|| ವೃತ್ತ ||           

ಶರನಿಧಿ ರತ್ನಮಂ ಧರಿಸಿದಂತೆ ಮಹಾನಗಮೌಧೌಘಮಂ
ಧರಿಸಿಹ ಹಾಂಗೆ ಲಿಂಗಮುಮನಾದಿಯಂಶರಣಂ ಸ್ವಭಾವದಿಂ
ಧರಿಸಿಹನೈಸೆ ತನ್ನ ಮಹಿಮಾಗುಣ ವೈಭವಮಂ ಪ್ರಕಾಶಿಸಲ್
ಶರಣನ ಲಿಂಗದಂತರಮನಿನ್ನು ವಿಚಾರಿಪುದೇಂ ಶಿವಾಧವಾ      

|| ವಚನ ||         

ಹತ್ತು ಸಾವಿರ ಗೀತವ ಹಾಡಿ ಅರ್ಥವಿಟ್ಟಲ್ಲಿ ಫಲವೇನು
ಮುಟ್ಟುವ ತೆಱನನಱೆಯದನ್ನಕ್ಕ?
ಕಟ್ಟದದೇನು, ಬಿಟ್ಟದೇನು, ಮನಲಿಂಗವ ಮುಟ್ಟದನ್ನಕ್ಕ?
ಮಾತಿನಲ್ಲಿ ಒಲಿಸಿ, ಮಹತ್ತಪ್ಪ ಲಿಂಗವ
ಕಂಡೆನೆಂಬ ಮೆಚ್ಚು ನಮ್ಮ ಕೂಡಲಸಂಗಮದೇವ.

ಕೃತ್ಯಕ್ಕೆ ಬಾರದ ಲಿಂಗವ    ಕೃತ್ಯಕ್ಕೆ ತಂದವರಾರೋ?
ಆ ವಾಜ್ಞ್ಮನಕ್ಕಗೋಚರಲಿಂಗ

[ವ] ಬೊಟ್ಟದಲೆಡೆದೆಱಹಿಲ್ಲದ ಲಿಂಗ [ವ] ಪರಿಪೂರ್ಣ ಲಿಂಗ, [ವ]  ಪರಾಪರಲಿಂಗ[ವ] ಈ ಗುರುಕೊಟ್ಟ, ಶಿಷ್ಯಕೊಂಡನೆಂಬ
ರಚ್ಚೆಯ ನೋಡಾ ಕೂಡಲಚನ್ನಸಂಗಮದೇವಾ.
ಕೈಯಲ್ಲಿ ಕಟ್ಟುವರು, ಕೊರಳಲ್ಲಿ ಕಟ್ಟುವರು,
ಮೈಯಲ್ಲಿ ಕಟ್ಟುವರು, ಮಂಡೆಯಲ್ಲಿ ಕಟ್ಟುವರು.
ಮನದಲ್ಲಿ ಅಂಗವ ಕಟ್ಟಲಾಗಿ !
ಆದ್ಯರು ಹೋದರೆಂದು ವಾಯುಕ್ಕೆ ಓವರು.
ಓವುದು ವಿಚಾರವೆ ಗುಹೇಶ್ವರಾ?

