೪೮

ಬಲ್ಲನಿತ ಬಲ್ಲರಲ್ಲದೆ ಅಱಿಯದುದನೆಂತು ಬಲ್ಲರಯ್ಯ ?
ಅಱಿವು ಸಾಮಾನ್ಯವೆ ?
ಅಱಿಯದುದನಾಱಿಗು ಅಱಿಯಬಾರದು;
ಗುಹೇಶ್ವರನೆಂಬ ಲಿಂಗವು
ಅಱಿಯದೊಡೆರಡು ಅಱಿದಡೊಂದೆ !

೪೯

ಲಿಂಗವೆಂದು ಹಿಂಗಿ ಭಾವಿಸುವಾಗ
ಅಱಿವು ಲಿಂಗಕ್ಕೆ ಹೊಱಗೆ ?
ಆ ಲಿಂಗ ಚಿತ್ತದ ಕೈಯಲ್ಲಿ ಪ್ರಮಾಣಿಸಿಕೊಂಬಾಗ,
ಅಣೋರಣೇಯಾನ್ ಮಹತೋ ಮಹೀಯಾನ್
ಎಂದು ಪ್ರಮಾಣಿಸಿಕೊಂಬುದು ಪುಸಿಯೆ ?
ತೊಱಿಯುದಕ ಮಳಲು ಮಱಿಯಲ್ಲಿ ಬಂದು   ಸಂದೇಹ ಬಿಡಿಸುವಂತೆ,
ಎಲ್ಲಿಯು ನೀನೆ ಏಣಾಂಕನಾಥರ ಸೋಮೇಶ್ವರ ಲಿಂಗವೆ !

೫೦

ಬೀಜ ವಿಲ್ಲದ ಬೆಳೆಯುಂಟೆ ಅಯ್ಯ ?
ನಾದ ವಿಲ್ಲದ ಶಬ್ದವುಂಟೆ ಅಯ್ಯ ?
ದೃಷ್ಟ ವಿಲ್ಲದ ಕಳೆಯುಂಟೆ ಅಯ್ಯ ?
ಲಿಂಗ ಸಾಹಿತ್ಯವಾಗಿ ಸರ್ವಸಂಗವನಱಿಯಬೇಕಲ್ಲದೆ
ಲಿಂಗ ಅಂಗದಲ್ಲಿ ಹೊಕ್ಕ ಸರ್ವ ಭೋಗಂಗಳ ಕಾಬುದಕ್ಕೆ
ಇದೆ ದೃಷ್ಟ-
ಬಂಗಾರದ ಒಡಲಿನಲ್ಲಿ ಬಣ್ಣ ನಿಂದು ಲೆಕ್ಕವಟ್ಟಕ್ಕೆ ಬಹಂತೆ
ಆತ್ಮನ ದೃಷ್ಟವ ಕಂಡು, ಮತ್ತೆ ಅಧ್ಯತ್ಮವೆನಲೇಕೆ ?
ಘಟದ ಮಧ್ಯದಲ್ಲಿ ನಿಂದು ನುಡಿವುದೆ ಕ್ರೀಯೆಂದೆ,
ಸದಾಶಿವಮೂತ್ರಿ ಲಿಂಗವನಱಿವುದಕ್ಕೆ !

