|| ವೃತ್ತ ||          

ನೋಡದ ಮುನ್ನ ದರ್ಪಣವ ದರ್ಪಣಭಾವಮದುಂಟು ವಿಭ್ರಮಂ-
ಗೂಡಿ ವಿರಾಜಿಸುತ್ತಭಿಮುಖಾಸ್ಪದ ಮಾದ ನಿಜಸ್ವರೂಪಮಂ
ನೋಡಿದ ನಂತರಂ ಮರಳಿ ದರ್ಪಣಭಾವಮದುಂಟೆ ತತ್ವಮಂ
ನೋಡದ ಮುನ್ನ ಮಾಯೆ ಬಳಿಕೆಯಲ್ಲಿಯ ಮಾಯೆ ಬಿಡಾ ಶಿವಾಧವಾ

|| ವಚನ ||                     

ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ;
ಕೂಟಕ್ಕೆ ಸ್ತ್ರೀಯಾಗಿ ಕೂಡಿದಳು ಮಾಯೆ,
ಮೋಹಕ್ಕೆ ಮಗಳಾಗಿ ಹುಟ್ಟಿದಳು ಮಾಯೆ,
ಇದಾವ ಪರಿಯಲ್ಲಿ ಕಾಡಿಹುದು ಮಾಯೆ!
ಈ ಮಾಯೆಯ ಕಳೆವಡೆ ಎನ್ನಳವಲ್ಲ ನೀವೆ ಬಲ್ಲಿರಿ ಕೂಡಲ ಸಂಗಮದೇವಾ !

ಇಲ್ಲದ ಮಾಯೆಯನುಂಟು ಮಾಡಿಕೊಡು
ಬಲ್ಲತನಕ್ಕೆ ಬಾಯ ಬಿಡಲೇತಕೋ?
ಇಲ್ಲದ ಮಾಯೆಯ ಇಲ್ಲೆನ್ನಲಱಿಯದೆ
ತಲ್ಲಣಿಸಿ ಬಾಯ ಬಿಡಲೇತಕೋ?
ಎಲ್ಲವ ತನ್ನ ತಾ ತಿಳಿದು ನೋಡಿದಡೆ
ಕೂಡಲ ಚನ್ನಸಂಗಯ್ಯ ತಾನೆ ಬೇಱಿಲ್ಲ.

ನಿರ್ಣಯವನಱಿಯದ ಮನವೆ,
ದುಗುಡವನಾಹಾರಗೊಂಡೆಯಲ್ಲ.
ಮಾಯಾಸುತ್ರವಿದೇನೊ?
ಕಂಗಳೊಳಗಿನ ಕತ್ತಲೆ ತಿಳಿಯದಲ್ಲ
ಬೆಳಗಿನೊಳಗಣ ಶೃಂಗಾರ ಬಳಲುತ್ತಿರೆ ಗುಹೇಶ್ವರಾ

ಅಷ್ಟಮಯವೆಲ್ಲವು ಶಕ್ತಿರೂಪು
ಅಸ್ತಿಮಯವೆಲ್ಲವು ವಸ್ತುರೂಪೆಂಬರು
ಆ ಅಷ್ಟಮಯದಲ್ಲಿ ಅಸ್ಥಿ ಬಲಿದು ಘಟ್ಟಿಗೊಂಡಿತ್ತು
ಮತ್ತೆ ವಸ್ತುಮಯ ವೇತರಿಂದಾಯಿತ್ತು?
ಅದಱ ಬಿನ್ನಣದ ಬೆಡಗ ಅಹುದೆನ್ನಭಾರದು, ಅಲ್ಲೆನ್ನಬಾರದು

ಉದಕ ಬಹುವರ್ಣದಂತೆ, ಮಾರುತ ಜೀವದಂತೆ
ಅನಲನ ಕಾಲ ನಾಲಗೆಯಂತೆ, ಹೆಱೆಹಿಂಗದ ಮಾಯೆ

ಭಾವಿಸಿದಲ್ಲಿಯೆ ನಿಂದಿತ್ತು ಕಾಲಾಂತಕ ಭೀಮೇಶ್ವರಲಿಂಗವೆಂದಲ್ಲಿಯೇ ಹೆಱೆ ಹಿಂಗಿತ್ತುಮಾಯೆ!