ಎನಗಂಗವೆಂಬುದೊಂದು ಹೆಣ್ಣು,
ಬಾಯೆಂಬುದೊಂದು ಭಗ,  ಕೈಯೆಂಬ ಪುರುಷನಿಕ್ಕಲಾಗಿ,
ಸಂಸಾರವೆಂಬ ಬಿಂದುವು ನಿಂದಿತ್ತು. ಆಸೆಯೆಂಬ ಮಾಸಿನ ಕುಪ್ಪಸದಲ್ಲಿ
ಬೆಳೆವುತ್ತಿದೆ ನವಮಾಸ ತುಂಬುವನ್ನಕ್ಕ
ಕೂಸು ಬಲಿವುದಕ್ಕೆ ಮೊದಲೇ, ಮಾಸು ಹಱೆದು
ಕೂಸ ಕೊಂದು, ಪಾಶವ ಕೆಡಿಸಿ,
ನಿಜತತ್ವ ಮೂರ್ತಿ ಗುರುವಾಗಿ, ಅದರ ಕಳೆ ಲಿಂಗವ
ಕೊಟ್ಟ ಲಿಂಗವೆನ್ನ ಚಿತ್ತದಲ್ಲಿ ಒಲುವುದಲ್ಲದೆ,
ಕೊಟ್ಟನ ಕೋಮಲೆ ಕೊಟ್ಟುದ ಎತ್ತರಲೆಂದಱೆಯೆ,
ಆತುರವೈರಿಮಾರೇಶ್ವರಾ.

ಅಜಾತನನೊಲಿಸಿದಡೇತರ ಮಂತ್ರ?
ಅದೇತರಾಗಮ ಹೇಳಿರೋ?
ಆಚಾರ್ಯ ಕೊಟ್ಟ ಶಲಾಖೆಯೇತಱಲ್ಲಿ ನಚ್ಚುವಿರಿ!
ಅದಾವ ಮುಖದಲ್ಲಿ ಲಿಂಗ ಬಂದಿಪ್ಪದೋ?
ರೂಪಿಲ್ಲದಾತ ನಿಮ್ಮ ಮಾತಿಗೆ ಬಂದಡೆ
ಅದೇತಱ ಮಾತೆಂದನಂಬಿಗ ಚೌಡಯ್ಯ !

ಶಿವಭಕ್ತಿಯಲ್ಲಿ ತೃಪ್ತರಾದವರು ನೀವು ಕೇಳಿರೋ!
ನಿಮ್ಮ ಗುರು ಶಕ್ತಿಯ ಮೇಲೆ ಸ್ವಾಯತವ ಮಾಡಿದನೊ,
ಶಿವನ ಮೇಲೆ ಸ್ವಾಯತವ ಮಾಡಿದನೋ?
ಗುರುವಿಲ್ಲ ಇಲ್ಲಿ, ಎಲ್ಲಾ ಶಿವ ಭಕ್ತಿಯೆಂಬ ಶಬ್ದದೊಳಗಾಯಿತಲ್ಲಾ.
ಆಚಾರ್ಯನು ಕುಟಿಲವ ಕೊಟ್ಟು ಹೋದನಲ್ಲಾ!
ಲೋಕದ ಕೈಯಲ್ಲಿ ರೂಪಿಗಳು ಮಾಡಿದ ಶಭ್ದದೊಳಗಾಯಿತಲ್ಲಾ.
ಲೋಕವೆಲ್ಲ ಪಾಷಾಣದಿಂದೊಗೆದ ಹೇಸಿಕೆಯೊಳು ಸತ್ತಿತ್ತಲ್ಲಾ ! ಕೇಳಲಾಗದೀ ಶಬ್ದವ.
ಶಿವನ ಕರೆದು ಸ್ವಾಯತವ ಮಾಡಿದನು.
ಶಕ್ತಿಯ ಕರೆದೆನ್ನ ಕಾಯಕ ಮಾಡಿಸಿದನು.
ಇವರಿಬ್ಬರ ಕೈಯಲ್ಲಿ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲೆನಿಸಿದನು.

ಊಡಿದಡುಣ್ಣದು, ಒಡನೆ ಮಾತಾಡದು,
ನೋಡದು, ನುಡಿಯದು, ಬೇಡದು, ಕಾಡದು.
ಕಾಢಬೆಱಣಿಯ ಕೈಯಲ್ಲಿ ಕೊಟ್ಟು
ಹೇಳದೆ ಹೋದೆಯೋ ಮಾರೇಶ್ವರಾ.

