|| ವೃತ್ತ ||
ಆಲಸ್ಯಂ ಸಕಲ ಕ್ರಿಯಾ ಕರಣದೋಳ್ ನೈಷ್ಠೂರ್ಯ ಮಾತ್ಮೋಕ್ತಿಯೋಳ್
ಕಾಲುಷ್ಯ ಮನದೋಳ್ ಪ್ರಿಯಾಂಗನೆಗಲಂಕಾರಂ ಪತಿಪ್ರೀತಿದಂ
ಲೀಲಾ ಸ್ವೀಕೃತದೇಹ ಧರ್ಮಚರಿತಂ ಸರ್ವಂ ಶಿವೈಕ್ಯಕ್ರಿಯಾ
ಶೀಲಂಗಾಭರಣಂ ಶಿವಪ್ರಿಯಕರಂ ಸತ್ಯಂ ಶಿವಾವಲ್ಲಭಾ.
|| ವಚನ ||
ಬಂದುದ ಕೈಕೊಳಬಲ್ಲಡೆ ನೇಮ,
ಇದ್ದುದ ವಂಚನೆಯ ಮಾಡದಿರ್ದಡೆ ಅದೇ ನೇಮ
ನಡೆದು ತಪ್ಪದಿದ್ದಡೆ ನೇಮ.
ನುಡಿದು ಹುಸಿಯದಿದ್ದಡೆ ಅದು ಮುನ್ನವೆ ನೇಮ
ನಮ್ಮ ಕೂಡಲಸಂಗಮದೇವರ ಶರಣರು ಬಂದಡೆ
ಒಡೆಯರಿಗೊಡವೆಯನೊಪ್ಪಿಸುವೆ ನೇಮ.
೨
ಲಿಂಗವಂತನ ಲಿಂಗವೆಂಬುದೆ ಶೀಲ.
ಲಿಂಗವಂತನ ರಾಣಿವಾಸವ ಲಿಂಗದ ರಾಣಿವಾಸವೆಂಬುದೆ ಶೀಲ.
ಲಿಂಗವಂತನ ಅರ್ಥ ಪ್ರಾಣಕ್ಕೆ ತಪ್ಪದಿಪ್ಪುದೆ ಶೀಲ
ಅಯ್ಯಾ ಲಿಂಗವಂತರ ಪಾದೋದಕ ಪ್ರಸಾದವ ಸೇವನೆಯ ಮಾಡುವದೆ ಶೀಲ.
ಇಂತಪ್ಪ ಶೀಲವೆ ಶೀಲ, ಉಳಿದ ದುಶ್ಶೀಲಕ್ಕೆ ಮೆಚ್ಚುವನೆ,
ನಮ್ಮ ಕೂಡಲಸಂಗಯ್ಯಾ?
೩
ಸುಖವಿಲ್ಲ ಸೂಳೆಗೆ, ಪಥವಿಲ್ಲ ಲಿಂಗಕ್ಕೆ
ಮಾಡಲಾಗದು ನೇಮವ, ನೋಡಲಾಗದು ಶೀಲವ,
ಸತ್ಯವೆಂಬುದೇ ಶೀಲ ಗುಹೇಶ್ವರಲಿಂಗವಱೆಯಬಲ್ಲವಂಗೆ.
೪
ಶೀಲ ಶೀಲವೆಂದೇನೋ? ಮಾಡಿದ ಮನೆ, ಹೂಡಿದ ಒಲೆ, ಅಟ್ಟುಂಬ ಮಡಕೆ,
ಕಟ್ಟದಱೆ, ಬಿತ್ತಿದ ಬೆಳೆ,
ಕೈಗೆ ಶೀಲವಲ್ಲದೆ ತನ್ನ ಮನಕ್ಕೆ ಶೀಲವಿಲ್ಲ.
ಲಿಂಗ ಬಂದು ಮನವನಿಂಬುಗೊಂಬುದೆ ಶೀಲ;
ಜಂಗಮ ಬಂದು ಧನವನಿಂಬುಗೊಂಬುದೆ ಶೀಲ;
ಪ್ರಸಾದ ಬಂದು ತನುವನಿಂಬುಗೊಂಬುದೆ ಶೀಲ;
ಇಂತಪ್ಪ ಶೀಲಕ್ಕೆ ನಮೋನಮೋ!
ಉಳಿದುದು ಶೀಲರ ಕಂಡದೆ ಮೆಚ್ಚುವನೆ,
ನಮ್ಮ ಕೂಡಲಸಂಗಯ್ಯಾ?
೫
ಶೀಲ ಶೀಲವೆಂದು ಗರ್ಭೀಕರಿಸಿ ನುಡಿವತ್ತಿರ್ಪರು, ಶೀಲವಾವುದೆಂದಱೆಯರು.
