|| ವೃತ್ತ ||

ಲಿಂಗದೊಳಿರ್ದು ಲಿಂಗವನೆ ತಾಳ್ದು ನಿರಂತರ ಲಿಂಗಪೂಜೆಯಂ
ಲಿಂಗ ಮನೊಲ್ದು ವಿಸ್ತರಿಸಿ ಲಿಂಗಕ್ಕೆ ಲಿಂಗಮನರ್ಪಿಸುತ್ತಮಾ
ಲಿಂಗಪದಾರ್ಥಮಂ ಸವಿದು ಲಿಂಗಸುಖಾಸ್ಪದನಾಗಿ ರಾಜಿಪಂ
ಲಿಂಗನಿಜೈಕ್ಯನಯ್ಯ ಪರಮಪ್ರಭುವೇ ಮಹದೈಪುರೀಶ್ವರಾ.    

೧                     

|| ವಚನ ||

ಲಿಕಾರವೆ ಶೂನ್ಯ, ಬಿಂದುವೆ ಲೀಲೆ, ಗಕಾರವೆ ಚಿತ್ತು
ಈ ತ್ರಿವಿಧದೊಳಗದೆ ಲಿಂಗವೆಂಬ ಸಕೀಲ;
ಅದರ ಸಂಚಾರವನಾವಬಲ್ಲ ಆತನೆ ಲಿಂಗಸಂಗಿ
ಕೂಡಲಸಂಗಮದೇವಾ.

ಲಿಕಾರವೆ ಶೂನ್ಯ, ಬಿಂದುವೆ ಲೀಲೆ, ಗಕಾರವೆ ಚಿತ್ತು
ಆ ತ್ರಿವಿಧದೊಳಗದೆ ಲಿಂಗವೆಂಬ ಸಕೀಲ
ಅದರ ಸಂಚವನಾವಾತ ಬಲ್ಲನಾತನೆ ಲಿಂಗಸಂಗಿ
ಅದೆಂತೆದಡೆ:
ಲಿಕಾರಂ ಲಯ ಸಂಪ್ರೋಕ್ತಂ ಗಕಾರಂ ಸೃಷ್ತಿರುಚ್ಯತೇ
ಲಿಕಾರೊ ಲಯ ಎತ್ಯುಕ್ತೋ ಗಕಾರೋ ಸೃಷ್ಟಿರುಚ್ಯತೇ
ಲಯನಂ ಗಮನಂ ಚೈವ   ಲಿಂಗಶಬ್ದ ಇಹೋಚ್ಯತೇ
ಎಂದುದಾಗಿ ಕೂಡಲ ಚನ್ನಸಂಗಮದೇವಾ,
ಲಿಂಗಾನುಭಾವಿಗಳ ಶ್ರೀಚರಣಕ್ಕೆ ನಮೋ ನಮೋ ಎಂಬೆನು.

ಜ್ಞಾತೃವೆ ಅಱಿಸುವದು, ಜ್ಞಾನವೆ ಅಱುವುದು, ಜ್ಞೇಯವೆ ನಿಶ್ಚೈಸುವದು
ಇಂತೀ ಜ್ಞಾತೃಅ ಜ್ಞಾನ ಜ್ಞೇಯವೆಂಬ ತ್ರಿವಿಧಸಾಧನದಿಂದ
ಲಿಂಗವನಱಿಸಿ, ಲಿಂಗವನಱಿದು, ಲಿಂಗವ ಬೆರೆದು ಲಿಂಗವಾದ ಮತ್ತೆ
ಜ್ಞಾತೃ ಜ್ಞಾನ ಜ್ಞೇಯವೆಂಬ ತ್ರಿವಿಧ ಭ್ರಾಂತು ಸೂತಕ ಹೋಯಿತ್ತು
ನಿಜವಾಯಿತ್ತು ಕಾಣಾ, ಗುಹೇಶ್ವರಾ.


