|| ವೃತ್ತ ||           

ಸೆಲೆ ನೀರ್ಮೂನ್ಮಿಡಿಚಿಲ್ಲದುತ್ತಮ ಮಹಾತೀರ್ಥಂ ಶಿವಜ್ಞಾನ ಯೋ
ಗಲಸದ್ಭಕ್ತಿಪರಾಯಣಂ ಗುಳಿತೆವರ್ ಮಣ್ಣಿಲ್ಲದುತ್ಕ್ರಷ್ಟನಿ
ರ್ಮಲ ಸುಕ್ಷೇತ್ರಮಖಂಡಪೂರ್ಣ ಸುಮಹಲ್ಲಿಂಗಾಂಗಸಂಬಂಧಿತಾ
ನೆಲೆಕೇಳ್ ಕಲ್ಮರಮಟ್ಟಿಯಿಲ್ಲದ ಮಹಾಶೈಲಂ ಶಿವಾವಲ್ಲಭಾ.  

|| ವಚನ ||

ದೇಹವೆಂಬೆರಡಕ್ಕರವನು ಜೀವನೆಂದಱಿದೆನಯ್ಯಾ
ಜೀವವೆಂಬೆರಡಾಕ್ಕರವನು ಹಂಸನೆಂಬ ದಳಕ್ಕೆ ಭಾಗಿಸಿದೆನಯ್ಯಾ
ಹಂಸನೆಂಬೆರಡಕ್ಕರವನು ಜ್ಞಾನಚಕ್ಷುವಿನ ಭ್ರೂಮಧ್ಯದಲ್ಲಿಪ್ಪ ದಳವೆಂದಱಿದೆನಯ್ಯಾ.
ಒಂದು ದಳವನೆ ಕರ್ತನಂ ಮಾಡಿದೆ,
ಒಂದು ದಳವನೆ ಭೃತ್ಯರನ ಮಾಡಿದೆ
ಈ ಎರಡು ದಳದ ನಡಿವಿಪ್ಪ ಪರಂಜ್ಯೋತಿಯನು
ತ್ರಿಕೂಟವೆಂದಱಿದು ಕೂಡಿದೆನಯ್ಯಾ
ಇಂತು ಕೂಡಿದಲ್ಲಿ ಪರಿಚರಿಯ ಮಾಡುತಿರ್ದೆನಯ್ಯಾ
ಮೊದಲುಪರಿಚರಿಯದಲ್ಲಿ ನಿರ್ಮಲೋದಕವ ತುಂಬಿದೆ ಒಂದು ದಳದೊಳಗೆ;
ಎರಡನೆಯಪರಿಚರಿಯದಲ್ಲಿ ಒಂದು ದಳದಲ್ಲಿ ಆ ಉದಕವ ಗಡಣಿಸುತಿರ್ದ್ದೆ;
ಇರದಿರಲು ಎರಡು ದಳವಳಿದು ಜಲಮೇಱೆದಪ್ಪಲು ಮನಮೇಱಿದಪ್ಪಿ
ಆರೋಗಿಸಿದೆನಯ್ಯಾ
ಆರೋಗಿಸಿದ ತೃಪ್ತಿಯನೆ ಬಲ್ಲೆ, ಕೂಡಲಸಂಗಮದೇವಾ.

ಉತ್ತರ ದಕ್ಷಿಣ ಪೂರ್ವ ಪಶ್ಚಿಮದ್ವಾರದ ಬಂದ ಬಟ್ಟೆಯನಾಲಿಸದೆ.
ವಾಯುಬಂಧನಮಂ ಮಾಡಿ ಪಶ್ಚಿಮದ್ವಾರದಲ್ಲಿ
ಪ್ರಾಣನಿವಾಸಿಯಾಗಿರ್ದನಾ ಶರಣನು.
ಅಧೋನಾಳದಲ್ಲಿ ನೀರಱತು ಮಧ್ಯನಾಳದಲ್ಲಿ ನಿರಾಳ,
ಊರ್ಧ್ವನಾಳದಲ್ಲಿ ಸುರಾಳ,
ವ್ಯೋಮ ಕುಸುಮದ ಕೊನೆಯ ಶೈವೋದಕವ ಧರಿಸಿದ ಘಟಕ್ಕೆ
ಕೇಡಿಲ್ಲವಾಲಿಂಗಕ್ಕೆ ಪ್ರಾಣಕ್ಕೆ ಒಂದೆಂಬ ಕಾರಣ ಅಚಲವೆನಿಸಿತ್ತು.
ಇದು ಕಾರಣ, ಕೂಡಲಚನ್ನಸಂಗಮದೇವಾ ಎನ್ನಪ್ರಾಣಕ್ಕೆ ಭವವಿಲ್ಲ ಬಂಧನವಿಲ್ಲ.

