|| ವೃತ್ತ ||          

ಗುರುವಚನ ಪ್ರಮಾಣಮಖಿಲಾರ್ಯ ಪುರಾತನ ದಿವ್ಯಸೂಕ್ತಿಗಳ್
ನಿರವಧಿಕ ಪ್ರಮಾಣಮಮಲಾಗಮಶೈವರಹಸ್ಯವಾಕ್ಯ ತ
ತ್ಪರ ಮತವೇ ಪ್ರಮಾಣಮನುವಾಸರಮಂಗದ ಲಿಂಗದೈಕ್ಯ ನಿ
ರ್ಭರ ಮತವೇ ಪ್ರಮಾಣವೆರಡೆಂಬುದು ಬಂಧಕರಂ ಶಿವಾಧವಾ.    

|| ವಚನ ||         

ಬಸುಱೆ ಬಾಯಾಗಿಪ್ಪುವ ತೋಱಿದ,
ಕಣ್ಣೆ ತಲೆಯಾಗಿ ತಲೆಯೆ ಕಣ್ಣಾಗಿ ಇರಿಸಿದ,
ಕಾಲೆ ಕೈಯಾಗಿ ಕೈಯೆ ಕಾಲಾಗಿ ನಡೆಸಿದ
ನೆಳಲಸುಟ್ಟ ಸೀರೆಯನುಡಗರೆಯ ಕೊಟ್ಟನು.
ಮಥನವಿಲ್ಲದ ಸಂಗಸುಖವನೆನಗೆ ತೋಱಿದನು.
ಕೂಡಲಸಂಗಮದೇವಾ, ಪ್ರಭುವಿನ ಶ್ರೀಪಾದಕ್ಕೆ
ನಮೋ ನಮೋ ಎನ್ನುತ್ತಿದ್ದೆನು.

ಎಲ್ಲರ ದೀಕ್ಷೆಯ ಪರಿಯಂತಲ್ಲ ಎಮ್ಮಯ್ಯನ ದೀಕ್ಷೆ,
ನಡೆನುಡಿ ಶುದ್ಧವಾದವರಿಗಲ್ಲದೆ ಅನುಗ್ರಹಿಸ ನೋಡಾ,
ಬಿಲ್ಲು ಬೆಳವಲಕಾಯ ಹಿಡಿದಂತೆ,
ಸಂಸಾರಕ್ಕಲ್ಲ ಪರಮಾರ್ಥಕಲ್ಲದ ಜಡರನೊಲ್ಲ,
ದೀಕ್ಷೆಯ ಕೊಡನು, ಭವಭಾರಿಗಳ ಮುಖದತ್ತ ನೋಡನಯ್ಯಾ
ಕೂಡಲ ಚನ್ನಸಂಗಯ್ಯನೆಂಬ ಜ್ಞಾನಗುರು.

ಜ್ಯೋತಿಯೊಳಗಿಪ್ಪ ಕರ್ಪುರಕ್ಕೆ, ಅಪ್ಪುವಿನೊಳಗಿಪ್ಪ ಉಪ್ಪಿಂಗೆ
ಶ್ರೀಗುರುವಿನೊಳಗಿಪ್ಪ ಶಿಷ್ಯಂಗೆ
ಬೇಱೆ ಬೇಱೆ ಕ್ರಿಯಾವರ್ತನೆಯುಂಟೆ ಗುಹೇಶ್ವರಾ?

ಏರಿಯ ಕಟ್ಟಬಹುದಲ್ಲದೆ ನೀರತುಂಬಬಹುದೆ?
ಕೈದುಕೊಡಬಹುದಲ್ಲದೆ ಕಲಿತನವಕೊಡಬಹುದೆ?
ವಿವಾಹವ ಮಾಡಬಹುದಲ್ಲದೆ ಪುರುಷತನವನಱಸಬಹುದೆ?
ಘನವ ತೋಱಬಹುದಲ್ಲದೆ ನೆನಹನಿರಿಸಬಹುದೆ?
ಓದೊಕ್ಕಾಲು ಬುದ್ಧಿಮುಕ್ಕಾಲುಯೆಂಬ ಲೋಕದ ಗಾದಿಯ ಮಾತಿನಂತೆ    ಸ
ದ್ಗುರು ಕಾರುಣ್ಯವಾದಡು ಸಾಧಿಸದವನಿಲ್ಲ ಸಕಳೇಶ್ವರಾ.

ಸಾವೋಜೀವಕ್ಕೆ ಗುರುಬೇಡ, ಸಾಯದ ಜೀವಕ್ಕೆ ಗುರುಬೇಡ.
ಗುರುವಿಲ್ಲದೆ ಕೂಡಲುಬಾರದು. ಇನ್ನಾಠಾವಿಂಗೆ ಗುರುಬೇಕು?
ಸಾವಜೀವ ಸಾಯದ ಠಾವ ತೋರಬಲ್ಲಡೆ
ಆತನೆ ಗುರು ಕಾಣಾ, ಗುಹೇಶ್ವರಾ.

