|| ವೃತ್ತ ||

ಕ್ಷಿತಿಜಲನಹ್ನಿವಾಯುನಭವೆಂಬವು ನಿನ್ನವು ನಿನ್ನ ಪೂಜೆಗೀ
ಕ್ಷಿತಿ ಮುಖ ಚಂಚಭೂತಕೃತಮಪ್ಪ ಪದಾರ್ಥಮನಿತ್ತ ತಪ್ಪುದೆಂ
ದತಿ ಮಮಕಾರದಿಂ ಫಲಮನೂಹಿಪರಾತ್ಮ ಸಮರ್ಪಣ ಕ್ರಿಯಾ
ಮತಿ ರತಿ-ಹೀನರಯ್ಯ ಪರಮಪ್ರಭುವೇ ಮಹದೈಪುರೀಶ್ವಾರಾ.

|| ವಚನ ||

ಇಷ್ಟಕರ್ಪಿಸಿ ಮೃಷ್ಟಾನ್ನವನುಂಡೆನೆಂದು
ಇಷ್ಟಾರ್ಥಸಿದ್ಧಿಯ ಹಡೆದೆಹೆನೆಂಬ
ಮರುಳುಗಳು ನೀವು ಕೇಳಿರೇ !
ಪ್ರಾಣಲಿಂಗಸ್ಥಲ ನಿಮಗೆಲ್ಲಿಯದು ?
ಪ್ರಸಾದಿಸ್ಥಲ ನಿಮಗೆಲ್ಲಿಯದು ?
ಓಗರವನುಂಡು ಆಗಾದೆವೆಂದಡೆ,
ಮೂಗ ಕೊಯ್ಯದೆ ಮಾಣ್ಬನೇ
ನಮ್ಮ ಕೂಡಲ ಸಂಗಮದೇವನು ?

ಸತ್ಯವಿಲ್ಲದ ಭಕ್ತಿಯ ಹತ್ತು ಸಾವಿರ  ವರುಷ ಮಾಡಿದಡೇನು ?
ನಿಷ್ಠೆಯಿಲ್ಲದ ಪೂಜೆಯ ಎಷ್ಟು ಕಾಲವ ಮಾಡಿದಡೇನು ?
ಭಾಬ ನೆಲೆಗೊಳ್ಳದೆ ನಿಜವಿಲ್ಲದ ಪ್ರಸಾದ ಎಷ್ಟು ಕಾಲ್ ಕೊಂಡಡೇನು ?
ಅಭ್ಯಾಸವಾಯಿತ್ತಲ್ಲದೆ, ಸಹಜವಿಲ್ಲ, ಸನ್ಮತವಿಲ್ಲ ?
ಒಬ್ಬರ ಕಂಡೊಬ್ಬರು ಮಾಡುವರು
ಮಹಾಜ್ಞಾನಿಗಳಲ್ಲಿ ವಿಚಾರಿಸಿಕೊಳಲಱಿಯದೆ.
ಭಕ್ತರೆನಲಾಗದು, ಮಹೇಶ್ವರರೆನಲಾಗದು.
ಇಂತಪ್ಪವರ, ಕೂಡಲಚನ್ನಸಂಗಮದೇವಾ,
ನೀ ಸಾಕ್ಷಿಯಾಗಿ ಛಿ ಎಂಬೆನು.

ಅಂತರಂಗದಲ್ಲಿ ಭವಿಯನೊಳಕೊಂಡು
ಬಹಿರಂಗದಲ್ಲಿ ಭಕ್ತಿಯನೊಳಕೊಂಡು
ಆತ್ಮಸಂಗದಲ್ಲಿ ಪ್ರಸಾದವನೊಳಕೊಂಡು
ಇಪ್ಪ ಭಕ್ತರನಾರ[ನೂ] ಕಾಣೆನಯ್ಯಾ;
ನಿಜಲಿಂಗೈಕ್ಯರ ಕಾಣೆನಯ್ಯಾ;
ಅಂತರಂಗದಲ್ಲಿ ಸುಳಿದಾಡುವ ತನುಗುಣಾದಿಗಳ,
ಮನಗುಣಾದಿಗಳ, ಪ್ರಾಣಗುಣಾದಿಗಳ ಕಳೆದಲ್ಲಿ, ಶರಣರಹರೇ ?
ಬಹಿರಂಗದಲ್ಲಿ ತನುವ ಕೊಟ್ಟು, ಮನವ ಕೊಟ್ಟು
ಧನವ ಕೊಟ್ಟಲ್ಲಿ, ಭಕ್ತರಹರೇ ?
ಕಾಂಬುವರ ಕಂಡು ಕೈಯ ನೀಡಿದಡೆ, ಪ್ರಸಾದಿಗಳಹರೇ ?
ಅಂತರಂಗ, ಬಹಿರಂಗ, ಆತ್ಮಸಂಗ  ಇಂತೀ ತ್ರಿವಿಧಬೇದವ,
ಗುಹೇಶ್ವರ, ನಿಮ್ಮ ಶರಣ ಬಲ್ಲ.

