|| ವೃತ್ತ ||

ಶಿರಮಂ ಜಿಹ್ವೆಯ ನಕ್ಷಿಯಂ ಕರಮನೇಕೀವವೃಥಾಭಕ್ತಿ ತ
ತ್ಪರಭಾವಂ ನೆಲೆಗೊಳ್ಳದಜ್ಞರಿದಱಿಂದೇಂ ಸಿದ್ಧಿ ತನ್ನಂ ಶಿವಂ
ಗಿರದೀವುತ್ತಮ ಸತ್ವಮಂ ಮಱೆದು ತನ್ನಿಂದನ್ಯಮಪ್ಪಂಗಮಂ
ಅಱಿದಿತ್ತಲಿ ವಿಮುಕ್ತಿ ಸೌಖ್ಯಪದಮುಂಟೆ ಪೇಳ್ ಶಿವಾವಲ್ಲಭಾ.   

|| ವಚನ ||         

ಭಕ್ತಿಯೆಂಬ ಪಿತ್ತ ತಲೆಗೇಱಿ ಕೈಲಾಸದ ಬಟ್ಟೆಯ ಹತ್ತುವ ವ್ಯರ್ಥರ ಕಂಡು
ಎನ್ನ ಮನ ನಾಚಿತ್ತು, ನಾಚಿತ್ತು.
ಕೈಲಾಸವೆಂಬುದೇನೊ, ಪೃಥ್ವಿಯ ಮೇಲೊಂದು ಮೊರಡಿ.
ಆ ಪೃಥ್ವಿಗೆಯು ಲಯವುಂಟು; ಆ ಮೊರಡಿಗೆಯು ಲಯವುಂಟು;
ಅಲ್ಲಿಪ್ಪ ಗಂಗೆವಾಳುಕಸಮರುದ್ರರಿಗೆಯು ಲಯವುಂಟು.
“ಯದೃಷ್ಟಂ ತನ್ನಷ್ಟಂ” ಎಂಬ ಶ್ರುತಿಯನೋದಿ ತಿಳಿದು,
ಬಟ್ಟಬಯಲ ತುಟ್ಟಿತುದಿಯ ಮೆಟ್ಟಿನಿಂದ
ಕೂಡಲಸಂಗಾ ನಿಮ್ಮ ಶರಣ.

ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶದಲೊದಗಿದ ತನುವಿನ
ಭೇದವ ನೋಡಿರೆ,
ತಮ್ಮ ತಮ್ಮ ವಿಶ್ರಾಮಕ್ಕೆ ತನುಸವೆದು ಹೋಗುತ್ತಿದೆ;
ಮುಂದೆ ದೇವರ ಕಂಡೆಹೆನೆಂಬುದಕ್ಕೆ ಇನ್ನೆಲ್ಲಿಯ ತನುವೊ?
ಅಕಟಕಟಾ ಜಡದೇಹಿಗಳೆಲ್ಲ ಜಡವನೆ ಪೂಜಿಸಿ, ಹತ್ತಿದರಲ್ಲಾ
ಕೈಲಾಸದ ಬಟ್ಟೆಯ
ಅಲ್ಲಿಯೂ ಪ್ರಾಯ ತಪ್ಪೋದಲ್ಲದೆ ಪ್ರಳಯ ತಪ್ಪದು.
ಹಿಂದೆ ಅಸಂಖ್ಯಾತ ಮಹಾಗಣಂಗಳೆಲ್ಲರು ಲಾಭಕ್ಕೆ ವ್ಯವಹಾರವ ಮಾಡಿದರಲ್ಲದೆ ಅವರು ಭಕ್ತರಲ್ಲ.
ನಾನು ಅಚಲಲಿಂಗ ಸೋಂಕಿನ ಅನುಭಾವ ಸಂಬಂಧಿಯಾದ ಕಾರಣ
ಕೈಲಾಶದ ಬಟ್ಟೆ ಹಿಂದಾಯಿತ್ತು;
ನಾನು ಬಟ್ಟ ಬಯಲಾದೆನು ಕಾಣಾ, ಕೂಡಲಸಂಗಮದೇವಾ.

