೫೯

ಆರ ಪರಿಯಲ್ಲ ನಮ್ಮ ನಲ್ಲನು
ವಿಶ್ವವೆಲ್ಲವು ಸತಿಯರ ಚೋದ್ಯದ ಪುರುಷನ
ಅವರವರ ಪರಿಯಲ್ಲಿ ಅವರವರ ನೆರೆವನು.
ಅವರವರಿಗೆ ಅವರಂತೆ ಸುಖಮಯನು ನೋಡಾ.
ಅವರೆಲ್ಲರ ವಂಚಿಸಿ ಎನ್ನನಗಲದ ಪರಿಯ ಹೇಳಾ ಕೆಳದಿ.
ನೀನೊಳ್ಳಿದಳಾದಡೆ ಮಹಾಮಂತ್ರವ ಜಪಿಸಲು
ನಿನ್ನನಗಲ ನಿನ್ನಾಣೆ; ಉರಿಲಿಂಗದೇವ ತನ್ನಾಣೆ.   

೬೦

ಕಾಯಕ್ಕೆ ಕಾಹ ಕೊಡುವರಲ್ಲದೆ ಮನಕ್ಕೆ ಕಾಹ ಕೊಡುವರೆ ಅವ್ವಾ ?
ಇಂತಪ್ಪ ಸೋಜಿಗವನೆಲ್ಲಿಯೂ ಕಾಣೆನು.
ಸದುಗುಣದ ಕಾಹ ಮನಕ್ಕೆ ಕೊಟ್ಟನು.
ಉರಿಲಿಂಗದೇವನು ಸೋಜಿಗವವ್ವಾ.

೬೧

ಒಬ್ಬನೆ ಗುರ್ವನು ಇವನೊಬ್ಬನೆ ಚಿಲುವನು
ಇವನೊಬ್ಬನೆ ಧನಪತಿ ಕೇಳು ಕೆಳದಿ,
ಆವಗೆ ಹಿರಿಯರಿಲ್ಲ; ಆವಗೆ ಒಡೆಯರಿಲ್ಲ.
ಇಂತಪ್ಪ ನಲ್ಲನು ಲೇಸುಕಾಣೆಮಗೆ.
ನಾವೆಲ್ಲ ಒಂದಾಗಿ ಹಿಡಿದು ಬಡಿದಡೆ,
ಬಿಡಿಸುವರಿಲ್ಲ ಲೇಸು ಉರಿಲಿಂಗದೇವನಾ.

೬೨

ಇನೆಯ ನಿನಗೆ, ಇನೆಯ ನಾನೊಂದನಱಿಯೆ
ನೀ ನುಡಿಸಲು ನುಡಿವೆ, ನೀ ನಡೆಸಲು ನಡೆವೆ
ನೀನಲ್ಲದಱಿಯೆ, ಇನೆಯ ನೀ ಕೇಳಾ.
ನೀನೆ ಗತಿ, ನೀನೆ ಮತಿ, ನಿನ್ನಾಣೆ ಉರಿಲಿಂಗದೇವಾ.

೬೩

ನಲ್ಲನ ಬೇಟದ ಕೂಟದ ಸುಖವನು   ಏನೆಂದು ಹೇಳುವೆ ವಿಪರೀತ ಕೆಳದಿ.
ಪುರುಷ ಶಕ್ತಿಯಾಗಿ, ಶಕ್ತಿ ಪುರುಷನಾಗಿ ನೆಱೆವೆನು.
ವಿಪರೀತ ಕೇಳಾ ಕೇಳದಿ.
ಅತಿಕಾಮಿ ವಿಪರೀತ ಉರಿಲಿಂಗದೇವನ ನೆರಲಿ ನೀಱೆವುದು
ಮನದಿಚ್ಛೆ ಕೇಳದಿ.

೬೪

ನಲ್ಲನ ರೂಪೆನ್ನ ನೇತ್ರವ ತುಂಬಿತ್ತು.
ನಲ್ಲನ ನುಡಿಯೆನ್ನ ಶ್ರೋತ್ರವ ತುಂಬಿತ್ತು.
ನಲ್ಲನ ಸುಗಂಧವನ್ನ ಘ್ರಾಣವ ತುಂಬಿತ್ತು.
ನಲ್ಲನ ಚುಂಬನವೆನ್ನ ಜಿಹ್ವೆ ಯ ತುಂಬಿತ್ತು
ನಲ್ಲನಾಲಿಂಗವೆನ್ನ ಸರ್ವಾಂಗವ ತುಂಬಿತ್ತು
ನಲ್ಲನ ಅಂತರಂಗ ಬಹಿರಂಗದಲ್ಲಿ ಕೂಡಿ ಸುಖಿಯಾದೆ,
ಉರಿಲಿಂಗದೇವಾ.

