೧೧೪

ಶ್ರೀಗುರುಸ್ವಾಮಿ ಕರುಣಿಸಿಕೊಟ್ಟ ಪ್ರಾಣಲಿಂಗವು, ಪಂಚಬ್ರಹ್ಮಮುಖವುಳ್ಳ ಲಿಂಗವು,
ವಸ್ತುವೆಂದಱಿದು, ಆ ಪಂಚಬ್ರಹ್ಮಮುಖ ಸಂಜ್ಞೆಯ ಭೇದವು ಹೇಗೆಂದಡೆ,
ಆವುದಾನೊಂದು ಶಿವಸಂಬಂಧವಾದ ಪರಮತೇಜೋಮಯ ಲಿಂಗವು
ತನ್ನ ಭೋಗಾದಿ ಕಾರಣ ಮೂರ್ತಿಳಿಗಂದುದಯವಾದ
ಬ್ರಹ್ಮಾದಿ ತೃಣಾಂತ್ಯವಾದ ದೇಹಿಗಳಿಂದವು
ವ್ಯೋಮಾದಿ ಭೂತಂಗಳಿಂದವು, ಇತ್ಯಾದಿ ಸಮಸ್ತ ತತ್ವಂಗಳಿಂದವು
ಮೇಲಣ ತತ್ವವಪ್ಪುದೆ ಕಾರಣವಾಗಿ, ಪರವೆಂಬ ಸಂಜ್ಞೆಯನುಳ್ಳದಾಗಿಹುದು;  
ಅನಂತಕೋಟಿ ಬ್ರಹ್ಮಾಂಡಗಳ ತನ್ನೊಳಗಡಗಿಸಿಕೊಂಡು,
ಸಮಸ್ತ ಜಗಜ್ಜನಕ್ಕೆ ತನೆ ಕಾರಣವಾಗಿ ಅವ್ಯಕ್ತ ಲಕ್ಷಿತವಾದ ನಿಮಿತ್ತಂ,
ಗೂಢವೆಂಬ ಸಂಜ್ಞೆಯನುಳ್ಳದಾಗಿಹುದು.
ತಾನು ಶೂನ್ಯ ಶಿವತತ್ವಭೇದವಾಗಿ ಅಯಃಕಾಂತದ ಸನ್ನಿಧಿಯಿಂದ
ಲೋಹ ಹೇಗೆ ಬ್ರಮಿಸುತ್ತದೊ ಹಾಗೆ,
ಬ್ರಹ್ಮಾದಿಗಳ ಹೃತ್ಕಮಲಮಧ್ಯದಲ್ಲಿ ನಿಂದು,
ತನ್ನ ನಿಜ ಚಿಚ್ಚಕ್ತಿಯಸನ್ನಿಧಿ ಮಾತ್ರದಿಂದ
ಅಹಮಾದಿಗಳಿಂ ವ್ಯೋಮಾದಿಭೂತಂಗಳಿಂದ,
ಸೃಷ್ಟಿಸುವದಕ್ಕೆ ತಾನೆ ಕಾರಣ ವಪ್ಪುದಱಿಂ,    ಶರೀರಸ್ಥವೆಂಬ
ಸಂಜ್ಞೆಯುಳ್ಳುದಗಿಹುದು.
ತನ್ನ ಸೃಷ್ಟಿಶಕ್ತಿಯಿಂದುದಯವಾದ ಸಮಸ್ತ ಸಂಸಾರಾದಿ ಪ್ರಪಂಚವು
ತನ್ನಿಂದವೆ ಕಾರಣವಪ್ಪುದಱಿಂ, ಅನಾದಿವತೆಂಬ
ಸಂಜ್ಞೆಯನುಳ್ಳುದಗಿಹುದು
ತನ್ನ ಮಾಯಾಶಕ್ತಿ ಯಿಂದುದಯವಾದ ಸ್ತ್ರೀಲಿಂಗ ಪುಲ್ಲಿಂಗ ನಪುಂಸಕ ಲಿಂಗವೆಂಬ
ತ್ರಿಲಕ್ಷಿತವಾದ ಸಮಸ್ತ ಪ್ರಪಂಚವು ವರ್ತಿಸುವದಕ್ಕೆ ತಾನೆ
ಸ್ಥಾನವಾದ ಕಾರಣ,
ಲಿಂಗ ಕ್ಷೇತ್ರವೆಂಬ ಸಂಜ್ಞೆಯನುಳ್ಳದಾಗಿಹುದು.
ಈ ಪ್ರಕಾರಾದಿ ಪರಬ್ರಹ್ಮಲಿಂಗವು ಪಂಚಮುಖ
ಸಂಜ್ಞೆಯನುಳ್ಳುದಾಗಿಹುದೆಂದಱಿವುದು;
ಅದೆಂತೆಂದಡೆ-
ಅದಕ್ಕೆ ವಾತುಲಾಗಮದಲ್ಲಿ-
ಪರಂ ಗೂಢಂ ಶರೀರಸ್ಥಂ ಲಿಂಗಕ್ಷೇತ್ರಮನಾದಿವತ್ |
ಯದಿದಮೈಶ್ವರಂತೇಜಸ್ತಲ್ಲಿಂಗಂ ಪಂಚಸಂಜ್ಞಕಂ ||
ಎಂದೆನಿಸುವ ಲಿಂಗವು ಮತ್ತಂ ವಾಶಿಷ್ಠದಲ್ಲಿ-
ಪಿಂಡಬ್ರಹ್ಮಾಂಡ ಯೋರೈಕ್ಯಂ ಲಿಂಗಸೂತ್ರಾತ್ಮನೋರಪಿ |
ಸ್ವಾವ್ಯಯಂಕೃತಯೋರೈಕ್ಯಂ ಕ್ಷೇತ್ರಜ್ಞ ಪರಮಾತ್ಮನೋಃ ||
ಎಂದೆನಿಸುವ ಲಿಂಗವು ಮತ್ತಂ ಶಿವರಹಸ್ಯದಲ್ಲಿ-
ಮಹಾಲಿಂಗಮಿದಂ ದೇವಿ ಮನೋತೀತಮಗೋಚರಂ |
ನಿರ್ನಾಮಂ ನಿರ್ಗುಣಂ ನಿತ್ಯಂ ನಿರಂಜನಂನಿರಾಮಯಂ ||
ಎಂದೆನಿಸುವ ಲಿಂಗವು ಮತ್ತಂ ಉತ್ತರ ವಾತುಲಯದಲ್ಲಿ-