ಅದಿಯನಱಿಯದೆ ಅನಾದಿಯಿಂದತ್ತ ತಾನಾರೆಂಬುದ ವಿಚಾರಿಸಿ ತಿಳಿದು ನೋಡದೆ
ಮಾಡಿದಡೆ ಫಲವೇನಯ್ಯ ಬಸವಯ್ಯ?
ಸಾವನ್ನಕ್ಕ ಶ್ರವ ಮಾಡಿದಡೆ ಕಾದುವ ದಿನವಿನ್ನಾವುದೊ ಬಸವಯ್ಯ?
ಬಾಳುವನ್ನಕ್ಕ ಭಜನೆ ಮಾಡಿದಡೆ ತಾನಹದಿನವಿನ್ನಾವುದೊ ಬಸವಯ್ಯಾ?
ಇದು ಕಾರಣ ಮರ್ತ್ಯಲೋಕದ ಭಕ್ತರುಗಳೆಲ್ಲರು ತತ್ವನಱಿಯದೆ
ಮಿಥ್ಯವನೆ ಹಿಡಿದು ಮಿಥ್ಯವನೆ ಪೂಜಿಸಿ ವ್ಯರ್ಥರಾಗಿ ಹೋದರು
ತಮ್ಮ ತಾವಱಿಯದೆ ಕೆಟ್ಟರು.
ತಲೆಯ ಕೊಯಿದು, ದೇಹವ ಕಡಿದು, ಕಣ್ಣ ಕಳೆದು, ಹೊಟ್ಟೆಯ ಸೀಳಿ,
ಮಗನ ಕೊಂದು ಬಾಣಸವಮಾಡಿ, ವಾದಿಗೆ ಪುರಂಗಳನೊಯಿದು
ಕಾಯವೆರಸಿ ಕೈಲಾಸಕ್ಕೆ ಹೋದವರು ಭಕ್ತರಪ್ಪರೆ?
ಅವರಿಗೆ ಶಿವಪಥವು ಸಾಧ್ಯವಾಯಿತ್ತೆ? ಭವ ಹಿಂಗಿತ್ತೆ?
ಅದು ಸಹಜವೆ? ಅಲ್ಲಲ್ಲ. ನಿಲ್ಲು, ಮಾಣು.
ನರಲೋಕದವರೆಲ್ಲರು ನರಸಂಸಾರಕ್ಕೊಳಗಾದರು,
ಮುನಿ ಜನಂಗಳೆಲ್ಲರು ತಪವೆಂಬ ಸಂಸಾರಕ್ಕೊಳಗಾದರು,
ಲಿಂಗವ ಹಿಡಿದವರೆಲ್ಲರು ಫಲ ಪದಂಗಳೆಂಬ ಸಂಸಾರಕ್ಕೊಳಗಾದರು,
ಜಂಗಮವ ಹಿಡಿದವರೆಲ್ಲರು ಸಾಯುಜ್ಯವೆಂಬ ಸಂಸಾರಕ್ಕೊಳಗಾದರು,
ಇಂತಿ ಸಂಕಟಕ್ಕೊಳಗಾದವರೆಲ್ಲ ಮಾಯೆಯ ಹೊಡೆಗಿಚ್ಚಗೆಲಬಲ್ಲರೆ?
ಇದು ಕಾರಣ ನಿತ್ಯ ನಿಜ ತತ್ವ ತಾನೆಂದಱಿಯದೆ ತತ್ವಮಸಿ
ವಾಕ್ಯವ ಹೊಱ ಹೊಱಗನೆ ಬಳಸಿ ಕೆಟ್ಟರಲ್ಲ ಹಿರಿಯರು,
ಸತ್ತರಲ್ಲ ನಾಯ ಸಾವ. ಸತ್ತವರ ಹೆಸರ ಪತ್ರವ ನೋಡಿದರೆ
ಅದೆತ್ತಣ ಮುಕ್ತಿಯೋ ಗುಹೇಶ್ವರಾ?

ಮಹಾಭಕ್ತರು ಮಾಡುವ ಅಭ್ಯಾಸ ಕ್ರಿಯಾಲೇಸಿನ ಭಕ್ತಿಯ ಕೇಳಿರಣ್ಣ
ಜಂಗಮದ ಕೈಯಲ್ಲಿ ಅಸಿ ಕೃಷಿ ಮಾಣಿಜ ಮುಂತಾದ ಊಳಿಗವ
ಮಾಡಿಸಿಕೊಂಡು ಪ್ರಸಾದವ ಕೊಂಬ ಪಂಚಮಹಾಪಾತಕರ
ಅಂಗಳವ ಮೆಟ್ಟಿದಡೆ, ಅವರ ಸಂಗದಲ್ಲಿ ನುಡಿದಡೆ ಕುಂಭಿಪಾತಕ
ಅವರ ಹಿಂಗದಿರ್ದಡೆ ಲಿಂಗವಿಲ್ಲ, ಪಂಚಾಚಾರ ಶುದ್ಧಕ್ಕೆ ಹೊಱಗು
ಇದು ಕಾರಣ ಮಾಟಕೂಟದ ಭಕ್ತರೆಲ್ಲ ಜಗದಾಟವ ಡೊಂಬರೆಂದೆ
ಈಶನಾಣೆ ತಪ್ಪದು ನಿಷ್ಕಳಂಕ ಮಲ್ಲಿಕಾರ್ಜುನ.

