|| ವೃತ್ತ ||           

ಅಳದಿರು ಕಂದ ನಿನ್ನಭಿಮತೈಕಫಲೋದಯಸೌಖ್ಯಸಿದ್ಧಿಯಂ
ಸಲೆ ನಿನಗಿತ್ತೆನಂಜದಿರು ಚಿಂತಿಸದಿರ್ಮನಗುಂದದಿರ್ವೃಥಾ
ಕಳವಳವೇತಕಾನಿರಲು ಬೇಡ ಮನೋವ್ಯಥೆಯೆಂದು ನೇಹದಿಂ
ತಲೆದಡವುತ್ತ ನೋಡು ಪರಮಪ್ರಭುವೇ ಮಹದೈಪುರೀಶ್ವರಾ.   

|| ವಚನ ||

ಆಲಿಕಲ್ಲ ಹರಳಿನಂತೆ, ಅರಗಿನ ಪುತ್ಥಳಿಯಂತೆ,
ತನು ಕರಗಿ ನೆಱೆವ ಸುಖವ ನಾನೇನೆಂಬೆ !
ಕಡೆಗೋಡಿ ಹರಿದವಯ್ಯ,
ನಯನದ ಅಶ್ರು ಜಲಂಗಳು
ನಮ್ಮ ಕೂಡಲಸಂಗಮದೇವರ ಮನಮುಟ್ಟಿ ನೆಱೆವ ಸುಖವ
ನಾನಾರಿಗೆ ಉಸುರುವೆನು !

ಬಸವ ಬಲಗೂಡಿತೆ ?
ಸಂಗಯ್ಯ ಮದವಳಿಗ, ನಾನು ಮದವಳಿಗೆ,
ವಸುಧೆಯ ಭಕ್ತರೆಲ್ಲರು ನಿಬ್ಬಣಿಗರು;  ಶುದ್ಧಶಿವಾಚಾರವೆಂಬ
ಮನೆಯಲ್ಲಿ ಮದುವೆಯಾಯಿತ್ತಾಗಿ,
ಕೂಡಲಚನ್ನಸಂಗಯ್ಯನೊಬ್ಬನೆ ಅಚರ,
ನಾನು ನಿತ್ಯ ಮುತ್ತೈದೆ !

ಅವಿರಳ ವಿಟನ ಮದುವಿಗೆ ನಿಬ್ಬಣಗಿತ್ತಿಯರೆಲ್ಲ ಬಂದು,
ಕೆಂಡದ ದಂಡಿಯನೆ ಮುಡಿದು, ಅಂಗಜನೆಂಬ ಅರಿಸಿಣವ ಮಿಂದು,
ಉರಿಯೆಂಬ ಹಚ್ಚಡದ ಹೊದಕೆಯಲ್ಲಿ,
ನಿಬ್ಬಣಗಿತ್ತಿಯರು ಬಪ್ಪ ಭರವ ಕಂಡು.
ನೀರಲಡಿಗೆಯ ಮಾಡಿ, ವಾಯದ ಕೂಸಿಂಗೆ ಮಾಯದ ಮದವಣಿಗ,
ಸಂಗ ಸಂಯೋಗವಿಲ್ಲದೆ ಬಸುಱೌಯಿತ್ತು.
ಕುಸಿದ್ದು ಕುಣಿದಾಡಿ ಸೂಲಗಿತ್ತಿಯನವಗ್ರಹಿಸಿತ್ತು
ಗುಹೇಶ್ವರ, ಒಬ್ಬನಿಬ್ಬ ಮೂವಱು ತ್ರೀದೇವತೆಗಳು ಬಲ್ಲರೆ
ಆ ಲಿಂಗದ ಘನವನು ?

ಎನ್ನ ಮನದ ಕೊನೆಯ ಮೊನೆಯ ಮೇಲೆ
ಅಂಗವಿಲ್ಲದ ರೂಪ ಕಂಡು, ಆನು ಮರುಳಾದೆನವ್ವ.
ಆನು ಕಂಡು ಆನು ಬೆಱಗಾದೆನವ್ವ,   ಎನ್ನಂತರಂಗದ
ಆತುಮನೊಳಗೆ ಅನುಮಿಷ ನಿಕೈಕ್ಯ ಗುಹೇಶ್ವರನ ಕಂಡು.