೬೫

ನೆನಹಿನ ನಲ್ಲ ಮನೆಗೆ ಬಂದಡೆ ನೆನೆವದಿನ್ನಾರನು ಹೇಳಲೆ ಅವ್ವಾ.
ನೆಱೆವ ಕ್ರೀಯೆಯಲ್ಲಿ ನೆಱೆದು ಸುಖಿಸುವ ಕ್ರೀಯೆಲ್ಲಿ ಸುಖಿಸುವುದಲ್ಲದೆ
ನೆನೆವುದಿನ್ನಾರನು ಹೇಳಲೆ ಅವ್ವಾ    ನೆನಹಿನ ನಲ್ಲನು ಉರಿಲಿಂಗದೇವನು
ತಾ ಬಂದ ಬಳೀಕ ನೆನೆವದಿನ್ನಾರನು ಹೇಳಲೆ ಅವ್ವಾ

೬೬

ಇಂಬಿನ ಚುಂಬನವಮೃತಾಹಾರ
ಆಲಿಂಗನವೆ ಆಭರಣ
ಸೋಂಕೆ ಸುವಸ್ತ್ರ. ನೋಟವೆ ಕೂಟ; ಒಡನಾಟವೆ ಅಪ್ಪು
ಭೋಗವೆನಗೆ ಉರಿಲಿಂಗದೇವನ ಕೂಟ
ಪರಮ ವಾಙ್ಮನಾತೀತ ಪರಮ ಸುಖವು.

೬೭

ಎಮ್ಮ ನಲ್ಲನ ಕೂಡಿದ ಕೂಟವನು
ಇದಿರಿಂಗೆ ಹೇಳಬಾರದವಾ            ನೀವೆಲ್ಲ ನಿಮ್ಮ ನಲ್ಲನ ಕೂಡಿದ ಸುಖವ
ಬಲ್ಲಂತೆ ಹೇಳುವಿರಿ.
ಉರಿಲಿಂಗದೇವ ಬಂದೆನ್ನ ನಿರಿಯನುಚ್ಚಿದಡೆ
ನಾನೊ ತಾನೊ ಏನೆಂದಱೆಯನು.

೬೮

ನಲ್ಲನ ಕೂಡಿಹೆವೆಂದ ಮೇಲುವಾಯಿವನ್ನಬರ
ತವಕದಿಂದ ಮೇಲುವಾಯಿದ ನೋಡಾವ್ವಾ.
ಮನದೊಳಗೆ ಮನವಾಗಿ, ಪ್ರಾಣದೊಳಗೆ ಪ್ರಾಣವಾಗಿ,
ಕಾಯದೊಳಗೆ ಕಾಯವಾಗಿ, ಕೂಡಿದ ನೋಡವ್ವಾ.
ತವಕಕ್ಕೆತವಕಮಿಗೆ ಮೇಲುವಱಿದು ಕೂಡಿದಂತೆ ಕೂಡುವೆ
ಉರಿಲಿಂಗದೇವನಾ.

೬೯
ನಲ್ಲನ ಕೂಡುವನ್ನಕ್ಕ ಸುಖದಸುಗ್ಗಿಯನೇನೆಂದಱೆಯೆ, ಕೇಳಾ ಕೆಳದಿ,
ಸುಖದ ಸವಿಗೆ ಸವಿಸಿ ಕೂಡಿದೆ ನೋಡವ್ವ.
ತವಕಕ್ಕೆ ತವಕಮಿಗೆ ಮೇಲುವಱಿದು ಕೂಡಿದಂತೆ,
ಕೂಡುವೆನುರಿಲಿಂಗದೇವನಾ.

೭೦

ನಲ್ಲನ ಕೂಡುವನಕ್ಕ ಸುಖದ ಸುಗ್ಗಿಯನೇನೆಂದಱಿಯೆ ಕೇಳಾ ಕೆಳದಿ.
ಸುಖದ ಸವಿಗೆ ಸವಿಸಿ ಹರಿಯಿತ್ತು.; ಹೇಳಲು ನಾಚಿಕೆ ಕೇಳು ಕೆಳದಿ.
ಸುಖರಸ ಮಡುಗಟ್ಟಿದಲ್ಲಿ ಉರಿಲಿಂಗದೇವನ ಕೂಡಿ,
ಸುಖಸಾಗರದಲ್ಲಿ ಕ್ರೀಡಿಸುತ್ತಿರ್ದೆ ಕೆಳದಿ.