ಇಂದು ನಾಳೆ ಮುಕ್ತಿಯ ಪಡೆವೆನೆಂಬ ಶಿಷ್ಯಂಗೆ
ಮುಂದಳ ಮುಕ್ತಿಯ ತೋಱಿಹೆನೆಂಬ ಗುರುಗಳ ನೋಡಿರೆ!
ಹೋಮ, ನೇಮ, ಜಪ, ತಪಗಳ ಮಾಡಿ ತಾನುಂಡು
ಫಲವುಂಟೆಂದೆ ಗುರು ಹುಸಿದು ಸತ್ತ, ಶಿಷ್ಯ ಹಸಿದು ಸತ್ತ,
ಹಿಂದಣ ಕಥೆಯ ಹೇಳುವಾತ ಹೆಡ್ಡ, ಮುಂದಣ ಕಥೆಯ
ಹೇಳುವಾತ ಮೂಢ, ಇಂದಿನ ಘನವ ಹೇಳುವಾತನೆ ಹಿರಿಯನಯ್ಯಾ.
ತಾ ಹುಟ್ಟಿದಂದೆ ಯುಗಜುಗಂಗಳು ಹುಟ್ಟಿದವು, ತಾನಳಿದಲ್ಲೆ ಯುಗಜುಗಂಗಳಳಿದವು.
ತನ್ನನೇತ್ರಕ್ಕಿಂಪಾದುದೆ ಸುವರ್ಣಸುವಸ್ತು, ತನ್ನ ಶ್ರೋತ್ರಕೆ
ಸೊಂಪಾದುದೆ ವೇದಶಾಸ್ತ್ರ, ಪುರಾಣ.
ತನ್ನ ಘ್ರಾಣಕ್ಕಿಂಪಾದುದೆ ಪರಿಮಳ, ತನ್ನ ಜಿಹ್ವೆಗಿಂಪಾದುದೆ ರುಚಿ,
ತನ್ನ ಮನ ಮುಳುಗಿದುದೆ ಲಿಂಗ.
ತನ್ನ ನೆತ್ತಿಯಲ್ಲಿ ಸತ್ಯರ್ಲೋಕ, ಪಾದದಲ್ಲಿ ಪಾತಾಳಲೋಕ,
ನಡುವೆ ಹನ್ನೆರಡು ಲೋಕ
ಅಂಡಜ ಪಿಂಡಜ ಉಧ್ಭಿಜ ಜರಾಯುಜವೆಂಬ ಎಂಬತ್ತು ನಾಲ್ಕು ಲಕ್ಷ ಜೀವರಾಶಿಗಳು.
ತನ್ನಲ್ಲಿ ಕಾಯವು, ತನ್ನಲ್ಲಿ ಜೀವವು, ತನ್ನಲ್ಲಿ ಪುಣ್ಯವು,
ತನ್ನಲ್ಲಿ ಪಾಪವು, ತನ್ನಲ್ಲಿ ಶಬ್ದವು, ತನ್ನಲ್ಲಿ ನಿಶ್ಯಬ್ದವು.
ಒಂದು ಒಡಲೆಂಬ ಊರಲ್ಲಿ ಒಂಬತ್ತು ಶಿವಾಲಯವು
ಆ ಶಿವಾಲಯದ ಶಿಖರದ ಮೇಲೆ ಶಿವಲಿಂಗದೇವರು
ಪೂರ್ವಭಾಗದಲ್ಲಿ ಚಂದ್ರಾದಿತ್ಯರು, ಪಶ್ಚಿಮ ಭಾಗದಲ್ಲಿ ಪರಶಿವನು,
ಉತ್ತರ ಭಾಗದಲ್ಲಿ ಮಹೇಶ್ವರನು, ದಕ್ಷಿಣ ಭಾಗದಲ್ಲಿ ರುದ್ರನು.
ಇಂತೀ ಪಂಚೈವರ ಮನದ ಕೊನೆಯ ಕೀಲಿನ ಸಂಚವನಱಿದು
ತುರ್ಯಾವಸ್ಥೆಯಲ್ಲಿ ನಿಲಿಸಿ ಒಡಲುವಿಡಿದು ಕಾಂಬುದೆ ಉಪಮೆ.
ಈ ಘಟ ದೇವತೆಯ ಸಟೆಯೆಂದು ಬಿಸುಟು ಮುಂದೆ ತಾ ದಿಟವೊಪ್ಪು ದಿನ್ನೆಲ್ಲಿಯದೊ
ಪೃಥ್ವಿಯಳಿದಂದೆ ಭೋಗಾದಿ ಭೋಗಂಗಳಳಿದವು.
ಅಪ್ಪುವಳಿದಂದೆ ಮಾಯಾಮೋಹಾದಿಗಳಳಿದವು,
ತೇಜವಳಿದಂದೆ ಹಸಿವು ತೃಷೆಯಂಗಳಳಿದವು.
ವಾಯುವಳಿದಂದೆ ನಡೆನುಡಿ ಚೈತನ್ಯಂಗಳಳಿದವು
ಆಕಾಶವಳಿದಂದೆ ಅವು ಅಲ್ಲಿಯೆ ಲೀಯ್ಯವಾಯಿತ್ತು.
ಇದು ಕಾರಣ ಉರಿಕೊಂಡ ಕರ್ಪುರದ ಕರಿಕಂಡವರೆಂಟೆ?
ಅಪ್ಪುವುಂಡ ಉಪ್ಪಿನಹರಳ ಮರಳಿ ಹೊಱೆಯಕಟ್ಟಿ ಹೊತ್ತವರುಂಟೆ?
ವಾಯುಕೊಂಡ ಜ್ಯೋತಿಯ ಬೆಳಗ ಕಂಡೆವರುಂಟೆ?
ಹರಿಬ್ರಹ್ಮಾದಿಗಳ್ಗೆಯು ಕಾಣಬಾರದಾಗಿ.
ಮಣ್ಣಿನ ಸಾರಾಯದಿಂದ ಮರನುತ್ಪತ್ಯ,
ಮರದ ಸಾರಾಯದಿಂದ ಎಲೆಯುತ್ಪತ್ಯ.
ಎಲೆಯ ಸಾರಾಯದಿಂದ ಹುವ್ವ ಉತ್ಪತ್ಯ.
ಹುವ್ವಿನ ಸಾರಾಯದಿಂದ ಹಣ್ಣು ಉತ್ಪತ್ಯ.
ಕಾಯಿ ಸಾರಾಯದಿಂದ ಹಣ್ಣು ಉತ್ಪತ್ಯ.
ಹಣ್ಣಿನ ಸಾರಾಯದಿಂದ ರುಚಿ ಉತ್ಪತ್ಯ.
ರುಚಿಯಿಂದತ್ತ ಇಲ್ಲವೆಂಬ ತತ್ವ.
ಮಣ್ಣು ಮರನು ಆಳಿದ ಬಳಿಕೆ ಬೇಱೆ ರುಚಿಯಿಪ್ಪ ಠಾವುಂಟೆ?
ದೇಹವಳಿದ ಬಳಿಕ ಪ್ರಾಣವಿಪ್ಪುದಕ್ಕೆ ಠಾವುಂಟೆ? ಇಲ್ಲವಾಗಿ;
ಇದು ಕಾರಣ, ಗುಹೇಶ್ವರನೆಂಬ ಲಿಂಗವ ಒಡಲು ವಿಡಿದು ಕಂಡೆ ಕಾಣಾ
ಸಿದ್ಧರಾಮಯ್ಯ

