೬೭

ಪಾಪ ನನ್ನದೆ ? ಪುಣ್ಯ ನಿನ್ನದೆ ಅಯ್ಯ ?
ದ್ವಂದ್ವಕರ್ಮ ಎನಗೆ ಬೇಱಾದ ಪರಿಯಂತಯ್ಯ ?
ವಿಚಾರಬಾದಬಳಿಕ ನಾನು ಲಿಂಗಪ್ರಾಣಿ, ನೀನು ಭಕ್ತಕಾಯನು.
ಇದು ಕಾರಣ ದ್ವಂದ್ವಕರ್ಮ ಮುನ್ನವೆ ನಾಸ್ತಿ
ಇನ್ನು ಭಾವ ಭೇದವೆಂದಡೆ ನಗೆಗೆಡೆಯಪ್ಪುದು
ಹೆಚ್ಚು ಕುಂದು ನನ್ನದಲ್ಲ, ನಿನ್ನದಯ್ಯ !
ಉರಿಲಿಂಗಪೆದ್ದಿಪ್ರಿಯವಿಶ್ವೇಶ್ವರ.    

೬೮

ಶಿವಶಿವಾ ನೀನೆನ್ನ ಮನವ ನೋಡಿಹೆನೆಂಬೆ
ಮನಸಿನಲ್ಲಿ ಗುಣಾವಗುಣವ ಹಿಡಿವೆ
ಮನವಾರು ? ನೀನಾರೆಂಬುದನಱಿಯಾ;
ನೀನಱಿಯದಿದ್ದಡೆ ನಾನಱಿಯೆ,
ನಾನಱಿಯದಿದ್ದಡೆ ನೀನಱಿಯಾ.
ಎಂದು ನನಗೆ ಪ್ರಾಣಲಿಂಗವಾದೆ, ಅದೆ ಲಿಂಗ ಪ್ರಾಣ.
ಮನಸಿನ್ನರದು ? ಹೇಳಾ !
ಅದುಕಾರಣ ದ್ವಂದ್ವಕರ್ಮ ಮುನ್ನವೆ ನಾಸ್ತಿ,
ಇದನು ಶ್ರೀ ಗುರುಲಿಂಗ ಜಂಗಮ ಪ್ರಸಾದ
ವೇದ ಶಾಸ್ತ್ರ ಪುರಾಣಾಗಮಂಗಳು
ಆಯಿಸು ಬಲ್ಲುದ ನಾ ತೋಱಲೇಕಯ್ಯ ?
ಉರಿಲಿಂಗಪೆದ್ದಿಪ್ರಿಯವಿಶ್ವೇಶ್ವರ.

೬೯

ಪ್ರಾಣಲಿಂಗವೆಂದಱಿದ ಬಳಿಕ ಪ್ರಾಣದಾಸೆ ಹಿಂಗಿತ್ತು;
ಲಿಂಗ ಪ್ರಾಣವೆಂದಱಿದ ಬಳಿಕ ಅಂಗದಾಸೆ ಹಿಂಗಿತ್ತು;
ಲಿಂಗಸೋಂಕು ಸಂಗಿಗೆ ಕಂಗಳೆ ಕಱುವಾಗಿದ್ದವಯ್ಯ
ಚನ್ನಮಲ್ಲಿಕಾರ್ಜುನಯ್ಯ
ಹಿಂಗದೆ ಅನುಮಿಷನಾದನು ಶರಣಂಗೆ

೭೦

ಅಱಿವನಕ್ಕು ಭೃತ್ಯಾಚಾರಿ;
ಮೀಱಿ ಮಿಕ್ಕು ಶರಣಪಥವ ಸೋಂಕು ತಾನಾಗಿದ್ದ ಸುಖವು
ಕೆಡುವನಕ್ಕ ಪ್ರಾಣಲಿಂಗಿ;
ಕೊಡಲಿಲ್ಲ ಕೊಡಲಿಲ್ಲ ಲಿಂಗಪ್ರಾಣಯಾದವಂಗೆ;
ಸಿದ್ಧಸೋಮನಾಥಲಿಂಗದಲ್ಲಿ ಅಱುಹಿನವಗ್ರಹ ಕಾಣಾ !