ಸುರರಿಗೆ ನಿರಂತ ಜಾಗರಣೆ.
ಮರುಳುಗಳಿಗೆ ನಿರಂತರ ಸ್ವಪ್ನ
ಅಚರಜೀವಿಗಳಿಗೆ ನಿರಂತರ ಸುಷುಪ್ತಿ
ವರಯೋಗಿಗಳಗೆ ನಿರಂತರ ತುರಿಯ
ಸ್ಥೂಲತನು ಸೂಕ್ಷ್ಮತನು ಕಾರಣ ತನುವ
ಪ್ರಾಪ್ತಿಸುತ್ತೀ ತನುತ್ಪನ್ನ ಮಾಯೆ
ತನುವಾಗಿ ಮಾಯೆ ತೋರುತಿಪ್ಪುದು
ಸಕಲ ತನುರಹಿತ ನೀನೆಂದು
ಸಕಲ ಮಾಯ ಹುಟ್ಟಿಸಿಯೆಂದು
ತನ್ನ ತನ್ನಿಂದಱಿದು ಪರಮಾರ್ಥ ನೀನೆ
ಸಿಮ್ಮಲಿಗೆಯ ಚನ್ನರಾಮಾ

ಹಿರಿದಪ್ಪ ಮಾಯೆಯನೆಂತು ಕೆಡಿಸುವೆನೆಂದು
ಬೆಂಬಳಿವರು ಮರುಳೆ?
ಮಾಯೆ ದಿಟವಲ್ಲ, ಇಲ್ಲದುದನೆಂತು ಕೆಡಿಸುವಿರಿ?
ತನ್ನನಱಿವಡೆ ಸಾಕು, ಅಱಿದೆನರಿದೆನೆಂಬುದು ಮಾಯೆ,
ಈ ಮಾಯೆ ನಿನಗಿಲ್ಲ, ಚಿನ್ಮಯ ನೀನೆ
ಸಿಮ್ಮಲಿಗೆಯ ಚನ್ನರಾಮಾ

ನಿಚ್ಚ ಕನಸಿನಲ್ಲಿ ಅಶ್ವವಧೆ ಬ್ರಹ್ಮತ್ಯವ ಮಾಡಿದಡಂ
ಎಂತು ನಡೆದಡಂ ದೇವದತ್ತಂಗೆ ಗುಣದೋಷವುಂಟೆ?
ಸ್ವರ್ಗ ನರಕವುಂಟೆ ಹೇಳಾ? ಅದೆತ್ತಣ ಮಾತು
ಕನಸು ಕಾಬುದು ಮಿಥ್ಯವಪ್ಪುದಱs ಮಾಯಾ ಮಾಯ
ಈ ಮಾಯೆಯನಱಿದು ಹುಸಿಜೀವ ಭಾವಾಭಾವದಿಂದ
ಏನಮಾಡಿದಡೇನೊ, ಸಿಮ್ಮಲಿಗೆಯ ಚನ್ನರಾಮಾ.

ಹಾವಹೊತ್ತುಕೊಂಡು ಹೋಗುತ್ತ ಹಾವಡಿಗನಡಿಯಲ್ಲಿ
ಹಾವಕಂಡ ಮರುಳುಗಾವಿಲತನವ ನೋಡಾ  ತ
ನ್ನಿಂದನ್ಯವೆಂದಡೆ ಭಿನ್ನವೇಱಿ ಕರವಾಯಿತ್ತು
ತನ್ನ ಪರಮಾರ್ಥ ತನ್ನಲ್ಲಿ ಸಿಮ್ಮಲಿಗೆಯ ಚನ್ನರಾಮನೆಂಬ
ಲಿಂಗದಲ್ಲಿಯೆ, ಮಾಯೆ ಮರ್ಕಟ ಜಡನೆ?

