ಶ್ರುತಿಃ

” ಓಂ ಬ್ರಹ್ಮಸ್ನಾನಂ ಪವನಜ್ಞಾನಂ ಲಿಂಗಧ್ಯಾನಂ ಸುಜ್ಞಾನ ದರ್ಶನಂ
ಪ್ರಭಾಕರಂ ದಿವಾಕರಂ ” ಇಂತೀ ಶ್ರುತಿಮತದಲ್ಲಿ ತಿಳಿದು
ನೋಡಲಿಕೆಯಾಗಿ
ಆ ಹೆಜ್ಜೆ ಹೋಯಿತು ಅಂಗಸಂಗನ ಹಳ್ಳಿಯ ಒಳಗೆಱೆಯ ಒಸರು ಭಾವಿಯ
ಲಿಂಗಗೂಡಿನ ಶಿವಪುರದ ಸೀಮೆಯ ನಿಟಿಲಪುರದ ತಲೆವಲದಲ್ಲಿ
ಸಿಕ್ಕದ ಕಳ್ಳರ ಅಂಗದಮೇಲೆ ಕಟ್ಟಿತಂದು ಎನ್ನೊಡೆಯ
ಪ್ರಭುರಾಯಂಗೊಪ್ಪಿಸಲು ಆ ಪ್ರಭುತಾಯ ತನ್ನವರೆಂದು
ಒಕ್ಕುದ ಮಿಕ್ಕುದನಿಕ್ಕಿ ರಕ್ಷಿಸುವ ಕಾಣಿರೆ. 
ಇಂತಪ್ಪ ಘಟಪಂಚಭೂತಂಗಳಂ ಕಟ್ಟಿ ನಿಲಿಸಿ ಆತ್ಮಜ್ಞಾನ ಭಕ್ತಿರಸಾ
ಮೃತಸಾರಾಯವನುಣಬಲ್ಲರರಾರೆಂದಡೆ ಪ್ರಭುವಿನ ಬಳಿಯ
ಬಸವ ಸಂತತಿಗಲ್ಲದೆ ಅಳವಡದು ಮಿಕ್ಕಿನ ಪ್ರಪಂಚಿಗಳಿಗೆ
ಅಸಾಧ್ಯಕಾಣಾ, ಕೂಡಲಚನ್ನಸಂಗಮದೇವಯ್ಯ.

೩೦

ಎನ್ನ ಮಡದಿ ಹಾಲು ಕಾಸುವಾಗ ಹಾಲಿನ ಕುಡಿಕೆಯಲ್ಲಿ ಹಾವು ಬಿದ್ದು
ಸತ್ತಿತ್ತು.
ಎನ್ನ ಭಾಷೆ ನೆಟ್ಟಿತ್ತು ಮಡದಿಯ ಬಿಡಬಾರದು, ಹಾಲಚಲ್ಲಬಾರದು.
ಹಾವಿನ ವಿಷ ಹಾಲಿನಲ್ಲಿಯೆ ಸೋರಿತ್ತು. ಅದಕಿನ್ನವುದು ತೆಱ ಕ್ರಿಯೆ ಬಿಡಬಾರದು.
ಅಱುಹಿಂಗಾಶ್ರಯವಿಲ್ಲ. ಅಱಿದನಱಿದೆಹೆನೆಂದಡೆ ಪ್ರಪಂಚಿಕಕ್ಕೆ ಒಡಲಾಯಿತ್ತು.
ಹುಲಿಯ ಬಾಯಿ ಹಾಡಿನೆಡೆಯನಿಕ್ಕಿದ ತೆಱ ಎನಗಾಯಿತ್ತು.
ಈ ಸಂದೇಹವ ಬಿಡಿಸು ಸದಾಶಿವಮೂರ್ತಿಲಿಂಗವೆ ನಿಮ್ಮ ಧರ್ಮ.