೭೧

ನಲ್ಲನ ಕೂಡುವ ಭರದಲ್ಲಿ ಎನ್ನನು ಇದಿರುವನೇನೆಂದಱಿಯೆ.
ನಲ್ಲನ ಕೂಡುವಾಗಲು ಎನ್ನನು ನಲ್ಲನ ಏನೆಂದಱಿಯೆ.
ಉರಿಲಿಂಗದೇವನ ಕೂಡಿದ ಬಳಿಕ ನಾನೊ ತಾನೊ ಏನೆಂದಱಿಯೆ.

೭೨

ಗಿಡು ಮರ ಕುಱುಬಿತಿಯ ಜವ್ವನದಂತೆ
ನುಡಿಯಲಱಿಯದ ಮುಗ್ಧೆಯಾಗಿರ್ದೆನವ್ವಾ.
ಹಗಲನಱಿಯದ ಜಕ್ಕವಕ್ಕಿಯಂತೆ
ಮನಬಯಸುತಿರ್ದೆನವ್ವಾ
ಹಲವುಕಾಲ ಯುಲವದ ಮರನ ಸಾರಿದಡೆ
ಗಿಳಿಯಂತಾದೆನವ್ವಾ.
ಇದು ಮಹಾಲಿಂಗ ಗಜೇಶ್ವರ ನೆಱೆಯಲಱಿಯದೆ
ಇವರೆಲ್ಲತ ವಿದಿಯ ಹೊತ್ತೆನವ್ವಾ.

೭೩

ನಲ್ಲನುಳಿದನೆಂದೊಂದು ಮಾತನಟ್ಟಿದಡೆ
ಕರಸ್ಥಲದಲ್ಲಿ ನೈದಿಲು ಮೂಡಿತ್ತ ಕಂಡೆನವ್ವಾ
ಉದಕದೊಳಗೆ ತಾವರೆ ಬಾಡಿತ್ತ ಕಂಡೆ
ಎನ್ನ ಮಹಾಲಿಂಗ ಹಜೇಶ್ವರನುಳಿದನೆಂದಡೆ
ಒಂದಲೆಯಲಿ ಹೂ ಮೂಡಿತ್ತ ಕಂಡೆನವ್ವಾ.

೭೪

ಮಾಘಮಾಸದ ನವಿಲಿನಂತಾದೆನವ್ವಾ
ಇರುಳು ತೊಳಲುವ ಜಕ್ಕವಕ್ಕಿಯಂತೆ ಹಲಬುತಿರ್ದೆ ನೋಡವ್ವಾ
ಮಾಗಿಯ ಕೋಗಿಲೆಯಂತೆ ಮೂಗಿಯಾಗಿರ್ದೆ ನೋಡವ್ವಾ
ಮಹಾಲಿಂಗ ಗಜೇಶ್ವರನ ಅನುಭಾವ ಸಂಬಂಧಿಗಳ
ಬರವೆನ್ನ ಪ್ರಾಣದ ಬರವು ನೋಡವ್ವಾ.

೭೫

ಹಲವು ಕಾಲದಲ್ಲಿ ಕೇತಾರ ಕಂಡಂತಾದೆನವ್ವ,
ಮುನಿಸು ನಾಚಿಕೆ ಹೋಗಿ ಕಂಗಳ ಕೊನೆಯಲ್ಲಿ ಸಿಲುಕಿದೆನವ್ವಾ
ತನು ಜರ್ಜರಿತವಾಗಿ ಮನ ಹೌವನೆ ಹಾರಿತ್ತವ್ವಾ
ಎನ್ನ ಮಹಾಲಿಂಗ ಗಜೇಶ್ವರನುಳಿದನೆಂದಡೆ
ಆಲಿಕಲ್ಲನುಂಗಿದ ಚಕೋರನಂತಾದೆನವ್ವಾ

೭೬

ಕಂಗಳ ಕಳೆ ಮನದ ನೋಟ ಮಸಕದ ಮಿಂಚಿನ ಗೊಂಚಲು ಸೂಸಿದಂತೆ.
ತಾರಕಿ ತಾರಕಿ ತಳಿತಂತೆ, ಅರಳಿನ ಬಳ್ಳಿ ಹಬ್ಬಿದಂತೆ,
ಅಲ್ಲಿ ದಾರೆ ಕೊರೆ ಕೆಂಪತಿದ್ದುವ ಆಳುಗಳಿನ್ನಾರನೂ ಕಾಣೆ.
ಐದುರೂಹನೊಂದು ಮಾಡಿ ಕಾದಿ ಗೆಲಿದು, ಸೋತು
ಹೊಱಹೊಂಟು ಹೋದನವ್ವಾ.
ಮಹಾಲಿಂಗ ಗಜೇಶ್ವರ ಕಂಗಳ ಕಾಳಳದ ಮಸಾಳು.

