|| ವೃತ್ತ ||

ಗುರು ಕರುಣಾಳು ತತ್ತ್ವಮಸಿಯೆಂದುಪದೇಶಿಸಿದಿಷ್ಟಲಿಂಗಮಾಂ
ತರಶಿವಲಿಂಗಮುತ್ತರಪದಸ್ಥಿತಿ ತೃಪ್ತಿಕಳಾಖ್ಯ ಲಿಂಗಮಾ
ಗುರುಚಿರ ತತ್ವದತ್ವಮಿತಿಶಬ್ದ ಪದಾಶಪದತ್ರಯಂ ಪ್ರವಿ
ಸ್ತರ ಗುಣನಾಮರೂಪುವಿದಿದಿಪ್ಪುದೆ ದೀಕ್ಷೆ ಕಣಾ ಶಿವಧವಾ.    

|| ವಚನ ||         

ಶ್ರೀ ಗುರುಸ್ವಾಮಿ ಕರುಣಿಸಿ ಹಸ್ತಮಸ್ತಕ ಸಂಯೋಗಮಂ ಮಾಡಿ
ಪ್ರಾಣಲಿಂಗವನೆ ಕರತಳಾಮಳಕವಾಗಿ ಕರಸ್ಥಲಕ್ಕೆ ತಂದು ಕೊಟ್ಟನಾಗಿ
ಒಳಗೆನ್ನದೆ  ಹೊಱಗೆನ್ನದೆ ಆ ಲಿಂಗವ ನಚ್ಚಿಮಚ್ಚಿ ಹರುಷದೊಳೋಲಾಡುವೆ
ಅದೆಂತೆಂದಡೆ :   ಯತೋವಾಚೋ ನಿವರ್ತಂತೇ ಅಪ್ರಾಪ್ಯಮನಸಾಸಹ
ನಾದ ಬಿಂದು ಕಳಾತೀತಂ ಗುರುಣಾಲಿಂಗಮುದ್ಭವಂ ಎಂದುದಾಗಿ
ಆ ಲಿಮಗವ ಪಡೆದು ಆನಂದಿಸುವೆ  ಕೂಡಲಸಂಗಮದೇವಾ.

ಹಸ್ತಮಸ್ತಕ ಸಂಯೋಗವಾಗದ ಮುನ್ನ ಯೌವ್ವನ ಮದವಾಯಿತ್ತು ನೋಡಾ.

ಆವುದಂತರಂಗವೆಂಬೆನಯ್ಯ? ಹಸ್ತಮಸ್ತಕ ಸಂಯೋಗವೆ ಬಹಿರಂಗ,
ಮನಸಂಯೋಗವೆ ಅಂತರಂಗ,
ಇಂತೀ ದ್ವಿವಿಧ ಸಂಯೋಗವೆ ಕೂಡಲಚನ್ನಸಂಗಯ್ಯನಲ್ಲಿ ಆತುಮ ಸಂಗವಾಯಿತ್ತು.

ಕಾಣಬಾರದ ಗುರು ಕಂಗೆಗೋಚರಮಾದಡೆ
ಹೇಳಲಿಲ್ಲದ ಬಿನ್ನಪ ಹೊಸಲಿಲ್ಲದ ವಿಭೂತಿಯ ಪಟ್ಟ
ಮುಟ್ಟಲಿಲ್ಲದ ಹಸ್ತಮಸ್ತಕ ಸಂಯೋಗ, ಕೇಳಲಿಲ್ಲದ ಕರ್ಣಮಂತ್ರ
ತುಂಬಿತುಳುಕದ ಕಲಶಾಭಿಷೇಕ, ಆಗಮವಿಲ್ಲದ ದೀಕ್ಷೆ
ಪೂಜೆಗೆ ಬಾರದ ಲಿಂಗ, ಸಂಗವಿಲ್ಲದ ಸಂಬಂಧ,
ಸ್ವಯವಪ್ಪ ಅನುಗ್ರಹ ಆನು ಕೊಂಬಂತೆ ಮಾಡಾ, ಗುಹೇಶ್ವರಾ!

ಗುರು ಕರುಣಿಸಲು ಸಂಸಾರ ವಿಷಯ ಕೆಟ್ಟಿತ್ತು
ಮಾಯಾ ಪ್ರಪಂಚು ಬಿಟ್ಟಿತ್ತು, ಹುಟ್ಟಿಱತು ಹೋಯಿತ್ತು
ನೆಟ್ಟನೆ ಗುರುಪಾದವ ಮುಟ್ಟಿ ಭವಗೆಟ್ಟೆನು ಕಾಣಾ, ರಾಮನಾಥ.

ಇನ್ನು ಮುಕ್ತನೆಂಬನ್ನಕ್ಕ ಮುನ್ನೇನು ಬದ್ಧನೆ
ಮುನ್ನಮುನ್ನವೆ ಮುಕ್ತನು.
ಒಂದು ಕಾರಣದಿಂದ ಬದ್ಧನಾದಡೆ ಗುರುಕರುಣದಿಂದ
ಮುಕ್ತನಾದ ಬಳಿಕ ಬದ್ಧಮುಕ್ತನೆಂಬ ಸುದ್ದಿಯೆಲ್ಲಿಯದಯ್ಯ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ?