ಲಿಂಗೋದ್ಭವದೈವತ್ತೆರಡಕ್ಷರಂಗಳಲ್ಲಿ
ವರ್ತುಳ, ಗೋಮುಖ, ಗೋಳಕಾಕಾರಕ್ಕೆ ಸಂಬಂಧಿಸುವಲ್ಲಿ
ಅಕಾರ ವರ್ತುಳಾಕಾರಕ್ಕೆ, ಉಕಾರ ಗೋಮುಖಕ್ಕೆ,
ಮಕಾರ ಗೋಳಕಾಕಾರಕ್ಕೆ.
ಇಂತೀ ಆದಿಯಾಧಾರ ಆತ್ಮ ಬೀಜ.
ಓಂಕಾರದಿಂದ ಉದ್ಭವವಾದ ಅಕ್ಷರಾತ್ಮಕವಸ್ತುವಱಿತು,
ಬ್ರಹ್ಮ, ವರ್ತುಳದಲ್ಲಿ ಅಡಗಿ,
ವಿಷ್ಣು ಗೋಮುಖದಲ್ಲಿ ನಿಂದು, ರುದ್ರಗೋಳಕಾಕಾರಕ್ಕೆ ಸಂಬಂಧಿಯಾಗಿ,
ಉತ್ಪತ್ತಿ ಸ್ಥಿತಿ ಲಯಂಗಳ ಲಕ್ಷಿಸುತ್ತ   ಜಗದ ಹಿತಾರ್ಥವಾಗಿ
ಸ್ವಯಂಭುವುಮಾಪತಿಯಾದೆ
ಚನ್ನಬಸವಣ್ಣಪ್ರಿಯ ಭೋಗ ಮಲ್ಲಿಕಾರ್ಜುನ ಲಿಂಗವಾದೆಹೆನೆಂದು.

ಹೊಱಗ ಹಾರೈಸಿ ಹೊಱಗ ಸದಾಚಾರ ಕ್ರಿಯೆಗಳ
ಮನಮುಟ್ಟಿ ಮಾಡುತ್ತಿರಲು ಇದೆಲ್ಲಿಯ ಹೊಱಗು ಸುಖವೆಂದು,
ಸುವಿಚಾರ ಕಣ್ತೆಱೆದು ನೋಡಲು
ಕನ್ನಡಿಯೊಳಗಣ ರೂಪು ತಾನೆಂದಱಿವಂತೆ
ಮೆಲ್ಲ ಮೆಲ್ಲನೆ ಒಳಗ ಅಡಗಿತ್ತಯ್ಯಾ
ಲಿಂಗ ಸುಖದ ಸುಗ್ಗಿಯಲ್ಲಿ ಎನ್ನ ಪ್ರಾಣ ಮನ ಕರಣಂಗಳು
ಮೇಱೆದಪ್ಪಿದ ಸುಖದ ಸಮುದ್ರದೊಳಗೋಲಾಡಿದಂತಾದೆನಯ್ಯಾ
ಮುಳುಗಿದೆನಯ್ಯಾ, ಸ್ವಾನುಭಾವವೆಂಬ ಗುರುವಿನ ಕರುಣದಲ್ಲಿ
ಇಂತಾದ ಬಳಿಕ ಕೂಡಲಚನ್ನಸಂಗಯ್ಯನೆ ಪ್ರಾಣವಾಗಿದ್ದನಯ್ಯಾ.

ಲಿಂಗ ಮಧ್ಯದೊಳಗೆ ಜಗವಿರ್ದಡೇನೊ ?
ಜಗವ ಹೊರಗಿಕ್ಕಿ ಲಿಂಗವನೊಳಗಿಟ್ಟುಕೊಂಬ ಆ ಘನಕ್ಕೆ ಶರಣೆಂಬೆನು.
ಆ ಮಹಾಘನವಾಯತಕ್ಕೊಳಗು, ಪ್ರಳಯಕ್ಕೆ ಹೊಱಗು,
ಕೂಡಲಚನ್ನಸಂಗಾ ನಿಮ್ಮ ಶರಣರಿಗೆ.