ಪರುಷ ಲೋಹವ ಸೋಂಕಿದಲ್ಲಿ,
ಆ ಗುಣವಳಿದು ಹೇಮವಾಯಿತ್ತಲ್ಲದೆ ಪುನರಪಿ ಶುದ್ಧಾತ್ಮವಾದುದಿಲ್ಲ.
ಗುರುಲಿಂಗವೆಂದು ಕೊಟ್ಟಡೆ,
ಅಂಗದಲ್ಲಿ ಲಿಂಗ ಸಂಬಂಧವಾಯಿತ್ತಲ್ಲದೆ,
ಸರ್ವಾಂಗವಾತ್ಮನಲ್ಲಿ ಲೀಯವಾದುದಿಲ್ಲ.
ಇಂತಿದು ಕಾರಣದಲ್ಲಿ
ಕೆಂಡದ ಮೇಲೆ ಕಟ್ಟಗೆಯ ಹಾಕಿದಲ್ಲಿ ಹೊತ್ತುವುದಲ್ಲದೆ,
ನಂದಿದ ಪ್ರಕಾಶಕ್ಕೆ ಅರಳೆಯ ತಂದಿರಿಸಿದಡೆ ಹೊತ್ತಿದುದುಂಟೆ?
ಸಂಸಾರ ಪಾಶದಲ್ಲಿ ಬಿದ್ದ ಗುರು,
ಶಿಷ್ಯನ ಈಷಣತ್ರವ ಬಿಡಿಸಬಲ್ಲನೇ?
ಇಂತೀ ಗುರುಸ್ಥಲನಿರ್ವಹಸಂಪಾದನೆ ಸದ್ಯೋಜಾತಲಿಂಗಕ್ಕೆ.

ಧ್ಯಾನವ ಮಾಡಿ ಕಾಬಲ್ಲಿ     ಚಿತ್ತ ಪ್ರಕೃತಿಯ ಗೊತ್ತು.
ಕುಱುಹಿಡಿದು ಕಂಡೆಹೆನೆಂದಡೆ,
ಅದು ಶಿಲೆ, ಉಳಿಯ ಹಂಗು.
ಕೊಟ್ಟವನ ಹಿಡಿದೆಹೆನೆಂದಡೆ,
ಗುತ್ತಿಗೆಯ ಕೇಣಿಕಾಱ.
ಮಾಡಿ, ನೀಡಿ, ಕಂಡೆಹೆನೆಂದಡೆ,
ಎನ್ನ ಮನೆಗೆ ಬಂದವರೆಲ್ಲರು
ಉಂಡುಟ್ಟು ಎನ್ನ ಹಂಗಿಗರು.
ಆಗರಗಳ್ಳನ ಹಾದರಿಗ ಕಂಡಂತೆ
ಇನ್ನಾರಿಗೆ ಹೇಳುವರು?
ಆ ಗಾದೆ ಎನಗಾಯಿತ್ತು,
ಅಲೇಖನಾಥ ಶೂನ್ಯಕಲ್ಲಿನ ಮಱೆಯಾದವನೆ.

