೨೫

ಹೊಯಿದ ಹಱೆಗೆಲ್ಲ ಕುಣಿದಾಡುವರೆಲ್ಲ,
ಹಾಡಿದ ಗೀತಕ್ಕೆ ತಲೆದೂಗುವರೆಲ್ಲ,
ಪಂಜರದೊಳಗಣ ಅರಗಿಳಿಯಂತೆ ಅದು ಆಡದು ಹಾಡದು.
ಸಕಳೇಶ್ವರದೇವರಲ್ಲಿ ಅಭ್ಯಾಸಕ್ಕೆ ಮಜ್ಜನಕ್ಕೆಱೆವರೆಲ್ಲ ಭಕ್ತರೇ ?  

೨೬

ಅಂಗದ ಪಾದತೀರ್ಥವ ಲಿಂಗದ ಮಜ್ಜನಕ್ಕೆಱೆವರು,
ಲಿಂಗದ ಪಾದತೀರ್ಥವ ಪಂಚಪಾದಾರ್ಚನೆಯ ಮಾಡುವುದು,
ಮಾಡಿದ ಪ್ರಾಣಂಗೆ ಪರಿಣಾಮನೈದಿಸುವುದು,
ಇಂತೀ ತ್ರಿವಿಧ ಉದಕದ ಭೇದವನಱಿಯದೆ
ಆವನೊಬ್ಬ ಮಜ್ಜನಕ್ಕೆಱಿದಡೆ,
ಭವಿಚಾಂಡಾಲರ ಮೂತ್ರದಲ್ಲಿ ಎಱೆದಂತೆ ಕಾಣಾ,
ಕೂಡಲಚನ್ನಸಂಗಮದೇವಯ್ಯಾ.

೨೭

ಈರೇಳ್ನೂಱುವರುಷ ಮಜ್ಜನಕ್ಕೆಱೆದು ವೃಥಾ ಹೋಯಿತ್ತಲ್ಲಾ,
ಏನೆಂದಱಿಯದೆ ವೃಥಾ ಹೋಯಿತ್ತಲ್ಲಾ.
ಅದೆಂತೆಂದಱಿಯದೆ ವೃಥಾ ಹೋಯಿತ್ತಲ್ಲಾ
ಅಯ್ಯಾ, ಎನ್ನ ಕೈಕರಿದು ಬಿಳಿದಾಗದು.
ಅಯ್ಯಾ, ಎನ್ನ ತನು ಮನ ಧನ ನಿಮ್ಮಲ್ಲಿ ಸ್ವಯವಾಗದಾಗಿ,
ಘಾಯಕ್ಕೆ ಮಗುವು ಲಿಂಗದೊಳಗಾಯಿತ್ತು
ಅನುಭಾವಕ್ಕೊಳಗಾಗದೆ ಎನ್ನ ವಿಚಾರಿಸಿ
ನೋಡಿಹೆನೆಂದಡೆ ಏನೂ ಇಲ್ಲ.
ಸುಳುಹಿನೊಳಗೆ ಅಱಿದೆಹೆನೆಂದಡೆ ಸುಳುಹಿಂಗೆ ಭಂಗವಾಯಿತ್ತು
ಎನಗಿನ್ನು ಸುಳುಹ ಹೇಳಾ ಸಕಳೇಶ್ವರಾ.

೨೮

ಭಕ್ತನಾದೆನೆಂದು ನೆಚ್ಚದಿರಣ್ಣಾ, ನಿನ್ನ ತನುಗುಣಾದಿಗಳ ಭಕ್ತನ ಮಾಡಾ !
ನಿನ್ನ ಮನಗುಣಾದಿಗಳ ಭಕ್ತನ ಮಾಡಾ !
ಕರೋತಿ ವರ್ತಮಾನರವರಿಬ್ಬರು ಅವರ ತಮ್ಮ ಮತ್ತೊಬ್ಬ,
ಇವರು ಮೂವರು ಸಹಿತ ಮಜ್ಜನಕೆಱೆದಡೆ
ಹಿಂದಣ ಭವಿತನ ಹಿಂಗದು, ಕೂಡಲಚನ್ನಸಂಗಮದೇವಾ.