೫೧

ಲಿಂಗವೆಂಬುದು ಪರಶಕ್ತಿಯ ನಿಜನಿವಾಸ,
ಲಿಂಗವೆಂಬುದು ಪರಶಿವನ ಪರಮ ಜ್ಞಾನತೇಜ,
ಲಿಂಗವೆಂಬುದು ಅಖಂಡ ಸ್ವರೂಪವು,
ಲಿಂಗವೆಂಬುದು ಹರಿಬ್ರಹ್ಮರ ನಡುವೆ ನೆಗಳ್ದ ಜ್ಯೋತಿರ್ಮಯ ಲಿಂಗವು;
ಲಿಂಗವೆಂಬುದು ಅಚರಾಚರ ಲಯ ಗಮನಸ್ಥಾನ್,
ಲಿಂಗವೆಂಬುದು ಪಂಚಾಗ್ನಿಯನುಳ್ಳದು;
ಅದೆಂತೆಂದಡೆ:
ಜ್ವಾಲಮಾಲಾ ವೃತಾಂಗಾಯ ಜ್ವಲನಸ್ಥಂಭ ರೂಪಿಣೇ
ನಮಃ ಶಿವಾಯ ಶಾಂತಾಯ ಬ್ರಹ್ಮಣೇ ಲಿಂಗ ಮೂರ್ತಯೇಃ
ಲೀಯತೇ ಗಮ್ಯತೇ ಯತ್ರಯೇನ ಸರ್ವಂ ಚರಾಚರಂ
ತದೇತಲ್ಲಿಂಗಮಿತ್ಯುಕ್ತಂ ಲಿಂಗತತ್ತ್ವಪರಾಯಣೈಃ
ಪರಂ ಗೂಡಂ ಶರೀರಸ್ಥಂ ಲಿಂಗಕ್ಷೇತ್ರಮನಾದಿವತ್
ಯದಾದ್ಯಮೈಶ್ವರಂ ತೇಜಸ್ತಲ್ಲಿಂಗಂ ಪಂಛಸಂಜ್ಞಕಂ
ಎಂದುದಾಗಿ,
ಇದು ಕಾರಣ ಇದು ಲಿಂಗದ ವರ್ಮ
ಈ ಲಿಂಗವನಱಿದಾತನೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

೫೨

ಅಮೂಲ್ಯನಪ್ರಾಣಗೋಚರ ಲಿಂಗ,
ಆದಿ ಮಧ್ಯಾವಸಾನವಿಲ್ಲದ ಸ್ವತಂತ್ರ ಲಿಂಗ,
ನಿತ್ಯ ನಿರ್ಮಳ ಲಿಂಗ,
ಅಯೋನಿಸಂಭವ ನಮ್ಮ ಕೂಡಲಸಂಗಯ್ಯನು.

೫೩

ನಿತ್ಯನಿರಂಜನ ಪರಂಜ್ಯೋತಿರ್ಲಿಂಗವು ಪ್ರತ್ಯಕ್ಷವಾಗಿ ಕರಸ್ಥಲಕ್ಕೆ ಬರಲು
ಮತ್ತೆ ಬಯಲನಾಹ್ವಾನಿಸಿ ಬದುಕುವೆನೆಂಬುದು ಅಜ್ಞಾನವಯ್ಯಾ !
ಸತ್ಯವು ಸರ್ವಂಗವು ಲಿಂಗವಾಗಿರಲು ಮತ್ತೆ
ಕಾಯವೆರಸಿ ಕೈಲಾಸಕ್ಕೆ ಹೋಗಬೇಕೆಂದು ಬಯಸುವುದು ಕ್ರಮವಲ್ಲ.
ಪಂಚಾಮೃತ ಮುಂದೆ ಬಂದಿರಲು
ಹಸಿದೆನೆಂದು ಓಗರದ ಮನೆಯ ಅನ್ನವ ಬೇಡುವರೆ ?
ಕಣ್ಣ ಮುಂದೆ ನಿಧಾನವಿರಲು ಬಲಸಲಱಿಯದೆ
ಬಡತನದಲ್ಲಿಹರೆ ?
ಲಿಂಗವಿಲ್ಲದವರು ಮುಂತಾಗಿ ಲಿಂಗವ ನೆನೆದು ಬದುಕಿಹೆನೆಂಬರು;
ಇದು ಕಂಡು ಕಂಡು ನಂಬದಿಹುದುಚಿತವೆ ?
ಮಂಗಯ್ಯ ಕಂಕಣಕ್ಕೆ ಕನ್ನಡಿ ಬೇಡ
ಲಿಂಗವಂಗದೊಳಿರ್ದುದಕ್ಕೆ ಲಿಂಗದ ಪರಿಯೆಂತುಯೆಂದು
ಅನ್ಯರ ಕೈಯಿಂದ ಕೇಳಬೇಡ
ತನ್ನಲ್ಲಿ ತಾ ತಿಳಿದು ಕೊಂಬುದು,
ಇದನಱಿದು ಬೇಱಱಸ ಬೇಡ.
ಕಾಣೆನೆಂದು ಮಱುಗಬೇಡ ಮುಂದೆ ಜನ್ಮ ಉಂಟೆಂದು ಮನದಲ್ಲಿ ನೋಯಬೇಡ.
ಇದು ಕಾರಣ, ತನ್ನ ಕರಸ್ಥಲದೊಳಗಿರ್ದ ವಸ್ತುವನಱಿದಡೆ
ತಾನೆ ಶಿವನು.
ಇದು ಸತ್ಯ ಶಿವ ಬಲ್ಲ ಶಿವನಾಣೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