ವಿಧಿನಿಷೇಧ, ಜನನೀ ಜನಕ, ಕುಲಗೋತ್ರ, ಜಾತಿವಿಜಾತಿ
ಭೇದಾಭೇದ, ಸ್ವರ್ಗನರಕಾದಿ ಭಯವೇನು ಇಲ್ಲ ಜಗವೇನು ಇಲ್ಲ
ಆತ್ರ ಪಿತಾsಪಿತಾ ಭವತಿ   ಮಾತಾsಮಾತಾ ಲೋಕೋsಲೋಕಃ
ದೇವೋ ದೇವ ವೇದೋ ವೇದೋ ಬ್ರಾಹ್ಮಣೋsಬ್ರಾಹ್ಮಣ
ಶ್ಚಾಂಡಾಲೋsಚಾಂಡಾಲಃ
ಅದು ತಾನೆ ತನ್ನಿಂದನ್ಯವಿಲ್ಲ ತೋಱುವ ತೋಱಿಕೆಯಲ್ಲ
ಮಾಯೆಯಂದರಿದು ಜ್ಞಾನಾನಂದ ಪರಿಪೂರ್ಣ ತಾನೆಂದಱಿದು
ನೀನಾಗಿ ನಿಂದ ನಿಜಗುಣ ನೀನೆ ಸಿಮ್ಮಲಿಗೆಯ ಚನ್ನರಾಮಾ

೧೦

ಜ್ಞಾನಾಮೃತವೆಂಬ ಜಲಧಿಯ ಮೇಲೆ
ಸಂಸಾರವೆಂಬ ಹಾವಸೆ ಮುಸುಕಿಹುದು
ನರನೆ ಮೊಗೆದರು ಬಂದು ಕರೆದಲ್ಲದೆ ತೆರಳದು
ಮರಳಿ ಮುಸುಕುವದ ಮಾಣಿಸಯ್ಯ !
ಆಗಳು ಎನ್ನುವ ನೆನೆವುತ್ತಿರಬೇಕೆಂದು ಬೇಗ ಗುರು ಒಪ್ಪಿಸಿ
ತನ್ನ ಪ್ರಸಾದವೆಂದು ಕುಱುಹ ಕೊಟ್ಟನು,
ದಿವಾರಾತ್ರೆ ತನ್ನನಱಿಯಬೇಕೆಂದು
ಕಱೆಯ ನೀರುನುಂಡು ತೊಱೆಯ ನೀರ ಹೊಗಳುವ
ಅರೆಮರುಳರ ಮೆಚ್ಚುವನೆ ನಮ್ಮ ಕೂಡಲಚನ್ನಸಂಗಮದೇವಾ?

೧೧

ಎನಗೆ ನೀ ಮಾಡಿದ ಸಂಸಾರದ ಬಳಲಿಕೆ
ನಿನಗೆನ್ನ ಕಾಡುವ ಸಂಸಾರದ ಬಳಲಿಕೆ
ಇಬ್ಬರಿಗೆಯು ಸರಿ, ನಿನ್ನ ಹೆಚ್ಚೇನು ಎನ್ನ ಕುಂದೇನು?
ನೀನು ಭಕ್ತದೇಹಿಕನಾದ ಬಳಿಕ
ಸಕಳೇಶ್ವರ ನೀ ಬಲ್ಲೆ ನಾ ಒಲ್ಲೇ!

೧೨

ನೇಣ ಹಾವೆಂದು ಬಗೆದವನಂತೆ
ಈ ದೇಹಾದಿಯಾನೆಂದು ಬಗೆದು ತನ್ನ ಭ್ರಮೆಯಿಂದ
ಇಲ್ಲದ ಸಂಸಾರ ಸಕಲದುಃಖಕ್ಕೊಳಗಾದರಯ್ಯ
ಆ ಭ್ರಮೆಯ ಹುಸಿಯೆಂದು ತಿಳಿದ
ತಿಳಿವು ನೀನೆ ಸಿಮ್ಮಲ್ಲಿಗೆಯ ಚನ್ನರಾಮಾ.

