೨೭

ಇಷ್ಟಲಿಂಗಕ್ಕೆ ರೂಪನರ್ಪಿಸಿ ದ್ರವ್ಯ ಶುದ್ಧವಾಯಿತ್ತೆಂದು
ಪ್ರಾಣಲಿಂಗಕ್ಕೆ ಆರೋಗಣೆಯನಿಕ್ಕುವಾಗ
ನಿಚ್ಚ ನಿಚ್ಚ ಕಿಲ್ಬಿಷವೆಂದಱಿಯರು.
ಇಷ್ಟಲಿಂಗ ಪ್ರಾಣಲಿಂಗದ ಆದಿಯಂತುವನಾರೂ ಅಱಿಯರು.
ಇದು ಕಾರಣ,
ಗುಹೇಶ್ವರಾ, ನಿಮ್ಮ ಶರಣರು ಹಿಂದುಗಾಣ[ರು]
ಮುಂದುಗೆಟ್ಟರು !

೨೮

ಕಾಲು ಮುಟ್ಟಿದ ಪದಾರ್ಥ ಕಾಲಿಂಗರ್ಪಿತ.
ಕೈ ಮುಟ್ಟಿದ ಪದಾರ್ಥ ಕೈಗರ್ಪಿತ.
ತನುಮುಟ್ಟಿದ ಪದಾರ್ಥ ತನುವಿಂಗರ್ಪಿತ.
ಮನಮುಟ್ಟಿದ ಪದಾರ್ಥ ಮನಕ್ಕರ್ಪಿತ.
ತನುಮನ ಮುಟ್ಟದ ಪದಾರ್ಥ ಭೂಮಿಯ ಮೇಲಿಲ್ಲ
ಕೊಟ್ಟುದ ಕೊಡಬಾರದು. ಕೊಡದೆ ಕೊಳಬಾರದು.
ಇದು ಕಾರಣ, ಕೂಡಲಚನ್ನಸಂಗಯ್ಯ,
ಗುರುಕೊಟ್ಟ ಲಿಂಗ ಕುಱುಹಿನ ಲಿಂಗ.

೨೯

ದಶವಿಧ ಪಾದೋದಕ ಏಕಾದಶ ಪ್ರಸಾದವ    ಬಲ್ಲವರ ಬಲ್ಲೆ.
ಮತ್ತೂಂದ ಬಲ್ಲವರ ತೋಱೌ ಎನಗೆ,
ಎಲೆ ಲಿಂಗವೆ;
ಲಿಂಗವ ನೆನೆಯದೆ, ಲಿಂಗಾರ್ಪಿತವ ಮಾಡದೆ
ಅನರ್ಪಿತಕ್ಕೊಳ್ಳದ ಅಚ್ಚಪ್ರಸಾದಿಯ ತೋಱಿ ಬದುಕಿಸಾ
ಕೂಡಲಚನ್ನಸಂಗಮದೇವಾ.

೩೦      

ಒಮ್ಮೆಯಲ್ಲದೆಯಿಮ್ಮೆಯುಂಟೆ ಪೂಜೆ ?
ಒಮ್ಮೆಯೆಲ್ಲದಿಮ್ಮೆಯುಂಟೆ ಅರ್ಪಿತ ?
ಒಮ್ಮೆಯಲ್ಲದೆ ಯಿಮ್ಮೆಯುಂಟೆ ಪ್ರಸಾದ ?
ತಾನರ್ಪಿತವಾದ ಬಳಿಕ ಮರಳಿ ಅರ್ಪಿತವುಂಟೆ
ಕೂಡಲಚನ್ನಸಂಗಮದೇವಾ ?

