೯೦

ಪೃಥ್ವಿಯ ಮೇಲಣ ಕಣಿಯತೆಂದು ಅಷ್ಟತನುವಿನ ಕೈಯಲ್ಲಿ ಕೊಟ್ಟು ಮುಟ್ಟಿ ಪೂಜಿಸಬೇಕೆಂಬರು.
ಮೂವರಿಗೆ ಹುಟ್ಟಿದಾತನ ನಾನೆಂತು ಪೂಜಿಸುವೆ ?
ಭೂಮಿಗೆ ಹುಟ್ಟಿ ಶಿಲೆಯಾಯಿತ್ತು, ಕಲ್ಲುಕುಟಿಗಮುಟ್ಟಿ ರೂಪಾಯಿತ್ತು, ಗುರುಮುಟ್ಟಿ ಲಿಂಗವಾಯಿತ್ತು.
ಇದು ಬಿದ್ದಿತ್ತೆಂದು ಸಮಾಧಿಯ ಹೊಕ್ಕೆನೆಂಬರು;
ಎತ್ತಿಕೊಂಡು ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡೋದೆ ವ್ರತ.
ಕಟ್ಟುವಠಾವನು ಮುಟ್ಟುವ ಭೇದವನು ಕೂಡಲಚನ್ನಸಂಗ ನಿಮ್ಮ ಶರಣನೊಬ್ಬನೆ ಬಲ್ಲನು.    

೯೧

ಸೃಷ್ಟಿಯ ಮೇಲಣ ಕಣಿಯ ತಂದು, ಅಷ್ಟತನುವಿನ ಕೈಯಲ್ಲಿ ಕೊಟ್ಟು ಕಟ್ಟಿಪೂಜೆಯ ಮಾಡಬೇಕೆಂಬರಯ್ಯಾ.
ಅದೆಂತೆಂದಡೆ: ಭೂಮಿಗೆ ಹುಟ್ಟಿ ಶಿಲೆಯಾದ, ಕಲ್ಲು ಕುಟಿಗನ ಕೈಯಲ್ಲಿ ರೂಪಾದ, ಗುರುವಿನ ಕೈಯಲ್ಲಿ ಮೂರ್ತಿಯಾದ;
ಇಂತೀ ಮೂವರಿಗೆ ಹುಟ್ಟಿದ ಸೂಳೆಯಮಗನ, ನಾನೇನೆಂದು ಪೂಜೆಯ ಮಾಡಲಿ ?
ಅದು ಬಿದ್ದಿತ್ತೆಂದು ಸಾಮಧಿಯ ಹೊಕ್ಕೆಹೆನೆಂಬ ಮನಸ್ತ್ರಸಮಾಧಿ ಜಲಾಂತರ
ವನಾಂತರ ದಿಗಂತದರದಲ್ಲಿ ಸತ್ತಡೆ ಕುಂಭಿನಿಪಾತಕ ನಾಯಕನರಕ.
ಕಯ್ಯ ಲಿಂಗ ಹೋದಡೆ ಮನದಲಿಂಗ ಹೋದುದೆ, ಎಂದು ಎತ್ತಿಕೊಂಡು
ಅಷ್ಟ ವಿಧಾರ್ಚನೆ ಷೋಡಶೋಪಚಾರವ ಮಾಡುವದೆ ವ್ರತವು.
ಇದ ಕಟ್ಟುವ ಭೇದವ, ಮುಟ್ಟುವ ಪಥವ ಚನ್ನಬಸವಣ್ಣನೊಬ್ಬನೆ ಬಲ್ಲನಲ್ಲ್ದೆ
ಮಿಕ್ಕ ಅಭ್ಯಾಸಕ್ಕೆ ಅಗ್ಘವಣಿಯ ಕೊಟ್ಟು ಪರವನೈದಿದೆನೆಂಬ ಲಜ್ಜೆಗೇಡಿಗಳನೇನೆಂಬೆ ಗುಹೇಶ್ವರಾ ?

೯೨

ಅಂಗದೊಳಗಿಪ್ಪುದು ಲಿಂಗವಲ್ಲ; ಅಂಗದ ಹೊಱಗಿಪ್ಪುದು ಲಿಂಗವಲ್ಲ;
ಎಲ್ಲ ಅಂಗಂಗಳನೊಳಕೊಂಡಿಪ್ಪ ಲಿಂಗ ಹೋಗುತ್ತ ಬರುತ್ತ ಇಪ್ಪುದಲ್ಲಿ !
ಚಲನೆಯಿಲ್ಲದ ಅಚಲವಪ್ಪ ಲಿಂಗಕ್ಕೆ,
ಹೋಯಿತು ಹೋಯಿತು ಎಂಬ ಸಂದೇಹವಿಲ್ಲವೆಂದನಂಬಿಗ ಚೌಡಯ್ಯ.

೯೩

ಇಷ್ಟಲಿಂಗವನು ಪ್ರಾಣಲಿಂಗವೆಂಬ ಕಷ್ಟದ ಮಾತದೆಲ್ಲಿಯದೊ ?
ಇಷ್ಟಲಿಂಗ ಹೋದರೆ ಪ್ರಾಣಲಿಂಗ ಹೋಗದು;
ಇಷ್ಟ ಪ್ರಾಣಲಿಂಗದ ಭೇದವನು, ಗುಹೇಶ್ವರ ನಿಮ್ಮ ಶರಣನೆ ಬಲ್ಲ.