೭೧

ಅಂಗ ಲಿಂಗವೆಂದು, ಪ್ರಾಣಲಿಂಗವೆಂದು
ಉಭಯದ ಒಡಲನೊಡಗೂಡುವ ಪರಿಯಿನ್ನೆಂತೊ !
ಅದು ಶಿಲೆಯ ಬೆಳಗಿನಂತೆ, ಶಿಲೆಯಡಗಿದಡೆ ಬೆಳಗಿಲ್ಲ,
ಬೆಳಗಡಲಿಕೆ ಆ ಶಿಲೆ ಅಚೇತ ಪಾಷಾಣವಾಯಿತ್ತು
ಅಪ್ಪು ಕೂಡಿದ ಪರ್ಣ ಎಲೆ ನಾಮ ರೂಪಾದಂತೆ,
ಅಪ್ಪು ವಡಗೆ ಅಚೇತನತಱಗಾಯಿತ್ತು,
ಅಂಗದ ಮೇಲಣ ಲಿಂಗ ಲಿಂಗದ ಮೂರ್ತಿಯ ನೆನಹು
ಈ ತ್ರಿವಿಧ ಒಂದು ಗೂಡಿದಲ್ಲಿ ಲಿಂಗವೆಂಬ ಭಾವ,
ಲಿಂಗವೆಂಭ ನೆನಹು ನಿರಂಗವಾದಲ್ಲಿ,
ಕಾಯಕ್ಕೆ ಕುಱುಹಿಲ್ಲ ಜೀವಕ್ಕೆ ಭಯವಿಲ್ಲ ;
ಈ ಗುಣ ಪ್ರಾಣಲಿಂಗಿಯ ಭೇದೆ ನಿಷ್ಕಳಂಕಮಲ್ಲಿ ಕಾರ್ಜುನ.

೭೨

ಉರಿದು ಬೇವದು ಉರಿಯೋ ಮರನೊ ?
ಹರಿದು ಕೊರೆವುದು ನೆಲನೊ ನೀರೊ ?
ನೆಲನೀರಿನಂತಾದುದು ಅಂಗ ಲಿಂಗ ಸಂಬಂಧ
ಉರಿ ಮರನಂತಾದುದು ಅಂಗ ಲಿಂಗ ಸಂಬಂಧ
ಈ ನಾಲ್ಕಱ ಗುಣವುಭಯ ಕೂಟವಾದುದು ಶರಣಸ್ಥಲ
ಆ ಸ್ಥಲ ಸುರಧನುವಿನ ಕೆಲವಳಿಯಂತೆ !
ಮರೀಚಿಕಾ ಜಲವಳಿಯಂತೆ!
ಮಂಜಿನ ರಂಜನೆಯ ಜಂಝಾಮಾರುತನಂತೆ !
ಆಸಂಗ ನಿಸ್ಸಂಗ ಐಕ್ಯಸ್ಥಲ ನಿಷ್ಕಳಂಕಮಲ್ಲಿಕಾರ್ಜುನ !
ರೂಪಳಿದು ನೀರಾದಂತೆ,
ಅಂಗಲಿಂಗ ಸಂಬಂಧಿ ಏಣಾಂಕಧರ ಸೋಮೇಶ್ವರಲಿಂಗದಲ್ಲಿ.

೭೩

ಅಂಗವೆ ಲಿಂಗ ಲಿಂಗವೆ ಅಂಗವೆಂದಱಿದ ಬಳಿಕ
ಅಲ್ಲಿಯೆ ಅದೆ ಪ್ರಾಣಲಿಂಗ   ಲಿಂಗವೆ ಪ್ರಾಣವೆಂದಱಿದ ನ್ಬಳಿಕ
ಅಲ್ಲಿಯ ಅದೆ ಉಂಟೆಂದು ತೋಱಲಿಲ್ಲ
ಇವೆಲ್ಲವೆಂದಱಸಲಿಲ್ಲ ಕೂಡಲಸಂಗಮದೇವ
ಲಿಂಗನಿರಂತವಲ್ಲಿಯೆ.