ಪಂಚಮಹಾಪಾತಕಂಗಳು ಬೇವ ಠಾವ ಕಂಡೆ,
ಸರ್ವದುಃಖಂಗಳು ಹೋಗುವ ಠಾವ ಕಂಡೆ
ಕಾಲನ ಕಾಲಿಲ್ಲೊರೆದ ಠಾವ ಕಂಡೆ.   ಕಾಮನ ಕೈಯ ಕೊಯ್ವ ಠಾವ ಕಂಡೆ
ಮಾಯೆಯ ಬಾಯ ಕಟ್ಟುವ, ಠಾವ ಕಂಡೆ
ಗುಹೇಶ್ವರ ಲಿಂಗದಲ್ಲಿ ಕಣ್ಣು ತುಂಬಿ.

ಉಚಿತ ಬಂದಾಗಲೆ ನಾಲೆಗೊಂದಾಗಲೆ ?
ಕುಚಿತವಲ್ಲದೆ ನೆಱೆಯಱಿದು
ಸಂಸಾರವ ಹರಿಯದಿದ್ದಾಗವೆ ಮಱವೆಯಲ್ಲವೆ ?
ಅಱಿದಡೆ ಮರೀಚಿಕದಂತೆ, ಸುರಚಾಪದಂತೆ, ಅಂಬರದಾಕಾರದಂತೆ,
ತೋಱಿಯಡಗುವ ನಿಜಲಿಂಗಾಂಗಿಯ ನಿಲವು ಅದಱಂಗವೇದಿಸಿದಲ್ಲಿಯೆ
ಮನ ಸಂದಿತ್ತು ಮಾರೇಶ್ವರಾ !

ಆವಂಗದಲ್ಲಿರ್ದಡೇನು ? ಒಂದು ಸುಗಂಧ ಸುಶಬ್ಧವ ನಿಮಿಷವಿಂಬಿಟ್ಟುಕೊಂಡು
ಆ ಘಳಿಗೆಯ ಮರುದಿನಕ್ಕೆ ಸತ್ತಡೇನು ?
ಸುಶಬ್ದ ಸುಸಂಗವೇದಿ ಲಿಂಗ ಕಾಣಿರೊ !
ಕರಣನ ಮನದಲ್ಲಿ ಸಂಚಲಿತವಿಲ್ಲದೆ ಲಿಂಗವನಿಂಬುಗೊಂಡ ಶರಣಂಗೆ
ಬೆದಱಿ ಓಡವೆ ಕರ್ಮಂಗಳು ?
ಉರಿದು ಹೋಗವೆ ಭವಂಗಳು ?
ಕರ್ಪುರದುರಿಯ ಸೋಂಕಿದಂತೆ, ಗುರುಪಾದವ ಸೋಂಕಿ ಜ್ಞಾನವಾದ ಬಳಿಕ
ಜಡವಿಹುದೆ ಮಹಲಿಂಗ ಕಲ್ಲೇಶ್ವರಾ ?

೧೦

ಆಚಾರವಳವಟ್ಟು ಗುರುವನಱಿಯಬೇಕು,
ಅನಾಮಿಕನಾಗಿ ಲಿಂಗವ ಗ್ರಹಿಸಬೇಕು;
ಸರ್ವ ಪಾತಕ ಪ್ರಸನ್ನನಾಗಿ ಜಂಗಮವ ಭಾವಿಸಬೇಕು;
ಇಂತೀ ತ್ರಿವಿಧ ಪ್ರಾತಃಕಾಲಂಗಳಲ್ಲಿ  ಪರಿತ್ರಂಗಳನಱಿದು ಇಱವಿನಲ್ಲಿ ಇಱವನಾಬಿಟ್ಟು,
ಉಱಿವುಂಡೆಣ್ಣೆಯ ಭೇದಿಸಿ ಉರಿದು ಯೋಗನಿಂದಲ್ಲಿ   ಮಾಡುವ ಕ್ರಿಯಾ,
ಮಾಡಿಸಿಕೊಂಬ ವಸ್ತು
ಉಭಯ ನಷ್ಟವಾಹದನ್ನಕ್ಕ,
ನೀ ಎನ್ನಲ್ಲಿ, ನಾ ನಿನ್ನಲ್ಲಿಯೆಂಬನಕ್ಕ, ಅದು ನಿನ್ನ ಭಾವ,
ಯಾವ ಭಯದ ಗನ್ನ ಬೇಡ.
ಎನ್ನಯ್ಯ ಪ್ರಿಯ ಇಮ್ಮಡಿ ನಿಷ್ಕಳಂಕ ಮಲ್ಲಿಕಾರ್ಜುನ
ನೀ ಎನ್ನಲ್ಲಿ ತಲ್ಲೀಯವಾಗಿರು.