ತಾಯಗರ್ಭದ ಶಿಶು ತಾಯ ಮುಖವನೆಂತು ಅಱಿಯದು
ತಾಯೆ ಶಿಶುವಿನ ಮುಖವನೆಂತು ಅಱಿಯಳು
ಮಾಯೆಯೊಳಗಿರ್ದ ಭಕ್ತ ದೇವರನೆಂತು ಅಱಿಯ
ದೇವರ ಭಕ್ತನಸಿದು ಅಱಿಯ ಕಾಣಾ ರಾಮನಾಥ.

ಗುರು ಲಿಂಗ ಜಂಗಮವೆ ಶಿವನೆಂದು ಅಱಿದು ಮಱಿವನು ಶಿವಭಕ್ತನೆ ಅಲ್ಲ.
ಶಿವಭಕ್ತನು ಅಱಿದ ಬಳಿಕ ಮಱೆಯನು
ಅಱಿದು ಮಱಿವನು ಮದ್ದುಕುಣಿಕೆಯ ಕಾಯ
ಮೆದ್ದವನು, ಮದ್ಯಮಾಂಸವ ಸೇವಿಸಿದವನು.
ಅಱಿದು ಮಱಿದವನು ಅಜ್ಞಾನಿಗಳ ಸಂಗವ ಮಾಡಿದವನು
ಸ್ವಾನನ ಮಿತ್ರನು
ಅವಂದಿರುಗಳಿಗೆ ಅಱಿವು ಮಱಿವೆ ಸಹಜವಾದ ಕಾರಣ
ಅಱಿದು ಮಱಿವವನಲ್ಲ ಶಿವಭಕ್ತನು. ಮಱಿದು ಅಱೆವವನಲ್ಲ ಶಿವಭಕ್ತನು,
ನಂಬಿದವನಲ್ಲ ಶಿವಭಕ್ತನು ನಂಬಿಕೆಡದವನಲ್ಲ ಶಿವಭಕ್ತನು,
ವಿಶ್ವಾಸವ ಮಾಡುವನಲ್ಲ ಶಿವಭಕ್ತನು
ಅವಿಶ್ವಾಸಮಾಡುವನಲ್ಲ ಶಿವಭಕ್ತನು.
ಮಱೆದಡೆಯು ಮಱೆದವನಂತೆ, ಅಱೆದಡೆಯ ಶಿವನು
ಉರುಲಿಂಗ ಪೆದ್ದಿಪ್ರಿಯ ವಿಶ್ವೇಶ್ವರಾ.

ಭಕ್ತ ಜಂಗಮಕ್ಕೆ ಲೆತ್ತ, ಪಗಡಿ, ಚದುರಂಗ ಜೂಜು,
ಕಳಹು, ಕರ್ಕಶ, ಪನಡಿ, ಪರಿಹಾಸ, ಕಸ, ರಸ, ವಿನೋದ
ಕುಚಿತ, ಕುಟಿಲ, ಕುಹಕ, ಅಟಮಟ, ಸಟೆ, ಸಂಕಲ್ಪ
ಉದಾಸೀನ, ನಿರ್ದಯ, ನಿರ್ದಾಕ್ಷಿಣ್ಯ, ದಾಸಿ, ವೇಶ್ಯೆ, ಪರಸ್ತ್ರೀ,
ಪರಧನ, ಪರಾಪೇಕ್ಷೆ, ಪರದೈವ, ಭವಿಸಂಗ ಇಷ್ಟುಳ್ಳನಕ್ಕ
ಅದನು ನಾಯಡಗು, ನರಮಾಂಸ ಕ್ರಿಮಿಕೀಟನು, ಸುರಾಪಾನ    ಸೇವಕನಪ್ಪನಲ್ಲದೆ
ಅವ ಭಕ್ತನಲ್ಲ, ಜಂಗಮವಲ್ಲ.
ಅದೆಂತೆಂದಡೆ:    ಅಕ್ಷದೂತ ವಿನೋದಶ್ಚ ನೃತ್ಯಗೀತ ಸಮೋಹನಂ
ಅಪಶಬ್ದ ಪ್ರಯೋಗಶ್ಚ ಜ್ಞಾನಹೀನಸ್ಯ ಕಾರಣಂ
ತಸ್ಕರಂ ಪಾರದಾರ್ಯಂ ಸ್ಯಾದನ್ಯದೇವಸ್ಯ ಪೂಜನಂ|
ಅನೃತಂ ನಿಷ್ಠುರಂ ನಿಂದಾ ಚೇತಿ ಚಂಡಾಲ ಲಕ್ಷಣಂ ||
ಭಂಗಿ ಅಪಿಮಿ ಬೆಕ್ಕು ನಾಯಿ ಇಷ್ಟುಳ್ಳನಕ್ಕ
ಅವಭಕ್ತನಲ್ಲ, ಜಂಗಮವಲ್ಲ.
ಅವರಿಬ್ಬರ ಮೇಳಾಪದ ಪರಿಯೆಂತೆಂದಡೆ:
ಈ ಹಂದಿ ಹೇಲ ತಿಂದು ಒಂದರ ಮೋರೆಯನೊಂದು
ಮೂಸಿದಂತಾಯಿತ್ತೆಂದ ಕಲಿದೇವರದೇವಯ್ಯಾ.

