|| ವೃತ್ತ ||
ಗೋವಿನ ದೇಹದಲ್ಲಿ ಘೃತಮಿರ್ದೊಡದೇಂ ಫಲಮಾತ್ಮರೋಗವಿ
ದ್ರಾವಣ ಪೋಷಣ ಪ್ರಬಲಶಕ್ತಿ ಬಹಿರ್ಗತ ಮಾದೊಡಲ್ಲದಿಲ್ಲೀವಿಧ
ಶಿವಂ ಸಕಲ ಜಂತು ಶರೀರದೊಳಿರ್ಪನಿರ್ದೊಡೇಂ
ಪ್ರಾವಣ ಶಕ್ತಿ ಬಾಹ್ಯಸಮುನಾಸ್ತಿಯೊಳೈಸೆಕಣಾ ಶಿವಾಧವಾ.

|| ವಚನ ||
ಉದಕದೊಳಗೆ ಬಯ್ಚಿಟ್ಟ ಬಯಕೆಯ ಕಿಚ್ಚಿನಂತಿದ್ದಿತ್ತು,
ಸಸಿಯೊಳಗಣ ರಸದ ರುಚಿಯಂತಿದ್ದಿತು
ನನೆಯೊಳಗಣ ಪರಿಮಳದಂತಿದ್ದಿತ್ತು.
ಕೂಡಲಸಂಗಮದೇವ [ರನಿಲುವು]
ಕನ್ಯೆಯ ಸ್ನೇಹದಂತಿದ್ದಿತ್ತು.

ಫಲದೊಳಗಣ ಮಧುರದ ಗೌಪ್ಯ ಪರಿಯದಂತಿದ್ದಿತ್ತು,
ಚಂದ್ರಕಾಂತದ ಉದಕದ ಪರಿಯಂತಿದ್ದಿತ್ತು,
ಮಯೂರನ ಚಿತ್ರದ ತತ್ತಿಯಂತಿದ್ದಿತ್ತು,
ಶಿಶು ಕಂಡ ಕನಸಿನ ತೆರನಂತಿದ್ದಿತ್ತು
ಕೂಡಲ ಚನ್ನಸಂಗಯ್ಯಾ, [ನಿಮ್ಮ ನಿಲುವು]
ಸದ್ಗುರುವಿನ ಚಿತ್ತದ ಪರಿಯಂತಿದ್ದಿತ್ತು.

ಶಿಲೆಯೊಳಗಣ ಪಾವಕನಂತೆ,
ಉದಕದೊಳಗಣ ಪ್ರತಿಬಿಂಬದಂತೆ,
ಬೀಜದೊಲಗಣ ವೃಕ್ಷದಂತೆ,
ಶಬ್ದದೊಳಗಣ ನಿಶ್ಯಬ್ಧದಂತೆ
ಗುಹೇಶ್ವರ, ನಿಮ್ಮ ಶರಣ ಸಂಬಂಧ

ನೆಲದ ಮಱೆಯ ನಿಧಾನದಂತೆ, ಫಲದ ಮಱೆಯ ರುಚಿಯಂತೆ
ಶಿಲೆಯ ಮಱೆಯ ಹೇಮದಂತೆ, ತಿಲದ ಮಱೆತಿಯ ತೈಲದಂತೆ
[ಮರದ ಮರೆತಿಯ ತೇಜದಂತೆ], ಭಾವದ ಮಱೆತಿಯ  ಬ್ರಹ್ಮವಾಗಿಪ್ಪ
ಚನ್ನಮಲ್ಲಿಕಾರ್ಜುನನ ನಿಲವನಱಿಯಬಾರದು

ಮರಿಚಿಯೊಳಡಗಿದ ಬಿಸಿಲಿನಂತಿದ್ದಿತ್ತು.
ಕ್ಷೀರದೊಳಡಗಿದ ಘೃತದಂತಿದ್ದಿತ್ತು.
ಚಿತ್ರಿಕನೊಳಡಗಿದ ಚಿತ್ರದಂತಿದ್ದಿತ್ತು.
ಆಲಿಯೊಳಡಗಿದ ತೇಜದ ಗೌಪ್ಯದಂತಿದ್ದಿತ್ತು,
ನುಡಿಯೊಳಡಗಿದ ಅರ್ಥದಂತಿದ್ದಿತ್ತು
ಕೂಡಲಚನ್ನಸಂಗಾ ನಿಲ್ಲ ನಿಲುವು

ಮುಗಿಲ ಮಱೆಯ ಮಿಂಚಿನಂತೆ
ಬಯಲ ಮಱೆಯ ಮರೀಚಿಯಂತೆ
ಶಬ್ದದ ಮಱೆಯ ನಿಶ್ಯಬ್ದದಂತೆ
ಕಂಗಳ ಮಱೆಯ ಬೆಳಕಿನಂತೆ
ಗುಹೇಶ್ವರ ನಿಮ್ಮ ನಿಲುವು.

