೯೩

ಸರವರದೊಳಗೊಂದು ಪಿರಿದು ಕಮಲ ಹುಟ್ಟಿ  ಪರಿಮಳವಡಗಿತ್ತನಱಿಯರಲ್ಲಾ.
ಅರಳಲೀಯದೆ ಕೊಯ್ದು ಕರಡಿಗೆಯರಲ್ಲಾ.
ಅರಳಲೀಯದೆ ಕೊಯ್ದು ಕರಡಿಗೆಯಲ್ಲಿರಿಸಿ
ಸುರಕ್ಷಿತವ ಮಾಡಲಾಱಿರಲ್ಲಾ.
ಕರದ ಕೈಯಲ್ಲಿ ಲಿಂಗ, ಭರದ ಕೈಯಲ್ಲಿ ಪುಷ್ಪ,
ಎರಡು ಪೂಜೆಯ ಮಾಡಲಱಿಯರಲ್ಲಾ.
ಪರದೇಶ ಮಂಡಲದ ಇರವನೊಂದನೆ ಮಾಡಿ,
ಪಱಿಯಾಯ ಪರೀಕ್ಷೆಯನೊಱೆದು ನೋಡುತ,
ಕುಱುಹಿಟ್ಟಱುಹಿನಂತೆ;
ಕಣ್ಣೆವೆ ಹಳಚದೆ ಧರೆಯಱಿಯ ಮೆಟ್ಟ ನಿಂದು ನೋಡುತ,
ಹರಿವ ವೃಷ್ಟಿನ ಪಿಡಿದು ನೆಱೆವ ಸ್ವಾಮಿಯ ಕಂಡು
ಜರಾಮರಣವಿಲ್ಲದಂತಾದೆನಲ್ಲ !
ಕರಿಣಿ ಕೂಡಲಚನ್ನಸಂಗಯ್ಯನಲ್ಲಿ ಶರಣ ಪ್ರಭುವಿನ ಕರುಣ
ಬಸವಣ್ಣಂಗಾಯಿತ್ತು.      

೯೪

ಕರುಣಲಿಂಗಾರ್ಚನೆಯ ಮಾಡಲೆಂದು ಪುಷ್ಪಕ್ಕೆ ಕೈಯ ನೀಡಿದಡೆ
ಆ ಪುಷ್ಪ ಕರಣದೊಳಗಡಗಿತ್ತಯ್ಯ.
ಷೋಡಶ ಕಳೆ ಹದಿನಾಱರಯೆಸಳು ವಿಕಸಿತವಾಯ್ತು.
ಪುರುಷ ಪುಷ್ಪದ ಮರನು,
ಅದು ಓಗರದ ಗೊಬ್ಬರವನುಣ್ಣದು, ಕಾಮದ ಗಣ್ಣಿಱಿಯದು.
ನಿದ್ರೆಯ ಕಪ್ಪೊತ್ತದು.
ಅರುಣ ಚಂದ್ರಾದಿಗಳಿಬ್ಬರ ತೆರೆಯುಂಡು ಬೆಳೆಯದ ಪುಷ್ಪ
ಲಿಂಗವೆ ಧರೆಯಾಗಿ ಬೆಳೆಯಿತ್ತು,
ಆ ಪುಷ್ಪ ನೋಡಾ !
ಆ ಪುಷ್ಪವೆಂದಿಗೂ ನಿರ್ಮಾಲ್ಯವಿಲ್ಲೆಂದು
ಗುಹೇಶ್ವರ, ನಿಮ್ಮ ಶರಣ ಪ್ರಾಣಲಿಂಗಕ್ಕೆ ಪ್ರಾಣಪೂಜೆಯ ಮಾಡಿದ.

೯೫

ದುರ್ವಿಕಾರದಲ್ಲಿ ನಡೆದು ಗುರುಲಿಂಗವ ಪೂಜಿಸಬೇಕು.
ಮನ ವಿಕಾರದಲ್ಲಿ ನಡೆದು ಶಿವಲಿಂಗವ ಪೂಜಿಸಬೇಕು;
ತ್ರಿವಿಧ ವಿಕಾರದಲ್ಲಿ ನಡೆದು ಜಂಗಮವ ಪೂಜಿಸಬೇಕು.
ಒಳ್ಗನಱಿದು ಒಳಗ ಕಳೆವ ಮತ್ತೆ, ವೀರಶೂರ ರಾಮೇಶ್ವರ ಲಿಂಗವ ಕೂಡಬೇಕು.