ಅಂಗವಿಕಾರ ಆಚಾರದೊಳಡಗಿ, ಆಚಾರಕ್ರಿಯಗಳು ಗುರುವಿನೊಳಡಗಿ,
ಗುರುವೆನ್ನಂಗದೊಳಡಗಿ, ಅಂಗ ಲಿಂಗ ನಿಷ್ಠೆಯೊಳಡಗಿ,
ಅಂಗದಾಚರಣೆಯ ಆಚಾರವಾವರಸಿ,
ಆಚಾರದ ನಿಲವ ಗುರುಮೂರ್ತಿಯಾವರಿಸಿ,
ಗುರುಮೂರ್ತಿಯ ಸರ್ವಾಂಗವಾವರಿಸಿ, ಸರ್ವಾಂಗವ ಲಿಂಗನೈಷ್ಠೆಯಾವರಿಸಿ,
ಆ ಲಿಂಗನಿಷ್ಠೆಯ ಸಾವಧಾನವಾವರಿಸಿ, ಸಾವಧಾನವ ಸುವಿಚಾರವಾವರಿಸಿ,
ಸುವಿಚಾರ ಮಹಾಜ್ಞಾನವಾವರಿಸಿ, ಜ್ಞಾನದೊಳು ಪರಮಾಮೃತ ನಿಜನಿಂದು.
ನಿಜದೊಳಗೆ ಪರಮಾಮೃತ ತುಂಬಿ,
ಮೊದಲ ಕಟ್ಟೆಯನೊಡೆದು ನಡುವಣ ಕಟ್ಟೆಯನಾಂತುದು;
ನಡುವಣ ಕಟ್ಟೆಯು ಈ ಎರಡೂ ಕೂಡಿ ಬಂದು, ಕಡೆಯಣ ಕಟ್ಟೆಯನಾಂತುದು
ಈ ಮೂಱು ಕಟ್ಟೆಯನೊಡೆದ ಮಹಾಜಲವ ಪರಮಪದವಾಂತುದು;
ಆ ಪದದಲ್ಲಿ ನಾನೆಱಗಿ ಆ ಪಾದೋದಕವ ಕೊಂಡು ಎನ್ನನಾನಱಿಯದಾದೆ
ಕಾಣಾ ಗುಹೇಶ್ವರಾ.