ವೃತ್ತ ಆದ್ಯಂತಶೂನ್ಯಮಮಲಂ ಪರಿಪೂರ್ಣಮೇಕಂ |
ಸೂಕ್ಷ್ಮಂ ಪರಾತ್ಪರಮನಾಮಯಮಪ್ರಮೇಯಂ ||
ಭಾವೈಕ್ಯಗಮ್ಯಮಜಡಂ ಶಿವತತ್ವಮಾಹುಃ
ಚಿಚ್ಚಕ್ತಿಸಂಸ್ಫುರಣರೂಢಮಹಾತ್ಮಲಿಂಗಂ ||
ಮತ್ತಂ ಅಥರ್ವಣ ವೇದದಲ್ಲಿ-
ಶಿವಾತ್ ಪರಾತ್ಪರಂ ಸೂಕ್ಷ್ಮಂ ನಿತ್ಯಂ ಸರ್ವಗತಾವ್ಯಯಂ |
ಅನಿಂದಿತಮನೌಪಮ್ಯಂ ಅಪ್ರಮಾಣಮಗೋಚರಂ ||
ಶುದ್ಧತ್ವಾತ್ ಶಿವಮುದ್ದಿಷ್ಠಂ ಪರಾದೂರ್ಢ್ವ ಪರಾತ್ಪರಂ ||
ಎಂದೆನಿಸುವ ಲಿಂಗವು –
ಮತ್ತಂ ಸಾಮವೇದದಲ್ಲಿ –
ಅನಂತಮವ್ಯಕ್ತಮಚಿತ್ಯಮೇಕಂ |
ಹರಂತಿ ಪಾಶಾಂಬರಮಂಬರಾಂಗಂ ||
ಅಜಂ ಪುರಾಣಂ ಪ್ರಣಮಾಮಿ ದೇವಂ |
ಅಣೋರಣೀಯಾನ್ ಮಹತೋ ಮಹಿಯಾನ್ ||
ಎಂದೆನಿಸುವ ಲಿಂಗವು
ಮತ್ತಂ ಯಜುರ್ವೇದದಲ್ಲಿ-
ವಿಶ್ವತಶ್ಚಕ್ಷುರುತ ವಿಶ್ವತೋ ಮುಖಃ ವಿಶ್ವತೋ ಬಾಹುರುತ
ವಿಶ್ವತಃ ಪಾದಃ ಸಬಾಹುಭ್ಯಾಂ ದಮಯತಿ ಸಂಪದ
ತ್ರೈದ್ಯಾವಾಭೂಮೀ ಜನಯನ್ ದೇವ ಏಕ ಏವ ||
ಎಂದೆನಿಸುವ ಲಿಂಗವು
ಮತ್ತಂ ಗಾಯತ್ರಿ-
ಓಂ ಭೂಃ ಓಂ ಭುವಃ ಓಂ ಸ್ವಃ ಓಂ ಮಹಃ ಓಂ ಜನಃ
ಓಂ ತಪಃ ಓಂ ಸತ್ಯಂ ಓಂ ತತ್ ಸವಿತುರ್ವರೇಣ್ಯಂ
ಭರ್ಗೋದೇವಸ್ಯ ಧೀಮಹಿ ಧಿಯೋ ಯೋ ನಃ ಪ್ರಚೋದಯಾತ್ ||
ಎಂದೆನಿಸುವ ಲಿಂಗವು,
ಮತ್ತಂ ಸ್ಕಂದ ಪುರಾಣದಲ್ಲಿ-
ಲೀಯತೇ ಗಮ್ಯತೇ ಯತ್ರ ಯೇನ ಸರ್ವಂ ಚರಾಚರಂ
ತದೇತತ್ ಲಿಂಗಮಿತ್ಯುಕ್ತಂ ಲಿಂಗತತ್ವಪರಾಯಣೈಃ || ಎಂದೆನಿಸುವ ಲಿಂಗವು
ಮತ್ತಂ ಜ್ಞಾನವೈಭವ ಕಾಂದದಲ್ಲಿ-
ಲಿಕಾರಂ ಲಯ ಸಂಪ್ರೋಕ್ತಂ ಗಕಾರಂ ಸೃಷ್ಟಿರುಚ್ಚತೇ |
ಲಯನಾದ್ಗ್ ಮನಾಚ್ಚೈವ ಲಿಂಗಶಬ್ದಮಿಹೋಚ್ಚ್ಯತೇ ||
ಎಂದೆನಿಸುವ ಲಿಂಗವು
ಮತ್ತಂ ಮಹಿಮ್ನದಲ್ಲಿ-
‘ಚಕಿತಮಭಿದತ್ತೇಶ್ರುತಿರುಪಿ’ ಎಂದೆನಿಸುವ ಲಿಂಗವು
ಮತ್ತಂ ಶಿವಧರ್ಮೋತ್ತರದಲ್ಲಿ-
ನ ಜಾನಂತಿ ಪರಂ ಭಾವಂ ಯಸ್ಯ ಬ್ರಹ್ಮ ಸುರಾದಯಃ |
ಎಂದೆನಿಸುವ ಲಿಂಗವು,
ಮತ್ತಂ ಪುರುಷ ಸೂಕ್ತದಲ್ಲಿ-
‘ಓಂ ಅತ್ಯತಿಷ್ಠಶಾಂಗುಲಂ ’|
ಎಂದೆನಿಸುವ ಲಿಂಗವು,
ಮತ್ತಂ ಉಪನಿಷತ್ತಿನಲ್ಲಿ-
ಯತೋ ವಾಚೋ ನಿರ್ವರ್ತಂತೇ ಅಪ್ರಾಪ್ಯ ಮನಸಾ ಸಹ |
ಎಂದೆನಿಸುವ ಲಿಂಗವು,
ಮತ್ತಂ ಕೂರ್ಮ ಪುರಾಣದಲ್ಲಿ-
ವಾಚಾತೀತಂ ಮನೋತೀತಂ ಭಾವತೀತಂ ನಿರಂಜನಂ |
ಅವರ್ಣಮಕ್ಷರಂ ಬ್ರಹ್ಮ ಕಥಂ ಧ್ಯಾಯಂತಿ ಯೋಗಿನಃ |
ಎಂದೆನಿಸುವ ಲಿಂಗವು
ಮತ್ತಂ ಋಗ್ವೇದದಲ್ಲಿ-
ಅಯಂ ಮೇ ಹಸ್ತೋ ಭಗವಾನ್ ಅಯಂ ಮೇ ಭಗವತ್ತರಃ ||