೯೬

ಮಾಂಸದೊಳಗಿದ್ದ ಕ್ಷೀರವ
ಕ್ಷೀರದೊಳಗೆ ಬ್ಯಾಸಗೆಯ ಬಿನ್ನಣದಿಂದ ತೆಗೆದು
ಬೆಣ್ಣೆಯ ಅರೈದು ನೋಡಿ, ಕರಗಿ ಕಡೆಯಲ್ಲಿ ಮಿಱಿ ಘೃತವಾದುದು
ಹಸುವೊ, ಹಾಲೊ; ಮೊಸರೊ, ಬೆಣ್ಣೆಯೊ ?
ಇಂತೀ ಗುಣವಂದರಿಂದೊಂದ ಕಂಡು ಕಾಣಿಸಿಕೊಂಬ
ಮನೋನಾಥನ ಅನುವ ವಿಚಾರಿಸಿ,  ಮನ ಮನನೀಯ ,
ಭಾವ ಭಾವನೆ, ಧ್ಯಾನ ಪ್ರಮಾಣು,   ಪೂಜೆ ವಿಶ್ವಾಸ,
ಱಱಿದುದು ಅಱಿಕೆ            ಇಂತಿವೆಲ್ಲವನು ತೆಱದರಿಶನದಿಂದಱಿದು,
ಬಿಟ್ಟುದ ಉಭಯ ಭಾಂತು, ಹುಟ್ಟುಕೆಟ್ತಲ್ಲಿ ಕಮಠೇಶ್ವರಲಿಂಗವು ತಾನಾದ ಶರಣ.

೯೭

ಸಕಲವ ಪೂಜಿಸಿಹೆನೆಂಬ ಪೂಜಕರು ಸಕಲ ಲಿಂಗದಲ್ಲಿ ನಂಬಿ ಪೂಜಿಸಿ,
ನಿಷ್ಕಳವ ಪೀಜಿಸಿಹೆನೆಂಬ ಪೂಜಕರು ನಿಷ್ಕಳ ಲಿಂಗದಲ್ಲಿ ನಂಬಿ ಪೂಜಿಸಿ,
ಸಕಳ ನಿಷ್ಕಳತ್ಮಕ ಲಿಂಗಬಾಹ್ಯತ್ಪರಂ ನಾಸ್ತಿ | ಲಿಂಗೇಶಂ ಪೂಜ್ಯಮೇವ ಚ |
ಸರ್ವರು ಪುಜಿಸುವರೆಂಬ ಕಾರಣದಿಂ,
ಲಿಂಗಾರ್ಚನೆಯಿಂದ ಪರಮೇಶ್ವರನು ಇಲ್ಲೆಂದುದಾಗಿ,
ಒಳಹೊಱಗೆಂಬ ಭಾವವಳಿದುಳಿದ ಶರಣನ
ಬೆಳಗುವಂತರಂಗದಲ್ಲಿ ಶಿವನಿಪ್ಪ ಉರಿಲಿಂಗಪೆದ್ದಿಪ್ರಿಯ ವಿರೇಶ್ವರ,
ಪರಂಜ್ಯೋತಿರ್ಲಿಂಗ ಶರಣನ ಅಂತರಂಗ ಬಹಿರಂಗ ಸಂಗಿಯಾಗಿ.
ಕಾಯವೆ ನಿನ್ನ ವಾಯವೆಂದು ನಾನೆಂತೆಂಬೆ ?
ಕಾಯದಿಂದ ಲಿಂಗವ ಕಂಡೆ, ಕಾಯದಿಂದ ಜಂಗಮವ ಕಂಡೆ,
ಕಾಯದಿಂದ ಪ್ರಸಾದವ ಕಂಡೆ,
ಸಕಳೇಶ್ವರ ಪೂಜಿಸುವಲ್ಲಿ ಉತ್ತರ ಸಾಧಕನಾದೆಯಲ್ಲಾ ಎಲೆ ಕಾಯವೆ !

೯೯

ಕ್ರಿಯೆಗಳು ಮುಟ್ಟಲಱಿಯವು, ನಿಮ್ಮನೆಂತು ಪೂಜಿಸುವೆ ?
ನಾದಬಿಂದುಗಳು ಮುಟ್ತಲಱಿಯವು, ನಿಮ್ಮನೆಂತು ಹಾಡುವೆ?
ಕಾಯ ಮುಟ್ಟುವಡೆ ಕಾಣಬಾರದ ಘನವು,
ನಿಮ್ಮನೆಂತು ಕರಸ್ಥಲದಲ್ಲಿ ಧರಿಸುವೆ ?
ಚನ್ನಮಲ್ಲಿಕಾರ್ಜುನಯ್ಯ ನಿಮ್ಮ ನೋಡಿ ನೋಡಿ ಸೈವೆಱಗಾಗುತಿರ್ದೆನು.