ಕೂಡಲಿಲ್ಲದೆ ಅಗಲಲಿಲ್ಲದ ಘನವ ಕೂಡುವ ಪಱೆ ಎಂತಪ್ಪ ?
ಹೇಳಿದರೆ ಅದಕ್ಕದೇ ಕೊಱತೆ.
ಗುಹೇಶ್ವರ ಲಿಂಗವ ಬೇಱು ಮಾಡಿ ಬೆಱಸಬಾರದು
ಕೇಳಾ ಕೆಳದಿ.

ಇಂದು ಸಾವ ಹೆಂಡತಿಗೆ ನಾಳೆ ಸಾವ ಗಂಡನವ್ವ !
ಘಳಿಗ್ಗೆ ಮಗು ಹುಟ್ಟಿ, ಕೈಗೆ ಬಾಯಿಗೆ ಬಂದಿತವ್ವ !
ಅಱುಹು ಕುಱುಹು ಮಱಹ ನುಂಗಿತ್ತು,
ಗುಹೇಶ್ವರನುಳಿದನವ್ವ !

ಎಸೆಯದಿರು; ಕಾಮ, ನಿನ್ನ ಬಾಣ ಹುಸಿಯಬೇಕೊ !
ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ
ಇದು ಸಾಲದೋ ನಿನಗೆ ?  ಗುಹೇಶ್ವರಲಿಂಗದ ವಿರಹದಲ್ಲಿ ಬೆಂದವರ
ಮರಳಿ ಸುಡಲುಂಟೆ, ಮರುಸು ಕಾಮಾ ?

ಸೆಱಗ ಹಿಡಿದನು, ಸೀರೆಯ ಹಱಿದನು !
ಹುಟ್ಟಿ ಮುಱಿದನು, ಕಂದಲನೊಡೆದನು !
ಭಂಡನವ್ವ; ಲಜ್ಜೆ ಭಂಡನವ್ವ;
ಕಂಡಡೆ ನುಡಿಸದಿರೆಲೆ ಮಾಯಾದೇವಿ,
ಆಯುಷ್ಯ ಹಿರಿದು, ಭವಿಷ್ಯೆ ಕಿಱಿದು,
ಭವಗೆಟ್ಟು ಹೋಡ ಗುಹೇಶ್ವರಲ್ಲಯ್ಯಂಗೆ ಮೂಗಿಲ್ಲ ತಂಗಿ !

ಉರಿಯ ಸೆಱಗನುಟ್ಟು ಕಡೆ ಸೆಱಗ ಬಿಡಿಸಿ,
ಮಡದಿ ತನ್ನ ಕಳದಿಯರೊಡಗೂಡಿ,
ಪತಿ ಬಂದು ಮುಡಿ ಹಿಡಿದು ಉಟ್ತ ಸೀರೆಯನು ಸುಲಿದ !
ಕೂಡಲಚನ್ನಸಂಗಯ್ಯನಲ್ಲಿ ಎನ್ನ ಪರಮಗುರು
ಬಸವಣ್ಣಂಗೆ ನಮೋ ನಮೋ ಎನುತಿರ್ದೆನು.

೧೦

ಒಲಿವ ಗಂಡನೊಮ್ಮೆ ಒಲ್ಲದಿಪ್ಪ ಕಂಡವ್ವ !
ತಪ್ಪೆನ್ನದು, ತಪ್ಪೆನ್ನದು;
ತನು ಮನ ಧನದಲ್ಲಿ ಮಾಟಕೂಟ ವೆಂದಱಿಯದ
ತಪ್ಪೆನ್ನದು ತಪ್ಪೆನ್ನದು;
ಕಡೆಯಿಲ್ಲದ ಹುಸಿ ಎನ್ನದು.
ಕೂಡಲಸಂಗಮದೇವ.

೧೧

ಕಣ್ಣ ಕೋಪಕ್ಕೆ ಮುಂದನಱಿಯದೆ ನುಡಿದು
ಮನಬಿಚ್ಚಿ ಮರುಳಾದೆ ನೋಡವ್ವಾ !
ಕೇಳವ್ವ ಕೆಳದಿ, ಸಖಿಯರಿಲ್ಲದೆ ಸುಖವ ಬಯಸುವರುಂಟೆ ಹೇಳಾ !
ಎನ್ನ ಮುನಿಸು ಎನ್ನಲ್ಲಿಯೆ ಅಡಗಿತ್ತು.
ಇನ್ನು ಬಾರಯ್ಯ ಕೂಡಲಸಂಗಮದೇವ !