ಪೂರ್ವಜನ್ಮ ನಿವೃತ್ತಿಯಾಗಿ ಶ್ರೀಗುರುವಿನ ಕರಕಮಲದಲ್ಲಿ ಜನಿಸಿದ ಸದ್ಭಕ್ತನ
ಪಂಚಭೌತಿಕದ ತನುವೆಂಣದು ನುಡಿಯಬಹುದೆ?
ಉತ್ತಮ ಅಧಮ ತೃಣವೆಲ್ಲವು ಅಗ್ನಿಯುಮುಟ್ಟಲು ಭಸ್ಮವಾದ ಹಾಗೆ
ಬೆಳಗುತಿಹ ಜ್ಯೋತಿಯಲ್ಲಿ ಮತ್ತೊಂದು ಬತ್ತಿಯ ಮುಟ್ಟಿಸಲು, ಅದೊಂದೆ ಜ್ಯೋತಿಯಾದ ಹಾಗೆ,
ಜ್ಯೋತಿರ್ಮಯಲಿಂಗವ ಮುಟ್ಟದ ತನು ಕೇವಲ ಜ್ಯೋತಿರ್ಮಯ ಲಿಂಗವೆ ಆಯಿತ್ತಾದ ಕಾರಣ.
ಇನ್ನು ಆ ಸದ್ಭಕ್ತಂಗೆ :
ಆಧಾರ, ಸ್ವಾಧಿಷ್ಟಾನ, ಮಣಿಪೂರಕ, ಅಣಾಹುತ, ವಿಶುದ್ಧಿ, ಆಜ್ಞೇಯ,
ಬ್ರಹ್ಮರಂದ್ರ, ವರ್ಣದಳಾಕ್ಷರ, ಅಧಿದೇವತೆ ಎಂದು ಸಂಭಂದಿಸಿ ನುಡಿಯಬಹುದೆ?
ಶುಕ್ಲ ಶೋಣಿತವ ಮಾಡಿಕೊಂಡಿಹ ಜಡಾತ್ಮರ ಹಾಗೆಂದು ವರ್ಣಿಸಿ ನುಡಿಯಬಹುದೆ?
ಆ ಸದ್ಭಕ್ತನು ಅದೆಂತೆದೆಡೆ :
ಭಕ್ತಕಾಯನೋ ಮಮಕಾಯೋ ಮಮಕಾಯಸ್ತುಭಕ್ತವೈ ಎಂದುದಾಗಿ
ಇಂತೀ ಎನ್ನೊಳ ಹೂಱಗೆ ತೆಱಹಿಲ್ಲದ ಸರ್ವಾಂಗವೆಲ್ಲವ ಲಿಂಗಮಾಡಿದನು
ಕೂಡಲವನ್ನಸಂಗಯ್ಯ ಎನ್ನ ಶ್ರೀಗುರುಲಿಂಗವು.

