|| ವೃತ್ತ ||

ಒಳಗೆ ಘೃತಸ್ವರೂಪಮಿರೆ ಭಾವಮದೇಂ ಬಹು ಸಾಧನ ಕ್ರಿಯಾ
ಬಳವಶ ಮಾಗಿ ಗೋವಿನ ಕಳೇವರದಿಂ ಪೊಱಮಟ್ಟು ತಾನೆ ನೀ
ಶ್ಚಳ ಸುಖ ಸಿದ್ಧಿದಪ್ರಬಲ ಭೇಷಜ ಮಾಗಿಹವೋಲ್ ಸ್ವಕಾಂತರಾ
ಮಳ ಶಿವಲಿಂಗ ವೀಪರಿ ಬಹಿಷ್ಕರಿಸಲ್ಯುಭವಂ ಶಿವಾಧವಾ.      

|| ವಚನ ||         

ಅಯ್ಯಾ, ನಿಮ್ಮ ಶರಣನ ಮರ್ತ್ಯಕ್ಕೆ ತಂದೆಯಾಗಿ
ನೆನೆನೆನೆದು ಸುಖಿಯಾಗಿ ಆನು ಬದುಕಿದೆನಯ್ಯಾ
ಅದೇನು ಕಾರಣ ತಂದೆಯೆಂದಱಿದೆನಯ್ಯಾ
ಅಱಿದಱಿದು ನಿಮ್ಮಶರಣನು ಆಚರಿಸುವ ಆಚರಣೆಯ ಕಂಡು
ಕಣ್ದೆಱೆದೆನಯ್ಯಾ, ಕೂಡಲಸಂಗಮದೇವಾ

ಕಾಳಾಂಧರ ಧರೆ ವಾರಿಧಿಸಹಿತ ಏನೇನೂ ಇಲ್ಲದಂದು
ಪ್ರಮಥನೊಬ್ಬನಿದ್ದನೊಂದನಂತಕಾಲ
ನಿರವಯ ನಿರ್ಮಾಯವಾಗಿರ್ದನೊಂದುಕೋಟಾನು ಕೋಟಿವರುಷ
ಅಲ್ಲಿ ಅನಾಗತವುಂಟು, ಮನವು ಮಹದಲ್ಲಿನಿಂದು ಉತ್ಪತ್ಯವೆಂದಡೆ
ಬಯಲು ಬೆಸಲಾಯಿತು, ನರರು ಸುರರು ಮೊದಲಾದ
ಚೌರಾಸಿಲಕ್ಷಜೀವಿಗಳುದಯಿಸಿದವಯ್ಯಾ
ಇಂತಿವೆಲ್ಲವು ಕೂಡಲ ಚನ್ನಸಂಗಾ ನಮ್ಮ ಬಸವಣ್ಣನೆನದೆ.

ಎನ್ನ ನಾನಱಿಯದಂದು ಮುನ್ನ ನೀನೇನಾಗಿರ್ದೆ ಹೇಳಾ?
ಮುನ್ನ ಬಾಯಿ ಮುಚ್ಚಿಕೋಂಡಿರ್ದೆಯೆಂಬುದು ನಾನಿನ್ನ ಕಣ್ಣಿಂದ ಕಂಡೆನು
ಎನ್ನನಱಿದ ಬಳಿಕ ಇನ್ನು ಬಾಯಿದೆಱೆದು ಮಾತನಾಡಿದಡೆ,
ಅದೆನ್ನ ಕಣ್ಣಿಂದ ಕಂಡು ನಾಚಿದೆ ನೋಡಾ!
ಎನ್ನ ಕಾಬ ನಿನಗೆ ನಿನ್ನ ಕಾಬ ಎನಗೆ ಸಂಚದ ನೋಟ ಒಂದೇ ನೋಡಾ;
ಗುಹೇಶ್ವರಾ, ನಿಮ್ಮ ಬೆಡಗಿನ ಬಿನ್ನಾಣವನಱಿದೆ ನೋಡಾ.

ಚಿಪ್ಪಿನ ಮಂದಿರದಲ್ಲಿ ಬೆಳೆದ  ಮೌಕ್ತಿಕದ ಭೇದವ
ಮೃತ್ತಿಕೆಯ ಸಾರದಲ್ಲಿ ಹೊಮ್ಮಿದ ಹೊಂಗಳ ಪರಿಯಂತೆ
ಕಾಯದಕಾಯದಲ್ಲಿ ಬೆಳಗಿ ತೋರುವ ಮಹಾದಿರವಿನ ಕೊನೆಯಲ್ಲಿ
ಪ್ರಜ್ವಲಿತ ಪ್ರಭಾಕರ ನೀನೆ ನಿಷ್ಕಳಂಕ ಮಲ್ಲಿಕಾರ್ಜುನಾ.