ಪಾದೋದಕ, ಪ್ರಸಾದೋದಕ, ಲಿಂಗೋದಕಂಗಳಲ್ಲಿ
ಕೊಂಬ ಕೊಡುವ ಇಂಬಿಡುವ ಭೇದವನಱಿಯಬೇಕು.
ಪಾದೋದಕವ ಲಿಂಗಕ್ಕೆ ಮಜ್ಜನಕ್ಕೆಱೆಯಲಿಲ್ಲಾ,
ಪ್ರಸಾದೋದಕವ ಪೂಸಲಿಲ್ಲಾ,
ಲಿಂಗೋದಕವ ತನ್ನಂಗಕ್ಕೆ ಕೊಳಲಿಲ್ಲಾ,
ಅದೆಂತೆಂದಡೆ ಪಾದೋದಕಕ್ಕೂ ಲಿಂಗೋದಕಕ್ಕೂ ಸಂಬಂಧವಿಲ್ಲವಾಗಿ,
ಆ ಪ್ರಸಾದೋದಕಕ್ಕೂ ಆತ್ಮಂಗೂ ಸಂಬಂಧವಿಲ್ಲವಾಗಿ
ಲಿಂಗೋದಕಕ್ಕೂ ಅಂಗಕ್ಕೂ ಸಂಬಂಧವಿಲ್ಲವಾಗಿ
ಇಂತೀ ತ್ರಿವಿಧೋದಕಂಗಳಲ್ಲಿ ಕೊಳಬಲ್ಲಡೆ
ಆದಿಯಾಧಾರವಱಿತು ಅನಾದಿಯ ಪೂರ್ವಯುಕ್ತವ ತಿಳಿದು,
ಗುರುವಾರು ಲಿಂಗವಾರು ಜಂಗಮವಾರೆಂಬುದ ತಿಳಿದು
ಪೂರ್ವೋತ್ತರಂಗಳ ನಿಶ್ಚಯಿಸಿ,
ಪಾದೋದಕವಾರಿಗೆ ಪ್ರಸಾದೋದಕವಾರಿಗೆ
ಲಿಂಗೋದಕವಾರಿಗೆಂಬುದನಱಿದು,
ಮರಕ್ಕೆ ನೀರನೆಱೆವಲ್ಲಿ ಬೇರಿಗೂ ಮೆಲುಣ ಕೊಂಬಿಗೊ
ಎಂಬ ಭೇದವಕಂಡು
ಗುರುಲಿಂಗ ಜಂಗಮ ಮೂಱೆಂದೆನಬೇಕು.
ಹೀಂಗಲ್ಲದೆ ಎನಗೆ ಕಾಬವರ ಕಂಡು ಇದ ಮಾಡಿದಡೆ
ಭವಭವಕ್ಕೊಳಗು ನಿಷ್ಕಳಂಕ ಮಲ್ಲಿಕಾರ್ಜುನಾ.

ಪಾದೋದಕ ಮಂಡೆಗೆ ಮಜ್ಜನ, ಪ್ರಸಾದೋದಕ ಜಿಹ್ವೆಗೆ ಭಾಜನ,
ಲಿಂಗೋದಕಂಗಳು ಲಿಂಗಕ್ಕೆ ಲೇಪನ,
ಈ ಮೂಱು ಮುನ್ನಿನ ಅನಾದಿ ಲಿಂಗಸೋಂಕು.
ಆದಿಯಿಂದತ್ತತ್ತ ನೀವೆ ಬಲ್ಲಿರಿ,
ನಾನಱಿಯೆ, ನಿಷ್ಕಳಂಕ ಮಲ್ಲಿಕಾರ್ಜುನಾ.

ನಿತ್ಯವೆಂಬ ಭಕ್ತನಮನೆಗೆ ಘನಚೈತನ್ಯವೆಂಬ ಜಂಗಮ ಬಂದಡೆ,
ಜಲವಿಲ್ಲದ ಜಲದಲ್ಲಿ ಪಾದಾರ್ಚನೆಯಂ ಮಾಡಿದೆ.
ಆ ಪಾದೋದಕವೆ ಮಹಾಪಥವಯ್ಯಾ.
ಸ್ವಾತ್ಮನಂದಂ ಜಲಂ ಕೃತ್ವಾ ಪ್ರಕ್ಷಾಲ್ಯ ಚರಪಾದುಕಮ್
ತತ್ಪಾದೋದಕ ಪಾನೇನ ಸ ರುದ್ರೋ ನಾತ್ರಸಂಶಯಃ
ಇಂತೆಂದುದಾಗಿ   ಆ ಪಾದೋದಕದಲ್ಲಿ ಪರಮಪರಿಣಾಮಿ,
ಕೂಡಲಚನ್ನಸಂಗಾ ನಿಮ್ಮ ಶರಣ.