೧೦೦

ಎಸುವರ ಬಲ್ಲೆ, ಎಚ್ಚಬಾಣ ತಿರಿಗಿ ಬಪ್ಪಂತೆ ಎಸುವರ ಕಾಣೆ.
ಪೂಜಿಸುವರಲ್ಲದೆ ಪೂಜಿಸುವ ಲಿಂಗವಭಿಮುಖವಾಗಿ
ಸರ್ವಾಂಗದಲ್ಲಿ ವೇಧಿಸುವರ ಕಾಣೆ.
ಆ ನುಡಿಗೆ ನಡೆ ಆ ನಡೆಗೆ ನುಡಿ ಉಭಯವ ಭೇದಿಸುವರನಾರನೂ ಕಾಣೆ.
ಈ ಉಭಯ ಸಿದ್ಧಿ ಯಾಗಿ ಸಿದ್ಧಾಂತವಾದಲ್ಲಿ,
ಎನ್ನಯ್ಯಪ್ರಿಯ ಇಮ್ಮಡಿ ನಿಷ್ಕಳ್ಂಕ ಮಲ್ಲಿಕಾರ್ಜುನನು,
ಕ್ರಿಯೆಜ್ಞಾನ ನಿರತವಾದಂಗಲ್ಲದೆ ಸಾಧ್ಯವಿಲ್ಲ .

೧೦೧

ಇಷ್ಟಲಿಂಗ ಪ್ರಾಣಲಿಂಗವೆಂದು ವಿಭೇದಿಸುವಲ್ಲಿ
ಕುಸುಮದ ಗಿಡುವಿಂಗೆ ವಾಸನೆಯುಂಟೆ ಕುಸುಮಕ್ಕಲ್ಲದೆ ?
ಅದು ಗಿಡುವಿಡಿದುದ ಕುಸುಮವೆಂಬುದನಱಿದು
ಗಿಡುವಿನ ಹೆಚ್ಚಿಗೆ, ಕುಸುಮದ ನಲವು, ಸುಗಂಧದ ಬೆಳೆ,
ಭಕ್ತಿಗೆ ಕ್ರಿಯಾ ಶ್ರದ್ಧೆ. ಶ್ರದ್ಧೆಗೆ ಪೂಜೆ,
ಪೂಜೆಗೆ ವಿಶ್ವಾಸ, ವಿಶ್ವಾಸಕ್ಕೆ ವಸ್ತುನಿಶ್ಚಯವಾಗಿಪ್ಪ
ಇದು ತುರಿಯ ಭಕ್ತಿಯ ಇಱವು,
ಎನ್ನಯ್ಯಪ್ರಿಯ ಇಮ್ಮಡಿ ನಿಷ್ಕಂಳಕ ಮಲ್ಲಿಕಾರ್ಜುನ ಲಿಂಗವ
ಮಲ್ಲನೆ ಕೊಡುವ ಕೂಟ.               

೧೦೨

ತಮ್ಮ ತಮ್ಮ ಭವಕ್ಕೆ ಉಡಿಯಲ್ಲಿ ಕಟ್ತಿಕೊಂಬರು;
ತಮ್ಮ ತಮ್ಮ ಭಾವಕ್ಕೆ ಕೊರಳಲ್ಲಿ ಕಟ್ಟಿಕೊಂಬರು;
ನಾನೆನ್ನ ಭಾವಕ್ಕೆ ಪೂಜಿಸ ಹೋದಡೆ
ಕೈತಪ್ಪಿ ಮನದಲ್ಲಿ ನೀಲುಕಿತ್ತು,
ಎನ್ನ ಲಿಂಗ ಸಾಧಕವಲ್ಲ; ಗುಹೇಶ್ವರಯ್ಯ ತಾನೆ ಬಲ್ಲ !

೧೦೩

ವರ್ಣವಿಲ್ಲದ ಲಿಂಗಕ್ಕೆ ರೂಪು ಪ್ರತಿಷ್ಟೆಯ ಮಾಡುವರು;
ಪ್ರಳಯವಿಲ್ಲದ ಲಿಂಗಕ್ಕೆ ಪ್ರಾನಪ್ರತಿಷ್ಟೆಯ ಮಾಡುವರು;
ನುಡಿಯಬಾರದ ಲಿಂಗಕ್ಕೆ ಜಪಸ್ತ್ರೋತ್ರ ಪೂಜೆಯ ಮಾಡುವರು;
ಮುಟ್ತಬಾರದ ಲಿಂಗಕ್ಕೆ ಕೊಟ್ಟುಕೊಂಡಿಹೆವೆಂಬರು;
ಬೊಟ್ಟಡಲೆಡತೆಱಹಿಲ್ಲದ ಲಿಂಗ ಮುಟ್ಟ ಪೂಜಿಸಿಹೆನೆಂಬ
ಭ್ರಷ್ಟರ ನೋಡಾ ಗುಹೇಶ್ವರ .

