೩೦

ಅರಿಸಿನವನೆ ಮಿಂದು ಹೊಂದೊಡಿಗೆಯನೆ ತೊಟ್ಟು,
ಪುರುಷ ಬಾ ಬಾ; ಪುಣ್ಯರತ್ನವೆ ನೀ ಬಾ;
ನಿನ್ನ ಬರವೆನ್ನಸುವಿನ ಬರವಾದುದೀಗ.
ಬಾರಾ ! ಬಾರಾ !
ಚನ್ನಮಲ್ಲಿಕಾರ್ಜುನ ಬಂದಾನೆಂದು ಬಟ್ಟೆಗಳ ನೋಡಿ ನಾ
ಬಾಯಾರುತಿರ್ದೆ.           

೩೧

ಚಿನ್ನಕ್ಕರಿಸಿನ ಚಿನ್ನಕರಿಸಿನ ಚಿನ್ನಕ್ಕರಿಸಿನವ ಕೊಳ್ಳಿರವ್ವಾ.
ಎಮ್ಮ ನಲ್ಲನ ಮೈಯ ಹತ್ತುವ ಅರಿಸಿನವ ಕೊಳ್ಳಿರವ್ವಾ.
ಒಳುಗುಂದದರಿಸಿನವ ಮಿಂದು
ಚನ್ನಮಲ್ಲಿಕಾರ್ಜುನನ ಅಪ್ಪಿರವ್ವಾ.

೩೨

ಅತ್ತೆ ಮಾಯೆ ಮಾವ ಸಂಸಾರಿ
ಮೂವರು ಮೈದುನರು ಹುಲಿಯಂತವರು,
ನಾಲ್ವರು ನಗೆವೆಣ್ಣುಗಳು ಕೆಳದಿ;
ಅವರು ಭಾವದಿರನೊಯ್ವ ದೇವವಿಲ್ಲ.
ಅಱು ಪ್ರಜೆಯೊತ್ತಿಗೆಯರ ಮೀಱಲಾಱೆನು, ತಾಯೆ
ಹೇಳುವಡೆ ಹೇಳು.
ಪ್ರಜೆತ್ತೊತ್ತಿದರ ಕಾವಲು ಕರ್ಮವೆಂಬ ಗಂಡನ ಬಾಯ ಟೊಣೆದು
ಹಾದರವನಾಡುವೆನು ಹರನ ಕೂಡೆ.
ಮನವೆಂಬ ಸಖಿಯ ಪ್ರಸಾದದಿಂದ ಅನುಭಾವವ ಕಲಿತೆನು.
ಶಿವನೊಡನೆ ಕರಚೆಲ್ವ ಶ್ರೀಶೈಲಚನ್ನಮಲ್ಲಿಕಾರ್ಜುನನ
ಸಜ್ಜನದ ಗಂಡನ ಮಾಡಿಕೊಂಬೆ.

೩೩

ಒಮ್ಮೆ ಕಾಮನ ಕಾಲ ಹಿಡಿವೆ,
ಒಮ್ಮೆ ಚಂದ್ರಮಂಗೆ ಸೆಱಗೊಡ್ಡಿಬೇಡುವೆ,
ಸುಡು ವಿರಹವ ನಾನಾರಿಗೆ ಧೃತಿಗೆಡುವೆ
ಚನ್ನಮಲ್ಲಿಕಾರ್ಜುನನೆನ್ನನೊಲ್ಲದ ಕಾರಣ
ಎಲ್ಲರಿಗೆ ಹೆಂಗಿರಿಯಾದೆನವ್ವಾ.

೩೪

ಕಳವಳದ ಮನವು ತಲೆ ಕೆಳಗಾಗ[ದು]ದವ್ವಾ.
ಸುಳಿದು ಬೀಸುವ ಗಾಳಿ ಉರಿಯಾಯಿತ್ತವ್ವಾ. ಬೆಳದಿಂಗಳು ಬಿಸಿಲಾಯಿತ್ತವ್ವ.
ಕೆಳದಿ, ಹೊಳಲ ಸುಂಕಿಗನಂತೆ ತೊಳಲುತ್ತಿದ್ದೆನವ್ವಾ
ತಿಳುಹೌ ಬುದ್ಧಿಯ, ಹೇಳಿ ಕರತಾರೆಲೆಗವ್ವಾ.
ಚನ್ನಮಲ್ಲಿಕಾರ್ಜುನಂಗೆ ಎರಡಱ ಮುನಿಸವ್ವಾ,

