|| ವೃತ್ತ ||          

ಭಸಿತಾಭ್ಯಸ್ತಧೃತತ್ರಿಪುಂಡ್ರವರರುದ್ರಾಕ್ಷಾಂಗಲಿಂಗಾಂಗಯೋ
ಗಸಮಾಧಿಸ್ಥಿತಿಸಾಧ್ಯ ಸಿದ್ಧಮನು ರಾಟ್ಪಂಚಾಕ್ಷರೀ ಮಂತ್ರಜಾ
ಪ್ಯಸಮೇತಾತ್ಮ ಶಿವಸ್ವರೂಪವಿಲಸಚ್ಚಿಂತಾಂತರಂಗಾನುಭಾ
ವಸುಖಾಕಾರನ ಪಾರಪಾರ ಮಹಿಮಾಭಕ್ತಂ ಶಿವಾವಲ್ಲಭಾ.

|| ವಚನ ||         

ಅಯ್ಯಾ ಎನಗೆ ವಿಭೂತಿಯೆ ಕುಲದೈವ
ಅಯ್ಯಾ ಎನಗೆ ವಿಭೂತಿಯೆ ಮನೆದೈವ
ಅಯ್ಯಾ ಎನಗೆ ವಿಭೂತಿಯೆ ಸರ್ವಕಾರಣ
ಅಯ್ಯಾ ಎನಗೆ ವಿಭೂತಿಯೆ ಸರ್ವಸಿದ್ಧಿ
ಅಯ್ಯಾ ಕೂಡಲ ಸಂಗಮದೇವಾ
ಅಯ್ಯಾ ಶ್ರೀಮಹಾ ವಿಭೂತಿಯೆಂಬ ಪರಂಜ್ಯೋತಿ
ನೀವಾದಿರಾಗಿ, ಅಯ್ಯಾ ಎನಗೆ ವಿಭೂತಿಯೆ ಸರ್ವಸಾಧನವಯ್ಯಾ.

ಭಾವದಲ್ಲಿ ಗಮನ, ಪ್ರಾಣದಲ್ಲಿ ಲೋಭ, ಜಿಹ್ವೆಯಲ್ಲಿ ರುಚಿ
ಶ್ರೋತ್ರದಲ್ಲಿ ಕುಶಬ್ದ, ನಾಸಿಕದಲ್ಲಿ ಕುಗಂಧ,
ನೋಟದಲ್ಲಿ ಕಾಮ, ಶಬ್ದದಲ್ಲಿ ವಿರೋಧ
ಇಂತಿ ಭವಿಯ ಕಳೆದು ಭಕ್ತಮ ಮಾಡಿದ ಪರಿಯೆಂತೆಂದಡೆ.
ಆಕಾರವಿಲ್ಲದಂದಿನ ನಿರಾಕಾರವಿಲ್ಲದಂದಿನ
ಕಾಮನ ಸುಟ್ಟು ಭಸ್ಮವ ಇಲ್ಲದಂದಿನ
ಕಾಲನ ಸುಟ್ಟು ವಿಭೂತಿ ಇಲ್ಲದಂದಿನ
ತ್ರಿಪುರವ ಸುಟ್ಟು ವಿಭೂತಿಯಿಲ್ಲದಂದಿನ
ಆದಿಯಾಧಾರವಿಲ್ಲದಂದಿನ ಚಿದ್ಭೂತಿಯನೆ ತಂದು ಪಟ್ಟವಂ ಕಟ್ಟಿದಡೆ

