೬೦

ಪೂಜಕರೆಲ್ಲರು ಪೂಜಿಸುತ್ತಿದ್ದರು, ಭಾವಕರೆಲ್ಲರು ಬಳಲುತ್ತಿದ್ದರು.
ದೇವ ದೇಹಾರವ ಮಾಡುತ್ತಿರ್ದ, ದೇವಿ ಧೂಪದೀಪ ನೈವೇದ್ಯವ ನೀಡುತ್ತಿರ್ದಳು.
ನಾನು ಚಿಕ್ಕಯ್ಯಪ್ರಿಯಸಿದ್ಧಲಿಂಗ ಇಲ್ಲ ಇಲ್ಲ ಎಂದೆನುತಿರ್ದೆನು.  

೬೧

ಗಿಳಿಯಿಲ್ಲದ ಹಂಜರ ಹಲ್ವು ಮಾತನಾಡಬಲ್ಲುದೆ ?
ದೇವರಿಲ್ಲದ ದೇಗುಲಕ್ಕೆ ಮಂತ್ರಾಭಿಷೇಕವುಂಟೆ ?
ಅಱುಹು ನಷ್ಟವಾಗಿ ಕುಱುಹಿನ ಹಾವಚೆಯನಱಿಯೆನೆಂದನಂಬಿಗ ಚೌಡಯ್ಯ.

೬೨

ಪ್ರಾಣಲಿಂಗವನು ಪರಲಿಂಗವಮಾಡಿ
ಇಷ್ಟಲಿಂಗ ಪೂಜೆಯ ಕಷ್ಟನೋಡಾ.  ತೊಟ್ಟಿಲಶಿಶುವಿಂಗೆ ಜೋಗುಳವಲ್ಲದೆ
ಹೊಟ್ಟೆಯ ಶಿಶುವಿಂಗೆ ಜೋಗುಳವುಂಟೆ ?
ಬಯಲಾಸೆ ಹಾಸ್ಯವಾಯಿತ್ತು ಚಿಕ್ಕಯ್ಯಪ್ರಿಯಸಿದ್ಧಲಿಂಗ
ಇಲ್ಲವೆಂದ ಕಾರಣ.

೬೩

ಇನ್ನೆಲ್ಲರ ಕೇಳುವುದಕ್ಕೆ ಕುಲಛಲ ಮಲದೇಹಿ[ಗಳು]
ಕುಱುಹಿಡರೆನ್ನ ಎದೆಯಲ್ಲಿ.  ಕಟ್ಟಿದ ಎಡೆಯಾಸೆ ಬಿಡದು,
ಕೊಡುವಕೊಂಬಲ್ಲಿ ದ್ವಿಜರಒಡಾಗೂಡುವುದು ಬಿಡದು.
ಎನ್ನೊಡೆಯ ಬಸವಣ್ಣ ಹೇಳಿದ ಮಾತಿಂಗೆ
ಅಡಿಯಿಡಲಮ್ಮದೆ ಕಟ್ಟಿದೆ.  ಹಿಡಿದು ಅರ್ಚಿಸುವುದಕ್ಕೆ
ಶಿರದ ಕಡೆಯ ಕಾಣೆ.
ಮಜ್ಜನ ಮಂಡೆಗೆಂದೆಱೆಯೆ, ಪಾದಕ್ಕೆಂದೆಱೆಯೆ
ಕುಸುಮವನಿಕ್ಕುವುದಕ್ಕೆ ಸಸಿಯಾದೆ ಮಕುಟದಲ್ಲಿ.
ಪಾದಕ್ಕೆ ಮದನ ಪಿತನಕ್ಷಿಯಾದೆ ಉಂಗುಷ್ಠದಲ್ಲಿ.
ಊಟಕ್ಕೆ ಬಾಯಕಾಣೆ, ಕೂಟಕ್ಕೆ ಅವಯವಂಗಳಿಲ್ಲ.
ಮಾತಿಗೆ ಆತ್ಮನ ಕಾಣೆ, ಇದೇತಱ ಮುರಿ ?
ಪಾಷಾಣದಂತಿದೆ.            ಇದರಾಟವೆನಗೆ ಕೂಟವಾಗಿದೆ,
ಅಲೇಖನಾಥ ಶೂನ್ಯ ಕಲ್ಲಾದ ಭೇದವ ಮೆಲ್ಲಗೆ ಎನಗೆ ಹೇಳು.