೧೦೪
ಸರವಿಡಿಯೆ ಗುರುವಿಡಿಯೆ, ಗುರುವಿಡಿದು ಲಿಂಗವಿಡಿಯೆ,
ಪಱಿವಿಡಿಯೆ ನೀ ಲೋಕದ ಬಳ್ಕೆವಿಡಿಯೆ ಇಲ್ಲವೆಯ ತಂದೆನು.
ಬಲ್ಲವರು ನಿಲ್ಲಿರೊ !
ಶರಣಸತಿ ಲಿಂಗಪತಿಯೆಂಬುದ ಕೇಳಿ,
ಉಂಟಾದುದನಿಲ್ಲೆನಬಂದೆ; ಇಲ್ಲದುದನುಂಟೆನಬಂದೆ;
ಅಷ್ಟವಿಧಾರ್ಚನೆ ಷೋಡಶೋಪಚಾರದ ಕರ್ಮಿಗಳಿಗೆ
ನೆಟ್ಟನೆ ಗುರುಲಿಂಗವೆಲ್ಲೆನಬಂದೆ;
ಮುಟ್ಟಲಱಿಯರು ಪ್ರಾಣಲಿಂಗವ, ಅಟ್ಟ ಹತ್ತುವಿರಿ ಲೋಕದ ಬಳಿಕೆಯ;
ಇಷ್ಟಲಿಂಗದ ಹಂಗು ಹಱಿಯದ ಕಾರಣ
ಚಿಕ್ಕಯ್ಯಪ್ರಿಯ ಸಿದ್ಧಲಿಂಗವಿಲ್ಲದಿಲ್ಲೆನ ಬಂದೆ.

೧೦೫

ಆಸೆಯಾಮಿಷ ತಾಮಸ ಹುಸಿ ವಿಷಯವನೆಲ್ಲವಂ ಸಟೆಯ ಮಾಡಿ,
ಸದ್ಗುಣವೆಂಬ ಗೋಮಯವನು ವಿನಯಾರ್ಥವೆಂಬ ಉದಕದಲ್ಲಿ ಸಾಮಾರ್ಜನೆಯ ಮಾಡಿ,
ಕುಟಿಲ ಕುಹಕ ಕ್ರೋಧ ಕ್ಷುದ್ರ ಮಿಥ್ಯವೆಲ್ಲವನು  ಹುಡಿಗಟ್ಟಿ ರಂಗವಾಲಿಯನಿಕ್ಕಿ,
ಸಮತೆಯೆಂಬ ಹತ್ತಿಯಕೊಂಡು
ಪುಣ್ಯಪಾಪವೆಂಬ ಕಸಗೊಟ್ಟಯಂ ಕಳೆದು, ದೃಡ ವೆಂಭ ಬತ್ತಿಯಂ ತೀವಿ,
ತನುವೆಂಬ ಪಣಿತೆಯಲ್ಲಿ ಕಿಂಕಲವೆಂಬ ತೈಲವನೆಱೆಹು,
ಜ್ಞಾನವೆಂಬ ಜ್ಯೋತಿಯ ಹೊತ್ತಿಸಿ,
ಸಮತೆ ಸೈರಣಿಯೆಂಬ ಅಗ್ಗವಣಿಯಲ್ಲಿ ಮಜ್ಜನಕ್ಕೆಱೆದು,
ನಿಹೃದಳ ಕಮಲದಲ್ಲಿ ಪೂಜೆಯಂ ಮಾಡಿ,
ಪಚೇಂದ್ರಿಯ ವಿನಾಶವೆಂಬ ಪಂಚಾರತಿಯ ನಿಟ್ಟು
ನಿರಂತರ ಸಾವಧಾನವೆ ನಿರಂಜನತನು ಮುಖಾದಿಗಳನೇಕಾರ್ಥಮಂ ಮಾಡಿ
ಹಿಡಿವುದೆ ಏಕಾರತಿ.
ಸರ್ವಜೀವದ ಯಾಪರವೆಂಬ ಧೂಪವಂ ಬೀಸಿ,
ನಿರ್ಧರವೆಂಬ ನಿತ್ಯನೇಮವ ಧೂಪವಂ ಬೀಸಿ,
ನಿರ್ಧರವೆಂಬ ನಿತ್ಯನೇಮವ ಸಲಿಸಿ,
ಪರಮಾರ್ಥವೆಂಬ ನೈವೇದ್ಯವನಿಟ್ಟು,
ಶಿವಸುಖಸಂತಸದಿಂದರ್ಪಿತವಮಾಡಿ,
ಪರಿಣಾಮವೆಂಬ ಪ್ರಸಾದವ ಸ್ವೀಕರಿಸಿ,
ಸುಜ್ಞಾನಭರಿತನಾಗಿಹ,
ಇಂತಪ್ಪ ಲಿಂಗಾರ್ಚಕರ ತೋಱಿ ಬದುಕಿಸು ಕೂಡಲ
ಚನ್ನಸಂಗಮದೇವಾ.