೧೨

ಗಿಳಿಯ ಹಂಜರವಿಕ್ಕಿ, ಸೊಡರಿಂಗೆಣ್ಣೆಯನೆಱೆದು,
ಬತ್ತಿಯನಿಕ್ಕಿ, ಬರವ ಹಾರುತ್ತಿರ್ದೆನೆಲೆಗವ್ವಾ.
ತಱಗೆಲೆ ಗಿಱುಕೆಂದಡೆ ಹೊಱಗನಾಲಿಸುವೆ;
ಅಗಕುದನೆಂದೆನ್ನ ಮನ ಧಿಗಿಲೆಂದಿತ್ತೆಲಗವ್ವಾ !
ಕೂಡಲಸಂಗನ ಶರಣರು ಬಂದು, ಬಾಗಿಲಮುಂದೆ ನಿಂದು,
ಶಿವಾ ಎಂದಡೆ ಸಂತೋಷಬಟ್ಟೆನೆಲೆಗವ್ವಾ !

೧೩

ಮನಕ್ಕೆ ಮನೋಹರವಲ್ಲದ ಗಂಡರು
ಮನಕ್ಕೆಬಾರರು ಕೇಳವ್ವಾ ಕೆಳದಿ,
ಪನ್ನಗಭೂಷಣನಲ್ಲದ ಗಂಡರು
ಇನ್ನೆನಗಾಗದ ವೊಱೆ, ಕಂಡವ್ವಾ;
ಕನ್ನೆಯಂದಿನ ಕೂಟ ಚಿಕ್ಕಂದಿನ ಬಾಳುವೆ,
ನಿಮ್ಮಾಣೆಯಯ್ಯಾ, ಕೂಡಲಸಂಗಮದೇವಾ.

೧೪

ಅಳಿಯನ ಕಂಡಡೆ ನಾಚೆಂಬೆ ಮಗಳೆ;
ಅಳಿಯನ ಕಂಡಡೆ ತೊಲಗೆಂಬೆ ಮಗಳೆ
ನಾಚುವಡೆ ಮೋಱೆಇಲ್ಲ; ತೊಲಗುವಡೆ ನಲನಿಲ್ಲ;
ಇಬ್ಬರಿಗೊಬ್ಬ ಗಂಡನಾದಬಳಿಕ ಇನ್ನೆಲ್ಲಿಯ ಮೋಱೆ ಮಗಳೆ,
ಕೂಡಲಸಂಗಮದೇವನೆಂಬ ಗಂಡನಾದ ಬಳಿಕ
ಇನ್ನೆಲ್ಲಿಯ ಮೋಱೆ ಮಗಳೆ

೧೫

ಮನೆಯ ಗಂಡನ ಮನೆವಾರ್ತೆಯನೇನ ಹೇಳುವೆನವ್ವಾ !
ಅಂಗವಿದ್ಯೆಯನೊಲ್ಲ;
ಕಂಗಳೊಳಗಣ ಕಸವ ಕಳೆದಲ್ಲದೆ ನೋಡಲೀಯ;
ಕೈದೊಳೆದಲ್ಲದೆ  ಮುಟ್ಟಲೀಯ;
ಕಾಲು ತೊಳೆದಲ್ಲದೆ ಹೊದ್ದಲೀಯ;
ಇಂತು ಸರ್ವಾಂಗ ತಲೆದೊಳೆದ ಕಾರಣ
ಕೂಡಲಸಂಗಮದೇವನೆನ್ನ ಕೂಡಿಕೊಂಡನವ್ವಾ !

೧೬

ಎಲ್ಲರ ಗಂಡರು ಪರಿಯಂತಲ್ಲ ನೋಡೆಲಗವ್ವ.
ನಮ್ಮ ನಲ್ಲ ಸುಳಿಯಲಿಲ್ಲ, ಸುಳಿದು ಸಿಂಗಾರವ ಮಾಡಲಿಲ್ಲ.
ಕೂಡಲಸಂಗಮದೇವ, ತನ್ನಲ್ಲೆನ್ನ ಬೈಚಿಟ್ಟನಾಗಿ.