೨೯
ಮುದ್ರೆಗೆ ಶಿವಲಾಂಛನಕ್ಕೆ ಸಾಹಿತ್ಯವಿಲ್ಲದೆ
ಮೆಱೆಯದೆಂದು ಮುನ್ನಿನ ಆದ್ಯರು ಮಾಡಿದರು.
ಮಜ್ಜನಕ್ಕೆಱೆಯಲೆಂಬುದನೀಗ ಸಜ್ಜನವಾಗಿ
ಭಾವದಲಱಿವಿದ್ದ್ಡೆ ಸಾಲದೆ ? ಇಷ್ಟತಾನೇಕೋ ?
ಸಿದ್ಧರಾಮಯ್ಯದೇವರು ಸಾಹಿತ್ಯ ವಿಡಿದಿದ್ದನೆ ?
ಮನಶುದ್ದವಾಗಿ ಆ ಲಿಂಗವ ತಂದು ಅಂಗದಮೇಲಣ
ಲಿಂಗ ಸ್ವಯವಾದಡೆ ಹಿಂಗದೆ ದೇಹ ಸಹವಾಗಿರಬೇಕು.
ಅಂಗೈ ಮೇಗೈಯಾಗಿ ಹೋಗುತ್ತೆದೆ, ತಿಂಗಳ ಮಾರೆಂಬುದು ದೂರಣ ಮಾತು
ಮಂಗಳಮೂರುತಿಗಳು ಸಕಲಪುರಾತನರನಱಿಯಲು
ಕೂಡಲಚನ್ನಸಂಗಮದೇವ ಸ್ವಯಂ ನಿರಾಳವೋ ಜಂಗಮದೊಳಗೆ ?

೩೦

ಕಾಣಬಹಲಿಂಗವೆಂದು ಅಗ್ಘವಣಿಯನೆ
ಕೊಟ್ಟು   ವ್ಯಾಳಿಯಾದಿರಲ್ಲಾ ಲೋಕವೆಲ್ಲ !
ನಿರಾಳಲಿಂಗಕ್ಕೆ ಕೂಡಲಱಿಯರು,    ಕಂಡವರ ಕಂಡು ಕಂಡಂತೆ,
ಇದು ಕಾರಣ, ಕೂಡಲಚನ್ನಸಂಗಯ್ಯನಲ್ಲಿ
ಇಂತವರ ಕಂಡು ನಾಚಿತ್ತೆನ್ನಮನ.

೩೧

ಮಜ್ಜನಕ್ಕೆಱಿಯ ಹೇಳಿದಡೆ ನಾನೇನ ಮಜ್ಜನಕ್ಕೆಱಿವೆನು ?
ಒಳಗೊಂದು ಪ್ರಾಣಲಿಂಗವ ಕಂಡೆನಯ್ಯಾ.
ಹೊಱಗಣ ಹೂವನೆ ಕೊಯಿದು ಹೊಱಗನೆ ಮಜ್ಜನಕ್ಕೆಱೆವರು;
ಉಪಚಾರದ ಮಜ್ಜನವ ನಾನೊಲ್ಲೆನಯ್ಯಾ.
ತನು ಭಾವವಱಿಯದವನು ಏತಱ ಸುಖಿಯೊ ?
ಕಪಿಲಸಿದ್ಧ ಮಲ್ಲಿನಾಥನೊಲ್ಲನಯ್ಯ.

೩೨

ಅಗಮ್ಯ ಅಗೋಚರನೆನಿಸಿಕೊಂಡು ಅವರಿವರ ಕೈಗಂತು ಬಂದೆ ?
ಉಗುರುಗಳೆಲ್ಲ ಸುತ್ತಿದವೆ ? ಅಗ್ಘವಣಿ ಪತ್ರೆ ಅಱತವೆ ಅಯ್ಯ ?
ಎನ್ನ ಕಸ್ಥಲದೊಳಗಿದ್ದು ಎನ್ನೊಡನೆ ನುಡಿಯಲೊಲ್ಲೆ !
ನಿನ್ನ ಹಲ್ಲ ಕಳೆದಡೆ ದಿಕ್ಕುಂಟೆ ಗುಹೇಶ್ವರ ?

೩೩

ಮನಶುದ್ದವಾಯಿತ್ತು ಮಜ್ಜನಕ್ಕೆಱಿವ ಭಾವ ಮತ್ತೆಲ್ಲಿಯದೋ ?
ಪತ್ರಿಪುಷ್ಪರಂಗವಾಲಿಯ್ಹನಿಕ್ಕಲೇನು ಭಿತ್ತಿಯ ಚಿತ್ರವೆ ?
ಅವರು ಕಾಣಬೇಕು, ಇವರು ಕಾಣಬೇಕೆಂಬ
ಭ್ರಮೆಯ ಭ್ರಮಿತತು, ಅಂಗಹೀನರು
ಮನದಂಗವನಱಿಯರು, ಲಿಂಗಮತ್ತೆಲ್ಲಿಯದು ?
ಸದಮದವಳಿದು ನಿಜವನಱಿದಡೆ ಅದೇ ಲಿಂಗಕ್ಕೆ ಪೂಜೆ ನೋಡಾ,
ಕೂಡಲಚನ್ನಸಂಗೆ ಸರ್ವಸಾಹಿತ್ಯವಾಗಿಹನು.