೯೪

ಪೃಥ್ವಿಯ ಪಾಷಾಣ ಪೃಥ್ವಿಯ ಮೇಲೆ ಬಿದ್ದು ಹೋದಡೆ,
ಪ್ರಾಣಲಿಂಗ ಹೋಯಿತ್ತು ಪ್ರಾಣಲಿಂಗ ಹೋಯಿತೆಂಬಿರಿ,
ಪ್ರಾಣಲಿಂಗ ಹೋದಡೆ ನೀವು ನುಡಿವ ಪರಿಯೆಂತೊ ?
ಅಂತರಂಗದ ಪ್ರಾಣಲಿಂಗದ ಸಂಬಂಧದ ಹೊಲಬನಱಿಯರಾಗಿ,
ಗುಹೇಶ್ವರ ನೀ ಮಾಡಿದ ಬೆಡಗು ಬಿನ್ನಣ್ಣಕ್ಕೆ ನಾನು ಬೆಱಗಾದೆನು.

೯೫

ಶ್ರೀಗುರುದೇವರು ತಮ್ಮ ಹಸ್ತವ ತಂದು ಎನ್ನ ಮಸ್ತಕದ ವೇಲಿರಿಸಿದಾಗಲೆ ಎನ್ನ ಭವಂ ನಾಸ್ತಿಯಾಯಿತ್ತು.
ಎನ್ನ ತನ್ನಂತೆ ಮಾಡಿದ, ಎನಗೆ ತನಗೆ ತೆಱಹಿಲ್ಲದಂತೆ ಮಾಡಿದನು ನೋಡಾ.
ತನ್ನ ಕರಸ್ಥಲದಲ್ಲಿರ್ದ್ದ ಮಹಲಿಂಗವನೆನ್ನ ಕರಸ್ಥಲದಲ್ಲಿ ಮೂರ್ತಿಗೊಳಿಸಿದ.
ಎನ್ನ ಕರಸ್ಥಲರ್ದ ಮಹಲಿಂಗವನು ಎನ್ನ ಮನಃಸ್ಥಲದಲ್ಲಿ ಮೂರ್ತಿಗೊಳಿಸಿದನು.
ಎನ್ನ ಮನಸ್ಥಲದಲ್ಲಿರ್ದ ಮಹಲಿಂಗವನು ಎನ್ನೊಳಹೊಱಗೆ
ಸರ್ವಾಂಗದೊಳ್ ತೆಱಹಿಲ್ಲದಳವಡಿಸಿಕೊಂಡ ಬಳಿಕ,
ಕಬ್ಬ ಮೆದ್ದು, ತನಿರಸವನುಂಡು, ಹಿಪ್ಪಿಯನುಗುಳುವಂತೆ,
ಮೈಯ್ಯ ಮೇಲಣ ಪಾಷಾಣ ಹೋಯಿತ್ತೆಂದು ಆತ್ಮಘಾತಕವ ಮಾಡಿಕೊಂಬ
ಬ್ರಹ್ಮೇತಿ ಸೂನೆಗಾಱರ ಎನಗೆ ತೋಱದಿರಾ,
ಚನ್ನಮಲ್ಲಿಕಾರ್ಜುನಾ.

೯೬

ಸಿಡಿಲೊಡನೆ ಕಾದುವಂಗೆ ಕೊಡೆಯೊಂದು ಮಱೆಯೆ ?
ಪರ್ವತವ ಮೊಱುವಂಗೆ ಸಿಂಬಿಯೊಂದು ಸಹಜವೆ ?
ಸಕ್ಕರೆಯ ಸವಿವುದಕ್ಕೆ ಬೇರೊಂದು ಪದಾರ್ಥವೆ ?
ಗುಹೇಶ್ವರನನಱಿವುದಕ್ಕೆ ಕುಱುಹೊಂದು ನಿರವೆ ?

೯೭

ಅಱುಹಱತು ಮಱಹು ನಷ್ಟವಾದ ಬಳಿಕ, ಕುಱುಹಿನ ಬಣ್ಣವಂಗದ
ಇನ್ನು ಅಱಿವರಾರೊ, ಅಱುಹಿಸಿಕೊಂಬರಾರೊ ?
ಬಱಿಯ ಬಯಲ ನೋಡಾ, ನಮ್ಮ ಕೂಡಲ ಚನ್ನಸಂಗಮದೇವರಲ್ಲಿ
ಘಟ್ಟಿವಾಳಮುದ್ದಣ್ಣನಲ್ಲದೆ ಇನ್ನು ಅಱಿವರಾರೂ ?

೯೮

ಅಱುವ ಹೇಳುವ ಹಿರಿಯರೆಲ್ಲರು, ಕುಱುಹಿನ ಶಿಲೆಯ ಕಯ್ಯಲ್ಲಿ ಹಿಡಿದು,
ನರಗುಱಿಗಳ ಕುಱುಹಿನ ಬಾಗಿಲಲ್ಲಿ ನಿಂದು ಮೊಱೆಯಿಡುತಿರ್ಪರು.
ಈ ಅರಿಗುಱಿಗಳ ಮೆಚ್ಚ ನಿಷ್ಕಳಂಕ ಮಲ್ಲಿಕಾರ್ಜುನ.