೧೦

ಬೀಜ ಹುಟ್ಟುವಲ್ಲಿ ಒಂದೆ ಗುಣ,
ನಿಂದಲ್ಲಿ ಶಾಖೆವೊಡೆಯಿತ್ತು ನಾನಾ ಪ್ರಕಾರಂಗಳಿಂದ
ಭೂಮಿಯಲ್ಲಿ ಪ್ರವೇಷ್ಟಿಸಿಕೊಂಡಿಪ್ಪಂತೆ,
ಆ ಮೂಲ ಮೇಲಂಕುರಿಸಿದ ಮತ್ತೆ,
ಐದು ಗುಣದಲ್ಲಿ  ಶಾಖೆವಡೆಯಿತ್ತು,
ಮೂರು ಗೂಣದಲ್ಲಿ ಎಲೆಯಂಕುರವಾಯಿತ್ತು.
ಎಂಟು ಗುಣದಲ್ಲಿ ಕುಸುಮ ಬಲಿದು ಉದುರಿ ಅರಳಿ ನಿಂದಿತ್ತು.
ನವಗುಣದಲ್ಲಿ ಆ ರಸ ಬಲಿಯಿತ್ತು,
ಷೋಡಶದಲ್ಲಿ ತೊಟ್ಟು ಬಿಟ್ಟಿತ್ತು,
ಪಂಚವಿಂಶತಿಯಲ್ಲಿ ಸವಿದು ರುಚಿ ನಿಂದಿತ್ತು,[1][ಏಕೋತ್ತರಶತ][2]ದಲ್ಲಿ ಮರಣವಾಯಿತ್ತು,
ವೃಕ್ಷದ ಬೇರು ಕಡಿಯಿತ್ತು, ಮರಬಿಟ್ಟಿತ್ತು,
ಕೂಂಬಿನ ಹಂಗ ಬಿಟ್ಟಿತ್ತು ಕೊಂಬಿನೊಳಗಣ ಕೋಡಗ,
ಬಂಧುಗಳನೊಡಗೂಡಿ ಸಂದೇಹವಿಲ್ಲವಾಗಿ,
ಶ್ರುತದೃಷ್ಟಾನುಮಾನದಲ್ಲಿ ತಿಳಿಯಿರಣ್ಣಾ.
ಬ್ರಹ್ಮನ ಉತ್ಪತ್ತಿ, ವಿಷ್ಣುವಿನ ಸ್ಥಿತಿ, ರುದ್ರನ ಲಯ,
ಇಂತೀ ಮೂವರ ಹಂಗಿನಲ್ಲಿ ಬಂದ ದೇಹಕ್ಕೆ ಕಟ್ಟುವ
ಇಷ್ಟರ ಕಾರುಕನಲ್ಲಿ, ಒಮ್ಮಗೆ ಹರದನಲ್ಲಿ,
ತ್ರಿವಿಧಕ್ಕೆ ಮುಮ್ಮಾರಿಯಲ್ಲಿ,
ಆದಿಯ ಹೆಣ್ಣಿನ ತೆಱನಂತೆ, ಆಹಾರವಕಂಡು
ಆಹಾ ಅಲ್ಲವೆಂದೆ ನಿಷ್ಕಳಂಕ ಮಲ್ಲಿಕಾರ್ಜುನಾ.

೧೧

ಆಕಾರವಿಲ್ಲದ ನಿರಾಕಾರಲಿಂಗವ ಕೈಯಲ್ಲಿ ಹಿಡಿದು
ಕೊರಳಲ್ಲಿ ಕಟ್ಟಿದೆವಂಬರು ಅಜ್ಞಾನ ಜೀವಿಗಳು.
ಹರಿಬ್ರಹ್ಮರಱೆಯದ ಲಿಂಗವು ವೇದ ಶಾಸ್ತ್ರವಱೆಯದ ಲಿಂಗವು
ಭಕ್ತಗೆ ಫಲಪದವೈಸೆ ಲಿಂಗವಿಲ್ಲ, ಕರ್ಮಕ್ಕೆ ನಾಶವೈಸೆ ಲಿಂಗವಿಲ್ಲ
ಜ್ಞಾನಕ್ಕೆ ಪರಿಭ್ರಮಣವೈಸೆ ಲಿಂಗವಿಲ್ಲ, ವೈರಾಗ್ಯಕ್ಕೆ ಮುಕ್ತಿಯೈಸೆ ಲಿಂಗವಿಲ್ಲ
ಅದ್ವೈತದಿಂದ ತನ್ನ ತಾನಱಿದಡೆ ಚನ್ನಮಲ್ಲಿಕಾರ್ಜುನನೆಂಬ ಲಿಂಗತಾನೆ