೫೪

ಲಿಂಗದ ಮರ್ಮವನಱಿದಱಿದು
ಲಿಂಗದ ಸಂಜ್ಞೆಯಱಿದಱಿದು
ಲಿಂಗವಂತಾದಿಂತಾದೆಂದು ಅಱಿವುದಱಿದು ನೋಡಾ !
ಲಿಂಗದಲ್ಲಿಯೆ ಅಗಮವಯ್ಯ !
ಭೂಮಿಯೆ ಪೀಠಿಕೆ ಆಕಾಶವೆ ಲಿಂಗವೆಂದಱಿದಾತನು
ಲಿಂಗವನಱಿದವನಲ್ಲ !
ಲಿಂಗದಲ್ಲಿಯೆ ಆಗಮವಯ್ಯ !
ಲಿಂಗದಾದಿ ಬ್ರಹ್ಮಮಧ್ಯವಿಷ್ಣುವಂತ್ಯಮಾದ
ಇಂತು ತ್ರೈಲಿಂಗವೆಂದಱಿದಾತನು ಲಿಂಗವನಱಿದವನಲ್ಲ !
ಲಿಂಗದಲ್ಲಿಯೆ ಆಗಮವಯ್ಯ !
ಲಿಂಗಮಧ್ಯೇ ಜಗತ್ಸರ್ವಂ ಎಂಬ ಭಾವರಹಿತಲಿಂಗ
ಬ್ರಹ್ಮವಿಷ್ಣು ಸುರೇಶಾದಿದೇವಾನಾಮಪ್ಯಗೋಚರಂ
ಮಾಹೇಶ್ವರ ಜ್ಯೋತಿರೂಪಮಾಪಾತಾತೀ ವ್ಯವಸ್ಥಿತಂ
ಅತೀತಂ ಸತ್ಯಲೋಕಾದಿರನಂತದಿವ್ಯಮೇಶ್ವರಂ
ಇತಾದನು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನೆಂದಱಿದ
ಶರಣಂಗೆ ಸುಲಭ ಮಿಕ್ಕವರ್ಗೆ ಅಶುಭ !