ಕಲ್ಲೊಳಗಣ ಕಿಚ್ಚುರಿಯದ ಪರಿಯಂತೆನ್ನನು
ಬೀಜದೊಳಗಣ ವೃಕ್ಷ ಉರಿಯದ ಪರಿಯಂತೆನ್ನನು
ಪುಷ್ಪದ ಕಂಪು ನನೆಯಲ್ಲಿ ತೋಱದ ಪರಿಯಂತೆನ್ನನು
ಚಂದ್ರಕಾಂತದ ಉದಕ ವೊಸರದ ಪರಿಯಂತೆನ್ನನು
ಎನ್ನ ಮಹಾಲಿಂಗ ಕಲ್ಲೇಶ್ವರಲಿಂಗ ಲಿಂಗಯ್ಯ
ಇಹವೆನ್ನ, ಪರವೆನ್ನ, ತಾನೆನ್ನ ಸಹಜವೆನ್ನ.

ಜಲದೊಳಗಣ ಕಿಚ್ಚು ಜಲವ ಸುಡದೆ
ಜಲವು ತಾನಾಗಿಯೇ ಇದ್ದಿತು ನೋಡಾ,
ನೆಲೆಯನಱಿದು ನೋಡಿಹೆನೆಂದೆಡೆ ಜಲವು ತಾನಲ್ಲ,
ಕುಲದೊಳಿಗಿರ್ದು ಕುಲವ ಬೆರಸದೆ ನೆಲೆಗಟ್ಟು ನಿಂದುದನಾರು ಒಲ್ಲರು!
ಒಳಹೊಱಗೆ ತೆಱಹಿಲ್ಲದಿರ್ದು ಮತ್ತ ತಲೆದೋಱದಿಪ್ಪುದು
ಗುಹೇಶ್ವರ ನಿಮ್ಮ ನಿಲವು !

ಪುಷ್ಪಕ್ಕೆ ಗಂಧ ಬಲಿವಲ್ಲಿ, ಫಲಕ್ಕೆ ರಸತುಂಬುವಲ್ಲಿ
ತರುಳಿಗೆ ವಿಷಯ ತೋಱುವಲ್ಲಿ
ಇವು ಋತುವಲ್ಲದೆ ಸ್ವಯವಲ್ಲ,
ತನ್ನನಱಿವುದಕ್ಕೆ ಮುನ್ನವೆ ಲಿಂಗತನ್ಮಯವಾಗಿರಬೇಕು.
ಹೇಮದ ಪುತ್ಥಳಿಯ ಕರಗಿ[ಸಿ] ಮರಳಿ
ರೂಪನಱಸಲುಂಟೆ ನಾರಾಯಣ ಪ್ರಿಯ ರಾಮನಾಥಾ?

೧೦

ಚಂದ್ರಕಾಂತದ ಶಿಲೆಯಲ್ಲಿ ಬಿಂದುವಡಗಿಪ್ಪಂತೆ,
ಗೋವುಗಳಲ್ಲಿ ಗೋರೋಜನ ರಂಜಿಸುವಂತೆ
ಶಿಲೆಕಾಷ್ಟಂಗಳಲ್ಲಿ ಅನಲನಡಗಿಪ್ಪಂತೆ
ಶುಕ್ತಿಯ ಸತ್ಯರ ಹೃದಯದಲ್ಲಿ ಮೌಕ್ತಿಕದ ಉದಕದಂತೆ
ಭಾವವಿಲ್ಲದೆ ಅಡಗಿದೆಯಲ್ಲ, ಅಮಲೇಶ್ವರ ಲಿಂಗವೆ.

