|| ವೃತ್ತ ||

ಪತಿಹಿತಧರ್ಮಚಾರಿಣಿಯೆನಿಪ್ಪ ಮಹಾಸತಿ ವೇಶಿ ಮಾಳ್ಪವೋಲ್
ಚತುರತೆ ರೀತಿ ಧಾತು ಕಡು ಜಾಣ್ಮೆ ಮೃದೂಕ್ತಿ ಬಹೂಪಚಾರಸ  ಗತಿಯನೆದೆತ್ತ
ಬಲ್ಲಳು ಶಿವೈಕ ಸಮರ್ಪಿತ ಚಿತ್ತದಿಂದ ದೃಢ   ವೃತ ನೆನಿಸಿರ್ಪ
ಭಕ್ತನುಳಿದಂಗಮನೆಂತಱಿವಂ ಶಿವಾಧವಾ.    

|| ವಚನ ||         

ಕೊಟ್ಟ ಲಿಂಗ ಮರಳಿಕೊಂಡು ಬಾಯೆಂದು
ಎನ್ನನಟ್ಟಿದನಯ್ಯಾ ಶಶಿಧರನು ಮರ್ತ್ಯಕ್ಕೆ.
ನಿನ್ನ ಮುಖದಲ್ಲಿ ಎನ್ನ ಭವ ಹರಿವುದೆಂದು
ಹರಹಿಕೊಂಡಿರ್ದೆನಯ್ಯಾ ದಾಸೋಹವನು.
ನಿಮ್ಮ ಬರ ಹಾರೈಸುವದ ಒಂದನಂತ ದಿನಂಗಳು.
ಇಂದೆನ್ನ ಪುಣ್ಯದ ಫಲದಿಂದ ಎನಗೆ ಗೋಚರವಾದಿರಿ
ಹಿಂದಣ ಸಂದೇಹ ಸೂತಕ ಹಿಂಗಿತ್ತು
ಎನ್ನ ಪ್ರಾಣಲಿಂಗ ನೀವೆಯಾಗಿ, ಎನ್ನ ಸರ್ವಾಂಗದಲ್ಲಿ ಸನ್ನಹಿತನಾಗಿ
ಎನ್ನ ಚಿಂತೆಯ ನಿಶ್ಚಿಂತೆಯ ಮಾಡಾ,
ಕೂಡಲಸಂಗಮದೇವಾ.

ಕಾಯ ಪಲ್ಲಟದ ಹೆಸರಲ್ಲದೆ ಅನುಮಿಷನಲ್ಲಮನಾಗಿ
ತನ್ನ ಲಿಂಗವ ತಾನೆ ಮರ್ತ್ಯಕ್ಕೆ ತಂದ.
ಕಾಯಪಲ್ಲಟದ ಹೆಸರಲ್ಲದೆ ಪೌಲಸ್ತ್ಯನು ಸಕಳೇಶ್ವರಮಾದಿರಾಜನಾಗಿ
ತನ್ನ ಲಿಂಗವ ತಾನೆ ಮರ್ತ್ಯಕ್ಕೆ ತಂದ.
ಕಾಯಪಲ್ಲಟದ ಹೆಸರಲ್ಲದೆ ವಿಷ್ಣುದಶಾವತಾರಕ್ಕೆ ಬಂದು ಸಿಕ್ಕಿದ ಸಿದ್ಧರಾಮಯ್ಯನಾ
ತನ್ನ ದಿವ್ಯ ದೇಹವ ತಾನೆ ಮರ್ತ್ಯಕ್ಕೆ ತಂದ.
ಇದು ಕಾರಣ ಕೂಡಲಚನ್ನಸಂಗಯ್ಯನಲ್ಲಿ
ಶರಣನ ಉಪಮಿಸಬಾರದು, ಉಪಮಾತೀತನು.

ಹಿಂದೆ ಎನ್ನ ಗುರುವನುಮಿಷಂಗೆ ನೀನು ಲಿಂಗವ ಕೊಟ್ಟೆನೆಂಬ ಸೂತಕಬೇಡ,
ಅಂದು ಅನಿಮಿಷ ನಿನ್ನ ಕೈಯಲ್ಲಿ ಕೊಂಡನೆಂಬ ಸಂಕಲ್ಪ ಬೇಡ,
ಹಿಂದು ಮುಂದೆಂಬ ಸಂದಳಿದು ನಿಂದಲ್ಲಿ ಭರಿತನಾದ ಬಳಿಕ ಕೊಡಲುಂಟೆ,
ಕೊಳಲುಂಟೆ ಹೇಳಾ?
ಹಿಡಿದಡೆ ಸಿಕ್ಕದು, ಕೊಡುವಡೆ ಹೋಗದು,
ಎಡೆಯಾಟದ ಜೀವಪರಿಯೆಂತಯ್ಯಾ?
ಲಿಂಗವ ಹೋಗಾಡಿದನೆಂಬ ನಿಂದೆಯ ಪ್ರಮಥರು ನುಡಿವುತ್ತಿರಲು
ಲಿಂಗೈಕ್ಯವೆಂತಪ್ಪುವುದು ಹೇಳಾ?
ನಿಮ್ಮ ಪ್ರಮಥರು ಮೆಚ್ಚಿ ಅಹುದೆಂದು ಒಡಂಬಟ್ಟು ಎನ್ನಮನ ಮನ
ತಾರ್ಕಣೆಯಪ್ಪಂತೆ ನಿಮ್ಮಲ್ಲೈಕ್ಯವ ಮಾಡಾ
ಕೂಡಲಸಂಗಮದೇವಾ?

