೨೬

ಆದಿ ಶುದ್ಧ ಆಧಾರ ಉತ್ಪತ್ಯರೆಲ್ಲರು   ಅನಾದಿ ಲಿಂಗದ ಭೇದವನಱಿಯರಾಗಿ,
ನಾಸಾಪುಟದಾಶ್ರಯದಲ್ಲಿ ಲಿಂಗವನಱಿಯರಾಗಿ,
ಕೆಲಬರಿಗೆ ಲಿಂಗವಾದ, ಕೆಲಬರಿಗೆ ದೂಷಣೆಯ ಮಾಡಿ ಹೋದ, ಲಿಂಗವನಱಿಯರಾಗಿ;
ದೂಷಣೆ ಪತ್ಯವಾಗಿ ಮದದಾಶ್ರಯಕ್ಕೆ ತಂದಾತ
ರೇಕಣ್ಣಪ್ರಿಯನಾಗಿನಾಥ, ಬಸವಣ್ಣನಿಂದ ಬದುಕಿತ್ತು ಲೋಕವೆಲ್ಲ !     

೨೭      

ಲಿಂಗವು, ಸರ್ವಾಂಗದಲ್ಲಿ ಭರಿತವಾಗಿರಲು,
ಮನವಱಿಯದು, ತನು ಸೋಂಕದು;
ಜ್ಞಾನ ಕಾಣಿಸದು, ಭಾವ ಮುಟ್ಟದು,
ಶಿವಶಿವಾ ವಿಶ್ವಾಸದಿಂದ ಗ್ರುಹಿಸಿ ಹಿಡಿಯದು;
ಶಿವಶಿವಾ ಕೆಟ್ಟೆ ! ಕೆಟ್ಟೆ !
ಅಂತರಂಗ ಬಹಿರಂಗ ಭರಿತವಾಗಿ ಲಿಂಗವಿದ್ದಾನೆ.
ಮನ ವಿಶ್ವಾಸದಿಂಗ ಗ್ರಹಿಸಿದಡೆ ಸತ್ಯನೆಪ್ಪೆಮ್ ನಿತ್ಯನಪ್ಪೆ, ಮುಕ್ತನಪ್ಪೆ;
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

೨೮

ಹೊನ್ನ ಬಿಟ್ಟು ಲಿಂಗವನುತಿಸಬೇಕೆಂಬರು,
ಹೊನ್ನಿಗೆಯು ಲಿಂಗಕ್ಕೆಯು ವಿರುದ್ಧವೆ ?
ಹೆಣ್ಣು ಬಿಟ್ಟು ಲಿಂಗವನೊಲಿಸಬೇಕೆಂಬರು,
ಹೆಣ್ಣಿಗೆಉಯೂ ಲಿಂಗಕ್ಕೆಯು ವಿರುದ್ಧವೆ ?
ಮಣ್ಣ ಬಿಟ್ಟು ಲಿಂಗವನೊಲಿಸಬೇಕೆಂಬರು,
ಮಣ್ಣಿಗೆಯೂ ಲಿಂಗಕ್ಕೆಯೂ ವಿರುದ್ಧವೆ ?
ಅಂಗವ ಬಿಟ್ಟು ಲಿಂಗವನೊಲಿಸಬೇಕೆಂಬರು,
ಅಂಗಕ್ಕೂ ಲಿಂಗಕ್ಕೂ ವಿರುದ್ಧವೆ ?
ಇಂದ್ರಿಯಂಗಳ ಬಂಧಿಸಿ ಲಿಂಗವನೊಲಿಸಬೇಕೆಂಬರು,
ಇಂದ್ರಿಯಂಗಳಿಗೂ ಲಿಂಗಕ್ಕೆಯೂ ವಿರುದ್ಧವೆ ? ಜಗಬಿಟ್ಟು ಲಿಂಗವನೊಲ್ಲಿಸಬೇಕೆಂಬರು
ಆ ಜಗಕ್ಕು ಲಿಂಗಕ್ಕು ವಿರುದ್ಧವೆ ?
ಇದು ಕಾರಣ ಪರಂಜ್ಯೋತಿ, ಪರಮ ಕರುಣಿ, ಪರಮಶಾಂತನೆಂಬ ಲಿಂಗವು
ಕೋಪದ ಮುನಿಸುಳ್ಳುದೆ ? ಅಱಿದಡೆ ಕಾಣಬಹುದು, ಮಱೆದಡೆ ಕಾಣಬಾರದು.
ಅಱುಹಿಂದ ಕಂಡೊದಗಿದ ಸುಖವು   ಮಸಣಯ್ಯಪ್ರಿಯ ಗಜೇಶ್ವರಾ.