೯೯

ಮಾತೆ ಸೂತಕವಾಗಿ ಸಂದೇಹ ಮಾಡುವಲ್ಲಿ, ಅದೇತಱಿಂದವೊದಗಿದ ಕುಱುಹು.
ಶಿಲೆಯ ಪ್ರತಿಷ್ಠೆಯ ಮಾಡಿ ತನ್ನ ವಲವರ ವಿಶ್ವಾಸದಿಂದ
ಬಲಿಕೆಯನಱಿವುದು ಶಿಲೆಯೊ, ಮನವೊಯೆಂದನಂಬಿಗ ಚೌಡಯ್ಯ.

೧೦೦

ಪೃಥ್ವಿಗೆ ಹುಟ್ಟಿದ ಶಿಲೆ, ಕಲುಕುಟಿಗಂಗೆ ಹುಟ್ಟಿದ ಮೂರ್ತಿ ಗುರುಮಂತ್ರಕ್ಕೆ ಲಿಂಗವಾಯಿತ್ತಲ್ಲಾ !
ಈ ಮೂವ್ವರಿಗೆ ಹುಟ್ಟಿದ ಮಗುವ ಲಿಂಗವೆಂದು ಕೈವಿಡಿದ ಅಚ್ಚವ್ರತಗೇಡಿಗಳನೇನೆಂಬೆ ಗುಹೇಶ್ವರಾ !

೧೦೧

ಕಲ್ಲಿನೊಳಗೆ ಬಲ್ಲಭನಿರ್ದನೆಂದು ಎಲ್ಲರು ಬಳಲುತಿಪ್ಪರು ನೋಡಾ.
ಅಲ್ಲಿ ಎಲ್ಲಿಯೂ ಕಾಣೆ, ತನ್ನಲ್ಲಿ ತುಱಿತು ಇದಿರಿಟ್ಟಲ್ಲಿಯೆ ಇಲ್ಲವಾಗಿ,
ಇದು ಬಲ್ಲವರ ಬಲ್ಲತನವಲ್ಲ.
ಹಾಂಗಲ್ಲದೆ, ತನ್ನ ಮಱೆದು ಅನ್ಯವ ಕಂಡೆಹೆನೆಂಬಡೆ, ಅದು ನನ್ನಿಯಲ್ಲ.
ಹುಸಿ ಮನ್ನಣೆಗೆ ಸಿಕ್ಕದ ಶಿಲೆಯ ಬಣ್ಣಿಸುತಿಪ್ಪವರ ನೋಡಾ !
ಬಣ್ಣಿಸುತಿಪ್ಪ ಅಣ್ಣಗಳೆಲ್ಲರು ಸಂನರ್ಧರಾದರು; ಮುತ್ತು ಕೋಟಿಯಲ್ಲಿ ಸಿಕ್ಕಿದುದಿಲ್ಲ;
ಎಲ್ಲರೂ ಕೋಟಿಯ ಹೊಱಗಿರ್ದು ಸತ್ತು ಕೆಟ್ಟರಯ್ಯಾ, ನಿಷ್ಕಳಂಕ ಮಲ್ಲಿಕಾರ್ಜುನಾ.

೧೦೨

ಕಲ್ಲ ಬಿತ್ತಿ ನೀರೆಱೆದರೆ ಪಲ್ಲೈಸುವದೆ, ಧಿಟ ಬೀಜದ ವೃಕ್ಷದಂತೆ ?
ಶ್ರದ್ಧೆ ಸಂನರ್ಧಭಕ್ತಿಯಿಲ್ಲದಲ್ಲಿ ಗುರುಭಕ್ತಿ, ಶಿವಲಿಂಗಪೂಜೆ, ಚರಸೇವೆ, ತ್ರಿವಿಧವು ಎತ್ತಲೆ ಉಳಿಯಿತ್ತು.
ಮತ್ತೆ ನಿಜವಸ್ತು ಎತ್ತನಸಿದ್ಧಿ ನಿಮಗೆ, ಎನ್ನಯ್ಯಪ್ರಿಯ ಇಮ್ಮಡಿ ನಿಷ್ಕಳಂಕ ಮಲ್ಲಿಕಾರ್ಜುನನಲ್ಲಿ ವಿಶ್ವಾಸಬೇಕು.

೧೦೩

ಕಲ್ಲೊಳಗಣ ಬೆಲ್ಲವ ಮೆದ್ದವರೆನ್ನರು ? ಕಲ್ಲ ಹಿಡಿದು ಬಿಡದೆ ಹೋರುವಿರಿ ಕಲ್ಲು ಹಲ್ಲನೆ ಕಳೆಯಿತ್ತು.
ಬಲ್ಲವರಿದ ಹೇಳಿ, ಕಲ್ಯಾಣದ ತ್ರಿಪುರಾಂತಕ ನೀನೆ ಬಲ್ಲೆಯಯ್ಯಾ.