೧೨

ಭಕ್ತ ತನ್ನಯ ಪಾಶವ ಗುರುಮುಖದಿಂಗ ಕಳೆವ
ಗುರು ತನ್ನಯ ಪಾಶವ ಏತರಿಂದ ಕಳೆಯಬೇಕೆಂಬುದನಱಿಯಬೇಕು.
ಹಾಂಗಱಿಯದೆ ಉಪಾಧಿಕನಾಗಿ ಮಾತಿನ ಮಾಲೆಯ ನುಡಿದು
ಜ್ಞಾತೃ ಜ್ಞಾನಜ್ಞೇಯವನಱಿಯದೆ ಭಾವಶುದ್ಧವಿಲ್ಲದ
ಆಚಾರ್ಯನ ಕೈಯಿಂದ ಕೊಂಡ ಪಾಷಾಣದ ಕುಱುಹು
ಅದೇತಕ್ಕೂ ಯೋಗ್ಯವಲ್ಲಯೆಂದೆ.
ಪ್ರತಿಷ್ಠೆ ಘನದಿಂದಲ್ಲದೆ ಲಿಂಗಚೇತನವಿಲ್ಲಯೆಂದೆ
ಸದಾಶಿವಮೂರ್ತಿಲಿಂಗವನಱಿವುದಕ್ಕೆ.

೧೩

ಗುರುವೆಂದೆಂಬೆನೆ ಹಲಬರ ಮಗ.
ಲಿಂಗವೆಂದೆಂಬೆನೆ ಕಲುಕುಟಿಗನ ಮಗ.
ಪ್ರಸಾದವೆಂದೆಂಬೆನೆ ಒಕ್ಕಲಿಗರ ಮಗ.
ಪಾದತೀರ್ಥವೆಂದೆಂಬೆನೆ ದೇವೇಂದ್ರನ ಮಗ.
ಈಸುವನು ಹಿಡಿಯಲಿಲ್ಲ ಬಿಡಲು ಇಲ್ಲ.
ತನ್ನೊಳಗೆ ನೋಡೆಂದನಂಬಿಗ ಚೌಡಯ್ಯ.

೧೪

ಅಱಿಯದಂತಿರಲೊಲ್ಲದೆ ಅಱುದು ಕುಱಿಹಾದಿತೆ
ಹಿರಿಯರೆಲ್ಲರು ನೆರೆದು ಕಟ್ಟದಡೆ ಉಪಚಾರಕ್ಕೋಸುಗ
ಸಾವಿಗೆ ಸಂಗಡವಾದೆಯಲ್ಲಾ ಗುಹೇಶ್ವರಾ.

೧೫

ಅಂಗವ ಬೆರಸದ ಲಿಂಗ ಪ್ರಾಣವ ಬೆರಸುವ ಪರಿಯದಿನ್ನೆಂತೊ
ಬೆನಕನ ತೋಱು ಬೆಲ್ಲವ ಮೆಲುವಂತೆ,
ಇಷ್ಟಲಿಂಗವ ತೋಱಿ ಹೊಟ್ಟೆಯ ಹೊರೆವರು
ಕಪಿಲಸಿದ್ಧ ಮಲ್ಲಿಕಾರ್ಜುನಯ್ಯ, ದೂರ ನೀಹೊತ್ತೆ
ಸೂರೆಯನಾರಿಕೆ ಕೊಂಡರು.

೧೬

ಮನೆಯೊಳಗಣ ಜ್ಯೋತಿ ಮನೆಯ ಮುಟ್ಟಿದಂತೆ
ಬಸುಱೂಗಳಗಣ ಕೂಸು, ಬಸುಱಮುಟ್ಟದಂತೆ
ಕಕ್ಷೆಕರಸ್ಥಲ ಅಂಗಸೊಂಕು ಮುಖಸಜ್ಜೆ ಕಂಠ ಉತ್ತಮಾಂಗ
ಇವೆಲ್ಲ ಆಯತಂಗಲ್ಲದೆ ಪ್ರಾಣಲಿಂಗಸ್ಥಲ ಬೇಱೆ.
ಅದು ಕಾರಣ,
ಕೂಡಲಚನ್ನಸಂಗ ನಿಮ್ಮ ಶರಣರ ಪರಿ ಬೇಱೆ.

