|| ವೃತ್ತ ||

ಪರುಷಮದಾಗುತಾಗುತಕಟಾ ಪೊಸಚಿನ್ನದ ಘಟ್ಟಿಯಾದವೋಲ್
ನಿರುತ ನಿಜೈಕ್ಯ ಭಕ್ತಿ ಪೊಱವೇಷದ ಭಾಷೆಯ ದಂಬಭಕ್ತಿ ಯಾ
ಗುರುಚಿರಭೋಗಸಿದ್ಧಿಕರಮಾದುದು ಶಾಂಭವಯೋಗಸಿದ್ಧಿಯಂ
ತರಿದುದೇನರಯ್ಯ ಪರಮಪ್ರಭುವೇ ಮಹದೈಪುರೀಶ್ವರಾ.

|| ವಚನ ||         

ತಾವು ಗುರುವೆಂದು ಮುಂದಣವರಿಗೆ
ಉಪದೇಶವ ಮಾಡುವರಯ್ಯಾ.
ತಾವೆಂತು ಗುರು?
ಎಲ್ಲರ ಹಾಗೆ ದೇಹ ಪ್ರಾಣ ಗುರುವೆಂಬುದು, ತಾಪರುಷವೆಂಬರು.
ಆ ಪರುಷವು ಲೋಹವ ಮುಟ್ಟಿದಡೆ ಸುವರ್ಣವಹುದಲ್ಲದೆ
ಪರುಷವಾಗಲಱಿಯದು ಅದು ಗುರುಸ್ಥಲವಲ್ಲ.
ಇನ್ನು ಗುರುವೆಂಬುದು ಜ್ಯೋತಿ ಪ್ರಕಾಶ
ಅದು ಮುಟ್ಟಿ ತನ್ನಂತೆ ಮಾಡಿಕೊಳಬಲ್ಲದಾಗಿ
ಅದಾವ ಜ್ಯೋತಿಯೆಂದಡೆ ಸ್ವಯಂಜ್ಯೋತಿ,
ಆ ಜ್ಯೋತಿಯ ಬೆಳಗಿನಿಂದ ಪ್ರಾಣಲಿಂಗವ ಕಂಡು
ಸುಖಿಯಾಗಬೇಕೆಂದಡೆ ನಾಲ್ಕು ವೇದಾರ್ಥ
ಗಾಯತ್ರಿ ಗಾಯತ್ರಿಯರ್ಥ
ಅಜಪಾಗಾಯತ್ರಿ  ಆಜಪ ಗಾಯಾತ್ರಿಯರ್ಥ,
ಪ್ರಾಣಾಯಾಮ, ಪ್ರಾಣಾಯಾಮದಿಂದೆ
ಪಶ್ಚಿಮ ಜ್ಯೋತಿಯ ಬೆಳಗಿ, ಪ್ರಾಣಲಿಂಗ ಸಂಬಂಧವ ಮಾಡುವುದು
ಇಷ್ಟರಲ್ಲಿ ಸ್ವತಂತ್ರನಾದಡೆ, ಇಷ್ಟಲಿಂಗವನುಪದೇಶವ ಮಾಡುವುದು
ಇಷ್ಟಿಲ್ಲದೆ ಕೊಟ್ಟಡೆ ಅಂಧಕನ ಕಯ್ಯನಂಧಕ ಹಿಡಿದಂತೆ ಕಾಣಾ,
ಕೂಡಲಸಂಗಮದೇವಾ.

ಹಿಂದನಱಿಯ ಮುಂದನಱಿಯದೆ ಹರಿದ್ಹರಿದು
ಉಪದೇಶವ ಮಾಡುವ ಈ ಹಂದಿಗಳ ನಾನೇನೆಂಬೆನೆಲವೊ.
ಗಂಡನ ಗುರು ಹೆಂಡತಿಗೆ ಮಾವನೆ? ಹೆಂಡತಿಯ ಗುರು ಗಂಡಂಗೆ ಮಾವನೆ?
ಉಪಮೆಗೆ ಬಾರದ ಘನವ ಉಪಮೆಗೆ ತಂದು ನುಡಿವ
ನರಕಿ ಜೀವಿಗಳನು ಕೂಗಿಡೆ ನರಕದಲ್ಲಿಕ್ಕುವ
ನಮ್ಮ ಕೂಡಲ ಚನ್ನಸಂಗಮದೇವಾ.