೨೯

ನಾನಾ ಪ್ರಯತ್ನದಿಂದ ಹೊನ್ನನರ್ಜಿಸುವಂತೆ  ನಾನಾ
ಪ್ರಯತ್ನದಿಂದ ಹೊನ್ನ ಸುರಕ್ಷಿತವ ಮಾಡುವಂತೆ.
ನಾನಾ ಪ್ರಯತ್ನದಿಂದ ಬೇಡಿದವರಿಗೆ ಕೊಡದೆ ಲೋಭವ ಮಾಡಿ ಸ್ನೇಹಿಸುವಂತೆ,
ನಾನಾ ವಿಧದಿಂದ ವಿಚಾರಿಸಲು ಪ್ರಾಣವೆ ಹೊನ್ನೆಂಬಂತೆ.
ನಾನಾ ಪರಿಯಲು ಮನ ಬುದ್ಧಿ ಚಿತ್ತಹಂಕಾರಂಗಳು,
ಪಂಚೇಂದ್ರಿಯಂಗಳು, ಪ್ರಾಣನು ಅವಗ್ರಹಿಸಿಕೊಂಡಿಪ್ಪಂತೆ,
ಬಹಿರಂಗದ ಹೊನ್ನನೆ ಅವಗ್ರಹಿಸಿಕೊಂಡಿಪ್ಪಂತ್,
ಶಿವಲಿಂಗವನು ಅವಗ್ರಹಿಸಿಕೊಂಡಿರಬೇಕು.
ಯಾಕೆ ? ಆ ಹೊನ್ನ ಶಿವನಾದ ಕಾರಣ
ಓಂ ನಮೋ ಹಿರಣ್ಯಬಾಹವೇ, ಹಿರಣ್ಯವರ್ಣಾಯ
ಹಿರಣ್ಯರೂಪಾಯ ಹಿರಣ್ಯಪರಾಯ ನಮಃ !
ಎಂಬುದಾಗಿ ಶಿವನೇ ಹೊನ್ನ ಕಾಣಿರೊ !
ಶಿವಶಿವಾ ನಾನಾಪ್ರಯತ್ನದಿಂದ ಕುಲವುಳ್ಳರೂಪುಳ್ಳ ಗುಣವುಳ್ಳ
ಅತ್ಯಂತಯವ್ವನೆಯಪ್ಪ ಹೆಣ್ಣಿಂಗೆ ಪ್ರಾಣಕೆ ಪ್ರಾಣವಪ್ಪಂತೆ,
ಆ ಹೆಣ್ಣಿಗೆ ಅಂತಃಕರಣ ಚತುಷ್ಟಯಂಗಳು ಸ್ನೇಹಿಸುವಂತೆ,
ಆ ಹೆಣ್ಣು ಪ್ರಾಣವಾಗಿಪ್ಪಂತೆ, ಆ ಲಿಂಗವೆ ಪ್ರಾಣವಾಗಿರಬೇಕು.
ಅದಕೆ ಹೆಣ್ಣೆ ಶಿವನಾದ ಕಾರಣ
ಶಕ್ತ್ಯಧಾರೋ ಮಹದೇವಃ ಶಕ್ತಿರೂಪಾತ್ಮನೇ ನಮಃ