೩೧      

ದೂರದ ತುದಿಗೊಂಬನಾರಯ್ಯ ಗೆಲುವರು ?
ಮೀಱಲಿಲ್ಲದ ನಿರಾಳದ ನಿಲುವನು ಮೀಱಿಕಾಬ ಘನವನು ಬೇಱೆ ತೋಱಲಿಲ್ಲ.
ತೋಱಿ ಕಾಬಡೆ ತನ್ನ ಹಿಡಿಯಲಿಲ್ಲಯ್ಯ.
ಒಱಿಯಾವಿನ ಹಾಲನಾರಯ್ಯಾ ಕಱೆವರು ?
ಮೂಱು ಲೋಕದೊಲಗೆ ತಾನಿಲ್ಲ ಗುಹೇಶ್ವರ.

೩೨

ತಲೆ ಕೆಚ್ಚಲು ಮೊಲೆ ನಾಲಗೆಯಾಗಿ ಕೊಂಬೂರಿ ನಡೆದು ಬಿಡಿಗಱುವಾಯಿತ್ತು.
ಕಪಿಲ ಇದೆ ಕಱೆದುಣ್ಣಲುಱಿಯದೆ ಮುಱುಗುತೈದಾರೆ ನನೇನೆಂಬೆ
ತ್ರೈಲೋಚನ ಮನೋಹರ ಮಾಣಿಕೇಶ್ವರ ಲಿಂಗವೆ.

೩೩       

ಸಾಸವೆಯಷ್ಟು ಸುಖಕ್ಕೆ ಸಾದರದಷ್ಟು ದುಃಖ ನೋಡಾ.
ಗಳಿಗೆಯ ಬೇಟವ ಮಾಡಿಹೆನೆಂಬ ಪರಿಯ ನೋಡಾ.
ತನ್ನನಿಕ್ಕಿ ನಿಧಾನವ ಸಾಧಿಸಿಹೆನೆಂದಡೆ ಬಿನ್ನಾಣ ತಪ್ಪಿತ್ತು ಗುಹೇಶ್ವರಾ.

೩೪

ಓವಿದ ಬೆಣ್ಣೆಯ ಓಡಿನಲಿಕ್ಕೆ ಸಾವುತ ಬೇವುತ ಲೈದಾರಲಾ !
ಇದ್ದ ತಳವಾಱ ನಿದ್ರೆಯಲೊರಗಲು ಹೊದ್ದಿದ ನಿಧಾನ ಹೋಯಿತಲ್ಲಾ !
ಬುದ್ಧಕತನದಲ್ಲಿ ಬಲಲುವರೆಲ್ಲರ ಹೊದ್ದದೆ ಹೋದನೋ ಮಾರೇಶ್ವರಾ.

೩೫

ಕನಸಿನ ಕಾಮಿನಿ ಕಾಯವಿಲ್ಲದ ವಿಟ ಅಪ್ಪಿನೋಡಿದರಿಲ್ಲ ಆರುವ ಕಾಣೆ.
ಉಕ್ಕಿತ್ತು ಕಾಯದೊಲಗಿರ್ದುಬಿಂದು ಸಜ್ಜನದ ಸಲುಗೆಯಲೊಲಿಯದೆ ನೀನೆನ್ನನಿದ್ರೆಯಲೊಲಿವರೋ ಮಾರೇಶ್ವರಾ ?

೩೬

ತೋಱುವಡೆ ವಿಷವಾಗಿರದು ಅದು ತೋಱದಾಗಿ ಅಮಿಯಬಾರದು.
ಅಱಿಯಬಾರದಾಗಿ ಹೇಳಬಾರದು. ಹೇಳಬಾರದಾಗಿ ಅದು ಕಾಣಬಾರದು.
ಅದು ಅತರ್ಕ್ಯ, ಅದು ನಿನ್ನಲ್ಲಿಯೆ ಅದೆ.
ಹೇಳಲಿಲ್ಲ ಕೇಳಲಿಲ್ಲ ಅಱಿಯಲಿಲ್ಲದುದನೇನೆಂಬೆ ಹೇಳಾ, ಸಿಮ್ಮೆಲಿಗೆಯ ಚನ್ನರಾಮಾ ?

೩೭

ಕಂಗಳ ಮುಂದೆ ತೋಱೆದೆ ಮಿಂಚು ಮನದ ಮೇಲೆ ತಿಳಿಯಿತ್ತಿದೇನೋ?
ಕಳೆಯಬಾರದು ಕೊಳಬಾರದು
ಕಂಗಳತ್ತಲೆ ಮನದ ಮಿಂಚು ಇದು ಬಲ್ಲವರನಲ್ಲೆನಿಸಿತ್ತು
ಚಿಮ್ಮಲಿಗೆಯ ಚನ್ನರಾಮನೆಂಬನಾಮದೊಡಕು.