೧೩

ಸಂಸಾರದ ವ್ಯಾಧಿಗೆ ಗುರು ಹೇಳಿದ ಔಷಧಂಗಳಂ
ಮನದಲ್ಲಿಕ್ಕಿ ಮೂದಲಿಸಿ ಹೋಗಲೀಯ್ಯದೆ
ವಿಚಾರಿಸಿ ನೋಡುತಿರ್ದೆನು
ಸಂಸಾರಂಗಳು ಮುಟ್ಟಲಮ್ಮದೆ ಹೆರೆಹಿಂಗಿ
ತೇರ್ಗಟ್ಟದಂತೆ ನಿಂದು ಕಪಿಲಸಿದ್ಧ ಮಲ್ಲೇಶ್ವರ ದೇವರ
ಶ್ರೀಪಾದಕ್ಕೆ ಬಟ್ಟೆಗೊಟ್ಟು ಭಯಂಗೊಂಡು ನಿಂದು
ಪೋಗಯ್ಯ ಪೋಗಯ್ಯ ಎನುತ್ತಂ ಇರವೆ?

೧೪

ಮಧ್ಯದ ಮಧ್ಯದಲಿ ವೇದಾದಿ ಮೂಲಿನಿ
ಆದಿಯ ಸಂತಕ್ಕೆ ಆದಿಯಾಗಿಪ್ಪಳು.
ಐದೇಳನಡಱಿದಡೆ ಮೈದೋಱದಿಪ್ಪಳು
ಪತಿಗೆ ಪತಿಯಾಗಿಪ್ಪಳು, ಸತಿಗೆ ಬುದ್ಧಿಗಿಪ್ಪಳು
ತನ್ನ ನೋಡಲೆಂದು ಹೋದಡೆ ಚಂದ್ರಸೂರ್ಯರ ನುಂಗಿ
ಕಣ್ಗಾಣದೆ ಹೋಗಿ ಅತ್ತೆಯ ಕೈವಿಡಿಯಲು,
ಈ ಮುವ್ವರಿಗೆಹುಟ್ಟಿಗೆ ತಾನೆಯಾದಳು.
ತಾಯ ಕೈವಿಡಿದನೆಂದು ನಾನಂಜಿ ಸತಿಯಾದೆನೆನಗೆ ಪತಿಯಾದ.
ಕಪಿಲಸಿದ್ಧ ಮಲ್ಲಿಕಾರ್ಜುನಯ್ಯಾ,
ನಿನ್ನ ಕೂಡಿದ ಕೂಟ ನೀನಱೆದಡಱೆವೆ, ಮಱದಡೆ ಮಱವೆ.

೧೫

ಕಳೋರಗನ ಹೆಡೆಯ ಮಧ್ಯದೊಳೊಂದು ಕೋಳು ಸಿಕ್ಕು ಹೆಣ್ಣು
ಕಾಲು ಮೇಲಾಗಿ ತಲೆಕೆಳಗಾಗಿ ಅಱುಹರನೆಲ್ಲರ ತನ್ನ ಕಾಲ ಸಂದಿಯಲ್ಲಿರಿಸಿ
ಭಾಳಾಂಬಕನ ಲೀಲೆಯ ಹೊತ್ತಾಡುವರನೆಲ್ಲರ ತನ್ನ ಶುಕ್ಲದ
ಪದರದಲ್ಲಿ ಬೈಚಿಟ್ಟುಯಿದ್ದಾಳೆ ಆ ಹೊಲೆಯ ಹಱಿದಲ್ಲದಾಗದು
ಸದಾಶಿವಮೂರ್ತಿಲಿಂಗವನಱಿವುದಕ್ಕೆ.