ಸರ್ಪನ ಬಾಯ ಕಪ್ಪೆ ನೊಣಕೆ ಹಾರುವಂತೆ,   ಆಪ್ಯಾಯನ ಬಿಡದು
ಕಾಯಾರ್ಪಿತವೆಂಬ ಹುಸಿಯ ನೋಡಾ;
ನಾನು ಭಕ್ತನೆಂಬ ನಾಚಿಕೆಯ ನೋಡಾ;
ನಾನು ಯುಕ್ತನೆಂಬ ಹೇಸಿಕೆಯ ನೋಡಾ;
ಓಗರವಿನ್ನಗದು.   ಪ್ರಸಾದ ಮುನ್ನಿಲ್ಲ,
ಚನ್ನ ಉಅಪಚಾರದರ್ಪಿತವ ನೋಗಡಿಸಿ ಕಳೆವಾ.

ಕಾಯದ ಕೈಯಲ್ಲಿ ಲಿಂಗಾರ್ಪಿತ ಖಂಡಿತ ಭಾಷೆ.
ಭಾವದ ಕೈಯಲ್ಲಿ ಲಿಂಗಾರ್ಪಿತ ಖಂಡಿತ ಭಾಷೆ.
ಶ್ರೋತ್ರದ ಕೈಯಲ್ಲಿ ಲಿಂಗಾರ್ಪಿತ ಖಂಡಿತ ಭಾಷೆ.
ಸ್ಪರ್ಶನದ ಕೈಯಲ್ಲಿ ಲಿಂಗಾರ್ಪಿತ ಖಂಡಿತ ಭಾಷೆ.
ನೇತ್ರದ ಕೈಯಲ್ಲಿ ಲಿಂಗಾರ್ಪಿತ ಖಂಡಿತ ಭಾಷೆ.
ಜಿಹ್ವೆಯ ಕೈಯಲ್ಲಿ ಲಿಂಗಾರ್ಪಿತ ಖಂಡಿತ ಭಾಷೆ.
ಘ್ರಾಣದ ಕೈಯಲ್ಲಿ ಲಿಂಗಾರ್ಪಿತ ಖಂಡಿತ ಭಾಷೆ.
ಲಿಂಗ ಮಧ್ಯೇ ಶರಣ; ಶರಣಮಧ್ಯೇಲಿಂಗ.
ಅಲ್ಲಲ್ಲಿ ತಾಗಿದ ಸುಖವಲ್ಲಲ್ಲಿಯೆ ಲಿಂಗಾರ್ಪಿತವಾಗದಿದ್ದಡೆ,
ಕೂಡಲಚನ್ನಸಂಗಯ್ಯನಲ್ಲಿ ಅವರ ಸಹಜರೆಂತೆಂಬೆ ?

ಪದವನರ್ಪಿಸಬಹುದಲ್ಲದೆ ಪದಾರ್ಥವನರ್ಪಿಸಬಾರದು.
ಓಗರವನರ್ಪಿಸಬಹುದಲ್ಲದೆ ಪ್ರಸಾದವನರ್ಪಿಸಬಾರದು.
ಗುಹೇಶ್ವರ, ನಿಮ್ಮ ಶರಣ ಹಿಂದ ನೋಡಿ ಮುಂದನರ್ಪಿಸುವ.