೬೪

ಅರ್ಚನೆಗೊಳಗಾಯಿತ್ತು ಲಿಂಗವೆಂಬರು, ಅದು ಹುಸಿ ನಿಲ್ಲು.
ಪೂಜೆಗೊಳಗಾಯಿತ್ತು ಲಿಂಗವೆಂಬರು, ಅದು ಹುಸಿ ನಿಲ್ಲು.
ಇಂತೀ ಉಭಯದೊಳಗಾದ ಅಷ್ಠವಿಧಾರ್ಚನೆ
ಷೋಡಶೋಪಚಾರಕ್ಕೊಳಗಾಯಿತ್ತು ಲಿಂಗವೆಂಬರು,
ಇಲ್ಲ ಇಂತೀ ನೇಮ ಹುಸಿ ನಿಲ್ಲು.
ಇಂತೀ ನೇಮಕ್ಕೆ ಒಳಗಾದೆ,
ಇಷ್ಟಾರ್ಥ, ಕಾಮ್ಯಾರ್ಥ, ಮೋಕ್ಷಾರ್ಥ ತನಗೆ ದೃಷ್ಟದಲ್ಲಿ ಆದುದಿಲ್ಲ.
ಇಹದಲ್ಲಿ ಕಾಣದೆ, ಪರದಲ್ಲಿ ಕಂಡೆಹೆನೆಂಬುದು ಹುಸಿ ಸಾಕು ನಿಲ್ಲು.
ಕುರುಹಿನಿಂದ ಕಾಂಬಡೆ ತನ್ನಿಂದಲೋ ? ಕುಱುಹಿನಿಂದಲೋ ?
ಅಱುಹಿನಿಂದ ಕಾಂಬಡೆ ಅಱುಹಿನಿಂದಲೋ ? ಕುಱುಹಿನಿಂದಲೋ ?
ಕುಱುಹಿನಿಂದ ಅಱಿದಿಹೆನೆಂದಡೆ,
ಱುಱುಹಿನಿಂದ ಬೇಱೊಂದ ಕಂಡಿಹೆನೆಂದಡೆ,
ಕಾಣಿಸಿಕೊಂಡುದು ನಿನೋ ನಾನೋ ?
ಈ ಉಭಯವೇನೆಂದಱಿಯದಿಪ್ಪುದೆ ಬೆಳಗಿನ ಕಾಂತಿ,
ಒಳಗಿನ ನಿಶ್ಚಯ, ತಾನಾದ ಮತ್ತೆ ಏನೇನೂ ಇಲ್ಲ.
ಅದು ತಾನೆ, ಅದು ತಾನಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.

೬೫

ಅಷ್ಟವಿಧಾರ್ಚನೆ ಷೋಡಶೋಪಚಾರ
ಉದಯಕಾಲ ಅಸ್ತಮಯಕಾಲವೆಂದು
ನೋಡಿಮಾಡುವ ತುಡುಗಾಣಿನಾಯಿಗಳು ನೀವುಕೇಳಿರೋ,
ಉದಯವೆಂದೇನೋ ಶರಣಂಗೆ ?
ಅಸ್ತಮಯವೆಂದೇನೋ ಶರಣಂಗೆ ?
ಮಹಾಮೇರುವಿನ ನೆಳಲಲ್ಲಿರ್ದು ಭೂತದ ನೆಳಲನಾಚರಿಸುವ
ಭಾವವ್ರತಗೇಡಿಗಳ ಮೆಚ್ಚ ಕೂಡಲಚನ್ನಸಂಗಮದೇವಾ.

೬೬

ಅಷ್ಟಾವಿಧಾರ್ಚನೆ ಷೋಡಶೋಪಚಾರವ ಮಾಡುವ
ಮಿಟ್ಟಿಯ ಭಂಡರಕಂಡು ನಾಚಿತ್ತೆನ್ನಮನವು.
ಉಪಚಾರವೇಕೋ ಶಿವಲಿಂಗದ ಕೂಡೆ ಸ್ವಪಚರಿಗಲ್ಲದೆ ?
ಸಕಳೇಶ್ವಯ್ಯ, ಇಂತಪ್ಪ ಮಾದಿಗ ವಿದ್ಯಾಭ್ಯಾಸದವರನೊಲಿಯಬಲ್ಲನೆ.

೬೭

ಅಷ್ಟವಿಧಾರ್ಚನೆ ಷೋಡಶೋಪಚಾರವೆಂಬುವು ಮುನ್ನವೆ ಹುಸಿ,
ಗಾಣದೆತ್ತಿನಂತೆ ಮೆಟ್ಟಿದ ಹೆಜ್ಜೆಯನೆ ಮೆಟ್ಟುವ ಭಕ್ತಿಯ ಪರಿಯ ನೋಡಾ.
ಕೊಂಬಲ್ಲಿ ಐದುವನು, ಕೊಡುವಲ್ಲಿ ನಾಲ್ಕುವನು
ಒಂಭತ್ತಱಿಂದಾಯಿತ್ತೆ ಭಕ್ತಿ ? ಮುಂದೆ ಭಾವಕ್ಕಿನ್ನೆಂತೋ ?
ಮೂರ್ತಿವಿಡಿದು ಅಮುರ್ತಿಯನಱಿಯರು
ಚಿಕ್ಕಯ್ಯಪ್ರಿಯಸಿದ್ಧಲಿಂಗ ಇಲ್ಲ ಇಲ್ಲ ಎಂದುದಾಗಿ.

೬೮

ಹರಹರ ನೀನಿಪ್ಪ ಠಾವನಱಿಯದೆ,
ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡುವರ ದಿಟ್ಟತನವ ನೋಡಾ.
ಶಿವಶಿವಾ ನಿಮ್ಮ ಶ್ರಿಮುಖವನಱಿಯದೆ,
ಸಕಲಪದಾರ್ಥವ ನಿಮಗರ್ಪಿಸಿ ಪ್ರಸಾದವ ಕೊಂಡೆವೆಂದೆಂಬುವರ
ಎದೆಗಲಿತನವ ನೋಡಾ.
ಹಗರಣದ ಹಣ್ಣ ಮೆದ್ದು ಹಸಿವು ಹೋಯಿತ್ತೆಂದಡೆ,
ಆರು ಮೆಚ್ಚುವರು ಹೇಳಾ, ಗುಹೇಶ್ವರಾ.