೩೪      

ಮಜ್ಜನದ ಮಗ್ಗರೆಯ ಪತ್ರೆಯ ತಾಪತ್ರಯವ
ನೀಂ ಬಾಲ್ಯದ ಲಿಂಗಕ್ಕೆ ಅರ್ಪಿತವಮಾಡುವ ಪರಿಯಿನ್ನೆಂತೊ ?
ರೂಪಿಲ್ಲದುದನೊಂದ ಪಾಶಬಂಧಕ್ಕೆ ತಂದ ಕೋಪ ಧೂಪಾರತಿಯಾದ ತೆಱ ನಿನ್ನೆಂತೊ ?
ಅದು ಬೇಕೆನ್ನದು, ಬೇಡೆನ್ನದು, ಸಾಕೆಂಬುದಿಲ್ಲ.
ನೀ ಈ ಪರಿಯ ಭ್ರಮಿತರಿಗೆ ಚಿಕ್ಕಯ್ಯಪ್ರಿಯಸಿದ್ಧಲಿಂಗ ಇಲ್ಲ ಇಲ್ಲ ಇನ್ನೆಂತೊ !

೩೫

ಮಜ್ಜನಕ್ಕೆಱಿದು ಫಲವ ಬೇಡುವರು;
ತಮಗೆಲ್ಲಿಯದೋ ಫಲವು ಅಗ್ಘವಣಿಗಲ್ಲದೆ ?
ಪತ್ರೆ ಪುಷ್ಪವನೇಱಿಸಿ ಫಲವ ಬೇಡುವರು;
ತಮಗೆಲ್ಲಯದೋ ಫಲವು ಆ ಗಿಡುವಿಂಗಿಲ್ಲದೆ ?
ನೈವೇದ್ಯವನೇಱಿಸಿ ಫಲವ ಬೇಡುವರ್;
ತಮಗೆಲ್ಲಿಯದೋ ಫಲವು ಹದಿನೆಂಟು ಧಾನ್ಯಕ್ಕಲ್ಲದೆ ?
ಲಿಂಗದೊಡಾವೆಯ ಲಿಂಗಕ್ಕೆ ಕೊಟ್ಟು ಫಲವ ಬೇಡುವರು;
ಜಗದ ಜಂಗುಳಿಗಳನೇನೆಂಬೆ ಗುಹೇಶ್ವರಾ ?

೩೬

ಆ ಮಹಾ ಮೇರುವಿನ ಮಱೆಯಲ್ಲಿದ್ದು
ಭೂತವನಾಚರಿಸುವ ಕರ್ಮಿ ನೀ ಕೇಳಾ.
ಮಹಾಘನ ಲಿಂಗಕ್ಕೆ ಮಜ್ಜನವೆಂದೇನೊ ?
ಪರಿಮಳಲಿಂಗಕ್ಕೆ ಪತ್ರೆಪುಷ್ಪಂಗಳೆಂದೇನೋ ?
ಜಗಂಜ್ಯೋತಿಲಿಂಗಕ್ಕೆ ದೀಪಧೂಪವೆಂದೇನೊ ?
ಅಮೃತದಲಿಂಗಕ್ಕೆ ಆರೋಗಣೆಯೆಂದೇನೊ ?
ಗುಹೇಶ್ವರಲಿಂಗದಂತುವ ಬಲ್ಲವರಾರೊ !

೩೭

ಅಱಿವಿನ ಹಾವಿಂಗೆ ಹಾಲನೆಱೆವ ಪ್ರಾಣಿಗಳು
ಆ ಹಾವು ಹಾಲಿನಂತರವ ತಾವೆತ್ತಬಲ್ಲರೊ ?
ಕಯ್ಯಲೆಡೆಗೊಟ್ಟ ಲಿಂಗಕ್ಕೆ ಮಜ್ಜನಕ್ಕೆಱೆವಪ್ರಾಣಿಗಳು
ಲಿಂಗ ಸಕೀಲ ಸಂಬಂಧವ ತಾವೆತ್ತ ಬಲ್ಲರೊ ?
ಪಾಣಿನಾ ಧೃತಲಿಂಗಂ ತತ್ ಪ್ರಾಣಸ್ಥಾನೇಷುನಿಕ್ಷಿಪೇತ |
ಯಸ್ತು ಭೇದೇನ ಜಾನಾತಿ ನಚಲಿಂಗಂ ನಚಾರ್ಚನಂ ||
ಪೂಜಿಸಿದಡೆ ನಾಯಕ ನರಕ.