೩೫

ಹೊಳೆವ ಜಡೆಯ ಮೇಲೆ ಎಳೆವೆಳದಿಂಗಳು;
ಫಣಿ ಮಣಿ ಕರ್ಣಕುಂದಲದವ ನೋಡವ್ವ;
ರುಂಡಮಾಲೆಯವನ ಕಂಡಡೆ ಒಮ್ಮೆ ಬರಹೇಳವ್ವ;
ಗೋವಿಂದನ ನಯನ ಉಂಗುಟದ ಮೇಲಿಪ್ಪುದು
ಚನ್ನಮಲ್ಲಿಕಾರ್ಜುನದೇವನ ಕುಱುಹವ್ವ.

೩೬

ಕಾಮ ಬಲ್ಲಿದನೆಂದಡೆ ಉರುಹಿ ಭಸ್ಮವ ಮಾಡಿದ.
ಬ್ರಹ್ಮ ಬಲ್ಲಿದನೆಂದಡೆ ಶಿರವ ಚಿವುಟಿಯಾಡಿದ.
ಎಲೆಯವ್ವ ನೀನು ಕೇಳು ತಾಯೆ,
ವಿಷ್ಣು ಬಲ್ಲಿದನೆಂದಡೆ ಆಕಳಕಾಯ್ದಿರಿಸಿದ.
ತ್ರಿಪುರದ ಕೋಟಿ ಬಲ್ಲಿತ್ತೆಂದಡೆ
ನೊಸಲ ಕಂಗಳಲುಱುಹಿದನವ್ವಾ
ಇದು ಕಾರಣ ಚನ್ನಮಲ್ಲಿಕಾರ್ಜುನ ಗಂಡನೆನಗೆ
ಜನನ ಮರಣಕ್ಕೊಳಗಾಗದ ಬಲುಹನೇನ ಬಣ್ಣಿಪೆನವ್ವಾ.

೩೭

ಅಕ್ಕ ಕೇಳವ್ವ ಅಕ್ಕಯ್ಯ ನಾನೊಂದ ಕನಸು ಕಂಡೆ.
ಅಕ್ಕಿಯಡಕೆವಾಲೆ ತೆಂಗಿನಕಾಯಿ ಕಂಡೆ.
ಚಿಕ್ಕಚಿಕ್ಕ ಜಡೆಗಳ ಸುಲಿಪಲ್ಲ ಗೊರವನು
ಭಿಕ್ಷಕ್ಕೆ ಬಂದುದು ಕಂಡೆನವ್ವ.
ಮಿಕ್ಕುಮಿಱಿ ಹೋಹನ ಬೆಂಬತ್ತಿ ಕೈವಿಡಿದೆನು,
ಚನ್ನಮಲ್ಲಿಕಾರ್ಜುನನ ಕಂಡು ಕಣ್ದೆಱೆದೆನು.

೩೮

ನೀನು ದಂಡುಮಂಡಲಕ್ಕೆ ಹೋದೆನೆಂದಡೆ ನಾನು ಸುಮ್ಮನಿಹೆನು.
ನೀನು ಎನ್ನ ಕೈಯೊಳಗಿರ್ದು,
ಎನ್ನ ಮನದೊಳಗಿರ್ದು ನುಡಿಯದಿರ್ದಡೆ
ಆನು ಎಂತು ಸೈರಿಸುವೆನಯ್ಯ.
ನೇಹವೆಂಬ ಕುಂಟಣಿ ಚನ್ನಮಲ್ಲಿಕಾರ್ಜುನನೊಲಿಸದಿರ್ದಡೆ
ಎನ್ನೇವೆ ಸಖಿಯೆ.

೩೯

ಇಂದ್ರ ನೀಲಗಿರಿಗಳ ಮೇಲೇಱಿಕೊಂಡು,
ಚಂದ್ರಶಿಲೆಗಳ ಮೆಟ್ಟಿಕೊಂಡು,
ಕೊಂಬ ಬಾರಿಸುತ ಹರನೇ,
ಎನ್ನ ಕುಂಭಕುಚದ ಮೇಲೆ ನಿಮ್ಮನೈದಿಪ್ಪಿಕೊಂಬೆನಯ್ಯ.
ಅಂಗ ಭಂಗ ಮನಭಂಗವಳಿದು,
ನಿಮ್ಮನೆಂದಿಗೊಮ್ಮೆ ನೆಱೆವೆನೊ
ಚನ್ನಮಲ್ಲಿಕಾರ್ಜುನಾ.