೧೧

ಹೇಮವ ಬಣ್ಣ ರಸವು ಅಗ್ನಿಯ ಸಂಗದಿಂದ
ರಸವಸರಿ ಸಂಗ ಪರಿಪೂರ್ಣವಾದಲ್ಲಿ,
ರಸವೊ ? ಬಣ್ಣವೊ ? ಘಟವೋ ?
ಎಱಕವಿಲ್ಲದೆ ಘಟ್ಟಯಾದಂತೆ ಅಂಗವು, ಲಕ್ಷಿಸಿಪ್ಪ ಲಿಂಗವು,
ಲಕ್ಷಿಸುತ್ತಿಪ್ಪ ಚಿತ್ತವು.
ಹೆಪ್ಪುಗೊಂಡಂತೆ ಈ ಗುಣ ಲಿಂಗಾಂಗಿಯ ಶುಭ ಸೂಚನೆ
ನಿಷ್ಕಳಂಕ ಮಲ್ಲಿಕಾರ್ಜುನ ಲಿಂಗವನೊಡಗೂಡಿದವನಂಗ.

೧೨

ಆವ ಬೀಜವ ಬಿತ್ತಿದಲ್ಲಿ ತಾನಳಿದ ಮತ್ತೆ
ಬೀಜ ತಾನೆಯಾಗಿ ಮತ್ತುಳಿದು ಅಳಿದು ತೆಱನಂತೆ,
ಲಿಂಗವ ಮುಟ್ಟಿದ ಆತ್ಮನು ಲಿಂಗದಲ್ಲಿಯೆ ಅಳಿದು ಮತ್ತೆ,
ಘನಲಿಂಗವಾಯಿತ್ತೆಂಬುದಕ್ಕೆ ಸೂಚನೆ.
ಇಂತೀ ಉಭಯದ ನಷ್ಟದ ತೊಟ್ಟು ಬಿಟ್ಟು,
ನಿಷ್ಕಳಂಕ ಮಲ್ಲಿಕಾರ್ಜುನಲಿಂಗದಲ್ಲಿ ಅಚ್ಚೊತ್ತಿದಂತಿರಬೇಕು.    

೧೩

ಹೇಂಗೆಂದಡೆ ಹಾಗಿಱದಿದ್ದಡೆ ಅವಳು ಸತಿಯಲ್ಲ ನಾ ಪತಿಯಲ್ಲ.
ಆವ ಠಾವಿನಲ್ಲಿ ಎನಗೆ ಸತಿಸಂಗ ? ಆವ ಠಾವಿನಲ್ಲಿ ಲಜ್ಜೆ ನಾಚಿಕೆ ?
ಕೇಣರಸ ಅಪಮಾನವಿಲ್ಲದಿರಬೇಕು; ಅದು ಎನ್ನ ಭಕ್ತಿ ಮುಕ್ತಿಯ ಬೆಳೆ;
ಸತಿಪತಿ ಇಬ್ಬರು ಏಕವಾದಲ್ಲಿ ನಿಷ್ಕಳಂಕಮಲ್ಲಿಕಾರ್ಜುನ
ಹೆಡಗುಡಿಗೊಳಗಾಹನು.