೩೮

ಧರೆಯ ಮೇಲುಳ್ಳ ಅಱಿ ಹಿರಿಯರೆಲ್ಲ ಮರುಳುಗೊಂಡಾಡುತ್ತಿದ್ದಾರೆ ನೋಡಾ.
ಮಂಜಿನ ಮಡಕೆಯೊಳಗೆ ರಂಜನೆಯಭಂಡವ ತುಂಬಿ ಅಂಜದೆ
ಪಾಕವ ಮಾಡಿಕೊಂಡುಂಡು ಭಾಂಡವ ಮೂಱುತಿಪ್ಪರು ನೋಡಾ.
ಸಂಜೀವನೆಯ ಬೇರಕಾಣದೆ ಮರಣಕ್ಕೊಳಗಾದರು
ಗುಹೇಶ್ವರನಱಿಯದ ಭವಭಾರಕರೆಲ್ಲರು.

೩೯

ಸತ್ಯವಿದೆ, ಸಮಾಧನವಿದೆ, ಮನಕ್ಕೆ ಬಾರದಿದೇನಯ್ಯ ?
ಸರ್ವಸಮ್ಮತವಾದ ಸುಖವಿದೆ, ಮನಕ್ಕೆ ಸೋಂಕದಿದೇನಯ್ಯಾ ?
ಆನೀನೆಂಬುದೊಂದು ಘನವಿದೆ ಕೂಡಲಸಂಗಯ್ಯ ಬಱಿಯ ಭ್ರಮೆ ಇದೇನಯ್ಯಾ ?

೪೦     

ಅಪ್ಪಿನ ಭಾವಿಗೆ ತುಪ್ಪದ ಘಟ
ಸಪ್ಪಗೆ ಸಿಹಿಯೆಂಬೆರಡಿಲ್ಲದ ರುಚಿ.
ಪರುಷ ಮಟ್ಟದ ಹೊನ್ನ ಕರೆಸದ ಭುಜಗನು ಬೆರೆಸದೆ ಬಸುರಾಯಿತ್ತ ಕಂಡೆ.
ಅಱುವಿನ ಆಪ್ಯಾಯನ ಮಱಹಿನ ಸುಖವೋ ! ಇದು ಕಾರಣ,
ಮೂಱು ಲೋಕವಳಿಯಿತ್ತು ಗುಹೇಶ್ವರಾ.

೪೧     

ಅಗೆಯದ ಭಾವಿಯಲ್ಲಿ ಸೆಲೆಯಿಲ್ಲದ ನೀರ ಸೇದೋದಕ್ಕೆ ಹುರಿಯಿಲ್ಲದೆ ಕಣ್ಣಿ
ತುಂಬೋದಕ್ಕೆ ಬಾಯಿಲ್ಲದೆ ಕುಂಭ ಸೇದುವಾತನ ಕಣ್ಣು ತಲೆ ಹಿಂದದೆ
ಕಣ್ಣಿಯ ತೆಗೆದನ ಕೈಕಾಲಿಲ್ಲದೆ ಭಾವಿಯ ತಡಿಯ ತಡವಾಯಿತ್ತು
ಅಲೇಖನಾಥಶೂನ್ಯ ಕಲ್ಲಿನೊಳಗಾದ ಕಾಣಾ.

೪೨      

ಸಿರಿಶೈಲದ ಮಧ್ಯದಲ್ಲಿ ಒಂದು ಪರುಷದ ಭಾವಿ ಹುಟ್ಟಿತ್ತು.
ಆ ಭಾವಿಯೊಳಗೆ ಕಬ್ಬುಣದ ಅದಿರು ಹುಟ್ಟಿ ಸಿದ್ಧ ರಸ ನುಂಗಿತ್ತು.
ಇದ್ದವನ ಸುದ್ದಿಯ ಸತ್ತವ ಹೇಳಿ ಕಾಣದವ ಕೇಳಿ ಹೋದ
ಸದಾಶಿವ ಮೂರ್ತಿಲಿಂದ ಬಚ್ಚಬಯಲು.