ಶಕ್ತಿಃಕರ್ಮ ಚ ಕರ್ತಾ ಚ ಮುಕ್ತಿಶಕ್ತ್ಯೈನಮೋನಮಃ
ಆ ಹೆಣ್ಣು ತಾನೇ ಶಿವನು ಕಾಣಿರೋ !
ನಾನಾ ಪ್ರಯತ್ನದಿಂದ ಮಣ್ಣನರ್ಚಿಸುವಂತೆಸ ಭೂಮಿಯ
ಆಗುಚೇಗಿಗೆ ಅರ್ಥ ಪ್ರಾಣಾಭಿಮಾನವನಿಕ್ಕಿ,
ಆ ಭೂಮಿಯ ರಕ್ಷಿಸಿ, ಆ ಭೂಮಿಯನೆ ಸರ್ವಭೋಗೋಪ ಭೋಗಂಗಳನು
ಭೋಗಿಸಿ ಸುಖಿಸುವಂತೆ, ಶಿವಲಿಂಗದಿಂದ ಭೋಗಿಸಬೇಕು.
ಅದೇಕೆಂದಡೆ ಆ ಭೂಮಿಯೆ ಶಿವನಾದ ಕಾರಣ
ಓಂ ಯಜ್ಞರುದ್ರಸ್ಯ ಭೋಗವಾನೇ ಚಿತ್ಪೃಥ್ವಿ ಭುಭೂರ್ವಸ್ವಸಹೇ ನಮೋನಮಃ
ಶಿವಂ ಜನಯಂತಿಸ್ಸರ್ವೋ ಶಿವಃ ! ಎಂದುದಾಗಿ
ಭೂಮಿಯೆ ಶಿವನು ಕಾಣಿರೊ ! ಸರ್ವಾಧಾರ ಮಹಾದೇವ
ಇದು ಕಾರಣ ಹೊನ್ನ ಹೆಣ್ಣು ಮಣ್ಣು ತ್ರಿವಿಧವು ಶಿವನು ಕಾಣಿರೊ !
ಈ ತ್ರಿವಿಧದ ಮಱೆಯಲ್ಲಿ ಶಿವನಿಪ್ಪನು ಕಾಣಿರೊ !
ಇದು ಕಾರಣ ಶಿವಲಿಂಗಕ್ಕೆಯೂ ತ್ರಿವಿಧಕ್ಕೆ ಮಾಡುವ ಸ್ನೇಹ,
ಇಂತೀ ತ್ರಿವಿಧದಲ್ಲಿ ಮಾಡುವ ಲೋಭ,
ಇಂತೀ ತ್ರಿವಿಧಕ್ಕೆ ಮಾಡುವ ತಾತ್ಪರ್ಯವ ಲಿಂಗಕ್ಕೆ ಮಾಡಿದಡೆ
ಶಿವನಲ್ಲಿ ಸಾಸ್ಯುಜ್ಯನಾಗಿ ಸರ್ವಭೋಗೋಪಭೋಗವ ಭೋಗಿಸಿ ಪರಮ
ಪರಿಣಾವ ಸುಖಸ್ವರೂಪನಾಗಿಪ್ಪನಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ !

೩೦

ಕುಱುಹಿಲ್ಲ ಕುಱುಹಿಲ್ಲ ಲಿಂಗವೆಂತೆಂಬಡೆ ?
ತೆಱಹಿಲ್ಲ ತೆಱಹಿಲ್ಲ ಜಂಗಮವೆಂದೆಂಬಡೆ ?
ಇದೆ ನೋಡಾ ಶಿವಾಚಾರ, ಇದೆ ನೋಡಾ ಶಿವದೂಡಕು.
ಆತ್ಮನಾಂ ಪ್ರಕೃತಿರಿಯಂಚಭವೇತ್, ಎಂದುದಾಗಿ,
ಮುಟ್ಟಬಾರದ ಠಾವ ಮೆಱೆಗೊಂಡಿಪ್ಪ
ಮರ್ಮ ಕರ್ತ ಕೂಡಲಸಂಮದೇವಾ.

೩೧

ಲಿಂಗವೆಂದಱೆದಂಗೆ ಹಿಂದಿಲ್ಲ,
ಜಂಗಮವೆಂದಱೆದಂಗೆ ಮುಂದಿಲ್ಲ,
ಇದೆ ನೋಡಾ ಶಿವಾಚಾರ, ಇದೆ ನೋಡಾ ಶಿವದೊಡಕು.
ಆತ್ಮನಾಂ ಪ್ರಕೃತಿರಿಯಂಚ ಭವೇತ, ಎಂದುದಾಗಿ
ಇದು ಕಾರಣ ಕೂಡಲ ಚನ್ನಸಂಗಮದೇವ, ಮುಟ್ಟಿ
ಮುಟ್ಟಿ ಬಾರದ ಠಾವ ಮಱಿಗೊಂಡಿಪ್ಪನು.

೩೨

ದೇವರೆದ್ದ ಠಾವ ಏಳುವೆನಯ್ಯಾ,
ದೇವರ ಬಿದ್ದ ಠಾವ ಬೀಳುವೆನಯ್ಯಾ ದೇವ ಸತ್ತ ಠಾವ ಸಾವೆನಯ್ಯ,
ನಾವು ಸತ್ತು ದೇವ ಹಿಂದುಳಿದಡೆ,
ಎಮ್ಮಿಂದ ಬಿಟ್ಟು ವ್ರತಗೇಡಿಗಳಾಗು ಸಕಲೇಶ್ವರ.

೩೩

ಲಿಂಗವನಱಿಯದೆ ಏನನಱಿದಡೆಯೂ ಫಲವಿಲ್ಲ,
ಲಿಂಗವನಱಿದ ಬಳಿಕ ಮತ್ತೇನನಱೆದಡೆಯೂ ಫಲವಿಲ್ಲ.
ಸರ್ವಕಾರಣ ಲಿಂಗವಾಗಿ ಲಿಂಗವನೆ ಅಱಿವೆನು;
ಅಱಿದು ಲಿಂಗಸಂಗವನೆ ಮಾಡುವೆನು;
ಸಂಗ ಸುಖದೊಳೋಲಾಡುವೆನು ಗುಹೇಶ್ವರ.

೩೪

ವಟಬೀಜವಾವಟವೃಕ್ಷವ ಕೋಟಿನುಂಗಿಪ್ಪಂತೆ,
ಸಟೆಯಿಂದಾದ ಅಜಾಂಡ ಕೋಟಿಗಳು ನುಂಗಿಪ್ಪಲಿಂಗವೆ,
ದಿಟಪುಟ ಕಣುಮನಕರಸ್ಥಲಕ್ಕೆ ಬಂದು ಪ್ರಕಟವಾದೆ,
ಮಜಭಾಪು ಮಜಭಾಪು ಲಿಂಗವೆ,
ನಚರೇಣು ನಚ ಚಕ್ಷುವೆನಿಸುವ ಲಿಂಗವೆ,
ಉತ್ಪತ್ಯ ಸ್ಥಿತಿ ಲಯಕ್ಕೆ ಹೊಱಗಾದೆನಯ್ಯಾ
ನಿನ್ನ ಮುಟ್ಟಿದ ಕಾರಣ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

೩೫

ಬಸುಱೂಳಗಣ ಕೂಸಿಂಗೆ ಬೇಱೆ ಊಟ ಬೇಱೆ ಸೋಹ ಉಂಟೆ ?
ಜ್ಞಾನವೆಂಬ ಗರ್ಭದೊಳಗೆ ಲಿಂಗವೆಂಬ ಶಿಶುವಿರಲು
ಬೇಱೆ ಕೊಡುವ ಕೊಂಬುವ ಪರಿಯೆಂತೊ ?
ದೇಹದೊಳಗಣ ಪ್ರಾಣವ ಬೇಱುಮಾಡಿ ಭೋಗಿಸಲುಂಟೆ ?
ಅನುಮಾನವಳಿದು ಮಹದಲ್ಲಿ ಮನ ಮುಸುಕಿದ ಬಳಿಕ  ಭಿನ್ನ ಮಾಡಲುಂಟೆ
ಗುಹೇಶ್ವರಾ ?