ಸತ್ಕೃತಿಯಿಂದ ಸಕಲ ಪದಾರ್ಥಂಗಳು ಭಾಜನ.
ತೀವಿ ತನ್ನ ಲಿಂಗಕ್ಕೆ ಕೊಟ್ಟಲ್ಲದೆ
ಕೊಳ್ಳೆನೆಂಬ ಅಚ್ಚಪ್ರಸಾದಿಗಳಿಗೆ
ಹುಸಿ ಹೊದ್ದಿತಲ್ಲಾ !
ಪೃಥ್ವಿ ಅಪ್ಪು ತೇಜ ವಾಯು ಆಕಾಶ.
ಕತ್ತಲೆ ಬಿಸಿಲು ಬೆಳದಿಂಗಳು ಮುಂತಾದ ಪದಾರ್ಥಂಗಳು
ತನ್ನ ಅಂಗವ ಸೋಂಕಿ ಅಲ್ಲಿ ಅರ್ಪಿತವೆಂದುಕೊಳ್ಳಬಾರದು
ಅನರ್ಪಿತವೆಂದು ಕಳೆಯಬಾರದು.
ಇದು ಕಾರಣವದಂತಿರಲಿ;
ಆವ ವೇಳೆಯಲ್ಲಿ ಆವ ಠಾವಿನಲ್ಲಿ
ತನಗೆ ಬೇಕಾದ ಪದಾರ್ಥಂಗಳನು
ತನ್ನ ಪ್ರಾಣಲಿಂಗವಿರಹಿತವಾಗಿ ಎಂದಡೆ,
ಭವದುಃಖವನುಂಬುದು ತಪ್ಪದಯ್ಯ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ಲಿಂಗಾರ್ಪಿತ ಲಿಂಗಾರ್ಪಿತವೆಂಬರು; ನಾವಿದನಱೆಯೆವಯ್ಯ.
ನಿತ್ಯ ತೃಪ್ತಿಲಿಂಗಕ್ಕೆ ಹಸಿವೆಂಬುದುಂಟೇ ?
ಶಿವಶಿವಾ; ತಮ್ಮ ತಮ್ಮ ಹಸಿವ ಲಿಂಗದ ಮೇಲಿಟ್ಟು
ಉಣ್ಣ[ದ] ಲಿಂಗವಾಗಿ ಅರ್ಪಿತವ ಮೆಱೆವರು !
ನಮ್ಮ ಗುಹೇಶ್ವರ ಲಿಂಗಕ್ಕೆ ಒಡಲೆಂಬುದುಳ್ಳಡೆ,
ಉದರಾಗ್ನಿಯುಂಟು !

ಅರ್ಪಿತ ಅನರ್ಪಿತವೆಂಬ ಸಂದೇಹವಳಿದುಳಿದ ಪ್ರಸಾದಿ.
ಅರ್ಪಿತ ಪ್ರಸಾದವೆಲ್ಲಿಯದೋ ಲಿಂಗದಲ್ಲಿ
ಲಿಂಗಾರ್ಪಿತ ಪ್ರಸಾದಂ ಚ ನದದ್ಯಾಜ್ಜಂಗಮಾಯವೈ
ಚರಾರ್ಪಿತ ಪ್ರಸಾದಂ ಚ ದದ್ಯಾತ್ತು ಲಿಂಗಮೂರ್ತಯೇ  ಎಂಬುದಾಗಿ
ಮಹದಿಂದಾದ ಘನವ ಸೂತಕಕ್ಕಿಕ್ಕುವ
ಪಾತಕರನೇನೆಂಬೆ ಕೂಡಲಸಂಗಮದೇವಾ.

೧೦

ಬಂಟನೊಡೆಯನೊಡನುಂದಲ್ಲಿ ದಾಸತನವಳಿಯಿತ್ತು.
ನೀ ಮಱೆದು ಮಲಗಿರ್ದು ಸ್ವಪ್ನವ ಕಾಬಲ್ಲಿ
ಲಿಂಗದ ಕೂಟವೆಲ್ಲಿದ್ದಿತ್ತು ?
ನೀ ಸ್ತ್ರೀಸಂಭೋಗವ ಮಾಡುವಲ್ಲಿ ಲಿಂಗ ನಿನ್ನಲ್ಲಿ
ಸಹಗೂಡಿದ್ದ ಠಾವಾವುದು ?
ಸಾಕು ಅರ್ಥಿಕಾಱರ ಹೊತ್ತು ಹೋಕಿನ ಅರ್ಪಿತ !
ಲಿಂಗವಂಗದಿಂದ ಹಿಂಗಿದಾಗಲೇ
ಸ್ವಪ್ನದ ಅರ್ಪಿತ, ಮಱವೆಯ ಮುಟ್ಟಿದ ಅರ್ಪಿತ
ಇದು ನಿಶ್ಚಯವಲ್ಲ; ಸದಾಶಿವ ಮೂರ್ತಿಲಿಂಗಕ್ಕೆ ಹೊಱಗು !