೭೭

ಚಂದ್ರಮನ ಕಂಡು ಮಂಡೆಯ ಬಿಟ್ಟು
ಏಳು ಬಂಧವ ತೋಱಿ ಬೆದಱಿಸಿದನವ್ವಾ
ಮಗಳ ಕುಂಕುಮತಿಲಕವ ಕಂಡು
ನಿಮ್ಮ ನೊಸಲಲ್ಲಿ ಎಸೆಯಬಂದ ಕಾಮ ಕೈಮಱೆದನವ್ವಾ
ಸುಟ್ಟು ಪಡಿಯ ಸಂಗ ಮಹಾಲಿಂಗ ಗಜೇಶ್ವರನ
ಸಂಪಗೆಯ ವನಕ್ಕೆ ಹೋಗಿ ಶರಣೆನ್ನು ಮಗಳೆ.

೭೮

ಅಪ್ಪಿನ ನೋಂಕಿನ ಸುಖವನಗಲುವ ಮನಕಿಂದ
ಬಂಜೆಹಾಗಿಪ್ಪುದು ಕರಲೇಸು ನೋಡವ್ವ
ಕಂಗಳ ನೋಟ ಮನಕ್ಕೆ ಸೈರಿಸದು. ಎಣೆಗೊಂಡು ಬಡವಾದ ಪರಿಯ ನೋಡಾ
ಅವ್ವ, ತುಪ್ಪಳನಿಕ್ಕಿದ ಹಂಸೆಯಂತಾದೆನವ್ವಾ.            ಮಹಾಲಿಂಗ ಗಜೇಶ್ವರನುಳಿದಡೆ.

೭೯

ಚಕೋರನಂತೆ ದಿನವನೆಣಿಸುತ್ತಿದ್ದಳವ್ವೆ.
ದರುವಕ್ಕಿ ಕಂಡ ಕನಸಿನಂತಿದ್ದಳವ್ವೆ.
ಮೋಡಂಬೊಕ್ಕ ಚಂದ್ರನಂತಿದ್ದಳವ್ವೆ.
ಎಂಟನೆಯವಸ್ಥೆಯ ಆಚೆಯ ತಡೆಯಲಿದ್ದವರನು
ಈಚೆಯ ತಡಿಗೆ ಕರೆದು ಕೊಂಬಂತೆ ಇದು,
ನಮ್ಮ ಮಹಾಲಿಂಗ ಗಜೇಶ್ವರ
ಕಂಗಳ ಕಾಮ, ಕಂಗಾಹಿಗಂಡವ್ವ, ಕಂಗಳು ಮಹಾ !

೮೦

ನೇಹದ ಸನ್ನೆಯ ಮನವನಱಿಯಲೊಡನೆ ನೋಡಲಮ್ಮೆನವ್ವಾ. ಕಂಗಳಲಿ,
ಹಿಸುಣವ ಹೇಳಿಹನೆಂದು ನೋಡಲಮ್ಮೆನವ್ವಾ.
ಕಜ್ಜಲ ಕಲಕಿದಡೆ ಕುಱುಹಳಿದೀತೆಂದು ನೋಡಲಮ್ಮೆನವ್ವಾ ಕಂಗಳಲಿ
ಮಹಾಲಿಂಗ ಗಜೇಶ್ವರನೊಲವ !
ಎನಗೆ ಕಲುದೇಹ, ತನಗೆ ಸುಖದ ಮೊದಲು ನೋಡವ್ವಾ.

೮೧

ಅಗಲಿದ ನಲ್ಲನ ಕನಸಿನಲಪ್ಪಿ ಸುಖಿಯಾದಿರವ್ವಾ.
ಕಂಡ ಕನಸು ದಿಟವಾದಡೆ ಅವನಮ್ಮನಲ್ಲ.
ಮನಸುಳ್ಳವರು ನೀವು ಪುಣ್ಯಂಗೆಯ್ದಿರವ್ವಾ
ಮಹಲಿಂಗ ಗಜೇಶ್ವರದೇವನಱಿದಡೆ ನಿದ್ರೆ ಎಮಗಿಲ್ಲ, ಕನಸಿನ್ನೆಲ್ಲಿಬಹುದವ್ವ.