೩೮

ಅನುದಿನದಲ್ಲಿ ಮಜ್ಜನಕ್ಕೆಱೆದು ನೆನದು ಲಿಂಗ ಕರಿಗಟ್ಟಿತ್ತು.
ಕೂಳನೊಲ್ಲದು, ನೀರಬೇಡದು, ಕರೆದಡೆ ಓ ಎನ್ನದು.
ಸ್ಥಾವರ ಪೂಜೆ ಜಂಗಮದುದಾಸೀನ,
ಕೂಡಲಸಂಗಮದೇವನೊಲ್ಲ ನೋಡಾ!

೩೯

ಊರಕ್ಕಿ ಊರೆಣ್ಣೆ ಉಣ್ಣಬಾರೆ ಮಾರಿಕವ್ವ; ತಾಯೆ.
ಬಾರಿಕಮಾರನ ತಲೆಗಾಯಿ ಎಂಬಂತೆ
ಕಾಡಹೂ ಮಡುವಿನಗ್ಘವಣೆಯ ತಂದು
ಕಲ್ಲಲಿಂಗವ ಪೂಜಿಸುವ ಭವಿಯ ಭಕ್ತನೆಂಬರು, ಅಲ್ಲ !
ಸುವಿಚಾರದಿಂದ ತಾನೆ ಲಿಂಗ, ತನ್ನಮನವೆ ಪುಷ್ಪವಾಗಿ
ಪೂಜೆಯ ಮಾಡಬಲ್ಲಾತನೆ ಸದ್ಭಕ್ತಕಾಣಾ ಗುಹೇಶ್ವರಾ.

೪೦

ಆನು ಶುದ್ಧ ಧವಳಿತನು, ಎನಗೆ ಅನಾದಿ ಬಂದು ಹೊದ್ದಿದ ಕಾರಣವೇನಯ್ಯಾ ?
ಜಲವ ಮೊಗೆಯ ಬಂದೆನೇಕಯ್ಯಾ ?
ಗಿಡುವ ಹಱಿಯ ಬಂದೆನೇಕಯ್ಯಾ ?
ಎಲ್ಲರ ನಡುವೆ ಕುಳ್ಳಿರ್ದು ಗೀತವ ಹಾಡ ಬಂದೆನೇಕಯ್ಯಾ
ಬಸವಣ್ಣ ಚನ್ನಬಸವನ್ನನೆಂಬೆರಡು ಶಬ್ದವೇಕಾದವು ಹೇಳಾ,
ಕೂಡಲಚನ್ನಸಂಗಮದೇವಾ ?

೪೧

ಪ್ರಾಣಹೊಲ ಮೇರೆಯಲ್ಲಿ ಪ್ರಾಣ ಸತ್ತುದ ಕಂಡೆ
ದೇವ ದಾನವ ಮಾನವರೆಲ್ಲಾ ಜೋಳವಾಳಿಯಲೈದಾರೆ.
ಜಾಣ ಕಲಿಕುಟಿಗನನಗಲದೆ ಹೂವನೆ ಕೊಯ್ದು,
ಕಲಿಯುಗದ ಕರಸ್ಥಲ ದೇವಪೂಜೆ ಘವ
ಮೇರುವಿನ ಕುದುರೆ ನಲಿದಾಡಲದುಭುತ.
ಜಾರ ಜಂಗುಳಿಗಳ ಜಗಳ ಮೇಳಾಪ
ಮಱುಪತ್ತದ ಮಾತು, ನಗೆಹಗರಣ !
ಕ್ಷೀರಸಾಗರದಲ್ಲಿ ದಾರಿಯಳವಡಾದಯ್ಯಾ.
ನೀ ಹೇಳಬೇಕು, ಭಕ್ತರೆಂತಿಪ್ಪರೊ ?
ಪಂಚವರ್ಣದ ಬಣ್ಣ ಸಂತೆಯ ವರದಾಟವು,
ಚನ್ನಮಲ್ಲಿಕಾರ್ಜುನಯ್ಯಾ,
ತ್ರಿಭುವನದ ಹೆಂಡಿರ ನೀರ ಹೊಳೆಯಲ್ಲಿರಿಸಿತ್ತು.