೧೭

ಅಂಗಸೋಂಕೆಂಬುದು ಅಧಮವು,
ಉರಸೆಜ್ಜೆಯೆಂಬುದು ಎದೆಯಗುಂಡು,
ಕಕ್ಷೆಯೆಂಬುದು ಕವುಚಿನ ತವರುಮನೆ,
ಅಮಳೈಕ್ಯವೆಂಬುದು ಬಾಯಿಬಗದಳ,
ಮುಖಸೆಜ್ಜೆಯೆಂಬುದು ಪಾಂಡುರೋಗ,
ಕರಸ್ಥಲವೆಂಬುದು ಮರವಡದ ಕುಳಿ,
ಉತ್ತಮಾಂಗವೆಂಬುದು ಸಿಂಬಿಯ ಕಪ್ಪಡ,
ಎಲ್ಲರಿ [ಗೆ] ಸೋಂಕಾಯಿತ್ತು ಹಸಿಯಗೂಟದಲ್ಲಿ
ಬಿಡು ಬಾಲ ಭಾಷೆಯ ಭಂಡರ ನುಡಿಯ ಕೇಳಲಾಗದು; ಗುಹೇಶ್ವರಾ.

೧೮

ಟಪ್ಪಣವ ಬರೆದ ಚಿತ್ರಜ್ಞನ ಆ ಘಟಕ್ಕೆ ಅಸುವನಾಶ್ರೈಸಬಲ್ಲನೆ ?
ಶಿಲ್ಪಿನ ಶಿಲೆ ಲೋಹ ಮೊದಲಾಗಿ ಕುಱುಹುಗೂಟ್ಟುವ ದೇವ ತಾ ಕಳೆಯ ತುಂಬುವನೆ ?
ಶಿಲೆ ಲೋಹ ಲಕ್ಷಣವ ನೆಲೆ ಶುದ್ಧ ಮಾಡುವನಲ್ಲದೆ ತಾ ಕಟ್ಟುವ ಇಷ್ಟಕ್ಕೆ
ಕಟ್ಟಲಿಲ್ಲ.
ಮೇಲೆ ರೊಕ್ಕವ ತಾರೆಂಬವಳಂತೆ ಕತ್ತಹೋದ ಮಾನವ ಇಷ್ಟದಲ್ಲಿ
ನೇಮಿಸದೆ ಇನ್ನಾರ ಕೇಳುವೆನು.
ಅಲೇಖನಾಥ ಶೂನ್ಯ ಕಲ್ಲಿನ ಮರೆಯಾದೆ.

೧೯

ಉದಕದೊಳಗಿರ್ದ ಶತಪತ್ರದಂತೆ,
ಸಂಸಾರದೊಳಗಿರ್ದು ಇಲ್ಲದಂತಿರಬೇಕು.
ಪ್ರಾಣವೆ ಲಿಂಗವಾದ ಬಳಿಕ ಕೊರಳಲೇಕೋ ಶರಣಂಗೆ
ಗುಹೇಶ್ವರಾ ?

೨೦

ಇಷ್ಟಲಿಂಗ ನಿದ್ರೆಯಲ್ಲಿ ಸೃಷ್ಟಿಯ ಮೇಲೆ
ಬಿದ್ದು ಹೊರಳುವಾಗ ನಿಷ್ಠಾವಂಗರೆಂತಾದಿರೊ ?
ಅದು ನಿಮಗೆ ಇಷ್ಟಲಿಂಗವೊ, ಪ್ರಾಣಲಿಂಗವೊ ?
ಕಟ್ಟದವನ ಕೇಳಿಕೊಳ್ಳಿ.
ಹೀಂಗಲ್ಲದೆ ಬತ್ತಗುತ್ತಿತನಕ್ಕೆ ಹೋರವ
ದೃಷ್ಟಾಭಂಡವನೇನೆಂಬೆ ನಿಷ್ಕಳಂಕ ಮಲ್ಲಿಕಾರ್ಜುನಾ ?