ತಾನು ಗುರುಲಿಂಗಜಂಗಮಪಾದಕ್ಕೆಱಗಿ
ಲೀಯವಾದ ಬಳಿಕ, ಇದು ಚಿಹ್ನೆ ನೋಡಯ್ಯಾ;
ಗುರುಲಿಂಗಜಂಗಮದ ಪಾದವೆ ತನ್ನ ಸರ್ವಾಂಗದೊಳಗೆ ಅಚ್ಚೊತ್ತಿದಂತಾಗಿ,
ಅಲ್ಲಿಯೆ ಪಾದಾರ್ಚನೆ, ಅಲ್ಲಿಯೆ ಪಾದೋದಕಸೇವನೆ, ಬೇಱೆ ಪೃಥಕ್ಕಿಲ್ಲವಯ್ಯಾ !
ಅದೆಂತೆಂದಡೆ. ಪರಮಜ್ಞಾನ ಲಿಂಗಜಂಗಮದ ಸಂಬಂಧ ಸಮರತಿಯ ಸೋಂಕಿನಲ್ಲಿ
ಪರಮಾನಂದಜಲವೆ ಪ್ರವಾಹವಾಗಿ, ಸರ್ವಾಂಗದಲ್ಲಿ ಪುಳಕಿತವಾತಿ ಉರಿವುತ್ತಿರಲು,
ಅ ಪರಮಸುಖಸೇವನೆಯ ಮಾಡುವಲ್ಲಿ ಪಾದೋದಕಸೇವನೆ ಯೆಂದೆನಿಸಿತ್ತಯ್ಯಾ.
ಈ ಪರಮಾಮೃತಪೃಪ್ತಿ ಬಸವಣ್ಣಂಗಾಯಿತ್ತು.
ಬಸವಣ್ಣ ಶ್ರೀಪಾದಕ್ಕೆ ಶರಣೆಂದು ಬದುಕಿದೆನಯ್ಯಾ ಕಲಿದೇವರದೇವ.                  

ರಸದ ಭಾವಿಯ ತುಳುಕಬಾರದು
ಕತ್ತರವಾಣಿಯ ದಾಂಟಿದಂಗಲ್ಲದೆ.
ಪರುಷವಿದೆ, ಕಬ್ಬುನವಿದೆ ಸಾಧಿಸಬಲ್ಲೆನೆಂಬವಂಗೆ,
ಆ ಶ್ರೀಶೈಲದುದಕವ ಧರಿಸಬಾರದು,
ಗುಹೇಶ್ವರಾ, ನಿಮ್ಮ ಶರಣರಲ್ಲದೆ.               

ಮಂದರಸ್ಥಾನ ಮೊದಲಾದ ಆಱಾಱ ಕಡೆಯ
ಸ್ವಾದೋದಕ ಸಮುದ್ರದಲ್ಲಿ ವಿಶ್ರಮಿಸಿ
ಇಕ್ಷು ಸಮುದ್ರದಲ್ಲಿ ತೃಪ್ತನಾಗಿ
ಮೇರು ಮಂದಿರದಲ್ಲಿ ಮುಗ್ಧನಾದ ಕಾರಣ,
ಕೂಡಲಚನ್ನಸಂಗಾ ನಿಮ್ಮ ಶರಣ.               

೧೦   

ಚಂದ್ರಮನ ರಾಹುವೆಡೆಗೊಳಲು
ಪುರ ನಿಂದು ಉರಿವುತ್ತಿದೆ, ನೋಡಾ !
ಮಂದರಗಿರಿಯ ಸಲಿಲಮಂಜರ ಒಸರಲಾಗಿ,
ನಿಂದುರಿವುದು ಕೆಟ್ಟು, ನಿಜ ನಿಂದಿತ್ತಯ್ಯ
ಎನ್ನ ತಂದೆ, ಮಹಾಲಿಂಗಗುರು ಶಿವಸಿದ್ಧೇಶ್ವರಪ್ರಭುವೇ .                     

೧೧

|| ತ್ರಿವಿಧಿ ||

ಹತ್ತು ಪಾದೋದಕದ ಹುಟ್ಟ ನಾನೇವೇಳೈ ?
ಮತ್ತೆ ಮೂಱು ಸ್ಥಾನದಲ್ಲಿ ಜನನ !
ಒಪ್ಪಿಪ್ಪ ಸೀಮೆಯೂಳೂರ ಒಳಗನುಭವಿಸಿ
ತತ್ವ ಪಂಚಾಕ್ಷರಿಯು ಯೋಗಿನಾಥಾ.