|| ವೃತ್ತ ||           

ನಿನ್ನ ಪದಾಂಬುವೇ ನನಗೆ ಮಜ್ಜನವಾರಿ ತವಪ್ರಸಾದ ದಿ
ವ್ಯಾನ್ನವೆ ಭೋಜನಾನ್ನಿವಿದು ತಥ್ಯಮಿದಲ್ಲದೆ ಬೇಱೆ ಮೀಸಲಾ
ದನ್ನಮುಂಬವಂ ಜಗದೊಳುಂಟೆ ಯಥೋಚಿತ ಭಕ್ತಿಭಾವ ಸಂ
ಪನ್ನ ಮನಃಪ್ರಸನ್ನ ಪರಮಪ್ರಭುವೇ ಮಹದೈಪುರೀಶ್ವರಾ ||  

|| ವಚನ ||

ಪಾದಾರ್ಚನೆಯ ಮಾಡುವೆನಯ್ಯಾ ಪಾದೋದಕದ ಹಂಗಿಂಗೆ
ಶರಣಾರ್ಥಿಯೆಂಬೆನಯ್ಯಾ ಒಕ್ಕುದಕೊಂಬ ಹಂಗಿಂಗೆ
ಎಡೆಯಾಟ ಕಡಬಡ್ಡಿಯ ಕೊಟ್ಟು ಕೆಟ್ಟಿತ್ತು ನೋಡಾ ಭಕ್ತಿ.
ಕೂಡಲಸಂಗನ ಶರಣನಱಿಯದೆ ಮುಯ್ಯಿಗೆ ಮುಯ್ಯಾಗಿ, ಕೆಟ್ಟಿತ್ತಯ್ಯಾ ನಿಮ್ಮ ಭಕ್ತಿ.

ಸಮಯ ವಿರೋಧವಾದುದೆಂದು ಪಾದಾರ್ಚನೆಯ ಮಾಡುವರಯಾ.
ಲಿಂಗಜಂಗಮಕ್ಕೆ ಪಾದವಾವುದು ಅರ್ಚನೆಯಾವುದೆಂಬ ಕಡೆ ಮೊದಲನಱಿಯರು
ಉದಾಸೀನದಿಂದಾ ಪಾದಾರ್ಚನೆಯಮಾಡಿ ಪಾದೋದಕವ ಧರಿಸಿದಡೆ
ಅದೇ ಪ್ರಳಯಕಾಲದ ಜಲ !
ಮರ್ಮವನಱಿದು ಕೊಡೆಂದಡೆ ತನ್ನ ಭವಕ್ಕೆ ಪ್ರಳಯಕಾಲ.
ಈ ಬೇದವ ಭೇದಿಸಿ, ಸಂಸಾರದ ಮಲಿನವ ತೊಳೆದಡೆ,
ಕೂಡಲಚನ್ನಸಂಗಾ, ನಿಮ್ಮ ಶರಣಬಲ್ಲ !

ಒಳಗೆ ತೊಳೆಯಲಱಿಯದೆ ಹೊಱಗೆ ತೊಳೆತೊಳೆದು   ಕುಡಿಯುತ್ತಿದ್ದರಲ್ಲಾ
ಪಾದೋದಕ ಪ್ರಸಾದವನಱಿಯದೆ ಬಂದ ಭವದಲ್ಲಿ ಮುಳುಗುತೈದಾರೆ ಗುಹೇಶ್ವರಾ.                      