೧೪

ಕಾರಕನ ಕೈಮುಟ್ಟುವದಕ್ಕೆ ಮುನ್ನವೆ,  ಗುರುವಿನ ಕೈ ಮುಟ್ಟಿದ ಮುನ್ನವೆ,
ಮನಸಿಜನ ಮುಟ್ಟುದಕ್ಕೆ ಮುನ್ನವೆ, ನಾಮ ರೂಪು ಬಹುದಕ್ಕೆ ಮುನ್ನವೆ,
ಅದಾವರೂಪಿಂದಱಿದಡೆ ಆ ವಸ್ತು ಪ್ರಾಣಕ್ಕೆ ರೂಪಹ ಪರಿಯಿನ್ನೆಂತುಟು ?
ಅದು ಭಾವಕ್ಕಗೋಚರ; ಈಶನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು.

೧೫

ಹುಟ್ಟದೆ ಬ್ರಹ್ಮನ ಹಂಗಿನಲ್ಲಿ, ಬೆಳೆಯದೆ ವಿಷ್ಣುವಿನ ಸ್ಥಿತಿಯಲ್ಲಿ,
ಸಾಯದೆ ರುದ್ರನ ಬೆಂಬಳಿಯಲ್ಲಿ;
ಹಱಿಯಿತ್ತು ಬ್ರಹ್ಮನ ಬಲೆ ಗುರುವಿನ ಕರಸ್ಥಲದಲ್ಲಿ;
ಬಿಟ್ಟಿತ್ತು ವಿಷ್ಣುವಿನ ಸುಖ ಲಿಂಗದ ಅರ್ಪಿತದಲ್ಲಿ
ಮಱೆಯಿತ್ತು ರುದ್ರನ ಮರಣ ವಸ್ತುವಿನ ಮೂರ್ತಿಯಲ್ಲಿ;
ಮತ್ತೆ ನಾನಿನ್ನಾರ ಕೇಳಹೆ ಅಲೇಖನಾಥ ಶೂನ್ಯಕಲ್ಲ ಬಿಟ್ಟತೆಱನ ಕಂಡೆ

೧೬

ಸತ್ವರಜತಮವೆಂಬ ಮೂಱು ಭಿತ್ತಿಯ ಕೂಡಿ ಘಟ್ಟಿಯಾದಲ್ಲಿಯೆ,
ಚಿತ್ತವೆಂಬ ಪುತ್ಥಳಿ ಹುಟ್ಟುತ್ತು.
ಪುತ್ಥಳಿಯಲ್ಲಿ ಜಗತ್ತು, ಹುಟ್ಟಿದ ಕರ್ತುವನ ಹೆತ್ತವನ
ನಾಭಿಮಧ್ಯದ ಬಾಲಲೀಲೆಯ ಸಾವಿನೊಳಗಾದ ಸಂಪದರವರೆಲ್ಲ;
ಕಾಲಕ್ಷನ ಕರ್ಮನಾಶನ ಬಾಳಂಬಕನ ಲೀಲೆಯಲ್ಲಿ ಆಡುತ್ತಿಹರು;
ಸರ್ವಮಾಯಕ್ಕೆ ಹೊಱಗಾದ ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗಾ.

೧೭      

ಕಂಗಳ ಸೂತಕದಿಂದ ಕಾಣಿಸಿಕೊಂಬುದು,

ಮನದ ಸೂತಕದಿಂದ ನೆನಹಿಸಿಕೊಂಬುದು,
ಕಾಯದ ಸೂತಕದಿಂದ ಮುಟ್ಟಿಸಿಕೊಂಬುದು,
ಇಂತಾ ಮುಱರ ಸೂತಕದಲ್ಲಿ ಗಾಱೌಗುತ್ತ
ಮೀಱು ಕಾಬ ಅಱಿವು ಸೂರೆಯೆ,
ನೆನಹಿಗೆ ಮುನ್ನವೆ ನೆನಹಿಸಿಕೊಂಬುದುಯೆಂಬುದನಱಿಯದೆ
ಕುಱುಹಿನ ಹಾವಸೆಯಲ್ಲಿ ಮಱೆದೊಱಗುತ್ತಿಹರ ಕಂಡು
ಮಱೆಯ ಮಾಡಿ ಕಾಡಿದೆಯಲ್ಲ ಕಾಮಧೂಮಧೊಳೇಶ್ವರ.