೪೨

ಮುಟ್ಟಿಭಕ್ತನು, ಮುನ್ನಬಿಟ್ಟಿ ಸೂತಕಿ,
ಬಳಿಕಲ್ಲಿ ನೆಟ್ಟಾತ ನಿಯತನಾಗಿ ಆದಿಯಂತವಿಲ್ಲ.
ಈ ಶರಣನು ಮುಟ್ಟಿ ಅಗ್ಘವಣಿಯ ಕೊಡನು,   ಹುಟ್ಟುವ ಹೊಂದುವನೇನಯ್ಯಾ ?
ಕಷ್ಟವಪ್ಪುದ ಪೂಜೆಯ ಮಾಡನು, ಮಾಡಿಸಿಕೊಳಲಿಲ್ಲವಾಗಿ
ಮುಟ್ಟುವಡೆ ಮೂರುತಿ ನಷ್ಟವೆಂಬುದನಱಿಯರಾಗಿ
ಸೃಷ್ಟಿಯಲ್ಲಿ ಚಿಕ್ಕಯ್ಯ ಪ್ರಿಯ ಸಿದ್ಧಲಿಂಗವು
ಇಲ್ಲ ಉಂಟೆಂಬರು.

೪೩

ಅಗ್ಘವಣಿ, ಪತ್ರೆ, ಪುಷ್ಪ, ಧೂಪ ದೀಪ ನಿವಾಳಿಯನೆಲ್ಲ
ಪೂಜಿಸಿ ಬಳಲುತ್ತಿದ್ದಾರೆ.
ಏನೆಂದಱಿಯರು, ಎಂತೆಂದಱಿಯರು,
ಜನಮರುಳೋ ಜಾತ್ರೆಮರುಳೋ ಎಂಬಂತೆ
ಎಲ್ಲರೂ ಪೂಜಿಸಿ ಇದ್ದುದ ಕಾಣದೆ
ಲಯಕ್ಕೊಳಗಾದರು ಗುಹೇಶ್ವರಾ.

೪೪

ಮಡುವಿನಲ್ಲಿ ಮೊಗತಹೆನೆ ಅಗ್ಘವಣಿ ಶುದ್ಧವಲ್ಲ,
ಗಿಡುವಿನಲ್ಲಿ ಕಾಯಿತಹೆನೆ ಹೂ ನಿರ್ಮೂಲ್ಯ,
ಅಟ್ಟಡಿಗೆಯನಾದಡೆ ಮನ ಮುನ್ನವೆ ಉಂಡಿತ್ತು,
ನುಡಿವ ಶಬ್ದ ಎಂಜಲಾಯಿತ್ತು.
ಹಿಡಿಯೊಳಯಿಕ್ಕೆ ಒಂದಕ್ಕೊಂದು ಬಂದು ಲಿಂಗವೆಂದು
ಸಂಕಲ್ಪವಮಾಡಿದಡೆ ಅದಕ್ಕೆ ಬೋನವಕೊಡಲೊಲ್ಲೆನೆಂದ
ಅಂಬಿಗ ಚೌಡಯ್ಯ.

೪೫

ಅಂಗಯ್ಯ ಲಿಂಗಕ್ಕೆ ಹಿಂಗದೆ ಮಜ್ಜನಕ್ಕೆಱಿವಿರೊ
ಅರ್ಪಿತ ಮುಖಂಗಳಲ್ಲಿ ಅರ್ಷಿಸುವಿಸುರಿ.
ಅರ್ಪಿತ ಸವಿಯಿತೊ ಲಿಂಗ ಸವಿಯಿತೋ ?
ಕರ್ಮಣಾ ಮನಸಾ ವಾಚಾ ಗುರುಣಾಂ ಭಕ್ತವತ್ಸಲ
ಶರೀರಮರ್ಥ ಪ್ರಾಣಂಚ ಸದ್ಗುರುಭ್ಯೋ ನಿವೇದಯೇತ್ ||
ತನುವಾರ್ಪಿತ ಪ್ರಸಾದಕ್ಕೆ, ಮನವರ್ಪಿತ ಲಿಂಗಕ್ಕೆ, ಧನವರ್ಪಿತ ಜಂಗಮಕ್ಕೆ
ಇಂತೀ ತ್ರಿವಿಧವನರ್ಪಿಸಿದ ಅರ್ಪಣೆಯನು ಮರಳಿ ಆಸೆಗೈದನಾದಡೆ
ನರಕದಲ್ಲಿಕ್ಕುವ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