ಅಯಂ ಮೇ ವಿಶ್ವಭೇಷಜೋಯಂ ವಿಶ್ವಾಭಿಮರ್ಶನಃ ||
ಅಯಂ ಮಾತಾ ಅಯಂ ಪಿತಾ ಅಯಂ ಜೀವಾತುರಾಗಮಾತ್
ಎಂದೆನಿಸುವ ಲಿಂಗವು
ಮತ್ತಂ ಉತ್ತರವಾತುಲದಲ್ಲಿ
ಸ ಬಾಹ್ಯಾಂಭ್ಯಂತರಃ ಸಾಕ್ಷಾತ್ ಲಿಂಗಜ್ಯೋತಿಃ ಪರಸ್ಪರಂ |
ತಿಲೇ ತೈಲಮಿವಾಭಾತಿ ಅರಣ್ಯಾಮಿವ ಪಾವಕಃ ||
ಕ್ಷೀರೇ ಸರ್ಪಿರಿವಾಭಾತಿ ಅರಣ್ಯಾಮಿವ ಪಾವಕಃ ||
ಏಕೋಯಂ ಪುರುಷೋ ವಿಶ್ವತೈಜಸಪ್ರಾಜ್ಞರೂಪಕಃ |
ಸದಾದೇಹೇಷು ಸಂಯುಕ್ತ ಉಪಾಸ್ತೇ ಲಿಂಗಮದ್ವಯಂ ||
ಎಂದೆನಿಸುವ ಲಿಂಗವು.
ಮತ್ತಂ ಶಿವರಹಸ್ಯದಲ್ಲಿ-
ಗುರುರೂಪಂ ಕಾಯಸಂಬಂಧಂ ಹರರೂಪಂ ಪ್ರಾಣಸಂಯುತಂ |
ಅಶರೀರಾತ್ಮ ಸಂಬಂಧಂ ಗುರುಲಿಂಗ ಚರಾನುಗ್ರಹಂ ||
ಎಂದೆನಿಸುವ ಲಿಂಗವು.
ಮತ್ತಂ ಲೈಂಗ್ಯ ಪುರಾಣದಲ್ಲಿ-
ಆವಯೋದ್ವ್ಯಷ್ಟಸಂಯೋಗಾತ್ ಜ್ಜಾನತೇಜ ಇಷ್ಟರೂಪಿಣಿ |
ಯ ಯೇವ ವೇದ ದೀಕ್ಷಸ್ಯಾ ಮಂತ್ರರೂಪೇಣ ತಾಂ ಶೃಣು ||
ಎಂದೆನಿಸುವ ಲಿಂಗವು.
ಮತ್ತಂ ಸೌರ ಪುರಾಣದಲ್ಲಿ-
ಹಸ್ತ ಮಸ್ತ ಕಸಂಯೋಗಾಚ್ಚಲಾದ್ವೇಧೇತಿ ಗೀಯತೇ |
ಗುರುಣೋದೀರಿತಾ ಕರ್ಣೇ ಯಾ ಸಾ ಮಂತ್ರೇತಿ ಕಥ್ಯತೇ ||
ಶಿಷ್ಯ ಪಾಣಿತಲೇ ದತ್ತಾ ಯಾ ದೀಕ್ಷಾ ಸಾ ಕ್ರಿಯಾ ಮತಾ ||
ಮತ್ತಂ ಕಾಳಿಕಾ ಕಾಂಡದಲ್ಲಿ-
ಅಂಗಂ ಚ ಲಿಂಗಂ ಚ ಮುಖಂ ಚ ಹಸ್ತಂ
ಶಕ್ತಿಶ್ಚ ಭಕ್ತಿಶ್ಚ ತಥಾರ್ಪಣಂ ಚ
ಆನಂದಮೇವ ಸ್ವಯಮರ್ಪಣಂ ಚ   ಪ್ರಸಾದರೂಪಂ ಭವತೇತಿ ತತ್ವಂ ||
ಎಂದೆನಿಸುವ ಲಿಂಗವು
ಮತ್ತಂ ವೀರಾಗೆಮದಲ್ಲಿ-
ಭಾವಸ್ಥಾನಾಂಗೇಷು ಪ್ರಾಣಲಿಂಗಾಂತರದ್ವಯಂ |
ಸನ್ನಿ ಧಾನಾತ್ಪರಂ ಲಿಂಗಂ ಸ್ಥಾಪ್ಯಂ ಚ ತ್ರೈವಧೀಮರಂ ||
ಎಂದೆನಿಸುವ ಲಿಂಗವು.
ಮತ್ತಂ ಶಿವರಹಸ್ಯದಲ್ಲಿ-
ಕರ್ಣದ್ವಾರೇ ಯಥಾ ವಾಕ್ಯಂ ಗುರುಣಾಲಿಂಗಮುದ್ಭವಂ |
ಇಷ್ಟಪ್ರಾಣಸ್ತಥಾ ಭಾವಂ ತ್ರಿಧಾಮೇಕಂ ವರಾನನೆ ||
ಎಂದೆನಿಸುವ ಲಿಂಗವು.
ಮತ್ತಂ ಶಿವರಹಸ್ಯದಲ್ಲಿ-
ಏಕಮೂರ್ತಿಃತ್ರಯೋಭಾಗಃ ಗುರುರ್ಲಿಂಗಂ ತು ಜಂಗಮಃ
ಜಂಗಮಶ್ಚ ಗುರುರ್ಲಿಂಗಂ ತ್ರಿವಿಧ ಲಿಂಗಮುಚ್ಯತೇ ||
ಎಂದೆನಿಸುವ ಲಿಂಗವು,
ಗುರುಲಿಂಗ ಜಂಗಮರೂಪಾಗಿ ಎನ್ನ ಕರಸ್ಥಲಕ್ಕೆ ಬಿಜಯಂಗೈದು
ಕರತಳಾಮಳಕವಾಗಿ ತೋಱಿತೈದಾನೆ.
ಅಹಾ ಎನ್ನ ಪುಣ್ಯವೆ, ಅಹಾ ಎನ್ನ ಭಾಗ್ಯವೆ,
ಅಹಾ ಎನ್ನ ಸತ್ಯವೆ, ಅಹಾ ಎನ್ನ ನಿತ್ಯವೆ;
ಶಿವಶಿವಾ ಮಹದೇವ ಮಹದೇವನೆನಬಲ್ಲ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.              