ಎಲೆ ಮನವೆ, ನಿನ್ನ ನಿಜವ ತಿಳಿವೆಡೆ ಆ ನಿನ್ನ ನಿಜವ ಹೇಳುವೆ ಕೇಳುಃ
ಅದು ಕೇವಲ ಜ್ಯೋತಿ, ವರ್ಣಾತೀತ. ಅದು ನೀನಱಸುವಾಗ
ನಿನಗಾವಲ್ಲಿ ನಿಶ್ಚಯ ತೋಱಿತ್ತು, ಅದೀಗ ನಿನ್ನ ಪರಿಪೂರ್ಣತ್ವದ ನೆಲೆ
ನಿನ್ನ ನಿಜವ ನಿಶ್ಚೈಸಿ ನಿರ್ಗಮನಿಯಾದಲ್ಲಿ, ಅದೇ ನಿನ್ನ   ಸಮ್ಯಜ್ಞಾನದ ತೋರಿಕೆ
ಆ ತೋಱಿಕೆಯ ಅಖಂಡ ಬೆಳಗಿನ ಹೊಳಹಿನೊಳಗೆ ನೀ ನಿಮ್ಮ
ಗುಹೇಶ್ವರನಯ್ಯನನಿರಿಸಿಕೊಂಡು ನಿಶ್ಚಿಂತನಾಗೆಲೆ ಮನವೆ.

ಎಲೆ ಮನವೆ, ಎಲ್ಲಿ ಹವಣಿಸಬಾರದ ಅಖಂಡ ಬೆಳಗು ತೋಱುತ್ತಿಹುದು ಅದೀಗ ನಿನ್ನ ನಿಜ,
ಎಲೆ ಮನವೆ, ಆವಲ್ಲಿ ನೀನೆಂಬ ಶಂಕೆ ಹಿಂಗಿ ತಾನೆ ತೋಱುತ್ತಿಹುದು ಅದೀಗ ನಿನ್ನ ನಿಜ,
ಎಲೆ ಮನವೆ, ನಿನ್ನ ನಿಜವನಱಿಯಬಲ್ಲಡೆ ಅದೇ ಮಹಾಜ್ಞಾನ,    ಅದೇ ಕೇವಲ ಮುಕ್ತಿ.
ಅದೇ ನಮ್ಮ ಗುಹೇಶ್ವರಯ್ಯನನಱಿವ ಸಹಜ ಮುಕ್ತಿಯ ಕುಳ ಕಾಣಾ,
ಎಲೆ ಮನವೆ ನಿಶ್ಚೈಸಿಕೊ ನೀನದ ಮಱೆಯದೆ.

ಚಿತ್ತುವೆಂಬ ಬಿತ್ತು ಬಲಿದು ಲಿಂಗವೆಂಬ ಕಳೆಯಂಕುರಿಸಿ ಮೂರ್ತಿಯಾಯಿತ್ತು.
ಆ ಮೂರ್ತಿಯ ಘನತೆಯನೇನೆಂದುಪಮಿಸಬಾರದು
ನೋಡಿದಡೆ ಮೂರ್ತಿ, ಹಿಡಿದೆಡೆ ಬಯಲಾಗಿರ್ಪುದು,
ಆ ಮೂರ್ತಿಯೊಳಗದೆ ಈರೇಳು ಲೋಕದ ಪ್ರಾಣಕಳೆ
ಆ ಕಳೆಯ ಬೆಳಗು ತಾನೆ ನಮ್ಮ ಗುಹೇಶ್ವರಲಿಂಗದಲ್ಲಿ
ಲೀಲಾಮೂಲದ ಪ್ರಥಮ ಭಿತ್ತಿ.

ಇಂದುವಿನ ಬೆಳಗಿನಿಂದ ಇಂದುವ
ಭಾನುವಿನ ಬೆಳಗಿನಿಂದ ಭಾನುವ
ದೀಪದ ಬೆಳಗಿನಿಂದ ದೀಪವ ಕಾಂಬಂತೆ
ತನ್ನ ಬೆಳಗಿಂದ ತನ್ನನೆ ಕಂಡಡೆ
ನಿನ್ನ ನಿಲವು ನೀನೆ ಚಿಮ್ಮಲಿಗೆಯ ಚನ್ನರಾಮ