ಅಂಗದ ಮೇಲೆ ಲಿಂಗವ ಬಿಹಯಂಗೈಸಿಕೊಂಡು
ಲಿಂಗವಿಲ್ಲದಂಗನೆಯರನಪ್ಪಿದಡೆ ಸುರಾಭಾಂಡವನಪ್ಪಿದಂತೆ ಕೇಳಿರಣ್ಣ
ಲಿಂಗಸಾಹಿತ್ಯವಾಗಿರ್ದು ಲಿಂಗವಿಲ್ಲದ ಸತಿಯರ
ಕೂಡಿಕೊಂಡಿಹ ಪರಿಯೆಂತಯ್ಯ!
ಲಿಂಗವುಳ್ಳ ತನು ಲಿಂಗವಿಲ್ಲದ ತನುವಿನೊಡನೆ
ಸಂಯೋಗಮಂ ಮಾಡಿದಡೆಂತಕ್ಕು
ಹಾಲ ಗಡಿಗೆಯ ಹಂದಿ ಮುಟ್ಟಿದಂತಕ್ಕು!
ಅಂದೆತೆಂದಡೆ:
ಲಿಂಗೇನ ಸಹಿತೋದೇಹೀ ಲಿಂಗಹೀನಾಂ ತು ಯಃ ಸತೀಂ
ಮಣುತೇ ಸಹತೇ ನಿತ್ಯಂ ಕಿಂ ಫಲಂ ಕಿಂ ಕೃತಂ ಭವೇತ್
ಕಿಂ ತೇನ ಕ್ಷೀರಭಾಂಡೇನ ಸೂಕರೈಃ ಸಹ ವರ್ತಿನಾ||
ಎಂದುದಾಗಿ ಲಿಂಗವುಳ್ಳ ಲಿಂಗಾರ್ಚಕರು ಲಿಂಗೈಕ್ಯರು
ಲಿಂಗವಿಲ್ಲದೆ ಭವಿಯಾಗಿರ್ದು ಸತಿಯರ ಆಲಿಂಗನ, ಚುಂಬವ ಮಾಡಿದಡೆ
ಗುರುಕಾರುಣ್ಯ ಉಂಟೆಂದು ಸದ್ಧಾರಣ ಪಕ್ಷದಲ್ಲಿ ಮಾಡಿಕೊಂಡಿರ್ದಡೆ
ಮಾಡಿದ ಲಿಂಗಾರ್ಚನೆ ನಿಷ್ಫಲಂ
ದಶಜನ್ಮಪರಿಯಂತರ ಹೊಲೆಯರಲ್ಲಿಕ್ಕದೆ ಮಾಣ್ಬನೆ
ನಮ್ಮ ದೇವರಾಯ ಸೊಡ್ಡಳ.

ಭವಿಸಂಗವಳಿದು ಶಿವಭಕ್ತನಾದ ಬಳಿಕ ಭಕ್ತಂಗೆ ಭವಿಸಂಗವತಿಘೋರ ನರಕ
ಶರಣಸತಿ ಲಿಮಗ ಪತಿಯಾದ ಬಳಿಕ ಶರಣಂಗೆ ಸತಿಸಂಗ ರತಿ ಘೋರ ನರಕ
ಚನ್ನಮಲ್ಲಿಕಾರ್ಜುನ ಲಿಂಗೈಕ್ಯಂಗೆ ಪ್ರಾಣಗುಣವಳಿಯದವರ ಸಂಗವೆ ಭಂಗ.