೪೬

ಶಂಕಿನಿನಾಡಿಯ ಸದಪುರನಾಳದೊಳಗಣ ಸಣ್ಣಬಣ್ಣದ  ಹೊಲಬ ಅಣ್ಣಗಳೆತ್ತ ಬಲ್ಲರು ?
ಲಿಂಗದ ಹಂಗಿನ ಪ್ರಾಣ, ಪ್ರಾಣದ ಹಂದಿನ ದೇಹ,
ದೇಹದ ಹಂಗಿನ ಲಿಂಗವನ್ನು ಲಿಂಗವೆಂದು ಪೂಜಿಸಲು
ಆಲಿನಾಳಿನ ಕೀಲಾಳು ಪಟ್ಟಕ್ಕೆ ಸಲ್ಲುವನೇ ?
ಗುಹೇಶ್ವರನೆಂಬ ಸಹಜ ನಿಲವು ಸಂದಿಯ ಪಸರಕ್ಕೆ
ಬಂದಡೆ ನಾಚಿತ್ತೆನ್ನ ಮನವು.

೪೭      

ಮಣಿಯನೆಣಿಸಿ ಕಾಲವ ಕಳೆಯಬೇಡ.
ಕಣಿಯ ಪೂಜಿಸಿ ಕಾಲವ ಕಳೆಯಬೇಡ.
ಕ್ಷಣವಾದಡೆಯೂ ಆಗಲಿ ನಿಜದ ನೆನಹೇ ಸಾಕು.
ಕ್ಷಣಾರ್ಧವಾದಡೂ ಆಗಲಿ ನಿಜದ ನೆನೆಹೇ ಸಾಕು.
ಬೆಂದಿಯಲುಳ್ಳ ತ್ರಾಣ ಬಿಸಿನೀರಲ್ಲುಂಟೇ, ಗುಹೇಶ್ವರ ?

೪೮

ವರ್ಣವಿಲ್ಲದ ಲಿಂಗಕ್ಕೆ ರೂಪು ಪ್ರತಿಷ್ಠೆಯೆ
ಮಾಡುವ ಪರಿಯಿನ್ನೆಂತೋ ?
ಪ್ರಳಯವಿಲ್ಲದ ಲಿಂಗಕ್ಕೆ ಪ್ರಾಣಪ್ರತಿಷ್ಠೆಯ
ಮಾಡುವ ಪರಿಯಿನ್ನೆಂತೋ ?
ನೆನೆಯಬಾರದ ಲಿಂಗಕ್ಕೆ ಅನುಗ್ರಹವ
ಮಾಡುವ ಪರಿಯಿನ್ನೆಂತೋ ?
ನುಡಿಯಬಾರದ ಲಿಂಗಕ್ಕೆ ಜಪಪೂಜೆಯದೆಂತೊ ?
ಇಲ್ಲದ ಲಿಂಗವ ಧರಿಸುವ ಪರಿಯಿನ್ನೆಂತೊ ?
ಮಹಾಮಹಿಮ ಗುಡ್ಡದ ಮಲ್ಲಿಕರ್ಜುನಾ
ಇದಱಂತುವ ನೀವೆ ಬಲ್ಲಿರಿ.

೪೯

ಅಭ್ಯಾಸವ ಮಾಡುವ ಕೋಲಿಂಗೆ ಶರಣೆಂದಡೆ
ಮುಂದಣ ಬವರಕ್ಕಲಗಾಗಬಲ್ಲುದೆ ಅಯ್ಯಾ ?
ಇಷ್ಟಲಿಂಗವೆಂದು ಮುಟ್ಟಿ ಪುಜಿಸುತ್ತಿದ್ದರೆ
ಮುಂದಣ ಶಂಕೆಗಿನ್ನೆಂತೋ ?
ಲಿಂಗವೆಂದಡೆ ನಿಸ್ಸಂಗವಲ್ಲದೆ, ಜಂಗಮವೆಂದಡೆ ಆಶ್ರಯವಲ್ಲದೆ
ಈ ಲಿಂಗಜಂಗಮವನೊಂದೆಯೆಂದಡೆ ಮುಂದಣ ಲಯಕ್ಕಿನ್ನೆಂತೋ ?
ಎಲೆ ಗುಹೇಶ್ವರ, ನಿಮ್ಮ ಶರಣ ಚತುರ್ವಿಧ ಫಲಂಗಳಿಗೆ ಹೊಱಗು.