೬೯

ಅಕಟಕಟಾ ದೇಹಾರ ಅಭ್ಯಾಸವಾಯಿತ್ತಲ್ಲಾ !
ಅಕಟಕಟಾ ಜಾಗರ ಉಪಹಾರವಾಯಿತ್ತಲ್ಲಾ !
ಅಕಟಕಟಾ ಅನುಭಾವ ಹೊಲಬುಗೆಟ್ಟು ಹೋಯಿತ್ತಲ್ಲಾ
ಅಕಟಕಟಾ ಷೋಡಶೋಪಚಾರವನಱಿಯದೆ ಕೆಟ್ಟರಲ್ಲಾ, ಗುಹೇಶ್ವರಾ.

೭೦

ವೇದ ಶಾಸ್ತ್ರ ಪುರಾಣಾಗಮಾದಿಯಾದ ಲಿಂಗವಲ್ಲದೆ ಇಲ್ಲೆಂದು
ಲಿಂಗಾರ್ಚನೆಯ ಮಾಡುವ ಮಹಾ ಮಹಿಮರು ನೀವು ಕೇಳಿರೆ.
ಅಂಗಲಿಂಗವೊ, ಆಚಾರಲಿಂಗವೊ, ಗುರುಲಿಂಗವೊ ?
ಶಿವಲಿಂಗವೊ, ಜಂಗಮಲಿಂಗವೊ, ಪ್ರಾಣಲಿಂಗವೊ ?
ಮಹಾಲಿಂಗವೊ, ಭಾವಲಿಂಗವೊ, ಪ್ರಾಣಲಿಂಗವೊ ?
ಶ್ರುತಿಃ ಪ್ರಾಣಲಿಂಗಸ್ಸ ಸಂಬಂಧಿ ನವಲಿಂಗ ಪ್ರಕೀರ್ತಿತಂ
ಪ್ರಸಾದ ಲಿಂಗಯುಕ್ತಾತ್ಮಾಮಮ ರೂಪೋಮಹೇಶ್ವರಿ ||
ಇದು ಕಾರಣ ಕೂಡಲಚನ್ನಸಂಗಮದೇವಾ, ಲಿಂಗನಾಮ ನಿರ್ಣಯವಪೂರ್ವಪೂರ್ವ.

೭೧

ಅಱುಹೆಂಬ ಗುರುವಿನ ಕೈಯಲ್ಲಿ ವಿರಕ್ತೆಯೆಂಬ ಶಿವದಾರಮಂಕೊಟ್ಟು
ಸುಮತೆಯೆಂಬ ಸೆಜ್ಜೆಯಂ ಪವಣಿಸಿ
ಸಮತೆಯೆಂಬ ಲಿಂಗಸಾಹಿತ್ಯವ ಬಿಜಯಂಗೈಸಿಕೊಂಡು
ಸರ್ವದಯಾ ಪರನೆಂದು ಲಿಂಗಾರ್ಚನೆಯ ಮಾಡುವರಾಧಾರದ
ಲಿಂಗವ ತಪ್ಪಿ ಆಧಾರ ಸ್ಥಾಪ್ಯವಾದಡೇನು, ಶಂಕೆಯಗೊಳಲಿಲ್ಲ
ತೆಗೆದುಕೊಂಡು ಮಜ್ಜನಕ್ಕೆಱೆವುದೆ ಸದಾಚಾರ
ಶ್ರೀಗುರು ಷಟ್ಸ್ಥಲವನು ಅಂತರಂಗದಲ್ಲಿ ನಿಕ್ಷೇಪಿಸಿದನಾಗಿ
ದೃಶ್ಯಕ್ಕೆ ತ್ಯಾಗವುಂಟಲ್ಲದೆ, ಅದೃಶ್ಯಕ್ಕೆ ತ್ಯಾಗವುಂಟೆ ?
ಇಲ್ಲ ಉಂಟೆಂದೆನಾದಡೆ ಗುರುದ್ರೋಹ !
ಆ ಭಕ್ತನಿಂತವನು ಅಂತವನು ಎಂದು ದೂಷಣಿಸಿ
ನುಡಿದವರಿಗೆ ಅಘೋರ ನರಕ ತಪ್ಪದಯ್ಯಾ,
ಉರಿಲಿಂಗಪೆದ್ದಿಪ್ರಿಯವಿಶ್ವೇಶ್ವರಾ.