೩೧

ಅಧರ ತಾಗಿದ ರುಚಿಯ, ಉದರ ತಾಗಿದ ಸುಖವ
ಲಿಂಗಾರ್ಪಿತವಮಾಡಿದಡೆ, ಕಿಲ್ಬಿಷನೋಡಿರೇ,
ಓಗರ ಪ್ರಸಾದವಲ್ಲ; ಪ್ರಸಾದವರ್ಪಿತವಲ್ಲ.
ಇದನಱಿದ ಶರಣಂಗೆ ಆಚಾರವಿಲ್ಲ.
ಆಚಾರವಿಲ್ಲದ ಶರಣಂಗೆ ಲಿಂಗವಿಲ್ಲ.
ಲಿಂಗವಿಲ್ಲದ ಶರಣನ ನಿಲುವು ಶಿವಸಂಪತ್ತಿನಲಾದ ಉದಯ; ವಿಪರೀತಸುಳುಹು;
ಪ್ರಕಟಸಂಸಾರದ ಬಳಕೆಯ ಹೊಡಕಟ್ಟಿ ಹಾಯ್ದು
ನಿಬ್ಬೆಱಗು ಎಸೆವುದು ಅಱಿವಿನ ಘಟದಲ್ಲಿ;
ಅರ್ಪಿಸಿದ ಪ್ರಸಾದವನು ಭೇದದಿಂದ ರುಚಿಸುವನಲ್ಲ, ಕೇಳಿರಯ್ಯಾ;
ದಿಟವ ಬಿಟ್ಟು ಸಟೆಯಲ್ಲಿ ನಡೆವ, ನೋಡಾ;
ಇಲ್ಲದ ಲಿಂಗವನುಂಟು ಮಾಡಿ ಪೂಜಿಸುವ
ಬಱಿಯ ಬಣ್ಣ ಕರೆಲ್ಲರು ನೀವು ಕೇಳಿರೇ;
ನೀವು ಪೂಜಕರಪ್ಪಿರಲ್ಲದೆ, ಗುಹೇಶ್ವರಲಿಂಗ
ವಿಲ್ಲೆಂಬ ಶಬುದ ಸತ್ತು ಹುಟ್ಟುವರಿಗೆಲ್ಲಿಯಮೋ !

೩೨

ಎನಗೆ ಸೋಂಕಿದ ಸಕಲ ರುಚಿಪದಾರ್ಥಂಗಳನು
ನಿನಗೆ ಕೊಡುವೆನೆಂದವಧಾನಿಸುವನ್ನಬರ,
ಎನಗೂ ಇಲ್ಲದೆ ಹೋಯಿತ್ತು; ನಿನಗೂ ಇಲ್ಲದೆ ಹೋಯಿತ್ತು;
ಈ ಭೇದಬುದ್ಧಿಯ ಬಿಡಿಸಿ
ಆನಱಿದುದೆ ನೀನಱಿದುದೆಂಬಂತೆ; ಎಂದಿಂಗೆನ್ನನಿರಿಸುವೆ ಸಕಳೇಶ್ವರಾ.

೩೩

ಅರ್ಧನಾರಿಯಾಗಿದ್ದ ಉಮಾದೇವಿ
ಬೇಱೆಮತ್ತೊಬ್ಬನೊಡನುಂಬುವಳೇ ?
ಗಂಡಂಗೆ ತೆಱಹಿಲ್ಲದ ವಧು ಮತ್ತೊಬ್ಬರೊಡನುಂಬ ಷರಿಯೆಂತೊ ?
ಮನ ಪುನರ್ಜಾತನಾಗಿ ಪ್ರಾಣಲಿಂಗಪ್ರಸಾದಿಯಾದಾತ
ಇದಿರೂಡನುಂಬ ಪರಿ ಎಂತೊ ?
ಒಂದಾಗಿ ಉಂಡಲ್ಲಿ
ಸಜ್ಜನ, ಬೆಂದಿತ್ತು  ಗುರುವಚನ, ನೊಂದಿತ್ತು
ಜಂಗಮನಾ ಚಿತ್ತು ಪ್ರಸಾದ ಬೀಸರವೋಯಿತ್ತು.
ಇದು ಕಾರಣ, ಒಂದೆನಲಮ್ಮೆ, ಬೇಱಿನಲಮ್ಮೆ !
ನಿಮ್ಮ ಶರಣರೊಕ್ಕುದ ಕೊಂಬೆ, ಕಾಣಾ,
ಮಹಾಲಿಂಗಕಲ್ಲೇಶ್ವರಾ.