೫೦

ಉದಯ ಮುಖದಲ್ಲಿ ಪೂಜಿಸಹೋದಡೆ
ಹೃದಯಮುಖದಲ್ಲಿ ಕತ್ತಲೆಯಾಯಿತ್ತು.
ಹಾಱಿಹೋಯಿತ್ತು ಪ್ರಾಣಸಂಗ; ಹಱಿದುಬಿದ್ದಿತ್ತುನೋಡಾ ಸೆಜ್ಜೆ.
ಕಟ್ಟುವ ಬಿಡುವ ಸಂಬಂಧಿಗಳ ಕಷ್ಟವ ನೋಡಾ ಗುಹೇಶ್ವರಾ.

೫೧

ಹೊತ್ತರಿನ ಪೂಜೆ, ಹಗಲಿನ ಪೂಜೆ, ಬೈಗಿನ ಪೂಜೆ.
ನಿಚ್ಚಕ್ಕಿನ ಪೂಜೆಯ ಮಾಡಿ ಅಚ್ಚುಗೊಂಡರೆಲ್ಲರು.
ನಿಶ್ಚಿಂತ ನಿರಾಳ ನಿಜೈಕ್ಯಲಿಂಗವ ಅರ್ಚಿಸಿ ಇತ್ತಲೆಯಾದರೆಲ್ಲರು.
ನಿಶ್ಚಿಂತನನಱಿದು ನಿಜವನೆಮ್ಮಿದಡೆ ಚಿತ್ತ ಸಮಾಧಾನ.
ಕೂಡಲಚನ್ನಸಂಗನೆಂಬ ನಿಶ್ಚಿಂತ ನಿಜೈಕ್ಯನು.           

೫೨

ಸತ್ತ ಬಳಿಕ ಮುಕ್ತಿಯ ಹಡೆದೆನೆಂದು ಪೂಜಿಸ ಹೋದಡೆ
ಆ ದೇವರೇನು ಕೊಡುವರೋ ?
ಸತ್ತ ಬಳಿಕ ಕೊಂಬದೇನೊ ಕೊಡುವದೇನೋ ?
ಸಾಯದೆ ನೋಯದೆ ಸ್ವತಂತ್ರನಾಗಿ ಸಂದುಭೇದವಿಲ್ಲದೆರ್ಪ ಗುಹೇಶ್ವರ ನಿಮ್ಮ ಶರಣನು.

೫೩

ಬೆಲ್ಲಕ್ಕೆ ಚೆದುರಸವಲ್ಲದೆ ಸಿಹಿಗೆ ಚದುರಸವುಂಟೇ ?
ಕುಱುಹಿಂಗೆ  ಪೂಜೆಯಲ್ಲದೆ ಅಱುಹಿಂಗೆ ಪೂಜೆಯುಂಟೆ ?
ಅಱುಹು ಕರಿಗೊಂಡಲ್ಲಿ ಕಯ್ಯ ಕುಱುಹು
ಅಲ್ಲಿಯೇ ಲೋಪವೆಂದನಂಬಿಗ ಚೌಡಯ್ಯ.

೫೪

ಹೃದಯಕಮಲ ಮಧ್ಯದಲ್ಲಿಪ್ಪ ದೇವನ ದೇಹಾರವ ಮಾಡಲಱಿಯದೆ,
ದೇಹಿ ನಿರ್ದೇಹಿಯಾಗದನ್ನಕ್ಕ ದೇಹಾರವೆಲ್ಲಿಯದೋ ?
ಅನಂತ ಮುಖದಲ್ಲಿ ದೇಹಾರವ ಮಾಡಲು ದೇವನಲ್ಲಿಲ್ಲ ನೋಡಯ್ಯ
ಆ ಸಾಹಿತ್ಯವಿಡಿದು ಹುಸಿಯನೆ ಪೂಜಿಸಿ ಗಸಣೆಗೊಳಗಾದಿರಲ್ಲಾ !
ಅನಂತವನಳಿದು ನಿಜವನಱಿದ ಏಕೋಗ್ರಾಹಿ  ಕೂಡಲ ಚನ್ನಸಂಗ ನಿಮ್ಮ ಶರಣ.    

