‘ಲಿಂಗಚಿದಮೃತಬೋಧೆ’ಯನ್ನು ಸಂಪಾದಿಸಿದವನ ನಿಜನಾಮ ತಿಳಿಯದು. ಕೃತಿಯ ಕರ್ತೃವೇ ಆ ವಿಷಯದಲ್ಲಿ ಮೌನ ತಾಳಿದ್ದಾನೆ. “ಲಿಂಗಚಿದಮೃತಬೋಧೆ ಮುಕ್ತಕವಾಗಿ ಸೇರಿದನೋರ್ವದೇಶಿಕ ಸಚ್ಚಿದಾನಂದ ಸ್ವರೂಪನೀಕ್ಷಿಸಲೋಸ್ಕರ” ಎಂದಿಷ್ಟು ಪ್ರಾರಂಭದ ಸೂತ್ರದಲ್ಲಿ ಹೇಳಿಕೊಂಡಿದ್ದಾನೆ. ಇದರ ಮೇಲಿಂದ ಲಿಂಗಚಿದಮೃತಬೋಧೆಯ ಕರ್ತೃ ಒಬ್ಬ ದೇಶಿಕನೆಂಬುದು ಸ್ಪಷ್ಟವಾಗುತ್ತದೆ. ದೇಶಿಕನೆಂದರೆ ಸಂಚಾರೀ ಜಂಗಮ. ಭಕ್ತರ ಉದ್ಧಾರಕ್ಕಾಗಿ ಒಂದು ಸ್ಥಳದಲ್ಲಿ ನಿಲ್ಲದೆ ಊರೂರಿಗೆ ಅಲೆಯುವುದು ಅವನ ಕಾಯಕ. ಹೀಗಿದ್ದಾಗ ಆತನ ಗುರುಪೀಠವನ್ನಾಗಲಿ, ಸ್ಥಳನಿರ್ದೇಶವನ್ನಾಗಲಿ ಹೇಳದಿರುವುದು ಸ್ವಾಭಾವಿಕ. ಅವನ ಕಾಲದ ವಿಷಯದಲ್ಲಿಯೂ ಅಷ್ಟೇ ಮೌನ. ಈ ಕೃತಿಯ ಪ್ರತಿಯೊಂದು ಸ್ಥಲದ ಆದಿಯಲ್ಲಿ ಮಗ್ಗೆಯ ಮಾಯಿದೇವಪ್ರಭು ರಚಿಸಿದ ಶತಕ್ರಯದಿಂದ ಒಂದೊಂದು ವೃತ್ತವನ್ನು  ಉದ್ಧರಿಸಿದ್ದಾನೆ. ಮಗ್ಗೆಯ ಮಾಯಿದೇವರ ಕಾಲ ಕ್ರಿ.ಶ.೧೪೩೦, ಆದ್ದರಿಂದ ಲಿಂಗಚಿದಮೃತಬೋಧೆಯನ್ನು ರಚಿಸಿದ ದೇಶಿಕ ಕ್ರಿ.ಶ. ೧೪೩೦ರ ಈಚೆಗೆ ಬಾಳಿರುವುದು ಸ್ಪಷ್ಟವಾಗಿದೆ. ಹದಿನಾರನೆಯ ಶತಮಾನದಲ್ಲಿ ತೋಂಟದ ಸಿದ್ಧಲಿಂಗ ಶಿವಯೋಗಿಗಳ ಶಿಷ್ಯರಲ್ಲಿ ಅನೇಕರು ಸಂಪಾದನೆಯ ಕಾರ್ಯದಲ್ಲಿ ನಿರತರಾಗಿ ಶೂನ್ಯ ಸಂಪಾದನೆಗಳಂತಹ ಮಹತ್ವಪೂರ್ಣ ಕೃತಿಗಳನ್ನು ರಚಿಸಿರುವುದು ಸ್ಪಷ್ಟವಾಗಿದೆ. ಅವರ ಮಾರ್ಗವನ್ನೇ ಅನುಸರಿಸಿ ಈ ದೇಶಿಕನು ತನ್ನ ಕೃತಿಯನ್ನು ರಚಿಸಿರಬೇಕೆನಿಸುತ್ತದೆ. ಈತ ತೋಂಟದ ಸಿದ್ಧಲಿಂಗಯತಿಗಳ ಶಿಷ್ಯಪರಂಪರೆಗೆ ಸೇರಿದ್ದರೂ ಸೇರಿರಬೇಕು. ದೇಶಿಕ ಎನ್ನುವ ಪರ್ಯಾಯನಾಮ ಆ ಶಿಷ್ಯ ಮಂಡಳಿಯ ಅನೇಕರಿಗೆ ಅನ್ವಯವಾಗಿದೆ. ಇದನ್ನೆಲ್ಲಾ ಪರಾಮರ್ಶಿಸಿದರೆ ಲಿಂಗಚಿದಮೃತಬೋಧೆಯ ಕಾಲ ಸುಮಾರು ಹದಿನೇಳನೆಯ ಶತಮಾನವೆಂದು ಊಹಿಸಬಹುದಾಗಿದೆ.     