೧೦

ಮನಮನವೇಕಾರ್ಥವಾಗದವರಲ್ಲಿ ತನುಗುಣನಾಸ್ತಿಯಾಗದವರಲ್ಲಿ
ಶೀಲಕ್ಕೆ ಶೀಲ ಸಮಾನವಿಲ್ಲದವರಲ್ಲಿ ಬುದ್ಧಿಗೆಬುದ್ಧಿ ಕೂಟಸ್ಥವಾಗ
ದವರಲ್ಲಿ ಭಾವಕ್ಕೆ ಭಾವ ತಾರ್ಕಣೆಯಾಗದವರಲ್ಲಿ ಅವರೊಡನೆ ಕುಳ್ಳಿರಲಾಗದು

ಗಡಣದಲ್ಲಿ ಮಾತನಾಡಲಾಗದು ಅದೇನು ಕಾರಣವೆಂದಡೆ:
ಸಂಸರ್ಗಯಾ ದೋಷಗುಣಾ ಭವಂತಿ ಎಂದುದಾಗಿ
ಮಹಂತ ಸಕಳೇಶ್ವರದೇವ ಸಾತ್ವಿಕ ಸುಭಕುತಿಯನಱಿಯದವರ
ಸಂಗದಿಂದ ಕೈಲಾಸಕ್ಕೆ ದೂರವಾಗಿಪ್ಪರು.

೧೧

ಆಡಿದಡೆ ಸದಾಚಾರಿಗಳೊಡನಾಡುವುದು
ನುಡಿದಡೆ ಸದಾಚಾರಿಗಳೊಡನೆ ನುಡಿವುದು
ಕೂಡಿದರೆ ಲಿಂಗಸಂಗಿಗಳೊಡನೆ ಕೂಡುವುದು
ಲಿಂಗ ನೈಷ್ಠಿಯಿಲ್ಲದವನ ಅಂಗಳವ ಮೆಟ್ಟಲಾಗದು
ಜಂಗಮದೊಡನೆ ಪ್ರೀತಿ ಪ್ರೇಮವಿಲ್ಲದವರೊಡನೆ ಮಾತನಾಡಲಾಗದು
ಪ್ರಸಾದವ ಕೊಳ್ಳದವರ ಸಮಪಂಕ್ತಿಯಲ್ಲಿ ಕುಳಿತು ಪ್ರಸಾದಭೋಗವ ಮಾಡಲಾಗದು.
ಇಂತಪ್ಪ ಭಕ್ತಿಹೀನರ ಕಂಡು ಮನ ಮುನಿಸಮಾಡಿಸಯ್ಯ ರೇಕಣ್ಣಪ್ರಿಯ ನಾಗಿನಾಥ.

೧೨

ಅಯ್ಯಾ, ಮಾತಾಪಿತರಾಗಲಿ ಸಹೋದರ ಬಂಧುಗಳಾಗಲಿ
ಅತ್ಯಂತ ಸ್ನೇಹದಲ್ಲಿ ಕೂಡಿದವರಾಗಲಿ
ಗುರುಕಾರುಣ್ಯವ ಪಡೆದ ಶಿವಸಹೋದರರಾಗಲಿ
ಶಿವಾಚಾರ ಶಿವಕಾರ್ಯಕ್ಕೆ ಸಹಕಾರಿಗಳಾಗಿ ಅನುಕೂಲವಾದಡೆ
ನಮ್ಮವರು, ಅನುಕೂಲವಲ್ಲದವರು ನಮ್ಮವರಲ್ಲ,
ಅದೆಂತೆಂದಡೆ:
ಮಾತರಃ ಪಿತರಶ್ಚೈವ ಭ್ರಾತರೋ ಬಾಂಧವಸ್ತಥಾ
ಶಿವಕಾರ್ಯೇಷು ವಕ್ರಸ್ಥಾ ಹಂತವ್ಯಾಃ ಶೀಘ್ರಿಮೇವಚ ಎಂದುದಾಗಿ
ಇಂತೀ ಶಿವಾಚಾರ ಶಿವಕಾರ್ಯಕ್ಕೆ ವಕ್ರವಾದವರ ಮಾತಿನಲ್ಲಿ
ನೀಕರಿಸಿ ನುಡಿಯದೆ ಮನದಲ್ಲಿ ಪತಿಕರಿಸಿ ಕೂಡಿಕೊಂಡು
ನಡೆದೆನಾದಡೆ ಅಘೋರನರಕದಲ್ಲಿಕ್ಕು ಕಲಿದೇವಯ್ಯ.