೪೦
ಉರಿಯ ಫಣಿಯನೆ ಉಡಿಸಿ, ಊರಿಂದ ಹೊಱಗಿರಿಸಿ,
ಕಱೆಯಲಟ್ಟಿದ ಸಖಿಯ ನೆಱೆದ ನೋಡೆಲಗವ್ವಾ
ತೂರ್ಯಾವಸ್ಥೆಯಲ್ಲಿ ತೂಗಿಗೂಗಿ ನೋಡಿ
ಕರನೊಂದೆ ನೋಡವ್ವಾ
ಅವಸ್ಥೆಯಿಂದ ಹಿರಿದು ದುಃಖ ಕರೆಬೆಂದು ಗಿರಿಬೆಂದು
ಹೊನ್ನರಳಿಯ ಮರನುಳಿದು,
ಹಿರಿಯತನಗೆಡಿಸಿ; ನೆಱೆವೆನು
ಚನ್ನಮಲ್ಲಿಕಾರ್ಜುನಾ.

೪೧

ಕೂಡಿ ಕೂಡುವ ಸುಖದಿಂದ
ಒಪ್ಪಚ್ಚಿ ಅಗಲಿ ಕೂಡುವ ಸುಖ ಲೇಸು ಕೆಳದಿ.
ಒಚ್ಚತ ಆಗಲಿದಡೆ ಕಾಣದೆ ಇಱಲಾಱೆ;
ಎನ್ನ ದೇವ ಚನ್ನಮಲ್ಲಿಕಾರ್ಜುನ
ಅಗಲಿಯಗಲದ ಸುಖವೆಂದಪ್ಪುದೊ !

೪೨

ಮಚ್ಚು ಅಚ್ಚುಕವಾಗಿ ಒಪ್ಪಿದ ಪರಿಯ ನೋಡಾ !
ಎಚ್ಚರಗರಿ ತೋಱದೆ ನಡಸಬೇಕು.
ಅಪ್ಪಿದಡೆ ಅಸ್ಥಿಗಳು ನುಗ್ಗುನುರಿಯಾಗಬೇಕು.
ಬೆಚ್ಚಡೆ ಬೆಸುಗೆಯನಱಿಯದಂತಿರಬೇಕು.
ಮಚ್ಚು ಒಪ್ಪಿತ್ತು ಚನ್ನಮಲ್ಲಿಕಾರ್ಜುನಯ್ಯನ ಸ್ನೇಹ.

೪೩

ಭಾವನೇಕೆ ಬಾರನೆನ್ನ ಮನೆಗೆ ?
ಹಿರಿಯ ಮಗನನುಱುಹಿದ ಗರ್ವದ
ಭಾವನೇಕೆ ಬಾರನೆನ್ನ ಮನೆಗೆ ?
ಅಸುರರ ಪುರವ ಸುಟ್ಟ
ವೀರಭಾವನೇಕೆ ಬಾರನೆನ್ನ ಮನೆಗೆ ?
ದಕ್ಷನ ಶಿರವನಱಿದು ಯಾಗವ ಕೆಡಿಸಿ
ಕುಱಿದಲಯ ಹತ್ತಿಸಿ ಬಿನ್ನಾಣದ ಬಲುಹ ಮೆಱೆವ
ಏಕೋಭಾವನೇಕೆ ಬಾರನೆನ್ನ ಮನೆಗೆ ?
ಹರಿಯ ನಯನದ ಪೂಜೆ ಚರಣದೊಳೂಪ್ಪಿತೆಂಬ
ದುರುಳುತನವು ತನಗೆ ಬೇಡವ್ವ !
ಆತನ ಕರೆದು ತಾರವ್ವ.
ಪರವಧುವಿಂಗಳುಪಿದ ಮಿಂಡತನದ ದುರುಳತನವು
ತನಗೆ ಬೇಡವ್ವ; ಆತನ ಕರೆದು ತಾರವ್ವ.
ಶಂಭುಜಕ್ಕೇಶ್ವರನ ನೆಱೆದು ನೋಡುವ ಮನ ಬಂದ ಪರಿಯಲಿ
ವೊತ್ತಂಬರಿಸಿದ ಗಂಡು ದೋಱೆ ಮೀಱೆದನಾದಡೆ
ಸಾರಿದೂರುವೆನು.