‘ಲಿಂಗಚಿದಮೃತ ಬೋಧೆ’ಯ ಕರ್ತೃ ಬಸವೇಶ್ವರರು, ಚನ್ನಬಸವೇಶ್ವರ ದೇವರು, ಪ್ರಭುದೇವರು ಮೊದಲಾದ ಮಹಾಗಣಂಗಳಲ್ಲಿ ಸದ್ಭಕ್ತಿಯನ್ನಿಟ್ಟುಕೊಂಡಿದ್ದಾನೆ. ಅವರು ಶ್ರೀಮದಮಲ ಶಿವಾನುಭವ ಸಾರೋದ್ಧಾರ ಪ್ರವೀಣರೆಂದು ಘಂಟಾಘೋಷವಾಗಿ ಸಾರಿದ್ದಾನೆ. ಅವರು ರಚಿಸಿದ ವಚನರಾಶಿ ತ್ರಿಕಾಲ ಪೂಜ್ಯವೆಂದು ಸ್ಪಷ್ಟಗೊಳಿಸಿದ್ದಾನೆ. ಆದ್ದರಿಂದಲೇ ಆ ದೇಶಿಕನು ಶಿವಶರಣರ ವಚನಪ್ರಸಾದವನ್ನು ಕೈಂಕರ್ಯ ಭಾವದಿಂದ ಕೈಗೊಂಡು, ಲಿಂಗಪೂಜೆ ಮಾಡುತ್ತ ನಡೆದುದಾಗಿ ಜೀವನ ಕ್ರಮವನ್ನು ಅರುಹಿದ್ದಾನೆ. ಲಿಂಗವನ್ನೇ ಪೂಜಿಸಿ ಲಿಂಗವೇ ಆಗುವ ಪರಿಯನ್ನು ಮನಗಂಡು, ತನಗಾದ ಅನುಭಾವವನ್ನೇ ಲಿಂಗಚಿದಮೃತಬೋಧೆಯಾಗಿ ಮಾಡಿದೆನೆಂದು ಆ ದೇಶಿಕನೇ ತಿಳಿಸಿದ್ದಾನೆ. ಈ ಕೃತಿ ಲಿಂಗಾಂಗ ಸಾಮರಸ್ಯವನ್ನು ತಿಳಿಸುವ ಕೈಪಿಡಿಯೆಂದು ಹೇಳುತ್ತಾನೆ. “ಜ್ಞಾನವೆಂಬ ದರ್ಪಣವನಳವಡಿಸಿ ಪಿಡಿಯಲು ಪ್ರತಿಬಿಂಬವನೊಳಕೊಂಡು ತನ್ನಲ್ಲುಳ್ಳ ಗುಣಾವಗುಣಂಗಳ ಕಳಂಕವನ್ನಿದಿರಿಟ್ಟು ತೋರುವಂತಪ್ಪ ಸಂಗ್ರಹವಿದೆಂದುವೊಪ್ಪುವುದು’ಎನ್ನುವಲ್ಲಿ ಲಿಂಗಚಿದಮೃತಬೋಧೆಯ ಮಹತಿ ಸ್ಪಷ್ಟವಾಗಿದೆ.

ಲಿಂಗಚಿದಮೃತ ಬೋಧೆಯ ತಂತ್ರ ವಿನೂತನವಾದುದು. ದೇಶಿಕನೇ ಹೇಳುವಂತೆ “ಪರಿಯಾಯಕ್ರಮದಿಂ ಮಿತಿ ಮಾಡಿದ ಪ್ರಶ್ನೆಗಳು ಮೂವತ್ತೊಂದಕ್ಕೆಯು ವೃತ್ತಂಗಳೆ  ಸೂತ್ರಪಟ್ಟಾಂತರರುವುದು”. ವೀರಶೈವ ತತ್ವವನ್ನು ಅರಿಯಲು, ಅರಿತು ಆಚರಿಸಲು ಮೂವತ್ತೊಂದು ಪ್ರಶ್ನೆಗಳಿಗೆ ಉತ್ತರ ದೊರೆಯಬೇಖಾದುದು ಅಗತ್ಯ. ಒಂದೊಂದು ಪ್ರಶ್ನೆಗೆ ಮಗ್ಗೆಯ ಮಾಯಿದೇವರ ಶತಕತ್ರಯದಿಂದ ಒಂದೊಂದು ವೃತ್ತವನ್ನು ಆಯ್ದುಕೊಳ್ಳಲಾಗಿದೆ. ಆಯಾ ವೃತ್ತವನ್ನು ಪ್ರತಿಯೊಂದು ಸ್ಥಲದ ಆದಿಯಲ್ಲಿಟ್ಟು ಅಲ್ಲಿರುವ ಪ್ರಶ್ನೆಗೆ ಉತ್ತರ ರೂಪವಾಗಿ ವಿವರಣೆ ನೀಡಲು ದೇಶಿಕರು ಬಸವಾದಿ ಪ್ರಮಥರ ವಚನಗಳನ್ನು ಉದಾಹರಣೆಯಾಗಿ ಆಯ್ದುಕೊಂಡಿದ್ದಾರೆ; ಪ್ರತಿಯೊಂದು ಸ್ಥಲದ ಅಂತ್ಯದಲ್ಲಿ ಸೊನ್ನಲಿಗೆಯ ಸಿದ್ಧರಾಮದೇವರು ಹೇಳಿದ ‘ಯೋಗಿನಾಥ’ ಎಂಬ ಅಂಕಿತವುಳ್ಳ ಮೂರೋ-ನಾಲ್ಕೋ ತ್ರಿವಿಧಿಗಳನ್ನು ಹೇಳಿ ಸ್ಥಲವನ್ನು ಮುಗಿಸಿದ್ದಾರೆ. ಈ ತಂತ್ರವು ಪ್ರತಿಯೊಂದು ಸ್ಥಲಕ್ಕೂ ಚಾಚೂ ತಪ್ಪದೆ ಅನ್ವಯಿಸುವುದನ್ನು ಓದುಗರು ಅರಿಯಬಹುದು. ಮೂವತ್ತನೆಯ ಸ್ವಯಾನುಭಾವ ನಿರ್ದೇಶಸ್ಥಲ ಪೂರ್ಣವಾಗಿಲ್ಲ; ಆದ್ದರಿಂದ ಕೊನೆಗೆ ಬರಬೇಕಾದ ಯೋಗಿನಾಥ ತ್ರಿವಿಧಿಗಳು ಅಲ್ಲಿಲ್ಲ; ಮೂವತ್ತೊಂದನೆಯ ನಿರ್ಭಾವಾನಂದೈಕ್ಯಸ್ಥಲ ಲಿಂಗಚಿದಮೃತ ಬೋಧೆಯಲ್ಲಿ ಬಂದಿಲ್ಲ. ಇದೆಲ್ಲ ಕೃತಿ ಅಪೂರ್ಣವೆಂಬುದನ್ನು ಸೂಚಿಸುತ್ತದೆ. ಕೃತಿ ಪೂರ್ಣ ದೊರೆತರೆ ಅಂತ್ಯ ವಿವರಣೆ ಅರಿಯಬಹುದಾಗಿದೆ. ನಮಗೆ ಇದೊಂದೇ ಪ್ರತಿ ಸಿಕ್ಕಿರುವುದರಿಂದ ವಿಷಯ ವೈವಿಧ್ಯವಿದ್ದುದರಿಂದಲೂ ಇದ್ದಷ್ಟೂ ಕಳೆದು ಹೋಗಬಾರದೆಂದು ಸಿಕ್ಕಷ್ಟನ್ನೇ ಉಳಿಸಿಕೊಳ್ಳುವ ಹಂಬಲದಿಂದ ಈ ಕೃತಿಯನ್ನು ಪ್ರಕಟಿಸಲಾಗಿದೆ.