ನಿಂದೆಯೆಂಬುದು ಬಂದಭವದಲ್ಲಿ ಹೋಯಿತ್ತು ಮುಂದೆ ಗುರುಕಾರುಣ್ಯವಾದಲ್ಲಿಯೆ
ಹಿಂದು ಹಱಿಯಿತ್ತು
ಮರ್ತ್ಯಲೋಕದ ಮಹಾಗಣಂಗಳು ಮಚ್ಚಿ ದಾಸೋಹವ
ಮಾಡಿದಲ್ಲಿಯೆ ಪ್ರಮಥಗಣಂಗಳು ತಮ್ಮೊಳಗೆ ನಿಮ್ಮ   ನಿಂಬಿಟ್ಟುಕೊಂಡರು
ಅಂಗದ ಮೇಲೆ ಲಿಂಗವುಲ್ಳದೆಲ್ಲ ಸಂಗಮನಾಥನೆಂದು
ನಿನ್ನ ಸರ್ವಾಂಗದಲ್ಲಿ ಲಿಂಗಸನ್ನಿಹಿತವಾದಲ್ಲಿಯೆ
ಪ್ರಾಣಲಿಂಗ ಸಂಬಂಧ ಅಳವಟ್ಟಿತ್ತು. ಆ ಲಕ್ಷದ ಮೇಲೆ
ತೊಂಬತ್ತಾಱು ಸಾವಿರ ಪ್ರಮಥರಿಗೆ
ಮಾಡಿದ ಸಯಿದಾನವ ನಿಮ್ಮ ಶಿವಲಿಂಗಕ್ಕೆ ಆರೋಗಿಸಲಿಂತು
ತೃಪ್ತಿಪಡಿಸಿದಲ್ಲಿಯೆ ನಿನ್ನ ತನು ಮನ ಪ್ರಾಣಂಗಳು ಅರ್ಪಿತವಾಗಿ
ಮಹಾಪ್ರಸಾದ ಸಾಧ್ಯವಾಯಿತ್ತು.
ಆದಿಲಿಂಗವಿಡಿದು ನಾನು ನಿಮ್ಮಲ್ಲಿ ಅಡಗಿದ ಬಳಿಕ
ಹಿಂದಣ ಸಂಕಲ್ಪವಳಿಯಿತ್ತು.
ಸರ್ವಾಚಾರ ಸಂಪತ್ತು ನಿನ್ನಲ್ಲಿ ಸ್ವಯವಾದಲ್ಲಿ
ಸರ್ವಸೂತಕ ತೊಡೆಯಿತ್ತು.
ಗುಹೇಶ್ವರ ಲಿಂಗವು ನಿನ್ನ ಹೃದಯಕಮಲದಲ್ಲಿ
ನೆಲೆಗೊಂಡು ನಿನ್ನ ಕರಸ್ಥಲದಲ್ಲಿ ತೊಳಗಿಬೆಳಗುತ್ತೈದಾನೆ.
ಇನ್ನೊಮ್ಮೆ ತಿಳಿದು ನೋಡಾ ಸಂಗನಬಸವಣ್ಣಾ !

ಹುಟ್ಟಿಸಿದ ಬಳಿಕ ಕೊಟ್ಟ ಭೋಗಂಗಳ ತಪ್ಪಿಸೆನೆಂದಡೆ
ತಪ್ಪವು ನೋಡಾ ಅಯ್ಯಾ.
ಎನಗಿನ್ನೆಂತೊ, ಎನಗಿನ್ನೆಂತೊ, ಎನಗಿನ್ನೆಂತೆಂದು
ಯೋಚಿಸಲೇತಕಯ್ಯಾ
ನ ಭೋಕ್ತಂಕ್ಷೀಯ್ಯತೆ ಕರ್ಮ ಎಂಬ
ಶ್ರುತಿಯಿಪ್ಪುದೆ ಕೂಡಲಸಂಗಮದೇವಾ.

ಕಾಯನಿಶ್ಚೈಸಲಿಲ್ಲ, ಜೀವನಿಶ್ಚೈಸಲಿಲ್ಲ;
ಕಾಯಜೀವ ಎರಡಕ್ಕೂ ಸೆಲೆಯಿಲ್ಲವಯ್ಯಾ.
ಸುಖವ ನಿಶ್ಚೈಸಲಿಲ್ಲ, ದುಃಖವ ನಿಶ್ಚೈಸಲಿಲ್ಲ;
ಸುಖದುಃಖ ಎರಡಕ್ಕೂ ನೆಲೆಯಿಲ್ಲವಯ್ಯಾ.
ರಾಜ್ಯವ ನಿಶ್ಚೈಸಲಿಲ್ಲ, ಲಕ್ಷ್ಮಿಯ ನಿಶ್ಚೈಸಲಿಲ್ಲ;
ಅಭ್ರಚ್ಛಾಯೆ, ಮರೀಚಿಕಾ ಜಲ, ಮಹೇಂದ್ರಜಾಲವಯ್ಯಾ ನನ್ನದು.
ಮನೆ ನನ್ನದು, ಧನ ನನ್ನದು ಎಂಬ ಮರುಳ ಕೇಳಾ
ಕನಸಿನ ಸುಖ ಕಣ್ದೆಱಿದಲ್ಲಿ ಹೋಯಿತ್ತು.
ಹಾಲುಳ್ಳಲ್ಲಿ ಹಬ್ಬವ ಮಾಡಿ, ಗಾಳಿಯುಳ್ಳಲ್ಲಿ ತೂಱಿಕೊಳ್ಳಿರಿ;
ಬಳಿಕಲಱಸಿದರುಂಟೆ ಪರಮ ಸುಖವು?
ನಿಜಗುರು ಕಪಿಲಸಿದ್ಧಮಲ್ಲಿಕಾರ್ಜುನನ
ಹಱಿಗೋಲುಳ್ಳಲ್ಲಿ ತೊಱೆಯದಾಂಟಿದೆ.