೧೬

ಕಾಯದ ಕಂದೆಱವಿಯಲ್ಲಿ ಉದಯವಾದ ಧಾವತಿ ಎರಡು ನೋಡಯ್ಯ
ಮಾಯಾಭ್ರಾಂತಿಯತ್ತಲೊಂದು ಎಳೆವುತ್ತಿದೆ,
ದೇವಾ, ನಿಮ್ಮತ್ತ ಒಂದು ಎಳೆವುತ್ತಿದೆ,
ಒಂದಱ ಸಾಹಸವನೊಂದು ಗೆಲಲಱಿಯದು
ಮುಂದಣ ಸತ್ಪಥಕ್ಕೆ ಎಂತಡಿ ಇಡುವೆನಯ್ಯ?
ಕಾಲಚಕ್ರದಲ್ಲಿ ಹುಟ್ಟಿ ಕರ್ಮಚಕ್ರದಲ್ಲಿ ಬೆಳೆದು
ಕಲ್ಪಿತದಿಂದಲೆ ದಿನಂಗಳಂ ಸವೆದು
ಇಂತು ತಲೆ ಎರಡರ ಪಕ್ಷಿವಿಷಯ ನಿರ್ವಿಷವ ಮೆದ್ದಂತಾಯಿತ್ತು
ಅಂದಂದಿನ ಅಱಿವು ಅಂದಂದಿನ ಮಱವೆಗೆ ಸರಿ.
ಇನ್ನು ಬಂಧನವೆಂದಱಿವುದಯ್ಯ ಅಮರಗುಂಡದ ಮಲ್ಲೇಶ್ವರಾ.

೧೭

ಉಳ್ಳುದೊಂದು ತನು, ಉಳ್ಳುದೊಂದು ಮನ,
ನಾನಿನ್ನಾವ ಮನದಲ್ಲಿ ಧ್ಯಾನವ ಮಾಡುವೆನಯ್ಯಾ?
ಸಮಸಾರವನಾವ ಮನದಲ್ಲಿ ತಲ್ಲೀಯವಾಹೆನಯ್ಯಾ?
ಅಕಟಕಟಾ, ಕೆಟ್ಟೆಕಟ್ಟೆ; ಸಂಸಾರಕ್ಕಲ್ಲಾ ಪಾರಮಾರ್ಥಕಲ್ಲಾ!
ಎರಡಕ್ಕೆ ಬಿಟ್ಟ ಕಱುವಿನಂತೆ !
ಬಿಲ್ಲು ಬೆಳವಲಕಾಯನೊಂದಾಗಿ ಹಿಡಿಯಬಹುದೆ
ಚನ್ನಮಲ್ಲಿಕಾರ್ಜುನಾ?

೧೮

ಈ ಆಸೆಯೆಂಬವಳು ವಾಹಿಗಿಟ್ಟೊಗೆಗಳಂ ಕಟ್ಟಿಸಿ,
ನದೊಯೊಳಗಂ ಪೊಗಿಸಿ, ಪರದೇಶಕ್ಕೆ ನೂಂಕುವಳು
ಈ ಆಸೆಯೆಂಬ ಪಾತಕಿಯಿಂದೆ ನಿಮ್ಮೆಡೆಗಾಣದಿಪ್ಪೆನು.
ಈ ಆಸೆಯೆಂಬ ಪಾತಕಿಯನೆಂದಿಗೆ ನೀಗಿ
ಎಂದು ನಿಮ್ಮನೊಡಗೂಡಿ (ಬೇಱಾಗದಿಪ್ಪೆನೊ) ಬೆಱಗಾಗಿಪ್ಪೆನೊ
ಹೇಳಾ ಎನ್ನ ಕಪಿಲಸಿದ್ಧ ಮಲ್ಲಿಕಾರ್ಜುನಾ!

೧೯

ಆಸೆ ಉಳ್ಳನ್ನಬರ ಆಶ್ರಯಿಸುವ
ಆಶ್ರಯದಾಸೆಯಿಂದ ಕರಕಷ್ಟ ಕಾಣಿರೊ ಅಯ್ಯ
ಆಸೆಯೆ ದಾಸಿಕಾಣಿರೊ, ನಿರಾಸೆಯ ಈಶ ಕಾಣಿರಣ್ಣಾ.
ದಾಸತ್ವದ ಈಶತ್ವದ ಅನುವ ವಿಚಾರಿಸಿ
ಆಸೆಯಡಗಿದಡೆ ಅದೆ ಈಶಪಥವು
ಉರಿಲಿಂಗಪೆದ್ದಿಪ್ರಿ ವಿಶ್ವೇಶ್ವರಾ.