೨೧

ಪ್ರಾಣಲಿಂಗ ಪ್ರಾಣಲಿಂಗವೆಂಬರು ಪ್ರಾಣಲಿಂಗದಾರಿಗುಂಟಯ್ಯಾ ?
ಮೂವ್ವರಿಗೆ ಹುಟ್ಟದ ಲಿಂಗವು ತನಗೆ ಪ್ರಾಣಲಿಂಗವಾದ ಪರಿಯಿನ್ನೆಂತೋ ?
ವಸುಧೆಗೆ ಹುಟ್ಟದ ಲಿಂಗವನು ವಶಕ್ಕೆ ತಂದು ತನ್ನ ದೆಶೆಯಲ್ಲಿ ನಿಲಿಸುವ ಪರಿಯಿನ್ನೆಂತೊ ?
ನಿರ್ನಾಮಂಗೆ ನಾಮವಕೊಟ್ಟು ನಾಮ ಪರವೆಂದು ನಡೆಸಿ ಸಾಮಾನ್ಯ
ಸಂಬಂಧವಿಲ್ಲದ ನಿಸ್ಸೀಮನ ಸೀಮಿಗೆ ತಾಹಪರಿಯೆನ್ನೆಂತೋ ?
ಭೂಮಿಗೆ ಹುಟ್ಟಿ ಶಿಲೆಯಾದ, ಕಲ್ಲು ಕುಟಿಗ ಮುಟ್ಟಿರೂಪಾದ,
ಗುರುಮುಟ್ಟಿ ತೇಜವಾದ, ಹಿಂದೆ ಮುಟ್ಟಿದವರಿಗಿಲ್ಲ ಇವರಿಗೆ ಪ್ರಾಣಲಿಂಗವಾದ ಪರಿಯಿನ್ನೆಂತೊ ?
ತನ್ನ ಪ್ರಾಣ ಮುಂದೆ ಹೋಗಿ ಲಿಂಗ ಹಿಂದುಳಿದಡೆ ಪ್ರಾಣಲಿಂಗವಾದ ಪರಿಯಿನ್ನೆಂತೊ ?
ಹಸಿವು, ತೃಷೆ, ವಿಷಯ, ನಿದ್ರೆ, ಜಾಗ್ರ, ಸ್ವಪ್ನ, ಇಂತಿವನೆಲ್ಲನತಿಗಳೆದು
ನಿರ್ಮಲದೇಹಿಯಾಗಿ ಹೃದಯಕಮಲದೋಳ್ ವಿಮಲದೇಹಿಯಾಗಿ
ಹೃದಯಕಮಲದೊಳು ವಿಮಲಮಪ್ಪ ಶ್ರೀಗುರುಮೂರ್ತಿ
ಪರಂಜ್ಯೋತಿಯಂದೆನಿಸುವ ಲಿಂಗವ ಮಲಿನವಿಡಿಯದ
ಕಾಯದಸೆಜ್ಜೆಯೋಳ್ ದೃಢದೋಳ್ ಬಿಜಯಂಗೈಸಿ,
ಸಪ್ತಧಾತು ಅಷ್ಟಮದವಿಲ್ಲದೆ ಜ್ಞಾನದೋಗರವನರಪಿಸಿ,
ಸುಜ್ಞಾನ ಬುದ್ಧಿಯೋಳ್ ಪ್ರಸಾದಮಂ ಸ್ವೀಕಾರಮಂ ಮಾಡಿ, ನಿತ್ಯಸುಖಿಯೊಡಗೂಡುತಿರ್ಪ.
ಇದು ಕಾರಣ, ಕೂಡಲಚನ್ನಸಂಗಯ್ಯನಲ್ಲಿ ಬಸವಣ್ಣನೊಬ್ಬನೆ ಪ್ರಾಣಲಿಂಗಿ
ಪ್ರಾಕ್ ಶುದ್ಧಿಗಳೆಲ್ಲರು ಲಿಂಗಲಾಂಛನಧಾರಿಗಳೆನಿಸಿಕೊಂಬರು.