೩೬

ಕಾಣಬಾರದ ಲಿಂಗವೆನ್ನ ಕರಸ್ಥಲಕ್ಕೆ ಬಂದಡೆ, ಹೇಳಲಮ್ಮೆ ಕೇಳಲಮ್ಮೆ,
ಎನಗಿದು ಚೋದ್ಯ ಎನಗಿದು ಚೋದ್ಯ
ಗುಹೇಶ್ವರನೆಂಬ ನಿರಾಕಾರದ ಬಯಲು
ಸಾಕಾರವಾಗಿ ಎನ್ನ ಕರಸ್ಥಲಕ್ಕೆ ಬಂದಡೆ,
ಅಹುದೆನಲಮ್ಮೆ ಅಲ್ಲೆನಲಮ್ಮೆ.

೩೭

ತತ್ವಸೂತ್ರ ಶಕ್ತಿಸಂಬಂಧವಾಗಿಹುದು;
ಜ್ಞಾನಸೂತ್ರ ಬಿಂದು ಸಂಬಂಧವಾಗಿಹುದು;
ಕಲಾಸೂತ್ರ ದಿವ್ಯತೇಜೋ ಪ್ರಕಾಶ ಸಂಬಂಧವಾಗಿಹುದು;
ವರ್ತುಳ ಗೋಮುಖ ಗೋಳಕಾಕಾರದಲ್ಲಿ
ಲೀಯವಾಗಲ್ಪದು ಲಿಂಗಬೇದ;
ಆ ಲಿಂಗಬೇದದಿಂದ ಆಹ್ವಾನಿಸಿ, ಆರೋಪಿಸಿ, ಸ್ವಯವಾದುದು,
ಪರಮಾನಂದದಲ್ಲಿ ಪರವಶನಾಗದೆ ನಿಂದ ಅಱಿವ ತಾನೆ
ಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನ ಲಿಂಗವು.

೩೮

ಮಾಣಿಕ್ಯದ ಮಣಿ ಉರಿಯ ಬೆಳಕಿಲ್ಲದೆ ಸುಡುವದಲ್ಲ;
ಉದಕದ ಮಡು ಮುಳಗಿದಲ್ಲದೆ ಕೊಲುವದಲ್ಲ;
ನಿನ್ನ ನಱಿದಲ್ಲದೆ ನಿನ್ನ ವರನಱುಹೆಂಬ ಜ್ಞಾನವೆ ?
ಅಯಃಕಾಂತದ ಶಿಲೆ ಲೋಹದಂತೆ   ಉಭಯಗುಣ ಸಂಪನ್ನ ನೀನೆ ಅಂದಿಂಗೆ
ಬಸವಣ್ಣನಿಂದ ಅನಿಮಿಷಯ್ಯನ ಕೈಯಲಿ ನಿಂದೆ
ಇಂದಿಂಗೆ ಪ್ರಭುವಿನ ಗುಹೆಯೊಳಗೆ ಗುಹೇಶ್ವರನಾದ
ಎನ್ನ ಗೂಡಿಂಗೆ ಬಂದು ಗುಮ್ಮಟಂಗೆ ಮಠಸ್ಥಾನನಾದೆ ಅಗಮ್ಯೇಶ್ವರ,
ಎನಗೆ ನಿನಗೂ ಕೊಳುಕೊಡೆವಿಡಿಯಾತಕಯ್ಯಾ.

೩೯

ನಾಳೆ ಮರೆಯ ನೂಲು ಸಡಿಲು
ನಾಚುವರು ನೋಡಾ ಗಂಡು ಹೆಣ್ಣೆಂಬ ಜಾತಿ !
ಪ್ರಾಣದೊಡೆಯ ಜಗದೊಳಗೆ ಮುಳುಗುತ್ತ ತೆಱಹಿಲ್ಲದಿರಲು
ದೇವರ ಮುಂದೆ ನಾಚಲೆಡೆಯುಂಟೆ ?
ಚನ್ನಮಲ್ಲಿಕಾರ್ಜುನಂಗೆ ಜಗವೆಲ್ಲ ಕಣ್ಣಾಗಿ ನೋಡುತ್ತಿರಲು
ಮೆಚ್ಚಿ ಮಱೆಸುವುದಾವುದು ಹೇಳಯ್ಯಾ ?