೧೧

ಮರದೊಳಗೆ ಮಂದಾಗ್ನಿಯ ಉರಿಯದಂತಿರಿಸಿದೆ,
ನೊರೆವಾಲೊಳಗೆ ತುಪ್ಪವ ತೋಱದಂತಿರಿಸಿದೆ,
ಶರೀರದೊಳಗೆ ಆತನನಾರು ಕಾಣದಂತಿರಿಸಿದೆ,
ನೀನು ಬೆರಸಿದ ಭೇದಕೆ ನಾನು ಬೆಱಗಾದೆನು
ಕಾಣಾ ರಾಮನಾಥಾ.

೧೨

ಕಾಣಬಹುದು ಕೈಗೆ ಸಿಕ್ಕದು,
ಅಱಿಯಬಹುದು ಕುಱುಹಿಡಿಯಬಾರದು,
ಭಾವಿಸಬಹುದು ಬೆರೆಸಬಾರದು
ಇಂತಪಮಿಸಬಾರದ ಘನವನು
ಕಪಿಲಸಿದ್ಧ ಮಲ್ಲಿಕಾರ್ಜುನ ನಿಮ್ಮ ಶರಣನೆ ಬಲ್ಲ

೧೩

ಅಡಗಿನೊಳಗಣ ಹಾಲು ಅಡಗಿಪ್ಪ ಭೇದವ,
ಬೆಡಗು ತುಪ್ಪದ ಪರಿಯಂತೆ ನೋಡಾ,
ಮೃಡನು ಪ್ರಾಣ ಪ್ರಕೃತಿಯೊಳಡಗಿದ ಭೇದವ,
ಲೋಕದ ಜನರೆತ್ತ ಬಲ್ಲರಯ್ಯ ರಾಮನಾಥಾ !

೧೪

ಘಟದೊಳಗೆ ತೋಱುವ ಸೂರ್ಯನಂತೆ
ಸರ್ವರಲ್ಲಿ ಶಿವನ ಚೈತನ್ಯವಿಪ್ಪುದು
ಇದ್ದಡೇನು ಸರ್ವಿರಿಗೆಯು ಸಾಧ್ಯವಲ್ಲ,
ಮುಟ್ಟಿಯು ಮುಟ್ಟದು, ಅದು ಕೂಡುವವರಿಗೆ
ಗುರುವಿಂದಲ್ಲದಾಗದು ಕಾಣಾ, ಕಲಿದೇವರ ದೇವಾ

೧೫

ಶುಕ್ಲ ಶೋಣಿತಪಿಂಡೈಕ್ಯನ ಚಿತ್ತವಾಯು
ಆಱುದಳ ಪದ್ಮದಲ್ಲಿ ಮೊಲೆ ಮುಡಿ ಬಂದಡೆ ಹೆಣ್ಣೆಂಬರು
ನಿಡುಗಡ್ಡ ಮೀಸೆಯಾಗಲು ಅದು ಗಂಡೆಂಬರು
ನಡುವೆ ಸುಳಿವಾತ್ಮನು ಅದು ಹೆಣ್ಣಲ್ಲ ಗಂಡಲ್ಲ
ಇದರಂತುವ ತಿಳಿಯಲ್ಕೆ ಶೃತಿ ತತಿಗಳೈದವೆಂದನಂಬಿಗಚೌಡಯ್ಯ.

೧೬

ಪಿಂಡದ ಮೇಲೊಂದು ಪಿಂಡವನಿರಿಸಿ ಆ ಪಿಂಡವನಿಕ್ಷೇಪಿಸಿ,
ಮತ್ತೊಂದು ಪಿಂಡದ ಮೇಲೊಂದು ಪಿಂಡವನಿರಿಸಿ ಆ ಪಿಂಡವನಿಕ್ಷೇಪಿಸೆ,
ಆ ಪಿಂಡ ಲಿಂಗವನಱಿಯದು ಲಿಂಗ ಪಿಂಡವನಱಿಯದು.
ಒಳಗಿರ್ಪ ಪಿಂಡಕ್ಕೆ ಅದ್ಭುತ ಸಂಘಟವಾಯಿತ್ತು
ಪಿಂಡಸ್ಥಂಪಿಂಡ ಮಧ್ಯಸ್ಥಂ ಸರ್ವತತ್ವಲಯಂ ವಿದ್ಧುಃ
ಇದು ಕಾರಣ, ಕೂಡಲ ಚನ್ನಸಂಗಯ್ಯ, ನಿಮ್ಮ ಶರಣನು ಅಕಾಯಚರಿತ್ರನು.