೧೦೪

ಕಲ್ಲಿನ ಹೋಳ ಬೆಲ್ಲವೆಂದು ಮಕ್ಕಳ ಕೈಯಲ್ಲಿ ಕೊಟ್ಟಡೆ,
ಹಲ್ಲಿನಲ್ಲಿ ಕಡಿದು, ನಾಲಗೆಯಲ್ಲಿ ನಂಜಿ, ಬೆಲ್ಲವಲ್ಲಾಯೆಂದುಹಾಯ್ಕಿ ಮನೆಯವರ ಕಾಡುವಂತೆ,
ನಾನಱಿಯದೆ ಕುಱುಹಿಡಿದು ಅಱುಮಱವೆಯ ಮನಕ್ಕೆ ತೆಱಹಾಗದು.
ನಾನಱಿವಡೆ ಎನ್ನನೊಡಗೂಡಿರ್ದ ತುಡುಗುಣಿ ಎನ್ನಬಿಡದು.
ನಡೆಯ ಸತುವಿಲ್ಲದೆ ಬಡವನ ಬಂಟನಾದ ಮತ್ತೆ,
ಬಾಯ ಕೊಡಯಿಸಿಕೊಂಬುವದಕ್ಕೆ ಅಂಜಲೇಕೆ ?
ಬಿಡುವದಿಯನ ಬಿಡದಿರ್ದಡೆ ಕಲ್ಲಿನ ಯೆಡೆಯಾಗು ಇವರೆಲ್ಲರೆ ವಿಧಿ ಎನಗಾಯಿತ್ತು.

೧೦೫

ಕಲ್ಲುದೇವರೆಂದು ಪೂಜಿಸುವದು ಆಗದು ಕಾಣಿರೊ, ಅಗಡಿಗರಾದಿರಲ್ಲಾ,
ಮುಂದೆ ಹುಟ್ಟುವ ಕೂಸಿಂಗೆ ಇಂದು ಮೊಲೆಕೊಡುವಂತೆ ಕಾಣಾ, ಗುಹೇಶ್ವರಾ.

೧೦೬

ಮೊಳೆಯ ಮೇಲೆ ಕಲ್ಲನಿಕ್ಕಿ ಮೊಳೆಭಕ್ತನಾಗಬಲ್ಲುದೆ ?
ಮೇಹನಿಕ್ಕಿ ಮೆಯ್ಯನೊರಸಿದೊಡೆ ಪಶುಗಳು ಮೆಚ್ಚುವವು.
ಅನ್ನವನಿಕ್ಕಿ ಹಿರಣ್ಯವ ಕೊಟ್ಟಡೆ ಜಗವೆಲ್ಲ ಹೊಗಳುವದು.
ಒಳಗನಱಿದು ಹೊಱಗ ಮಱೆದವರ ಎನಗೆ ನೀ ತೋರಾ, ಸಕಲೇಶ್ವರಾ.

೧೦೭

ಹೊಟ್ಟೆಯ ಮೇಲೋಗರದ ಮೂಟೆಯ ಕಟ್ಟಿದರೇನೋ, ಹಸಿಹು ಹೋಹುದೆ ?
ಅಂಗದ ಮೇಲೆ ಲಿಂಗಸ್ವಾಯತವಾದಡೇನು, ಭಕ್ತನಾಗಬಲ್ಲನೆ ?
ಇಟ್ಟ ಕಲ್ಲು ಮಳೆಯೆ ಮೇಲೆ ಸಿಲುಕಿದಡೆ ಆ ಕಲ್ಲು ಲಿಂಗವೆ ? ಆ ಮೆಳೆ ಭಕ್ತನೆ ?
ಇಟ್ಟತ ಗುರುವೆ ? ಇಂತಪ್ಪವರ ಕಂಡರೆ ನಾಚುವೆನಯ್ಯಾ, ಗುಹೇಶ್ವರಾ.

೧೦೮

ಕಾಯಕ್ಕೆ ಜೀವಕ್ಕೆ ಸಂದು ಮುನ್ನುಳ್ಳಡೆ ಅದು ಪ್ರಾಣಲಿಂಗವಲ್ಲ ಕಾಣಿರೊ ?
ಲೋಕಾಚಾರದ ಕೊಳನುಂಡು ಲೀಲೆಯೊಳಾಡುತ್ತಿಹರಲ್ಲದೆ ಸಲೆ ಸಂದವರಪ್ಪರೆ ?
ಈ ಕಲ್ಲ ಹಿಡಿದಾತನಾಕಲ್ಲನೆತ್ತ ಬಲ್ಲ ?
ಇವರೊಬ್ಬರ ಕರೆದೊಡೆ ವೊಬ್ಬರೋಯೆಂದಂತೆ ಇವರಿಬ್ಬರ ಭಾವ ಹುರುಳಿಲ್ಲ ಕಾಣಾ, ಗುಹೇಶ್ವರಾ.

೧೦೯

ಕೈಯಲ್ಲಿ ಹಿಡಿದಡೆ ಕಲ್ಲು ಸಿಕ್ಕಿತ್ತಲ್ಲದೆ ಲಿಂಗವಿಲ್ಲ ಯೆಂದೆ.
ಕಣ್ಣಿನಲ್ಲಿ ನೋಡಿ ಕವಳೀಕರಿಸಿದೆನೆಂದಡೆ ಅದು ಕವಳೀಕವೆಂಬೆ.
ಮನದಲ್ಲಿ ನೆನೆದು ಘನದಲ್ಲಿ ನಿಂದಿಹೆನೆಂದಡೆ ಭಾವಕ್ಕೆ ಬೀಜವೆಂಬೆ.
ಕೈಗೂ ಕಣ್ಣಿಗೂ ಮನಕ್ಕೂ ಬಾಹಾಗ  ತೊತ್ತಿನ ಕೂಸೆ
ಕಂಡ ಕಂಡವರ ಅಪ್ಪ ಅಪ್ಪಾ ಯೆಂಬುವಂತೆ.
ಇಂತೀ ಸುಚಿತ್ತವನಱಿಯದೆ, ಉದ್ಯೋಗಿಸಿ ನುಡಿವ
ಜಗದ ಡಂಬಕರನೊಲ್ಲೆನೆಂದ ನಿಷ್ಕಳಂಕಮಲ್ಲಿಕಾರ್ಜುನಾ.