೮೨

ಕಾಮಕಂಜಿ ಚಂದ್ರನ ಮಱೆಹೊಗಲು ರಾಹು ಕಂಡಂತಾದಳವ್ವೆ.
ಹಾವೆಂದಱೆಯದೆ ನೇಣವೆಂದಱಿಯದೆ ಕ್ಷಣನಾಗಭೂಷಣೆಯಾಗಿದ್ದಳವ್ವೆ.
ಮಹಾಲಿಂಗ ಗಜೇಶ್ವ್ರನ ನೆಱಿವ ಭರದಿಂದ ಆಕಳಕ್ಕೆ ಬಂದ ಮೃಗದಹಾಂಗಿದ್ದಳವ್ವೆ.

೮೩

ಅಗಲಲಿಲ್ಲದ ನಲ್ಲನನಗಲಿ ನೆಱಿವೆನೆಂಬ ಕಾಮಿನಿಯರ ಭಂಗವ ನೋಡಾ
ಆ ನಮ್ಮ ನಲ್ಲನ ಅನುವಿನೊಳಿರ್ದು ನೆಱೆದೆಹೆನೆಂಬ ಭರವೆನಗವ್ವಾ.
ಮಹಾಲಿಂಗ ಗಜೇಶ್ವರಯ್ಯನ ಕೂಡಿದ ಬಳಿಕ ಅಗಲಲೆಡೆಯುಂಟೆ ಅವ್ವಾ ?

೮೪

ಬಿಟ್ಟ ತಲೆಯ, ಬಳಲಿದ ಮುಡಿಯ, ಬಱುಗಿವಿಯಕೈಯಲಿ ಬಿಚ್ಚೋಲೆ
ಬಿಟ್ಟ ನಿಱಿಯ ಸಡಲಿದ ಕಳೆಯ ಘಳಿಲನೆ ನಡೇತಂದಳವಳು.
ನಚ್ಚೆ ಮಚ್ಚೆ ಮನಸಂದ ಕಳೆವಳು.
ಒಂದಪ್ಪಿನ ಸೋಂಕಿನ ಸುಖವ ಮಹಾಲಿಂಗಗಜೇಶ್ವರನು ತಾನೆ ಬಲ್ಲ.

೮೫

ಕಂಗಳ ಬಲದಲ್ಲಿ ಮುನಿದೆನೆಂಬೆನೆ   ಕಂಗಳು ತನ್ನನಲ್ಲದೆ ನೋಡದು.
ಮನದ ಬಲದಲ್ಲಿ ಮನಿದೆನೆಂಬೆನೆ     ತನುಮನ ತಾಳಲಾಱವವ್ವಾ.
ಇಂತೀ ಮನ ಪ್ರೇರಕ ಮನ ಚೋರಕ ತನ್ನಧೀನವಾಗಿ ಸಾಧನವಪ್ಪಡೆ
ಮನದ ಒಳ ಮೆಛ್ಚುವನವ್ವಾ.
ಮನದಲ್ಲಿ ಬಯಸುವೆ; ಭಾವದಲ್ಲಿ ಬೆಱಸುವೆ.
ಮನಹಿಂಗೆ ಪ್ರಾಣನಾಥನಾಗಿ ಮಹಾಲಿಂಗಗಜೇಶ್ವರದೇವ
ಮುನಿಸಿಂಗೆ ಮನಸ ತರಲೀಸನವ್ವಾ.

೮೬

ಮಾಗಿಯ ಹುಲ್ಲಿನ ಸೋಂಕಿನಂತೆ
ತನು ಪುಳಕಿತಳಾದಳವ್ವೆ.
ನುಡಿ ತೊದಲು ಆತನ ಒಲವೆ ಆಧಾರವಾಗಿದ್ದಳವ್ವೆ.
ಬಿಳಿಯ ತುಂತಿ ಕುಂಕುಮ ರಸದಲ್ಲಿ ಬಂಡುಂಡಂತೆ
ಮಹಾಲಿಂಗ ಗಜೇಶ್ವರನಲ್ಲಿ ತನ್ನತಾನೆ ರತಿಯಾಗಿದ್ದಳವ್ವೆ.

೮೭

ಆತನ ನೋಡಿದಂದು ದೆಸೆಗಳಮಱೆದೆನಿನ್ನೆಂತವ್ವ ?
ಅವ್ವ ಅವ್ವ ಆತನನುಡಿಸಿದಡೆ ಮೈಯೆಲ್ಲಾ ಬೆವರವಿನ್ನೆಂತವ್ವಾ ?
ಅವ್ವ ಅವ್ವ ಕಯ್ಯ ಹಿಡಿದಡೆ ಎನ್ನ ನಿಱೆಗಳು ಸಡಲಿದವಿನ್ನೆಂತವ್ವಾ !
ಇಂದೆಮ್ಮ ಮಹಾಲಿಂಗ ಗಜೇಶ್ವರನಪ್ಪದನೆಂದಡೆ
ನಾನಪ್ಪಂ ಮಱೆದೆನಿನ್ನೆಂತವ್ವಾ.

