|| ವೃತ್ತ ||
ಪುರಹರನಕ್ಷಿಯಿಂದುದಿಸಿ ತ್ರಿಗುಣರೂಪಮನಾಂತು ತೋರ್ಪಭಾ
ಸುರತರಮಪ್ಪವಿಂಶಲಪನಂಗಳನುಳ್ಳ ಶಿವಾಕ್ಷಿಜಂಗಳಂ
ಸ್ಮರಿಸಲು ಲಕ್ಷಕೋಟಿ ಸುಕೃತಂ ತವೆದರ್ಶಗೈವುತವಂಗದಲ್ಲಿ ತಾಂ
ಧರಿಸಲು ಮುಕ್ತಿ ಮಾರ್ಮಡಿಯುಮಂತ್ಯದಿ ಶಂಭುವಿನಂಘ್ರಿಗೈದುವಂ
|| ವಚನ ||
೧
ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವ ಕಾರಣ
ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವ ಪಾವನ
ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವಸಿದ್ಧಯಾಯಿತ್ತು
ಅಯ್ಯಾ ಈ ನಮ್ಮ ಪಂಚವಕ್ತ್ರಂಗಳೆ ಪಂಚಮುಖ ರುದ್ರಾಕ್ಷಿಗಳಾದವಾಗಿ
ಅಯ್ಯಾ ಕೂಡಲಸಂಗಮದೇವಾ ಎನ್ನ ಮುಕ್ತಿಯ ಪಥಕ್ಕೆ
ಶ್ರೀ ಮಹಾರುದ್ರಾಕ್ಷಿಯೆ ಸಾಧನವಯ್ಯಾ.
೨
ಅಯ್ಯಾ ಅಱುಹುನಾಸ್ತಿಯಾದುದೆ ಗುರು;
ಕುಱುಹುನಾಸ್ತಿಯಾದುದೆ ಲಿಂಗ;
ಕಾಯಗುಣ ನಾಸ್ತಿಯಾದುದೆ ವಿಭೂತಿ;
ಕರಣಗುಣ ನಾಸ್ತಿಯಾದುದೆ ರುದ್ರಾಕ್ಷಿ;
ಮರಣನಾಸ್ತಿಯಾದುದೆ ಮಂತ್ರ
ಇಂತೀ ಪಂಚಾಚಾರ ಪ್ರತಿಷ್ಠೆಯನುಳ್ಳಾತನೆ
ಕೂಡಲ ಚನ್ನಸಂಗಯ್ಯನಲ್ಲಿ ಸದಾಚಾರಿ.
೩
ತತ್ವಚಿಂತಾಮಣಿಗಳೆಂಬ ರುದ್ರಾಕ್ಷಿಗಳ
ಭಕ್ತಿಯ ದಾರದಲ್ಲಿ ಸರಗೊಳಿಸಿ
ಯುಕ್ತಿವಿಧಾನವಿಡಿದು ಧರಿಸಿ
ಸದ್ಯೂನ್ಮುಕ್ತನಾದೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೆ.
|| ತ್ರಿವಿಧಿ ||
೪
ಶ್ರೀಭಸಿತ ರುದ್ರಾಕ್ಷಿಧಾರಣದೊಳಿಪ್ಪವರ
ಶ್ರೀಚರಣವ ತೆಗೆದೆನ್ನ ಭಾಳದಲ್ಲಿ
ಒತ್ತಿಮುಂಡಾಡುವ ನಿತ್ಯನಿಜಾನಂದ
ವ್ಯರ್ಥಕಾಯರಿಗುಂಟೆ ಯೋಗಿನಾಥ?
೫
ಹಣೆಯೊಳು ಭಸಿತವು ಮಣಿಮಾಲೆ ಗರಳದೊಳು
ತ್ರಿಣಯನ ಸ್ಮರಣಿಯ ಮುಖಮಂತ್ರದಿ
ಗಣನೆಯಿಲ್ಲದೆ ಹಾಡಿಹೊಗಳುವ ಭಕ್ತರ
ಅಣುಗ ನಾನಪ್ಪೆನೈ ಯೋಗಿನಾಥಾ.
Leave A Comment