೧೭

ಎನ್ನ ಗಂಡ ಬರಬೇಕೆಂದು ಎನ್ನಂತರಂಗವೆಂಬ ಮನೆಯ
ತೆಱಹು ಮಾಡಿ,
ಅಷ್ಟದಳ ಕಮಲವೆಂಬ ಓವರಿಯೊಳಗೆ
ನಿಜನಿವಾಸವೆಂಬ ಹಾಸಿಗೆಯ ಹಾಸಿ,
ಧ್ಯಾನ ಮೌನವೆಂಬ ಮೇಲುಕಟ್ಟುಕಟ್ಟಿ,
ಜ್ಞಾನವೆಂಬ ದೀಪದ ಬೆಳಗಿ,
ನಿಷ್ಕ್ರಿಯೆಗಳೆಂಬ ಉಪಕರಣಂಗಳಂ ಹರಹಿಕೊಂಡು,
ಪಶ್ಚಿಮ ದ್ವಾರವೆಂಬ ಬಾಗಿಲ ತೆಗೆದು,
ಕಂಗಳೆ ಪ್ರಾಣವಾಗಿ ಹಾರುತ್ತಿರ್ದೆನಯ್ಯ.
ನಾನು ಬಾರನೆಂದುಮ್ಮಳಿಸಿಹೆನೆಂದು
ತಾನೆ ಬಂದು ಎನ್ನ ಹೃದಯ ಸಿಂಹಾಸನದ ಮೇಲೆ ಮೂರ್ತಿಗೊಂಡಡೆ,
ಎನ್ನ ಮನದ ಬಯಕೆ ಸಯವಾಯಿತ್ತು.
ಹಿಂದೆ ಹನ್ನೆರಡು ವರುಷದಲ್ಲಿ ಚಿಂತೆ  ಇಂದು ನಿಶ್ಚಿಂತವಾಯಿತ್ತು.
ಕೂಡಲಸಂಗಮದೇವ ಕೃಪಾಮೂರ್ತಿಯಾದ ಕಾರಣ ನಾನು ಬದುಕಿದೆನು.

೧೮

ಎಮ್ಮ ನಲ್ಲ ಎಮ್ಮ ಮನೆಯೊಳಗೇಕಾಂತಂಬೊಕ್ಕಹನು;
ಬೇಗ ಬೇಗ ಹೊಱಹೊಂಡಿರಣ್ಣಗಳಿರಾ,
ನೀವಿದ್ದಡೆ ಮೃತ್ಯು ಬಪ್ಪುದು.
ಆತ ಮನೆಯೊಳಗೊಬ್ಬರಿದ್ದಡು ಸೈರಿಸ,
ಕಪಿಲಸಿದ್ಧಮಲ್ಲಿಕಾರ್ಜುನಯ್ಯನು.

೧೯

ಮನವೆಂಬ ಮಂಟಪದ ನೆಳಲಲ್ಲಿ
ನೆನಹೆಂಬ ಜ್ಞಾನಜ್ಯೋತಿಯ ಬೆಳಗಿ,
ಆ ಘನ ಪುರುಷ ಪವಡಿಸಿಯೈದಾನೆ, ಎಲೆ ಅವ್ವಾ !
ಅದನೊಂದೆರಡೆನ್ನದೆ ಮೂಱು ಬಾಗಿಲ ಮುಚ್ಚಿ,
ನಾಲ್ಕು ಮುಟ್ಟದೆ, ಐದ ತಟ್ಟದೆ, ಇದುಕಂಡಾ ಎಲೆಯವ್ವಾ !
ಐದೇಳೆಂಟೆಂಬ ವಿಹಂಗ ಸಂಕುಳದ ಉಲುಹು ಪ್ರಬಲವಾದಡೆ,
ಕಪಿಲಸಿದ್ಧಮಲ್ಲಿಕಾರ್ಜುನ ನಿದ್ರೆಗೆಟ್ಟಲ್ಲಿರನು.