೪೦

ತೆರೆಯ ಮಱಿಯ ಬಹುರೂಪದಂತೆ ?
ಸೀರೆಯ ಮಱೆಯ ಉಪಸ್ಥಳದಂತೆ,
ಆ ಪೂರ್ವ ಕಟ್ಟಿದ ಮನೆಯ ಬಿಡುವನ್ನಕ್ಕ ಸೈಱೆಸಲಾಱದವನಂತೆ,
ಎನ್ನ ತಲ್ಲಣ ನಿನ್ನಯ ಕಲ್ಲಿನ ಮೆಱೆಯ,
ನಿನ್ನಯ ರೂಪು ತೋಱು ಎನ್ನಯ ಕಲ್ಲೆದೆಯ ಬಿಡಿಸು
ಮನೋವಲ್ಲಭ ಅಲೇಖನಾಥ ಶೂನ್ಯ ಉರಿಗಲ್ಲಿನ
ಕುಲ್ಲತನವ ಬಿಡು, ಬೇಡಿಕೊಂಬೆ ನಿನ್ನನು.

೪೧

ವಾಙ್ಮನಕ್ಕತೀತವಾದ ಪರಶಿವನು ಪರಮಾತ್ಮ ಸ್ವರೂಪನಾಗಿ
ವಿಶ್ವವೆಂಬ ನಾಣ್ಣುಡಿಯ ತೆರೆಯ ಸೀರೆಯ ಮಱೆಯಲ್ಲಿ  ಸಕಲ
ಭೋಗಾದಿಭೋಗಂಗಳ ಭೋಗಿಸುತ್ತಿಪ್ಪಿರಿ.
ಗುಹೇಶ್ವರ ನಿಮ್ಮ ನಿಲವಿನ ಪರಿಣಾಮದ ಸುಖವ
ನೀವೆ ಬಲ್ಲಿರಿ.

೪೨

ಒಂದು ಮನ, ಆ ಮನದಲ್ಲಿ ಲಿಂಗತ್ರಯವನೊಂದೆ ಬಾರಿ ನೆನೆವ  ಪರಿಯೆಂತೊ ?
ಆಱಿದಱಿದು ಲಿಂಗ ಜಾಣ್ಮಕೆ ಮುಂದನೆನೆದಡೆ ಹಿಂದಿಲ್ಲ;
ಹಿಂದ ನೆನೆದಡೆ ಮುಂದಿಲ್ಲ, ಒಂದೊಂದಱೊಳಗೆರಡೆರಡಿಪ್ಪವೆಂದಡೆ
ಅದು ಭಾವಭ್ರಮೆಯಲ್ಲದೆ ಸಹಜವಲ್ಲ
ನಿರುಪಾಧಿಕ ಲಿಂಗವನುಪಾಧಿಗೆ ತರಬಹುದೆ ?
ಸ್ವತಂತ್ರ ಲಿಂಗವ ಪರತಂತ್ರಕ್ಕೆ ತರಬಹುದೆ ?
ಗುಹೇಶ್ವರ ನಿಮ್ಮ ಬೆಡಗು ನಿನ್ನಾಣವನಱೆದೆನಾಗಿ
ಎಂತಿರ್ದಂತೆ ಸಂತಾ.

೪೩

ಅಡವಿಯೊಳಗಱಸುವೊಡೆ ಸಿಡಿಗಂಟಿ ತಾನಲ್ಲ,
ಮಡುವಿನೊಳಗಱಸುವೊಡೆ ಮತ್ಸ್ಯವಲ್ಲ;
ತಪಂಬಡುವೊಡೆ ವೇಷಕ್ಕೆ ವೇಳೆಯಲ್ಲ;
ಒಡಲ ದಂಡಿಸುವೂಡೆ ಕೊಡುವ ಸಾಲಿಗನಲ್ಲ,
ಅಷ್ಟತನುವಿನೊಳಗೆ ಹುದುಗಿರ್ದು ಲಿಂಗವ
ನಿಲಿಕಿ ನೋಡಿಯೆ ಕಂಡನಂಬಿಗಚೌಡಯ್ಯ.