ಭಾವಕ್ಕೆ ಗುರುವಾಯಿತ್ತು; ಪ್ರಾಣಕ್ಕೆ ಲಿಂಗವಾಯಿತ್ತು,
ಜಿಹ್ವೆಗೆ ಪ್ರಸಾಧವಾಯಿತ್ತು; ಶ್ರೋತ್ರಕ್ಕೆ ಶಿವಮಂತ್ರವಾಯಿತ್ತು,
ನಾಸಿಕಕ್ಕೆ ಸುಗಂಧವಾಯಿತ್ತು; ನೋಟಕ್ಕೆ ಜಂಗಮವಾಯಿತ್ತು,
ಶಬ್ದಕ್ಕೆ ಸಂಭಾಷಣೆಯಾಯಿತ್ತು.
ಇಂತಿ ಪೂರ್ವಗುಣಂಗಳಳಿದು ಪುನರ್ಜಾತನಾದ ಕಾರಣ
ಕೂಡಲ ಚನ್ನಸಂಗಾ ನಿಮ್ಮ ಶರಣ ಸರ್ವಾಂಗಲಿಂಗಿಯಾದ.

ಚಂದ್ರನ ಕಾಂತಿಯ ಕಾಬುದಕ್ಕೆ ಆ ಚಂದ್ರನಿಂದೊದಗಿದ ಬೆಳಗೆ ಮುಖ್ಯ
ಸೂರ್ಯನ ಕಾಂತಿಯ ಕಾಬುದಕ್ಕೆ ಆ ಸೂರ್ಯನಿಂದೊದಗಿದ ಬೆಳಗೆ ಮುಖ್ಯ
ಜ್ಯೋತಿಯ ಕಾಂತಿಯ ಕಾಬುದಕ್ಕೆ ಆ ಜ್ಯೋತಿಯಿಂದೊದಗಿದ ಬೆಳಗೆ ಮುಖ್ಯ
ರತ್ನದ ಕಾಂತಿಯ ಕಾಬುದಕ್ಕೆ ಆ ರತ್ನದಿಂದೊದಗಿದ ಲಹರಿಯೆ ಮುಖ್ಯ
ನಮ್ಮ ಗುಹೇಶ್ವರಲಿಂಗದ ನಿಜ ಬೆಳಗ ಕಾಬುದಕ್ಕೆ ಆ ಮಹಾವಸ್ತುವಿನ
ದಿವ್ಯತೇಜದಿಂದೊದಗಿದ ದಿವ್ಯಭಸಿತವೆ ಮುಖ್ಯಕಾಣಿರೊ.

ಕರಸ್ಥಲವೆಂಬ ದಿವ್ಯ ವಿಭೂತಿಯೊಳಗೆ
ಮಹಾಘನಲಿಂಗ ನಿಕ್ಷೇಪವಾಗಿದೆ
ಈ ದಿವ್ಯ ನಿಕ್ಷೇಪವನಾರಾಧಿಸುವಡೆ ಅಂಜನ ಸಿದ್ಧಿಯಿಲ್ಲದೆ ಸಾಧಿಸಬಾರದು
ಲಿಪಿಯಿಲ್ಲದೆ ತೆಗೆವರಸದಳ, ಆ ಲಿಪಿಯ ಪ್ರಮಾಣವ ಷಟತ್ವದ ಮೇಲೆ
ನಿಶ್ಚೈಸಿ ಆ ನಿಶ್ಚಯದೊಳಗೆ ಈ ನಿಕ್ಷೇಪ ಕರ್ತೃವಿನ ಹೆಸರ
ತಿಳಿಯಲೋದುವನ್ನಬರ ಆತ ನಮ್ಮ ಹೆತ್ತಯ್ಯನೆಂಬ ಹೆಸರೊಂದಿತ್ತು
ಆ ಓದಿಕೆಯ ಕಡೆಯಕ್ಕರದೊಳಗೆ ಅಂಜನಸಿದ್ಧಿಯ ಹೇಳಿತ್ತು.
ಅದಾವ ಪರಿಕ್ರಮದಂಜನವೆಂದಡೆ ಅದು ನಮ್ಮ ಹೆತ್ತಯ್ಯ
ಜಗದ್ವಿಲಾ ಸಾ ರ್ಥವಾಗಿ ಆ ತನ್ನ ಮೂಲಶಕ್ತಿ ಸಂಭೂತನಾದಂದು,
ಅಲ್ಲಿ ಹುಟ್ಟಿದ ದಿವ್ಯಚಿತ್ಕಳೆಯಿಂದೊದಗಿದ ದಿವ್ಯಭಸಿತವೆಂದಿತ್ತು
ಆ ದಿವ್ಯ ಭಸಿತವೆಂಬ ದಿವ್ಯಾಂಜನವ ಕಳಕೊಂಡು ಅತಿ ವಿಶ್ವಾಸದಿಂದ
ನಾನೆಂಬ ಹಣೆಗಣ್ಣಿಂಗೆಚ್ಚಿ ಸರ್ವಾಂಗ ತೀವಲೊಡನೆ
ಕರಸ್ಥಲದೊಳಗಣ
ನಿಕ್ಷೇಪ ಕಣ್ದೆಱಪಾಯಿತ್ತು, ಆ ಕಣ್ದೆಱಹಾದ ನಿಕ್ಷೇಪವ ದೃಷ್ಟಿಮುಟ್ಟಿದಡೆ
ಅಲ್ಲಿ ನಮ್ಮ ಹೆತ್ತಯ್ಯನ ಹೊಳವ ಕಂಡು ತಳವೆಳಗಾದೆನು ಕಾಣಾ, ರಾಮನಾಥ.