ಇದ್ದುದ ವಂಚನೆಯ ಮಾಡದಿಪ್ಪುದೆ ಶೀಲ;
ಇಲ್ಲದುದ್ದಕ್ಕೆ ಕಡನ ಬೇಡದಿಪ್ಪುದೆ ಶೀಲ,
ಪರಧನ ಪರಸತಿಗಳುಪದಿಪ್ಪುದೆ ಶೀಲ,
ಪರದೈವ ಪರಸಮಯಕ್ಕೆಳಸದಿಪ್ಪುದೆ ಶೀಲ,
ಗುರುನಿಂದೆ ಜಂಗಮನಿಂದೆಯ ಕೇಳದಿಪ್ಪುದೆ ಶೀಲ,
ಕೂಡಲಚನ್ನಸಂಗಯ್ಯನ ಶರಣರ ಬರವಿಂಗೆ ಮಯ್ಯಾಂತು
ಪರಿಣಾಮಿಸಬಲ್ಲಡೆ ಅಚ್ಚ ಶೀಲ.
೬
ಮನವರೋಚಕವಾದಲ್ಲಿ ಲವಣ ವಾರಿ ಪರಿಪಾಕ
ಮುಂತಾದ ರಸದ್ರವ್ಯವನೊಲ್ಲದಿಪ್ಪುದು ವೃತವೆ? ಅಲ್ಲ. ಅದು ಸೌಕರ್ಯವಲ್ಲದೆ.
ಅದೆಂತೆಂದಡೆ :
ಪರದ್ರವ್ಯ, ಪರಸತಿ, ಹುಸಿ, ಕೊಲೆ, ಕಳುವು, ಅತಿಕಾಕ್ಷೆಯಂಬಿಟ್ಟು
ಬಂದುದನಿದ್ದಂತೆ ಕೈಕೊಂಡು ಬಾರದುದಕ್ಕೆ ಕಾಂಕ್ಷೆಯ
ಮಾಡದಿಪ್ಪುದೆ ಅಱುವತ್ತು ನಾಲ್ಕು ಶೀಲ ಐವತ್ತಾಱು ವ್ರತ,
ಮೂವತ್ತೆರಡು ನೇಮಸಂದಿತ್ತು.
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗದಲ್ಲಿ
ಸರ್ವೇನೇಮಸ್ವಯಂಭುವಾಯಿತ್ತು,
೭
ವ್ರತವಂಬುದೇನೊ ವಸ್ತುವ ಕಾಬುದಕ್ಕೆ ನಿಚ್ಚಣಿಕೆ
ವ್ರತವಂಬುದೇನೊ ಇಂದ್ರಿಯಂಗಳ ಸಂದಮುಱವ ಕುಲಕುಠಾರ,
ವ್ರತವಂಬುದೇನೊ ಸಕಲ ವ್ಯಾಪಾರಕ್ಕೆ ದಾವಾನಲ,
ವ್ರತವಂಬುದೇನೊ ಸರ್ವದೋಷನಾಶನ,
ವ್ರತವಂಬುದೇನೊ ಚಿತ್ತ ಸುಯ್ದಾನದಿಂದ ವಸ್ತುವ ಕಾಂಬುದಕ್ಕೆ ಕಟ್ಟದ ಗುತ್ತಿಗೆ
ವ್ರತವಂಬುದೇನೊ ಆಚಾರವೇಪ್ರಾಣವಾದ ರಾಮೇಶ್ವರಲಿಂಗವು
ಅವರಿಗೆ ತತ್ತಲು ಮಗನಾಗಿಪ್ಪನು.
೮
ಸತ್ಯದಲ್ಲಿ ನಡೆವುದು ಶೀಲ, ಸತ್ಯದಲ್ಲಿ ನುಡಿವುದು ಶೀಲ
ಸತ್ಯಸದಾಚಾರದಲ್ಲಿ ವರ್ತಿಸಿ
ನಿತ್ಯವನಱೆವುದೆ ಶೀಲ ಕಾಣಿರೋ
ಮಹಲಿಂಗ ಗುರು ಶಿವಸಿದ್ಧೇಶ್ವರ ಪ್ರಭುವೆ.
೯
|| ತ್ರಿವಿಧಿ ||
ಅಂಗಗುಣಗಳನಳಿದು ಲಿಂಗಗುಣ ಉಳಿದಲ್ಲಿ
ಜಂಗಮ ಪ್ರಸಾದವದು ಸಾಧ್ಯವಾಯಿತ್ತು.
ಅಂಗೇಂದ್ರಿಯಗಳು ಲಿಂಗೇಂದ್ರಿಯಗಳಾಗೆ
ಲಿಂಗ ನಾ ನೀನಾದೆ ಯೋಗಿನಾಥಾ.
೧೦
ಸತ್ಯವೆಂಬುದು ಶೀಲ ತಥ್ಯವೆಂಬುದೇ ಸೀಮೆ
ಭಕ್ತಿಯೆಂಬುದು ಶಿವನ ಅನುವು ತಾನೆ.
ಮುಕ್ತಿಯೆಂಬಾಯತವು ವ್ಯಕ್ತವಾಗಲು ತಾನೆ ನಿತ್ಯಪದವಾಯಿತೈ
ಯೋಗಿನಾಥಾ.
Leave A Comment