೪೪

ಎನಗೆ ಒಂದು ಲಿಂಗ ನಿನಗೆ ಒಂದು ಲಿಂಗ
ಮನೆಗೆ ಒಂದು ಲಿಂಗವೆಂದಡೆ
ಹೋಯಿತ್ತಲ್ಲಾ ಭಕ್ತಿ, ಜಲ ಕೂಡಿ ಹೋಯಿತ್ತಲ್ಲಾ
ಭಕ್ತಿ ಜಲವ ಕಲಸಿ ಮನಮುಟ್ಟಿದ ಲಿಂಗವ
ಉಳಿ ಮುಟ್ಟಬಲ್ಲುದೆ ಗುಹೇಶ್ವರಾ.

೪೫

ಕುಱುಹಡಗಿಯಲ್ಲದೆ ಒಂದಱೆಯಬಾರದು;
ತಾನಱೆದಲ್ಲದೆ ಕುಱುಹಿನ ಕುಲಕೆಡದು;
ಅಱಿಯದುದನಱಿತಲ್ಲಿ ಮಱೆದು,
ಮುಱೆದುದನಱಿತಲ್ಲಿ ಮಱೆದು,
ಮಱದುದ ಅಱಿದಲ್ಲಿ ಕಂಡು,
ಉಭಯದ ತೋಟಿಯ ತೊಳಸು ನಿಂದಲ್ಲಿ
ನಿಷ್ಕಳಂಕ ಮಲ್ಲಿಕಾರ್ಜುನ ಲಿಂಗದ ಅಂಗ
ಕರತಳಾವಳಕವಾಯಿತ್ತು.

೪೬

ಆಕಾಶವನಡಱುವಂಗೆ ಅಟ್ಟಗೋಲಿನ ಹಂಗೇಕೆ ?
ಸಮುದ್ರವ ದಾಂಟುವಂಗೆ ಹಱುಗೋಲ ಹಂಗೇಕೆ ?
ಸೀಮೆಯಳಿದ ನಿಸ್ಸೀಮಂಗೆ ಸೀಮೆಯ ಹಂಗುಂಟೆ ?
ಗುಹೇಶ್ವರ ಲಿಂಗದಲ್ಲಿ ಸಿದ್ಧರಾಮಯ್ಯಂಗೆ
ಲಿಂಗವೆಂದೇನು ಹೇಳಾ ಚನ್ನಬಸವಣ್ಣಾ.

೪೭

ಅಹುದಹುದು ಅಂಗಕ್ಕೆ ಲಿಂಗವನಱಸಬೇಕಲ್ಲವೆ,
ಲಿಂಗಕ್ಕೆ ಅಂಗವನಱಸಲುಂಟೆ ?
ಪ್ರಾಣಕ್ಕೆ ಜ್ಞನವನಱಸಬೇಕಲ್ಲದೆ,
ಜ್ಞಾನಕ್ಕೆ ಜ್ಞಾನವನಱಸಲುಂಟೆ ?
ಎರಡಾಗಿದ್ದುದನೊಂದು ಮಾಡಬೇಕಲ್ಲದೆ,
ಒಂದಾಗಿದ್ದುದನೇನನು ಮಾದಲಿಲ್ಲ !
ಕೂಡಲಚನ್ನಸಂಗಯ್ಯನಲ್ಲಿ ನಿಸ್ಸೀಮ ಸಿದ್ಧರಾಮಯ್ಯದೇವರ
ಶ್ರೀಪಾದಕ್ಕೆ ಶರಣೆಂದು ಬದುಕಿದೆನು ಕಾಣಾ ಪ್ರಭುವೇ !