೨೦

ಪರರಾಸೆಯೆಂಬೊ ಜ್ವರ ಹತ್ತಿತ್ತಾಗಿ   ಕಳವಳಿಸಿ ನುಡಿವೆಯ್ಯ.
ಹೊನ್ನು ಹೆಣ್ಣು, ಮಣ್ಣು, ಬಯಸಿ ವಿಕಳಗೊಂಡಂತೆ
ಪ್ರಳಾಪಿಸಿ ವಿಕಳಗೊಂಡು ನುಡಿವುತ್ತಿಪ್ಪೆನಯ್ಯಾ.
ಈ ಕಳವಳವನು ತಿಳಿದು ಸುಭಾಷೆಯನ್ನಿತ್ತು
ನಿಮ್ಮ ಕರುಣಾಮೃತವೆಂಬ ಕಷಾಯವನೆಱೆದು
ಪರರಾಸೆಯೆಂಬ ಜ್ವರದ ಮಾಣಿಸು
ಬಸವಪ್ರಿಯ ಚನ್ನಕೂಡಲಸಂಗಮದೇವಯ್ಯ.

೨೧

ಅಂಧಕಾರವೆಂಬ ಗಂಹ್ವರದೊಳಗೆ ನಿದ್ರೆಯೆಂಬ
ರಾಕ್ಷಿಸಿ ಗ್ರಹಿಸಿ ವೀರರ ವಿಚುಮಾಡಿ
ಧೀರರ ಧೃತಿಗೆಡಿಸಿ, ಶಾಪಾನುಗ್ರಹ ಸಾಮರ್ಥ್ಯರ ಸತ್ತಂತಿರಿಸಿ
ನಿಚ್ಚ ನಿಚ್ಚ ಜೀವನಾಶವ ಮಾಡುತ್ತಿಹಳು ನೋಡಯ್ಯಾ
ಕೂಡಲಸಂಗಮದೇವಾ.

೨೨

ನಿದ್ರೆಯಿದ್ದೆಡೆಯಲ್ಲಿ ಬುದ್ಧಿಯೆಂಬುದಿಲ್ಲ ನೋಡಾ.
ಕಾಯವೊಂದೆಸೆ, ಜೀವವೊಂದೆಸೆ,
ಗುಹೇಶ್ವರಲಿಂಗ ತಾನೊಂದೆಸೆ!

೨೩

ತರುಗಳ ಮುಱಿದು ಗಗನಕ್ಕೆ ಈಡಾಡುವ
ಅನಿಲ ರೂಪ ನಿರೂಪೊ? ಬಲ್ಲಡೆ ನೀವು ಹೇಳಿರೆ!
ಇಂತಿ ಆಳಿನಾಳಿನ ಕೀಲಾಳಿನ ಅಂತುವನಾರಿಗೆಯು ಅಱಿಯಬಾರದು
ಅನಾದಿಮೂದೊಡೆಯನ ಬಲ್ಲೆನೆಂಬವನ ಪರಿಯನೋಡಾ!
ರೂಪೆಂದಡೆ ಬದ್ಧ ನಿರೂಪೆಂದಡೆ ಶೂನ್ಯ;
ರೂಪಾದಿರೂಪನೆನ್ನ ಕಪಿಲಸಿದ್ದಮಲ್ಲಿಕಾರ್ಜುನ ದೇವರು
ಗುರುಕಾರುಣ್ಯವುಳ್ಳವರಿಗಲ್ಲದೆ ಅಱಿಯಬಾರದು.