೮೮

ತಮ್ಮ ತಮ್ಮ ಗಂಡರು ಚೆಲುವರೆಂದು ನೋಡಿ
ಕೊಂಡಾಡುವ ಹೆಣ್ಣುಗಳು ಪುಣ್ಯಜೀವಿಗಳವ್ವಾ ನಾ
ನಮ್ಮನಲ್ಲನೆಂತಹವನೆಂದಱಿಯೆನವ್ವಾ
ಮಹಾಲಿಂಗ ಗಜೇಶ್ವರದೇವನು ನಿಱಿಯಸೆಱಗ ಸಡಲಿಸಲೊಡನೆ
ಆನೇನೆಂದಱಿಯೆನವ್ವಾ.

೮೯

ಉದರ ತಾಗಿದ ಮಾತು ಅಧರ ತಾಗಿದಲ್ಲಿ
ಬೀಸರವಾದೀತೆಂದು ಅಧರವ ಮುಚ್ಚಿಕೊಂಡರವ್ವೆ
ಕಂಗಳ ಕೊನೆ ಬೀಶರವಾದೀತೆಂದು ಕಂಗಳು ಮುಚ್ಚಿಕೊಂಡಳವ್ವೆ.
ಪರಿಮಳ ಬೀಸರವಾದೀತೆಂದು
ಆರಿಗೆ ಬುದ್ಧಿಯ ಹೇಳಿದಳವ್ವೆ.
ಮನ ಬೀಸರವಾದೀತೆಂದು ದಿನಕರನ ಕಾವಲ ಕೊಟ್ಟಳವ್ವೆ.
ಇಂದು ನಮ್ಮ ಮಹಾಲಿಂಗಗಜೇಶ್ವರನ ನೆಱೆವ ಭರದಿಂದಾ

೯೦

ಹೊನ್ನ ಕೊಡವ ಹೆಮ್ಮಿನ ಹಮ್ಮಿನ ಕಳೆಯ ಪುಳುಕದಲ್ಲಿ
ತಾರಕಿ ತಾರಕಿ ತಳಿತಂತೆ, ಅಂಗಸಂಗದಲ್ಲಿದ್ದಳವ್ವೆ.
ಬಂದ ಭರವಿನ ನಿಂದ ಛಂದದ ಪೊಸ ಪೊವ್ವ ಮುಡಿದಳವ್ವೆ.
ಅಡವಿಯಲಾದ ಮರನ ಅಡಿಯಲಿಂದ
ಬಿಸಿಲ ಬಯಸಿದಳವ್ವೆ.
ಇಂದು ಮಹಾಲಿಂಗ ಗಜೇಶ್ವರನ ನೆಱೆವ ಭರದಲ್ಲಿ
ಆಕಳಕ್ಕೆ ಬಂದ ಮೃಗದಂತೆ ತನ್ನ ತಾ ಮಱೆದಿರ್ದಳವ್ವೆ.

೯೧

ಮುನಿಸು ಮುನಿದಡೆ ಶ್ರೀಗಂಧದ ಮುರಡಿನ ಹಾಂಗಿರಬೇಕವ್ವಾ.
ತೆಗೆದಪ್ಪಿದಡೆ ಚಂದನ ಶ್ರೀತಾಳದ ಹಾಂಗಾಗಬೇಕವ್ವಾ
ಹೋಗುವಲ್ಲಿ ಮೈಯಿದ್ದೆ ಕೈಯಾಗಿ ಹೆಣಗುತ್ತಿರಬೇಕವ್ವಾ
ಮಹಾಲಿಂಗ ಗಜೇಶ್ವರನ ನೆಱೆವ ಭರದಿಂದ ನೊಂದಕಂದ ಮೇಲೆ
ಬಿದ್ದ ಹಾಂಗಿರಬೇಕವ್ವಾ.