೧೧೦

ಏಕ ಜಲ ಬಹುಜಲವಾದ ಕ್ರಮವನಱಿವುದು.
ಅದಕ್ಕೆ ದೃಷ್ಟ :
ಅನಾದಿಯ ಪ್ರಣಮವನಱಿಯದೆ ಹಾದಿಯ ಕಲ್ಲ ಪೂಜಿಸಿದರಯ್ಯಾ.
ಸಂಸಾರಕ್ಕೆ ಬೋಧಿಗೆ ಸಿಕ್ಕದ ಅನಾಗರಸಿದ್ದಿಯ ಹೋದ ಹೊಲಬನಱಿಯದೆ ಕೆಟ್ಟರಯ್ಯಾ.
ಅಂಧಕಂಗೆ ಚಂದದ ಮುಖವುಂಟೆ ? ಶೃಂಗಾಗ ಪಂಗುಳಂಗೆ ಯೋಜನದ ಸುದ್ದಿಯಿಲ್ಲ,
ಲಿಂಗವನಱಿದಂಗೆ ಜಗದ ಹಂಗಿಲ್ಲ ನಿಷ್ಕಳಂಕ ಮಲ್ಲಿಕಾರ್ಜುನಾ.

೧೧೧

ಪ್ರಭುದೇವರು ಬಂದ ಬರ ಇನ್ನವುದಕ್ಕೂ ಅವಧಿಯಿಲ್ಲ.
ಕಲ್ಲು ಮೆಚ್ಚಿದವರ ಕೂಡೆ ಗೆಲ್ಲಸೊಲ್ಲಕ್ಕೆ ಹೋರಿಯಾಡಿ,
ಬಲ್ಲವೆಂದು ಗೆಲ್ಲಗೂಳಿಗಲ ಕೂಡೆ ಬಲ್ಲತನಕ್ಕೆ ನೆಲೆಗೊಟ್ಟು,
ಬಳ್ಳಿಯವರ ಗುಣವನಱಸಿಹೆವೆಂದು, ಎಲ್ಲಾ ಠಾವಿನಲ್ಲಿ ತಿರುಗಿ ಬಂದು
ಅಟ್ಟ ಊಟದಲ್ಲಿ ನಿಷ್ಠೆಯ ತೋಱಿಹನೆಂದು,
ಕಷ್ಟಗುಣವಾದ ಬೆಟ್ಟವ ಹೊಕ್ಕಿಹನೆಂಬ ಕಷ್ಟಗುಣ ಬಿಡದು.
ಭಾವದ ಕದಳಿಯಂ ಮಱೆದು, ವಾಯದ ಕದಳಿಯ ಹೊಕ್ಕು
ಭಾವದ ಭ್ರಮೆಯಿಂದ ತಿರಿಗಿಬಂದು,
ಸಂಗನ ಬಸವಣ್ಣಂಗೆ ಸಂಗದ ವಿಶೇಷವತೋಱದೆ, ಹಿಂಗಿಸಿ ಕೊಟ್ಟೆಯಲ್ಲಾ.
ಸಂಗಮೇಶ್ವರದೇವರೆಂಬ ಕಲ್ಲಿನ ಮನೆಯ ಕಲ್ಲಿನೊಳಹೊಕ್ಕು,
ವಲ್ಲಭನನಱಿಯದೆ ಪ್ರಭು ಮೊದಲಾದ ಇವರೆಲ್ಲರು ಕೆಟ್ಟರಲ್ಲಾ.
ಎನಗೆ ಬಲ್ಲತನವ ತೋಱಿದ ಎನ್ನ ವಲ್ಲಭ ನೀನೆ ಚನ್ನಬಸವಣ್ಣ.
ಸಂಗಬಸವಣ್ಣಂಗೆ, ಪ್ರಮಥ ಗಣಂಗಳು ಮೊದಲಾದವರಿಗೆ,
ಎನಗೆ, ಎನ್ನ ನಿಷ್ಕಳಂಕ ಮಲ್ಲಿಕಾರ್ಜುನಂಗೆ ನಿನ್ನಿಂದ ಭವವಿರಹಿತವಾದೆ.