೭೪

ಅಂಗ ಲಿಂಗ ಸಂಬಂಧವಾದಡೆ,
ವೇದನೆ ಅಂಗದ ನೋವಿನಂತಿರಬೇಕು.
ಹೇಮದಂಗ, ಅಗ್ನಿಯ ಸಂಗದಲ್ಲಿದ್ದು  ರೂಪಳಿದು ನೀರಾದಂತೆ,
ಅಂಗಲಿಂಗ ಸಂಬಂಧಿ ಏಣಾಂಕಧರ ಸೋಮೇಶ್ವರಲಿಂಗದಲ್ಲಿ.

೭೫

ಅಗ್ನಿ ಲೋಹದಂತೆ, ಫಲರಸದಂತೆ
ಕಾಯಜೀವದ ಪರಿಯಂತೆ, ಅಂಗನೆಳಲಿನಂತೆ,
ಅಂಗಲಿಂಗ ಸಂಬಂಧವಾಗಬೇಕು ಏಣಾಂಕಧರಸೋಮೇಶ್ವರ ಲಿಂಗದಲ್ಲಿ !

೭೬

ಗೂಳಿ ನುಂಗಿದ ಸ್ಥಾಣವಿನಂತೆ,
ಬಲ ನುಂಗಿದ ರತಿಯಂತೆ
ರತಿ ನುಂಗಿದ ನಾದದಂತೆ,
ರೂಪು ಭಾವಕ್ಕೆ ಎರವಿಲ್ಲದಂತಾಗಬೇಕು,
ಅಂಗಲಿಂಗ ಸಂಬಂಧ ಏಣಾಂಕಧರ ಸೋಮೇಶ್ವರ ಲಿಂಗದಲ್ಲಿ !

೭೭

ಫಲ ತರುವಿನಂತೆ, ತಿಲಸಾರದಂತೆ,
ಮಧುರ ದಂಡದಂತೆ, ಶರಧಿಯಲ್ಲಿರುವ ಲಘುವಿನಂತೆ,
ನಿನ್ನ ಭಾವವಿಲ್ಲದಿರಬೇಕು
ಅಂಗಲಿಂಗಸಂಬಂಧ ಏಣಾಂಕಧರ ಸೋಮೇಶ್ವರಲಿಂಗದಲ್ಲಿ !

೭೮

ಗಂಧ ಪುಷ್ಪದಂತೆ, ಚಂದನ ಲೀಲೆಯಂತೆ,
ಕಂಜಾಪ್ತ ಕಿರಣದಂತೆ, ಬಿಂದು ಸಸಿಯಂತೆ,
ಹಿಂಗದಿರಬೇಕು ಅಂಗಲಿಂಗ ಸಂಬಂಧಿ,
ಏಣಾಂಕಧರ ಸೋಮೇಶ್ವರಲಿಂಗದಲ್ಲಿ !

೭೯

ಗುಳ್ಳಂಕ ಮೃತ್ತಿಕೆಯ ಕುಪ್ಪಿಗೆಯಲ್ಲಿ ತೋಱುವ ಎಣ್ಣಿ ಜಲದಂತೆ;
ಇಂದುವಿನಲ್ಲಿ ಸಂದಿಲ್ಲದೆವೊಂದಿ ತೋಱುವ ರಂಜನೆಯಂತಾಗಬೇಕು;
ಅಂಗಲಿಂಗ ಸಂಬಂಧಿ ಏಣಾಂಕಧರ ಸೋಮೇಶ್ವರಲಿಂಗದಲ್ಲಿ !

೮೦

ಅಂಗವು ಲಿಂಗದಲ್ಲಿ ಸಂಬಂಧವಾದವರ ಲಿಂಗವೆಂದೇ ಕಾಬುದು.            ಅದೆಂತೆಂದಡೆ –
“ಕೀಟೋಪಿ ಭ್ರಮರಾಯತೇ” ಜ್ಞೇಯದಂತೆ
ಅಂಗ ಲಿಂಗವ ಸೋಂಕಿ ಲಿಂಗವಾಯಿತ್ತಾಗಿ, ಲಿಂಗವೆಂದೇ ಕಾಬುದು.
“ಸರ್ಪದಷ್ಟಸ್ಯ ಯದ್ದೇಹಂ ತದ್ದೇಹಂ ವಿಷದೇಹವತ್ |
ಲಿಂಗದಷ್ಟಸ್ಯ ಯದ್ದೇಹಂ ತದ್ದೇಹಂ ಲಿಂಗದೇಹವತ್ ||
ತೈಲಯುಕ್ತಂ ತು ಕಾರ್ಪಾಸಂ ಜ್ಯೋತಿಃ ಸ್ಪರ್ಶೇನ ಜ್ಯೋತಿವತ್ |
ಸ್ನೇಹಯುಕ್ತಸ್ಯ ಸದ್ಭಕ್ತೋ ಲಿಂಗಸ್ಪರ್ಶೇನ ಲಿಂಗವತ್ || ಎಂದುದಾಗಿ,
ಸರ್ವಾಂಗಲಿಂಗಿ, ಕೂಡಲಚನ್ನಸಂಗಾ, ನಿಮ್ಮ ಶರಣ .