೨೪

ದೇವದಾನವ ಮಾನವ ಮೊದಲಾದ ಎಲ್ಲಾ ಜೀವನದಲ್ಲಿ
ಹಿರಿದು ಕಱಿದೆನ್ನದೆ ಬಲೆಯ ಬೀಸಿ
ಸರಿದು ತೆಗೆಯಲೊಡನೆ  ಅಱಿವು ಮಱಿಯಿತ್ತು
ನೋಟ ಜಾಱಿತ್ತು, ಬುದ್ಧಿ ತೊಱೆಯಿತ್ತು
ಜೀವ ಹಾಱಿತ್ತು, ದೇಹ ಪೊಱಗಿತ್ತು
ಇದು ನಿಚ್ಚ ನಿಚ್ಚ ಬಹುದ ಕೀಲನಾರೂ ಅಱಿಯರು
ಕೂಡಲಸಂಗಮದೇವಾ

೨೫

ತನ್ನ ಸತಿ, ತನ್ನಧನದುನ್ನತಿಯೊಳಿರಬೇಕು
ಅನ್ಯಸತಿ, ಅನ್ಯಧನದಾಸೆಯಂ ಬಿಡಬೇಕೆಂಬುದು ಜಗ.
ತನ್ನ ಸತಿ ಅನ್ಯಸತಿಯೆಂಬುವ ಬಲ್ಲವರುಂಟೆ ಹೇಳಾ ಮರುಳೆ?
ಬಲ್ಲವರುಂಟುಂಟು ಶಿವಶರಣರು:
ತನ್ನ ಶಕ್ತಿಯೆ ಶಿವಶಕ್ತಿ ಅನ್ಯ ಶಕ್ತಿಯೆ ಮಾಯಾಶಕ್ತಿ ಕಾಣಾ ಮರಳೆ
ಇದು ಕಾರಣ ಮಾಯಾ ಶಕ್ತಿಯ ಸಂಗ ಭಂಗವೆಂದು
ನಿವೃತ್ತಿಯಂ ಮಾಡಿ ಶಿವವಶಕ್ತಿಸಂಪನ್ನರಾಗಿ
ಶಿವಲಿಂಗವನೆರೆದರಯ್ಯ ನಿಮ್ಮ ಶರಣರು.
ಇದು ಕಾರಣ ಶರಣಂಗೆ ಅನ್ಯಸ್ತ್ರೀಯ ಸಂಗ ಅಘೋರ ನೋಡಾ,
ಮಹಾಲಿಂಗ ಗುರು ಶಿವಸಿದ್ಧೇಶ್ವರ ಪ್ರಭುವೆ.

೨೬

ನಾನೊಬ್ಬನುಂಟೆಂಬುವಂಗೆ ನೀನೊಬ್ಬನುಂಟಾಗಿ ತೋಱುವೆ
ನಾನು ನೀನೆಂಬುದುಂಟಾದಲ್ಲಿ ಜ್ಞಾನಾಜ್ಞಾನವುಂಟಾಯಿತ್ತು.
ಆ ಜ್ಞಾನಾಜ್ಞಾನವುಂಟಾದಲ್ಲಿಯೇ ನಾನಾ ವಿವಿಧ ಪ್ರಪಂಚವಾಯಿತ್ತು ನೋಡಾ.
ಮಾಯಿಕವೆಂಬುದು ಹೀಂಗಲ್ಲದೆ ಇನ್ನು ಹ್ಯಾಂಗಿಹುದು ಹೇಳಾ?
ನಾನು ನೀನೆಂಬುದೆರಡು ಸತ್ತಡೆ ಜ್ಞಾನ ಅಜ್ಞಾನವಱತಿತ್ತು.
ನಾನಾ ವಿಧವಾಗಿ ತೋಱಿದ ಮಯಿಕವಳಿಯಿತ್ತು.
ಮಾಯಿಕವಳಿಯಿತ್ತಾಗಿ ನಿರ್ಮಾಯನಾದನು ಕಾಣಾ
ನಿರ್ಮಾಯನಾದ ಶಿವಶರಣಂಗೆ ಕಾಯವೆಲ್ಲಿಯದು,
ಮಾಯವೆಲ್ಲಿಯದು, ಮನವೆಲ್ಲಿಯದು, ನೆನಹೆಲ್ಲಿಯದು,
ಅಱುಹೆಲ್ಲಿಯದು, ಕುಱುಹೆಲ್ಲಿಯದು?  ತಾ ನಷ್ಟವಾದ ಸರ್ವನಷ್ಟಂಗೆ
ತನಗನ್ಯವಾಗಿ ಇನ್ನೇನು ದೃಷ್ಟವನು ಹೇಳಲಿಲ್ಲಾ.
ಯದೃಷ್ಟಂ ತನ್ನಷ್ಟಂ ಎಂದುದಾಗಿ
ಮಾಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೆಂಬ ಲಿಂಗವು
ನಿರಾಳವಾಗಿ ಇನ್ನೇನು ಎಂಬ ನುಡಿಗೆಡೆಯಿಲ್ಲ ಕಾಣಿರೊ|