೧೧೫

ಅಂಗಸ್ಥಲ ಮೂವತ್ತಾಱು ಕಲ್ಪನಾಡಿಭೇದಮಂ ಬೇದಿಸುತ್ತ
ವಾಕು ಪಾಣಿ ಪಾದ ಪಾಯು ದುಹ್ಯವೆಂಬ
ಕರ್ಮೇಂದ್ರಿಯಂಗಳ ವರ್ಮದಲ್ಲಿರಿಸಿ,
ಶಬ್ದ ಸ್ಪರ್ಶ ರೂಪು ರಸ ಗಂಧವೆಂಬ ಪಂಚೇಂದ್ರಿಯಂಗಳ ಪೂರ್ವ-
ನಾಮ ವಿಮೋಚನಮಂ ಮಾಡುವ ಪರಿ,
ಶ್ರೋತ್ರ ತ್ವಕ್ಕು ನೇತ್ರ ಜಿಹ್ವೆ ಘಾಣವೆಂಬ ಪಂಚೇಂದ್ರಿಯಂಗಳ
ಬಾಹ್ಯಾಭ್ಯಂತರವನಱಿವ ಪರಿ,
ಆದ್ಯಕ್ಷರವೊಂದಾದಡೆ ಅಂತ್ಯಕ್ಷರ ಶೂನ್ಯ,
ಅದಕ್ಕೆ ಶಾಸ್ತ್ರಕ್ರಮದೊಳಗಾಡುವ ಭೇದಖಂಡದಿಂದ ಲಿಂಗ ಪ್ರಸಾದವಂ ಛೇದಿಸಿ,
ಆ ಲಿಂಗವಂ ಭೂಮಿಯ ಬಿಡಿಸುವುದು;
ಕಾಳಾವಿಧಸ್ಥಾನಕ್ಕೆ ತಹಲ್ಲಿ ಸರ್ಪನು ಹಲವ ರುಚಿಸುವುದು;
ಆ ರುಚಿಸುವ ಸರ್ಪನನು ತನ್ನಿಚ್ಚೆಗೆ ಹರಿಯಲೀಯದೆ,
ಅಱಿವೆ ಪ್ರಾಣವಾಗಿ ಆ ಅಱಿವಿನಿಂ ದೃಡವಿಡಿದು ಹರಿವ  ಹತ್ತುವ ಪರಿಯನೊಡೆದು,
ಮೂವತ್ತೆರಡು ಜವೆಯ ತೊಱೆದಲ್ಲಿ ತೋಱುವ
ನಾಡಿ ಮಧ್ಯಮಸ್ವರ, ಮಹಿತಸ್ವರ, ಭೂಸ್ವರವೆಂಬ ಮಧ್ಯನಾಡಿ
ಮಥನಂಗಳಂ ಮಥಿಸುವುದು,
ಅಂಗಕ್ಕೆ ಲಿಂಗ ಬಂದಡೆ ಅಂಗದಾಪ್ಯಾಯನವನಱಿವುದು,
ಕರಗುರುವಿನಿಂದ ಕರಣಾದಿಗಳು ಶುದ್ಧವಹವು;
ಆದಿ ಪ್ರಭೆಯ ಕಿರಣಂಗಳು ಶುದ್ಧವಹವು, ಕರಣಂಗಳ ಆಱರಡಗುವುದು,
ಕಾದ್ರಮಾ ಕಾದು ಕಾವುದು;
ಆ ಲಿಂಗವನು ಉದಯದಲ್ಲಿ ನಾಲ್ಕು ಘಳಿಗೆ ತನಕ ಲಿಂಗಾರ್ಚನೆಯಂ ಮಾಡುವುದು;
ಆ ಲಿಂಗವನು ವಾಮಕ್ಕೆ, ಆ ಲಿಂಗವನು ದಕ್ಷಿಣಕ್ಕೆ, ಆ ಲಿಂಗವನು ಪೂರ್ವಕ್ಕೆ,
ಆ ಲಿಂಗವನು ಪಶ್ಚಿಮಕ್ಕೆ, ಆ ಲಿಂಗವನು ಅಧಮಕ್ಕೆ,
ಆ ಲಿಂಗವನು ಊರ್ಧ್ವಕ್ಕೆ, ಆ ಲಿಂಗವನು ಜಡಿವುದು;
ಪ್ರಭಾಲಿಂಗವೆಂಬ ಭಾವವನು ಭಾವಿಸಿ, ವಾತಪಿತ್ತ ಶ್ಲೇಷ್ಮವೆಂಬ ತ್ರಿಧಾತುವನಱಿವುದು;
ವಾತೋದ್ರೇಕವಾದಡೆ ಶೈತ್ಯವಂ ಮಾಡಿ ಕಾವುದು;
ಶ್ಲೇಷ್ಮೊದ್ರೇಕವಾದಡೆ ಬಿಗಿದು ಲಿಂಗಾರ್ಚನೆಯಂ ಮಾಡುವುದು.
ವಾತ ಪ್ರಕೃತಿಯಲ್ಲಿ ಲಿಂಗದ ಮೊದಲು
ದೊಡ್ಡ ತುದಿ ಸಣ್ಣವಾಗಿಹುದು;
ಪಿತ್ತ ಪ್ರಕೃತಿಯಲ್ಲಿ ತುದಿ ಮೊದಲು ಸಣ್ಣವಾಗಿ ನಡು ದೊಡ್ಡದಾಗಿಹುದು.