ದೇಶಿಕವರೇಣ್ಯರು ಷಟ್‌ಸ್ಥಲ, ನೂರೊಮದು ಸ್ಥಲಗಳನ್ನು ಗಮನಿಸದೆ ಅವುಗಳ ಸಾರವನ್ನು ಹೀರಿ ಸ್ವಲ್ಪದರಲ್ಲಿಯೇ ಸ್ವಾರಸ್ಯ ಬರುವಂತೆ ಲಿಂಗಚಿದಮೃತಬೋಧೆಯಲ್ಲಿ ಕೆಳಗಿನಂತೆ ಸ್ಥಲಗಳನ್ನು ಒಡಂಬಡಿಸಿದ್ದಾರೆ.

೧. ಶೂನ್ಯಸಾಕಾರ ಲಿಂಗೋದಯ ೨. ಪಿಂಡಸ್ಥಲ
೩. ಪಿಂಡಪ್ರಕಾಶ ೪. ಮಾಯಾವಿಡಂಬನ
೫. ರುಕಾರುಣ್ಯ ೬. ಲಿಂಗಾನುಗ್ರಹ
೭. ವಿಭೂತಿಧರಣ ೮. ರುದ್ರಾಕ್ಷಾಭರಣ
೯. ಷಡಕ್ಷರಸ್ಮರಣೆ ೧೦. ತಾಮಸ ನಿರಸನ
೧೦. ಸಹಜಭಕ್ತಿ ನಿರ್ದೇಶ ೧೨. ಉಪಾಧಿಗುರುನಿರಸನ
೧೩. ಜ್ಞಾನಗುರು ನಿರ್ದೇಶ ೧೪.ಅಶಾಮಹೇಶ್ವರ ನಿರಸನ
೧೫. ನಿರಾಶಾ ಮಹೇಶ್ವರ ನಿರ್ದೇಶ ೧೬. ಪ್ರಪಂಚಶೀಲ ನಿರಸನ
೧೭. ನಿಷ್ಪ್ರಪಂಚಶೀಲ ನಿರ್ದೇಶ ೧೮. ಕರ್ಮಯೋಗ ನಿರಸನ
೧೯. ಶಿವಯೋಗ ನಿರ್ದೇಶ ೨೦. ಇಷ್ಟಭ್ರಾಂತಿವಿಯೋಗ ನಿರಸನ
೨೧. ಲಿಂಗ ನಿರ್ದೇಶ ೨೨. ಲಿಂಗಾವಸ್ಥೆ
೨೩. ಅವಿಶ್ವಾಸ ಪಾದೋದಕ ನಿರಸನ ೨೪. ವಿಶ್ವಾಸ ಪಾದೋದಕ ನಿರ್ದೇಶ
೨೫. ಉಪಜೀವಿತ ಪ್ರಸಾದ ನಿರಸನ ೨೬. ಸೇವ್ಯ ಪ್ರಸಾದ ನಿರ್ದೇಶ
೨೭. ಸಂಚಲವಸ್ತು ನಿರಸನ ೨೮. ಸ್ವಸ್ಥವಸ್ತು ನಿರ್ದೇಶ
೨೯. ಅನುಭಾವತರ್ಕ ನಿರಸನ ೩೦. ಸ್ವಯಾನುಭಾವ ನಿರ್ದೇಶ
೩೧. ನಿರ್ಭಾವಾನಂದೈಕ್ಯ  