೮೧

ಹೆಂಗೂಸಿಂಗೆ ಶೃಂಗಾರ ಪುರುಷನ ಕೂಟವೈದುವನ್ನಕ್ಕ.
ಗಂಡುಗೂಸಿಂಗೆ ಅಚಾರ ಪರಮನ ಕೂಟವೈಯಿದುವನ್ನಕ್ಕ.
ಪುರುಷನ ಕೂಟದಲ್ಲಿ ಭಂಗಾರ ಶೃಂಗಾರ ವಸ್ತು ವಳಿಯಲಿ ನಿಜ ಉಳಿಯಿತ್ತು.
ಪರಮನ ಕೂಟದಲ್ಲಿ ಆಗಮಾಚಾರವಳಿಯಲು ನಿಜ ಉಳಿಯಿತ್ತು.
ಆ ಸಜ್ಜನೆಗೆ ಈ ಸಜ್ಜನಿಕಂಗೆ ಸಜ್ಜನವೆ ಲೇಸು;
ಸಜ್ಜನದಗಂಡ ದೇವರಾಯ ಸೊಡ್ದಳ.

೮೨

ನಾಲ್ಕು ಝೂವಕ್ಕೆ ಒಂದು ವ್ಯಾಪಾರ ಹಸಿವೆ
ಮಿಕ್ಕಾದ ದೆಸೆಯೆಣಿಕೆ ಸಂದಿಸಿತ್ತು
ಮತ್ತೊಂದು ಝಾವ ನಿದ್ರೆ ಸ್ವಪ್ನ ನಾನಾ ಅವಸ್ಥೆ ಬಟ್ಟತ್ತು.
ಮತ್ತೊಂದು ಝಾವ ಅಂಗನೆಯರ ಕೂಟ ಅಧರ ಚುಂಬನ.
ಮಿಕ್ಕಾದ ಬಹುವಿಧ ಅಂಗವಿಕಾರದಲ್ಲಿ ಸಂದಿತ್ತು.
ಇನ್ನೊಂದು ಝಾವವಿರೆ ನೀವು ನೀವು ಬಂದ ಬಟ್ಟೆಯ ತಿಳಿದು,
ಮುಂದಣ ಆಗು ಚಾಗೆಯನಱಿತು, ನಿತ್ಯನೇಮವ ವಿಸ್ತರಿಸಿ ಕೊಂಡು,
ನಿಮ್ಮ ಶಿವಾರ್ಚನೆ ಪೂಜೆ ಪ್ರಣಮದ ಪ್ರಮಥಾಳಿ,
ಭಾವದ ಬಲಿಕೆ ವಿರಕ್ತಿಯ ಬಿಡುಗಡೆ ಸದ್ಭಕ್ತಿಯ ಮುಕ್ತಿ.
ಇಂತೀ ಕೃತ್ಯದ ಕಟ್ಟು ತಪ್ಪಿದಿರಿ.
ಅರುಣನ ಉದಯಕ್ಕೆ ಒಡಲಾಗದ ಮುನ್ನವೆ,
ಖಗ ವಿಹಂಗಾದಿಗಳ ಪಶು ಮೃಗ ನರಕುಲದುಲುಹಿಗೆ ಮುನ್ನವೆ,
ಹ್ರುದಯಕಮಲ ಪುಷ್ಪದ ಪೂಜೆಯ ಮಾಡುವೆ ;
ಎನ್ನ ಕಿವಿಳೆ ಗಕೀರ್ತಿ ಮುಖ; ನೆನೆವ ನಾಲಗೆಯ ಘಂಟೆ;
ಶಿರವೆ ಸುವರ್ನದ ಕಲಶ,
ಎನ್ನ ನಯನವೆಂಬ ಸ್ವಯಂಜ್ಯೋತಿಯನಾರತಿಯನೆತ್ತುವೆ,
ಎನ್ನ ಚಂದ್ರಶೇಖರಲಿಂಗಕ್ಕೆ ಮಾಡಿದೆನೆನ್ನ ಪ್ರಾಣಪೂಜೆಯ;
ಎನ್ನ ಕಾಯದ ಭಾಜನವಿನೀಪರಿ ಮಾಡಿದೆನಾಗಿ
ಕೂಡಲಚನ್ನಸಂಗನ ಪೂಜಿಸಿದಲ್ಲದೆ ನಿಲ್ಲಲಾಱೆ.