ಎನ್ನನಱುಹಿಸು ಗುರುವೆ ಎನ್ನನಱುಹಿಸು
ನಿನ್ನನಱುಹಿಸಬೇಡ ಎನ್ನನಱಿಯದವ ನಿನ್ನನಱಿಯೆ
ಎನ್ನನಱುಹಿಸದೆ ನಿನ್ನಱುಹಿಸಿದಡೆ
ನೀನೆನಗೆ ಗುರುವಲ್ಲ ನಾನಿನಗೆ ಶಿಷ್ಯನಲ್ಲ
ಎನ್ನನಱುಹಿಸಿದಡೆ ನೀನೆನಗೆ ಗುರು, ನಾನಿನಗೆ ಶಿಷ್ಯ,
ಮಸಣಯ್ಯಪ್ರಿಯ ಗಜೇಶ್ವರ.

ಅಹುದಹುದು ಲಿಂಗವಿಲ್ಲದೆ ಶಿಷ್ಯನನಱುಹಿಸಬಲ್ಲ ಗುರು
ಲಿಂಗವಿಲ್ಲದೆ ಗುರುವನಱುಹಿಸಬಲ್ಲ ಶಿಷ್ಯ
ಗುರುವನಱಿಯಬಲ್ಲ ಶಿಷ್ಯ, ಶಿಷ್ಯನನರೀಯಬಲ್ಲ ಗುರು
ಇವರಿಬ್ಬರ ಭೇದವ ನೀನೇ ಬಲ್ಲೆ ಗಜೇಶ್ವರ.

ಗುರುಶಿಷ್ಯ ಸಂಬಂಧವನಾರು ಬಲ್ಲರೊ ನೆರೆದ ನೆರವಿಗೆ ಹೇಳಲುಂಟೆ? ಈ ಮಾತು.

ಸ್ತ್ರೀ ಪುರುಷರ ಸ್ನೇಹದ ಕೂಟವ ಮತ್ತೊಬ್ಬರಿಗಱುಹಬಾರದು
ಗುರು-ಶಿಷ್ಯ ಸಂಬಂಧವನಿನ್ನಾರು ಬಲ್ಲರಯ್ಯಾ ಕಲಿದೇವಯ್ಯ.

ಕನ್ನಡಿ ತನ್ನದಾದಡೇನು ಅನ್ಯರದಾದಡೇನು
ತನ್ನ ಮುಖವ ಕಾಣಬಂದಡೆ ಸಾಲದೆ?
ಸದ್ಗುರುವಾರಾದಡೇನು ತನ್ನನಱಿದಡೆ ಸಾಲದೆ?
ಸಿಮ್ಮಲಿಗೆಯ ಚನ್ನರಾಮಾ.

೧೦

ದೀಕ್ಷಾಗುರುವಾದಲ್ಲಿ ತ್ರಿವಿಧದಾಸೆಯಿಲ್ಲದಿರಬೇಕು.
ಶಿಕ್ಷಾಗುರುವಾದಲ್ಲಿ  ಅರಿಗಳಿಗಂಜದೆ ಪ್ರಾಣತ್ಯಾಗ
ನಿಶ್ಚಯನಾಗಿರಬೇಕು.
ಮೋಕ್ಷ ಗುರುವಾದಲ್ಲಿ ಸರ್ವದೋಷ ಸರ್ವೇಂದ್ರಿಯನಾಶನನಾಗಿರಬೇಕು.
ಇಂತೀ ಮೂಱ ಮೂಱಿ ಬೇಱೊಂದಱಲ್ಲಿ ನಿಂದು
ತ್ಯಾಗಾಂಗ, ಭೋಗಾಂಗ, ಯೋಗಾಂಗ ತ್ರಿವಿಧಲೇಪನನಾಗಿ ನಿಂದುದು
ನಿಜಗುರುಸ್ಥಲ, ಆ ಗುರುವಿನ ಕಯ್ಯ ಅನುಜ್ಞೆ ಪರಂಜ್ಯೋತಿಪ್ರಕಾಶ
ಅದು ನಿರವಯ ತತ್ವ ಸದಾಶಿವಮೂರ್ತಿ ಲಿಂಗವು ತಾನೆ.

೧೧

ಕಸ್ತೂರಿಮೃಗ ಬಂದು ಸುಳಿಯಿತ್ತಯ್ಯ
ಸಕಲ ವಿಸ್ತಾರದ ರೂಪಂ ಬಂದು ನಿಂದಿತ್ತಯ್ಯ
ಆವಗ್ರಹ ಬಂದು ಸೋಂಕಿತ್ತೆಂದಱಿಯೆನಯ್ಯ
ಆವಗ್ರಹ ಬಂದು ಹಿಡಿಯಿತ್ತೆಂದಱಿಯೆನಯ್ಯ
ಹೃದಯಕಮಲ ಮಧ್ಯದಲ್ಲಿಗುರುವನಱಿದು ಪೂಜಿಸಿ
ಗುರುವಿಖ್ಯಾತನೆಂಬುದನಱಿದೆನಯ್ಯ
ಗುಹೇಶ್ವರ ಲಿಂಗದಲ್ಲಿ ಹಿಂದಣ ಹುಟ್ಟಱತು ಹೋದುದ ಕಂಡೆನಯ್ಯ.