ಅಱುಹು ತಲೆದೊಱೆತ್ತೆಂದು ಗುರುಹಿರಿಯರ ಜಱಯಲಾಗದಯ್ಯ
ಗುರುವನು ಜಱೆಯೆ, ಹಿರಿಯರನು ಜಱೆಯೆ,
ಅದೇನು ಕಾರಣವೆಂದಡೆ :
ಗುರುವೆ ಸದ್ರೂಪು, ಲಿಂಗವೆ ಚಿದ್ರೂಪು, ಜಮಗಮನೆ ಆನಂದಸ್ವರೂಪವು
ಇವು ಮೂಱು ಬಱೆಯ ಅಱೆವು ಸ್ವರೂಪವು, ಅವಱೆಯಲುಂಟೆ?
ನಡುವಣ ಪ್ರಕೃತಿಯ ಜಱೆವುತಿಪ್ಪೆನಯ್ಯಾ.
ಆ ಪ್ರಕೃತಿಯ ಜಱದಡೆ ಗುರುಹಿರಿಯರಿಗೆ ನಿಮಗೇಕೆ ದುಮ್ಮಾನವಯ್ಯಾ
ಪ್ರಕೃತಿಯೇನು ನಿಮ್ಮಸೊಮ್ಮೆ ಬೀಱಯ್ಯಾ?
ಜೀವನೋಪಾಯಕ್ಕೆ ಪಾರಮಾರ್ಥವನಲ್ಲಾ ಎಂಬ ಪ್ರಪಂಚಿಗಳ
ಮೆಚ್ಚ ನಾ ಕಾಣಾ ಮಹಾಲಿಂಗ ಗುರುಸಿದ್ದೇಶ್ವರ ಪ್ರಭುವೆ.

ಕರಣಂಗಳೆಲ್ಲವನು ಹೆದುಳದಿಂದಲಿ ಬೆಳಗಿ
ಕರುಣದಿಂದಿರಿಸಿದನು ತೂಗಿ ತೂಗಿ.
ಕರಣಹರನು ಪರಹರಣನಾಗಿಪ್ಪ ನಿರ್ಮಾಣ
ಪದವನಿತ್ತಾತ ಗುರು ಯೋಗಿನಾಥಾ.

೧೦

ಕೋಳು ಹೋಯಿತು ದುರ್ಗ ಅಳು ಸಿಕ್ಕಿದ ಧೀರ,
ಏಳೆಂಟು ದುರ್ಗವದಱೊಡನೆ ಹೋಗೆ,
ಕಾನನದ ಕಾರುಣ್ಯ ಕಂಗೆಡಲು ಆನೆಂಬು.
ದೇನೊಂದು ರೂಪು ಹೇಳಾ.
ಸ್ವಾನುಬಾವದ ದೀಕ್ಷೆ ತಾನು ತನ್ನೊಳಗಾಗೆ,
ಏನುವಱೆದಿಲ್ಲವೈ ಯೋಗಿನಾಥಾ.

೧೧

ಮೂಱು ಗ್ರಾಮಕ್ಕೀಗ ಮುನಿಮೂರ್ತಿ ತಾ ಬಂದ
ಮೂಱು ಶಿವತತ್ವಕ್ಕೆ ಮೂರ್ತಿ ಬಂದ
ಆಱೂಢಪದವಿತ್ತ ಗುರುಮೂರ್ತಿ ದೆಸೆಯಿಂದ
ಆನು ನೀನಾದೆನೈ ಯೋಗಿನಾಥ.