|| ವೃತ್ತ ||

ಪರಮಗುರೂಪದೇಶದಲ ಸನ್ಮಹಿಮಾಸ್ಪದ ವೈಭವಂ ಷಡ.
ಕ್ಷರಿ ಶಿವಮಂತ್ರದೂರ್ಜಿತ ಮಹೋನ್ನತ ಚಿದ್ಘನಲಿಂಗದ ಪ್ರಭಾ
ವರಚಿರ ತೇಜಮಾತ್ಮಗುಣ ಲಕ್ಷಣಮಾಗಿ ಸದಾವಿರಾಜಿಪರದ್
ಶರಣರೆನಲ್ಕೆ ಮತ್ತಿತರ ಮಾರ್ಗದ ದೊಡ್ಡಿತದೇಂ ಶಿವಾಧವಾ.      

|| ವಚನ ||         

ಎನ್ನ ಮನದಲ್ಲಿ ಮತ್ತೊಂದನಱಿಯೆನಯ್ಯಾ,
ಓಂ ನಮಃ ಶಿವಾಯ, ಓಂ ನಮಃ ಶಿವಾಯ, ಓಂ ನಮಃ ಶಿವಾಯ ಎನ್ನುತ್ತಿದ್ದೆನು.
ಎನಗಿದೇ ಮಂತ್ರ, ಎನಗಿದೇಜಪ ಅದೆಂತೆಂದಡೆ;
ಅಗಸ್ತ್ಯ ರಾಮಾದಿಭಿರಾದೃತತ್ವಾದ ಮುಷ್ಯಮಂತ್ರಸ್ಯಚ ವೈದಿಕತ್ವಾತ್
ಪರಸ್ಯ ಮಂತ್ರಸ್ಯ ಚ ವಾಚಕತ್ವಾನ್ನಮಃ ಶಿವಾಯೆ ತಿಸದಾಜಪಧ್ವಂ ||
ಇಂತೆಂದುದಾಗಿ ಕೂಡಲಸಂಗಮದೇವಾ ನೀನೆ ಬಲ್ಲೆ ಎಲೆ ಲಿಂಗವೆ.

ನಮಃ ಶಿವಾಯ ಲಿಂಗವು ಓಂನಮಃ ಶಿವಾಯ ಬಸವಣ್ಣನು ನೀನೆ ಅಯ್ಯಾ
ಇಂತಪ್ಪ ದಿವ್ಯ ಮಂತ್ರವೆನೆನ್ನ ಮಸ್ತಕದಲ್ಲಿ ಬೆಳಗಿ ತೋಱಿದಿಯಾಗಿ
ಇದು ಕಾರಣ ಕೂಡಲ ಚನ್ನಸಂಗಯ್ಯ ಆದಿಯನಾದಿಗಳಿಲ್ಲದಂದು
ಓಂನಮಃ ಶಿವಾಯ ಎನುತಿರ್ದೆನಯ್ಯಾ.

ನ ಎಂಬುದೆ ನಂದಿಯಾಗಿ, ಮಾ ಎಂಬುದೆ ಮಹತ್ತಾಗಿ
ಶೀ ಎಂಬುದೆ ರುದ್ರನಾಗಿ, ವಾ ಎಂಬುದೆ ಹಂಸೆಯಾಗಿ
ಯಾ ಎಂಬುದೆ ಅಱುಹಾಗಿ, ಓಂಕಾರವೆ ಗುರುವಾಗಿ
ಸಂಬಂಧವೆ ಅಸಂಬಂಧವಾಗಿ, ಅಸಂಬಂಧವೆ ಸಂಬಂಧವಾಗಿ
ಎರಡೊಂದಾಗಿ ಗುಹೇಶ್ವರಲಿಂಗ ಸಂಬಂಧಿ.

ಓಂಕಾರವೆ ಪಂಚಭೂತಾತ್ಮಮಯ ನೋಡಾ
ನಕಾರವೆ ದಶಿವಿಧೇಂದ್ರಿಯ, ಮಕಾರವೆ ಮನಪಂಚಕಂಗಳು ನೋಡಾ.
ಶಿಕಾರವೆ ಪ್ರಾಣಸ್ವರೂಪು ವಕಾರವೆ ದಶವಾಯುಗಳ ಸ್ವರೂಪು
ಯಕಾರವೆ ತ್ರಿಗುಣ ಸ್ವರೂಪು ನೋಡಾ.
ಓಂಕಾರವೆ ಪಾದಾದಿ ಮಸ್ತಕ ಪರಿಯಂತರ ಪೂರ್ಣವಾಗಿ.
ತ್ವಗುಮಯವಾಗಿರ್ಪುದು
ನಕಾರವೆ ರುಧಿರಮಯವಾಗಿಪ್ಪುದು, ಮಕಾರವೆ ಮಾಂಸಮಯವಾಗಿಪ್ಪುದು
ಶಿಕಾರವೆ ಮೇಧಸ್ಸುಮಯವಾಗಿಪ್ಪುದು, ವಕಾರವೆ ಅಸ್ಥಿಮಯವಾಗಿಪ್ಪುದು
ಯಕಾರವೆ ಮಜ್ಜಮಯವಾಗಿಪ್ಪುದು, ಷಡಕ್ಷರ ಮಂತ್ರವೆಲ್ಲವು ಕೂಡಿ
ಶುಕ್ಲಮಯವಾಗಿಪ್ಪುದು ನೋಡಾ.
ಇದು ಕಾರಣ ಷಡ್ಧಾತು ಸವೇಂದ್ರಿಯ ವಿಷಯ ಕರಣೇಂದ್ರಿಯಗಳೆಲ್ಲವು
ಷಡಕ್ಷರಮಯವಾಗಿಪ್ಪವು.
ಇದು ಕಾರಣ ಶರಣನ ಶರೀರವೆ ಶಿವ ಶರೀರ ನೋಡಾ,
ಮಹಲಿಂಗ ಗುರುವೆ ಶಿವಸಿದ್ಧೇಶ್ವರ ಪ್ರಭುವೆ.

|| ತ್ರಿವಿಧಿ ||

ಪಂಚಬ್ರಹ್ಮವನು ವಂಚಿಸದೆ ತೋಱಿದೈ
ಪಂಚಾಕ್ಷರದ ಭೇದವನ್ನಱುಹಿದಿರಿ
ಪಂಚಭೂತಾತ್ಮವನು ಕಳೆದು ಶಿವಲಿಂಗವನು
ಪಂಚಮದೊಳಿರಿಸಿದೈ ಯೋಗಿನಾಥಾ.