ಭಕ್ತಿಹೀನನಱುದು ಭಕ್ತಿಮಾಡುವಲ್ಲಿ
ಗುರು ಲಿಂಗ ಜಂಗಮದ ಇರವ ಸಂಪಾದಿಸಲಿಲ್ಲ.
ಭಕ್ತಿಯುಳ್ಳವಬನಱಿದು ಭಕ್ತಿಯ ಮಾಡುವಲ್ಲಿ
ಗುರುವಿನಲ್ಲಿ ಗುಣವನಱಸಬೇಕು
ಲಿಂಗದಲ್ಲಿ ಲಕ್ಷಣವನಱಸಬೇಕು
ಜಂಗಮದಲ್ಲಿ ವಿರಕ್ತಿಯನಱಸಬೇಕು
ಅದೆಂತೆಂದಡೆ:
ಇಂತೀ ತ್ರಿವಿಧವು ತನ್ನ ಪ್ರಾಣವಾದ ಕಾರಣ
ಪರುಷಶುದ್ಧವಲ್ಲದೆ ಅವಲೋಹದ ಕುಲವ ಕೆಡಿಸಲಱಿಯದು.
ತಾ ಹಿಡಿದು ಆರಾಧಿಸುವ ವಸ್ತು ಶುದ್ಧವಾಗಿಯಲ್ಲದೆ
ಪೂಜಿಸುವ ಭಕ್ತನ ಚಿತ್ತಶುದ್ಧವಾಗಲಱಿಯದು.
ಸದಾಶಿವಮೂರ್ತಿಲಿಂಗ ಶುದ್ಧವಲ್ಲದೆ ಎನ್ನಂಗ ಶುದ್ಧವಲ್ಲ.

ಭಕ್ತ ಗುರು ಚರವ ನುಡಿವಲ್ಲಿ ನೋವುಂಟೆ ಅಯ್ಯಾ
ಪುರುಷ ಕಳ್ಳನಾದಲ್ಲಿ ಸತಿಗೆ ಸೆಱೆಯುಂಟಲ್ಲದೆ
ಸೂಳೆಯ ಮಿಂಡ ಸತ್ತಡೆ ಅವಳನಾರು ಸೆಱೆಯತೆಗೆವರುಂಟೆ ಅಯ್ಯಾ?
ಸಜ್ಜನ ಸದ್ಭಕ್ತನೆಂದಡು ಸದಾಶಿವಮೂರ್ತಿ ಲಿಂಗಕ್ಕೆ ಒಳಗು.

ಮನವನೊಪ್ಪಿಸುವ ಠಾವಿನಲ್ಲಿ ಹೆಣ್ಣಬೇಡಿದಡೆ ನೋಯಲೇತಕೆ
ಧನವನೊಪ್ಪಿಸುವ ಠಾವಿನಲ್ಲಿ ನಿಷ್ಠುರ ಬಂದಡೆ ತಾಳಬೇಕು
ತನುವನೊಪ್ಪಿಸುವ ಠಾವಿನಲ್ಲಿ ಆಸೆಯಲ್ಲಿ ಕುಸಿಕಿಱೆದಡೆ ಹುಸಿಯೆನ್ನದಿರ್ದಡೆ
ಇವೆಲ್ಲವು ರಸರುಜದ ಗುಣ, ಭಕ್ತಿಯ ಸತ್ಯದನಿತ್ಯವೆದೆಂಬೆ
ಕಾಮಹರಪ್ರಿಯ ರಾಮನಾಥ.