೧೧೨

ಕಲ್ಲು ಲಿಂಗವಲ್ಲ ಉಳಿಯ ಮೊನೆಯಲಾಯಿತ್ತಾಗಿ
ಮರ ದೇವರಲ್ಲ, ಅಗ್ನಿಗೊಡಲಾದ ಕಾರಣ;
ಮಣ್ಣು ದೇವರಲ್ಲ, ನೀರಿಂಗೆ ಕರುಗುವುದಾಗಿ;
ಇಂತಿದವಱಿದ ಚಿತ್ತ ದೇವರಲ್ಲ ಕರಣಂಗಳ ಮೊತ್ತಕ್ಕೊಳಗಾಗಿ ಸತ್ವಗೆಟ್ಟಿತ್ತು.
ಇಂತೀ ವಸ್ತುವಿಪ್ಪ ನೆಲೆಹಾವುದೆಂದಡೆ,
ಕಂಡವರೊಳಗೆ ಕೈಕೊಂಡು ಒಂದಾಗಿ ಬೆರೆಯದೆ,
ಕೊಂಡ ವ್ರತದಲ್ಲಿ ಮತ್ತೊಂದನೊಡಗೂಡಿ ಬೆರೆಯದೆ,
ವಿಶ್ವಾಸ ಗ್ರಹಿಸಿ ನಿಂದಲ್ಲಿ ಆ ನಿಜಲಿಂಗವಲ್ಲದೆ ಮತ್ತೊಂದನಱಿಯದೆ ನಿಂದಾತನೆ,
ಸರ್ವಾಂಗಲಿಂಗಿ ವೀರಬೀರೇಶ್ವರ ಲಿಂಗದೊಳಗಾದ ಶರಣ.

೧೧೩

ಗ್ರಾಮದ ಮಧ್ಯಧವಳಾರದೊಳಗೆ ಎಂಟು ಕಂಭ ಒಂಬತ್ತು ಬಾಗಿಲ ಶಿವಾಲಯವಿರಿತ್ತಿರಲು
ಮಧ್ಯಸ್ಥಾನದ ಸ್ವಯಂಭುನಾಥನನಱಿಯದೆ ಕಲ್ಲಿನಾಥನ ಪೂಜಿಸಿ ಮರುಳಾದರಲ್ಲಾ.
ಮೆಲ್ಲ ಮೆಲ್ಲನೆ ಸ್ವಯಂಭುನಾಥನು ತನ್ನ ತಪ್ಪಿಸಿಕೊಂಡು ಕಲ್ಲಿನಾಥನ ತೋಱಿದನು.
ಗ್ರಾಮದ ಮಧ್ಯದ ಧವಳಾರದೊಳಗಣ ಗರ್ಭಗೃಹವ ತಿಳಿದಡೆ ಕಲ್ಲಿನಾಥ ನಾಸ್ಥಿ.
ಕೂಡಲಚೆನ್ನಸಂಗಯ್ಯನೆಂಬ ಸ್ವಯಂಭುವಿರುತ್ತಿರಲು ಯೆತ್ತಲೆಂದಱಿಯರಲ್ಲಾ.

೧೧೪

ಕೈಲಾಸವೆಂಬುದು ಶ್ರಮಕೂಟ, ಮೋಕ್ಷವೆಂಬುದು ಭವದಾಗರ,
ಕಾಯ ಸಮಾಧಿಯೆಂಬುದು ಪ್ರಪಂಚಿನ ಪುತ್ತಳಿ
ಕಾಯ ಜೀವ ಕೂಡಿ ಬಯಲಾಗಿ ಇನ್ನಾವ ಠಾವಿನಲ್ಲಿ ಹೋಗಿ ನಿಲುವುದು ?
ತನುವಿನ ಗಂಭೀರವೆಂಬುದು ಮಱೆಸಿದೆ,
ಸದ್ಗುರುವ ತೋಱಿ ಸದ್ಗುರುವ ಮಱಿಸೆದೆ
ನಿಜವಸ್ತು ಶಿಲೆಯ ಮಱೆಯಲ್ಲಿರ್ದು, ಲಿಂಗವೆಂಬುದ ಕುಱುಹಿಟ್ಟು ಲಿಂಗವೆಂಬುದು ಮಱೆಸಿದೆ.
ತ್ರಿವಿಧ ಬಟ್ಟೆಕೆಡುವುದಕ್ಕೆ ಜಂಗಮವೆಂಬುದ ತೋಱಿ, ಜಂಗಮವೆಂಬುದ ಮಱೆಸಿ,
ನೀನು ಎಲ್ಲಿ ಅಡಗಿದೆ ? ಎಲ್ಲಿ ಉಡುಗಿದೆ ? ಎಲ್ಲಿ ಬೆಂದೆ ?
ಎಲ್ಲಿ ಬೇಕರಿಗೊಂಡೆ ? ನೀನೆಲ್ಲಿ ಹೋದೆ ?
ಹುಲ್ಲು ಹುಟ್ಟಿದ ಠಾವಿನಲ್ಲಿ ನೀನೆಲ್ಲಿ ಹೋದೆ ?
ಅಲ್ಲಿ ನಿನ್ನವರೆಲ್ಲರ ಕಾಣದೆ ಕಣ್ಣು ಮಣ್ಣು ನೀರಿನಲ್ಲಿ ನೆರೆದಂತೆ ಬದುಕು.
ನನಗಿಲ್ಲಿಯೆ ಸಾಕು, ನೀ ಕೊಟ್ಟಕುಱುಹಿನಲ್ಲಿ ಬಯಲು,
ಸದ್ಯೋಜಾತಲಿಂಗವೆಂಬುದು ನಿರಾಲಂಬವಾಯಿತ್ತು.