೩೪

ಕ್ರಿಯಾಜ್ಞಾನಸಂಬಂಧವೆಂದು ನುಡಿವರು.
ಕ್ರಿಯಾಜ್ಞಾನಸಂಬಂಧವೆಂತಿರ್ಪುದೆಂದಱೆಯರು.
ಕ್ರೀಯಲ್ಲಿ ಅಂಗಲಿಂಗಸಂಬಂಧವನಱೆಯರು.
ಜ್ಞಾನದಲ್ಲಿ ಲಿಂಗಜಂಗಮ ಸಂಬಂಧವನಱೆಯರು.
ಕ್ರೀಯಲ್ಲಿ ಅರ್ಪಿತ ಪ್ರಸಾದಸಂಬಂಧವನಱಿದು
ಜ್ಞಾನದಲ್ಲಿ ತೃಪ್ತಿಪರಿಣಾಮವನಱಿದು ಕ್ರೀಯೊಳಗಿದ್ದು
ಜ್ಞಾನಸಂಪನ್ನನಾಗಿರಬಲ್ಲ ಶರಣಂಗೆ ಕ್ರೀಯೆಯೇ ತನು;
ಜ್ಞಾನವೇ ಪ್ರಾಣ.  ತನು ಲಿಂಗವಾಗಿ, ಪ್ರಾಣ ಜಂಗಮವಾಗಿ
ತನುವ ಸಯ ಮಾಡಿ, ಪ್ರಾಣವ ಲಿಂಗಜಂಗಮಕ್ಕರ್ಪಿಸಿ
ನಿರಂತರ ಸಾವಧಾನಿಯಾಗಿರಬಲ್ಲ ಪ್ರಸಾದಿಗಳ
ಎನಗೊಮ್ಮೆ ತೋಱಿ ಸಲಹಾ ಕೂಡಲಸಂಗಮದೇವಾ.

೩೫

ಗುರುವೆಂದಲ್ಲಿಯೆ ತಪ್ಪಿತ್ತು, ಲಿಂಗವೆಂದಲ್ಲಿಯೆ ತಪ್ಪಿತ್ತು.
ಜಂಗಮವೆಂದಲ್ಲಿಯೇ ತಪ್ಪಿತ್ತು, ಪ್ರಸಾದವೆಂದಲ್ಲಿಯೆ ತಪ್ಪಿತ್ತು.
ಈ ಚತುರ್ವಿಧಸಂಚ ನಿಕ್ಷೇಪವ ಬಲ್ಲಡೆ,
ಈ ಲೋಕದಲ್ಲಿದ್ದಡೇನು ? ಆ ಲೋಕದಲ್ಲಿದ್ದಡೇನು ?
ಮತ್ತಾವ ಲೋಕದಿಂದ ಮರ್ತ್ಯಕ್ಕೆ ಬಂದಡೇನು ?
ಹದಿನಾಲ್ಕು ಲೋಕದೋಳಗಿರ್ದ ನಿಸ್ಸಾರಾಯಮಂ ಬಿಟ್ಟು
ಲಿಂಗಸಾರಾಯ ಮೌನಿಯಾ[ಗು], ಕೂಡಲಚನ್ನಸಂಗಾ,
ನಿಮ್ಮಲ್ಲಿ ಸರ್ವಾಂಗಲಿಂಗವಾದ ಕಾರಣ.

೩೬

ಒಕ್ಕುದು ಪ್ರಸಾದವೆಂದಿಕ್ಕುವನನಾಚಾರಿ.
ಕೊಂಬಾತ ನೆಟ್ಟನೇ ವ್ರತಗೇಡಿ.
ಪ್ರಸಾದವೆಂಬುದು ಹೆಸರಿಲ್ಲದ ಘನವು.
ಪ್ರಸಾದಿಯೆಂಬಾತನು ಶೂನ್ಯ ಶರಣನು.
ಇರವೇ ಲಿಂಗೈಕ್ಯ, ಪರವೇ ಪ್ರಸಾದ.
ಕೂಡಲಚನ್ನಸಂಗಯ್ಯನಲ್ಲಿ
ಗುರುವೆಂಬ ಓಗರಕ್ಕೆ ಶಿಷ್ಯನೆಂಬ ಪ್ರಸಾದಿ.