೧೦

ವ್ರತ ನೇಮ ಶೀಲಮಂ ಮಾಡಿಕೊಂಡು
ಸಮಯಾಚಾರದಲ್ಲಿ ನಡೆದೆನೆಂಬ ಭಕ್ತನ ಕ್ರಮವೆಂತೆಂದಡೆ
ತಾನು ಭೀಗಿಸುವಂತಹ ಸಕಲದ್ರವ್ಯಂಗಳೆಲ್ಲವನು
ಜಂಗಮಕ್ಕೆ ಕೊಟ್ಟು ತಾನು ಕೊಳ್ಳಬೇಕು.
ಅವಾವಾವೆಂದಡೆ:
ಮಜ್ಜನ, ಭೋಜನ, ಅಂದಣ, ಸತ್ತಿಗೆ, ಚಾಮರ,
ಆನೆ, ಕುದುರೆ, ಕನ್ನಡಿ, ಪರಿಮಳ ಲೇಪನ,
ಗಂಧ, ಅಕ್ಷತೆ, ವಸ್ತ್ರ, ರತ್ನಾಭರಣ, ತಾಂಬೂಲ,
ಮೆಟ್ಟಡಿಮಂಚ, ಸುಪ್ಪತ್ತಿಗೆ, ಸ್ತ್ರೀಸಂಪರ್ಕಒಡೆಯರಿಗೆ
ಆಯಿತ್ತೆಂಬುದ ಕೇಳಿ ಆ ಒಡೆಯನ ವಾಕ್ಯಪ್ರಸಾದದಿಂದ
ಮಹಾಪ್ರಸಾದವೆಂದು ತನ್ನ ಸ್ವಸ್ತ್ರೀಗೆ ಕೂಟಸ್ಥನಾಗಬೇಕು
ಅದೆಂತೆಂದಡೆ:
ಶಿವರಹಸ್ಯದಲ್ಲಿ:
ತೈಲಾಭ್ಯಂಗಸ್ತನೂದ್ವರ್ತಃ ಸ್ನಾನ ಭೋಜನ ಮೈಧುನಂ|
ಜಂಗಮೇಷ್ಠಂವಿನಾ ಭುಂಜೇತ್ ದ್ರಾಸಾದೋನಿಷ್ಫಲೋಭವೇತ್ ||
ಇಂತೆಂಬ ಶಿವನ ವಾಕ್ಯವನಱಿದು ಎಲ್ಲಾವ್ರತಂಗಳಿಗೆಯು ಜಂಗಮಪ್ರಸಾದವೆ ಪ್ರಾಣ.
ಎಲ್ಲ ನೇಮಕ್ಕೆಯು ಜಂಗಮದ ದರ್ಶನವೆ ನೇಮ
ಎಲ್ಲ ಶೀಲಕ್ಕೆಯು ಜಂಗಮದ ಮಾಟವೆ ಶೀಲ
ಎಲ್ಲ ವ್ರತನೇಮ ಶೀಲಂಗಳೆಲ್ಲವು ಜಂಗಮದ ಮುಂದಿಟ್ಟು
ಶುದ್ಧತೆಯಹ ಕಾರಣ ಆ ಜಂಗಮದಲ್ಲಿ ಅರ್ಥ ಪ್ರಾಣ ಅಪಮಾನ
ಮುಂತಾದ ಈ ಮೂಱಕ್ಕೂ ಕಟ್ಟು ಮಾಡಿದೆನಾದಡೆ ಎನಗೆ ದ್ರೋಹ.
ಅದೆಂತೆಂದಡೆ; ಶಿವರಹಸ್ಯದಲ್ಲಿ:
ನಸರ್ವಾಚಾರ ವಿಶೇಷೋಣ, ಶಿವಭಾವೋಹಿ ವಿಶೇಷತಃ
ಸರ್ವಶೀಲ ವಿಶೇಷಣ, ಶಿವದಾಸೋಹ ಮುತ್ತಮಂ || ಎಂದುದಾಗಿ,
ಇಂತೆಂಬ ವಾಕ್ಯವನಱಿದು ಆ ಜಂಗಮದ ದರ್ಶನದಿಂದವೆ
ಸಕಲದ್ರವ್ಯಂಗಳು ಪವಿತ್ರವು.
ಆ ಜಂಗಮದ ಪಾದತೀರ್ಥದಿಂದವೆ ಮಹಾಘನಲಿಂಗಕ್ಕೆ ಜೀವಕಳೆ
ಆ ಜಂಗಮದ ಪ್ರಸಾದದಿಂದವೆ ಮಹಾಘನಲಿಂಗಕ್ಕೆ ತೃಪ್ತಿ.
ಇಷ್ಟನಱಿದಬಳಿಕ ಜಂಗಮಲಿಂಗಕ್ಕೆ ಸಂದೇಹವ ಮಾಡಿದೆನಾದಡೆ
ಎನಗೆ ಕುಂಭಿಪಾತಕ ನಾಯಕ ನರಕ ತಪ್ಪದು
ಈ ಜಂಗಮದ ಭಕ್ತಿ ಕಿಂಚಿತ್ತು ಕೊಱತೆಯಿಲ್ಲದ ಹಾಗೆ
ಜೀವವುಳ್ಳ ಪರಿಯಂತರ ಇದೆ ಆಚಾರವಾಗಿ, ಇದೆ ಪ್ರಾಣವಾಗಿ
ನಡೆದು ಆಚಾರವೇಪ್ರಾಣವಾದ ರಾಮೇಶ್ವರಲಿಂಗವ ನೊಡಗೂಡುವನು.