೪೪

ಹೊಱಗಿದ್ದಹನೆಂದು ನಾನು ಮಱೆದು ಮಾತನಾಡಿದೆ.
ಅಱಿಯಲೀಯದೆ ಎನ್ನಂತರಂಗದೊಳಿಪ್ಪನು
ತೆಱಹಿಲ್ಲದೆ ಭಾವನು ನುಡಿಗೆಡೆದುಡನು.
ಆತನ ಬಯಲಿಂಗೆ ಬೇಟಗೊಂಡೆನವ್ವಾ
ಆನೇನ ಮಾಡುವೆನೆಲೆ ತಾಯೆ;
ಮಱೆದಡೆ ಚರಿಸುವ ಕುಱುಹಿನ ಮಿಂಡನು
ಅಱಿದಡೊಳ್ಳಿದನಪ್ಪ ಶಂಭುಜಕ್ಕೇಶ್ವರನು.

೪೫

ಇನಿಯಂಗೆ ತವಕವಿಲ್ಲ, ಎನಗೆ ಸೈರಣೆಯಿಲ್ಲ.
ಮನದಿಚ್ಚೆಯನಱಿವ ಸಖಿಯರಿಲ್ಲ.
ಮನುಮಥನ ವೈರಿಯ ಬಾಣ ಮನದಲ್ಲಿ ಸಿಲುಕಿ ಬಿಡದು
ಇನ್ನೇವೆನಿನ್ನೇವೆ ?
ದಿನ ವೃಥಾ ಹೋಗಿ ಯವ್ವನ ಬೀಸರಹೋಗದ ಮುನ್ನ
ಪಿನಾಕಿಯ ತಂದು ನೆಱಹವ್ವಾ ಶಂಭುಜಕ್ಕೇಶ್ವರನಾ.

೪೬

ಮಚ್ಚಿ ಗ್ರಾಹಿಗೊಂಡೆ ನಿನಗಾನು ನಲ್ಲನೆ !
ಒಚ್ಚತವೋದವಳನುಳಿವರೆ  ವಿಕಳಗೊಂಡೆ ಶಿವಶಿವಾ !
ಪ್ರಾಣಪದವಲ್ಲದೆ ಮತ್ತೊಂದನಱಿಯೆ.
ಮನ ವಚನ ಕಾಯದಲ್ಲಿ ಉಚಿತವೇ ನಿಮಗೆ ?
ಪುರುಷಲಕ್ಷಣವೆ ?
ಆತಃಪರಗಂಡರ ನಾನು ಬಲ್ಲಡೆ ಕರ್ತ ನಿಮ್ಮಾಣೆ ಶಂಭುಜಕೇಶ್ವರಾ.

೪೭
ಜಾಣಾನುಭಾವಿಯೆಂಬ ಪಿನಾಕಿಯ ಮಾತ ಕೇಳಿದು ಬಂದೆ.
ಹಿರಿದು ಆರತದಿಂದ ಕಾಣಿಸುವನ್ನಕ್ಕರ ತವಕನುಡಿಗೆಡೆಗೊಡೆನೆಲಗೆ
ಪ್ರಾಣಕಾಧಾರ ಶಿವಶಿವಾ ಎಂಬ ಶಬ್ಧ
ಆತನ ಕಂಡುದೆ ಕಡೆಯ ಕೀಲ ಕಳೆದಂತೆ
ಶಂಭುಜಕ್ಕೇಶ್ವರನ ಬೆರಸಲೊಡನೆ ಬೆಱಗಾದೆನು.