೧೧

ಅಚ್ಚಪ್ರಸಾದಿಗಳಚ್ಚ ಪ್ರಸಾದಿಗಳೆಂದು
ನಿಚ್ಚ ನಿಚ್ಚ ಹುಸಿವರು ನೋಡಾ !
ಬಯಲು ಬೆರಸುವಲ್ಲಿ ವಾಯು ಬೀಸುವಲ್ಲಿ,
ಭಾಜನ ಸಹಿತ ಭೋಜನವುಂಟೇ ?
ಅಂಗನೆಯ ಸುರತದ ಸುಖವನು ಲಿಂಗವಿರೋಧದಿ ನೆರವ
ನಿಚ್ಚ ಪರವಾದಿಗಳನೊಲ್ಲ ನಮ್ಮ ಸಕಳೇಶ್ವರ ದೇವರು.

೧೨

ಪ್ರಸಾದ ಪ್ರಸಾದವೆಂದೆಂಬಿರಿ; ಪ್ರಸಾದಸ್ಥಲವೆಂತಿಪ್ಪುದು,
ಹೇಳಿರಯ್ಯಾ.
ಇಕ್ಕುವಾತ ಕರ್ತನಲ್ಲ, ಕೊಂಬಾತ ಭೃತ್ಯನಲ್ಲ.
ಇಕ್ಕುವುದು, ಕೊಂಬುವುದು ಎಂಜಲಪ್ರಸಾದವಲ್ಲದೆ
ತನುವನಂಡಲೆದು, ಧನವ ಶುದ್ಧಯಿಸಿ,
ಇಡಾ ಪಿಂಗಳಮಂ ಕಟ್ಟಿ, ಸುಷುಮ್ನಾಮಾರ್ಗದಲ್ಲಿ
ಮನವೆಂಬ ಪರಿಚಾರಕ ಅಗ್ನಿಯೆಂಬನ
ಸುಪ್ರಾಣವನೆಬ್ಬಿಸಿ
ಮಸ್ತಕದ ಮೇಲಿಪ್ಪ ಉತ್ತಮ ಪ್ರಸಾದ ಅದು    ಬಂದು ತಾಗಲು,
ಅದು ದಳದುಳುವೆನುತ್ತ ಬರುತ್ತಿರಲು,
ಮನವೆದ್ದುಯೈದಿ ಅಂತು ಭೋಗಿಸಿದೆಡೆ
ಐಕ್ಯಪ್ರಸಾದವೆಂಬೆ;
ಅಂತಲ್ಲದೆ ಉಳಿದವರ ಕಾಡಿ ಬೇಡಿ ಬಾಧಿಸಿ ಕೊಂಬ
ಲೆಂಕಪ್ರಸಾದಿಗಳ ಮೆಚ್ಚುವನೆ ನಮ್ಮ
ಕೂಡಲ ಚನ್ನಸಂಗಮದೇವನು.

೧೩

ಪ್ರಸಾದ ಪ್ರಸಾದವೆಂದು ಹೆಸರಿಟ್ಟುಕೊಂಬಿರಣ್ಣಾ;
ಮುಂದೆ ನೋಡಿದಡೆ ಪ್ರಸಾದವಾಯಿತ್ತು.
ಹಿಂದೆ ನೋಡಿದಡೆ ಮಲಮೂತ್ರವಾಯಿತ್ತು;
ಪ್ರಸಾದಕ್ಕೆ ಭಂಗ ಬಂದಿತ್ತು, ನೋಡಾ !
ಇಂತಪ್ಪ ಪ್ರಸಾದಿಗಳ ನಮ್ಮ ಕೂಡಲಚನ್ನಸಂಗ ಮೆಚ್ಚ !

೧೪

ಲಿಂಗವಂತ, ಲಿಂಗಪ್ರಾಣಿ, ಸರ್ವಾಂಗಲಿಂಗಿ,
ಎಂದೆಂಬಿರಿ;
ಭಂಗವಾಯಿತ್ತಲ್ಲಾ ಈ ಮಾತನಾಡಿದಡೆ;
ಕೊಂಬುದು ಪಾದೋದಕಪ್ರಸಾದ, ಕಳಚುವುದು ಮಲಮೂತ್ರ;
ಅಂಗ ಸೋಂಕಿದ ಪಾದೋದಕ ಪ್ರಸಾದಕ್ಕೀ ವಿದಿ !
ಕೂಡಲಚನ್ನಸಂಗಯ್ಯನಲ್ಲಿ ಸಂಗಸುಖದ ಪರಿ ಬೇಱಿ !