೯೨

ಹಗಲು ಮನಸಿಂಗಂಜಿ ಇರುಳು ಕನಸಿಂಗಂಜಿ
ಧ್ಯಾನಮೌನಿಯಾಗಿರ್ದಳವ್ವೆ.
ಸಖಿಬಂದು ಬೆಸಗೊಂಡಡೆ  ನೊಂದು ಹೇಳುವಳವ್ವೆ
ಏನೆಂದು ನುಡಿವಳವ್ವೆ.
ಸಾಕಾರದಲ್ಲಿ ಸವೆದು, ನಿರಾಕಾರದಲ್ಲರ್ಪಿಸಿದರೆ
ಮಹಾಲಿಂಗ ಗಜೇಶ್ವರನುಮೇಶ್ವರನಾಗಿರ್ದನವ್ವೆ|

೯೩

ಪದುಮ ಪಂಜಳ ವರ್ಣ ನೈದಲೆಯಾಗಿರ್ದಳವ್ವೆ
ತುಂಬಿ ಮುತ್ತನುಗುಳದಂತೆ
ಕಂಗಳು ಕಂಕಣವಾಗಿ ಚಂದ್ರಬಿಂಬವಾಗಹದಂತೆ
ಅವಗವಿಸಿಕೊಂಡಿರ್ದ ಬಂಗರಕ್ಕೆಱಗಿದ ರತ್ನದಂತೆ
ಆನಂದೆ ಗ್ರಾಹಿಯಾಗಿದ್ದೆನವ್ವಾ
ಅಖಂಡಿತವಾಗಿ ಮಹಾಲಿಂಗ ಗಜೇಶ್ವರನ ಅನುಭವಕ್ಕೆ ಸುಖಿಯಾಗಿ.

೯೪

ಎವೆ ಎವೆ ಹಳಚದೆ ಮೊಲೆಯ ಮೇಲಣ ಘಾಯ
ಬಿಳಿಯ ರತ್ನದ ಧಾರೆ ಸುರಿದಲ್ಲಿ ಸಸಿವಸರೆ ಬಸವಂತವೆಸೆದವವ್ವಾ.
ಅಪ್ಪಿನ ಸೋಂಕಿನ ಸುಖ ಅಚ್ಚುಗವಳಿದುಳಿದಡೆ,
ಮಹಾಲಿಂಗ ಗಜೇಶ್ವರದೇವಾ ನಿರಾಸನಾಗಿರ್ದನವ್ವಾ.

೯೫

ಇಂದುವಿನಲ್ಲಿ ಉದಯವಾದ ಕಲ್ಲಿನಂತೆ ಮುನಿಸು ಮಱೆದಿರ್ದಳವ್ವೆ.
ಅವನ ಸೋಕಿನಲ್ಲಿ ಸುಖಿಯಾದಳು   ಅಗಲಿದಡೆ ಕರಿಗೊಂಡಳು.
ಮಹಾಲಿಂಗ ಗಜೇಶ್ವರದೇವರಲ್ಲಿ ಮನಸೋಂಕಿ ಮನಲೀಯವಾದಳವ್ವೆ.

೯೬

ಆತನ ಬೆಱಸಿದ ಕೂಟವನೇನೆಂದು ಹೇಳುವೆನವ್ವಾ.
ಕೇಳಲು ಬಾರದು ಹೇಳಲು ಬಾರದು. ಏನು ಹೇಳುವೆನವ್ವಾ.
ಶಿಖಿಕರ್ಪುರ ಬೆಱಸಿದಂತೆ ಮಹಾಲಿಂಗ ಗಜೇಶ್ವರನ ಕೂಡಿದ ಕೂಟವ ಹೇಳಬಾರದು.                     

೯೭

ಎನ್ನಂತರಂಗದ ಆತ್ಮನೊಳಗೆ ಅಂಗವಿಲ್ಲದ ಅನಾಮಯನ ನೋಡಿ ಕಂಡೆನಯ್ಯ
ಆ ಪುರುಷನ ಮುಟ್ಟಿ ಹಿಡಿದು ದರ್ಶನ ಸ್ಪರ್ಶನವ ಮಾಡಿ ಕೂಡಿ ನೆರೆದೆನೆಂದಡೆ
ಚಿತ್ತಮನಕ್ಕೆ ಅಗೋಚರವನಾಗಿಪ್ಪನಯ್ಯಾ !
ಈ ಪುರುಷನ ಚಾರಿತ್ರ ವಿಪರೀತ ವಿಸ್ಮಯವಾಗಿದೆ ನೋಡಾ.
ಆತನ ರೂಪು ಲಾವಣ್ಯ ಯುಕ್ತಿ ವಿಧಾನವ ಏನನುಪಮಿಸುವೆನಯ್ಯ ?
ಉಪಮಾತೀತ ಅವಿರಳಾತ್ಮಕ ಚಿದ್ರೂಪ ಕಾಣಿರೊ !
ಕೆಂಜೆಡೆಯ ಭಾಳನೇತ್ರ ರಂಜಿಪ ರವಿಕೋಟಿ ತೇಜದಿಂದುರವಣಿಸುತಿದ್ದಾನೆ.
ಕಂಜ ಪದಯುಗಳೊಳು ಹೊಳೆವುತ್ತಿದ್ದಾನೆ ನಂಜುಗೊರಳಭವ ಕಾಣಿಭೋ !
ಭವರೋಗ ವೈದ್ಯ ಭವಹರ ಎನ್ನ ತಂದೆ, ಮಹಾಲಿಂಗಗುರು ಶಿವಶಿದ್ಧೇಶ್ವರ ಪ್ರಭುವೆ.
ಎನ್ನ ಹೃದಯದಲ್ಲಿ ಕಂಡು, ಮನೋಭಾವದಲ್ಲಿ ಆರಾಧಿಸುತ್ತಿರ್ದೆನಯ್ಯ.