ಶ್ಲೇಷ್ಮ ಪ್ರಕೃತಿಯಲ್ಲಿ ಲಿಂಗ ತುದಿ ಮೊದಲೊಂದಾಗಿ
ದೊಡ್ಡದಾಗಿಹುದು.
ಇಂತು ತ್ರಿಧಾತುವನ್ನಱಿದು ಲಿಂಗಾರ್ಚನೆಯಂ ಮಾಡುವುದು
ಇದು ವರ್ತನಾಕ್ರಮ.
ಆದಿಕ್ರಮ, ಅಂತ್ಯಕ್ರಮ, ಅನ್ವಯ ಕ್ರಮ, ನಿನಾದಾದಿಕ್ರಮವೆಂಬ
ಭೇದಾದಿ ಭೇದಂಗಳಂ ಭೇದಿಸುವುದು.
ಶಾಸ್ತ್ರಸಂಧಿಯಲ್ಲಿ ಬಾಹ್ಯಂಗಳನಱುವುದು.
ಕ್ರಮಾದಿಕ್ರಮಂಗಳಂ ತಿಳಿವುದು.
ವಿನಾದದಲ್ಲಿ ಚಿತ್ರ ಪತ್ರಂಗಳನಱಿವುದು.
ಕರಣಂಗಳಂ ಶುದ್ಧಮಂ ಮಾಡುವುದು.
ಹಿರಿದು ನಡೆಯದೆ, ಹಿರಿದು ನುಡಿಯದೆ,
ಹಿರಿದುಂ ದಿವಾರಾತ್ರಿಯಲ್ಲಿ ಶೀತೋಷ್ಣಾದಿಗಳಂ ಮುಟ್ಟಿಸಿಕೊಳ್ಳದೆ,
ಮಹಾಮರ್ಗವ ತಿಳಿವುದು. ಇದಿಱಿಂಗೆ ತನ್ನ ಮಾರ್ಗಮಂ ತೋಱದೆ
ಮಹಾಮಾರ್ಗದಲ್ಲಿ ಮಾರ್ಗಿಯಾಗಿ
ಇದರ ಭೇದ ಸಂಬಂಧದಲ್ಲಿ ಉಚ್ಛ್ವಾಸ ನಿಶ್ವಾಸಕ್ರಮವನು ಓದಿ
ಭರತಕ್ರಮವನು ಅನುಕ್ರಮಿಸಿ,
ಮೂಲಕಸ್ಥಾನದಲ್ಲಿ ಹೊರೆಹೊಗದೆ ಇಕ್ಕುವ ಚಿತ್ರಕ್ರಮದಲ್ಲಿ ಹೊರೆಹೊಗದೆ,
ಇಂತಿವನಱಿತು ಲಿಂಗಾರ್ಚನೆಯಂ ಮಾಡುವ ಪ್ರಕರಣ.
ಬ್ರಹ್ಮೀ ಮಹಾಮುಹೂರ್ತದಲ್ಲಿ ಎದ್ದು, ಅಂಗ ಪ್ರಕ್ಷಾಲನಮಂ ಮಾಡಿ,
ಕಂಬುವಂ ವಿಸರ್ಜಿಸಿ, ಶಿಶು ಪ್ರಕಾರವಂ ಮಾಡಿ;
ಶಮೆಯೆಂಬ ಸಾಮಾಧಿಯಲ್ಲಿ ಕುಳ್ಳಿರ್ದು; ದಮೆಯೆಂಬ ಪೀಠವನಿಕ್ಕಿ,
ಶಾಂತಿಯೆಂಬ ನಿಜವಸ್ತ್ರವಂ ತಂದು, ಆದಿ ಶಿಶುವಿಂಗೆ ಅನುಬಂಧವಂ ಮಾಡಿ,
ತಲೆವಲದಲ್ಲಿ ಶಿಶುವಂ ತೆಗೆದು, ಕರವೆಂಬ ತೊಟ್ಟಿಲಲ್ಲಿಕ್ಕಿ ಜೋಗೈಸಿ,
ಕೈಗೆ ಬಾಯಿಗೆ ಬಂದಿತ್ತು ನೋಡಾ ! ಬಾಯಿಗೆ ಬಂದಲ್ಲಿ ಭಾವಶುದ್ಧವಾಯಿತ್ತು ;
ಕೈಗೆ ಬಂದಲ್ಲಿ ಆದಿ ಶಿಶುವಾಯಿತ್ತು;  ಭಾವಲಿಂಗ ಜೀವಕರವಾಯವೆಂಬ ಪಟ್ಟಣದಲ್ಲಿ,
ಸೀಮೆ ಸಂಬಂಧವಂ ಮಿಱಿ, ಮಂತ್ರಮಯವಯಿತ್ತು ನೋಡಾ !
ಮಂತ್ರ ಲಿಂಗವೊ ? ಅಮಂತ್ರ ಲಿಂಗವೊ ಹೇಳಾ !
ಮಂತ್ರದಿಂ ವಸ್ತ್ರ, ಅಮಂತ್ರದಿಂ ಹಸ್ತ;
ಇಂತು ಮಂತ್ರ ಅಮಂತ್ರಂಗಳೆರಡನು ಕೂಡಿ ರಕ್ಷಿಸುತ್ತಿದ್ದಿತ್ತು ನೋಡಾ !