೭೨

ಇಷ್ಟಲಿಂಗಕ್ಕೊಂದು ಕಷ್ಟ ಬಂದಿತ್ತೆಂದು
ಮುಟ್ಟಲಾಗದು ಇನ್ನು ಕೆಟ್ಟೆನೆಂಬ ಅಣ್ಣಗಳು ನೀವು ಕೇಳಿರೆ.
ಇಷ್ಟಲಿಂಗ ಪ್ರಾಣಲಿಂಗದಾದಿ ಅಂತುವನಾರು ಬಲ್ಲರು ?
ಹೃದಯಕಮಲ ಭೂಮದ್ಯದಲ್ಲಿ ಸ್ವಯಂಜ್ಯೋತಿ ಪ್ರಕಾಶನು
ಆದಿಮಧ್ಯಾಂತಸ್ಥಾನದಲ್ಲಿ ಜನ್ಮಜಯದ್ರುಪನಾಗಿಹನು.
ಇಂತಪ್ಪ ಮಹಾಘನವಬಲ್ಲ ಶರಣನ ಪರಿಬೇಱೆ
ಇಷ್ಟಲಿಂಗ ಹೋದ ಬಟ್ಟೆಯ ಹೊಗಲಾಗದು.
ಈ ಕಷ್ಟದ ನುಡಿಯ ಕೇಳಲಾಗದು.
ಕೆಟ್ಟಿತ್ತು ಜ್ಯೋತಿಯ ಬೆಳಗು, ಅಟ್ಟಾಟಿಕೆಯ ಮಾತಿನಲಱಿವುದೇನೊ.
ಆಲಿನುಂಗಿದ ನೋಟದಂತೆ, ಪುಷ್ಪನುಂಗಿದ ಪರಿಮಳದಂತೆ,
ಜಲನುಂಗಿದ ಮುತ್ತಿನಂತೆ, ಅಪ್ಪುವಿನೊಳಗಿಪ್ಪ ಉಪ್ಪಿನಂತೆ,
ಬೀಜದೊಳಗಣ ವೃಕ್ಷದಂತೆ, ಶಬ್ಧದೊಳಗಣ ನಿಶ್ಯಬ್ದದಂತೆ,
ಬಯಲನುಂಗಿದ ಬ್ರಹ್ಮಾಂಡದಂತೆ, ಉರಿಯುಂಡ ಕರ್ಪೂರದಂತೆ
ಇಂತಪ್ಪ ಮಾಹಾಘಾನ ತೇಜೋಮೂರ್ತಿಯ ನಿಲವ ಬಲ್ಲ
ಮಹಾಶರಣನ ಮನೆಯ ಎತ್ತು ತೊತ್ತು ಮುಕ್ಕಳಿಸಿ ಉಗುಳುವ ಪಡುಗ,
ಮೆಟ್ಟುವ ಚಮ್ಮವುಗೆಯಾಗಿ ಬದುಕಿದೆನು ಕಾಣಾ,
ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತ ಚನ್ನಮಲ್ಲಿಕಾರ್ಜುನಯ್ಯ
ನಿಮ್ಮ ಶರಣರ ನಿಲಿವಿನ ಪರಿಯ ನೀವೆ ಬಲ್ಲಿರಿ ನಾನೆತ್ತೆ ಬಲ್ಲೆನಯ್ಯ, ನಿಮ್ಮ ಧರ್ಮ ನಿಮ್ಮ ಧರ್ಮ

೭೩

ಸೃಷ್ಟಿಯ ಮೇಲಣ ಶಿಲೆಯ ತಂದು ಅಷ್ಟ ತನಿವಿನ ಕೈಯಲ್ಲಿ ಕೊಟ್ಟು,
ಅಷ್ಟ ತನುವಿನ ಕೈಯ ತಪ್ಪಿ ಸೃಷ್ಟಿಯ ಮೇಲೆ ಬಿದ್ದಡೆ,
ಕೆಟ್ಟನನಾಚಾರಿಯೆಂದು ಮುಟ್ಟಲಮ್ಮರು ನೋಡಾ.
ಮುಟ್ಟದಕಾಯ ಬಿಚ್ಚದ ಪ್ರಾಣವ ಕಷ್ಟಜೀವಿಗಳೆತ್ತ ಬಲ್ಲರು,
ಕೂಡಲಚನ್ನಸಂಗಮದೇವಾ ?

೭೪

ವ್ರತಗೇಡಿ ವ್ರತಗೇಡಿಯೆಂಬರು,
ವ್ರತಗೆಡಲೇನು ಹಾಲಂಬಿಲವೆ ?
ವ್ರತ ಕರಿದೊ ಬಿಳಿದೊ ?
ಕಟ್ಟಿದಾತ ಭಕ್ತನಪ್ಪನೆ, ಕೆಡಹಿದಾತ ವೈರಿಯಪ್ಪನೆ ?
ಕಟ್ಟುವುದಕ್ಕೆ ಲಿಂಗವು ಒಳಗಗಬಲ್ಲುದೆ ?
ಕೆಡಹುವುದಕ್ಕೆ ಲಿಂಗವು ಬೀಳಬಲ್ಲುದೆ ?
ಲಿಂಗಬಿದ್ದಡೆ ಭೂಮಿಯಾನಬಲ್ಲುದೆ ?
ಲಿಂಗವುಬಿದ್ದಡೆ ಲೋಕಾದಿಲೋಕಂಗಳುಲಿಯಬಲ್ಲವೆ ?
ಪ್ರಾಣಲಿಂಗವು ಬಿದ್ದಿತ್ತೆಂಬ ದೂಷಕರ ನುಡಿಯ ಕೇಳಲಾಗದು ಗುಹೇಶ್ವರಾ.