ಈ ಸ್ಥಲವಿವರಣೆಯನ್ನು ಷಟ್‌ಸ್ಥಲ ವಿವರಣೆಗೆ ಸರಿಹಚ್ಚಿ ನೋಡಿದಲ್ಲಿ ದೇಶಿಕರು ಮಾಡಿಕೊಂಡ ವ್ಯತ್ಯಾಸ ಸ್ಪಷ್ಟವಾಗಿ ಹೊಳೆಯುತ್ತದೆ. ಮೊದಲಿನ ಹತ್ತು ಸ್ಥಲಗಳು ಷಟ್‌ಸ್ಥಲಗಳಿಗೆ ಹೊಂದಿಕೆಯಾಗಿ ಬಂದಿರುವುದನ್ನು ಅರಿಯಬಹುದು. ಮುಂದಿನ ಇಪ್ಪತ್ತೊಂದು ಸ್ಥಲಗಳಲ್ಲಿ ಬಂದಿರುವ ವಿಷಯ ಷಟ್‌ಸ್ಥಲದಲ್ಲಿ ಬರುವಂತೆ ಬಂದಿದ್ದರೂ ಸ್ಥಲನಿರ್ದೇಶನದಲ್ಲಿ ಹೊಸತನವಿದ್ದುದನ್ನು ಅರಿಯುತ್ತೇವೆ. ಭಕ್ತ, ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯಸ್ಥಲಗಳಲ್ಲಿ ಆಚರಿಸಬೇಕಾದ ಆಚರಣೆಗಳಿಗೆ ಪ್ರಾಧಾನ್ಯವಿತ್ತು. ಸ್ಥಲಕಟ್ಟನ್ನು ಹೊಸರೀತಿಯಲ್ಲಿ ನಿರ್ಮಿಸಲು ಹೆಣಗಿದಂತಿದೆ. ಲಿಂಗಚಿದಮೃತಬೋಧೆಯ ಸತ್ವ ಅಂಕಿಸಂಖ್ಯೆಯ ಮೇಲೆ ನಿಂತಿಲ್ಲ; ಅದು ಅನುಭಾವಿಯ ಅಂತರಂಗದ ಮೇಲ್ಮೈಯಲ್ಲಿ ಒಡಮೂಡಿದೆ. ಒಟ್ಟಿನಲ್ಲಿ ಶುದ್ಧಾತ್ಮನಾದವನೇ ವಿಖಾಸಾವಸ್ಥೆಯಲ್ಲಿ ಅರಳಿ ಪರಂಜ್ಯೋತಿಯಲ್ಲಿ ಲೀನನಾಗಬಲ್ಲನೆಂಬ ತತ್ವ ಈ ಕೃತಿಯಲ್ಲಿ ಮನಂಬುಗುವಂತೆ ಬಂದುದೊಂದು ವೈಶಿಷ್ಟ್ಯ.

ಬಸವಾದಿ ಪ್ರಮಥರು ಆಚರಿಸಿ ತೋರಿಸಿದ ಷಟ್‌ಸ್ಥಲ ಮಾರ್ಗದಲ್ಲಿ ನಡೆಯುತ್ತ, ಪರಿಪೂರ್ಣ ಭಕ್ತಿಯನ್ನು ಅಳವಡಿಸಿಕೊಂಡು, ತನುಮನಧನವನ್ನು ಗುರುಲಿಂಗಜಂಗಮರಿಗೆ ವಂಚನೆಯಿಲ್ಲದೆ ನೀಡಿ, ಪರಮಾತ್ಮನನ್ನು ಒಂದುಗೂಡಿದ ಮಹಾತ್ಮರನ್ನು ಧ್ಯಾನಿಸುವುದೇ ಶ್ರೇಷ್ಠವಾದ ಮೋಕ್ಷಮಾರ್ಗದಾಚರಣೆ, ತ್ರಿವಿಧಕ್ಕೆ ತ್ರಿವಿಧವಮನ್ನು ಅರ್ಪಿಸಿ ಅವರೇ ತಾನೆಂದು ಭಾವಿಸುವುದೇ ದಾಸೋಹಂಭಾವ. ಈ ಪರಿಯ ನಡತೆಯೇ ಕೈವಲ್ಯಭಕ್ತಿ. ಇದು ಭ್ತಿಸ್ಥಲದ ನಡೆನುಡಿಯೆಂದು ಹೇಳಬಹುದು.