೪೩      

ವಾರಿಸಲಿಲದಲ್ಲಿ ಒಂದು ಶರಧಿ ಹುಟ್ಟಿತ್ತು.
ಊರೆಲ್ಲರ ಉರುಳುತ್ತದೆ.
ಆ ಊರೊಳು ಕೊರಳ ಬಿರಿ ಬ್ರಹ್ಮನ ಉಸುರಡಗಿತ್ತು.
ವಿಷ್ಣುವಿನ ಎಡೆಯೂಡಬಿಟ್ಟಿತ್ತು
ರುದ್ರನ ಹಣೆಗಿಚ್ಚು ದಳ್ಳುರಿ ಬೇವುತ್ತಿದೆ ಅದನಂದಿಸುವದಿಲ್ಲ
ಮೂಱರ ಬಿಂದುವನಱಿ ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗಾ

೪೪     

ಅಣು ಇಱುಹಿನಮರಿ ಬ್ರಹ್ಮನ ಅಜಾಂಡವನೂರಿ
ವಿಷ್ಣುವಿನ ಪಿಂಡವ ನುಂಗಿತ್ತು.
ಅದು ತನ್ನೊಡಲಿಂಗೆ ಇರದೆ ರುದ್ರನ ತೊಡೆಯ ಮುಡಿಯವಶ
ಆತ ಸಹಿತವಾಗಿ ನುಂಗಿತ್ತು.
ಅದು ಯಾತರ ಸೂತ್ರವೆಂದು ಆತ್ಮನ ಭೇದವನಱಿ ಪುಣ್ಯಾರಣ್ಯದಹನ
ಭೀಮೇಶ್ವರಲಿಂಗ ನಿರಂಗಸಂಗ.

೪೫     

ಪಕ್ಕವಿಲ್ಲದ ಹಕ್ಕಿ ಮಿಕ್ಕುಮೀಱಿ ಹಾರಿಯಾಡುತ್ತಿರಲು
ಹಿಡಿದವರ ಹಿಡಿಯ ನೋಡದು.
ಹರಿಯ ಹೃದಯವ ನೋಡದು,
ಬ್ರಹ್ಮನ ಬ್ರಹ್ಮಾಂದವ ನೋಡದು.
ರುದ್ರನ ರೌದ್ರವ ಭಸ್ಮವಮಾಡಿ ದ್ವೈತಾದ್ವೈತವೆಂಬ ಮೇಹಕೊಂಡು
ಘನಕ್ಕೆಘನವೆಂಬ ಘುಟಿಕೆಯನೆ ನುಂಗಿ
ಇದ್ದುದೆಲ್ಲವಂ ನಿರ್ದೋಷವಂ ಮಾಡಿ
ಮಿಕ್ಕಿನ ಘನವ ಹೇಳಲೊಲ್ಲದೆ ಇದಕ್ಕಿನ್ನಾರೆಂದೆಡೆ
ಕೂಡಲಚನ್ನಸಂಗಯ್ಯನ ಶರಣರಲ್ಲದೆ ಮತ್ತಾರು ಇಲ್ಲವೆಂದು
ಘೂ ಘೂ ಘೂಕೆಂದಿತ್ತು.

೪೬

ಹುಟ್ಟಿದ ಮರದಲ್ಲಿ ಹಾರದ ಪಕ್ಷಿ ತಲೆದೋಱುತ್ತದೆ
ಆಗದ ಹಣ್ಣ ತುಡುಕಿ ರಸತಾಗದೆ ನುಂಗುತ್ತದೆ
ಅದು ಸಾರೀಕ ಪಕ್ಷಿ ಹಾರಿಹೋಯಿತ್ತು ಅದರಾಗತವನಱಿ
ಆತ್ಮನಿರವಯ ನಿನ್ನ ನೀನಱಿ ಪುಣ್ಯಾರಣ್ಯದಹನ ಭೀಮೇಶ್ವರಲಿಂಗ
ನಿರಂಗಸಂಗಾ.