೨೨

ಶಿವಶಿವ ಎಲ್ಲರು ಉಂಟಾದುದ ಹೇಳಿ ಇಲ್ಲದ ಬಯಲಿಂಗೆ ಮನವನಿಕ್ಕಿದರು            ಎನಗಿನ್ನವುದು ಬಟ್ಟೆ,
ಬಸವಣ್ಣನ ಕರುಣೆಯಿಂದ ಕಟ್ಟಿದಲಿಂಗಕ್ಕೆ ಹುಟ್ಟುದೊಟ್ಟುವನಱಿಯೆ,
ಕೊಟ್ಟತ ಹೇಳಿದುದಿಲ್ಲ ಕಟ್ಟಿಕೋ ಎಂಬಾತ ನೀ ಬಟ್ಟೆಯೊಳಿರು ಎಂದುದಿಲ್ಲ,
ಕಡ್ಡಾಯಕ್ಕೆ ಕಟ್ಟಿದ ಈ ಒಡ್ಡಗಲ್ಲಿನ ಮುರಿವ ಎನಗೊಂದು
ಬುದ್ಧಿಯ ಹೇಳಾ, ಅಲೇಖನಾಥ ಶೂನ್ಯಕಲ್ಲಿನೊಳಗೇಕಾದೈ.

೨೩

ಕುಸುಮದಲ್ಲಿ ವಾಸನೆ ಇದ್ದಡೇನು, ಅದು ಎಸಗದನ್ನಕ್ಕ ?
ಕುಶಲದಲ್ಲಿ ರಸಿಕವಿದ್ದಡೇನು ಅದು ಎಸೆಯದನ್ನಕ್ಕ ?
ಕುಟಿಲದ ವಸ್ತು ಕೈಯಲ್ಲಿದ್ದಡೇನು ಅದು ಒಸೆದು ಪ್ರಾಣವ ಬೆರಸದನ್ನಕ್ಕ ?
ಇಂತೀ ಹುಸಿಯನುಸುಳ ಕಲಿತು ಬೆರೆಸದೆ ಲಿಂಗವೆಂದಡೇನು
ಕಟ್ಟೋಗರದ ಪಟ್ಟಿಯಂತೆ, ಬಿಟ್ಟ ಶಕಟದಂತೆ, ತೃಷ್ಟೆಯಾ ಗಡಗಿಯಂತೆ,
ಇದು ಹಸನಲ್ಲ ಲಿಂಗೈಕ್ಯರಿಗೆ, ನಿಷ್ಕಳಂಕ ಮಲ್ಲಿಕಾರ್ಜುನಾ.

೨೪

ಅಱುಹಿರಿಯ ದೈವವ ಅಗಲಿ ಕೆಲಯಿಕಿಲ್ಲ
ಹೊಲೆಯರ ಬೋದುಗ ತೊಗೆತುಪ್ಪ ಬೇಡುವಂತೆ ಬ್ರಹ್ಮವಿಷ್ಣುಗಳಿನ್ನು ಕಾಣರು.
ವೇದಂಗಳು ನಾಚದುಲಿವ ಪರಿಯ ನೋಡಾ,
ಗಂಗೆವಾಳುಕಸಮರುದ್ರರೆಲ್ಲರು ಲಿಂಗವಕಂಡರೈಸೆ
ಸ್ವಯಂಭುವ ಕಾಣರೆಂದನಂಬಿಗಚೌಡಯ್ಯ.


[1] ೧-೨ ಶತವಕಾದಶ (ಹ)

[2] ೧-೨ ಶತವಕಾದಶ (ಹ)