ನಾಸ್ತಿಯಾಗುವು; ಕರಸ್ಥಲ ನಾಸ್ಥಿಯಾಗದು
ಇದೆತ್ತಣ ಉಳುಹೋ ಗುಹೇಶ್ವರಾ ?

೧೫

ಮುನ್ನಿನ ಕಲಿ ವೀರ ಧೀರರೆಲ್ಲರು ಕಾದಿದ ರಣಗಳನು
ಪರಿಪರಿಯಲಿ ಬಣ್ಣಿಸಿ ಹೇಳಬಹುದಲ್ಲದೆ,
ವೈರಿದಳ ಇದಿರಾದಲ್ಲಿ ಬಿರಿದುಪಚಾರಿಸಿ ಕಾದಿ ತೋಱಲು ಬಾರದು
ಮುನ್ನಿನ ಪುರುಷವೃತ್ತಿಯರು ಒಲಿಸಿದ ಆಯತವನು
ಪರಿಪರಿಯಲ್ಲಿ ಬಣ್ಣಿಸಿ ಹೇಳಬಹುದಲ್ಲದೆ
ಪುರುಷ ನಿರ್ವಾಣಕ್ಕುರಿವ ಅಗ್ನಿಯಹೊಕ್ಕು ತೋಱಲು ಬಾರದು
ಮುನ್ನಿನ ಪುರಾತರೆಲ್ಲರು ತನುಮನಧನವಿತ್ತು  ಮಾಡಿನೀಡಿ
ಲಿಂಗವ ಕೂಡಿದ ಪರಿಗಳನು
ಅನುಭಾವದಲರ್ಥೈಸಿ ಹೇಳಬಹುದಲ್ಲದೆ, ಮಾಡಿ ನೀಡಿ ತೋಱಲು ಬಾರದು
ಇಂತಿ ಅರಿಬಿರಿದಿನ ಬಂಟರು
ಪುರುಷವ್ರತಿಯರು
ಪುರಾತನರು
ಬಱಿಯ ಮಾತನಾಡಿ ಹೊಱಗೆ ಮೆಱೆವರಲ್ಲ.
ಪರೀಕ್ಶೆಯುಂಟಾಗಿರ್ದಡೆ
ಒಳಗಣವರ ಹೆಸರ ಹಿಡಿದು ಪರಿಪರಿಯಲಿ ಹೊಗಳುವರು.
ಶರೀರಾರ್ಥ ಪ್ರಾಣವ ಗುರುಲಿಂಗ ಜಂಗಮಕ್ಕೆ ಪರೀಕ್ಷೆಯುಂಟಾಗಿಯೆ.
ಆತ ಮಹೇಶ್ವರ ಪುರಾತನ ವಳಿಯೆಂಬೆ
ಪರಮಬಂಧುಗಳಾತನ ನೆನೆದು ಬದುಕುವರು
ಇಂತೀ ಅನುಭಾವದ ಲೋದಿ ಅಕ್ಷರಾಭ್ಯಾಸವ ಸಾಧಿಸಿ ತರ್ಕಿಸಿ ನಿಂದಿಸಲಾಗದು
ಕೂಡಲಸಂಗನ ಶರಣರಿಗಲ್ಲದನುಭಾವವಿಲ್ಲಾ.

೧೬

ಏನ ನೋದಿದಡೇನಯ್ಯಾ ಏನಕೇಳಿದಡೇನಯ್ಯ ಏನ ಹಾಡಿದಡೇನಯ್ಯಾ
ಓದಿ ಮರುಳಾದಿಯೋ ಕೋಚಿ ಭಟ್ಟರೆಯೆಂದು
ಗಿಳಿಯೋದಿ ತನ್ನ ಹೀಲ ತಾ ತಿಂದಂತೆ
ಏಕಲಿಂಗ ನಿಷ್ಠಾಚಾರ ಸ್ವಾನುಭಾವವಿವೇಕ ಸಿದ್ಧಾಂತ ನಿರ್ಣಯವಿಲ್ಲದ
ಮಾತಿಗೆ ಮಾತಕಲಿತು ನುಡಿಗೆ ನುಡಿಯಕಲಿತು
ತರ್ಕಮರ್ಕಟರಂತೆ ಹೋರುವ ಬಯಲ ಸಂಭ್ರಮದ ತರ್ಕಿಗಳ ಕಂಡಡೆ
ಮಾಗಿಯಕೋಗಿಲೆಯೆಂತೆ ಮುಖ ಮುನಿಸಾಗಿರಿಸಯ್ಯಾ
ಮಹಾಲಿಂಗ ಗುರು ಶಿವಸಿದ್ಧೇಶ್ವರ ಪ್ರಭುವೆ.

೧೭

|| ತ್ರಿವಿಧಿ ||        

ತತ್ವದ ನುಡಿಯತ್ತ ಕತ್ತಲೆದೊಡೆವೆತ್ತ
ಹೊತ್ತಿರ್ದಕೇ  ತರ್ಕ ತರದಟವೆತ್ತ
ತಧ್ಯ ಮಿಥ್ಯಗಳಿಂದ ಹೊತ್ತು ಹೊರವನವರ
ನೀ ವ್ಯರ್ಥವ ಮಾಡಿದೈ ಯೋಗಿನಾಥಾ

೧೮

ನಡೆನುಡಿಯೊಂದಾದವರಿಗೊಲಿವೆ ಕಂಡಯ್ಯಾ
ನುಡಿಯಬ್ರಹ್ಮದವರ ನೀನ್ನೊಲ್ಲೆಯೈ
ಮೃಡನೆ ಕಪಿಲಸಿದ್ಧ ಮಲ್ಲಿಕಾರ್ಜುನಲಿಂಗ
ನುಡಿಯಬ್ರಹ್ಮಂಗಳಿಂದಪ್ಪುದೇನೋ !

೧೯

ಮನದ ತಾಮಸದಿಂದ ಶಿವಜ್ಞಾನವಱಿಯೆನು
ಚಿನುಮಯನೆ ತಾಮಸಕೆ ದೀಪ್ತಿಯಾಗಿ
ಅನುಭಾವಶರಣರ ವಿನಯ ಭಂಡಾರವ
ಎನಗೆ ನೀ ಕರುಣಿಸೋ ಯೋಗಿನಾಥ