|| ವೃತ್ತ ||

ಧ್ಯಾನಮದಿಷ್ಟ ಲಿಂಗಮಹರ್ನಿಶಮಂ ನೇನವೇಕನಿಷ್ಠೆ ತ –
ಧ್ಯಾನಪರಾಯಣಾಮಲಮನೋಲಯಮೆ ಸುಸಮಾಧಿ ವಲ್ಲಯ
ಸ್ಥಾನಮೆನಿಪ್ಪ ಲಿಂಗವನುನಾರತಮಂಗದ ಮೇಲೆ ಭಕ್ತಿ ಸ
ನ್ಮಾನ ವಿಧಾನದಿಂ ಧರಿಸೆ ಧಾರಣವೆಂಬ ಪದಂ ಶಿವಾಧವಾ.    

|| ವಚನ ||                     

ಅಯ್ಯಾ, ಎನ್ನ ಹೃದಯದಲ್ಲಿ ನ್ಯಸ್ತವಾಗಿಹ ಪರಮ ಚಿದ್ಬೆಳಗ
ಹಸ್ತಮಸ್ತಕಸಂಯೋಗದಿಂದೊಡಗೂಡಿ
ಮಹಾಬೆಳಗ ಮಾಡಿದಿರಲ್ಲಾ!
ಆ ಎನ್ನ ಮಸ್ತಕದೊಳೊಂದುಗೂಡಿದ ಮಹಾಬೆಳಗ ತಂದು
ಭಾವದೊಳಿಂಬಿಟ್ಟಿರಲ್ಲಾ !
ಅಯ್ಯಾ, ಎನ್ನಭಾವದೊಳ್ಕೂಡಿದ ಮಹಾಬೆಳಗ ತಂದು
ಮನಸಿನೊಳಿಂಬಿಟ್ಟಿರಲ್ಲಾ!
ಅಯ್ಯಾ, ಎನ್ನಮನಸಿನೊಳ್ಕೂಡಿದ ಮಹಾಬೆಳಗ ತಂದು
ಕಂಗಳೊಳಿಂಬಿಟ್ಟಿರಲ್ಲಾ!
ಅಯ್ಯಾ, ಎನ್ನಕಂಗಳೊಳ್ ಕೂಡಿದ ಮಹಾಬೆಳಗ ತಂದು
ಕರಸ್ಥಲದೊಳಗಿಂಬಿಟ್ಟಿರಲ್ಲಾ!
ಅಯ್ಯಾ, ಎನ್ನಕರಸ್ಥಲದೊಳ್ ಥಳಥಳಿಸಿ ಹೊಳೆವುತ್ತಿಪ್ಪ
ಅಖಂಡ ತೇಜವನೆ ಇಷ್ಟಲಿಂಗವೆಂಬ ದೃಷ್ಟವ ತೋಱಿ
ನಿಶ್ಚಯ ಶ್ರೋತ್ರದಲ್ಲಿ ಸೂಚಿಸಿದಿರಲ್ಲಾ!
ಅಯ್ಯಾ, ಎನ್ನ ಶ್ರೋತ್ರದೊಳ್ ಸೂಚಿಸಿದ ಮಂತ್ರದೊಳಗೆ
ನೀವು ನಿಮ್ಮ ಮಹತ್ವದ ಉಡಿಗಿಸಿದಿರಲ್ಲಾ!
ಅಯ್ಯಾ, ಆ ನಿಮ್ಮ ಹುದುಗಿದ ಮಹತ್ವ ಹೊಂಪ
ಈ ಕರಸ್ಥಲದಲ್ಲಿ ಕಾಣಿಸಿದಿರಲ್ಲಾ!
ಅಯ್ಯಾ ಎನ್ನಾರಾಧ್ಯ ಕೂಡಲಸಂಗಮದೇವಾ,
ಎನ್ನೊಳಗೆ ನಿಮ್ಮಿರವ ಪರಿಯ ಕಾಣಿಸುತ್ತಿದ್ದರಲ್ಲಾ!

ಕಂಗಳ ಮುಂದಳಿಂದ ಶ್ರೀಗುರು ಹಿಂಗಿದಡೆ,
ವ್ರತಕ್ಕೆ ಭಂಗವಾದೀತೆಂದು ತಂದುಕೊಟ್ಟನು ಕರಸ್ಥಲದಲ್ಲಿ ಪ್ರಾಣಲಿಂಗವನು.
ಆ ಲಿಂಗವ ಮುಟ್ಟಲೊಡನೆ,
ತನುಪ್ರಸಾದ, ಮನಪ್ರಸಾದ, ಧನಪ್ರಸಾದವಾಯಿತ್ತು
ಇಂತು ಸರ್ವಾಂಗ ಪ್ರಸಾದವಾಯಿತ್ತು, ಕೂಡಲಸಂಗಮದೇವಾ.

ಗುರುಶಿಷ್ಯ ಸಂಬಂಧವನಱಸಲೆಂದು ಹೋದಡೆ
ತಾನೆ ಗುರುವಾದ, ತಾನೆ ಶಿಷ್ಯನಾದ, ತಾನೆ ಲಿಂಗವಾದ
ಗುಹೇಶ್ವರ, ನಿಮ್ಮ ಶರಣನ ಕಾಯದ ಕೈಯಲ್ಲಿ
ಲಿಂಗವ ಕೊಟ್ಟಡೆ ಭಾವ ಬತ್ತಲೆಯಾಯಿತ್ತು.