೧೭

ವಸ್ತುವೆಂದು ಹ್ಯಾಂಗಾಯಿತ್ತಯ್ಯ ಎಂದೆಡೆ ಹೇಳಿಹೆ ಕೇಳಯ್ಯ
ಮಗನೆ :
ಕಾಷ್ಟದಲ್ಲಿ ಅಗ್ನಿ ಹೇಂಗೆ ಹಾಂಗಿರ್ಪುದು
ಕ್ಷೀರದೊಳಗೆ ಘೃತ ಹೇಂಗೆ ಹಾಂಗಿರ್ಪುದು
ತಿಲದಲ್ಲಿ ತೈಲ ಹೇಂಗೆ ಹಾಂಗಿರ್ಪುದು
ಜಲದೊಳಗೆ ಸೂರ್ಯ ಹೇಂಗೆ  ಹಾಂಗಿರ್ಪುದು
ಕನ್ನಡಿಯೊಳಗೆ ಪ್ರತಿಬಿಂಬ ಹೇಂಗೆ ಹಾಂಗಿರ್ಪುದು
ಸರ್ವತ್ರ ಎಲ್ಲಾ ಠಾವಿನಲ್ಲಿಯು ವಸ್ತುವಿನ ಕಳೆ
ಪರಿಪೂರ್ಣವಾಗಿಪ್ಪುದೆಂದೆನಯ್ಯಾ ಮಹಾಲಿಂಗ ಗುರು ಶಿವಸಿದ್ಧೇಶ್ವರ ಪ್ರಭುವೆ.

೧೮

ಇಂತಿ ಹಿಂದೆ ಹೇಳಿದ ವಸ್ತುವ ಬೇಱಿಟ್ಟು ತಿಳಿಯಲಿಲ್ಲ
ನಿನ್ನಲ್ಲಿಯುಂಟು ತಿಳಿದು ನೋಡಯ್ಯಾ ಮಗನೆ,
ನಿನ್ನ ಪಿಂಡದೊಳಹೊಱಗೆ ಭರಿತನಾಗಿ ತಲೆದೋಱದೆ
ಕಾಣಿಸಿಕೊಳ್ಳದೆ ಪಿಂಡಸ್ಥನಾಗಿ ಚಿದ್ರೂಪನೈದಾನೆ
ಈ ಪಿಂಡಸ್ಥಲದ ಭೇದವ ತಿಳೆಯೆಂದೆನಯ್ಯಾ
ಮಹಾಲಿಂಗಗುರುಶಿವಸಿದ್ಧೇಶ್ವರ ಪ್ರಭುವೆ.

೧೯

||ತ್ರಿವಿಧಿ||

ನೀರು ನೀರೆಯಾಗಿ ನೀರು ಮತ್ತಾನಾಗಿ
ನೀರುಲೀಯಕೆ ಮತ್ತೆ ನೀರೆಯಾಗಿ
ಆಱೂಢದಕ್ಷರದ ಮರುಜವಣಿಯ ಹಿಂಡೆ
ನೀರು ವಜ್ರವಕ್ಕು ಯೋಗಿನಾಥ.

೨೦

ಅಂಡಜ ಸ್ವೇದಜೋದ್ಭಿಜತೆಂಬ ಭವದಲ್ಲಿ
ಬೆಂಡಾಗಿ ಬಳಲಿ ನಾ ಬರುತಿರ್ದೆನು
ಗಂಡು ಗೂಳಿಯ ತೆಱದಿ ಕಂಡಲ್ಲಿ ಜಿನುಗುವೀ
ಭಂಡ ಮನಕಿನ್ನೇವೆ ಯೋಗಿನಾಥ.

೨೧

ವಟವೃಕ್ಷದಾತೆಱದಿ ಘಟಸಿಪ್ಪ ಲಿಂಗಯ್ಯ
ವಟವೃಕ್ಷ ತನ್ನೊಳಗೆ ಬೆಳಗಿದಂತೆ
ವಟವೃಕ್ಷ ವಟಕೋಟಿ ಫಲವನುಂಗಿದ ತೆಱದಿ
ಶರಣ ದೇಹಿಕ ದೇಹಿ ಯೋಗಿನಾಥ.