೧೧೫

ವಿಭೂತಿ ರುದ್ರಾಕ್ಷಿಯಂ ಧರಿಸಿ, ಷಡಕ್ಷರಿಯಂ ಜಪಿಸಿ,
ಗುರು ಲಿಂಗ ಜಂಗಮ ತೀರ್ಥಪ್ರಸಾದದ ಅಂತುವನಱಿಯದೆ ಏನೆಂದು ಪೂಜಿಸುವಿರಿ ?
ಅಜ್ಞಾನಿ ಮೃಗ ಪಶುವಿನ ಸಗಣಿಯ ಸುಟ್ಟು, ಬೂದಿ ವಿಭೂತಿಯಾದ  ಪರಿ ಹೇಗೆ ?
ಪಂಚಭೌತಿಕದ ಕಠಿಣದದ್ರವ್ಯದಿಂಗ ಜನಿಸಿದ ವೃಕ್ಷದ ಫಲ, ರುದ್ರಾಕ್ಷಿಯಾದಾ ಪರಿ ಹೇಗೆ
ಸಕಲ ವ್ಯಾಪಾರದಳುವಿಂಗೊಳಗಾಗಿ ತೊಡಿಸಿ ಬರಸಿ ಕೊಂಬುವುದು ಮಂತ್ರವಾದ ಪರಿ ಹೇಗೆ ?
ಹಿಂದ ಹರಿಯದೆ ಮುಂದನಱಿಯದೆ ಹರಿ ಹರಿದು ಉಪದೇಶವ ಮಾಡುವ ಮಾನವ ಗುರುವಾದ ಪರಿ ಹೇಗೆ ?
ನೆಲದ ಮೇಲಣ ಶಿಲೆ ಕಲುಕುಟಿಗ ಒಡೆದು ಖಂಡಿಸಿ ಹರದನ
ಕೈಯುಲ್ಲಿ ಕೊಟ್ಟು ಮಾಱಿಸಿಕೊಂಡುದು ಲಿಂಗವಾದ ಪರಿ ಹೇಗೆ ?
ಆಸೆ ಆಮಿಷ ಅಹಂಕಾರಕ್ಕೊಳಗಾಗಿ ಭವ ಭವದಲ್ಲಿ ಜನಿಸಿ ಅಳಿವಾತ, ಜಂಗಮವಾದ ಪರಿ ಹೇಗೆ ?
ಸಕಲ ಜೀವ ಸಕಲಜೀವವೆರಸಿ ಕರಗಿದಪ್ಪಿಯಾ ಜಲತೀರ್ಥವಾದ ಪರಿ ಹೇಗೆ
ಸಕಲಪ್ರಾಣಿಗಳ ಹಾರ ಹದಿನೆಂಟು ಕ್ಷುಧಾಗ್ನಿಯಲ್ಲಿ ಜನಿಸಿ,
ಪಚನವಾದುದು ಪ್ರಸಾದವಾದ ಪರಿ ಹೇಗೆ ?
ಅದೆಂತೆಂದಡೆ: ನಿಗಮ ಶಾಸ್ತ್ರಕ್ಕಗಣಿತವಾದ, ನಾದ ಬಿಂದುವಿಗೆ ಸಿಲುಕದ,
ನಿತ್ಯ ತೃಪ್ತ ನಿರವಯ ಪರಂಜ್ಯೋತಿಲಿಂಗದ ಕಾಯಕಾಂತಿ
ಬೆಳಗಿನೈಶ್ವರ್ಯವಲಾ ಯೆಂದಱಿದು ಧರಿಸುವುದು ತ್ರೀವಿಭೂತಿಯ.
ಆ ಲಿಂಗದ ಶೃಂಗಾರಹರಣ ಭರನವಲಾ ಎಂದಱುದು  ಅಳವಡಿಸುವುದು ರುದ್ರಕ್ಷಿಯ.
ಆ ಲಿಂಗದ ಚಿತ್ಪ್ರಣವಸ್ವರೂಪವೆ ಮಂತ್ರವಲಾ ಎಂದಱಿದು ಜಪಿಸುವುದು ಕ್ಷಡಕ್ಷರಿಯ.
ಆ ಲಿಂಗದ ವೈಭವಕ್ಕಂಗವಾದುದೀ ಗುರುವಲಾ ಎಂದು ಅಱಿದು
ಮಾಡುವುದು ತನು ಮನ ಧನ ವಂಚನೆಯಳಿದು
ಗುರುಭಕ್ತಿ ಸನ್ನಹಿತನಾಗಿ,
ಆ ಲಿಂಗದ ಚೈತನ್ಯಾತ್ಮಕಗ್ರಹ ಈ ಲಿಂಗವಲಾ ಎಂದಱಿದು
ಮಾಡುವುದು ಮನ ಧನ ತನು ವಂಚನೆಯಳಿದು
ಲಿಂಗ ಭಕ್ತಸನ್ನಹಿತನಾಗಿ.
ಆ ಲಿಂಗದ ಗಂಭೀರ ಗಮನ ಈ ಜಂಗಮವಲಾ ಎಂದಱಿದು
ಮಾಡುವುದು ಧನ ತನು ಮನ ವಂಚನೆಯಳಿದು
ಜಂಗಮ ಭಕ್ತಿ ಸನ್ನಹಿತನಾಗಿ.
ಆ ಲಿಂಗದ ಉತ್ತುಂಗ ಕಿರಣ ಸಾಗರ ಚರಣಾಂಬುವಲಾ
ಎಂದಱಿದು ಕೊಂಬುವುದು ತೀರ್ಥವನು.
ಆ ಲಿಂಗದ ನಿತ್ಯಪದ ಸಂಯೋಗ ಶೇಷವಲಾ ಎಂದಱಿದು
ಕೊಂಬುವುದು ಪ್ರಸಾದವಲಾಯೆಂದು ಕೊಂಬುವುದು
ಪ್ರಸಾದವನು.
ಇಂತಿವೆಲ್ಲವನಱಿದು ಅನಂತ ಸಂತೋಷಕಾಸ್ಪದವಾಗಿ
ಚರಿಸುವಾತನೆ ಸದ್ಭಕ್ತ. ಆತನ ಕಾಯ, ಕರಣ,
ಪ್ರಾಣ, ಭಾವಾದಿಗಳು ಸೋಂಕಿತೆಲ್ಲವು
ಲಿಂಗದ ಸೋಂಕು, ಲಿಂಗದಾಸೋಹ ಲಿಂಗದ ಕ್ರಿಯ
ಇಂತೀ ತ್ರಿವಿಧ ಸಂದಳಿದುಳಿದ ಸದ್ಭಕ್ತನ ಶ್ರೀಪಾದಕ್ಕೆ
ನಮೋನಮೋ ಎಂಬೆ ಕಾಣಾ, ಬಸವನ್ನಪ್ರಿಯ ನಿಷ್ಕಳಂಕ ಸೋಮೇಶ್ವರಾ.