೨೭

ಚಿದ್ವಿಲಾಸದ ಮುಂದೆ ಇದಿರಿಟ್ಟು ತೋಱುವ
ಮಾಯಾವಿಲಾಸದ ಹೊದ್ದಿಗೆ ಇದೇನೊ!
ಶುದ್ಧನಿರ್ಮಲ ನಿರಾವರಣನೆಂಬ ನಿಜಭಾವವೆ ನಿಶ್ಚಯವಾದಡೆ
ಎಗ್ನ ತನುಮನ ಭಾವದೊಳಗ್ಹೊಱಗೆ ಹಿಡಿದಿಪ್ಪ
ಮಾಯಾ ಪ್ರಚಂಚು ಮಾಣ್ಟುದು ಕಾಣಾ,
ಮಹಾಲಿಂಗ ಗುರು ಶಿವಸಿದ್ಧೇಶ್ವರ ಪ್ರಭುವೆ !

೨೮

ಮೂಱು ಬಲಿಯನು ಇಕ್ಕಿ ಜಾರಿ ಕೆಡಹುವ ಮಾಯೆ
ಆರೂಢನೆಂಬವರ ಬೇಡಿಸೂದು
ಕರುಣಾಕರನೆ  ಕಪಿಲಸಿದ್ಧಮಲ್ಲೇಶ್ವರನ
ಶರಣರಿಗೆ ಅಂಜಿ ಓಡಿತು ಮಾಯೆಯು.

೨೯

ಹೊನ್ನು ಹೆಣ್ಣು ಮಣ್ಣು ಮುನ್ನವೆ ತಾ ಹುಟ್ಟಿ
ಮನ್ನಣೆಯ ಕೆಡಿಸಿದವು ಯೋಗಿಗಳನು
ಇನ್ನು ಗುರು ಕರುಣವುಳ್ಳಬರು ಜಱಿಯಲ್ಕಾಗಿ
ಕುನ್ನಿಯಾದಳು ಮಾಯೆ ಯೋಗಿನಾಥ.

೩೦

ಸಂಸಾರ ಸಾಗರಕೆ ಹಡಗ ನೀನೆ ಗುರುವೆ
ತಡಿಗೆ ಸೇರಿಸು ಎನ್ನ ಗುರು ಕರುಣದಿ
ಕರುಣ ಸಾಗರದೊಳಗೆ ಈಡಾಡದಿರ್ದಡೆ
ಕೊಱತೆ ನಿಮಗಪ್ಪುದೈ ಯೋಗಿನಾಥ.

೩೧

ತನುತ್ರಯವ ಮೀಱುದಳು ಮನತ್ರಯವನತಿಗಳೆದು
ತ್ರೈಲಿಂಗಕ್ಕೆ ತಾನೆ ಆದಿಯಾಗಿ
ಕರ್ಮಭಕ್ತಿ ಜ್ಞಾನ ಸೊಮ್ಮು ತಾನಾಗಿ
ಪರಬ್ರಹ್ಮವನೈದಿದಳು ಯೋಗಿನಾಥ.