೩೭

ಹುತ್ತದ ಮೇಲಣ ರಜ್ಜು ಮುಟ್ಟದಡೆ,
ಸಾವರು ಶಂಕಿತರಾದವರು.
ಸರ್ಪದಷ್ಟವಾದಡೆಯೂ ಸಾಯರು ನಿಶ್ಯಂಕಿತರಾದವರು.
ಕೂಡಲಸಂಗಮದೇವಯ್ಯ,
ಶಂಕಿತಂಗೆ ಪ್ರಸಾದ ಸಿಂಗಿಕಾಳಕೂಟವಿಷವು.

೩೮

ನಂಬಿದಡೆ ಪ್ರಸಾದ, ನಂಬದಿದ್ದಡೆ ವಿಷವು.
ತುಡುಕಬಾರದು ನೋಡಾ ಲಿಂಗಪ್ರಸಾದವ,
ಸಂಗನ ಪ್ರಸಾದವ.
ಕೂಡಲಸಂಗನಪ್ರಸಾದವು ಸಿಂಗಿಕಾಳಕೂಟವಿಷವು.

೩೯

ಇಷ್ಟಲಿಂಗಕ್ಕೆ ದೃಷ್ಟಪದಾರ್ಥಂಗಳನರ್ಪಿಸುವಲ್ಲಿ ಕಟ್ಟಳೆಯುಂಟು,
ತನ್ನ ಘಟದ ಲಕ್ಷಣವುಂಟು. ಇಂತೀ ಉಭಯವ ಪ್ರಮಾಣಿಸಿಕೊಂಡು
ಅರ್ಪಣದಲ್ಲಿ ಅರ್ಪಿಸುವಲ್ಲಿ,
ತೃಪ್ತಿಯ ಅಭಿಲಾಷೆಯಿಂದ, ಸತ್ಯಸದೈವರ
ಸಹಪಂಕ್ತಿಯಲ್ಲಿ    ಕ್ಷುತ್ತಿನಾಪೇಕ್ಷವಾಗಿ, ಮತ್ತೆ ಪುನರಪಿಯಾಗಿ
ಇಕ್ಕು, ತಾ, ಎಂದಡೆ, ಅದು ತನ್ನ ಕ್ಷುತ್ತಿನ ಭೇದವು.
ಭರಿತಾರ್ಪಣದ ಯುಕ್ತಿಯ ಭಿತ್ತಿಯೋ,
ಭರಿತಾರ್ಪಣವೆಂಗಲ್ಲಿ ಲಿಂಗಕ್ಕೆ ಕೊಟ್ಟಿಲ್ಲದೆ
ಮುಟ್ಟೆನೆಂಬ ಕಟ್ಟೋ,
ಅಲ್ಲಾ, ಸಾಧಕಾಂಗಿಗಳ ಸಂಗದ ಗುಣದಿಂಗ
ಬಂದ ಮುಟ್ಟೋ ?
ಇಂತಿದ ತಿಳಿದು,
ಮನವಚನಕಾಯಕರಣೇಂದ್ರಿಯಂಗಳ ಮುಂತಾದ ಭೇದಂಗಳಲ್ಲಿ