ಶಿರಸ್ಸೆಂಬ ಧೇನು, ಲಿಂಗವೆಂಬ ಮೊಲೆಯ, ಕರವೆಂಬ ವತ್ಸ ತೊಱೆಯಿತ್ತು ನೋಡಾ !
ಮಂತ್ರವೆಂಬ ಅಮೃತದ ಕಱೆಯಿತ್ತು ನೋಡಾ !
ಬಸವಯ್ಯ ನೋಡಾ ಊಡದ ಹಸು, ಉಣದ ಕಱು, ಆರೂಢದ ಭಾಂಡ,
ಅಂಗದಲ್ಲಿ ಹುಟ್ಟಿದ ಅಮೃತಜಲವನು ಲಿಂಗಕ್ಕೆ ಕೊಡದೆ,
ಧರೆಯಲ್ಲಿ ಬಿಟ್ಟಡೆ ಎಂತೊ ಲಿಂಗೋದಯವಹುದು ?
ಎಂತೊ ಪಾದೋದಕ ಪ್ರಸಾದ ಜೀವಿಯಹನು ?
ಜೀವ ಪರಮರ ಐಕ್ಯ ಭಾವನವಱೆದಡೆ
ಲಿಂಗೋದಯದಲಲ್ಲದೆ ಅಱೆಯಬಾರದು.
ನಿಜ ಭಾವ, ನಿಜ ಭಕ್ತಿ, ನಿಜಸಮರಸವಾದಲ್ಲದೆ ಲಿಂಗೋದಯವಾಗದು.
ನಿಜ ಮರ್ತ್ಯದಲ್ಲಿ ಜನಿಸಿದ ಅಂಗಲಿಂಗಿಗಳೆಲ್ಲರು
ಪ್ರಾಣಲಿಂಗ ಸಂಬಂಧವನಱಿಯರು.
ಅಂತು ಅಂಗಲಿಂಗಿಗಳು ಪ್ರಾಣಲಿಂಗಿಗಳಿಗೆ ಭವಿಗಳು
ಅಂತು ಪ್ರಾಣಲಿಂಗಿಗಳು ಅಂಗಲಿಂಗಿಗಳನೊಲ್ಲರು.
ಅದು ಹೇಗೆಂದಡೆ –
ಅವರಿಗೆ ಪ್ರಸಾದ ಪ್ರಾಣಲಿಂಗವಿಲ್ಲವಾಗಿ,
ನಾಮ ಗೋಪ್ಯಮಂತ್ರ ಗೋಪ್ಯಂಗಳಲ್ಲಿ ಆ ಮಹಾಮಾರ್ಗವನಱಿಯರಾಗಿ
ಅಂಗಲಿಂಗಿಗಳಲ್ಲದೆ ಪ್ರಾಣಲಿಂಗಿಗಳಲ್ಲ !
ಪ್ರಸಾದಹೀನಸ್ಯಾಂಗೇತು ಲಿಂಗಂ ನಾಸ್ತಿ ಪುನಃ ಪುನಃ || ಎಂಬುದಾಗಿ
ಇಂತು ಲಿಂಗಾರ್ಚನೆಯಂ ಮಾಡುವುದು.
ಲಿಂಗಪಾದೋದಕ ಪ್ರಸಾದವನು ಬ್ರಹ್ಮ್ಯಾಂತರಂಗದಲ್ಲಿ ವಿರಳವಿಲ್ಲದೆ,
ಅವಿರಳ ಭಾವ ಸಂಬಂಧದಲ್ಲಿ ಧರಿಸುವುದು.   ಧರಿಸುವಾತ ಲಿಂಗವಂತನು,
ಅಂಗಲಿಂಗಿ, ಪ್ರಾಣಲಿಂಗಿ, ಪ್ರಸಾದಲಿಂಗಿ, ಮುಳುಪಯು ರಲ್ಲಿ
ನಿಜನಿಂದ ಮಾರ್ಗವಿರಳ ಪಂಚಕನಾಡಿನಲ್ಲಿ ಹೊರೆಹೊಗದೆ,
ನಿರ್ನಾದಮಂ ಆಶ್ರೈಸುವುದು,
ಇದು ಮಹಾಮಾರ್ಗ; ಪುರಾತನ ಪೂರ್ವ;
ಅಪರದಲ್ಲಿ ಅಂತಾ ಲಿಂಗವನಱಿ; ಆದಿಯಲ್ಲಿ ಅನಾಹತ ಲಿಂಗವನಱಿ;
ಲಿಂಗವಾಱು, ಅಂಗಾಂಗ ಲಿಂಗ ಸರ್ವಾಂಗಲಿಂಗ, ಲಿಂಗ ಸನುಮರವಾಯಿತ್ತು;
ಮಹಾವೃತಿಗೆ ಅನುಮತವಾಯಿತ್ತು ನಿರ್ವಿಕಲ್ಪ;
ಪರಮಪದಕ್ಕೆ ತಾನೆ ಆಯಿತ್ತು
ಇನ್ನು ಮಾನಸ ವಾಚಕ ಕಾಯಕದಲ್ಲಿ ಅವಿತಥವಿಲ್ಲದೆ,
ಲಿಂಗಾರ್ಚನೆಯಂ ಮಾಡುವರ ಎನಗೆ ತೋಱಿ ಬದುಕಿಸಾ
ಕೂಡಲಚನ್ನಸಂಗಮದೇವಯ್ಯ.