೯೮

ಗಂಡಿಂಗೆ ಹೆಣ್ಣಲ್ಲದೆ, ಹೆಣ್ಣಿಂಗೆ ಹೆಣ್ಣುಂಟೆ ಲೋಕದೊಳಗೆ ?
ಈ ಅಱೆಮರುಳ ಶಿವನ ನಾನೇನೆಂಬೆನಯ್ಯಾ !
ಅಪಮಾನವನನ್ಯರಿಗೆ ಕೊಡುವ ದೇವನ ಈ ಮರುಳುತನವ ನೋಡಾ.
ಅದೇನು ಕಾರಣವೆಂದಡೆ:
ಪತಿರ್ಲಿಂಗ ಸತೀಚಾಹಮಿತಿಯುಕ್ತಂ ಸದಾ ತಥಾ |
ಪಂಚೇಂದ್ರಿಯಸುಖಂ ನಾಸ್ತಿ ಶರಣಸ್ಥಲಮುತ್ತಮಂ || ಎಂಬುದಾಗಿ
ಮುಕ್ಕಣ್ಣಂಗೆ ನಾ ಹೆಣ್ಣಾದ ಕಾರಣ, ಎನ್ನ ಕರಣೋಪಕರಣಂಗಳೆಲ್ಲವು
ಲಿಂಗೋಪಕರಣಂಗಳಾಗಿ ನಿಮ್ಮ ಚರಣವೆ ಹರಣವಾಗಿರ್ದೆನಯ್ಯಾ
ಮಹಾಲಿಂಗ ಗುರುಶಿವಸಿದ್ಧೇಶ್ವರ ಪ್ರಭುವೆ.

೯೯

|| ತ್ರಿವಿಧಿ ||

ತನುಮನದ ಮಂಟಪದ ನಡುವಿಪ್ಪ ಗಂಡನೆ
ಮಲತ್ರಯದನುವನು ಕೆಡಿಸು ಎನ್ನ
ಘತಪದ ಶಲೆ ಬಿಗಿದು ನೀನಿಪ್ಪ ಅಂಗಳವ
ತೆಱಹುಮಾಡೈ ಗುರುವೆ ಯೋಗಿನಾಥಾ.

೧೦೦

ಕಣ್ಗೆ ಮಂಗಳವಪ್ಪ ಅಂದುಗೆಯನೆ ತೋಡಿಸಿ
ಮುಂಗಯ್ಯ ಕಂಕಣವ ಶಿರದಲಿಕ್ಕಿ
ಕಂಗಳಿಗೆ ಮುದ್ರಿಕೆಯ ಉಂಗುರವೆನೆ ತೊಡಿಸಿ
ಹಿಂಗಡೆಯ ನೆಱೆದೆನೈ ಯೋಗಿನಾಥಾ.

೧೦೧

ದೇಹ ದೇವಾಲಯವು ಮೇಲೆ ರತ್ನದ ಕಲಶ
ಆಳು ಪರಿವಾರಕ್ಕೆ ಇಂಬುಗೊಡಡೆ
ಅರಮನೆಯ ಒಳಗೊಂದು ಎಸಳ ಮಂಟಪವಿಕ್ಕಿ
ಶಶಿಮುಖಿಯ ಸಂಗದೊಳಗಯ್ಯನಿರಲು.
ಸಂಗ ಕಂಗಳ ತೆಱೆದು ಸಂಗ ಮತ್ತೊಂದಾಗೆ
ಲಿಂಗ ನಿನ್ನಯ ರೂಪು ಯೋಗಿನಾಥಾ.