ಗಜಗಮನ, ಅಹಿಯಶರಸಂಧಾನ, ಮಯೂರಶಯನ,
ಮಾರ್ಜಾಲಧ್ಯಾನ, ಕಂಠೀರವನ ಲಾಗು, ಬಕಮೂರ್ತಿಯ ಅನುಸಂಧಾನ
ಅಳಿಯ ಗಂಧಭುಂಜನೆ, ಮಕ್ಷಿಕದ ಮಧು ಕೊಡವಾಸ,
ಮೂಷಕದ್ವಾರ ಮಱೆವಾಸಕೆ ಇರುವ ಸಂಚ,
ಚೋರನ ಕಾಹು, ಪರಿಚಾರಕನ ವೇಳೆ, ಸಾಹಿತ್ಯನ ಉಪಮೆ,
ಸನಿತನ ಸಂಚು, ತಾಳಧಾರಿಯ ಕಾಮ, ಮಧ್ಯಭೇದಕನ ಮುಟ್ಟು,
ಘ್ರಾಣನ ಹರಿತಭಾವಜ್ಞಾನನಚಿತ್ತ
ಇಂತೀ ನಾನಾ ಗುಣಂಗಳ ಲಕ್ಷಾಲಕ್ಷಿತವಂ ತಿಳಿದು
ಶ್ರುತಿ, ದೃಷ್ಟಾನುಮಾನ ಮುಂತಾದ ನಾನಾ ಭೇದಂಗಳಲ್ಲಿ ವಿಚಾರಿಸಿ ಕಂಡು
ನಾನಾರೆಂಬುದದೇನೆಂದು ತಿಳಿದು ತನಗೂ ಇದಿರಿಂಗೂ ಪಡಿಪುಚ್ಚವಿಲ್ಲದೆ
ಸಿಂಧುವಿನೊಳಗಾದ ಸಂಭ್ರಮಂಗಳ ಸಂಚಾರದ ಅಂಗವಲ್ಲಿ ಹೋಗಿ
ನಿರಂಗವಾದಂಗೆ ಅಂಗವಾತ್ಮನ ಸಂಗ ಈ ಅಂಗವೆಂದು ತಿಳಿದು
ಆವಸ್ಥಲವನಂಗೀಕರಿಸಿದಲ್ಲಿಯೂ ಪರಿಪೂರ್ಣನಾಗಿ
ಏನ ಹಿಡಿದಲ್ಲಿಯೂ ತಲೆವಿಡಿಯಲ್ಲದೆ,
ಏನ ಬಿಟ್ಟಲ್ಲಿಯೂ ತಲೆವಿಡಿಯಲ್ಲದೆ
ಕರ್ಪೂರದ ಗಿರಿಯ ಸುಟ್ಟು ಒಪ್ಪಿಡಿತೆ ಬೂದಿಯಿಲ್ಲದಂತೆ
ಚಿತ್ತ ನಿಶ್ಚಯವಾದ ಸದ್ಭಕ್ತಪರಮವಿರಕ್ತನ ಇರವು ಇದು
ಎನ್ನೊಡೆಯ ಚನ್ನಬಸವಣ್ಣನ ಹರವರಿಯ ತೆಱೆನಿದು ಸಾಧ್ಯ ಮೂವ್ವರಿಗಾಯಿತ್ತು.
ಅಸಾಧ್ಯವಶಗತ ನಿಷ್ಕಳಂಕ ಕೂಡಲಚನ್ನಸಂಗಮದೇವರೆಂದಱಿತಂಗೆ
ಅಸಾಧ್ಯ ಸಾಧ್ಯವಾಯಿತ್ತು.
ವೇಳೆಯನಱಿತು ಕೂಗುವ ತಾಮ್ರಚೂಡಂಗೆ ಅದಾವ ಜ್ಞಾನ
ಮಧುರಸಂಗಳಿದ್ದ ಠಾವನರಿದೈದುವ ಪಿಪ್ಪಲೀಕಂಗೆ ಅದಾವ ಜ್ಞಾನ
ತಾನುಂಡು ನೆನೆದೆಡೆ ಶಿಶು ತೃಪ್ತಿಯಹ ಕೂರ್ಮಂಗೆ ಅದಾವ ಜ್ಞಾನ
ಇಂತೀ ಜೀವಜಾಲಂಗಳೆಲ್ಲವು ಜ್ಞಾನಕ್ಕೊಳಗೆ ಅಱಿತು ನಡೆದಡೆ ವೇದವೇದ್ಯನು.
ಅಱಿತು ನಡೆದಡೆ ಶಾಸ್ತ್ರ ಸಂಬಂಧಿ, ಅಱಿತು ನಡೆದಡೆ ಪುರಾಣಪುಣ್ಯವಂತನು
ಅಱಿತು ನಡೆದಡೆ ಸಕಲಾಗಮ ಭರಿತನು.
ಇಂತೀ ಪಂಚಾಕ್ಷರಿಯ ಮೂಲ ಷಡಾಕ್ಷರದ ಭೇದ.
ಜಗಕ್ಕಾಧಾರ ಅರೆಂಬುದು ಏಕಮೇವನದ್ವಿತೀಯನೆಂಬುದು ತಿಳಿದು
ಸೋಹಂ ಕೋಹಮೆಂಬುದು ತಿಳಿದು, ಆ ನಿಜವೆ
ವಸ್ತುವಿಗೊಡಲೆಂಬುದ ಪ್ರಮಾಣಿಸಿ ನುಡಿದು ನುಡಿಯಬಲ್ಲವನೆ
ವೇದವೇದ್ಯ ಕಾಣಾ, ಲಲಾಮ ಭೀಮ ಸಂಗಮೇಶ್ವರ ಲಿಂಗವು ತಾನಾದ ಶರಣ