೧೧

ಸದ್ಭಕ್ತಂಗೆಯೂ ಜಂಗಮಕ್ಕೆಯೂ ಭಾಜನ ಬೇಱೆಂಬ
ಶಾಸ್ತ್ರವಾದಧಮರು ನೀವು ಕೇಳಿರೊ!
ಭಕ್ತದೇಹಿಕ ದೇವನೆಂದು ಶ್ರುತಿ ಸಾಱುತ್ತಿದೆ, ಅಱಿದು ಮಱಿಯದಿರಿ
ಮಱಹಿನಿಂ ಬ್ರಹ್ಮನ ಶಿರಹೋಯಿತ್ತು,
ಮಱಹಿನಿಂ ದಕ್ಷನು ತಲೆಯನೀಗಿ
ಕುಱಿದಲೆಯ ನಾದುದನಱಿಯಿರೆ?
ಮಱೆಯದೆ ವಿಚಾರಿಸಿ ನೋಡಿ : ಭಕ್ತಂಗೂ ಲಿಂಗಕ್ಕೂ ಭಿನ್ನವಿಲ್ಲ.
ಇನ್ನು ಭಕ್ತಂಗೆಯೂ ಜಂಗಮಕ್ಕೆಯೂ ಭೇದವಿಲ್ಲ.
ಬೇರ್ಪಡಿಸಿ ನುಡಿಯಲುಂಟೆ?
ಇನ್ನು ಆಗುರುವಿಂಗೆಯೂ ಭಕ್ತಂಗೆಯೂ ಸಂಕಲ್ಪವಿಲ್ಲ;
ಅದೆಂತೆಂದಡೆ:
ಮೆಟ್ಟುವ ರಕ್ಷೆ, ಮುಟ್ಟುವಯೋನಿ, ಅಶನ, ಶಯನ, ಸಂಯೋಗ
ಮಜ್ಜನ, ಭೋಜನ ಇಂತಿವನು
ಗುರು ಲಿಂಗ ಜಂಗಮ ಸಹಿತವಾಗಿ ಭೋಗಿಸುವ ಸದ್ಭಕ್ತಂಗೆ
ನಮೋ ನಮೋ ಎಂಬೆನು.
ಅದೆಂತೆಂದಡೆ:
ಅರ್ಥಪ್ರಾಣಾಭಿಮಾನಂಚ ಗುರೌ ಲಿಂಗೇಚ ಜಂಗಮೇ
ತಲ್ಲಿಂಗಜಂಗಮಪ್ರಾಣಂ ಭಕ್ತಸ್ಥಲ ಮುದಾಹೃತಂ ಎಂದುದಾಗಿ
ಇದನಱಿದು ಅರ್ಥ ಪ್ರಾಣಾಭಿಮಾನವನು ಗುರು ಲಿಂಗ ಜಂಗಮಕ್ಕೆ ಸಮರ್ಪಿಸಿ
ಆ ಗುರು ಲಿಂಗಜಂಗಮವೆ ಪ್ರಾಣವಾಗಿಹ ಸದ್ಭಕ್ತಂಗೆಯೂ
ಆ ಗುರು ಲಿಂಗ ಜಂಗಮಕ್ಕೆಯೂ ಏಕಭಾಜನವೇಕ ಭೋಜನವಲ್ಲದೆ
ಭಿನ್ನ ಭಾಜನ ಭಿನ್ನಭೋಜನಮುಂಟೆ? – ಇಲ್ಲವಾಗಿ;
ಅದೇನು ಕಾರಣವೆಂದಡೆ:
ಆ ಸದ್ಭಕ್ತನ ಅಂಗವೆಂಬ ಗೃಹದಲ್ಲಿ ಜಂಗಮನಿಪ್ಪನಾಗಿ
ಇದನಱಿದು ಬೇಱೆಮಾಡಿ ನುಡಿಯಲಾಗದು.
ಚನ್ನಯ್ಯನೊಡನೆ ಉಂಬುದದಾವ ಶಾಸ್ತ್ರ?
ಕಣ್ಣಪ್ಪ ಸವಿವುದ ಸವಿವುದದಾವ ಶಾಸ್ತ್ರ?
ಭಕ್ತದೇಹಿಕ ದೇವನಾದ ಕಾರಣ!
ಅದೆಂತೆಂದಡೆ:
ಭಕ್ತ ಜಿಹ್ವಾಗ್ರ ತೋಲಿಂಗಂ ಲಿಂಗ ಜಿಹ್ವಾಗ್ರ ತೋ ರುಚಿಃ
ರುಚ್ಯಗ್ತೇತು ಪ್ರಸಾದೋಸ್ತಿ ಪ್ರಸಾದಃ ಪರಮಂ ಪದಂ
ಎಂದೆಂಬೊ ಪುರಾಣವಾಕ್ಯವನಱಿದು
ಸದ್ಭಕ್ತನೂ ಗುರು ಲಿಂಗ ಜಂಗಮವೂ ಈ ನಾಲ್ವರೂ
ಒಂದೆ ಭಾಜನದಲ್ಲಿ ಸಹಭೋಜನಮಂ ಮಾಡಿದವರಿಗೆ
ಇನ್ನೆಲ್ಲಿಯ ಸಂಕಲ್ಪವೋ, ಇನ್ನೆಲ್ಲಿಯ ಸೂತಕವೊ
ಇನ್ನೆಲ್ಲಿಯ ಪಾತಕವೊ ಕೂಡಲಸಂಗಮದೇವಾ?