೧೫

ಗುರುಗುರುವೆಂದೇನೂ, ಪರಕ್ಕೆ ಹೆಸರ
ಹೇಳುವನ್ನಕ್ಕವೇ ?
ಲಿಂಗಲಿಂಗವೆಂದೇನೋ ಅಂಗ
ಬೀಳುವನ್ನಕ್ಕವೇ ?
ಜಂಗವ ಜಂಗಮವೆಂದೇನೋ ಧನವ
ಸವೆವನ್ನಕ್ಕವೇ ?
ಪ್ರಸಾದಪ್ರಸಾದವೆಂದೇನೋ., ಉಂಡು ಕಳಚಿ
ಪ್ರಳಯಕ್ಕಿಳಗಾಗುವನ್ನಕ್ಕವೇ ?
ಪಾದತೀರ್ಥಪಾದತೀರ್ಥವೆಂದೇನೋ,
ಕೊಂಡು ಕೊಂಡು
ಮುಂದೆ ಜಲವ ಮಾಡುವನ್ನಕ್ಕವೇ ?
ಅಲ್ಲಿ ನಿಂದಿರದಿರಾ ಮನವೇ !
ನಿಂದಡೆ ನೀನು ಕೆಡುವೆ,
ಬಂದಡೆ ನಾನು ಕೆಡುವೆ.
ಎನ್ನ ತಂದೆ ಕೂಡಲಚನ್ನಸಂಗಯ್ಯನಲ್ಲಿ ಬಸವಣ್ಣಗೆ
ಪ್ರಭುದೇವರು ತೋಱಿದರೀಯನುವ !

೧೬

ಒಕ್ಕುದು ಪ್ರಸಾದವಲ್ಲ; ಮಿಕ್ಕುದು ಪ್ರಸಾದವಲ್ಲ.
ಹತ್ತೆ ಕರೆದಿಕ್ಕುವುದೂ ಪ್ರಸಾದವಲ್ಲ;
ತಕ್ಕೈಸಿ ನಿಮ್ಮುವನಪ್ಪಿಕೊಂಡೆಡೆ ನಿಶ್ಚಯ ಪ್ರಸಾದ,
ಕಾಣಾ ರಾಮನಾಥಾ.

೧೭

ಒಕ್ಕುದು ಪ್ರಸಾದವೆಂಬರು, ಮಿಕ್ಕಿದು ಪ್ರಸಾದವೆಂಬರು.
ಒಕ್ಕುದು ಮಿಕ್ಕುದನ್ನೆಲ್ಲ ಬೆಕ್ಕು ಕೊಳ್ಳದೇ ?
ಒಕ್ಕುಮಿಕ್ಕು ಹೋಗುವ ಪಂಚ ಸಕೀಲವ ಬಲ್ಲಡೆ
ಗುಹೇಶ್ವವ ಲಿಂಗದಲ್ಲಿ ಆತನೆ ಪರಮಪ್ರಸಾದಿ.

೧೮

ಒಕ್ಕುದ ಮಿಕ್ಕುದ ಕೊಂಬೆನೆಂದೆಂಬ ನಿಶ್ಚಲ ಶರಣ್ ತೋಱಾ
ಒಕ್ಕುದೆಂಬುದೇನೋ, ಮಿಕ್ಕುದೆಂಬುದೇನೋ,
ಬಲ್ಲಡೆ ಹೇಳಿರೇ ?
ಒಕ್ಕುದೆಂಬುದೆ ಕಾಯ, ಮಿಕ್ಕುದೆಂಬುದೆ ಪ್ರಾಣ,
ಈ ಉಭಯಕ್ಕೆ ತಕ್ಕವನೆ ಅಱೆತು ಕೊಡಬಲ್ಲಡೆ
ಸಿಕ್ಕುವನು ಕಾಣಾ, ನಮ್ಮ ಕೂಡಲ ಚನ್ನಸಂಗಮದೇವಾ.