ಒಮ್ಮಿಗೊಮ್ಮೆ ತುತ್ತಿಡುವಲ್ಲಿ,
ಸ(ವೇ)ಯದ ರಸ-ರಸಾನ್ನಂಗಳ ಚಪ್ಪಿಱಿದಲ್ಲಿ
ಅಲ್ಲಿಗಲ್ಲಿಯೆ ಉಭಯವಳಿದು ಭರಿತಾರ್ಪಣದ ತೆಱನ ಕಂಡು,
ಈ ಗುಣ ಜಿಹೈಂದ್ರಿಯದ ಭರಿತಾರ್ಪಣ;
ಇಂತೀ ಭರಿತಾರ್ಪಣವನಂಗೀಕರಿಸಿದ ಸರ್ವ ವ್ಯವಧಾನಿಯ
ಎಚ್ಚಱಿಕೆಯ ಮುಟ್ಟು ಮುಂದೆ ಗುಹೈಂದ್ರಿಯಕ್ಕೆ ಸಿಕ್ಕು,
ಇಂತೀ ವಿಷಯವ್ಯಸನಾದಿಗಳಲ್ಲಿ ಭರಿತಾರ್ಪಣದಿಂದ
ಕೂಡುವ ಪರಿಯಿನ್ನೆಂತೋ ?
ಇಂದ್ರಿಯ ಬಿಡುವನ್ನಕ್ಕರ ಪುನರಪಿಯಾಗಿ ಅಂಗೀಕರಿಸಿಯಲ್ಲದೆ
ಚನ್ನಯ ಗುಣ ಹೆಱೆಹಿಂಗದು; ಅಱಿಯಾ;
ಭರಿತಾರ್ಪಣದ ಪರಿಯ ಬಲ್ಲನಾದಡೆ,
ಸರ್ವ ಎಲ್ಲಾ ಗುಣದಲ್ಲಿಯೂ ಭರಿತಾರ್ಪಣಲಿಂಗಾಂಗ     ಪರಿಪೂರ್ಣನೆಂಬೆ.
ಇಂತೀ ಗುಣವನಱಿಯದೆ ಕಂಡವರ ಕಂಡು, ಕೈಕೊಂಡು
ಈ ವ್ರತವನಂಗೀಕರಿಸಿದನಾದಡೆ
ಗುರುವಿಂಗೆ ದೂರ, ಲಿಂಗವವಗಿಲ್ಲ, ಚರಪ್ರಸಾದ ಸಲ್ಲ.
ಇಂತಿವನಱಿಯದೆ ಗೆಲ್ಲ ಸೋಲಕ್ಕೆ ಹೋರಿಹೆನೆಂದಡೆ
ಚನ್ನಬಸವಣ್ಣ ಮೆಚ್ಚಿಸುವೆ, ಪ್ರಭುನಿಜಗುಣದೇವರ
ತಲೆಯಾಗಿಸುವೆ.
ಇದಕ್ಕೆ ಹಾಕಿದ ಮುಂಡಿಗೆ ವರ್ಮದ ತಲೆ.
ಸತ್ತು ಎನ್ನೂಡೆಯ ಚನ್ನ ಕೂಡಲರಾಮೇಶ್ವರ ಸಾಕ್ಷಿಯಾಗಿ.

