|| ಶ್ರೀ ಗುರುಬಸವಲಿಂಗಾಯನಮಃ ||

|| ಸೂತ್ರ ||

ಶ್ರೀಮದಮಲ ಶಿವಾನುಭಾವಸಾರೋದ್ಧಾರ ಪ್ರವೀಣರುಮಪ್ಪ ಬಸವೇಶ್ವರ ದೇವರು ಚನ್ನಬಸವೇಶ್ವರದೇವರು ಪ್ರಭುದೇವರು ಮುಖ್ಯವಾದ ಮಹಾ ಶಿವಗಣಂಗಳ ವಚನ ಪ್ರಸಾದಮಂ ಸದ್ಭಕ್ತಿಯಿಂದ ತಶ್ಫಿಷ್ಯಭಾವದಿಂ ಕೈಗೊಂಡು ಲಿಂಗಸೇವೆಯಂ ಮಾಡಿ ಲಿಂಗಸೇವನಾಶೇಷಾಮೃತವನು ಲಿಂಗಚಿದಮೃತಬೋಧೆಯಾಗಿ ಸೇರಿಸಿ ಪರಿಯಾಯಕ್ರಮದಿಂ ಮಿತಿಮಾಡಿದ ಪ್ರಶ್ನೆಗಳು ಮೂವತ್ತೊಂದಕ್ಕೆಯು ವೃತ್ತಮಗಳೇ ಸೂತ್ರ ಪಟ್ಟಾಂತರವೆಂದರಿವುದು. ಅವು ಆವಾವೆಂದಡೆ : ಪ್ರಥಮದಲ್ಲಿ ಶೂನ್ಯಸಾಕಾರ ಲಿಂಗೋದಯ, ದ್ವಿತೀಯದಲ್ಲಿ ಪಿಂಡಸ್ಥಲ, ತೃತೀಯದಲ್ಲಿ ಪಿಂಡ ಪ್ರಕಾಶ; ಚತುರ್ಥದಲ್ಲಿ ಮಾಯಾ ವಿಡಂಬನ, ಪಂಚಮದಲ್ಲಿ ಗುರುಕಾರುಣ್ಯ, ಷಷ್ಠಮದಲ್ಲಿ ಲಿಂಗಾನುಗ್ರಹ, ಸಪ್ತಮದಲ್ಲಿ ವಿಭೂತಿಧಾರಣ, ಅಷ್ಟಮದಲ್ಲಿ ರುದ್ರಾಕ್ಷಾಭರಣ, ನವಮದಲ್ಲಿ ಷಡಕ್ಷರ ಸ್ಮರಣೆ, ದಶಮದಲ್ಲಿ ತಾಮಸ ನಿರಸನ, ಏಕಾದಶದಲ್ಲಿ ಸಹಜಭಕ್ತಿ ನಿರ್ದೇಶ, ದ್ವಾದಶದಲ್ಲಿ ಉಪಾಧಿ ಗುರುನಿರಸನ, ತ್ರಯೋದಶದಲ್ಲಿ ಜ್ಞಾನಗುರು ನಿರ್ದೇಶ, ಚತುದರ್ಶನದಲ್ಲಿ ಆಸಾಮಹೇಶ್ವರ ನಿರಸನ, ಪಂಚದಶದಲ್ಲಿ ನಿರಾಶಾಮಹೇಶ್ವರ ನಿರ್ದೇಶ, ಷೋಡಶದಲ್ಲಿ ಪ್ರಪಂಚಶೀಲ ನಿರಸನಸ್ಥಲ, ಸಪ್ತದಶದಲ್ಲಿ ನಿಷ್ಪ್ರಪಂಚಶೀಲ ನಿರ್ದೇಶ, ಅಷ್ಟಾದಶದಲ್ಲಿ ಕರ್ಮಯೋಗ ನಿರಸನ, ನವದಶದಲ್ಲಿ ಶಿವಯೋಗ ನಿರ್ದೇಶ, ವಿಂಶದಲ್ಲಿ ಇಷ್ಟಭ್ರಾಂತಿ ವಿಯೋಗ ನಿರಸನ, ಏಕವಿಂಶದಲ್ಲಿ ಲಿಂಗನಿರ್ದೇಶ, ದ್ವಾವಿಂಶದಲ್ಲಿ ಲಿಂಗಾವಸ್ಥೆ, ತ್ರಯೋವಿಂಶದಲ್ಲಿ ಅವಿಶ್ವಾಸ ಪಾದೋದಕ ನಿರಸನ, ಚತುರ್ವಿಂಶದಲ್ಲಿ ವಿಶ್ವಾಸ ಪಾದೋದಕ ನಿರ್ದೇಶ, ಪಂಚವಿಂಶದಲ್ಲಿ ಉಪಜೀವಿತ ಪ್ರಸಾದ ನಿರಸನ, ಷಡ್ವಿಂಶದಲ್ಲಿ ಸೇವ್ಯಪ್ರಸಾದ ನಿರ್ದೇಶ, ಸಪ್ತವಿಂಶದಲ್ಲಿ ಸಂಚಲವಸ್ತುನಿರಸನ, ಅಷ್ಟಾವಿಂಶದಲ್ಲಿ ಸ್ವಸ್ಥವಸ್ತು ನಿರ್ದೇಶ, ನವವಿಂಶದಲ್ಲಿ ಅನುಭಾವತರ್ಕ ನಿರಸನ, ತ್ರಿಂಶದಲ್ಲಿ ಸ್ವಯಾನುಭಾವ ನಿರ್ದೇಶ, ಏಕತ್ರಿಂಶದಲ್ಲಿ ನಿರ್ಭಾವಾನಂದೈಕ್ಯ-ಇಂತು ಪ್ರಶ್ನಗಳು ಮುವ್ವತ್ತೊಂದವೆಂದರಿದ ‘ಲಿಂಗಚಿದಮೃತಬೋಧೆ’ ಮುಕ್ತಕವಾಗಿ ಸೇರಿಸಿದನೋರ್ವದೇಶಿಕ ತನ್ನ ಚಿದಾನಂದಸ್ವರೂಪವನೀಕ್ಷಿಸಲೋಸ್ಕರ; ಜ್ಞಾನವೆಂಬ ದರ್ಪಣವನಳವಡಿಸಿ ಪಿಡಿಯಲು ಪ್ರತಿಬಿಂಬವನೊಳಕೊಂಡು ತನ್ನಲ್ಲುಳ್ಳ ಗುಣಾಗುಣಂಗಳ ಕಳಂಕನಿದಿರಿಟ್ಟು ತೋರುವಂತಪ್ಪ ಸಂಗ್ರಹವಿದೆಂದುವೊಪ್ಪುವುದು. ಮುಂದೆ ಶೂನ್ಯ ಸಾಕಾರ ಲಿಂಗೋದಯವಾದುದು.