ಭಕ್ತನು  ಮಹೇಶ್ವರ ಸ್ಥಲಕ್ಕೆ ಸರಿದಾಗ ಪರಸ್ತ್ರೀ ಪರಧನವನ್ನು ಅಂಗೀಕರಿಸಬಾರದೆಂಬ ನಿಯಮಕ್ಕೆ ಅಂಟಿಕೊಳ್ಳುತ್ತಾನೆ. ಸರ್ವವೂ ಶಿವನದೆಂದು ಭಾವಿಸಿ, ಅವನ ಪ್ರಸಾದವನ್ನೇ ಸ್ವೀಕರಿಸುತ್ತಾನೆ. ಲಿಂಗಾರ್ಪಣವಾಗಿ ಉಳಿದುದೇ ಪ್ರಸಾದ. ಮಹೇಶ್ವರ ಸ್ಥಲದಲ್ಲಿ ನಿಷ್ಠೆ ಬೆಲೆಯುತ್ತದೆ. ಭಕ್ತಿ ಗಟ್ಟಿಗೊಳ್ಳುತ್ತದೆ. ಇನ್ನೂ ಮುಂದೆ ಸಾಗಿದಾಗ ಪ್ರಾಣಲಿಂಗಿಸ್ಥಲದಲ್ಲಿ ಪ್ರಾಣವೇ ಲಿಂಗವೆಂಬ ಭಾವನೆ ಬೆಳೆಯುವುದು. ಶರಣಸ್ಥಲದಲ್ಲಿ ಸರ್ವವನ್ನೂ ಲಿಂಗಕ್ಕೆ ಸಮರ್ಪಿಸುವ ಸತಿಪತಿಭಾವ ಉಂಟಾಗುವುದು. ಐಕ್ಯಸ್ಥಲದಲ್ಲಿ ಪ್ರಾಣ, ಲಿಂಗಗಳಲ್ಲಿ ಎರಡಿಲ್ಲವೆಂಬ ಭಾವನೆ ಪರಿಪೂರ್ಣಗೊಳ್ಳುವುದು. ಷಟ್‌ಸ್ಥಲವನ್ನು ಹೀಗೆ ತಾತ್ವಿಕವಾಗಿ ವಿವೇಚಿಸಿದರೆ, ಕೊನೆಯ ಮೂರುಸ್ಥಲಗಳಲ್ಲಿ ಧಾರ್ಮಿಕಾಚರಣೆ ಕಟ್ಟುನಿಟ್ಟಾಗಿ ನಡೆಯಬೇಕೆಂಬುದನ್ನು ಅರಿಯುತ್ತೇವೆ.

ಈ ಧಾರ್ಮಿಕಾಚರಣೆಗೆ ಅನುಕೂಲವಾಗಲೆಂದು ಲಿಂಗಚಿದಮೃತಬೋಧೆ ಭಿನ್ನ ಭಿನ್ನ ಸ್ಥಲಗಳನ್ನು ಹೇಳಹೊರಟಂತಿದೆ. ಈ ತರದ ಸ್ಥಲಾಚರಣೆಯ ಸುಳುಹು ಈ ಕೃತಿಯನ್ನು ರಚಿಸುವ ಪೂರ್ವದಲ್ಲಿಯೇ ಪ್ರಾರಂಭವಾದುದು ತಿಳಿದುಬಂದಿದೆ. ಲಕ್ಕಣ್ಣ ದಂಡೇಶನ ಶಿವತತ್ವ ಚಿಂತಾಮಣಿಯಲ್ಲಿ ಷಟ್‌ಸ್ಥಲಗಳನ್ನು ಮೀರಿ ಕ್ರಿಯಾ ವಿಶ್ರಾಂತಿ ಸ್ಥಲವಿರುವುದಾಗಿ ಹೇಳಲಾಗಿದೆ.  ಇದೇ ಸ್ಥಲಕ್ಕೆ ಪರಿಯಾಯ ನಾಮವಾಗಿ ಸ್ವಲೀಲಾನಂದ ಭಕ್ತಿಸ್ಥಲವೆಂದು “ಕ್ಷೇತ್ರಜ್ಞ ಸುಮನೋವಾದ” ತಿಲಿಸುತ್ತದೆ. ಈ ಕ್ರಿಯಾವಿಶ್ರಾಂತಿಸ್ಥಲವು ಜಂಗಮ ಪ್ರಭೇದಗಳಾದ ಸ್ವಯ, ಚರ, ಪರಗಳಲ್ಲಿ ಪರಜಂಗಮದ ನಡವಳಿಕಯನ್ನು ತಿಳಿಸುತ್ತದೆ.

ಈ ಬಗೆಯ ಶಿವಾದ್ವಯತ ಮಾರ್ಗವನ್ನು ಅಲ್ಲಮಪ್ರಭುವಿನಿಂದ ಹಿಡಿದು ಮುಂದೆ ಬಂದ ಶರಣರು ಆಚರಿಸುತ್ತ ಬಂದಿದ್ದರೂ ಮಗ್ಗೆಯ ಮಾಯಿದೇವರ ಕಾಲಕ್ಕೆ ಈ ಬಗೆಯ ಆಚರಣೆಯಲ್ಲಿ ಶಿಥಿಲತೆ ತೋರಿರಬೇಕೆನಿಸುತ್ತದೆ. ವೀರಶೈವರಲ್ಲಿಯೇ ಕೆಲವರು ಆಗಮಗಳನ್ನು  ಅನುಸರಿಸಿ ಸಾಮಾನ್ಯ ವೀರಶೈವ , ವೀರಶೈವ, ವಿಶೇಷ ವೀರಶೈವ ಹಾಗೂ ನಿರಾಧಾರಿ ವೀರಶೈವ ಎಂದು ನಾಲ್ಕು ರೂಪಭೇದಗಳನ್ನು ಹೇಳಹೊರಟರು. ಇದು ವಚನಧರ್ಮಕ್ಕೆ ಸಲ್ಲದ ವಿಷಯ. ಇದೆಲ್ಲ ಸಾಮಾನ್ಯರ ನಡತೆ. ಈ ಸಾಮಾನ್ಯರ ನಡತೆಯನ್ನು ಮಗ್ಗೆಯ ಮಾಯಿದೇವರು ಉಗ್ರವಾಗಿ ಖಂಡಿಸಿ, ಶತಕತ್ರಯಗಳನ್ನು  ಬರೆದರು; ವೀರಶೈವ ಸಾರೋದ್ಧಾರಕರೆಂದು ಖ್ಯಾತಿ ಪಡೆದರು.