೧೧೬

ಭೂಮಿಯಲ್ಲಿ ಹುಟ್ಟಿದ ಕಲ್ಲ ತಂದು
ಭೂತದೇಹದ ಕಯ್ಯಲ್ಲಿ ಕೊಟ್ಟು
ಕೊಟ್ಟ ಕೂಲಿಯ ತೆಗೆದುಕೊಂಡು
ಹೊಟ್ಟೆಯ ಹೊರೆವ ಭ್ರಷ್ಟರೆಗೆಲ್ಲಿಯದೋ ಪ್ರಸಾದ.
ನಾದೋಲಿಂಗ ಮಿತಿಜ್ಞೇಯೋ ಬಿಂದಃಪೀಠಮುದಾಹೃತಂ
ನಾದಬಿಂದುಯುತಂ ರೂಪಂ ಲಿಂಗಾಕಾರ ಇಹೋಚ್ಯತೇ ಎಂದುದಾಗಿ
ಇಷ್ಟಲಿಮ್ಗದಾದಿಯನಿವರೆತ್ತ ಬಲ್ಲರು  ಮಹಾಲಿಂಗ ಗುರು ಶಿವಸಿದ್ದೇಶ್ವರ ಪ್ರಭುವೆ.

೧೧೭

ಕಯ್ಯಲ್ಲಿ ಕುಱುಹು ಬಾಯಲ್ಲಿ ಅಱುಹ,
ನುಡಿವುತಿಪ್ಪ ಅಯ್ಯಗಳೆಲ್ಲ,
ಇಱುಹಿನ ಮೂತ್ರದಲ್ಲಿ ಪ್ರಳಯವಾದರು ನೋಡಾ,
ಬಳಿದವರಱುಹು ಬಱುದೊಱೆ ಹೋಯಿತ್ತು.
ಇವರ ಪ್ರಾಣಲಿಂಗ ಸಂಬಂಧಿಗಳೆಂತೆಂಬೆನಯ್ಯಾ
ಮಹಾಲಿಂಗ ಗುರು ಶಿವಸಿದ್ಧೇಶ್ವರ ಪ್ರಭುವೆ .

೧೧೮

|| ತ್ರಿವಿಧಿ ||

ವಸುಧೆಗೆ ಹುಟ್ಟಿದುದ ವಶಕೆ ತಂದಿದಿರಿಟ್ಟು
ಪಶುಪತಿಯ ಭಕ್ತಿಯಿಂದಾರಾಧಿಸಿ
ಪಸಿದು ಬಿದ್ದಡೆಯದಱ ದೆಸೆಯೊಳಳಿದೇನೆಂಬ
ಪಶುಗಳನೇನೆಂಬೆ ಯೋಗಿನಾಥಾ.

೧೧೯

ಹರಿಯದಿರು ಹಂಕರಿಸಿ ಉರುಲಿಂಗವಾದವನ ಅಱಿದಡೆ ಎನ್ನ ಸಂಹರಿಸಿದವನ
ನೆರದು ಕಾರಕರೆಲ್ಲರು ಕುಱುಹು ಮಾಡಿದರೆಂಬ
ಕುಱಿಗಳಾನೇನೆಂಬೆ ಯೋಗಿನಾಥಾ.

೧೨೦

ಸಂಗಸುಖದಿಂ ಕೆಲರು ಭಂಗಬಟ್ಟರು ಕೇಳು
ಲಿಂಗ ನಿನ್ನಯ ನೆಲೆಯನಱಿಯರೀಗ
ಅನಂಗನಾ ಬಾಣದಲಿ ಭಂಗಿತರಾದವರು
ಲಿಂಗ ನಿನ ಬಲ್ಲರೆ ಯೋಗಿನಾಥಾ.

೧೨೧

ಒಪ್ಪಕ್ಕೆ ಅನುಮತಕ್ಕೆ ಇಪ್ಪತ ತಾನೈಸೆ
ತಪ್ಪನೆಪಿಗೆ ಕರ್ತನಲ್ಲವಯ್ಯಾ.
ಪುಷ್ಪಬಾಣನ ಸುಟ್ಟು ಮುಪ್ಪುರವನುರುಪಿದ
ಅಪ್ಪ ತಾನೀತನೆ ಯೋಗಿನಾಥಾ.