೧೩

ಹುಸಿಯಂಕುರಿಸಿತ್ತು ಹೊಲೆಯನಲ್ಲಿ;
ಹುಸಿ ಎರಡೆಲೆಯಾಯಿತ್ತು ಮಾದಿಗನಲ್ಲಿ
ಹುಸಿ ನಾಲ್ಕೆಲೆಯಾಯಿತ್ತು ಸಮಗಾಱನಲ್ಲಿ;
ಹುಸಿ ಆಱೆಲೆಯಾಯಿತ್ತು ಅಗಸನಲ್ಲಿ  ಹುಸಿ ಎಂಟಲೆಯಾಯಿತ್ತು ವ್ಯವಹಾರಿಯಲ್ಲಿ;
ಹುಸಿ ಸಸಿಯಾಯಿತ್ತು ಹಾದರಿಗನಲ್ಲಿ;
ಹುಸಿ ಗಿಡವಾಯಿತ್ತಯ ಮದ್ಯಪಾನಿಯಲ್ಲಿ;
ಹುಸಿ ಮರನಾಯಿತ್ತು ಜೂಜುಗಾಱನಲ್ಲಿ;
ಹುಸಿ ಹೂವಾಯಿತ್ತು ಡೊಂಬರನಲ್ಲಿ; ಹುಸಿ ಕಾಯಾಯಿತ್ತು ಅಕ್ಕಸಾಲಿಗನಲ್ಲಿ;
ಹುಸಿ ಹಣ್ಣಾಯಿತ್ತು ಸೂಳೆಯಲ್ಲಿ;
ಹುಸಿ ಹಣ್ಣಾಗಿ ತೊಟ್ಟುಬಿಟ್ಟಿತ್ತು ಅರಸನಲ್ಲಿ;
ಇಂತೀ ಹುಸಿಯ ನುಡಿವರಿಗೆ,
ಗುರುವಿಲ್ಲ, ಲಿಂಗವಿಲ್ಲ, ಜಂಗಮವಿಲ್ಲ, ಪಾದೋದಕವಿಲ್ಲ, ಪ್ರಸಾದವಿಲ್ಲ,
ಪ್ರಸಾದವಿಲ್ಲವಾಗಿ ಅವರಿಗೆ ಮೋಕ್ಷವಿಲ್ಲದ ಕಾರಣ,
ನಮ್ಮ ಕೂಡಲ ಚನ್ನಸಂಗಯ್ಯನ ಶರಣರು
ಹುಸಿಯ ಬಿಟ್ಟು ಕಳೆದು ನಿಜಲಿಂಗೈಕ್ಯರಾದರು.