ಜಗದ ಜನವ ಹಿಡಿದುಕೊಂಡು ಬಂದು ಉಪದೇಶವ ಮಾಡುವ
ಗುರುವಿಂಗೆ ಆ ಉಪದೇಶ ಕೊಂಡುಕೊಟ್ಟು ದೂರಾಗಿ
ಹೋಹುದಲ್ಲದೆ ಅಲ್ಲಿ ನಿಜವಳವಡವುದೆ?
ಈ ತೆಱನಱಿಯ ಸಂಸಾರ ಜೀವಿಗಳು ಮಾಡಿದ ದೋಷ
ತಮ್ಮನೆ ತಿಂದು ಆ ಗುರುವಿಂಗೆ ಉಪಹತಿ ಮಾಡುವುದು ನೋಡಾ!
ಅದೆಂತೆಂದಡೆ:    ಶಿಷ್ಯ ಪಾಪಂಗುರೋಪಿಯೆಂದುದಾಗಿ
ಇದು ಕಾರಣ, ಗುಹೇಶ್ವರಾ ತಾನಿಟ್ಟ ಬೇತಾಳ ತನ್ನ ತಿಂಬಡೆ.

ವಸ್ತ್ರ ಬಲುಹಿನಲ್ಲಿ ಕಟ್ಟು ಶಿವದಾರ ಬಲುಹಿನಲ್ಲಿ ಕಟ್ಟು
ಎಂದು ಹೇಳುವದು ದೀಕ್ಷೆಯೇ? ಬೇಱಿ ಮತ್ತೆಕಟ್ಟುವ ಠಾವುಂಟಾಗಿ.
ಅಷ್ಟವಿಧಾರ್ಚನೆ, ಪೋಡಶೋಪಚಾರ ಕಾಲನಿಯಮಂಗಳ
ಮಾಡಿಯೆಂದು ಹೇಳುವದುಪದೇಶವೆ? ಕಾಬರೆ ಕಾಲ ನೇಮಂಗಳುಂಟಾಗಿ
ಇದನಱಿಯದೆ ಹೇಳಿದಾತ ಶಿವದ್ರೋಹಿ, ಕೇಳಿದಾತ ಗುರುದ್ರೋಹಿ
ಐಕ್ಯವನಱಿಯದ ಮಾಟ ಸಯಿದಾನದ ಕೇಡು
ಕೂಡಲಚನ್ನಸಂಗಯ್ಯ, ಆ ಗುರುಶಿಷ್ಯರಿಬ್ಬರೂ ಉಭಯಭ್ರಷ್ಟರು.

ಈ ಪ್ರತಿಗೀಫಲ ಈ ಪೂಜೆಗೀಫಲವೆಂಬ ಕೈಕೂಲಿಗಾಱರೆಲ್ಲ ಕರ್ಮಿಗಳಯ್ಯಾ
ಸ್ವರ್ಗ ನರಕವನುಂಬವರುಗಳು ಕರ್ಮಿಗಳಯ್ಯಾ.
ಒಡಲೊಡವೆ ಹಡೆದರ್ಥವ ಮೃಡದೇವ ಸೊಡ್ಡಳಗರ್ಪಿತವೆಂಬಾತನು
ಬೆಡಗಿನ ಶಿವಪುತ್ರ ಉಳಿದವರಂತಿರಲಿ.
ಪ್ರಾಣಕ್ಕುದೇಶವ ಮಾಡಿ ಸ್ವಾಯತಲಿಂಗವಂ ಕೊಡಬೇಕು
ಕಾಯಶುದ್ಧವಂ ಮಾಡಿ ಪ್ರಾಣಕ್ಕಱಿವತೋಱಬೇಕು
ಇಷ್ಟವನಱಿಯದೆ ದೀಕ್ಷೆಯ ಮಾಡಬಾರದು
ಕುರುಡನ ಕಯ್ಯಲ್ಲಿ ಕೊಳಕಲಸಿ ಪ್ರತಿಕುರುಡಂಗುಣಿಸುವಂತಾಯಿತ್ತು
ಮಲಭಾಂಡ ಜೀವಿಯ ಕಯ್ಯಲ್ಲಿ ಅನುಜ್ಞೆಯಾದ ಶಿಷ್ಯಂಗೆ
ಉಭಯದ ಕೇಡಾಯಿತ್ತು.
ಇದನಱಿದು ನಡೆಯೆಂದಿರಣ್ಣಾ ಸದಾಶಿವ ಮೂರ್ತಿಲಿಂಗವಱಿವುದಕ್ಕೆ.