ಹಿತವಿದೆ ಸಕಲ ಲೋಕದ ಜನಕ್ಕೆ, ಮತವಿದೆ
ಶ್ರುತಿ ಪುರಾಣದ ಗತಿಯಿದೆ ಬಕುತಿಯ ಬೆಳಗಿನುನ್ನತಿಯದೆ
ಶ್ರೀವಿಭೂತಿಯನೊಲಿದು ಧರಿಸಿದಡೆ ಭವವನು
ಪರಿವುದು ದುರಿತಸಂಕುಳವ ನೊರಸುವುದು
ಹರನ ಸಾಲೋಕ್ಯ ಸಾಮೀಪ್ಯದಲ್ಲಿರಿಸುವುದು, ನಿರುತವಿದೆ
ನಂಬೊ ಮನುಜಾ.
ಜವನ ಭೀತಿ ಈ ವಿಭೂತಿ ಮರಣಭಯದಿಂದ ಅಗಸ್ತ್ಯ, ಕಶ್ಯಪ
ಜಮದಗ್ನಿಗಳು ಧರಿಸುವರು ನೋಡಾ,
ಶ್ರೀಶೈಲ ಚನ್ನಮಲ್ಲಿಕಾರ್ಜುನನೊಲಿದ ಶ್ರೀವಿಭೂತಿ.

ಸಕಲ ಕರಣಂಗಳನು ಬಕುತಿಯ ಜ್ವಾಲೆಯಲ್ಲಿ ಸುಟ್ಟು
ಯುಕುತಿಯ ವಿಭೂತಿಯ ಧರಿಸಲು ಮುಕುತಿಯಹುದಕ್ಕೆ ಸಂದೇಹವಿಲ್ಲ.
ಇದು ಕಾರಣ ಶಿವಸಂಬಂಧವಾದ ಶ್ರೀವಿಭೂತಿಯನೊಲಿದು
ಧರಿಸುತ್ತಿರ್ದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೆ.

|| ತ್ರಿವಿಧಿ ||       

         

ಹಣೆಯಕ್ಷರವ ತೊಡೆದು ಭಸಿತವನು ಬಾಸಣಿಸಿ
ವಶವರ್ತಿ ಮಾಡಿದನು ಶಿವಲಿಂಗವ  ದಸೆಗೇಡಿಯೆನಿಸುವ
ಹೊಸಬಂಟ ಕಾಮನನು
ಭಸ್ಮವನು ಮಾಡುವೆನು ಯೋಗಿನಾಥ.