೪೦

ಕೈಯೂಡ್ಡಿ ಪ್ರಸಾದವ ಕೊಂಡಡೆ ಕರ್ಮಧಾರಿ.
ಶೇಷಪ್ರಸಾದನಾಯ್ದು ಕೊಂಡಡೆ ವರ್ಮಹಿತ.
ಉಕ್ಕುಳ ಪ್ರಸಾದವ ಕೊಂಡಡೆ, ಆತ ಸತ್ಕ್ರಿಯೆಗೆ ಸಲ್ಲ,
ಇಂತಿವನಱಿತು, ಸಜ್ಜನ ಪ್ರಸಾದವ ನಿರ್ಧರದಿಂದ ಕೊಂಬ
ಮಹಾಪ್ರಸಾದಿಯ ಕಾರುಣ್ಯವೆನೆಗೆಂದಿಗೆ ಸಾಧ್ಯವಪ್ಪುದೋ ?
ಕುಂಭೇಶ್ವರಲಿಂಗದಲ್ಲಿ ಜಗನ್ನಾಥನಱಿದವಂಗೆಲ್ಲದೆ ಸಾಧ್ಯವಲ್ಲ.

೪೧

ವೇದಶಾಸ್ತ್ರ ಪುರಾಣಾಗಮಂಗಳಿಗೆ ಸಿಲುಕಿದ
ಅಭೇದ್ಯಲಿಂಗಕ್ಕೆ  ಸಕಲ ಸಂಸಾರವೇದಿಗಳ ಶೇಷವ ಸಮರ್ಪಿಸಬಹುದೇ ?
ಅಲ್ಲಾ ಎಂದಡೆ ಸಮಯ ವಿರೋಧ.
ಅಹುದೆಂದಡೆ, ಆದಿಯನಾದಿಯಿಂದತ್ತತ್ತ
ಭೇದಿಸಿ ಕಾಣದ ಅಭೇದ್ಯಲಿಂಗಕ್ಕೆ
ಸರ್ವ ಸಾಧನದಲ್ಲಿ ಸಾವವರ ಶೇಷವ,
ನಾದಬಿಂದುಕಳೆಗೆ ಅತೀತವಪ್ಪ ವಸ್ತುವಿಗೆ
ನಿವೇದಿಸಬಹುದೇ ?
ಲಿಂಗದಾದ್ಯಂತವನಱಿಯರು.
ಗುರುಲಿಂಗಜಂಗಮ ಭೇದಕ್ರೀಯ ಕಂಡು
ತನ್ನಿರವ ತಾ ಸೋದನೆಗೊಂಡು
ತ್ರಿವಿಧವನಱಿತವಂಗಲ್ಲದೆ
ಉಭಯ ಪ್ರಸಾದ ಲಿಂಗಕ್ಕರ್ಪಿಸಿ, ತ್ರಿವಿಧ ಪ್ರಸಾದವನೊಡಗೂಡಿ ಕೊಂಬುದು
ನಿರಂಗಿಯ ಮಹಾಪ್ರಸಾದಿಯಂಗ.
ಹೀಂಗಲ್ಲದೆ, ಕಂಡವರಲ್ಲಿ ಕೈಕೊಂಡು,
ಬಂಧಮೋಕ್ಷಕರ್ಮಂಗಳೊಂದೂ ಅಱಿಯದೆ ನಿಂದೆ
ಕೀರ್ತಿಯಾಡಂಬರಕ್ಕೆ ಮಾಡಿಕೊಂಡ ನೇಮ ಕಟ್ಟಡೆ,
ತ್ರಿವಿಧ ವೇದಿಗಳು ಬಾಧಿಸಿಹರೆಂದು  ಮಾಡುವ ಕಟ್ಟುಗುತ್ತಿಗೆಯ ವರ್ತಕರಿಗೆ
ತ್ರಿವಿಧ ಪ್ರಸಾದವ ನಿಜನಿಶ್ಚಯವುಂಟೇ ?
ಇಂತೀ ಭೇದ ವಿಚಾರಂಗಳ ತಿಳಿದು  ಆದಿಯ ಸೋಂಕಿನಿಂದ ಬಂದ
ಗುರುಲಿಂಗಜಮ್ಗಮದನುವಱಿತು,
ಲಿಂಗಮೂರ್ತಿ ತ್ರಿವಿಧರೂಪಾಗಿ ಬಂದುದ ತಿಳಿದು,
ತನ್ನ ಮೂರ್ತಿಗೆ ತಾ ಗುರುವಾಗಿ, ದೀಕ್ಷಿತನಾಗಿ ಬಂದುದ ಕಂಡು,
ತನ್ನ ಮೂರ್ತಿಗೆ ತಾನೇ ಜಂಗಮವಾಗಿ ಸುಳೀದು ನಿಂದುದ ಕಂಡು,
ತನ್ನ ಮೂರ್ತಿಗೆ ತಾ ನಿಜಲಿಂಗವಾಗಿ ಆ ಲಿಂಗವು ಉಭಯದ ಗುಣದಲ್ಲಿ
ಕುಱುಹುಗೊಂಡಿತ್ತು.
ಇಂತೀ ನಡೆನುಡಿ ಸಿದ್ಧಾಂತವಾದವಂಗಲ್ಲದೆ
ಗುರುಚರಪ್ರಸಾದ ಲಿಂಗಕ್ಕೆ ನೈವೇದ್ಯವಲ್ಲ.
ದಹನ ಚಂಡಿಕೇಶ್ವರ ಲಿಂಗವನಱಿದ ಪ್ರಸಾದಿಯ ನಿರಂಗಾ !