೧೨

ಐಕ್ಯಪದವ ಹಡೆವಡೆ ನಿಕ್ಷೇಪಧಾರಿಣಿಯಾಗಿರಬೇಕು.
ಗುರುವೆಂಬಂಜನ ಶಿಷ್ಯನೆಂಬ ಪಾಯಾಳು,
ಲಿಂಗವೆ ಕಡವರ, ಆಚಾರವೆ ದಿಗ್ಭಂಧನ,
ಭಕ್ತಕಾಯ ಮಮಕಾಯವೆಂಬುದು
ಕೂಡಲಚನ್ನಸಂಗಯ್ಯನ ವಚನ.

೧೩      

ಅಱಸಿದ ಬಳ್ಳಿ ಕಾಲಕ ಸುತ್ತಿತ್ತೆಂಬಂತೆ
ಬಯಸಿದ ಬಯಕೆ ಕೈಸಾರುವಂತೆ
ಬಡವ ನಿಧಾನವ ನೆಡಹಿಕಂಡಂತೆ
ತಾನಱಸುತಱಸುತ ಬಂದು ಭಾವಕ್ಕಗಮ್ಯವ ಕಂಡೆನಯ್ಯ.
ಎನ್ನಱುವಿನಱುಹ ಕಂಡೆನಯ್ಯ
ಎನ್ನೊಳಹೊಱಗೆ ಸರ್ವಾಂಗ ಪರಮ ಪ್ರಕಾಶದೊಳ್
ಬೆಳಗುವ ಜ್ಯೋತಿಯ ಕಂಡೆ ನೋಡಾ.
ಕುಱುಹಳಿದು ಕರಸ್ಥಲದ ನಿಬ್ಬೆಱಗಿನ ನೋಟದ
ಪರಮಗುರುವ ಕಂಡು ಬದುಕಿದೆನು ಕಾಣಾ ಗುಹೇಶ್ವರ.

೧೪

ಒಳಹೊಱಗೆಂಬ ಉಭಯ ಸಂದೇಹದಿಂದ
ಗುರುಶಿಷ್ಯರೆಂದು ನುಡಿದುಕೊಂಡು ನಡೆಯಬೇಕಾಯಿತ್ತಲ್ಲದೆ
ಒಳಹೊಱಗೆಂಬುಭಯ ಸಂದೇಹವಳಿದು ಜೀವ ಪರಮರೆಂಬುಭ-
ಯವು ಪರಮನೊಬ್ಬನೆಯೆಂದು ತಿಲಿದಡೆ
ಆ ಗುರುವೆ ಶಿಷ್ಯ, ಶಿಷ್ಯನೆ ಗುರುವಾದುದೆನೇನೆಂಬೆನಯ್ಯ
ಮಹಾಲಿಂಗ ಗುರು ಶಿವಸಿದ್ಧೇಶ್ವರಪ್ರಭುವೆ.

೧೫

|| ತ್ರಿವಿಧಿ ||

ಶ್ರೀ ಗುರುವೆ ಸಲಕಲ್ಲೆ ಶ್ರೀಗುರುವೆ ನಿಷ್ಕಲಕೆ
ಶ್ರೀಗುರುವೆ ತುರಿಯ ತುರಿಯಾತೀತಕೆ
ಶ್ರೀ ಗುರುವೆ ಆರೈದು ಓರಂತೆ ಸಲಹಿದಡೆ
ಅನು ನೀನಾದೆನೈ ಯೋಗಿನಾಥ.

೧೬
ನಿರವಧಿಕ ನಿತ್ಯನು ಹರುಷದಿಂ ಬರಲೀಗ
ಹರುಷ ಶಿವಸುಖ ಮುಂದೆ ಕಾಣಬಂತು
ಗುರುಮಾರ್ಗ ಜ್ಞಾನಸಂಬೋಧೆಯನಱಿದೀಗ
ಹರನೆ ನೀನಾ [ನಾ] ನೆ ದೆ ನೈ ಯೋಗಿನಾಥ.

೧೭

ರಾಜಗುಣಸಂಬಂಧ ರಾಜ ತಾ ಬಂಧವೆನೆ
ರಾಜ ಶಿವತತ್ವೈಕ ಬಂದನಯ್ಯ
ರಾಜಗುರುಮೂರ್ತಿಯ ಕಂಡು ನಾ ಭಜಿಸಲ್ಕೆ
ನಾನು ನೀನಾದೆನೈ ಯೋಗಿನಾಥ.