ಹೊಲಬನಱಿಯದ ಗುರು ಸುಲಭನಲ್ಲದ ಶಿಷ್ಯ
ಕೆಲಬಲನ ನೋಡಿ ವಿಚಾರಿಸಿ ಮಾಡದುಪದೇಶ
ಆಂಧಕ ವನವೊಕ್ಕಂತೆ ರಾಮನಾಥಾ.

ಪೃಥ್ವಿಯ ಮೇಲಣ ಕಲ್ಲ ತಂದು ಮರ್ತ್ಯರೆಲ್ಲರು ಪೂಜಿಸಿ
ಭಕ್ತಿಯೆಂದು ಮಾಡುತ್ತೈದಾರೆ ನೋಡಾ.
ಕೊಟ್ಟಾತ ಗುರುವೆಂಬರು ಕೊಂಡಾತ ಶಿಷ್ಯನೆಂಬರು,
ಕೊಟ್ಟವ ಕೊಂಡವ ಉಭಯ ಮರ್ತ್ಯರು
ಮರಣಕ್ಕೊಳಗಾಗಿ ಹೋದಲ್ಲಿ ಪೃಥ್ವಿಯ ಕಲ್ಲು
ಪೃಥ್ವಿಯಲ್ಲೆ ಉಳಿಯಿತ್ತು ನೋಡಾ.
ಭಕ್ತಿ ಭ್ರಷ್ಟಾಗಿ ಹೋಯಿತ್ತು.
ಹಿಂಗಲ್ಲ ಬಿಡು, ಇದು ಗುರು ಶಿಷ್ಯ ಸಂಬಂಧವಲ್ಲ.
ಅಱುಹು ಸಹಿತವಾಗಿ ಗುರುವೆಂಬೆ, ಆಚಾರ ಸಹಿತವಾಗಿ ಶಿಷ್ಯನೆಂಬೆ.
ನಿಷ್ಠೆ ಸಹಿತವಾಗಿ ಲಿಂಗವೆಂಬೆ.
ಇದು ಪರಮಸೌಖ್ಯ ಪರಭಕ್ತಿಯ ಪರಿಣಾಮ; ಉಳಿದವೆಲ್ಲ ಭ್ರಷ್ಟಕಾಣಾ
ಮಹಾಲಿಂಗ ಗುರು ಶಿವಸಿದ್ಧೇಶ್ವರ ಪ್ರಭುವೆ.

|| ತ್ರಿವಿಧಿ ||

ಪರಿಭವನಱಿಯಿರಿ ಗುರುಮಾರ್ಗವನಱಿಯಿರಿ
ಆಱಿದಱಿದು ದೀಕ್ಷೆಯನು ಮಾಡುತ್ತಿಹರು
ನರರ ಬೋಧಿಸಿ ತಮ್ಮ ಉದರವ ಹೊರೆವವರ
ಗುರುವೆಂದು ಎಂಬೆಂತೆ ಯೋಗಿನಾಥಾ.

೧೦

ಗುರುವಾಗಿ ಗುಡ್ಡರಿಗೆ ಹಿರಿದು ಹಮ್ಮಿನೊಳಿರ್ದೆ
ಪರಮ ಶ್ರೀಗುರು ಬಂದು ಗುಡ್ಡ ಪದವಿಯ ಪರಿಹರಿಸಿ
ತಮ್ಮಿರವವಪ್ಪವಿದು ಎನ್ನೊಳಗಿರಿಸಿ
ಸಲಹಿದ ಗುರು ಶರಣು ಯೋಗಿನಾಥಾ.

೧೧

ಜವನಿಕೆಯ ಮಱೆಯಲ್ಲಿ ನೆಳಲು ಕುಣಿವುತ್ತೈತೆ
ನೆಳಲು ನೀಕರಿಸುವರೊಬ್ಬರಿಲ್ಲ
ಕರುಣಾಕರನೆ ಗುರುವೆ ನೆಳಲ ಬೊಮ್ಮವೆ ನೀನು
ಅಱೆದಡೆ ನಾನುಳಿದೆನಯ್ಯಾ ಯೋಗಿನಾಥಾ.