ಮಗ್ಗೆಯ ಮಾಯಿದೇವರು ಪ್ರತಿಭಾನ್ವಿತ ಪಂಡಿತರು; ಉಭಯಭಾಷಾ ವಿಶಾರದರು; ವೇದ, ಉಪನಿಷತ್ತು, ಆಗಮ ಮುಂತಾದ ಶಾಸ್ತ್ರವಿಷಯಗಳಲ್ಲಿ ಪಾರಂಗತರು; ಸರ್ವಾಗಮಗಳ ನೆಲೆಯೆಂದು ಕರೆಯಿಸಿಕೊಂಡವರು. ತತ್ವಾರ್ಥದ ಸಾರವನ್ನು ಹೀರಿ, ಅದನ್ನೂ ಮೀರಿ ವಿಷಯ ಪ್ರತಿಪಾದನೆ ಮಾಡುವ ಕಲೆ ಅವರಿಗೆ ಮೀಸಲಾದುದು. ಆದ್ದರಿಂದಲೇ ತರ್ಕಬದ್ಧ ವಿಷಯ ನಿರೂಪಣೆ, ಮನಮೋಹಕ ಶೈಲಿ ಅವರ ಕೃತಿಗಳಲ್ಲಿ ಕಾಣುವಂತಾಗಿದೆ. ಕನ್ನಡ ಶತಕತ್ರಯ, ಏಕೋತ್ತರ ಶತಸ್ಥಲ ಷಟ್ಪದಿ, ಷಟ್‌ಸ್ಥಲ ಗದ್ಯ, ಮಗ್ಗೆಯ ಮಾಯಿದೇವರ ವಚನ – ಇವು ಅವರ ಕನ್ನಡ ಕೃತಿಗಳು. ಅನುಭವ ಸೂತ್ರ, ಪ್ರಭುಗೀತೆ, ಸಂಸ್ಕೃತ ಶತಕತ್ರಯ-ಇವೆಲ್ಲ ಅವರು ಬರೆದ ಸಂಸ್ಕೃತ ಕೃತಿಗಳು. ಈ ಎಲ್ಲ ಕೃತಿಗಳಲ್ಲಿ ಕನ್ನಡ ಶತಕತ್ರಯ ಶಾಸ್ತ್ರ ದೃಷ್ಟಿಯಿಂದಲೂ, ಕಾವ್ಯ ದೃಷ್ಟಿಯಿಂದಲೂ ಬಂಧುರವಾದುದು. ಈ ಕೃತಿಯಲ್ಲಿ ಶಿವಾಧವಶತಕ, ಶಿವಾವಲ್ಲಭಶತಕ, ಮಹದೈಪುರೀಶ್ವರಶತಕ-ಎಂಬ ಮೂರು ಶತಕಗಳಿವೆ. ಆದ್ದರಿಂದಲೇ ಅದಕ್ಕೆ ಶತಕತ್ರಯವೆಂದು ಹೆಸರು ಬಂದಿದೆ. ಈ ಶತಕಗಳನ್ನು ಕ್ರಮವಾಗಿ ಭಕ್ತಿ, ಜ್ಞಾನ, ವೈರಾಗ್ಯ ಶತಕಗಳೆಂದು ಕರೆಯುವುದೂ ರೂಢಿಯಲ್ಲಿದೆ. ಈ ಶತಕಗಳಲ್ಲಿ ವೀರಶೈವ ತತ್ವಗಳು ಕನ್ನಡಿಯಲ್ಲಿ ಕರಿ ಅಡಗಿದಂತೆ ಸ್ವಾರಸ್ಯಪೂರ್ಣವಾಗಿ ಹೇಳಲ್ಪಟ್ಟಿದೆ. ವಚನಧರ್ಮಸಾರವನ್ನೇ ಶಾಸ್ತ್ರೋಕ್ತವಾಗಿ ಇದರಲ್ಲಿ ಪ್ರತಿಪಾದಿಸಲಾಗಿದೆ. ಲಿಂಗಾಂಗಸಾಮರಸ್ಯವನ್ನು ತಿಳಿಸುವ ಈ ಕೃತಿ ಆಧಾರಗ್ರಂಥ ವೆನಿಸಿಕೊಂಡಿದೆ.