೨೦

ಕೇಳವ್ವ ಕೇಳವ್ವ ಕೆಳದಿ ಹೇಳುವೆ ನಿನಗೆ,
ಅಹಾ ಕಂಗಳಲ್ಲಿ ಕಾಬೆ, ಮತ್ತೆ ಕಾಣೆ;
ಮನದಲ್ಲಿ ಹಿಡಿವೆ, ಹಿಡಿದು ಮತ್ತೆ ಕಾಣೆನವ್ವ;
ಮಿಂಚಿನ ರವೆಯಂತೆ ತೋಱುವನಡಗುವ ನಮ್ಮ ನಲ್ಲನು,
ಕಪಿಲಸಿದ್ಧಮಲ್ಲಿಕಾರ್ಜುನದೇವನು.

೨೧

ಕೇಳವ್ವ ಕೆಳದಿ ಹೋಗುವೆನೆಲಗವ್ವಾ !
ನೋಡವ್ವಾ ಕೆಳದಿ, ಅವನಿಪ್ಪ ಠಾವಿನ ನೆಲೆಯನೆನಗೆ ತೋಱೆಲೆಗವ್ವಾ !
ಅವನಿಬ್ಬಟ್ಟಗಾಱನು, ಇಂತಿಡಲಿಪ್ಪನು,
ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಕಂಡೆನು ಬಾರಾ !

೨೨

ಎಲ್ಲರ ಪರಿಯಲ್ಲ ಎನ್ನ ಗಂಡನ ಪರಿ,
ಒಬ್ಬರು ಬಲ್ಲುದ ತಾನಱೆಯ,
ತಾ ಬಲ್ಲುದನೊಬ್ಬರಱಿಯರು;
ತವಕ ಬಂದಲ್ಲಿ ಕೂಡುವ,
ಅಲ್ಲಿದೊಡಲ್ಲದೆ ಹಾಂಗಿಪ್ಪ
ಕಪಿಲಸಿದ್ಧಮಲ್ಲಿಕಾರ್ಜುನ.

೨೩

ಕೈತಳ ಬಿಚ್ಚಿದಡೆ, ಮೈಗಳ ಹರಹಿದಡೆ, ನಿಮ್ಮ ಬೆನ್ನಬಿಡೆ
ತನುವಡದೆ, ಜ್ಞಾನ ತನುವಿಂದ ಕೂಡುವೆ,
ಕಪಿಲಸಿದ್ಧಮಲ್ಲಿನಾಥಯ್ಯ ನಿಮ್ಮ.

೨೪

ಎಲವೊ ಎಲವೊ ನಲ್ಲ ನಿಮ್ಮ ಕೂಡದ ಮುನ್ನ ಕಾಣೆ,
ಕೂಡಿದ ಬಳಿಕ ಮತ್ತೆ ಕಾಣೆನಯ್ಯ,
ಕೂಟದ ಸುಖದಿಂದ ನಾನೀನೆಂದಱೆಯೆ,
ಕಪಿಲಸಿದ್ಧಮಲ್ಲಿನಾಥಯ್ಯ.

೨೫

ಮನ ಮನ ತಾರ್ಕಣೆಯ ಕಂಡು ಅನುಭವಿಸಲು,
ನೆನಹೆ ಘನವಹುದಲ್ಲದೆ ಅದು ಹವಣಲ್ಲ ನಿಲುವುದೆ ?
ಎಲೆ ಅವ್ವ, ನೀನು ಮರುಳವ್ವೆ.
ಎನ್ನದೇವ ಚನ್ನಮಲ್ಲಿಕಾರ್ಜುನಗೊಲಿದು
ಸಲೆಮಾರುಹೋದೆನು;
ನಿನ್ನ ತಾಯಿತನವನೊಲ್ಲೆ ಹೋಗು.