೮೩

ಎನ್ನ ತನುವೆ ಅಗ್ಗವಣಿಯ ಬಿಂದಿಗೆ;
ಮನವೆ ಸಿಂಹಾಸನ; ಉಸುರ ಹಿಡಿದು ಮಜ್ಜನಕ್ಕೆಱೆವೆನಯ್ಯಾ,
ನಿಮಗೆ ವಿಷಯ ಮಾದ ಗಂಧವ ನಿವೇದಿಸುವೆನಯ್ಯಾ,
ನಿಮಗೆ ನೆನಹನೆ ನೆಲೆಗೊಳಿಸಿಕೊಡುವೆನು ಕುಸುಮವನು,
ತನುಗುಣಾದಿಗಳನುರುಹಿ ದಶಾಂಗಧೂಪವನಿಕ್ಕುವೆನು,
ಎನ್ನ ನಿಮಗೆ ಬೋನಕ್ಕೆ ಸವೆವೆ,
ಕಪಿಲಸಿದ್ಧಮಲ್ಲಿಕಾರ್ಜುನ, ಹೊಱಬಳಿಕೆಯ ಪೂಜೆಗೆಱಗದೆನ್ನ ಮನವು.

೮೪

ಪ್ರಾಣಲಿಂಗಕ್ಕೆ ಕಾಯವೆ ಸೆಜ್ಜೆ, ಅಕಾಶ ಗಂಗೆಯಲ್ಲಿ ಮಜ್ಜನ,
ಹೂವಿಲ್ಲದ ಪರಿಮಳದ ಪೂಜೆ, ಹೃದಯದಲ್ಲಿ ಶಿವಶಿವಾ ಎಂಬ ಶಬ್ದ;
ಇದು ಅದ್ವೈತ ಕಾಣಾ, ಗುಹೇಶ್ವರ.

೮೫

ದೇವಾ ಮಂಗಳ ಮಜ್ಜನಮಂ ಮಾದಲು
ಶಿವಗಂಧೋದಕದಿಂದ ಪಾದಾರ್ಚನೆಯಂ ಮಾಡಿ,
ಹೊಂಗಳಸದೊಳಗರ್ಗಂಗಳಂ ತುಂಬಿ ಮಧು ಪರ್ಕಮಂ ಮಾಡಿ,
ದೇವಾಂಗ ವಸ್ತ್ರಂಗಳನ್ನುಡಿಸಿ, ಷೋಡಶಾಭರಣಂಗಳಂ ತೊಡಿಸಿ,
ದೇವಗಂಗೆ ಗಂಧಾಕ್ಷತೆ ಎನ್ನ ಪುಷ್ಪಂಗಳಂ ಪೂಜೆಯ ಮಾಡಿ,
ಅಗರು ಮಹಿಷಾಕ್ಷಿ ಧೂಪಂಗಳಂ ಧೂಪಿಸಿ,
ಕರ್ಪುರದಾರುತಿ ಮಂಗಳಾಚಾರದಾರೋಗಣೆ ವೀಳೆಯವನಳವಡಿಸಿ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಂಗೆ ಗೀತೆವಾಧ್ಯ ನೃತ್ಯವನಾಡಿ
ಮೆಚ್ಚಿಸುವ ಗಣಂಗಳಿಗೆ ನಮೋ ನಮೋ ಎಂಬೆನು.