೫೫

ಯದಾ ಶಿವಕಲಾ ಯುಕ್ತಂ ಲಿಂಗಂದದ್ಯಾನ್ಮಹಾಗುರುಃ |
ತದಿರಾಧ್ಯಃ ಶಿವಸ್ತತ್ರ ತಿಷ್ಠತ್ಯಾವ್ವಾನಮತ್ರಕಿಂ ||
ಸುಸಂಸ್ಕೃತೇಷು ಲಿಂಗೇಷು ಸದಾಸನ್ನಿಹಿತಃ ಶಿವಃ |
ಅಥಾಹ್ವಾನಂ ನಕರ್ತವ್ಯಂ ಪ್ರತಿ ಪತಿ ವಿರೋದತಃ ||
ಆಹ್ವಾನಂ ಚ ವಿಸರ್ಜಂ ಚ ಸ್ವೇಷ್ಟಲಿಂಗೇನ ಕಾರಯೇತ |
ಲಿಂಗನಿಷ್ಠಾಪರೋನಿತ್ಯಮಿತಿ ಶಾಸ್ತ್ರವಿನಿಶ್ಚಯಃ
ಆಹ್ವಾನಕ್ಕೋಸ್ಕ್ತವಗೆಲ್ಲಿರ್ದನು ?
ಈರೇಳು ಭುವನ ಹದಿನಾಲ್ಕು ಲೋಕವನೊಡಲುಗೊಂಡಿಪ್ಪದಿವ್ಯವಸ್ತು
ಮತ್ತೆ ವಿಸರ್ಜಿಸಿಬಿಡುವಾಗ ಎಲ್ಲಿರ್ದನೊ ?
ಮುಳ್ಳೂರು ತೆಱಹಿಲ್ಲದಂತಿಪ್ಪ ಅಖಂಡವಸ್ತು   ಆಕಾಶಂ ಲಿಂಗಮಿತ್ಯಾಹುಃ |
ಪ್ರಥಿವೀ ತಸ್ಯ ಪೀಠಿಕಾ
ಆಲಯಂ ಸರ್ವಭೂತಾನಾಂ |  ಲಯನ ಲಿಂಗಮುಚ್ಯತೇ ಬಾಹ್ಯಾತ್ಪರಂ ||
ಲಿಂಗಮಧ್ಯೇ ಜಗತ್ಸರ್ವಂ ತ್ರೈಲೋಕ್ಯಂ ಸಚರಾಚರಂ |
ಲಿಂಗ ಬಾಹ್ಯಾತ್ಪರಂ ನಾಸ್ತಿ ತಸ್ಮಾಲ್ಲಿಂಗಂಪ್ರಪೂಜಯೇತ್ ||
ಯಥೋ ವಾಚೋನಿವರ್ತಂತೆ ಅಪ್ರಾಪ್ಯಮ್ಮನಸಾ ಸಹ
ನಾದ ಬಿಂದು ಕಲಾತೀತಂ ಗುರುಣಾ ಲಿಂಗಮುದ್ಭವಂ
ವೇದಾದಿನಾಮ ನಿರ್ನಾಮಂ ಮಹತ್ವಂ ಮಮರೂಪಯೋಃ
ಗುರೂಕ್ತಮಂತ್ರ ಮಾರ್ಗೇಣ ಇಷ್ಟಲಿಂಗಂ ತು ಶಾಂಕಠೀ
ಇಂತೆಂದುದಾಗಿ ಬಱಿಯ ಮಾತಿನ ಬಳಕೆಯ ತೂತ ಜ್ಞಾನವ ಬಿಟ್ಟು
ನೆಟ್ಟನೆ ತನ್ನ ಕರಸ್ಥಲದೋಳ್ ಒಪ್ಪುತಿರ್ಪ
ಇಷ್ಟಲಿಂಗವ ದೃಷ್ಟಿಸಿ ನೋಡಲು,
ಅಲ್ಲಿ ತನ್ನ ಮನಕ್ಕೆ ಮನಸಂಧಾನವಾದ ದಿವ್ಯ ನಿಶ್ಚಯ ಒದಗಿ,
ಆ ದಿವ್ಯ ನಿಶ್ಚಯದಿಂದಬ್ಯಕುಳವಡಗಿ ಅದ್ವೈತವಪ್ಪುದು;
ಅದು ಕಾರಣ ನಮ್ಮ ಕೂಡಲಚನ್ನಸಂಗಯ್ಯನ ಶರಣರು
ಆಹ್ವಾನ ವಿಸರ್ಜನವೆಂಬ ಉಭಯ ಜಡತೆಯ ಬಿಟ್ಟು,
ತಮ್ಮ ತಮ್ಮ ಕರಸ್ಥಲದಲ್ಲಿ ನಿಶ್ಚಯಿಸಿದರಾಗಿ,
ಸ್ವಯಲಿಂಗವಾದರು ಕಾಣಿರೊ !