೧೨

ಆತ್ಮಸಂಗವಾದವರ್ಗೆ ಬಹಿರ್ಭಾವವಿಲ್ಲ.
ಇಂದ್ರಿಯಂಗಳು ಲಿಂಗವಾದವರ್ಗೆ ವಿಷಯಸೂತಕವಿಲ್ಲ.
ಕರಣಂಗಳು ಲಿಂಗವಾದವರ್ಗೆ ಹಿಂದು ಮುಂದೆಂಬ ಸಂಶಯವಿಲ್ಲ.
ಲಿಂಗಾಲಯವು ಮನವಾದವರ್ಗೆ ಇಹಪರವೆಂಬ ಸಂಬಂಧವಿಲ್ಲ.
ಲೋಕದಂತೆ ನಡೆವರು, ಮಾಯಾಮೋಹದಂತಿಹರು.
ತನು ವ್ಯವಹಾರಿಗಳಲ್ಲದೆ ಮನವು ಮಹದಲ್ಲಿ ಪರಿಣಾಮಿಗಳು ನೋಡಾ.
ಇಂತಲ್ಲದೆ ಲಿಂಗಾನುಭಾವ ಸಖಿಗಳ ಲೋಕದ ಪ್ರಪಂಚಿಗಳೆಂದಡೆ
ಮನೋಮಧ್ಯದೊಳಗಿಪ್ಪ ಜ್ಯೋತಿರ್ಲಿಂಗವು ನಗದಿಹನೇ ಗುಹೇಶ್ವರಾ.

೧೩

ರಣವನರ್ಚಿಸಿ ಭೂತಕ್ಕೆ ಬಲಿಯ ಕೊಡುವ
ಕಲಿಯ ಮನದ ಕೊನೆಯ ಮೊನೆಯ ಮೇಲಿಪ್ಪ ಧೈರ್ಯದಂತೆ
ಸಮಯಾಚಾರವಮಾಡಬೇಕು.
ಮಾಡಿದಲ್ಲದೆ ಇಲ್ಲ, ಮಾಡಿಹೆನೆಂಬುದು ಸಾಮಾನ್ಯವೇ?
ಇದು ಕಾರಣ, ಕೂಡಲಚನ್ನಸಂಗಯ್ಯ,
ಸಮಯಭಕ್ತಿ ಸಂದಿತ್ತು ಸಂಗನಬಸವಣ್ಣಂಗೆ.

೧೪

ಗುರುಕರುಣಿಸಿ ಪ್ರತ್ಯಕ್ಷ ಲಿಂಗವ ಪರುಶನವಮಾಡಿ
ತೋಱಿದ ಬಳಿಕ ಹೊಲೆಗಂಡೆನೆಂದು ತೊಲಗಲಾಗದು.
ಹೊಲತಿ ಲಿಂಗವ ಪೂಜಿಸಲಾಗದು, ಅದೆಂತೆಂದಡೆ:
ಲಿಂಗಾರ್ಚನರತಾ ನಾರೀ ರಜಸ್ಸೂತಕಸಂಯುತಾ|
ರವಿರಗ್ನಿರ್ಯಥಾ ವಾಯು ಸ್ತದ್ವತ್ಕೋಟಿಶುಚಿರ್ಭವೇತ್||
ಹೊಲಸ ಮನದಲ್ಲಿ ಬಿಡದವರಿಗೆ ಗುರು ಲಿಂಗವಿಲ್ಲ
ಬಸವಪ್ರಿಯ ಕೂಡಲಚನ್ನಸಂಗಮದೇವಾ.

೧೫

ಸದ್ಭಕ್ತನಾದಡೆ ಪರಾಪರಸ್ತ್ರೀಯ ಕೂಡಬೇಕು
ಸಹಜ ಪತಿವ್ರತೆಯಾದಡೆ ಪರಾಪರ ಪುರುಷರ ನೆರೆಯಬೇಕು
ಇದು ಸದ್ಭಕ್ತಿಯಹಾದಿ, ಸದಾಸನ್ನದ್ಧರ ಉಭಯದ ಯೋಗ
ಈ ಗುಣದ ಒಳಗ ತಿಳಿದು ಹೊಱಗೆ ಮಱಿದಡೆ
ಊರ್ಧ್ವರೇತೋ ಮೂರ್ತಿಸ್ವೇತ ಸ್ವಯಂಭು ಕಪಿಲೇಶ್ವರಲಿಂಗವ ಕೂಡಿದಕೂಟ.

೧೬

ಬೇಕೆನಲಾಗದು ಶರಣಂಗೆ; ಬೇಡನಲಾಗದು ಶರಣಂಗೆ;
ಲಿಂಗವಶದಿಂದ ಬಂದುದ ಪತಿಕರಿಸದಿರ್ದಡೆ
ಮಹಾಘನವು ಅವಗವಿಸದು ನೋಡಾ.
ಅದೆಂತೆಂದಡೆ:
ಅವ್ರತ ಸುವ್ರತಶ್ಚೈವ ವೇಶ್ಯಾ ದಿವ್ಯಾನ್ನ ಭೂಷಣಂ
ಅಕಲ್ಪಿತಂ ಚ ಭೋಗಾನಾಂ ಸರ್ವಂ ಲಿಂಗಸ್ಯ ಪ್ರೇರಣಂ || ಎಂದುದಾಗಿ
ಇದು ಕಾರಣ, ಕೂಡಲಚನ್ನಸಂಗಯ್ಯ ನಿಮ್ಮ ಶರಣರ
ಪರದ್ವಾರಿಗಳೆಂದು ನುಡಿದವರಿಗೆ ನಾಯಕನರಕವಯ್ಯಾ.