೮೬

ಎನ್ನಂಗದಲ್ಲಿ ನಿನಗೆ ಮಜ್ಜನ, ಎನ್ನಲಲಾಟದಲ್ಲಿ ನಿನಗೆ ಗಂಧಾಕ್ಷತೆ,
ಎನ್ನ ತುಱುಬಿನಲ್ಲಿ ನಿನಗೆ ಕುಸುಮದ ಪೂಜೆ,
ಎನ್ನ ರೂಪದಲ್ಲಿ ನಿನಗೆ ನಾನಾರೂಪ ವಿಚಿತ್ರ ವಿನೋದ,
ಎನ್ನ ಶ್ರೋತ್ರದಲ್ಲಿ ನಿನಗೆ ಪಂಚಮಹಾವಾದ್ಯದ ಕೇಳಿಕೆ,
ಎನ್ನ ನಾಸಿಕದಲ್ಲಿ ನಿನಗೆ ಸುಗಂಧರೂಪ ಪರಿಮಳ,
ಎನ್ನ ಜಿಹ್ವೆಯಲ್ಲಿ ನಿನಗೆ ಷಡುರಸಾನ ನೈವೇದ್ಯ,
ಎನ್ನ ತ್ವಕ್ಕಿನಲ್ಲಿ ನಿನಗೆ ವಸ್ತ್ರಾಭರಣ ಅಲಂಕಾರ ಪೂಜೆ,
ಎನ್ನ ಚಿದಾನಂದವೆಂಬ ಸಂಜ್ಞೆಗೃಹದಲ್ಲಿ ನೀನು ಸ್ಪರ್ಶನಂಗೈದು ನೆರೆದಿಪ್ಪೆಯಾಗಿ,
ನಾನೀನೆಂಬೆರಡಳಿದು ತಾನು ತಾನಾದ ಘನವನೇನೆಂಬೆನು ?
ಉರಿಲಿಂಗಪೆದ್ದಿಪ್ರಿಯವಿಶ್ವೇಶ್ವರ.

೮೭

ಸದಾಚಾರಿಯಾದಡೆ ಉಪ್ಪರಗುಡಿ ಸಿಂಧುಪತಾಕೆ ಏಕೆ ?
ಒಬ್ಬರಿಗೊಬ್ಬರು ಶರಣೆಂಬುದೇ ಸರ್ವತೀರ್ಥ :
ಭಕ್ತನ ದೇಹವೆ ತ್ರಿಕೂಟ ಶಿವಾಲಯ,
ಕಾಲೆ ಕಂಭ, ಶಿರವೆ ಸುವರ್ಣದ ಕಲಶ, ಶಿವಾಚಾರವೆ ಪೌಳಿ,
ವಿಭೂತಿಯಲ್ಲಿ ಧವಳಿಸಿ ಪರದೈವವ ಹೊಗಲೀಯದೆ,
ಪ್ರಣವಪಂಚಾಕ್ಷರಿಯ ಗುಳಿದ್ವಾರವಟ್ಟವೊಪ್ಪಿರೆ,
ವಿನಯ ಅಗ್ಗವಣಿ, ಸಜ್ಜನವೆ ಮಜ್ಜನ,
ಸದಾ ಸನ್ನಹಿತವೆ ಲಿಂಗಪೂಜೆ, ಸತ್ಯವೆ ಅಡ್ಡಣಿಗೆ,
ಸಮತೆಯೆ ಪರಿವಾಣ, ಮನ ಮಿಸಲೋಗರ
ಲಿಂಗವಾರೋಗಣೆಯ ಮಾಡುತ್ತಿರಲು ಹರುಷವೆ ಹಸ್ತಮಜ್ಜನ,
ಪ್ರೀತಿ ಪ್ರೇಮವೆ ಕರ್ಪುರದ ವೀಳ್ಯೆ, ಕಲಿತನವೆ ಗಂಟೆ
ಫಲಪದವೆ ಭೇರಿ, ದಿಟವೊಂದು ಮದ್ದಳೆ, ಗೀತ ಸಂಪ್ರದಾಯ,
ಇದು ಕಾರಣ, ಕೂಡಲಚನ್ನಸಂಗ ನಿಮ್ಮ ಶರಣ ಸರ್ವಾಂಗಲಿಂಗಿ.