೫೬

ಇಷ್ಟಲಿಂಗ ಪ್ರಾಣಲಿಂಗವೆಂದು ಬೇಱೊಂದು ಕಟ್ಟಣೆಯ ಮಾಡಬಹುದೇ ಅಯ್ಯ ?
ಬೀಜ ಒಡೆದು ಮೊಳೆ ತಲೆದೋಱುವಂತೆ,
ಬೀಜಕ್ಕೂ ಅಂಕುರಕ್ಕೂ ಭಿನ್ನಭಾವ ಉಂಟೆ ಅಯ್ಯ ?
ಇಷ್ಟಲಿಂಗದ ಕುಱುಹಿನಲ್ಲಿ ಚಿತ್ತು ನಿಂದು
ಮಿಕ್ಕ ಗುಣಂಗಳನಱಿಯಬೇಕು;
ಇದೆ ನಿಶ್ಚಯ.
ಸದಾಶಿವಮೂರ್ತಿ ಲಿಂಗವು ತಾನೆ !

೫೭

ಬೆಂಕಿಗೆ ಉರಿ ಮೊದಲೊ ಹೊಗೆ ಮೊದಲೊ
ಎಂಬುದನಱಿತಲ್ಲಿ ಇಷ್ಟಲಿಂಗಸಂಬಂಧಿ !
ಉಭಯವನಳಿದಲ್ಲಿ ಪ್ರಾಣಲಿಂಗಸಂಬಂಧಿ !
ಆ ಉಭಯವು ನಷ್ಟವಾದಲ್ಲಿ
ಏನೆನಲಿಲ್ಲ ಜಾಂಬೇಶ್ವರ !

೫೮

ಅಂಗಕ್ಕೆ ಕುಱುಹೆಂಬುದೊಂದು ಲಿಂಗ,
ಆತ್ಮಕ್ಕೆ ಅಱುಹೆಂಬುದೊಂದೆ ಲಿಂಗ  ಪರುಷಲೋಹದಂತೆ ಕೂಡುವನ್ನಬರ,
ಉಭಯನಾಮ ರೂಪಾಯಿತ್ತು,
ಕೂಡಿದ ಮತ್ತೆ ಪರುಷವೆಂಬ ನಾಮವಿಲ್ಲ !
ಲೋಹವೆಂಬ ಕುಱುಹಿಲ್ಲ !  ಹೇಮವೆಂಬ ನಾಮವಾಯಿತ್ತು.
ಇಷ್ಟಾಪ್ರಾಣ ಹಾಗದಲ್ಲಿ ಮನ ಸಂದಿತ್ತು ಮಾರೇಶ್ವರ !

೫೯

ಆಚಾರದ ಮೇಲೆ ಆಯತವಾದುದೆ ಇಷ್ಟಾಲಿಂಗ
ಇಷ್ಟಲಿಂಗವಿಡಿದಿಹುದೆ ಪ್ರಾಣಲಿಂಗ
ಪ್ರಾಣಲಿಂಗ ಉದಯಿಸಿದಲ್ಲದೆ ಇಷ್ಟಾಲಿಂಗವ ಕಾಣಬಾರದು.
ಈ ಬೇದವ ಭೇದಿಸಬಲ್ಲಡೆ ಕೂಡಲಚನ್ನಸಂಗಯ್ಯನಲ್ಲಿ
ಐಕ್ಯನೆಂಬುದು ಪ್ರಭುದೇವರೆ ಬಲ್ಲರು ಕಾಣಾ   ಸಿದ್ಧರಾಮಯ್ಯ