೧೦೬

ಮುಖವನಱಿಯದೆಂತರ್ಪಿಸುವೆನಯ್ಯ ?
ಅದು ಭವಹಱಿಯದು.
ಅವಯದ ಪರಿಯಾಣದಲ್ಲಿ ಅನುಮಿಷನೆಂತ ವೋಗರವನಿಕ್ಕಿ,
ತನುತ್ರಯದಿಂ ಮೇಲಣ ಆನಂದ ಕೋಣೆಯಲ್ಲಿ
ಆನಂದಲಿಂಗಾರ್ಚನೆಯ ಮಾಡುಬಲ್ಲಡೆ,
ಆತನನುಪಮ ಲಿಂಗಾರ್ಚಕನೆಂಬೆ;
ಕಪಿಲಸಿದ್ಧಮಲ್ಲಿಕಾರ್ಜುನ ನಾ ನೀನೆಂಬೆ.

೧೦೭

ಕಂದದ ಹೂವನೆ ಕೊಯ್ದು, ನಂದದಾರತಿಯನೆ ಬೆಳಗಿ,
ಅಂದವಳಿಯದೆ, ಬಿಂದು ತುಳುಕದೆ, ನಂದಿ ಮುಂದುಗೆಡದ ಮುನ್ನ
ಅಂದಂದಿನ ಹೊಸ ಹೊಸ ಪೂಜೆ.
ಆ ಲಿಂಗಮಧ್ಯವನೆ ತಿಳಿದು ನೋಡಿ,ಮೇರುಗಿರಿಯಾಕಳನೆ ಕಱೆದು,
ಕ್ಷೀರದಲ್ಲಿ ಅಡಿಗೆಯ ಮಾಡಿ, ಕೂಡಲಸಂಗಯ್ಯನೆಂಬ
ಲಿಂಗಕ್ಕೆ ಆರೋಗಣೆಯ ಸಮಯ.

೧೦೮

ಹೊಱಗನೆ ಕೊಯ್ದು ಹೊಱಗನೆ ಪೂಜಿಸುವರು
ಫಲವಿಲ್ಲ ಪ್ರಯೋಜನವಿಲ್ಲ ನೋಡಾ.
ಸರ್ವಜೀವಂಗಳ ಹಿಂಸೆಯ ಮಾಡದಿರಬಲ್ಲಡೆ ಅದು ಮೊದಲ ಪುಷ್ಪ.
ಸರ್ವೇಂದ್ರಿಯವ ನಿಗ್ರಹಿಸಬಲ್ಲಡೆ ದ್ವೀತಿಯ ಪುಷ್ಪ.
ಅಹಂಕಾರಮಂ ಮಱೆದು ಶಾಂತನಾಗಿರಬಲ್ಲಡೆ ತೃತಿಯ ಪುಷ್ಪ
ಸರ್ವಪ್ರಾಣಿಗಳಲ್ಲಿ ದಯಾಪರನಾಗಿರಬಲ್ಲಡೆ ಚತುಃಪುಷ್ಪ ,
ದುರ್ಭಾವದ ಪ್ರಕೃತಿಯಳಿದು ಸದ್ಭಾವವೆಡೆಗೊಂಡಿರಬಲ್ಲಡೆ ಪಂಚಮ ಪುಷ್ಪ
ಉಂಡು ಉಪವಾಸಿ ಬಳಸಿ ಬ್ರಹ್ಮಚಾರಿಯಾಗಿರಬಲ್ಲಡೆ ಸಪ್ತಮ ಪುಷ್ಪ.
ಸಕಲ ಪ್ರಪಂಚನಳಿದು ಜ್ಞಾನ ಸಂಪನ್ನನಾಗಿರಬಲ್ಲಡೆ ಅಷ್ಟಮ ಪುಷ್ಪ.
ಇಂತೀ ಸಹಜ ಪುಷ್ಪದಲ್ಲಿ ಪೂಜೆಯ ಮಾಡಿ,
ನಿಮ್ಮ ಪ್ರತಿಬಿಂಬದಂತಿಪ್ಪ ಕೂಡಲಚನ್ನಸಂಗಾ ನಿಮ್ಮ ಶರಣ.

೧೦೯

ದೇಹವೆಂಬರಮನೆಯಲ್ಲಿ ಮಹಾಲಿಂಗವೆಂಬರಸು
ಮನವೆಂಬ ಪೀಠದ ಮೇಲೆ ಮೂರ್ತಿಗೊಂಡು,
ಅಂತಃಕರಣಂಗಳೆಂಬ ಪರಿಚಾರಕರುಗಳ ಕೈಯಿಂದ
ಪಂಚೇಂದ್ರಿಯಗಳೆಂಬ ಪರಿವಾಣದಲ್ಲಿ ಶಬ್ದಸ್ಪರ್ಶರೂಪ ರಸ ಗಂಧಂಗಳೆಂಬ
ಪದಾರ್ಥಂಗಳನು ಎಡೆಮಾಡಿಸಿಕೊಂಡು ಸವಿವುತ್ತಿರಲು,
ಆನಂದವೆ ಮಹಾಪ್ರಸಾದವಾಗಿ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನು
ಸದಾ ಸನ್ನಿಹಿತ ಕಾಣಿರೆ !