೮೮

ನೀರೊಳಗೆ ಕಿಚ್ಚೆದ್ದು ನೆಳಲ ಸುಟ್ಟಿತ್ತು.
ನೆಳಲ ಸುಟ್ಟು ವಿಭೂತಿಯನಿಟ್ಟುಕೊಂಡಡೆ ಭೂಮಿ ಸತ್ತಿತ್ತು.
ಭೂಮಿಯಾಕಾಶ ಹೊತ್ತಿತ್ತು ದೇವನ ದೇವತ್ವ ಕೆಟ್ಟಿತ್ತು ;
ದೇವಿಯ ಕತನ ಮುಱಿಯಿತ್ತು.
ತೋಱಬಾರದ ಠಾವಿನಲ್ಲಿ ಕಾಣಬಾಱದ ಲಿಂಗ ಮೂರ್ತಿಗೊಂಡಿರಲು
ನೆಳಲಿಲ್ಲದ ಪೂಜೆಯಾಯಿತ್ತು;
ಚಿಕ್ಕಯ್ಯಪ್ರಿಯ ಸಿದ್ಧಲಿಂಗ, ಪ್ರಭುದೇವರ ನಿಲವ ನೋದಿ ಇಲ್ಲ ಇಲ್ಲ ಎನುತಿರ್ದೆನು.

೮೯

ಸಾವಿರದ ಕಮಲದಲ್ಲಿ ತಾನಿಪ್ಪನು,
ಕೆಂದಾವರೆಯ ಪುಷ್ಪದ ನೇಮವೆಂತೊ !
ಪುಷ್ಪ ಮುಟ್ಟಿ ಕೊಯ್ದು ನೇಮವೆಂತೊ !
ಮುಟ್ತದ ಪರಿಮಳವ ಮುಟ್ತದೆ ಕೊಯ್ದ ಗುಹೇಶ್ವರ ನಿಮ್ಮ ಶರಣ.

೯೦

ಮಹದೇವಂಗೇಱಿಸುನಾರಹಸ್ತ ಮುಟ್ತದ, ಆರ ದೃಷ್ಟಿ ಮುಟ್ಟದ,
ಮನದಪುಷ್ಪದಿಂದ ಪೂಜಿಸುವೆನೆನ್ನ
ಕಪಿಲಸಿದ್ಧಮಲ್ಲಿಕಾರ್ಜುನದೇವನ.

೯೧

ಒಲುಮೆಯ ಕೂಟಕ್ಕೆ ಹಾಸಿನ ಹಂಗೇಕೆ ?
ಬೇಟದ ಮರಳಿಗೆ ಲಜ್ಜೆ ಮುನ್ನೇಕೆ ?
ನಿಮ್ಮನಱಿದ ಶರಣಂಗೆ ಪೂಜೆಯ ಹಂಗಿನ ದಂದುಗವೇಕೆ ?
ಮಿಸುನಿಯ ಚಿನ್ನಕ್ಕೆ ಒರೆಗಲ್ಲ ಹಂಗೇಕೆ ?
ಗುಹೇಶ್ವರ ಲಿಂಗಕ್ಕೆ ಕುಱುಹು ಮುನ್ನೇಕೆ ?

೯೨

ಪೂಜಿಸಿಕೊಂಬುದು ಪೂಜಿಸಿಹೆನೆಂಬುದು ಉಭಯದ ಸೂತಕ ಉಳ್ಳನ್ನಬರ
ಪರಿಪೂರ್ಣ ಜ್ಞಾನವಸ್ತುವೆಂಬುದುಂಟೆ ?
ಕಾಯದ ಸುಳುಹು ನಿಂದು, ಜೀವನ ಪ್ರಕೃತಿಹಿಂಗಿ,
ಬೇಱೊಂದ ಕಂಡಿಹೆನೆಂಬುದು ಪೂಜಿಸಿಹೆನೆಂಬುದು
ಇಭಯ ಶೂನ್ಯವಾಗಿ ನಿಂದುದು
ಕಾಮಧೂಮ ಧೂಳೇಶ್ವರಲಿಂಗನು ತಾನೆ.