೫೫

ಹೊಱಗನೆ ಕೊಯಿದು ಹೊಱಗನೆ ಪೂಜಿಸಿ
ಹೊಱಗಾಗಿ ಹೋಯಿತ್ತಲ್ಲಾ ತ್ರೈಜಗವೆಲ್ಲಾ !
ಆನಱಿಯದೆ ಲಿಂಗವ ಪೂಜಿಸ ಹೋದಡೆ
ಕೈ ಲಿಂಗದಲ್ಲಿ ಸಿಲುಕಿತ್ತಲ್ಲಾ !
ಮನದೂರಿಂದ ನಿಮ್ಮ ನೆನೆದೆನೆಂದಡೆ
ತನು ಸಂದಣಿಸಿತ್ತು ಗುಹೇಶ್ವರಾ !

೫೬

ಓಂ ನಮಶ್ಯಿವಾಯ ಎಂಬ ದೇವನಿರವು
ಒಡಲುವಿಡಿದು ಪಾಷಾಣಕ್ಕೆ ಹಂಗಿಗರಾದಿರೇ !
ಶರೀರ ರೂಹಿಸಿದ ರೂಹಿಂಗೆ ಮಾಯದ ಬಲೆಯಲ್ಲಿ
ಸಿಲುಕಿ ಅಂಗಸಂಗಿಗಳೆಲ್ಲರು ಮಹಾಘನವನಱಿಯದೆ ಹೋದರು.
ಹುಸಿಯನೇ ಕೊಯ್ದು ಹುಸಿಯನೇ ಪೂಜಿಸಿ ನೇಮದೊಳಗಿದು ಸಲ್ಲದು.
ಗುಹೇಶ್ವರ ನಿಮ್ಮ ಶರಣಸಂಬಂಧ ತೋಱದು ತೋಱದು ಬಹುಮುಖಿಗಳಿಗೆ.

೫೭

ಪೃಥ್ವಿಗೆ ಹುಟ್ಟಿದ ಪಾಷಾಣ, ಬಿನ್ನಣಿಗೆ ಹುಟ್ಟಿದ ಪ್ರತಿಮೆ,
ಮಂತ್ರಕ್ಕೆ ಹುಟ್ಟಿದೆ ಮೂರ್ತಿ, ಗುರುವಿಂಗೆ ಹುಟ್ಟಿದ ಲಿಂಗ
ಇಂತೀ ಚತುರ್ವಿಧದ ಕೈಗೆ ಕೈಗೆ ಬಾಯಿಗೆ ಬಯಿಗೆ ಬರಲಾಗಿ
ಹೇಸಿಲಿಂಗವೆಂದು ಮುಟ್ಟಿ ಪೂಜೆಯ ಮಾಡೆ ಕಾಣಾ, ಕೂಡಲಚನ್ನಸಂಗಮದೇವಾ.

೫೮

ಎಲ್ಲಿಕ್ಕೆಯ ಎಣ್ಣೆ, ಎಲ್ಲಿಕ್ಕೆಯ ಬತ್ತಿ,
ಎಲ್ಲಿಕ್ಕೆಯ ಲಿಂಗವ ಪೂಜಿಸುವರು ನೀವು ಕೇಳಿರೆ.
ಅಂಗಲಿಂಗವೆಂಬೆನೆ ? ಹಿಂಗದು ಮನದ ಭವಿತನ.
ಪ್ರಾಣಲಿಂಗವೆಂಬೆನೆ ? ಭಾವದಲ್ಲಿ ಜಂಗಮವನಱಿಯರು.
ಗುರುವಚನ ಸಾರಾಯ ಸಂಪನ್ನರೆಂಬೆನೆ ?
ಷಟ್ಕರ್ಮ ಮಂತ್ರ ವಿರೋಧಿಗಳಾಗಿ. ಇದು ಕಾರಣ, ಕೂಡಲಚನ್ನಸಂಗಯ್ಯ
ತಾಯ ಮಾಱಿ ತೊತ್ತಕೊಂಬವರ ನಾನೇನೆಂಬೆ !

೫೯

ಜೀವವಿಲ್ಲದ ಹೆಣನ ಹಿಡಿದಾಡುವರಯ್ಯಾ.
ಪ್ರತಿಯಿಲ್ಲದ ಪ್ರತಿಮಂಗೆ ಪ್ರತಿಮಾಡುವರಯ್ಯಾ.
ಶಿರವಿಲ್ಲದ ಮುಂಡಕ್ಕೆ ಸೇಸೆಯನಿಕ್ಕುವರಯ್ಯಾ, ಗುಹೇಶ್ವರ.