೧೧೦

ಎನ್ನ ಪಾದವೆ ಪಾದ ಶಿಲೆಗಳಾಗಿ, ಎನ್ನ ಕಾಲೆ ಕಡಹದ ಕಂಭವಾಗಿ,
ಎನ್ನ ತೋಳೆ ನಾಗವೇದಿಗೆಯಾಗಿ, ಎನ್ನ ಕಿವಿಗಳೆ ಕೀರ್ತಿಮುಖವಾಗಿ,
ಎನ್ನ ಕಂಗಳೆ ಕುಂದದ ಜೋತಿಯಾಗಿ, ಎನ್ನ ಶಿರವೆ ಸುವರ್ಣದಕಲಶನಾಗಿ,
ಎನ್ನ ಚರ್ಮ ನಿರ್ಮಳ ಹೊದಕೆಯಾಗಿ, ಎನ್ನನೆನಹೆ ನಿಮಗೆ ಉಪಹಾರವಾಗಿ,
ಗುರುಪ್ರಿಯ ಪುರದಮಲ್ಲನಿದ್ದನಾಗಿ.
ಎನ್ನ ಪ್ರಾಣ ಮನ ಬುದ್ಧಿ ಚಿತ್ತಂಗಳು ನಿಮ್ಮ ತೊತ್ತಿರು;
ಸತ್ವರಜ ತಮಂಗಳು ನಿಮ್ಮ ಬೃತ್ಯರು;
ಅಂತಃಕರಣಂಗಳು ನಿಮ್ಮ ಬೃತ್ಯರು;
ಪಂಚೇಂದ್ರಿಯಂಗಳು ನಿಮ್ಮ ಪಡಿಹಾರರು,
ಅಱಿಷಡ್ವರ್ಗಂಗಳು ನಿಮ್ಮ ಲೆಂಕರು;
ಸಪ್ತಧಾತುಗಳು ನಿಮ್ಮ ಬಾಣಸಿಗಳಯ್ಯ,
ಅಷ್ಟತನುಗಳು ನಿಮ್ಮ ಕುಮಾರರು,  ನವರಸಂಗಳು ನಿಮ್ಮ ಭಂಡಾರಿಗಳು,
ದಶವಾಯುಗಳು ನಿಮ್ಮ ಸೀಗುಱಿ ಚಾಮರಿಗಳು,
ಷೋಡಶ ಕಲೆಗಳು ನಿಮ್ಮರಾಣಿವಾಸ,
ಶಂಭು ಸೋಮನಾಥ ಲಿಂಗ ನಿಮಗೆ ಎನ್ನ ಕಾಯ ಮುಂತಾಗಿ ಬಹತ್ತರ ಡಿಂಗರಿಗರು.

೧೧೨

ಬಿಂದುವೆ ಪೀಠವಾಗಿ ನಾದವೆ ಲಿಂಗವಾದಡೆ   ಅಭಿನ್ನಲಿಂಗ ನೋಡಾ.
ಕಳೆಯೆಂಬ ಪೂಜೆ ನಿರ್ಮಳವಾಗಿ
ನಾದಬಿಂದು ಕಳಾತೀತ ನೋಡಾ.
ಮಹಾಘನ ಲಿಂಗೈಕ್ಯವು ಅಲ್ಲಲ್ಲಿ ಸಿಲುಕದ ಅಚಲವಪ್ಪ ನಿರಾಳವ
ಪ್ರಣಮರೂಪನೆಂದು ಹೆಸರಿಡಬಹುದೆ
ನಮ್ಮ ಗುಹೇಶ್ವರನ ನಿಲುವು
ನಿಶ್ಯಬ್ದಂ ಬ್ರಹ್ಮ ಉಚ್ಚತೇ ಎಂಬುದನಱಿಯಾ ಸಿದ್ಧರಾಮಯ್ಯ .