೪೨

ಕೈಯ ಮಱಿದು ಕಾಳಗವದೇನೋ ?
ಮೈಯ ಮಱಿದು ಮಾಡುವ ಮಾಟವದೇನೋ ?
ಬಾಯ ಮಱಿದು ಉಂಬುವ ಊಟವದೇನೋ ?
ಸನ್ಮಾನ ಸಾವಧಾನವಿಲ್ಲದ ಲಿಂಗಸಂಧಾನ
ಜನ್ಮದ ಮೃತ್ಯು ನೋಡಾ ?
ಎಚ್ಚಱಿಕೆಯಿಲ್ಲದ ಅರ್ಪಿತ ವಿಕಾರ ನೋಡಾ.
ಸಂಕಲ್ಪವಿಕಲ್ಪವಿಲ್ಲದೆ ಮನಲಿಂಗ ಸಾಹಿತ್ಯವಾದಡೆ
ಅರ್ಪಿತವದು ಪ್ರಸಾದ  ನೋಡಾ.
ಮಹಾಲಿಮ್ಗ ಗುರುಶಿವ ಸಿದ್ಧೇಶ್ವರಪ್ರಭುವೆ.

೪೩

ಕಾಯ ಲಿಂಗಾರ್ಪಿತವಾದ ಬಳಿಕ
ಕರ್ಮತ್ರಯಂಗಳು ಇರಲಾಗದು ನೋಡಾ.
ಜೀವ ಲಿಂಗರ್ಷಿತವಾದ ಬಳಿಕ
ಸಂಸಾರವ್ಯಪ್ತಿಯಂತಹ ಜೀವನಗುಣವಿರಲಾಗದು.
ಅದು ಅರ್ಪಿತವಲ್ಲ ನೋಡಾ.
ಕರಣಂಗಳು ಲಿಂಗಾರ್ಪಿತವಾದ ಬಳಿಕ
ಕರಣಂಗಳೆಲ್ಲವು ಲಿಂಗದ ಕಿರಣಂಗಳಾಗಿ,
ಆ ಲಿಂಗಕಿರಣಂಗಳೆ ಹರಣವಾಗಿರಬೇಕು, ನೋಡಾ.
ಕಾಯದ ಭೇದವ, ಕರಣದ ಗುಣವ ಕಳೆಯದೆ
ಲಿಂಗಾರ್ಪಿತ ಪ್ರಸಾದಿಗಳೆಂಬ ಪ್ರಪ್ರಂಚಿಗಳ ಮೆಚ್ಚನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರಪ್ರಭುವೇ .

೪೪

|| ತ್ರಿವಿಧಿ ||        

ಕಾಯದಾ ಕಳವಳಿಕೆ ಜೀವನೋಪಾಧಿಯಿಂ
ತಾವುಂಡು ನಿಮ್ಮುವನು ದೂಱಿತಿಹರು.
ದೇವರಾರೋಗಣೆಯ ಮಾಡಿ ಬಂದೆವು ಎಂಬ
ಗಾವಿಲರನೊಲ್ಲೆನೈ ಯೋಗಿನಾಥಾ.

೪೫

ಅಂಗಾರ್ಪಿತವಾದವಂಗೆ ಲಿಂಗಾರ್ಪಿತವೆಲ್ಲಿಯದೊ ?
ಶೃಂಗಾರನುಡಿಗಳನು ನುಡಿಯಲದನು
ಲಿಂಗಪ್ರಸಾದಿಗಳು ಅಂಗವಿಸಲೊಲ್ಲರೈ
ಭಂಗಹಿಂಗದು ಮುಂದೆ ಯೋಗಿನಾಥಾ.

೪೬

ಕಕ್ಕಯ್ಯನವರಲ್ಲಿ ಒಕ್ಕಪ್ರಸಾದವನು
ಸಾಕ್ಷಾತು ಬಸವೇಶ ಕಾಯ್ದು ತಂದು
ನಿಕ್ಷೇಪವಾಗಿ ಪಡೆದಕ್ಷಯ ಶೇಷವನು
ಭಿಕ್ಷೆಕ್ಕೆ ಕರುಣಿಸೈ ಯೋಗಿನಾಥಾ.