೧೯

ಕಾಯ ಪ್ರಸಾದವೂ, ಜೀವ ಪ್ರಸಾದವೋ,
ಪ್ರಸಾದ ಪ್ರಸಾದವೋ ಬಲ್ಲವರು ನೀವು ಹೇಳಿರೇ,
ಶುದ್ಧ ಸಿದ್ಧ ಪ್ರಸಿದ್ಧವೆಂದು ಹೆಸರಿಟ್ಟು ಕರೆವಿರಿ;
ಕಾಯವ ಕಳೆದು ಕಾಯ ಪ್ರಸಾದವೋ ?
ಜೀವ[ವ] ಕಳೆದು ಜೀವ ಪ್ರಸಾದವೋ ?
ಪ್ರಾಣವ ಕಳೆದು ಪ್ರಾಣಪ್ರಸಾದವೋ ?
ಬಲ್ಲವರು ನೀವು ಹೇಳಿರೇ !
ಇಂತಿವನುತ್ತರಿಸಿದ ಮಹಾಪ್ರಸಾದವನಲ್ಲದೆ ಕೊಳ್ಳೆ.
ಉಳಿದ ರಂಜಕ ಪ್ರಸಾದಕ್ಕಾನಂಜುವೆ ಕಾಣಾ,
ಕೂಡಲಸಂಗಮದೇವಾ.

೨೦

ತನ್ನ ಬಾಯಶೇಷವ ಲಿಂಗಕ್ಕೆ ತೋಱಿ
ಲಿಂಗದ ಶೇಷವ ತಾಕೊಂಡೆನೆಂದು  ಕೊಂಡುದು ಪ್ರಸಾದ,
ಇದ್ದುದು ಸೈದಾನವೆಂ
ದುಂಡುಂಡು, ಲಿಂಗಕ್ಕೆ ಕೊಡಬಹುದೆ ಅಯ್ಯಾ ?
ಅದು ಮುನ್ನವೆ ಲಿಂಗಕ್ಕರ್ಪಿತ
ತನ್ನಯ ಸಂದೇಹಕ್ಕೆ ಕೊಟ್ಟು ಕೊಂಡೆಹೆನೆಂಬ ಭೇದವಲ್ಲದೆ
ಇಂತೀ ಗುಣ ಸದಾಶಿವ ಮೂರ್ತಿಲಿಂಗಕ್ಕೆ ಹೊಱಗು.

೨೧

ಮರಗಿಡ ಬಳ್ಳಿಗಲನೆಲ್ಲವ ತಱಿತಱಿದು
ಪ್ರಾಣವ ಕೊಂಡು, ಶರೀರವ ಹೊರೆವ
ದೋಷಕಿನ್ನಾವುದು ವಿಧಿಯಯ್ಯಾ ?
ಒಂದಿಂದ್ರಿಯ ಮೊದಲಾಗಿ ಐದಿಂದ್ರಿಯ ಕಡೆಯಾಗ
ಜೀವ ಜಾಲವಲ್ಲವೆ ಸಚರಚರವೆಲ್ಲ ?
ಕೂಡಲ[ಚನ್ನ]ಸಂಗನ ಶರಣರು ಇಂತಹ ದೋಷಕ್ಕಂಜಿ
ಪ್ರಸಾದ ಮಱೆ ಹೊಕ್ಕರು.

೨೨

ಲಿಂಗಜಂಗಮ ಪ್ರಸಾದವೆಂಬರು
ಲಿಂಗವೆಂದಡೆ ಅಂಗದೊಳಗಾಯಿತ್ತು.
ಜಂಗಮವೆಂಬೆನೇ ? ವಾಸಿಗೊಳಗಾಯಿತ್ತು.
ಪ್ರಸಾದವೆಂಬೆನೇ ? ವಿಷದೊಳಗಾಯಿತ್ತು.
ಇಂತೀ ತ್ರಿವಿಧವು ನಷ್ಟ.
ಇವರ ಮೇಲಣ ಅಂಕುರಿತವ ಬಲ್ಲ
ಜಂಗವಮ ತೋಱಾ ಕೂಡಲ ಸಂಗಮದೇವಾ.