ಮಗ್ಗೆಯ ಮಾಯಿದೇವರ ಕಾಲ ಕಳೆಯುವ ಹೊತ್ತಿಗೆ ವೀರಶೈವ ಸಾಹಿತ್ಯದಲ್ಲಿ ಒಂದು ಮಹತ್ವದ ಘಟ್ಟ ಕಾಣಿಸಿಕೊಳ್ಳುತ್ತದೆ. ಶ್ರೀ ತೋಂಟದ ಸಿದ್ಧಲಿಂಗ ಯತಿಗಳ ಶಿಷ್ಯರು ಬಸವಾದಿ ಪ್ರಮಥರಿಂದ ರಚಿತವಾದ ವಚನರಾಶಿಯನ್ನು ಸ್ಥಲಕಟ್ಟಿಗೆ ಹೊಂದಿಸಿ ಸಂಪಾದನೆ ಮಾಡುವ ಕಾರ್ಯದಲ್ಲಿ ನಿರತರಾಗುತ್ತಾರೆ. ಅವರಿಂದ ರಚಿತವಾದ ಸಂಪಾದನೆಗಳು ಸಂಶೋಧನಾ ಕ್ಷೇತ್ರದಲ್ಲಿ ಮಹತ್ವದ ಕೃತಿಗಳೆಂದು ಯಾರಾದರೂ ಹೇಳಬಲ್ಲರು. ವೀರಶೈವದ ಕೂಲಂಕೂಷ ಚರ್ಚೆ, ಇವರಣೆ, ಟೀಕೆ-ಟಿಪ್ಪಣೆ ಅವರಿಂದಲೇ ಮುಂದುವರೆಯಿತೆಂದು ಹೇಳಿದರೆ ತಪ್ಪೆನಿಸದು. ಅವರ ಪ್ರಯತ್ನದ ಫಲವಾಗಿಯೇ ಶೂನ್ಯಸಂಪಾದನೆಗಳಂತಹ ಮಹೋನ್ನತ ಕೃತಿಗಳು ಬೆಳಕು ಕಂಡವು. ಈ ಸಂಪಾದನೆಗೆ ಕೈ ಹಾಕಿದ ಮಹನೀಯರಲ್ಲಿ ‘ಲಿಂಗಚಿದಮೃತಬೋಧೆ’ಯ ಕರ್ತೃವಿಗೂ ಒಂದು ಗಣನೀಯ ಸ್ಥಾನವಿದೆ. ವಚನಶಾಸ್ತ್ರದಲ್ಲಿ ಆತ ಮಾಡಿದ ಶೋಧ, ನಿರೂಪಿಸಿದ ವೈಖರಿ, ತರ್ಕಬದ್ಧವಾದ ವಿಚಾರ ಸರಣಿ ವಿಚಾರವಂತರನ್ನೂ ತಲೆದೂಗಿಸಬಹುದು.

ಮಗ್ಗೆಯ ಮಾಯಿದೇವರ ಶತಕತ್ರಯದಲ್ಲಿ ಬರುವ ವೃತ್ತಗಳೇ ‘ಲಿಂಗಚಿದಮೃತಬೋಧೆ’ಯಲ್ಲಿ ಎತ್ತಿಕೋಂಡ ಮೂವತ್ತೊಂದು ಪ್ರಶ್ನೆಗಳಾಗುತ್ತವೆ. ಈ ಪ್ರಶ್ನೆಗಳಿಗೆ ಉತ್ತರ ರೂಪವಾಗಿ ಬಂದಿವೆ ಶರಣರ ವಚನಗಳು. ದೇಶಿಕರು ಬಸವಣ್ಣನವರನ್ನು ಒಳಗೊಂಡು ಅರುವತ್ತೆರಡು ವಚನಕಾರರ ವಚನಗಳನ್ನು ತಾವು ಇಟ್ಟುಕೊಂಡ ನೂತನ ಸ್ಥಲಕಟ್ಟಿಗೆ ಹೊಂದಿಸಿ ವಿವರಣೆ ನೀಡಿದ್ದಾರೆ. ಈ ವಚನಕಾರರಲ್ಲಿ ಎಂಟು ಜನ ವಚನಕಾರರು ಹೊಸದಾಗಿ ಬೆಳಕಿಗೆ ಬಂದಿದ್ದಾರೆ. ಅವರ ಅಂಕಿತಗಳು ತಿಳಿದಿವೆಯೋ ಹೊರತು ಅವರ ಹೆಸರುಗಳು ಮಾತ್ರ ಇನ್ನೂ ತಿಳಿದಿಲ್ಲ. ಈ ವಿಷಯದಲ್ಲಿ ಹೆಚ್ಚಿನ ಶೋಧ ನಡೆಯುತ್ತಲಿದೆ. ಇದನ್ನೆಲ್ಲ ನೋಡಿದರೆ ‘ಲಿಂಗಚಿದಮೃತಬೋಧೆ’ಯ ಕರ್ತೃ ದೇಶಿಕನಿಗೆ ವಚನಸಾಹಿತ್ಯದಲ್ಲಿ ಆಳವಾದ ಅಭ್ಯಾಸವಿತ್ತೆಂಬುದು ಸ್ಪಷ್ಟವಾಗುತ್ತದೆ.