೧೧೩

ಶಿವಲಿಂಗದ ಮಹಾತ್ಮೆಯನು ಶಿವಲಿಂಗದ ವರ್ಮವನು
ಶಿವಲಿಂಗದ ನಿಶ್ಚಯವನು ಅದಾರಯ್ಯ ಬಲ್ಲವರು ?
ಅದಾರಯ್ಯಾ ಅಱಿದವರು, ಶ್ರೀಗುರು ತೋಱಿ ಕೊಡದನ್ನಕ್ಕರ.
‘ಸರ್ವೈಶ್ವರ್ಯಸಂಪನ್ನಂ ಮಧ್ಯಧ್ರವ ತತ್ವಾಧಿಕಂ’ ಎಂದುದಾಗಿ
‘ಅಣೋರಣೀಯಾನ್ ಮಹತೋಮಹೀಯಾನ್’ ಎಂದುದಾಗಿ,
‘ಯತೋವಾಚೋ ನಿವರ್ತಂತೇ’ ಎಂದುದಾಗಿ
‘ಅತ್ಯತಿಷ್ಟದ್ದಶಾಂಗಲಮೆ’ಂದುದಾಗಿ,
ಈ ಪ್ರಕಾರದಲ್ಲಿ ವೇದಾಗಮಂಗಳು ಸಾರುತ್ತಿರಲು,
ಲಿಂಗವನು ಹರಿಬ್ರಹ್ಮಾದಿ ದೇವದಾನವ ಮಾನವರಿಗೆಯು ಅಱಿಯಬಾರದು.
‘ಚರಿತಮಭಿದತ್ತೇ ಶೃತಿರಪಿ’ ಎಂದುದಾಗಿ
ವೇದ ಪುರುಷರಿಗೆಯು ಅಱಿಯಬಾರದು.
ಅಱಿಯಬಾರದ ವಸ್ತುವ ರೂಪಿಸಲೆಂತೂಬಾರದೂ.
ರೂಪಿಸಬಾರದ ವಸ್ತುವ ಪೂಜಿಸಲೆಂತು ಬಹುದು ?
ಪೂಜೆಗಿಲ್ಲವಾಗಿ ಭಕ್ತಿಗಿಲ್ಲ; ಭಕ್ತಿಗಿಲ್ಲವಾಗಿ ಪ್ರಸಾದಕ್ಕಿಲ್ಲ;  ಪ್ರಸಾದಕ್ಕಿಲ್ಲವಾಗಿ ಮುಕ್ತಿಗಿಲ್ಲ;
ಮುಕ್ತಿಗಿಲ್ಲದೆ ದೇವದಾನವ ಮಾನವರೆಲ್ಲರು ಕೆಡುವರು ಕೆಡುವರು;
ಕೆಡದಂತೆ ಮಾಡಿ ರಕ್ಷಿಸಿದನು ಸದ್ಗುರು, ಮಹಾಗುರು, ಶ್ರೀಗುರು.
‘ನಗುರೋರಧಿಕಂ’ ಎಂದುದಾಗಿ ಮಹಾಗುರು ಶಾಂತಮೂರ್ತಿ
ಕೃಷ್ಣಮೂರ್ತಿ ಲಿಂಗ ಪ್ರತಿಷ್ಟೆಯಂ ಮಾಡಿದನು.
ಅದೆಂತೆನಲು ಕೇಳಿರೆ-
ಯತೋವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ
ನಾದಬಿಂದುಕಲಾತೀತಂ ಗುರುಣಾ ಲಿಂಗಮುದ್ಭವಂ || ಎಂದುದಾಗಿ,
ಸದ್ಗುರೋರ್ಲಿಂಗ ಭಾವ ಚ ಸರ್ವ ಬ್ರಹ್ಮಾಂಡವಾಸಿನಾಂ
ಸರ್ವಲೋಕಸ್ಯ ವಾಸಸ್ಯ ಮುಕ್ತಿಕ್ಷೇತ್ರ ಸುವಾಸಿನಾಂ || ಎಂದುದಾಗಿ,
ಸದ್ಗುರೋರ್ದೀಯತೇಮಂತ್ರಂ ಸದ್ಗುರುಸ್ಸರ್ವಕಾರಣಂ|| ಎಂದುದಾಗಿ,
ಸರ್ವಲೋಕಕ್ಕೆಯು ಸರ್ವರಿಗೆಯು ಲಿಂಗಪ್ರತಿಷ್ಠೇಯಂ ಮಾಡಿಕೊಟ್ಟನು.
ಅರೂಪೇ ಭಾವನೋ ನಾಸ್ತಿ ಯದೃಷ್ಟಂ ತದ್ವಿನಶ್ಯತಿ |
ದೃಶ್ಯಾದೃಶ್ಯ ಸ್ವರೂಪತ್ವಂ ತತ್ತಥೈವ ಸದಾಭ್ಯಸೇತ್ || ಎಂದುದಾಗಿ,
ನಿಃಕಲನ ರೂಪ ನಿರವಯ ಧ್ಯಾನಪೂಜೆಗಳೇನು ಅಲ್ಲ ;
ಸಕಲ ತತ್ವಸಾಮಾನ್ಯನೆಂದು ಸಕಲನಿಷ್ಕಲವನೊಂದಾಗಿ ಮಾಡಿದನು.
ಲಿಂಗಂ ತಾಪತ್ರಯ ಹರಂ ಲಿಂಗಂ ದಾರಿದ್ರ್ಯನಾಶನಂ|