೬೦

ಇಷ್ಟಾಲಿಂಗ ಪ್ರಾಣಲಿಂಗವೆಂಬ ಭೇದವನಾರು ಬಲ್ಲರು ಹೇಳಾ !
ಅಂತರಂಗವೆಂಬ ಶಬ್ದಕ್ಕೆ ಬಹಿರಂಗ ಮುಂದುಕೊಂಡಿಪ್ಪುದು;
ಬಹಿರಂಗವೆಂಬ ಶಬ್ದಕ್ಕೆ ಅಂತರಂಗ ಮುಂದುಕೊಂಡಿಪ್ಪುದು,
ವಿಚಾರವ್ಯಾಕುಳಕ್ಕೆ ಒಳಗಾಗಬಾರದೆಂದು
ಮನಭಾವಜ್ಞಾನ ನೋಟವ ತಂದು   ಕರಸ್ಥಲದಲ್ಲಿ ನಿಕ್ಷೇಪಿಸಿ,
ಅಂತರಂಗ ಬಹಿರಂಗವೆಂದಱಿಯದೆ ಅನುಮಿಷನಾಗಿಪ್ಪನಾ ಶರಣನು.
ಪ್ರಾಣಲಿಂಗದ ಪ್ರಸನ್ನಮುಖವ ನೋಡಿ ಪರಿಣಾಮಿಸಲೋಸ್ಕರ
ತೇಜವೆಂಬ ದರ್ಪಣವನು ಹಿಡಿದಿಪ್ಪರು ನೋಡಯ್ಯ !
ಗುಹೇಶ್ವರ ಲಿಂಗದಲ್ಲಿ ನಿಜವನೈದಿಹೆನೆಂದಡೆ
ಕುಱುಹುವಿಡಿದು ಕುಱುಹುಗೆಡಬೇಕು ನೋಡಾ,
ಸಿದ್ಧರಾಮಯ್ಯ !

೬೧

ತನುವಿನ ಮೇಲಿಪ್ಪುದು ಇಷ್ಟಲಿಂಗವೆಂಬರು
ಆತ್ಮನ ನೆನಹಿನ ಮೇಲಿಪ್ಪುದು ಪ್ರಾಣಲಿಂಗವೆಂಬರು.
ಇಂತೀ ಘಟಾತ್ಮಕ್ಕು ಉಭಯ ಲಿಂಗವುಂಟೆ ?
ಹೊಱಗಣ ಅಸ್ಥಿ ಚರ್ಮಕ್ಕೆ ಬೇಱೊಂದಸುವ ಕಲ್ಪಿಸಬಹುದೆ ?
ಒಳಗಣ ಕರುಳು ಮಜ್ಜೆ ಮಾಂಸಕ್ಕೆ ಬೇಱೊಂದಸುವಿನ ಕಲೆಯುಂಟೆ ?
ಇದಕ್ಕೆ ದೃಷ್ಟಮಂ ಕಂಡೆ
ಇಷ್ಟಲಿಂಗ ಪ್ರಾಣಲಿಂಗವೆಂಬುದಕ್ಕೆ ಕಟ್ವುಂಟು
ಅದು ಅಚೇತನವಪ್ಪ ನಿರವಯಕ್ಕೆ ಚೈತನವಪ್ಪದೊಂದು ದೃಷ್ಟ;
ನಿರವಯ ಸಾವಯದಲ್ಲಿ ಸಂಬಂಧಿಸಿ ಕುಱುಹಾದ ಭೇದ;
ಆ ಕಾಯದೊಳಹೊಱಗಿನ ನೋವಿನ ಭೇದದಂತೆ
ಆ ಉಭಯವನಱಿವ ಆತ್ಮ ಒಂದೆಯಾಗಿ
ಇಂತೀ ಕಾಯದ ಇಷ್ಟವೆಂದು ಆತ್ಮಂಗೆ ಅಱುಹೆಂದು
ಎರಡೆನಿಸುವ ಲಿಂಗವೆಂಬುದೊಂದು ಕುಱುಹಿಲ್ಲ
ಅದು ಏಕಮೇವ ಸ್ವರೂಪವು ! ಅದು ಚಿದ್ಘನ ಸ್ವರೂಪವು !
ಅದು ಘನಮಠದೊಳಗಿನ ಬಯಲಿನ ಗರ್ಭದಂತೆ !
ಎನ್ನಯ್ಯ ಪ್ರಿಯ ಇಮ್ಮಡಿನಿಷ್ಕಳಂಕಮಲ್ಲಿಕಾರ್ಜುನಲಿಂಗವು
ಅತ್ಯತಿಷ್ಟದ್ದ ಶಾಂಗುಲನಾಗಿಪ್ಪನು.