೨೩

ಗುರು ಮುಟ್ಟಿದ್ದು ಪ್ರಸಾದವೆಂಬೆನೆ ?
ಗುರು ಮುಟ್ಟಿದ್ದು ಪ್ರಸಾದವಲ್ಲ.
ಅದೇನು ಕಾರಣವೆಂದಡೆ,
ಗುರುವು ಉತ್ಪತ್ತಿ ಸ್ಥಿತಿಲಯಕ್ಕೊಳಗಾದ.
ಲಿಂಗ ಮುಟ್ಟಿದ್ದು ಪ್ರಸಾದವೆಂಬೆನೆ ?
ಲಿಂಗ ಮುಟ್ಟಿದ್ದು ಪ್ರಸಾದವಲ್ಲ.
ಅದೇನು ಕಾರಣವೆಂದಡೆ,
ಲಿಂಗ ಅಷ್ಟವಿಧಾರ್ಚನೆ ಷೋಡಶೋಪಚಾರ   ದೊಳಗಾಯಿತ್ತು.
ಜಂಗಮ ಮುಟ್ಟಿದ್ದು ಪ್ರಸಾದವೆಂಬೆನೆ ?
ಜಂಗಮ ಮುಟ್ಟಿದ್ದು ಪ್ರಸಾದವಲ್ಲ.
ಅದೆಂತೆಂದಡೆ,    ಜಂಗಮ ಆಶೆವೇಷಕ್ಕೊಳಗಾದ.
ಇಂತಿವ  ಬೆರಸದೆ, ಕಾಯಭಾವ ಪ್ರಾಣ ಪ್ರಸಾದ ಕೊಂಬವರ
ಎನಗೊಮ್ಮೆ ತೋಱಯ್ಯ ಕೂಡಲಚನ್ನಸಂಗಮದೇವಾ.

೨೪      

ಲಿಂಗವಿಲ್ಲದ ಗುರುವಾಗಬೇಕು,
ಲಿಂಗವಿಲ್ಲದ ಶಿಷ್ಯನಾಗಬೇಕು.
ಶೃಂಗಾರಕ್ಕೆ ಮೆಱೆಯದ ಭಕ್ತಿಯಾಗಬೇಕು.
ಇಂತೀ ಗುರುಪ್ರಸಾದವಲ್ಲದೆ,
ವೇಶಿಯ ಪುತ್ರರಂತೆ ಕಂಡಕಂಡವರ್ಗೆ ಕೈಯಾನುನ
ಮಿಟ್ಟಿಯ ಭಂಡರನೇನೆಂಬೆ ಕಲಿದೇವರ ದೇವಾ !

೨೫

ಆದಿವಿಡಿದು ಬಾಹಾತ ಭಕ್ತನಲ್ಲ.
ಅನಾದಿವಿಡಿದು ಬಾಹಾತ ಭಕ್ತನಲ್ಲ.
ಸ್ಥಲವಿಡಿದು ಬಾಹಾತ ಭಕ್ತನಲ್ಲ.
ಇಷ್ಟಲಿಂಗದಲ್ಲಿ ಪ್ರಸಾದವ ಕೊಂಬಾತ ಪ್ರಸಾದಿಯಲ್ಲ.
ಶೂನ್ಯಕಾಯವ ನಿಶ್ಯೂನ್ಯಕ್ಕಿಕ್ಕಿ
ಪ್ರಾಣಲಿಂಗದಲ್ಲಿ ಪ್ರಸಾದವ ಕೊಳಬಲ್ಲಾತನಾಗಿ
ಗುಹೇಶ್ವರ, ನಿಮ್ಮ ಶರಣ ಚನ್ನಬಸವಣ್ಣಂಗೆ
ನಮೋ ನಮೋ ಎನುತಿರ್ದೆನು.

೨೬      

ಗುರು ಮುಂತಾಗಿ ಕೊಂಬುದು ಪ್ರಸಾದವಲ್ಲ.
ಲಿಂಗ ಮುಂತಾಗಿ ಕೊಂಬುದು ಪ್ರಸಾದವಲ್ಲ.
ಜಂಗಮ ಮುಂತಾಗಿ ಕೊಂಬುದು ಪ್ರಸಾದವಲ್ಲ.
ಪ್ರಸಾದ ಮುಂತಾಗಿ ಕೊಂಬುದು ಪ್ರಸಾದವಲ್ಲ
ಅಂತಪ್ಪ ಪ್ರಸಾದವೆ ಬೇಕು. ಅಂತಪ್ಪ ಪ್ರಸಾದವ ತೋಱಿ
ಬದುಕಿಸಯ್ಯಾ ಕೂಡಲಸಂಗಮದೇವಾ.