ಲಿಂಗಂ ಪಾಪ ವಿನಾಶಂಚ ಲಿಂಗಂ ಸರ್ವತ್ರಸಾಧನಂ || ಎಂದುದಾಗಿ,
ಲಿಂಗವು ಪರಂಜ್ಯೀತಿ ಲಿಂಗವು ಪರಬ್ರಹ್ಮವೆಂದು ಲಿಂಗವನೆ ಪೂಜಿಸಿ,
ಭಕ್ತಿ ಪ್ರಸಾದ ಮುಕ್ತಿಯ ಪಡೆಯಲೆಂದು
ಮಹಾಘನ ಗುರು ಲಿಂಗ ಪ್ರತಿಷ್ಠೆಯ ಮಾಡಿ ತೊಱಿಕೊಟ್ಟನು.
ಅದೆಂತೆಂದಡೆ –
ಬ್ರಹ್ಮವಿಷ್ಣುಶ್ಚರುದ್ರಶ್ಚ ಈಶ್ವರಶ್ಚ ಸದಾಶಿವಃ |
ಮತ್ತಂ – ಗೌರೀಪತಿರುಮಾನಾಥೋ ಅಂಬಿಕಾ ಪಾರ್ವತೀ ಪತಿಃ |
ಗಂಗಾಪತಿರ್ಮಹಾದೇವೋ ಸತತಂ ಲಿಂಗಪೂಜಕಃ || ಎಂದುದಾಗಿ,
ಈ ಮಹಾಪುರುಷರಪ್ಪ ದೇವಗಣ ಪ್ರಮಥಗಣಂಗಳು
ವಿಷ್ಣ್ವಾದಿ ದೇವದಾನವ ಮಾನವಾದಿಗಳು ಮಹಾಲಿಂಗವನೆ ಧ್ಯಾನಿಸಿ, ಪೂಜಿಸಿ,
ಪರಮ ಸುಖಪರಿಣಾಮವ ಹಡೆದರೆಂದು ಮಾಡಿದನು    ಕೇವಲ ಸದ್ಭಕ್ತ ಜನಂಗಳ್ಗೆ,
ಅದೆಂತೆಂದಡೆ –
ಇಷ್ಟಂಪ್ರಾಣಾಂ ತಥಾ ಭಾವಂ ತ್ರಿಧಾ ಏಕಂ ವರಾನನೇ | ಎಂದುದಾಗಿ,
ಆ ಸದ್ಗುರು ಆ ಪರಶಿವನನು ತತ್ಪ್ರಾಣವನು ಏಕೀಭವಿಸಿ
ಸದ್ಭಾವದಿಂ ಲಿಂಗ ಪ್ರತಿಷ್ಠೆಯಂ ಮಾಡಿ,
ಲಿಂಗವಾಗಿ ಕರಸ್ಥಲದಲ್ಲಿ ಬಿಜಯಂಗೈದು,
ಅಂತರಂಗ ಬಹಿರಂಗ ಭರಿತನಾಗಿ ಪೂಜೆಗೊಳಲಿಂದು ಕರುಣಿಸಿದನು.
ಮತ್ತಂ – ‘ಏಕಮೂರ್ತಿಸ್ತ್ರೀಧಾ ಭೇದಃ’ ಎಂದುದಾಗಿ,
ಗುರುಲಿಂಗ ಜಂಗಮಲಿಂಗ ಪರಶಿವಲಿಂಗ ಒಂದೆ.
‘ದೇಶಿಕಾಚಾರಲಿಂಗಂ ಚ ತ್ರಿವಿಧಂ ಲಿಂಗಮುಚ್ಯತೇ’ | ಎಂದುದಾಗಿ,
ಲಿಂಗದ ವರ್ಮವನು ಲಿಂಗದ ಸ್ವರೂಪವನು ಲಿಂಗದ ನಿಶ್ಚಯವನು,
ಆದಿಯಲ್ಲು ಧ್ಯಾನಪೂಜೆಯ ಮಾಡಿದವರನು, ಭಕ್ತಿ ಪ್ರಸಾದ
ಮುಕ್ತಿಯ ಪಡೆದವರ
ವೇದ ಶಾಸ್ತ್ರ ಪುರಾಣಾಗಮಂಗಳು ಹೇಳುತ್ತಿವೆ,
ಶಿವನ ಶಾಸ್ತ್ರ ಪುರಾಣಾಗಮಂಗಳು ಹೇಳುತ್ತಿವೆ,
ಶಿವನ ವಾಕ್ಯಂಗಳಿಗಿವೆ ದಿಟ
ಮನವೆ ನಂಬು, ಕೆಡಬೇಡ ಕೆಡಬೇಡ,
ಮಹಾಸದ್ಭಕ್ತರ ನಂಬುವುದು ಶಿವಲಿಂಗಾರ್ಚನೆಯ ನಿರಂತರ ಮಾಡುವುದು.
ಇದು ನಿಶ್ಚಯವನು ಬಲ್ಲನಯ್ಯ
ಈ ಕ್ರೀಯಲ್ಲಿ ಲಿಂಗಜಂಗಮನಱಿತು ವಿಶ್ವಾಸಮಂ ಮಾಡಿ
ಕೇವಲ ಸದ್ಭಕ್ತಿ ಕ್ರೀಯನಱಿದು, ವರ್ಮವನಱಿದು,
ಸದ್ಭಾವದಿಂದ ಲಿಂಗಾರ್ಚನೆಯಂ ಮಾಡುವುದಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶೇಶ್ವರ.