೧೧

ಅವಧಿಜ್ಞಾನ, ಅಂತರಿಕ್ಷಜ್ಞಾನ, ಪವನಜ್ಞಾನ,
ಪರಮಸ್ವರೂಪಜ್ಞಾನ, ಪರಬ್ರಹ್ಮಜ್ಞಾನ, ಪರತ್ವಜ್ಞಾನ,
ಸ್ವಾನುಭಾವಜ್ಞಾನ, ಸರ್ವಪರಿಪೂರ್ಣದಿವ್ಯಜ್ಞಾನವೆಂದು
ಸಂಕಲ್ಪಿಸುವಾಗ ಆ ಆತ್ಮಕ್ಕೆ ಅದು ನಿಜವೊ, ಅದರ ಪರಿಭ್ರಮಣವೊ
ಸಕಲ ಶಾಸ್ತ್ರಂಗಳಿಂದ ಕಡಿವಡೆದಂಗ ಆತ್ಮ ಬಿಡುವಲ್ಲಿ
ಹಲವು ಶಾಸ್ತ್ರದ ಭೇದವೊ ಅಂಗದ ಆಯದ ಭೇದವೊ,
ಎಂಬುದ ತಿಳಿದು ಪದಾರ್ಥಂಗಳಲಕ್ಷೀಕರಿಸಿ ನಿರೀಕ್ಷಿಸಿ ಆರೋಪಿಸಬೇಕು.
ಒಂದು ವಿಶ್ವವಾದಲ್ಲಿ ವಿಶ್ವೊಂದಾದಲ್ಲಿ ಉಭಯದಲ್ಲಿ ನಿಂದು
ಅಳಿದಲ್ಲಿ ಗೋರಕ್ಷಪಾಲಕ ಮಹಾಪ್ರಭುಸಿದ್ಧಸೋಮನಾಥಲಿಂಗವು ಒಂದೆನಬೇಕು.

೧೨

ಜೀವಜ್ಞಾನ, ಭಾವಜ್ಞಾನ, ಯುಕ್ತಿಜ್ಞಾನ, ಚಿತ್ತಜ್ಞಾನ,
ಶಕ್ತಿಜ್ಞಾನ, ಪರಶಕ್ತಿಜ್ಞಾನ, ಪರಮಜ್ಞಾನ, ಪ್ರಕಾಶಜ್ಞಾನ
ಪ್ರಭಾವಜ್ಞಾನ, ತೇಜೋನ್ಮಯಜ್ಞಾನ, ದಿವ್ಯಜ್ಞಾನ
ಸರ್ವಮಯ ಸಂಪೂರ್ಣಂಗಳಲ್ಲಿ ತೋಱುತ್ತಿಹ ತೋಱಿಕೆ
ಆಕಾಶಮಂಡಲದಲ್ಲಿ ತೋಱುವ ಅರುಣನ ಕಿರಣ
ಸರ್ವಜೀವಜ್ಞಾನ ಪರಿಪೂರ್ಣ ದೃಷ್ಟಿಯಾಗಿ ಕಾಬತೆಱದಂತೆ
ಎನ್ನ ಪಿಂಡ ಮಂಡಲದಲ್ಲಿ ದಿವ್ಯತೇಜೋರುಣ ಕಿರಣಮಯವಾಗಿ
ಒಂದಱಲ್ಲಿ ನಿಂದು ಕಾಬುದು ಹಲವಾದಂತೆ ಎನ್ನ ಮನದ ಮಂದಿರದಲ್ಲಿ
ನಿಂದವ ನೀನೊಬ್ಬ ವಿಶ್ವರೂಪಾದೆಯಲ್ಲಾ, ಭೇದಕ್ಕೆ ಅಭೇದ್ಯನಾದೆಯಲ್ಲಾ,
ನಿನ್ನ ನೀನೆಂಬುದಕ್ಕೆ ಎಡೆದೆಱಪಿಲ್ಲ, ಭಾಗೀರಥಿಯಂತೆ ಆರುನಿಂದಡು ಪ್ರಮಾಳಾದೆಯಲ್ಲಾ,
ಎನ್ನ ಮನಕ್ಕೆ ಘಟ್ಯಾಗಿ ನಿಂದೆಯಲ್ಲಾ ಸದಾಶಿವಮೂರ್ತಿ ಲಿಂಗವೆ.