೧೭

ಬೇಡಲಾಗದು ಶರಣಂಗೆ; ಬೇಡಲಾಗದು ಶರಣಂಗೆ;
ಬಂದ ಸುಖವನತಿಗಳಿಯಲಾಗದು ಶರಣಂಗೆ. ಇದು ಕಾರಣ,
ಕೂಡಲಚನ್ನಸಂಗಯ್ಯನ ಶರಣರು
ಉಂಡು ಉಪವಾಸಿ ಬಳಸಿ ಬ್ರಹ್ಮಚಾರಿ.

೧೮

ಒಲ್ಲೆನೆಂಬುದು ವೈರಾಗ್ಯ ಒಲಿವೆನೆಂಬುದು ಕಾಯಗುಣ
ಆವ ಪದಾರ್ಥವಾದಡು ತಾನಿರ್ದೆಡೆಗೆ ಬಂದಡೆ
ಲಿಂಗಾರ್ಪಿತವ ಮಾಡಿಕೊಂಬುದು
ಕೂಡಲಚನ್ನಸಂಗಯ್ಯನನೊಲಿಸ ಬಂದ ಪ್ರಸಾದ ಕಾಯವ ಕೆಡಿಸಲಾಗದು.

೧೯

ಲಿಂಗಕ್ಕೆಂದೆ ನೆನೆವೆ; ಲಿಂಗಕ್ಕೆಂದೆ ಮಾಡುವೆ ವ್ಯವಸಾಯವ,
ಲಿಂಗಕ್ಕೆಂದೆ ಮಾಡುವೆ ಸಕಲ ಪದಾರ್ಥಂಗಳ,
ಲಿಂಗಕ್ಕೆಂದೆ ಭಾವಿಸುವೆ,
ಅಂಗಗುಣಂಗಳನಱಿಯೆನಯ್ಯಾ,
ಲಿಂಗಕ್ಕೆಂದೆ ಕಾಮಿಸುವೆ ನಿಃಕಾಮಿಯಾಗಿ
ಎನ್ನ ದೇಹೇಂದ್ರಿಯ ಮನಃಪ್ರಾಣಾದಿಗಳು ಲಿಂಗವಾದ ಕಾರಣ,
ಲಿಂಗಕ್ಕೆಂದೆ ಭಾವಿಸಿ, ಲಿಂಗ ಪ್ರಾಣವಾಗಿ, ಲಿಂಗಕ್ಕೆಂದೆ ಕೈಕೊಂಬೆನು,
ಅನರ್ಪಿತವನಱಿಯೆನು ಕೂಡಲಚನ್ನಸಂಗಮದೇವಾ.

೨೦

ಲಿಂಗದ ಭಾವ ಹಿಂಗದ ನಂಬಿಗೆ ಅಂಗನೆಯರ ಮೇಲೆ
ಲಿಂಗವಾಯಿತ್ತು ಕಾಯ ಸಂಸಾರ ಸುಖವು
ಇದು ಕಾರಣ, ಸಕಳೇಶ್ವರ ನಿಮ್ಮ ಶರಣರ, ಕಾಮಿಗಳೆಂದೆನ್ನಬಹುದೆ?

೨೧

ಎಲ್ಲರಂತೆ ನುಡಿದು, ಎಲ್ಲರಂತೆ ಸಂಸಾರವ ಬಳಸುತ್ತಿಪ್ಪರೆಂದು
ಎಲ್ಲರಂತೆ ಕಾಣಬಹುದೆ ನಿಜದೊರೆಕೊಂಡ ನಿರ್ಮಲಜ್ಞಾನಿಗಳ?
ಅವರ ಮನೋಮಧ್ಯದಲ್ಲಿ ತೊಳಗಿ ಬೆಳಗುವ ಶಿವಜ್ಞಾನಬೀಜವು
ಫಲಿಸದೆ ಹೊಳ್ಳಪ್ಪುದೆ?
ಉರಿಯದಿದ್ದಡೆ ಕಿಚ್ಚಿಗೊಱಲೆ ಕೊಂಬುದೆ ಗುಹೇಶ್ವರಾ?

೨೨

ಅಱುಹ ಬೈಚಿಟ್ಟುಕೊಂಡು ಮಱೆಯ ಮಾನವರಂತೆ
ಹೀನಹೆಸರಲ್ಲಿ ಕರೆದಡೆ ಓ ಎನುತಿಪ್ಪವರು ನರರೆ ಅಯ್ಯಾ ನಿಮ್ಮ ಶರಣರು.
ಕುಱುಹಿಲ್ಲ ಲಿಂಗಕ್ಕೆ, ತೆಱಹಿಲ್ಲ ಶರಣಂಗೆ,
ಬಱಿಯ ಸಂಸಾರವ ಬಳಸಿಯೂ ಬಳಸದಂತಿಪ್ಪರು
ಮಹಾಲಿಂಗ ಕಲ್ಲೇಶ್ವರ, ನಿಮ್ಮ ಶರಣರು.