೭೫

ಕಟ್ಟಿದಾತ ಭಕ್ತನಪ್ಪನೆ, ಕೆಡಹಿದಾತ ದ್ರೋಹಿಯಪ್ಪನೆ ?
ಲಿಂಗವು ಕಟ್ಟಲಿಕೆ ತನ್ನ ಕಯ್ಯೂಳಗಿಪ್ಪುದೆ ?
ಕೆಡಹಲಿಕೆ ಬೀಳಬಲ್ಲುದೆ ?   ಆ ಲಿಂಗವು ಬಿದ್ದ ಬಳಿಕ ಜಗವು ತಾಳಬಲ್ಲುದೆ ?
ಪ್ರಾಣಲಿಂಗವು ಬಿದ್ದ ಬಳಿಕ ಪ್ರಾಣಲಿಂಗ ಉಳಿಯಬಲ್ಲುದೆ ?
ಲಿಂಗ ಬಿದ್ದಿತ್ತೆಂಬುದು ಸೂತಕದ ಶಬ್ದ, ಭ್ರಾಂತುವಿನ ಪುಂಜ, ಅಂತು ಅದ ಕೇಳಲಾಗದು.
ಯುಗಜುಗಂಗಳು ಗತವಹವಲ್ಲದೆ ಲಿಂಗಕ್ಕೆ ಗತವುಂಟೆ ?
ಲಿಂಗವು ಬಿದ್ದಿತ್ತೆಂದು ನಿಂದಿಸಿ ನುಡಿವ ದ್ರೋಹಿಯ ಮಾತು ಕೇಳಲಾಗದು ಕಾಣಾ, ಗುಹೇಶ್ವರಾ.

೭೬

ಅಂಗದೊಳಗೆ ಮಹಲಿಂಗವಿರಲು, ಕಯ್ಯಲಿಂಗ ಬಿದ್ದಿತ್ತೆಂದು
ನೆಲದೊಳಗಂಗವ ಹೂಣುವರು, ಭಂಗಬಡುವರಲ್ಲಾ
ಗುಹೇಶ್ವರಲಿಂಗವನಱಿಯದ ಜಡರು

೭೭

ತೆಱಹಿಲ್ಲದ ಲಿಂಗಭರಿತವೆಂದು ನಾಮವಿಡಿದು ಪೂಜಿಸಿ,
ಮರಳಿ ಬಿತ್ತೆಂಬ ನಾಚಿಕೆಯ ನೋಡಾ.
ಆರಾರಱಿಯರು ಪ್ರಾಣಲಿಂಗದ ನೆಲೆಯನು.
ಅಱಿದು ಕಱುಹಿಂಗೆ ವ್ಯಾಳೆಯ ಮಾಡುವದು ಆ ಭ್ರಷ್ಟರು.
ಅಱಿದಱಿದು ಸ್ವಯಂಭುವಾದ ಲಿಂಗವಾಸರಿತೆಂದು
ಒಡನೆ ಸಾವ ವ್ರತೆಗೇಡಿಗಳನೊಲ್ಲ ಕೂಡಲಚನ್ನಸಂಗಮದೇವಾ.

೭೮

ತೆಱಹಿಲ್ಲದ ಮಹಾಘನಪರಿಪೂರ್ಣಲಿಂಗವು ಬೀಳಲಿಕೆ ತೆಱಹುಂಟೆ ?
ಅಱಿಯಱಿಯರು ಪ್ರಾಣಲಿಂಗದ ನೆಲೆಯನು.
ಅಱೆಯದೆ ಅಜ್ಞಾನದಲ್ಲಿ ಕುಱುಹು ಬಿದ್ದಿತ್ತೆಂದು
ಪ್ರಾಣಘಾತಕವ ಮಾಡಿಕೊಂಡು ಸಾವ ಅಜ್ಞಾನಿಗಳ ನೋಡಾ.
ಅಱಿದು ಕೂಡಿ ಸ್ವಯವಾಗಿರ್ದ ಲಿಂಗವು ವಾಸರಿಸಿತೆಂದು
ಆ ಲಿಂಗದೊಡನೆ ಸಾವ ಅಜ್ಞಾನಿಗಳಿಗೆ ಅಘೋರನರಕ ತಪ್ಪದು ಕಾಣಾ
ಕೂಡಲ ಚನ್ನಸಂಗಮದೇವಾ.

೭೯

ಅಂಗದ ಮೇಲಣ ಲಿಂಗ ಹಿಂಗಿತ್ತೆಂದು, ಆತ್ಮಘಾತಕವ ಮಾಡಬೇಕೆಂಬರು,
ಅಂಗವಾವುದು ಲಿಂಗವಾವುದೆಂದಱಿಯರು.
ಅಂಗವೆ ಆತ್ಮನು, ಲಿಂಗವೆ ಸಂದಿತ್ತು. ಇವೆರಡರ ಸಕೀಲಸಂಬಂಧವನಱಿಯದೆ
ಅಂಗಲಿಂಗ ಹಿಂಗಿತ್ತೆಂಬವರಿಗೆ ಪ್ರಾಣಲಿಂಗ ನಾಸ್ತಿ,
ಪ್ರಸಾದವೆಲ್ಲಿಯದೊ,
ಕೂಡಲ ಚನ್ನಸಂಗಮದೇವಯ್ಯಾ ?

೮೦

ಭಾಷೆಗೇಱಿಸಿ ತನುವಿಂಗೆ ಅಲಗ ಕೊಂಡಡೆ ಲಿಂಗ ವಾಸರಿಸಿತ್ತಯ್ಯ
ಆತ ವೀರನೆನಿಸುವ, ಲಿಂಗಕ್ಕೆ ದೂರ, ಜಂಗಮಕ್ಕೆ ದೂರ,
ಪ್ರಸಾದಕ್ಕೆ ದೂರವಾಗಿ ವ್ರತೆಗೇಡಿ.
ಇದು ಕಾರಣ ಕೂಡಲಚನ್ನಸಂಗಯ್ಯನಲ್ಲಿ ಬ್ರಹ್ಮೇತಿಕಾಱನೆನಿಸುವ.