೧೪

ಶ್ರೀಗುರು ಸ್ವಾಮಿ ಪೂವಾಶ್ರಯಮಂ ಕಳೆದು ಪುನರ್ಜಾತನ ಮಾಡಿದ ಬಳಿಕ
ಪಂಚಭೂತಕಾಯವ ಕಳೆದು ಪ್ರಸಾದಕಾಯವ ಮಾಡಿದ ಬಳಿಕ
ಎಲ್ಲಿಯ ಕುಲಸೂತಕ, ಎಲ್ಲಿಯ ಛಲಸೂತಕ,   ಎಲ್ಲಿಯ ತನುಸೂತಕ,
ಎಲ್ಲಿಯ ಮನಸೂತಕ
ಎಲ್ಲಿಯ ನೆನವುಸೂತಕ, ಎಲ್ಲಿಯಭಾವಸೂತಕ?
ಇವನೆಂತು ಹಿಡಿಯಲಾಗದು ಸದ್ಭಕ್ತನು.
ಕುಲಸೂತಕ ಉಳ್ಳನ್ನಕ್ಕರ ಭಕ್ತನಲ್ಲ, ಛಲಸೂತಕ ಉಳ್ಳನ್ನಕ್ಕರ   ಮಹೇಶ್ವರನೆಲ್ಲ.
ತನುಸೂತಕ ಉಳ್ಳನ್ನಕ್ಕರ ಪ್ರಸಾದಿಯಲ್ಲ, ಮನಸೂತಕ ಉಳ್ಳನ್ನಕ್ಕರ ಪ್ರಾಣಲಿಂಗಿಯಲ್ಲ.
ನೆನಹುಸೂತಕ ಉಳ್ಳನ್ನಕ್ಕರ ಶರಣನಲ್ಲ, ಭಾವಸೂತಕ ಉಳ್ಳನಕ್ಕರ ಐಕ್ಯನಲ್ಲ.
ಇಂತಿಸೂತಕವ ಮುಂದುಗೊಂಡಿಪ್ಪವರ ಮುಖವ ನೋಡಲಾಗದು ಗುಹೇಶ್ವರ.
ಎನ್ನ ನೇತ್ರದಾಹಾರವನು ಜಂಗಮಕ್ಕೆ ನೋಡಿಸಿದಲ್ಲದೆ
ನಾನು ನೋಡಿದೆನಾದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ !
ಎನ್ನ ಶ್ರೋತ್ರದಾಹಾರವನು ಜಂಗಮಕ್ಕೆ ಕೇಳಿಸಿದಲ್ಲದೆ
ನಾನು ಕೇಳಿದೆನಾದಡೆ ನಿಮ್ಮಾಣೆ,    ನಿಮ್ಮ ಪ್ರಮಥರಾಣೆ!
ಎನ್ನ ಘ್ರಾಣದಾಹಾರವನು ಜಂಗಮಕ್ಕೆ ವಾಸಿಸಿದಡಲ್ಲದೆ
ನಾನು ವಾಸಿಸಿದೆನಾದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ!
ಎನ್ನ ಜಿಹ್ವೆಯಾಹಾರವನು ಜಂಗಮಕ್ಕೆ ಊಡಿಸಿದಲ್ಲದೆ
ನಾನು ಭುಂಜಿಸಿದೆನಾದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ!
ಎನ್ನ ಸ್ಪರ್ಶನದಾಹಾರವನು ಜಂಗಮಕ್ಕೆ ಮುಟ್ಟಿಸಿದಲ್ಲದೆ
ನಾನು ಮುಟ್ಟಿದೆನಾದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ!
ಎನ್ನ ಪರಿಣಾಮದಾಹಾರವನು ಜಂಗಮಕ್ಕೆ ಮಾಡದೆ
ನಾನು ಮಾಡಿಕೊಂಡೆನಾದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ!
ಎನ್ನಂಗದಾಹಾರ ಮಜ್ಜನವನು ಜಂಗಮಕ್ಕೆ ಮಾಡಿಸದೆ
ನಾನು ಮಾಡಿದೆನಾದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ !
ಎನ್ನಂಗದಾಹಾರ ಸ್ತ್ರೀಯರು ಜಂಗಮಕ್ಕೆ ಸಂಯೋಗವ ಮಾಡಿಸದೆ
ನಾನು ಆ ಸ್ತ್ರೀಯ ಸಂಯೋಗವ ಮಾಡಿದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ !
ಎನ್ನಂಗದಾಹಾರ ಮಂಚಸುಪ್ಪತ್ತಿಗೆಯ ಜಂಗಮಕ್ಕೆ ಕೊಡದೆ
ನಾನು ಮಂಚಸುಪ್ಪತ್ತಿಗೆಯ ಮೇಲೆ ಮಲಗಿದೆನಾದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ!
ಎನ್ನಂಗದಾಹಾರ ಗದ್ದುಗೆಯನು ಜಂಗಮಕ್ಕೆ ಕೊಡದೆ
ನಾನು ಗದ್ದುಗೆಯ ಮೇಲೆ ಕುಳಿತೆನಾದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ!
ಎನ್ನಂಗದಾಹಾರ ಗೃಹವನು ಜಂಗಮಕ್ಕೆ ಕೊಡದೆ
ನಾನು ಮನೆಯೊಳಗಿರ್ದೆನಾದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ!
ಎನ್ನಂಗದಾಹಾರ ಆಭರಣಂಗಳನು ಜಂಗಮಕ್ಕೆ ತೊಡಿಸದೆ
ನಾನು ತೊಟ್ಟೆನಾದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ!
ಎನ್ನಂಗದಾಹಾರ ವಾಹನಂಗಳನು ಜಂಗಮಕ್ಕೆ ಕೊಡದೆ
ನಾನು ಆನೆ ಕುದುರೆ ದಂಡಿಗೆಯ ಏಱಿದೆನಾದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ!
ಎನ್ನಂಗದಾಹಾರ ಚರಣರಕ್ಷೆಯನು ಜಂಗಮಕ್ಕೆ ಮೆಟ್ಟಿಸದೆ
ನಾನು ಮೆಟ್ಟಿದೆನಾದಡೆ ನಿಮ್ಮಾಣೆ,   ನಿಮ್ಮ ಪ್ರಮಥರಾಣೆ!
ಎನ್ನಂಗದಾಹಾರವ ದೇಹವನೊತ್ತಿಸಿಕೊಂಬಲ್ಲಿ ಜಂಗಮಕ್ಕೆ ಒತ್ತಿಸಿದಲ್ಲದೆ
ನಾನು ಒತ್ತಿಸಿಕೊಂಡೆನಾದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ!
ಎನ್ನಂಗದಿ ಹೊದೆವ ವಸ್ತ್ರವನು ಜಂಗಮಕ್ಕೆ ಕೊಟ್ಟಿಲ್ಲದೆ
ನಾನು ಹೊದೆದೆನಾದಡೆ ನಿಮ್ಮಾಣೆ; ನಿಮ್ಮ ಪ್ರಮಥರಾಣೆ!
ಇಂತಿಹ ಹದಿನಾಱು ತೆಱದ ಭಕ್ತಿಯನು ಜಂಗಮಕ್ಕೆ ಮಾಡುವಲ್ಲಿ
ಅದಱೊಳಗೊಂದನಾದಡೂ ನಾ ವಂಚಿಸಿ ಭೋಗಿಸಿದೆನಾದಡೆ    ನಿಮ್ಮಾಣೆ, ನಿಮ್ಮ ಪ್ರಮಥರಾಣೆ!
ಇಂತೀ ಕ್ರಮದಲ್ಲಿ ಜಂಗಮಲಿಂಗವನರ್ಚಿಸಿ,
ಪೂಜಿಸಿ ಪಾದೋದಕ ಪ್ರಸಾದವ ಕೊಂಬ ಸದ್ಭಕ್ತಂಗೆ
ಗುರುವುಂಟು, ಲಿಂಗವುಂಟು, ಜಂಗಮವುಂಟು,
ಪಾದೋದಕವುಂಟು, ಪ್ರಸಾದವುಂಟು, ಆಚಾರವುಂಟು,
ಸದ್ಭಕ್ತಿಯುಂಟು    ಈ ಕ್ರಮದಲ್ಲಿ ಜಂಗಮಲಿಂಗವನು ಅರ್ಚಿಸಿ, ಪೂಜಿಸದೆ,
ತನ್ನ ಸಂಗಾರ, ತನ್ನೊಡಲನು ಪೊರೆದನಾದಡೆ,
ಅವಂಗೆ ಗುರುವಿಲ್ಲ, ಲಿಂಗವಿಲ್ಲ, ಜಂಗಮವಿಲ್ಲ, ಪದೋದಕವಿಲ್ಲ,
ಪ್ರಸಾದವಿಲ್ಲ,       ಅವನವಿಚಾರಿ, ಅವನಶಿಷ್ಟನು, ಅವನಪೂಜ್ಯನು,
ಅವಭವಿ, ಅವರೋಗಿ, ಅವಮತ್ತ, ಅವದರ್ಪಕ;
ಅವ ಪಂಚಮಹಾಪಾತಕನಯ್ಯ, ಕೂಡಲಸಂಗಮದೇವಾ.