೬೨

ಸುಗಂಧ ಮೂಲದ ಬೇಱಿನ ಗಂಧ, ಎಲೆ ಬಳ್ಳಿಯನೇತಕೆ ವೇಧಿಸದು ?
ಕುಸುಮದ ಸುವಾಸನೆ; ತನ್ನಯ ತೊಟ್ಟು ಎಲೆ ಕೊನರು ಬೇಱುವನೇಕೆ ವೇಧಿಸದು ?
ಇದು ಇಷ್ಟಪ್ರಾಣಯೋಗದ ಭೇದ.
ಗಿಡು ಗಿಡುವಿಗೆ ಕುಱುಹಲ್ಲದೆ ಗಂಧ ಗಂಧ ಕೂಡಿದಲ್ಲಿ ದ್ವಂದ್ವವಾಗಿ ಬೆಱೆದಲ್ಲಿ
ಕದಂಬಗಂಧವಲ್ಲದೆ ಒಂದರ ಗಂಧವೆಂದು ಸಂಬಂಧಿಸಿ ತೆಗೆಯಲಿಲ್ಲ
ಅವರು ನಿಂದ ನಿಂದ ಸ್ಥಲಕ್ಕೆ ಸಂಬಂಧವಾಗಿಪ್ಪ
ಈ ದೃಷ್ಟಾನುಭಾವ ಶುದ್ಧಿ,  ಸರ್ವಸ್ಥಲ ಭೇದ ವಿಶ್ವತೋಮುಖ ರೂಪ
ಎನ್ನಯ್ಯ ಪ್ರಿಯ ಇಮ್ಮಡಿನಿಷ್ಟಳಂಕಮಲ್ಲಿಕಾರ್ಜುನನು
ತತ್ವಭಿತ್ತಿ ಸ್ವರೂಪನು.

೬೩

ಸಸಿಗೆ ನೀರನೆಱೆದಡೆ ಹೆಸರಾದಂತೆ
ಬೇರಿನ ಬಾಯಿ ತುಂಬಿ ಸಸಿವೊಡಲು ತುಂಬಿ
ಆ ಎಸಕದ ತೆಱದಂತೆ ಇಷ್ಟಪ್ರಾಣಯೋಗವೆಂದ ನಬಿಂಗಚೌಡಯ್ಯ

೬೪

ಅಹ್ವಾನವಿಲ್ಲ ಪ್ರಾಣಲಿಂಗವಾಗಿ,
ವಿಸರ್ಜನೆಯಿಲ್ಲ ಅಂಗವನೆಲೆಗೊಂಡಿಪ್ಪುದಾಗಿ,
ಇದು ಕಾರಣ ಆಹ್ವಾನ ವಿಸರ್ಜನೆ ಇಲ್ಲ,
ಶರಣನ ಪರಿ ಬೇಱೆ
ಅಂಗ ಸಂಗವೆ ಲಿಂಗಸಂಗ, ಲಿಂಗಸಂಗವೆ ಮನ
ಕೂಡಲಸಂಗನ ಶರಣ ಸುಯಿಧಾನಿ