೪೮

ಎಲ್ಲರ ಗಂಡಂದಿರು ಪರದಶವಿಭಾಡರು.
ಎನ್ನ ಗಂಡ ಮನೆದಳವಿಭಾಡ,
ಎಲ್ಲರ ಗಂಡಂದಿರು ಗಜಬೇಂಟೆಗಾಱರು
ಎನ್ನ ಗಂಡ ಮನೆಬೇಂಟೆಕಾಱ,
ಎಲ್ಲರ ಗಂಡಂದಿರು ತಂದಿಕ್ಕಿಸಿಕೊಂಬರು
ಎನ್ನ ಗಂಡ ತಾರದೆ ಇಕ್ಕಿಸಿ ಕೊಂಬ
ಎಲ್ಲರ ಗಂಡಂದಿರಿಗೆ ಮೂಱು,
ಎನ್ನ ಗಂಡಂಗೆ ಒಂದು
ಅದೊಂದು ಸಂದೇಹ ಬಿಡಾ.
ಕದಿರೆ ರೆಮ್ಮಿಯೊಡೆಯ ಗುಮ್ಮೇಶ್ವರಾ.

೪೯

ಎಲ್ಲರ ಹೆಂಡತಿಯರು ತೊಳಸಿಕ್ಕುವರು;
ಎನ್ನ ಗಂಡಂಗೆ ತೊಳಸಿಕ್ಕಿವರಿಲ್ಲ.
ಎಲ್ಲರ ಗಂಡಂದಿರು ಬಸಿವರು,
ಎನ್ನ ಗಂಡಂಗೆ ಬಸಿವುದಿಲ್ಲ.
ಎಲ್ಲರ ಗಂಡಂದಿರಿಗೆ ಅಂಡದ ಬೀಜವುಂಟು;
ಎನ್ನ ಗಂಡಂಗೆ ಅಂಡದ ಬೀಜವಿಲ್ಲ|
ಎಲ್ಲರ ಗಂಡಂದಿರು ಮೇಲೆ ಎನ್ನಗಂಡ ಕೆಳಗೆ, ನಾ ಮೇಲೆ,
ಕದಿರೆ ರೆಮ್ಮಿಯೊಡೆಯ ಗುಮ್ಮೇಶ್ವರಾ.

೫೦

ಆರು ಇಲ್ಲದವಳೆಂದು ಆಳಿಗೊಳಲು ಬೇಡ.
ಆಳಿಗೊಂಡಡೆ ಆನು ಅಂಜುವಳಲ್ಲ.
ಒಲವಿನ ವತ್ತೆಕಲ್ಲನು ಬೆವರಿಸ ಬಲ್ಲೆ ಕಾಣಿರೊ !
ಅಪ್ಪಿದವರನಪ್ಪಿದಡೆ ತರಗೆಲೆಯಂತೆ,
ರಸವನಱಸಿದರುಂಟೆ ? ಅಜಗಣ್ಣ ತಂದೆ.

೫೧

ಒಂದಲ್ಲ ಎರಡಲ್ಲ ಮೂವರು ಹೆಣ್ಣುಗಳ
ಮಱೆಯಲ್ಲಿಪ್ಪವನ ನೆಱೆಯಲೆಂತವ್ವ.            ಹೆಣ್ಣಿನ ಮಱೆಯ ಹೊಗುವ ಕೇಳವ್ವ ಕೆಳದಿ.
ಲೋಗುರ ಪತಿಯನು ಮಱೆಸಿಕೊಂಡಿಪ್ಪ ಚಂಡಿಯರಿಗೆ ಮತ್ತೆ ನಾಚಿಕೆಯಿಲ್ಲ ಕೇಳವ್ವ,
ಅವಂದಿರ ಝಂಕಿಸಿ ತೊಲಗಿಸಿ ಬಿಡದಿರೆಂದು  ಉರಿಲಿಂಗದೇವನ.

೫೨

ಕಾಮಿ ಕಾಮಿನಿಗೆ ಎರಡು ಗುರಿಯೆಂದು
ಸರಳೆಸುಗೆಯ ಮಾಡಬೇಡ ಗಡಾ !
ಕಾಮನಲ್ಲೊನಲ್ಲೊ ಬಿಲ್ಲಾಳೆ ಎಸಲು  ಎರಡು ಒಂದಪ್ಪುದು ಗಡಾ !
ಕಾಮ, ಎನಗೆಯು ಉರಿಲಿಂಗದೇವಂಗೆಯು
ತೊಟ್ಟಿಸು ಎರಡೊಂದಾದಡೆ ನೀ ಬಲ್ಲಾಳಹೆಯಲ್ಲಾ.