೧೬

ಅಸುವಳಿದ ಕಾಯದಂತೆ ದೆಸೆಗೆಟ್ಟೆನಯ್ಯಾ
ಅದೇನು ಕಾರಣವೆಂದಡೆ: ಪಶುಪತಿಯ ಭಕ್ತಿ ವಿಶ್ವಾಸವಿಲ್ಲದೆ
ವಿಷಯಾತುರನಾಗಿರ್ದೆನಯ್ಯಾ
ಇದು ಕಾರಣ,
ಎನ್ನ ಸಂಸಾರ ವಿಷಯಂಗಳ ಮಾಣಿಸಿ ಭಕ್ತನೆಂದೆನಿಸಯ್ಯಾ
ಮಹಾಲಿಂಗ ಗುರು ಶಿವ ಸಿದ್ಧೇಶ್ವರ ಪ್ರಭುವೆ.

೧೭

|| ತ್ರಿವಿಧಿ ||

ಶಿವಪಥವನೊಲ್ಲದು

[1] ಶಿವಜ್ಞಾನವನೊಲ್ಲದು 
ಶಿವಭಕ್ತಿಯಲ್ಲಿ ಮನವ[2]ವೀಡಾಡದು[3]
ಗುರುವೆ ಶಿವಚಿಂತೆಯಲಿ ಮನವಿಡದ ಸಂಸಾರವನು
ಪರಿಹರಿಸು ಶ್ರೀಗುರುವೆ ಯೋಗಿನಾಥಾ.

೧೮

ನೊಂದೆನೋ ಸಂಸಾರದೊಳು, ನೊಂದೆನೋ ಸತಿಯರೊಳು
ಕಂದಿ ಕುಂದಿದೆ ನಿಮ್ಮ ನಱಿಯದಯ್ಯಾ.
ಬೆಂದಸಂಸಾರವನು ಪರಿಹರಿಸಿ ಶಿವಭಕ್ತಿ
ಯಂದವನು ತೋಱಯ್ಯ ಯೋಗಿನಾಥ.

೧೯

ಬೆಟ್ಟವೊಂದಱಲ್ಲಿ ಹುಟ್ಟಿತ್ತು ಕಳ್ಳರ ಭಯವು;
ಕೆಟ್ಟೆನೈ ಶಿವಶಿವನೆ ಅರಸು ಇಲ್ಲ.
ನಿಷ್ಠೆ ಶಿವಭಕ್ತಿಯೆಂಬರಸ ನೀ ಕರುಣಿಸಿ
ದೃಷ್ಟಾತ್ಮನ ಸಲಹಯ್ಯಾ ಯೋಗಿನಾಥ.


[1]  ದ (ಹ)

[2]  ನಿಡ್ಯಾಡ (ಹ)

[3]  ನಿಡ್ಯಾಡ (ಹ)