೮೧

ಭಾಷೆ ತಪ್ಪಿದ ತನುವಿಂಗೆ ಅಲಗ ಕಿತ್ತರೆ ಲಿಂಗ ವಾಸರಿಸುವ ಮುಂದು, ವೀರನಪ್ಪ
ಇಂತಾ ಭಾಷೆವಂತನು ಶರಣನಲ್ಲ; ಕಲ್ಪಿತಕಾಱನಲ್ಲ; ಪೂರ್ವಾಶ್ರಯವಿಲ್ಲ;
ಉಭಯಕುಳರಹಿತ ಕೂಡಲಚನ್ನಸಂಗ ನಿಮ್ಮ ಶರಣ.

೮೨

ಉಭಯ ದಳ ನಡೆದು ಬಂದು ನಿಂದಿರ್ದು, ಭಾಷಿಯಾಗಿ ಬಿರಿದನುಚ್ಚಳಿಸುತ್ತ
ಹೊಯಿ ಕುಟ್ಟ್ಯಾಡುವ ಕಾಳಗದೊಳಗೆ
ಕೈಯ್ಯ ಬಿದ್ದಡೆ ಭಂಗವಲ್ಲದೆ, ಶಸ್ತ್ರವಿಧ್ಯವ ಕಲಿತೆನೆಂದು ಅಭ್ಯಾಸಮಾಡುವ ಗರಡಿಯಲ್ಲಿ,
ಕೋಲು ಬಿದ್ದಡೆ ಭಂಗವೆ ಅಲ್ಲ, ಮರುಳೆ  ಕೇಳು !
ಕೋಲ ಕಳೆದುಕೊಂಡು ಅಭ್ಯಾಸವ ಮಾಡುವದೆ ಉಚಿತವಲ್ಲದೆ,
ಕೋಲು ಬಿದ್ದಡೆ ನಾನಿನ್ನು ಅಭ್ಯಾಸವ ಮಾಡಲಾಗದೆಂಬ ಗಾವಿಲರ ಮಾತ ಕೇಳಲಾಗದು.
ದೃಷ್ಟವೆ ಕೋಲು, ಅದೃಷ್ಟವೆ ಕೈದು, ಕಾಣಬಾರದ ಲಿಂಗವ ಕಾಬಡೆ
ತನ್ನ ಶಕ್ತಿ ಕಾಣಾ, ಕೂಡಲ ಚನ್ನಸಂಗಮದೇವಾ.

೮೩

ಶ್ರೀ ಗುರು ಶಿಷ್ಯಂಗೆ ಮಂತ್ರವ ಮೂರ್ತಿಗೊಳಿಸಬೇಕಾಗಿ,
ಪೃಥ್ವಿಯ ಮೇಲಣ ಕಣಿಯ ತಂದು ಇಷ್ಟಲಿಂಗಮಂ ಮಾಡಿ,
ಶಿಷ್ಯನ ತನುವಿನ ಮೇಲೆ ಅವಧರಿಸಿದ ಲಿಂಗವು; ಅವದಳವಾಗಿ
ಭೂಮಿಯಲ್ಲಿ ಸಿಂಹಾಸನಗೊಂಡಿತ್ತೆಂದು ಸಮಾಧಿಯ ಹೊಗುವರಯ್ಯಾ
ಲಿಂಗಕ್ಕೆ ಅವದಳವಾದಡೆ ಭೂಮಿ ತಾಳಬಲ್ಲುದೆ ಅಯ್ಯಾ ?
ಮಾರಾಂಕವ ಗೆಲಿವೆನೆಂದು ಗರುಡಿಯ ಹೊಕ್ಕು ಕಠಾರಿಯ ಕೋಲಕಳೆದುಕೊಂಡು
ಸಾಧನೆಯಂ ಮಾಡುವಲ್ಲಿ ಕೈ ತಪ್ಪಿ ಕೋಲು ನೆಲಕ್ಕೆ ಬಿದ್ದಡೆ ಆ ಕೋಲಂ ಬಿಟ್ಟು
ಕಳೆವರೆ ಅಯ್ಯಾ ? ತಟ್ಟು ಮುಟ್ಟಿ ಹಳಚುವಲ್ಲಿ ಅಲಗು ಬಿದ್ದಡೆ ಭಂಗವಲ್ಲದೆ,
ಕೋಲು ಬಿದ್ದಡೆ ಭಂಗವೆ ಅಯ್ಯಾ ? ಆ ಕೋಲಂ ಕಳೆದುಕೊಂಡು
ಸಾಧನೆಯಂ ಮಾಡುವದೆ ಕರ್ತವ್ಯ, ಆ ಲಿಂಗ ಹುಸಿಯೆಂದಡೇನಯ್ಯಾ ?
ಶ್ರೀ ವಿಭೂತಿ ವೀಳೆಯಕೆ, ಸಾಕ್ಷಿಯಾಗಿ ಬಂದ ಶಿವಗಣಂಗಳು ಹುಸಿಯೆ ?
ಆ ಗಣಂಗಳು ಹುಸಿಯಾದಡೆ, ಕರ್ಣಮಂತ್ರ ಹುಸಿಯೆ ?
ಆ ಕರ್ಣಮಂತ್ರ ಹುಸಿಯಾದಡೆ, ಶ್ರೀಗುರುಲಿಂಗವು ಹುಸಿಯೆ ?
ಶ್ರೀಗುರುಲಿಂಗವು ಹುಸಿಯಾದಡೆ, ಜಂಗಮಲಿಂಗ ಹುಸಿಯೆ ?
ಆ ಜಂಗಮಲಿಂಗ ಹುಸಿಯಾದಡೆ, ಪಾದತೀರ್ಥ ಪ್ರಸಾದ ಹುಸಿಯೆ ?
ಇಂತೀ ಷಟಸ್ಥಲವ ತುಚ್ಚವಮಾಡಿ, ಗುರೂಪದೇಶವ ಹೀನವಮಾಡಿ
ಸಮಾಧಿಯ ಹೋಗುವ ಪಂಚಮಹಾಪಾತಕರ ಮುಖವ ನೋಡಲಾಗದು.
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