೫೩

ಕಾಮನ ಕೊಂದಡು ಪಟ್ಟಕ್ಕೆ ನಿಂದ ಗುರುವ ಕಾಮರಾಜನವ್ವಾ.
ರಾಜಾಧಿರಾಜ ಕಂಡವರೆಲ್ಲ ಹೆಂಡಿರ ಮಾಡಿ ನೆಱೆವ ಮಹಾಕಾಮಿ.
ಕಾಮಿನಿ ನೀ ಕೇಳಾ.
ಇಂತಪ್ಪ ಕಾಮಿನಿಯನತಿಕಾಮದಿಂದ ಕಾಮಿಸಿದೆನವ್ವ.
ಉರಿಲಿಂಗದೇವನ.

೫೪
ಟಕ್ಕಿಪ ನಲ್ಲನ ಟಕ್ಕಿಪ ತೆಱನನು
ಚದುರೆ ಚದುರಿಸದೆನಗೆ.
ನೀನುಸಿರಾ !
ಸತ್ಯವ ಜಪಿಸಲು ಸಿಕ್ಕುವನಲ್ಲನು
ಸತ್ಯವು ಸತ್ಯವು ಕೇಳಾ ಕೆಳದಿ,
ಅವನು ಉಂಬಲ್ಲಿ ಉಡುವಲ್ಲಿ ನೇಹವ ಬೆಳೆಸಲು ಸಿಕ್ಕುವನು.
ಬಿಡದಿರು ಉರಿಲಿಂಗದೇವನ.

೫೫

ಎನ್ನ ನಲ್ಲನು ಒಲ್ಲನೆಂದು ಕೇಳಿದಡೆ
ಇಲ್ಲಿಯೆ ಅಱಸುವೆನವನ.
ಗಂಗೆಯ ನೋನೆನು, ಗೌರಿಯನೋನೆನು,
ಇಲ್ಲಿಯೆ ಅಱಸುವೆನವ್ವಾ.
ಎನ್ನಂತರಂಗದ ಆತ್ಮಜ್ಯೋತಿಯೆ ಉರಿಲಿಂಗದೇವಾ ಎಂದು
ಇಲ್ಲಿಯೆ ಅಱಸುವೆನವ್ವಾ.

೫೬

ನಾಡಿಗ ನಲ್ಲನು ಕಾಡಿಹನೆಲಗೆ !
ಕೂಡಿಹನಗಲಿಹನೆನ್ನ ಕೇಳು ಇರುಹವಾ !
ನೀನದ ಮಾಣಿಸು,
ಅವನ ಅಗಲಿ ಕೂಡುವ ಬೇಟದಸುಖವನು
ಮುಗುದೆ ನೀನಱಿಯೆ.
ಅಗಲದ ವಿರಹಿಯ ಕೂಟದ ಸುಖವನು
ಉರಿಲಿಂಗದೇವ ಬಲ್ಲನು ಕೆಳದಿ !

೫೭

ನಲ್ಲನೊಲ್ಲನೆಂದು ಮುನಿದು ನಾನಡಗಲು
ಅಡಗುವ ಎಡೆಯಲ್ಲಾ ತಾನೆ ಕಾಣವ್ವ !
ಅಡಗಲಿಕ್ಕೆ ಗೆಱಹಿಲ್ಲ;
ಮುನಿದು ನಾನೇಗುವೆ
ಶರಣು ಹೋಗುವೆ ನಾನು ಉರಿಲಿಂಗದೇವಗೆ

೫೮

ನಲ್ಲನ ಕೂಡಲು ಸುಖಭೋಗದ್ರವ್ಯವನು
ಎಲ್ಲಿಂದ ತಪ್ಪೆನು ಹೇಳಾ ಕೆಳದಿ ?
ನಲ್ಲನ ಬೇಡಲು ನಾಚಿಕೆ ಎನಗೆ; ಮತ್ತೆ ಆರೂ ಇಲ್ಲ
ಇನ್ನು ಕೊಡವ ಶಕ್ತರ ನಾನಱೆಯೆನು ಕೇಳಾ ಕೆಳದಿ.
ಹೆಣ್ಣು ಹೆಣ್ಣು ಕೂಡುವ ಸುಖವನು,
ಮಣ್ಣಿನಲ್ಲಿ ನೆರಹುವೆನು ಉರಿಲಿಂಗದೇವಾ.