೧೮

ಅಂಗದಲ್ಲಿ ಲಿಂಗವೇದಿಸಿ ಪ್ರಾಣಕ್ಕೆ ಸಂಬಂಧವ ಮಾಡಬೇಕೆಂಬಲ್ಲಿ
ಅಂಗಕ್ಕು ಪ್ರಾಣಕ್ಕು ಲಿಂಗವೇಧಿಸುವುದಕ್ಕೆ ಹಾದಿಯ ಹೊಲಬೆ ?
ಅದಾವ ಠಾವಿನಲ್ಲಿ ವೇಧಿಸುವುದು ಹೇಳಯ್ಯ ?
ಆ ಅಂಗ ನೀರಬಾಗಿಲ ನೆಲನೆ ? ಮೊಳೆಯ ಸವರಿದ ಹಾದಿಯೆ ?
ಹೋಹ ಹೊಲಬಿನ ಪಥವೆ ?
ಈಯ ಪ್ರಮಾಣವಪ್ಪ ಲಿಂಗವ ಚಿತ್ತದ ಭೇದದಿಂದಱಿಯಿತ್ತು.
ಆತ್ಮನಲ್ಲಿ ದೃಷ್ಟದಲ್ಲಿ ಲಕ್ಷಿಸಿ ಇದಿಱಿಟ್ಟು,
ಕರದ ಇಷ್ಟದಲ್ಲಿ ನಿರೀಕ್ಷಣೆಯಿಂದ ನಿಜವಸ್ತುವನಿಕ್ಷೆಪಿಸಿ ಬೈಚಿಟ್ಟಲ್ಲಿ,
ಅಂಗಕ್ಕೂ ಪ್ರಾನಕ್ಕೂ ಬೇಱಾಗದೆ ಲಿಂಗವಿಟ್ಟುದೆರಡಿಲ್ಲ;
ಇದು ಕ್ರಿಯಾಲೇಪಸ್ಥಲ, ಇದು ಸದ್ಭಾವ ಸಂಬಂಧ,
ಎನ್ನಯ್ಯಪ್ರಿಯ ಇಮ್ಮಡಿ ನಿಷ್ಕಳಂಕಮಲ್ಲಿಕಾರ್ಜುನನಲ್ಲಿ !

೧೯

ನೆನಹು ನಿಜದಲ್ಲಿ ನಿಂದಲ್ಲಿ ಸರಳಿನ ತೊಡಕು, ಗಂಟುಂಟೆ ?
ಅಂಬರವನಡಱಿದಂಗೆ ಬೀಱೊಂದಿಂಬು ಮಾಡಲುಂಟೆ ?
ವಸ್ತುವಿನಂಗದಲ್ಲಿ ಸರ್ವವು ಹಿಂಗಿದಲ್ಲಿ
ಅರ್ಕೇಶ್ವರಲಿಂಗವ ಕಟ್ಟುವುದಕ್ಕೆ ಬೇಱೊಂದು ಠಾವುಂಟೆ ?

೨೦

ನಿಚ್ಚ ನಿಚ್ಚ ಮುಟ್ಟಿ , ನಿಚ್ಚ ನಿಚ್ಚ ಹಿಂಗುವರ ಕಂಡು,
ನಾಚಿತ್ತಯ್ಯಾ ಎನ್ನಮನ, ನಾಚಿತ್ತಯ್ಯಾ,
ಸಂದಿಲ್ಲದಲ್ಲಿ ಸಂದು ಮಾಡಿದರು;
ಸಿಮ್ಮಲಿಗೆಯಚನ್ನರಮನೆಂಬ ಲಿಂಗದಲ್ಲಿ,
ಸಂಸಾರ ಸಂಬಂಧಿಗಳು.