೮೪

ಪ್ರತಿಯಿಲ್ಲದ ಪ್ರತಿಮಲಿಂಗವು ಭಿನ್ನವಾಯಿತ್ತೆಂದು ತನುವಿನ ಮೇಲೆ
ಶಸ್ತ್ರವ ಘಾತಿಸಿಕೊಂಬ ಆತ್ಮದ್ರೋಹಿಯ ಮುಖವ
ನೋಡಲಾಗದು, ಅದೆಂತೆಂದಡೆ :
ಪರಿಣಿತಃ ಪ್ರಾಣಲಿಂಗೀನಾ | ಲಿಂಗಪ್ರಾಣಾತ್ವನುತ್ತಮಃ ||
ಸ್ವಯಮಾತ್ಮಹತಿಂ ಕುರ್ಯಾತ್ | ನರಕೇ ಕಾಲಮಕ್ಷಯಂ || ಯೆಂದುದಾಗಿ
ಮಂತ್ರಭಿನ್ನವಿಲ್ಲ, ಮಂತ್ರಭಿನ್ನವಿಲ್ಲಾಗಿಪೂಜೆ ಭಿನ್ನವಿಲ್ಲ.
ಪೂಜೆ ಭಿನ್ನವಿಲ್ಲವಾಗಿ ವೇದ ಭಿನ್ನವಿಲ್ಲ. ವೇದಭಿನ್ನವಿಲ್ಲದಿಪ್ಪ
ಮಹಾಬಯಲ ಕೂಡಿದ ಪ್ರಾಣಲಿಂಗದ ಸಂಚವನಱಿಯರಾಗಿ
ಕೂಡಲ ಚನ್ನಸಂಗಮದೇವರಲ್ಲಿ ಅವರಿಗೆ ಗುರುವುಪದೇಶವು ತಪ್ಪಿ
ಅಘೋರ ನರಕದಲ್ಲಿಳಿವರು.

೮೫

ತೆಱಿಹಿಲ್ಲದ ಘನ್ವು ಭಿನ್ನವಾಯಿತ್ತೆಂದು, ಮನುಮೇಲೆ ಶಸ್ತ್ರವನಿಕ್ಕಿಕೊಂಬ
ಶಿವದ್ರೋಹಿಯ ಮುಖವ ನೋಡಲಾಗದು.
ಕಲುಕುಟಿಗ ಮುಟ್ಟಿ ಚಕ್ಕುಳಿವಲ್ಲಿ ಪ್ರಾನಲಿಂಗವು ಭಿನ್ನವಾಯಿತ್ತೆ,
ಭಾವಲಿಂಗವು ಭಿನ್ನವಾಯಿತ್ತೆ, ಪೂಜಾಲಿಂಗ ಭಿನ್ನವಾಯಿತ್ತಲ್ಲದೆ.
ಇಂತೀ ನಿರಾಳದ ನೆಲೆಯ ಸೋಂಕನಾರಱಿಯರಾಗಿ ಇಷ್ಟಲಿಂಗಸಂಬಂಧಿಗಳ
ಕಷ್ಟವ ನೋಡಾ, ಕೂಡಲಚನ್ನಸಂಗಮದೇವಾ.

೮೬

ಪರುಷದ ಲಿಂಗವಿದ್ದು ಕಾಣಲಱಿಯದೆ ಇಷ್ಟಲಿಂಗ ಬಿದ್ದಿತ್ತೆಂದು
ತನುವಿನ ಮೇಲೆ ಶಸ್ತ್ರವನಿಕ್ಕಿಕೊಂಡು ಸಾವರು, ಅಱಿದಱಿದು.
ಗುರುಶಿಷ್ಯಸಂಬಂಧವು ಅಱುಹುಳ್ಳವರಿಗಲ್ಲದೆ ಮತ್ತಾರಿಗೆಯೂ ಆಗದು.
ಕುಱುಹು ಘನವೊ ಲಿಂಗವು ಘನವೊ ? ಅಱುಹುಳ್ಳವರು ನೀವು ಕೇಳಿರೇ,
ಮಱಹು ಕವಿದಿಹುದು. ಶ್ರೀ ಗುರು ಕುಱುಹ ತೋಱಿದನಲ್ಲದೆ;
ಅಱುಹ ಮಱೆದರೆ ಕೂಡಲ ಚನ್ನಸಂಗವರಂದೇ ದೂರಾ.