೧೩

ಪೃಥ್ವಿಜ್ಞಾನ, ಅಪ್ಪುಜ್ಞಾನ, ತೇಜಜ್ಞಾನ, ವಾಯುಜ್ಞಾನ
ಆಕಾಶಜ್ಞಾನ, ತಮೋಜ್ಞಾನ, ಪರಿಪೂರ್ಣಜ್ಞಾನ, ದಿವ್ಯಜ್ಞಾನ
ಇಂತೀಜ್ಞಾನಂಗಳಲ್ಲಿ ಕಂಡು ದೇಹದರ್ಮಗಳನರಿದು
ಪಿಂಡ ಪ್ರಾಣ ಅಂಗಲಿಂಗ ಸಂಯೋಗ ಸಂಪದದಲ್ಲಿ
ನಿಂದು ನೋಡು ಸದಾಶಿವಮೂರ್ತಿಲಿಂಗದಲ್ಲಿ ಕಳೆಬೆಳಗುತ್ತದೆ.

೧೪

ಪೃಥ್ವಿಜ್ಞಾನ ಪಿಪ್ಪಲೀಕ ಸಂಬಂಧವಾಗಿಹುದು
ಅಪ್ಪುಜ್ಞಾನ ಮರ್ಕಟ ಸಂಬಂಧವಾಗಿಹುದು
ತೇಜಜ್ಞಾನ ಅಗ್ನಿಸಂಬಂಧವಾಗಿಹುದು
ವಾಯುಜ್ಞಾನ ಗಂಧ ಸಂಬಂಧವಾಗಿಹುದು
ತಮಜ್ಞಾನ ಮಾರ್ಜಾಲ ಸಂಬಂಧವಾಗಿಹುದು
ಪರಿಪೂರ್ಣಜ್ಞಾನ ಪೂರ್ಣ ಸಂಬಂಧವಾಗಿಹುದು
ದಿವ್ಯಜ್ಞಾನ ಸರ್ವಮಯವಾಗಿ ನಾನಾಭೇದಂಗಳ ಭೇದಿಸುತ್ತಿಹುದು
ಇಂತೀ ಮನಜ್ಞಾನ ಭರಿತವಾಗಿ ದಶಗುಣ ಮರ್ಕಟವ ಮೆಟ್ಟಿನಿಂದು
ಬಟ್ಟಬಯಲ ತುಟ್ಟತುದಿಯ ಸದಾಶಿವಮೂರ್ತಿ ಲಿಂಗದ ಕಳೆ
ಕಳಕಳಿಸುತ್ತಿದೆ ಚಿತ್ತದ ನೆನಹಿನಲ್ಲಿ!

೧೫

ಪೃಥ್ವಿಯಿಂದಾದ ರೂಪು, ಅಪ್ಪುವಿನಿಂದಾದ ಘಟ್ಟಿ
ತೇಜದಿಂದಾದ ರಜಸ್ಸು, ವಾಯುವಿನಿಂದಾದ ಸರ್ವಾತ್ಮ
ಆಕಾಶದಿಂದಾದ ನಿರವಯ ಇಂತೀ ಪಂಚಭೂತಾತ್ಮಕದಿಂದಾದ
ಆತ್ಮನಿಪ್ಪ ಪಿಂಡಸ್ಥಲದಲ್ಲಿ ನಿಂದು ಸೂಕ್ಷ್ಮದಿಂದಱಿತು
ಕಾರಣದಿಂದ ಕಂಡು ಇಂತೀ ತ್ರಿವಿಧ ಆತ್ಮನ ಆಧಾರವಾವುದೆಂದಱಿತು
ಬ್ರಹ್ಮನ ಸೃಷ್ಟಿ, ವಿಷ್ಣುವಿನ ಶಾಮತಿ, ರುದ್ರನ ಘಟಿತ
ಇವ ಮೂಱಹೊದ್ದದೆಯಿಪ್ಪುದು ಪಿಂಡಜ್ಞಾನಲೇಪ ಅಂಗದ ನಿರಸನ
ಗುರುವಿನ ಕರಕಮಲದಲ್ಲಿ ಮನದ ನಿರಸನ
ಲಿಂಗದ ಯೋಗದಲ್ಲಿ ಸರ್ವೇಂದ್ರೀಯ ನಿರಸನ
ಶರಣ ಸಂಸರ್ಗದಲ್ಲಿ ಇಂತಿವನಱಿತು
ಮನಬಂದಂತೆ ನಡೆಯದೆ ವಿಕಾರವೆಂದಂತೆ ಪ್ರಕೃತಿಗೊಳಗಾಗದೆ
ಮಧುರದಂಡದೊಳಗೆ ಅಡಗಿದ ಸುಧೆಯ ತೆಗೆದು ಸಲೆಕಳೆವಂತೆ
ಕಳೆದುಳಿಯಬೇಕು ಪಿಂಡಪ್ರಾಣ ಲಿಂಗಯೋಗವ
ಇಂತಿವು ಅಱಿವವಱುಹು ಕರಿಗೊಂಡವರ ತೆರನರಿಕೆಯೆ
ತಾ ಗೂಡಿನೊಡೆಯ ಗುಮ್ಮಟನ ಅವಗವಿಸಿದ ಸದಮಲಾಂಗನ ಬರುವು.