೪೭

ನೆಲನಿಲ್ಲದೆ ಭೂಮಿಯ ಮೇಲೆ ಒಂದು ಗಿಡ ಹುಟ್ಟಿತ್ತು.
ಸಿಡಿಲಬಣ್ಣದವೆಂಟು ಹೂವಾದವು ನೋಡಾ.
ಕೊಂಬಿನೊಳಗೆ ಫಲದೋಱಿಬೇರಿನೊಳಗೆ ಹಣ್ಣಾಯಿತ್ತು.
ಅದು ಕಾರಣ ಠಾವಿನಲ್ಲಿ ತೊಟ್ಟುಬಿಟ್ಟು ಬಿದ್ದ ಹಣ್ಣಮೆದ್ದವನಲ್ಲದೆ
ಶರಣನಲ್ಲ ಗುಹೇಶ್ವರ.

೪೮

ಉರಿಯ ಸೀರೆಯ ನಡುವೆ ಒಂದು ಸರೋವರದಲ್ಲಿ
ನರಿ ತಿರಿಗಾಡುತ್ತದೆ.
ಬಾಲ ಉಡುವಿನಂದ, ನಡು ಬಳುವಿನ ಚೊಲ್ಲೆಹದಂದೆ, ತಲೆ ಕೊಡಗದಂದ.
ರೂಪು ನರಿಯಾಗಿ ಆತ್ಮ ಕುರ್ಕುರನಾಗಿ ಯಾತಕ್ಕೂ ಸಿಕ್ಕದೆ ಸರೋವರದಲ್ಲಿ ಹರಿದಾಡುತ್ತಿದೆ.
ಅದು ಸದಾಶಿವ ಮುರ್ತಿಲಿಂಗವನಱಿದವರಿಗಲ್ಲದೆ ಸಿಕ್ಕುದು ಆ ಜೀವಾ.

೪೯

ಮರ್ಕಟನ ತಲೆಯಲೊಂದು ಮಾಣಿಕ್ಯವಿಪ್ಪುದ ಕಂಡೆನು ನೋಡಯ್ಯ.
ಆ ಮರ್ಕಟನ ಹಿಡಿದು ಮಾಣಿಕ್ಯವ ತಕ್ಕೊಳಲಾರಳವಲ್ಲ ನೋಡಾ.
ಆ ಮರ್ಕಟನ ಕೊಂಡು ಮಾಣಿಕ್ಯವ ತೆಕ್ಕೊಳಬಲ್ಲದೆ ಮುಕ್ಕಣ್ಣ
ಶಿವನೆಂದು ಬೇರುಂಟೆ ಹೇಳಾ ತಾನಲ್ಲದೆ, ಮಹಾಲಿಂಗಗ ಗುರುಶಿವ ಸಿದ್ಧೇಶ್ವರ ಪ್ರಭುವೆ.

೫೦

|| ತ್ರಿವಿಧಿ ||

ಸಂಚಲವಸ್ತುವಿನ ಸಂಚವನಱಿದ ಡೆವಿ
ರಿಂಚಿಗೆ ಅಱಿದಯ್ಯಾ ಶಿವನೆ ಭವನೆ
ಸಂಚಿತವನಱಿದ ಮಹಾಂತ ನಿನಗಲ್ಲದೆ ನಿ
ಶ್ಚಿಂತಪದವಿಲ್ಲ ಯೋಗಿನಾಥ.

೫೧

ದಶವಿಧದ ಭಕ್ತಿಯಲಿ ಒಸರಿತು ಭಕ್ತ್ಯವೃತವು
ಪಸರಿ ಪರ್ಬಿತು ಸಕಲ ಲೋಕಕಾಗಿ
ಕುಡಿವರಿದು ಕುಡಿಮುಱಿದು ಮೃಡನಲ್ಲಿಗೆಯ್ಯಲ್ಕೆ
ನುಡಿಯ ಬ್ರಹ್ಮವು ನೀನೆ ಯೋಗಿನಾಥಾ.

೫೨

ಏಳುದಲಯವ ಕಳೆದು ಜೀವರತ್ಮದ ಜನನ
ಆಳುತ್ತ ಮುಳುಗುತ್ತ ಅಖಿಲದೊಳಗೆ
ಕಾಳು ಬೇಳೆಂಬವರ ಆಳವಾಡಿಯೆ ಕಾಡಿ
ಕೊಳು ಹೋಯಿತು ನಿಮಗೆ ಯೋಗಿನಾಥಾ.