೨೧      

ಅಲಗಿನ ಮೊನೆಯನೇಱಬಹುದು,
ಹುಲಿಯ ಬಿಲವ ಹೊಗಬಹುದು,
ಸಿಂಗದ ಕೊರಳಿಗೆ ಹಾಯಬಹುದು,
ಸಿದ್ಧಸೋಮನಾಥ,
ನಿಮ್ಮ ಮುಂದೆ ಮನಸಹಿತ ನಿಮಿಷ ಕುಳ್ಳಿರಲಾರದು.

೨೨      

ಅದ್ಭುತವೆಂಬ ಪಿಶಾಚಿ ಮೂಱುಲೋಕವನವಗ್ರಹಿಸಿತ್ತಯ್ಯಾ;
ಆ ಭೂತದೊಳಗೊಂದು ಗ್ರಹ ನಿರಂತರ ನಲಿದಾಡುತ್ತಿದ್ದಿತ್ತಯ್ಯ;
ವಜ್ರಯೋನಿ ಖಗೇಂದ್ರ,
ಮರದಲ್ಲಿ ಗುಹೇಶ್ವರಲಿಂಗವು ತಾನೇ ನೋಡಯ್ಯ !

೨೩

ಒಡಗೂಡಿದ ಒಚ್ಚತವ ಬಡವನದವರು ಬಲ್ಲರೆ,
ಮೃಡ ನಿಮ್ಮ ಶರಣರಲ್ಲದೆ ?
ಕಡಲೊಳಗಣ ಮುತ್ತು ಇಪ್ಪಕಡುಘಾತದ ಭೇದವನು
ಮೃಡ ನಿಮ್ಮ ಶರಣರಲ್ಲದೆ ಜಡಜೀವಿಗಳು ಬಲ್ಲರೆ ?
ಕಪಿಲಸಿದ್ಧಮಲ್ಲಿಕಾರ್ಜುನಾ.

೨೪      

ಹತ್ತಿ, ಕದರು, ರಾಟಿ, ಮೂದಲಿಲ್ಲ;
ನೂಲುಂಟು ಶಲದಿಯ ಹೃದಯದಲ್ಲಿ;
ಲಿಂಗವುಂಟು ಭಕ್ತನ ಭಾವದಲ್ಲಿ;
ಲಿಂಗವುಂಟು ರೇಕಣ್ಣಪ್ರಿಯ ನಾಗಿನಾಥನ ಶರಣರ ಮನದ ಕೊನೆಯೆನೆತ್ತಿದಡೆ;
ಲಿಂಗದ ಗೊಂಚಲಲ್ಲಿ ಲಿಂಗವುಂಟು.

೨೫

ನಾದದ ಬಲದಿಂದ ವೇದವ ನುಡಿವುದು,
ಅದು ಸ್ವಯಂಭುವಲ್ಲ ನಿಲ್ಲು !
ಶಬ್ದದ ಬಲದಿಂದ ಶಾಸ್ತ್ರವನುಡಿವುದು,
ಅದು ಸ್ವಯಂಭುವಲ್ಲ ನಿಲ್ಲು !
ಪಾಷಾಣಬಲದಿಂದ ಸಮಯ ನುಡಿವುದು,
ಅದು ಸ್ವಯಂಭುವಲ್ಲ ನಿಲ್ಲು !
ಭ್ರಾಂತುವಿನ ಮೆಟ್ಟಿ ಎಂದೇತಕ್ಕೆ ನುಡಿವಿರಿ ?
ಎನಗೊಬ್ಬನೆ ನೋಡಯ್ಯ.
ಸೂತಕದೊಳಗುಮೇಶ್ವರನೈದಾನೆ; ಅಲ್ಲಿಂದತ್ತ ನೀತಿಗಳತ್ತ,
ಬಾಹಿರಂಗಗಳಾದಾತಂಗಲ್ಲದೆ ಪರಮಾರ್ಥವಿಲ್ಲೆಂದಾತನಂಬಿಗ ಚೌಡಯ್ಯ !