೧೬

ಸ್ವಯದಿಂದ  ಪ್ರಕಾಶ, ಪ್ರಕಾಶದಿಂದ ಲಿಂಗ,
ಲಿಂಗದಿಂದ ಶಿಷ್ಯ, ಶಿಷ್ಯನಿಂದ ಗುರು,
ಗುರುವಿನಿಂದ ಗುರುತ್ವ, ಗುರುತ್ವದಿಂದ ಸಕಲ ವೈಭವಂಗಳ ಸುಖ
ಆ ಗುಣ ಅವರೋಹಾರೋಹವಾಗಿ ಬಂದು
ವಸ್ತು ವಸ್ತುಕವಾಗಿ ಬಂದುದನಱಿದು
ಪಿಂಡಜ್ಞಾನಸ್ಥಲವ ಕಂಡು ರತ್ನ ರತ್ನವ ಕೂಡಿದಂತೆ
ರತಿ ರತಿ ಬೆರೆಸಿದಂತೆ, ಸುಖಸುಖವನಾಧರಿಸಿದಂತೆ
ಬೆಳಗು ಬೆಳಗಿಂಗೆ ಇದಿರಿಟ್ಟಂತೆ
ಅಂಡಪಿಂಡಜ್ಞಾನ ತ್ರಿವಿಧ ನಿಲವು ಸದ್ಯೋಜ್ಯಾತ ಲಿಂಗದ ಲೀಲಾಭಾವ

೧೭

ಅಂಗ ಪ್ರಾಣಿ ಪ್ರಾಣಲಿಂಗಿಯೆಂಬ ಉಭಯದ
ಮದ್ಯದಲ್ಲಿ ನಿಂದು ಅಱಿದರುಹಿಸಿಕೊಂಬ ಪರಿಯಿನ್ನೆಂತೊ
ಅದು ತತ್ತಿಯೊಳಗಿದ್ದ ಶುಕ್ಲ ಶೋಣಿಯಂತೆ
ಆ ತತ್ತಿಯ ಭಿತ್ತಿಯ ಮಱೆಯಲ್ಲಿ ಪಕ್ಷಿಯ ಪರುಷನದಿಂದ
ಬಲಿದು ಭಿತ್ತಿಯೊಡೆದು ಪಕ್ಷಿ ತದ್ರೂಪಾಗಿ

[1] ಕ್ಕೆ[2] ಬಲಿವನ್ನಕ್ಕ
ಇಪ್ಪಠಾವಿನಲ್ಲಿದ್ದು ತಾಯಿತ್ತ ಕುಟಕಕೊಂಡು ಆ ಘಟ ಬಲಿದು[3]ರುಕ್ಕೆ[4] ಯ ಲಕ್ಷಣಯೋಕ್ತಿಗೊಂಡು ಚರಿಸಿದ ಭೇದ ಪಿಂಡಜ್ಞಾನ ಸಂಬಂಧ.

ಆ ಗುಣ ಅಭಿಮುಖ್ಯವಾಗಿ ಚರಿಸಲಿಕ್ಕೆ ಜ್ಞಾನಪಿಂಡ ಸಂಬಂಧ
ಇಂತು ಪಿಂಡಜ್ಞಾನ ಜ್ಞಾನಪಿಂಡ ಉಭಯಪಿಂಡ ಲೇಪ ಸದ್ಯೋಜಾತ ಲಿಂಗದಲ್ಲಿ