೧೧೬

ಅಂಗಯ್ಯ ಲಿಂಗವ ಕಂಗಳು ನೋಡಿ ಮನ ಹಾರೈಸಿದಲ್ಲಿ
ಅಂಗಳದಲ್ಲಿಯ ಇಂದ್ರಿಯಂಗಳೆಲ್ಲವು ಲಿಂಗೇಂದ್ರಿಯಂಗಳಾದವು.
ಅಂಜದಿರು ಮನವೆ ಲಿಂಗವು ನಿನಗೆ ದೂರವೆಂದು.
ಮನೋಮಧ್ಯದಲ್ಲಿಪ್ಪನು, ಅಂಗದ ಕಂಗೊಳೊಳಿಪ್ಪನು  ಪ್ರಾಣದ ಭಾವದಲ್ಲಿಪ್ಪ;
ಅಂಗ ಪ್ರಾಣ ಭಾವ ಸರ್ವಾಂಗ ಲಿಂಗವಾದ ಬಳಿಕ
ಲಿಂಗಮಧ್ಯೆ ಪ್ರಾಣವು; ಪ್ರಾಣಮಧ್ಯೆ ಲಿಂಗವು; ಉತ್ಪತ್ತಿ ಸ್ಥಿತಿಲಯಂಗಳಿಲ್ಲವಾಗಿ;
ಲಿಂಗದಿಂದ ಜನಿಸಿ ಲಿಂಗೇಂದ್ರಿಯ ಲಿಂಗಜ್ಞಾನದಲ್ಲಿ ವರ್ತಿಸಿ ದ್ವೈತಾದ್ವೈತವಿಲ್ಲವಾಗಿ,
ಬಂದುದೆ ಲಿಂಗಲೀಲೆ, ಇದ್ದುದೆ ಲಿಂಗದಾನಂದವು,
ಮನೋಲಯವೆ ಲಿಂಗದ ನಿರವಯವು,
ಇದು ಸತ್ಯ ಶಿವಬಲ್ಲ ಶಿವನಾಣೆ ಉಱೆಲಿಂಗ ಪೆದ್ದಿಪ್ರಿಯ ವಿಶ್ವೇಶ್ವರ.

೧೧೭

ಲಿಂಗದೊಳಗಿಂದ ಉದಯಿಸಿ ಅಂಗವಿಡಿದಿಪ್ಪವರ
ಇಂಗಿತವನೇನ ಬೆಸಗೊಂಬಿರಯ್ಯ.
ಅವರ ನಡೆಯೆ ಆಗಮ, ಅವರ ನುಡಿಯೆ ಪರಮಾಮೃತ,
ಅವರ ಲೋಕದ ಮಾನವರೆಂದೆನಬಹುದೆ ಅಯ್ಯ ?
ಅದೆಂತೆಂದಡೆ,
ವೃಕ್ಷಾದ್ಧವಂತಿ ಬೀಜಾನಿ ತದ್ವೃಕ್ಷೋ ಲೀಯತೇಪುನಃ |
ರುದ್ರಲೋಕಂ ಪರಿತ್ಯಕ್ತ್ವಾ ಶಿವಲೋಕೇ ಭವಿಷ್ಯತಿ || ಎಂಬುದಾಗಿ,
ಅಂಕೋಲಿಯ ಬೀಜ ತರುವನಪ್ಪುವಂತೆ,
ಅಪ್ಪಿದರು ಕೂಡಲಚನ್ನಸಂಗಯ್ಯ ನಿಮ್ಮ ಶರಣರು !

೧೧೮

ಲಿಂಗದಿಂದ ಶರಣರುದಯವಾಗದಿದ್ದಡೆ
ಬಸವ ಚನ್ನಬಸವ ಪ್ರಭು ದೇವರು ಮುಖ್ಯವಾದ
ಏಳುನೂಱೆಪ್ಪತ್ತು ಅಮರಗಣಂಗಳೆಲ್ಲರು
ಕ್ಷೀರಕ್ಷೀರವ ಬೆರಸಿದಂತೆ, ನೀರು ನೀರ ರೆರಸಿದಂತೆ,
ಘೃತ ಘೃತವ ಅಬೆರಸಿದಂತೆ, ಬಯಲು ಬಯಲ ಬೆರೆಸಿದಂತೆ,
ಲಿಂಗ ಲಿಂಗವ ಬೆರಸಿ ಮಹಾಲಿಂಗವೆಯಾದರು ನೋಡಾ !
ಲಿಂಗದಿಂದ ಶರಣರುದಯವಾಗದಿದ್ದಡೆ
ನೀಲಲೋಚನೆಯಮ್ಮ ಲಿಂಗದೊಳಗೆ ತನ್ನಂಗವನೇಕೀಕರಿಸಿ,
ಕೇವಲ ಪರಂಜ್ಯೋತಿರ್ಲಿಂಗದಲ್ಲಿ ನಿರವಯವಾದಳು ನೋಡಾ !
ಇಂತಪ್ಪ ದೃಶ್ಯವ ಕಂಡು ನಂಬದಿಪ್ಪುದು ಕರ್ಮದ ಫಲ
ಅದು ಇವರ ಗುಣವೆ ? ಶಿವನ ಮಾಯಾ ಪ್ರಪಂಚಿನ ಗುಣ ನೋಡಾ
ಈ ಪ್ರಪಂಚು ಜೀವಿಗಳು ಅಲ್ಲಾ ಎಂಬುದು, ಅಹುದೆಂಬುದು
ಪ್ರಮಾಣವಲ್ಲ ನೋಡಾ !
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೆ !

೧೧೯

ಪಂಚಶಕ್ತಿಯನು, ಪಂಚಸಾದಾಖ್ಯವನು, ಪಂಚ ಕಲೆಗಳನು,
ಪಂಚಾಕ್ಷರಂಗಳನು, ಪಂಚಭೂತಾತ್ಮವನು,
ತನ್ನಲ್ಲಿ ಗರ್ಬೀಸಿಕರಿಸಿಕೊಂಡು, ತಾನು ಚಿದ್ಭ್ರಹ್ಮಾಂಡಾತ್ಮಕನಾಗಿ,
ಚಿನ್ಮಯನಾಗಿ, ಚಿದ್ರೂಪನಾಗಿ, ಚಿತ್ಪ್ರಕಾಶನಾಗಿ, ಚಿದಾನಂದನಾಗಿ,
ಸುಖ ದುಃಖ ಭಯ ಮೋಹಂಗಳ ಹೊದ್ದದೆ,
ಸರ್ವವ್ಯಾಪಕನಾಗಿ, ಸರ್ವ ಚೈತನ್ಯಮಯನಾಗಿಪ್ಪ,
ಪರಂಜ್ಯೋತಿರ್ಲಿಂಗವು ಎನ್ನ ಪ್ರಾಣಲಿಂಗವಯ್ಯ !
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ !

೧೨೦

ಚಿತ್ತದ ಕಳೆಯಲ್ಲಿ ಸದ್ವಿವೇಕವೆಂಬ ಲಿಂಗಕಳೆ ಉದಯಿಸಿ,
ಮಹಾಜ್ಞಾನ ಪ್ರಕಾಶವಾಗಿ ಮೆಱೆವುತ್ತಿಪ್ಪ ಲಿಂಗವು,
ಶರಣನ ದೇಹವೆಂಬ ಭೂಮಿಯ ಮಱೆಯಲ್ಲಿ   ಅಡಗಿಪ್ಪುದು ನೋಡಾ !
ನೆಲದ ಮಱೆಯ ನಿಧಾನದಂತೆ,
ಷಡಾಧಾರದಲ್ಲಿ ಷಡಾದಿಯಾಗಿ ಷಡಾತ್ಮಕವಾಗಿಪ್ಪುದು ನೋಡಾ !
ಪಂಚೇಂದ್ರಿಯ ದ್ವಾರಂಗಳಲ್ಲಿ ಪಂಚವದನನಾಗಿ
ಪ್ರಭಾವಿಸುತಿಪ್ಪುದು ನೋಡಾ !
ದಶವಾಯುಗಳ ಕೂಡಿ, ದೆಶೆದೆಶೆಗೆ ನಡೆವುತ್ತ ವಿಶ್ವಚೈತನ್ಯವಾಗಿಪ್ಪುದು ನೋಡಾ !
ಸರ್ವಾಂಗದಲ್ಲಿಯು ತನ್ಮಯನಾಗಿಪ್ಪುದು ನೋಡಾ !
ಮನದಲ್ಲಿ ಮತಿಯ ಕಣಜ್, ಮಾತಿನಲ್ಲಿ ಜ್ಯೋತಿರ್ಲಿಂಗವಾಗಿ,
ಎನ್ನ ಬ್ರಹ್ಮರಂಧ್ರದಲ್ಲಿ ತೊಳಗಿ ಬೆಳಗುವ ಪರಂಜ್ಯೋತಿ ನೀನೆ ಕಾಣಾ,
ಮಹಾಲಿಂಗ ಗುರು ಶಿವಸಿದ್ಧೇಶ್ವರ ಪ್ರಭುವೆ !

೧೨೧

|| ತ್ರಿವಿಧಿ ||

ಕಾಯದಾ ಕರದಲಿ ಕಾಯಲಿಂಗವನಿತ್ತು
ಕಾಯಲಿಂಗವು ಪ್ರಾಣವೇಧಿಸುತ್ತ
ಈ ತಱದ ಮೂತೆಱದ ನಾಲ್ತೆಱದ ಭೇದವನು
ಚಿತ್ತಶುದ್ಧದಿಯಱೆದೆ ಯೋಗಿನಾಥ.

೧೨೨

ಮಂಗಳಾಂಗದ ದೀಪ್ತಿ ಕಂಗಳಲ್ಲಿ ಹೊತ್ತಿಸಲು  ಹಿಂಗದೆ ಕಂಡೆನಾ ಲಿಂಗತ್ರಯವ
ಆದಿಯಾಧಾರದಲಿ ಭೇದಿಸುವ ಭೇದವನು
ಆನಂದದಿಂ ಕಂಡೆ ಯೋಗಿನಾಥ.

೧೨೩

ಶರಣಾಗು ಲಿಂಗಯ್ಯ ಶರಣಾಗು ಸಂಗಯ್ಯ
ಶರಣಗು ಎನ್ನ ಪ್ರಾಣೇಶ ಗುರುವೆ
ಶರಣಾಗು ನಿರ್ಮಲಜ್ಞಾನ ಸಂಬಂಧನೆ
ಶರಣಾನು ನಿಮ್ಮಡಿಗೆ  ಯೋಗಿನಾಥ.

೧೨೪

ಲಿಂಗವೆನ್ನಯ ತಂದೆ ಲಿಂಗವೆನ್ನಯ ತಾಯಿ
ಲಿಂಗವೆನ್ನಯ ಪರಮ ಜ್ಞಾನಮೂರ್ತಿ
ಲಿಂಗ ಶ್ರೀಗುರುಮೂರ್ತಿ ಪಾದಕ್ಕೆ ಶರಣೆಂದು
ಲಿಂಗ ನೀ ನಾನಾದೆ ಯೋಗಿನಾಥ.