೬೫

ಆಹ್ವಾನಿಸುವಲ್ಲಿ ಪ್ರಾಣಲಿಂಗವಿಲ್ಲ,
ವಿಸರ್ಜಿಸುವಲ್ಲಿ ಲಿಂಗವಂತನಲ್ಲೆನಿಸಿತ್ತು,
ಇದು ಕಾರಣ, ಆಹ್ವಾನ ವಿಸರ್ಜಿನೆಯಿಲ್ಲದ ಶರಣನ ಪರಿ ಬೇಱೆ,
ಲಿಂಗ ಭೋಗೋಪಭೋಗವಲ್ಲದೆ
ಅನರ್ಪಿತವ ಭೋಗಿಪನಲ್ಲ  ಆವಾಗಲು ಪ್ರಾಣಲಿಂಗವೆ ಸಂಗವಾಗಿಪ್ಪನು.
ಇದು ಕಾರಣ, ಕೂಡಲಚನ್ನಸಂಗಯ್ಯ
ನಿಮ್ಮ ಶರಣಂಗೆ ನಮೋ ನಮೋ ಎಂಬೆನು.

೬೬

ತನ್ನತಾನಱಿದಿಹವೆ ಪರಮಾತ್ಮಯೋಗ
ತನ್ನ ತಾ ಮಱಿದಿಹವೆ ಮಾಯಾ ಸಂಬಂಧ
ಅಂತರಂಗ ಬಹಿರಂಗ ಪರಮಾಕಾಶ ಮಧ್ಯದಲ್ಲಿ
ಪರಮಾತ್ಮನು ಪರಬ್ರಹ್ಮಸ್ವರೂಪನು.
ನಿತ್ಯನಿರಂಜನ ಉಪಮಾತೀತ
ನಿಃಪತಿ ಕೇವಲ ನಿಃಕಲ ಸ್ವರೂಪನು
ಭೂಮಧ್ಯದಲ್ಲಿ ಪರಮಾತ್ಮನೆ ಅಂತರಾತ್ಮನಾಗಿ ಸಕಲವಿಷ್ಕಲನಾಗಿಪ್ಪನು.
ಹೃದಯ ಸ್ಥಾನದಲ್ಲಿ ಆ ಪರಮಾತ್ಮನೆ ಜೀವಾತ್ಮನಾಗಿ ಕೇವಲ ಸಕಲನಾಗಿಪ್ಪನು
ಬ್ರಹ್ಮರಂಧ್ರ ಸ್ಥಾನದಲ್ಲಿ ನಿಷ್ಕಲ ಗುರುಮೂರ್ತಿಲಿಂಗ;
ಭೂಮಧ್ಯಸ್ಥಾನದಲ್ಲಿ ಸಕಲ ಪರಂಜ್ಯೋತಿರ್ಲಿಂಗ;
ಹೃದಯಸ್ಥಾನದಲ್ಲಿ ಕೇವಲ ಸಕಲ ಜಂಗಮಲಿಂಗ;
ಇಂತು ಪರಮಾತ್ಮನೆ ಅಂತರಾತ್ಮ, ಪರಮಾತ್ಮನೆ ಜೀವಾತ್ಮ,
ಬಹಿರಂಗದಲ್ಲಿ ಪರಮಾತ್ಮನೆ ಗುರುಲಿಂಗ,
ಪರಮಾತ್ಮನೆ ಶಿವಲಿಂಗ, ಪರಮಾತ್ಮನೆ ಜಂಗಮಲಿಂಗ
ಇಂತು ಪರಬ್ರಹ್ಮವೆ ಪರಮಾತ್ಮ, ಪರಮಾತ್ಮನೆ ಸರ್ವಾತ್ಮ,
ಪರಮಾತ್ಮನೆ ಸರ್ವಗತ, ಪರಮಾತ್ಮನೆ ಆತ್ಮಗತ,
ಇದು ಕಾರಣ ಪರಮಾತ್ಮನೆ ಅಂತರಂಗ ಬಹಿರಂಗಭರಿತ ಪ್ರಾಣಲಿಂಗ,
ಇಂತು ಅಱಿದುದೆ ಪರಮಾತ್ಮಯೋಗ,
ಮಱವೆಯ ಮಾಯಾ ಸಂಬಂಧವಯ್ಯ
ಉಱಿಲಿಂಗಪೆದ್ದಿಪ್ರಿಯವೆಶ್ವೇಶ್ವರ.