೨೩

ಜಲದೊಳಗೆ ಮತ್ಸ್ಯ ಜಲನಾಸಿಕ ಹೊಗದ ಹಾಂಗೆ
ಪವನ ಹಿಡಿದು ವರ್ತಿಸುವ ಪರಿಯ ನೋಡಯ್ಯಾ
ಜನಮಧ್ಯದಲ್ಲಿ ಶರಣನಿದ್ದಡೇನು? ಸಂಸಾರವ ಹೊದ್ದಿಯೂ
ಹೊದ್ದದಿಪ್ಪ ಪರಿಯ ನೋಡಯ್ಯಾ.
ಮತ್ಸ್ಯಕಾಬುದ್ಧಿಯನು, ಶರಣಂಗೀ ಬುದ್ಧಿಯನು
ಕರುಣಿಸಿದೆ ಕಾಣಾ, ಕಪಿಲಸಿದ್ಧ ಮಲ್ಲಿಕಾರ್ಜುನಾ.
೨೪

ಪಂಕವಿಲ್ಲದೆ ಕಮಲಕ್ಕೆ ಸುಗಂಧ ಸುಲಲಿತವೆಂತಪ್ಪುದಯ್ಯಾ?
ಹೊನ್ನು, ಹೆಣ್ಣು, ಮಣ್ಣು ಇಲ್ಲದೆ ದೇವತಾಯೋಗ್ಯವೆಂತಪ್ಪುದಯ್ಯಾ?
ಕಮಲ ಪಂಕದಲ್ಲಿ ವರ್ತಿಸಿದಂತೆ ಇಹರು ನಿಮ್ಮ ಶರಣರು
ಉರಿಲಿಂಗ ಪೆದ್ದಿಪ್ರಿಯ ವಿಶ್ವೇಶ್ವರಾ.

೨೫

ಶುದ್ಧ ಸತ್ಕುಲಜಂಗೆ ಅಕುಲಜೆಯ ಸಂಗದಿಂದೆ ಸತ್ಕುಲ
ಕೆಟ್ಟು ಅಕುಲಜನಾಗಿ ಹುಟ್ಟುತ್ತ ಹೊಂದುತ್ತಲಿಹುದನಾರು ಮಾಡಿದರೊ
ಎಂದು ಆರೈದು ನೋಡಿ ಮಾರಾರಿಯ ಕೃತಕವೆಂದಱಿಯಲು
ಸತ್ಕುಲಜನ ತಾಯಿ ಅಕುಲಜನ ಕೊಂದು ಸುಪುತ್ರನ ನುಂಗಿ
ತತ್ವಮಸಿವಾಕ್ಯದಿಂದತ್ತತ್ತಲಾದವರ  ನೀನೆತ್ತಿಯಲ್ಲಿ ಹೊತ್ತು ನೆರೆಯಲು ಭಕ್ತಿನಿಷ್ಪತ್ತಿಯಾಯಿತ್ತು
ಸತ್ಯವಿಲ್ಲ ಎನಗೊಂದು ಸಹಜವಿಲ್ಲ, ಗುರುಲಿಂಗ ಜಂಗಮವೆಂಬ ಮಿಥ್ಯದ ಮಾತೆಲ್ಲಿಯದೊ?
ಮಾಱೊಂದಾಗಿ ಬೆರೆದ ನಿರಾಳಕ್ಕೆ ಮಹಾಲಿಂಗ ಗುರು ಶಿವಸಿದ್ಧೇಶ್ವರನೆಂಬ
ನಾಮವೆಲ್ಲಿಯದು ನಿರ್ನಾಮಂಗೆ ಬಿಡಾ, ಮರುಳೆ.

೨೬

|| ತ್ರಿವಿಧಿ ||

ಅಱುಹಿನ ಜ್ಞಾನದ ಕುಱುಹಳಿದ ಶಿವಭಕ್ತಿ
ನೆಱಿಗೆ ತಾನೊಂದಾಗಿ ಕೂಡಿತೆಂದು,
ಅಱುವಱತು, ಕುಱುಹಳಿದು ಶಿವಭಕ್ತಿ ನೆಱೆ ತಿಳಿದು
ಗುರುವೆ ನಾ ನೀನಾದೆ ಯೋಗಿನಾಥಾ.

೨೭

ಶಿವಭಕ್ತನು ಸಕಲದಯಗಳನು
ಸಕಲ ನಿಷ್ಕಲಗಳನು ಸಮಾಗಮನು
ಸರ್ವಾಂಗ ಶಿವಲಿಂಗ ಸಂಪನ್ನನಪ್ಪವಾಗೆ
ಇಹಪರವೊಂದಯ್ಯಾ ಯೋಗಿನಾಥಾ

೨೮

ಸಮರಸವು ಸಮಸುಖವು ಸಮಭಕ್ತಿಯಾದಲ್ಲಿ
ಸಮನಿಸುವ ಸುಖಕಿನ್ನು ಸರಿಯಾವುದೈ?
ಕರುಣಾಕರನೆ ನಿಮ್ಮ ನೆಲೆಯಱೆಯದ ಭಕ್ತರಿಗೆ
ಸಮವಾರು ಲೋಕದೊಳಗೆ ಯೋಗಿನಾಥಾ.

೨೯

ಹಾಡುತ್ತ ಹೊಗಳುತ್ತ ನೋಡುತ್ತ ಲಿಂಗವನು
ಕೂಡಿ ಪುಳಕಪ್ರತತಿಯೆಸೆವುತಿರ್ಪ,
ಆರೂಢ ಭಕ್ತಿ ಕ್ರಿಯಾಳಾಪದಾನತವು
ಆರಿದಕೆ ಸರಿ ಹೇಳು ಯೋಗಿನಾಥಾ.