೧೮

ಗೂಡಿನೊಳಗಿರ್ದು ಕಾಲವೇಳೆಯನಱಿತ ಕೂಗುವ ಕುಕ್ಕುಟ ಸಾವುದು ಬಲ್ಲುದೆ?
ತನ್ನ ಶಿರವಱಿದು ತಾಬೇಱೆ ಶಿವಬೇರೆ ಅಂಗಬೇಱೌದಲ್ಲಿ
ಆ ಅಂಗ ಪುಟನೆಗೆದಲ್ಲಿ ಆತ್ಮಸಂಗವೆಲ್ಲಿದ್ದಿತ್ತು?
ಶಿವಚ್ಛೇದನವಾದಲ್ಲಿ ಮತ್ತಾವಘಟಕ್ಕು ಶಿರಬಂಧವಾಗಲಿಕ್ಕೆ
ಆ ಘಟ ಚೇತನವಡಗಿ ಅಲ್ಲಿಯೆ ಮೃತವಾಗಿಪ್ಪುದು
ಆ ಉಭಯದ ಭೇದವ ಬಲ್ಲಡೆ ಪಿಂಡಜ್ಞಾನ ಸಂಬಂಧಿ, ಸದ್ಯೋಜಾತ ಲಿಂಗವ ಬಲ್ಲ.

೧೯

ತ್ರಿಗುಣಾತ್ಮಕನೆಂದು ಪಂಚಭೂತಾತ್ಮಕನೆಂದು
ಅಷ್ಟತನು ಮೂರ್ತಿಯಾತ್ಮನೆಂದು ಇಂತಿವಱೊಳಗಾದ ಕರ್ಮದಿ
ವಿಹಂಗ, ಪಿಪೀಲಿಕ, ಜ್ಞಾನಂಗಳೆಂದು ತ್ರಿಶಕ್ತಿಯೊಳಗಾದ
ನಾನಾ ಶಕ್ತಿಭೇದಂಗಳೆಂದು, ಇಂದ್ರಿಯವೊಂದರಲ್ಲಿ ಒದಗಿದ
ನಾನಾ ವರ್ಣಂಗಳೆಂದು, ಸಪ್ತಧಾತುವಿನೊಳಗಾದ
ನಾನಾ ಧಾತುಗಳೆಮದು, ಅಷ್ಟಮದಂಗಳೊಳಗಾದ
ನಾನಾ ಮದಂಗಳೆಂದು ಇಂತೀ ನಾನಾ ವರ್ಣಂಗಳನಱಿವ ಚಿತ್ತದ ಗೊತ್ತಾವುದು.
ಒಂದು ಗಿಡುವಿನಲ್ಲಿ ಹುಟ್ಟಿದ ಮುಳ್ಳ ಒಂದೊಂದ ಮುಱಿದು ಸುಡಲೇತಕ್ಕೆ?
ಬುಡವ ಕಡಿದು ಒಡಗೂಡಿ ಸುಡಲಿಕ್ಕೆ ವಿಶ್ವಮೊನೆ ನಷ್ಟ
ಇದು ಪಿಂಡಜ್ಞಾನ ಶುದ್ಧಜ್ಞಾನೋದಯ ಭೇದ ಸದ್ಯೋಜಾತ ಲಿಂಗವ ಕೂಡಿದ ಕೂಟ

೨೦

ವೇದ ವೇದಾರ್ಥ ಸಾರಾಯದಿಂದ ಹದಿನಾಱು ಶಾಸ್ತ್ರ ಹದಿನೆಂಟು ಪುರಾಣಂಗಳಾದವು
ಆ ಶಾಸ್ತ್ರ ಪುರಾಣಂಗಳ ಸಾರಾಯದಿಂದ ಜ್ಯೋತಿಜ್ಞಾನವಾಯಿತ್ತು
ಆ ಜ್ಯೋತಿಜ್ಞಾನದಿಂದ ಮನೋಜ್ಞಾನ, ಶ್ರುತಿಜ್ಞಾನ, ಮನಪರಿಯಾಯಜ್ಞಾನ,
ಅವಧಿಜ್ಞಾನ, ಕೇವಲಜ್ಞಾನ, ಇಂತು ಪಂಚಜ್ಞಾನವೆಂಬ ಪಂಚಸ್ಥಲವಾಯಿತ್ತು