೨೬

ಸಾವಿಲ್ಲದ ಕೇಡಿಲ್ಲದ ರೂಪಿಲ್ಲದ ಚಲುವನವ್ವ !
ಎಡೆಯಿಲ್ಲದ ತೆಱಹಿಲ್ಲದ ಕುಱುಹಿಲ್ಲದ
ಚಲುವಂಗಾನೊಲಿದೆ ಎಲೆಯವ್ವ !
ನೀನು ಕೇಳು ತಾಯೆ, ಭವವಿಲ್ಲದ ಭಯವಿಲ್ಲದ ನಿರ್ಭಯ ಚಲುವಂಗೆ,
ಕುಲಸೀಮೆಯಿಲ್ಲದ ನಿಸ್ಸೀಮ ಚಲುವಂಗೆ ನಾನೊಲಿದೆ.  ಇದು ಕಾರಣ,
ಚನ್ನಮಲ್ಲಿಕಾರ್ಜುನ ಚಲುವ ಗಂಡನೆನಗೆ,
ಈ ಸಾವ ಕೆಡುವ ಗಂಡನೊಯ್ದು ಒಲೆಯೊಳಗಿಕ್ಕು.

೨೭

ಹರನೆ, ನೀನೆನಗೆ ಗಂಡನಾಗಬೇಕೆಂದು
ಅನಂತಕಾಲ ತಪಸ್ಸಿದ್ದೆ ನೋಡಾ.
ಹಸೆಯಮೇಲಣ ಮಾತ ಬೆಸಗೊಳಲಟ್ಟಿದಡೆ
ಶಶಿಧರನ ಹತ್ತಿರ ಕಳುಹಿದರೆಮ್ಮವರು.
ಭಸ್ಮವನೆ ಹೂಸಿ ಕಂಕಣವನೆ ಕಟ್ಟಿದರು,
ಚನ್ನಮಲ್ಲಿಕಾರ್ಜುನ ತನಗೆ ನಾನಾಗಬೇಕೆಂದು.

೨೮

ಪಚ್ಚೆಯ ನೆಲಗಟ್ಟು, ಕನಕದ ತೋರಣ,
ವಜ್ರದ ಕಂಭ, ಹವಳದ ಚಪ್ಪರವನಿಕ್ಕಿ,
ಮುತ್ತು ಮಾಣಿಕದ ಮೇಲು ಕಟ್ಟು ಕಟ್ಟಿ
ಮದುವೆಯ ಮಾಡಿದರು ನಮ್ಮವರೆನ್ನ ಮದುವೆಯ ಮಾಡಿದರು.
ಕಂಕಣ ಕೈದಾರೆ ಸ್ಥಿರಸೇಸೆಯನಿಕ್ಕಿ
ಚನ್ನಮಲ್ಲಿಕಾರ್ಜುನನೆಂಬ ಗಂಡಗೆನ್ನ ಮದುವೆಯ ಮಾಡಿದರು.

೨೯

ಹುಟ್ಟಿದೆ ಶ್ರೀಗುರುವಿನ ಹಸ್ತದಲ್ಲಿ,
ಬೆಳೆದೆನು ಅಸಂಖ್ಯಾತರ ಕರುಣದೊಳಗೆ,
ಭಾವವೆಂಬ ಹಾಲು, ಸುಜ್ಞಾನವೆಂಬ ತುಪ್ಪ,
ಪರಮಾರ್ಥವೆಂಬ ಸಕ್ಕರೆಯನಿಕ್ಕಿದರು ನೋಡಾ !
ಇಂತಿಪ್ಪ ತ್ರಿವಿಧಾಮೃತವನು ದಣಿಯಲೆಱೆದು ಸಲಹಿದರೆನ್ನ
ವಿವಾಹವ ಮಾಡಿದಿರಿ, ಸಯವೆಂಬ ಗಂಡಂಗೆ ಕೊಟ್ಟಿರಿ.
ಕೊಟ್ಟ ಮನೆಗೆ ಕಳುಹಲೆಂದು ಅಸಂಖ್ಯಾತರೆಲ್ಲರೂ ನೆರೆದು ಬಂದಿರಿ.
ಬಸವಣ್ಣ ಮೆಚ್ಚಲು ಒಗತನವ ಮಾಡುವೆ.
ಚನ್ನಮಲ್ಲಿಕಾರ್ಜುನನ ಕೈವಿಡಿದು
ನಿಮ್ಮ ತಲೆಗೆ ಹೂವ ಒಗತನವ ಮಾಡುವೆ.
ಅವಧರಿಸಿ ನಿಮ್ಮಡಿಗಳೆಲ್ಲರೂ ಮರಳಿ ಬಿಜಯಂಗೈವುದು,
ಶರಣಾರ್ಥಿ !