೮೭

ಸದ್ಗುರುಕಾರುಣ್ಯವುಳ್ಳ ಭಕ್ತರ ಲಿಂಗ ಓಸರಿಸಿದಡೆ, ವ್ರತಗೇಡಿ ಕಳಿಯಬಾರದು ಕೊಳಬಾರದು.
ಗುರುಕಾರುಣ್ಯವುಂಟಾಗಿ ಸುವತಂ ಸುಲಭೋಸಹಸ್ರಜಿತು ಪಾವನಂ ಎಂದುದಾಗಿ,
ಅಲಿಂಗೀ ಲಿಂಗರೂಪೇಣ | ಯೋ ಲಿಂಗ ಮುಪಜೀವತಃ |
ಸಪಚ್ಯತೇ, ಮಹಾಘೋರೆ, ನರಕೇಕಾಲಮಕ್ಷಯಂ || ಎಂಬುದಾಗಿ,
ಶಸ್ತ್ರ ಸಮಾಧಿ ಜಲಾಂತ ವನಾಂತ ದಿಗುಬಲಿದಹನವೀಯಾರರಲ್ಲಿ ಸತ್ತರೆ
ಅಘೋರ ನರಕದಲ್ಲಿಕ್ಕುವ ಕೂಡಲಚನ್ನಸಂಗಯ್ಯ.

೮೮

ದೇವರು ಬಿದ್ದರು ದೇವರು ಬಿದ್ದರೆಂದು ಸಾಹಿತ್ಯದ ಕೂಡೆ ಸಾಯಬೇಕೆಂದೆಂಬಿರಿ,
ಆವಾಗ ಬಿದ್ದಿತ್ತು ಆವಾಗಯೆದ್ದಿತ್ತೆಂದಱಿಯಿರಿ; ಆವಾಗಲೆದ್ದಿತ್ತು
ಆವಾಗಬಿದ್ದಿತ್ತೆಂದು ಬಲ್ಲರೆ ನೀವು ಹೇಳಿರೆ. ಅದೆಂತೆಂದಡೆ;
ಅದೃಶ್ಯಭಾವನೋನಾಸ್ತಿ | ದೃಶ್ಯಮೇವ ವಿನಶ್ಯತಿ |
ಅವರ್ಣಮಕ್ಷಯಂ ಬ್ರಹ್ಮ ಕಥಂಧ್ಯಾಯಂತಿಯೋಗಿನಃ || ಎಂದುದಾಗಿ,
ಇದು ಕಾರಣ ಕೂಡಲಚನ್ನಸಂಗಯ್ಯ ಅಱಿದಾಗಲೆದ್ದಿತ್ತು, ಮಱೆದಾಗ ಬಿದ್ದಿತ್ತು.

೮೯

ಗುರು ಸತ್ತಡೆ ಸಮಾಧಿಯ ಹೊಗಲೊಲ್ಲರಯ್ಯಾ, ಲಿಂಗಬಿದ್ದಡೆ ಸಮಾಧಿಯ ಹೊಕ್ಕೆವೆಂಬರು.
ಗುರುವಿಂದ ಲಿಂಗವಾಯಿತ್ತೊ, ಲಿಂಗದಿಂದ ಗುರುವಾದನೊ ?
ಅದೆಂತೆಂದಡೆ:
ಪೃಥ್ವಿಯಿಂದ ಹುಟ್ಟಿತ್ತು, ಕಲ್ಲುಕುಟಿಗನಿಂದ ರೂಪಾಯಿತ್ತು,
ಗುರುವಿನ ಹಸ್ತದಿಂದ ಲಿಂಗವಾಯಿತ್ತು.
ಇಂತೀ ಮೂವರಿಗೆ ಹುಟ್ಟಿದ ಲಿಂಗವಕಟ್ಟಿ ಜಗವೆಲ್ಲ ಭಂಡಾಯಿತ್ತು ನೋಡಿರೋ !
ಅಣ್ಣ ಲಿಂಗ ಬಿದ್ದಿತ್ತೆಂದು ನೋಯಲೇಕೆ ?
ಬಿದ್ದಲಿಂಗನೆತ್ತಿಕೊಂಡು ಷೋಡಶೋಪಚಾರಮಂ ಮಾಡೋದು.
ಹೀಂಗಲ್ಲದೆ ಶಸ್ತ್ರಸಮಾಧಿ ದುರ್ಮರಣವ ಮಾಡಿಕೊಂಡೆನೆಂಬ
ಪಂಚಮಹಾಪಾತಕಂಗೆ ನಾಯಕನರಕ.
ಲಿಂಗವು ಬೀಳಬಲ್ಲುದೆ ? ಭೂಮಿಯು ಆನಬಲ್ಲುದೆ ? ಸದ್ಗುರುನಾಥನಿಲ್ಲವೆ ?
ಇಂತೀ ಕಟ್ಟುವ ತೆಱ ಮುಟ್ಟುವ ಭೇದವ ಆರು ಬಲ್ಲರೆಂದಡೆ
ಈ ಕೀಳುಭುವನ ಹದಿನಾಲ್ಕುಲೋಕದೊಡೆಯ ಪುರ್ವಾಚಾರಿ
ಕೂಡಲಚನ್ನಸಂಗಯ್ಯನಲ್ಲದೆ, ಮಿಕ್ಕಿನ ಮಾತಜ್ಞಾನಿಗಳೆತ್ತಬಲ್ಲರು.