ಪರಂಜ್ಯೋಗಿಗುರುವಿನಿಂದ ತನಗೆ ಲಿಂಗಾನುಗ್ರಹ,
ಪ್ರಣವಪಂಚಾಕ್ಷರಿ ಅಳವಟ್ಟಿರಲು
ಅದಕಂಡು ಮತ್ತೊಬ್ಬ ಗುರುಕರುಣವಾದಾತ ಬರಲು
ಆ ಲಿಂಗಾನುಗ್ರಹ ಆ ಪ್ರಣವಪಂಚಾಕ್ಷರಿಯ ಆತಂಗೀಯಲು
ಆತಂಗೆ ತಾನು ಗುರುವೆನ್ನಬಹುದೆ? ಎನ್ನಬಾರದು.
ಆತನು ಈತನು ಪರಂಜ್ಯೋತಿಯ ಆಣತಿವಿಡಿದರಾಗಿ
ಇಬ್ಬರು ದಾಯಾದ್ಯರು ಆ ಪರಂಜ್ಯೋತಿಯಲ್ಲಿಯೆ ಅಡಗಿದರಾಗಿ
ಗುರುವಿಗೆಯು, ಶಿಷ್ಯಂಗೆಯು, ಲಿಂಗಕ್ಕೂ ಭೇದವಿಲ್ಲ
ಮಸಣಯ್ಯಪ್ರಿಯ ಗಜೇಶ್ವರ.

ನಾನು ಕಾಮಿಸುತಿರ್ಪೆ
ಸಾಲೋಕ್ಯವಿದೆ, ಸಾಮೀಪ್ಯವಿದೆ, ಸಾರೂಪ್ಯವಿದೆ
ಸಾಯುಜ್ಯವಿದೆ, ಧರ್ಮವಿದೆ, ಅರ್ಥವಿದೆ, ಕಾಮವಿದೆ,
ಮೋಕ್ಷವಿದೆ ನಾನೇನನಱಸುವ ಅಱಿಕೆ ಎಲ್ಲವು ಇದೆ ನೋಡಾ
ನಾನೇನ ಬಯಸುವ ಬಯಕೆ ಎಲ್ಲವು ಇದೆ ಇದೆ ನೋಡ
ಶ್ರೀಗುರು ಕಾರುಣ್ಯದಿಂದ ಮಹಾ ವಸ್ತು ಕರಕ್ಕೆ ಬಂದ ಬಳಿಕ
ಸರ್ವಸುಖಂಗಳೆಲ್ಲವು ಇದೆ ಇದೆ ನೋಡಾ.
ಇನ್ನೆನ್ನ ಬಯಲ ಭ್ರಮೆಯೊಳಗೆ ಇರಿಸದಿರಯ್ಯ
ನಿಮಗೆ ಬೇಡಿಕೊಂಬೆ, ನಿಮಗೆ ಎನ್ನಾಣೆ
ಉರಿಲಿಂಗ ಪೆದ್ದಿಪ್ರಿಯ ವಿಶ್ವೇಶ್ವರಾ.

ದೇಹದೊಡನೆ ಪ್ರಾಣ ಹುಟ್ಟಿತ್ತಯ್ಯ
ಆ ದೇಹದೊಡನೆ ಮಿಶ್ರವಾದ ಪ್ರಾಣನು
ಶ್ರೀ ಗುರುವಿನ ಕರಕಮಲದಲ್ಲಿ ಉತ್ಪತ್ತಿಯಾಗಿ
ಅಂಗದ ಮೇಲೆ ಲಿಂಗವ ಸ್ವಾಯತವ ಮಾಡಿ
ಉರುತರಲಿಂಗದಲ್ಲಿ ಭರಿತ ಚರಿತ್ರ ಚಾರಿತ್ರನ ಮಾಡಿದನಾಗಿ
ಲಿಂಗದೇಹಿ, ಲಿಂಗಪ್ರಾಣಿಯೆನಿಸಿಕೊಂಡು ಬದುಕಿದೆನಯ್ಯ
ಮಹಾಲಿಂಗ ಗುರು ಶಿವಸಿದ್ದೇಶ್ವರ ಪ್ರಭುವೆ.

|| ತ್ರಿವಿಧ ||

         

ಇಂದೆನ್ನ ಕರಸ್ಥಲಕ್ಕೆ ಬಂದನು ಪರಬ್ರಹ್ಮ
ನಿಂದ ನಿಜಾನಂದ ಬಂದನಯ್ಯ
ಮುಂದುವರಿವಾ ಮನದ ಅಜ್ಞಾನ ಹರ ಬಂದ
ತಂದೆ ಬಂದನು ಎನ್ನ ಯೋಗಿನಾಥ.

ತತ್ವಬ್ರಹ್ಮಾಂಡದಿಂದತ್ತತ್ತಲಾದ ಘನ
ಭಕ್ತಿ ಕಾರಣ ನೀನೆ ಚುಳುಕನಾದೆ
ಸತ್ವ ರಜ ತಮಗಳನು ಮೀಱಿಪ್ಪ ಭಕ್ತರ
ಹಸ್ತ ನಿಮ್ಮಯ ಗೊತ್ತು ಯೋಗಿನಾಥ.

ಪರತತ್ವ ಲಿಂಗವು ಪರುಷದೊಳು ಬಂದಿದೆ
ನೆಱೆನಂಬಿ ನಾನದ ನೋಡಿ ನೋಡಿ
ಗುರುಮಾರ್ಗ ಜ್ಞಾನದಿಂದಾ ಲಿಂಗವ ನೋಡಲು
ಹರನೆ ನಾ ನೀನಾದೆ ಯೋಗಿನಾಥ.