ಸೊನ್ನಲಾಪುರದ ಶ್ರಿ ಸಿದ್ಧರಾಮದೇವರು ಸ್ವತಃ ವಚನಕಾರರು ಇದ್ದುದಲ್ಲದೆ, ಯೋಗಾಂಗ ತ್ರಿವಿಧಿಯನ್ನು ಲೀಲಾಜಾಲವಾಗಿ ಹೇಳಬಲ್ಲ ಕವಿಗಳಾಗಿದ್ದರು. ಕಲ್ಯಾಣದ ಶಿವಶರಣರ ಸಮೂಹದಲ್ಲಿದ್ದಾಗ ಸಿದ್ಧರಾಮದೇವರು ಈ ತ್ರಿವಿಧಿಗಳನ್ನು ರಚಿಸಿದರೆಂದು ವದಂತಿ ಇದೆ. ತ್ರಿವಿಧಿಯ ಒಂದೊಂದು ಪದ್ಯದಲ್ಲಿ ತತ್ವವಿದೆ. ಭಕ್ತಿಯಿದೆ. ಅತ್ಮಾರ್ಪಣ ಭಾವವಿದೆ. ಒಟ್ಟಿನಲ್ಲಿ ವೀರಶೈವದ ಹುರುಳಿದೆ. ಇದನ್ನು ಮನದಂದೇ ‘ಲಿಂಗಚಿದಮೃತಬೋಧೆ’ಯನ್ನು ರಚಿಸಿದ ದೇಶಿಕರು ಪ್ರತಿಯೊಂದು ಅಧ್ಯಾಯದ ಅಂತ್ಯದಲ್ಲಿ ನಾಲ್ಕಾರು ತ್ರಿವಿಧಿಗಳನ್ನಿಟ್ಟಿರುವುದು ಯೋಗ್ಯವಾಗಿದೆ; ವಿಷಯ ವಿವೇಚನೆಗೆ ಅದರಿಂದ ಪೂರ್ಣತೆ ಬಂದಿದೆ. ದೇಶಿಕರು ಹಾಕಿಕೊಂಡ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಹೇಳುವಲ್ಲಿ ಈ ತ್ರಿವಿಧಿಗಳು ಆಡಿದ ಪಾತ್ರ ಮಹತ್ವಪೂರ್ಣವಾದುದೆಂದು ಬೇರೆ ಹೇಳಬೇಕಾಗಿಲ್ಲ.

ಒಟ್ಟಿನಲ್ಲಿ ಹೇಳುವುದಾದರೆ ‘ಲಿಂಗಚಿದಮೃತಬೋಧೆ’ ವಚನಸಾಹಿತ್ಯದ ಇತಿಹಾಸದಲ್ಲಿ ಒಂದು ಮಹತ್ವದ ಐತಿಹ್ಯವೆಂದು ಹೇಳಬಹುದಾಗಿದೆ. ಈ ಕೃತಿಯನ್ನು  ಸಂಪಾದಿಸುವಲ್ಲಿ ವಚನ ಸಂಶೋಧನಾ ವಿಭಾಗದ ಸಹಾಯಕ ಸಂಶೋಧಕರು ಶ್ರಮವಹಿಸಿ ಕಾರ್ಯ ನಿರ್ವಹಿಸಿದ್ದಾರೆ. ಅಚ್ಚುಕಟ್ಟಾದ ಒಡೆಯರು ಅಂದವಾಗಿ ಮುದ್ರಿಸಿದ್ದಾರೆ. ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಆರ್.ಸಿ. ಹಿರೇಮಠರು ವಚನಸಾಹಿತ್ಯದ ಸಮಗ್ರ ಸಂಶೋಧನೆಗೆ ಆಸ್ತಿಭಾರ ಹಾಕಿದರು. ಮಹತ್ವಪೂರ್ಣ ಕೃತಿಗಳನ್ನೆಲ್ಲ ಸಂಶೋಧಿಸಿ, ಪ್ರಕಟಿಸಿದರು. ಕುಲಸಚಿವರಾದ ಶ್ರೀ ಎಸ್.ಎಸ್. ಒಡೆಯರು ಸಾಹಿತ್ಯ ಸಂಶೋಧನೆಗೆ ಮೊದಲಿನಿಂದಲೂ ಸಹಾಯ ಮಾಡುತ್ತ ಬಂದಿದ್ದಾರೆ. ಪ್ರಕಟನಾ ವಿಭಾಗದ ನಿರ್ದೇಶಕರಾದ ಶ್ರೀ ಚನ್ನವೀರಕಣವಿ ಅವರು ಪ್ರಕಾಶನ ಕಾರ್ಯದಲ್ಲಿ ನೆರವಾಗಿದ್ದಾರೆ. ಒಂದು ಒಳ್ಳೆಯ ಕೆಲಸ ಒಬ್ಬರಿಂದಲೇ ಆಗುವುದಿಲ್ಲ. ಅದಕ್ಕೆ ಬಹುಜನರ ಸಹಾಯ ಸಂಪದ ಬೇಕೆ ಬೇಕು. ‘ಲಿಂಗಚಿದಮೃತಬೋಧೆ’ಯನ್ನು ಬೆಳಕಿಗೆ ತರುವಲ್ಲಿ ಸಹಾಯ ಸಲ್ಲಿಸಿದ ಎಲ್ಲರನ್ನೂ ಈ ಸಂದರ್ಭದಲ್ಲಿ ಹೃತ್ಪೂರ್ವಕವಾಗಿ ನೆನೆಯುತ್ತೇವೆ; ಈ ಕೃತಿಯನ್ನು ರಸಿಕರು ಹೃತ್ಪೂರ್ವಕವಾಗಿ ಬರಮಾಡಿಕೊಳ್ಳುವರೆಂದು ಆಶಿಸುತ್ತೇವೆ.

ಸಂಪಾದಕರು
ಗಣೇಶಚೌತಿ
೮-೯-೧೯೭೫