ಮತಿಜ್ಞಾನ ಉಳ್ಳಾತನೆ ಭಕ್ತ, ಶ್ರುತಿಜ್ಞಾನ ಉಳ್ಳಾತನೆ ಮಹೇಶ್ವರ
ಮನಪರಿಯಾಯಜ್ಞಾನ ಉಳ್ಳಾತನೆ ಪ್ರಸಾದಿ, ಅವಧಿಜ್ಞಾನ ಉಳ್ಳಾತನೆ ಪ್ರಾಣಲಿಂಗಿ
ಕೇವಲಜ್ಞಾನ ಉಳ್ಳಾತನೆ ಶರಣ, ಸ್ಥಲವೆಂಬುದೆ ಭವಂನಾಸ್ತಿ
ಈ ಪಂಚಜ್ಞಾನಕ್ಕೆ ಮೂಲವಾದ ಜ್ಯೋತಿಜ್ಞಾನವೇ
ಪಂಚಜ್ಞಾನಸ್ಥಲದಲ್ಲಿ ಯೇಕಾಕಾರದಲ್ಲಿದ್ದ ಐಕ್ಯನು
ಇಂತೆಂದುದಾಗಿ ಕೂಡಲ ಚನ್ನಸಂಗಯ್ಯನಲ್ಲಿ ಪಂಚಸ್ಥಲದ ನೆಲೆಯ ಬಲ್ಲ
ಐಕ್ಯ ಬಸವಣ್ಣಂಗೆ ನವೋ ನವೋ ಎಂಬೆನು

೨೧

ಪಶುವಿನ ಉದರದೊಳಗಿರ್ದ ಕ್ಷೀರ ಶಿಶುವಿಂಗಲ್ಲದೆ,
ಪಶುವಿಂಗಲ್ಲದೆ ಇಪ್ಪ ಪರಿ ಇದೇನೊ?
ಪಶುವಿನ ಕಳೆವರಿದಂ ಪೊರಮಟ್ಟು ಕಾಲಾಗ್ನಿಯಾಗಿ ಪಶುವಕೊಂದಿತ್ತು,
ಶಿಶುವ ನುಂಗಿತ್ತು ಪಶುಪತಿಯ ಕೂಡಿ ಶಿಶುವಿಂಗೆ ಪಶುವಿಂಗೆ
ಪೊಱಗಾದ ವಿಷಯರಹಿತನು ನಿಮ್ಮಱುಹು ಮಹಲಿಂಗ ಗುರು ಶಿವಸಿದ್ಧೇಶ್ವರ ಪ್ರಭುವೆ.
ಮುಗಿಲಮಱೆಯ ಸೂರ್ಯನಂತೆ, ನೆಲದಮಱೆಯ ನಿಧಾನದಂತೆ
ಒಱೆಯ ಮಱೆಯ ಅಲಗಿನಂತೆ, ಹಣ್ಣಿನೊಳಗಣ ರಸದಂತೆ,
ಶರಣನ ಶರೀರವ ಮಱೆಗೊಂಡು ಪರಮ ಪಾವನಮೂರ್ತಿ
ಪರಾಪರ ತಾನು ತಾನಗಿರ್ದುದನೇನೆಂಬೆನಯ್ಯಾ
ಮಹಾಲಿಂಗ ಗುರು ಶಿವಸಿದ್ಧೇಶ್ವರ ಪ್ರಭುವೆ.

೨೪

|| ತ್ರಿವಿಧಿ ||

ಇದಿರಿಟ್ಟು ನಾ ಬಂದು ಸದಮಲಜ್ಞಾನವ ಕಂಡೆ
ಉದಯಾದ್ರಿಯಲಿ ಜ್ಯೋತಿ ಬೆಳಗಿತೆಂದು
ಆ ಬೆಳಗಿನ ಕೃಪೆಯಿಂದೆ ಈ ಬೆಳಗ
ನಾ ಕಂಡು ಆನು ನೀನಾದೆನೈ ಯೋಗಿನಾಥ.

೨೪

ಏನೆಂದು ನೋಡಲಾಜ್ಞಾನ ಮೂಲದ ಬೆಳಗು
ತಾನು ತಾನಾಗಿ ಪ್ರಜ್ವಲಿಸಿತಲ್ಲಿ
ಸ್ವಾನುಭಾವದ ಧ್ಯಾನ ತನ್ನಲ್ಲಿ ತೋಱಿದಡೆ
ನಾನು ನೀನಾದೆನೈ ಯೋಗಿನಾಥ

೨೫

ಅಂಡಜ ಪರಿಭವವು ಪಿಂಡಜದಲೊಪ್ಪುತಿದೆ
ಪಿಂಡಜಲ ಬಿಚ್ಚಿ ಬ್ರಹ್ಮಾಂಡವ ಮಾಡಿ
ಖಂಡೇಂದು ಶೇಖರನ ನೆಲೆಯಮಾಡಿದ ಎನ್ನ
ಗಂಡ ಬಸವಣ್ಣನೈ ಯೋಗಿನಾಥ.

[1] ರೆಟ್ಟೆ (ಹ)

[2] ರೆಟ್ಟೆ (ಹ)

[3] ರೆಟ್ಟೆ (ಹ)

[4] ರೆಟ್ಟೆ (ಹ)