ಆಸಸಿನ ಭಕ್ತಿ ಜಡರುಗಳು ಬೇಸತ್ತು ಜಂಗಮಕ್ಕೆಱಗಿ
ಪಾದಪ್ರಕ್ಷಾಲನಂ ಮಾಡಿ ಪಾದೋದಕವ ಧರಿಸುತ್ತಿಪ್ಪರು.
ಆವುದು ಕ್ರಮವೆಂದಱಿಯರು,
ಅಱಿದಡೆ ಪಾದೋದಕ, ಅಱಿಯದಿದ್ದಡೆ ಬಳಿ ನೀರು;
ಏನೆಂದಱಿಯರು; ಅಱಿದು ಬಱುದೊಱೆ ಹೋದರು ಮಾನವರೆಲ್ಲ;
ಅಱಿದು ಸಾಮಾನ್ಯವೇ ?   ಶಿವಾತ್ಮಕಪದದ್ವಂದ್ವ ಪ್ರಕ್ಷಾಲನ ಜಲಂ ನರಾಃ |
ಯೇ ಪಿಬಂತಿ ಪುನಸ್ತನ್ಯಂ ನ ಪಿಬಂತಿ ಕದಾಚನ ||
ಇಂತೆಂದುದಾಗಿ ಕೇಳಿ ನಂಬುವುದು  ನಂಬದಿರ್ದಡೆ ಮುಂದೆ ಭವಘೋರ ತಪ್ಪದು.
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ಲಿಂಗ ಮುಟ್ಟಿಯಾಚನೆ ಮಾಡುವರು ಲಿಂಗಾಂಗಿಗಳಲ್ಲದವರು.
ಮಾಡಿದಡೆಯೂ ಮಾಡಲಿ,
ಲಿಂಗ ಪಾದೋದಕವ ಧರಿಸಿ ಮರಳಿ ಅಪವಿತ್ರ ಶಂಕೆಯಿಂದಾಚಮನವ ಮಾಡಿದಡೆ,
ಅಘೋರ ನರಕದಲ್ಲಿಕ್ಕುದಯ್ಯಾ ಪಾದೋದಕವೆ ವಿಷವಾಗಿ;
ಶಂಭೋಃ ಪಾದೋದಕಂ ಪೀತ್ವಾಪಶ್ಚಾದಶುಚಿ ಶಂಕಯಾ |
ಯೋ ಯಾತಿ ಮತಿನೋಹೇನ ತಂ ವಿಂದ್ಯಾತ್ ಬ್ರಹ್ಮಘಾತಕಂ ||
ಇಂತೆಂಬ ವಚನವ ಕೇಳಿ ನಂಬುವುದಯ್ಯಾ;
ಪರಮಪಾವನಮಪ್ಪ ಪಾದೋದಕವ ನಂಬದವರು
ಬಸವಪ್ರಿಯ ಕೂಡಲಚನ್ನಸಂಗಂಗೆ ದೂರ.

ಆಚಾರವಿಲ್ಲದ ಗುರು ಭೂತ ಪ್ರಾಣಿ, ಆಚಾರವಿಲ್ಲದ ಲಿಂಗ ಶಿಲೆ,
ಆಚಾರವಿಲ್ಲದ ಜಂಗಮ ಮಾನವ, ಆಚಾರವಿಲ್ಲದ ಪಾದೋದಕ ನೀರು
ಆಚಾರವಿಲ್ಲದ ಪ್ರಸಾದ ಎಂಜಲು, ಆಚಾರವಿಲ್ಲದ ಭಕ್ತ ದುಷ್ಕರ್ಮಿ,
ಇದು ಕಾರಣ ಅಟ್ಟವನೇಱುವುದಕ್ಕೆ ನಿಚ್ಚಣಿಗೆಯ ಸೋಪಾನವಯ್ಯಾ !
ಹರ ಪಥವನೈದುವಡೆ ಶ್ರೀ ಗುರು ಹೇಳಿದ ಮಹಾ ಸದಾಚಾರವೆ ಸೋಪಾನಮಾರ್ಗವಯ್ಯಾ !
ಗುರೂಪದೇಶವ ಮೀಱಿ ಮನಕ್ಕೆ ಬಂದಂತೆ ವರ್ತಿಸುವ ಪಾಪಿಗಳ
ಎನಗೊಮ್ಮೆ ತೋಱದಿರಯ್ಯಾ
ಮಹಾಲಿಂಗ ಗುರುಶಿವಸಿದ್ಧೇಶ್ವರ ಪ್ರಭುವೆ.

|| ತ್ರಿಪದಿ ||

ನಿತ್ಯ ಲಿಂಗಾರ್ಚನೆಯು ನಿತ್ಯ ಭಕ್ತರ ಸೇವೆ
ನಿತ್ಯ ಗುರುಭಜನೆಯಲಿ ಸನ್ನಿಹಿತನಾಗಿ
ನಿತ್ಯ ಪಾದೋದಕ ಪ್ರಸಾದವನು ಕೊಂಬ ಸುಖ
ವ್ಯರ್ಥ ಕಾಯರಿಗುಂಟೆ ಯೋಗಿನಾಥ.