೨೩

ನಿಷ್ಠೆಯಿಂದ ಕೊಂಬುದು ದ್ರವ್ಯ ಪ್ರಸಾದ
ತೃಪ್ತಿಯಿಂದ ಭೋಗಿಸುವುದು ಕರುಣ ಪ್ರಸಾದ
ಅಱುಹಿನ ಮುಖದಿಂದ ಕುಱುಹಳಿದುಕೊಂಬುದು ಎರಡಳಿದ ಪ್ರಸಾದ
ಆ ಪ್ರಸಾದವಾಗಲಾಗಿ ಪರುಷ ಪರುಷಕ್ಕೆ ಇದಿರೆಡೆಗೆಟ್ಟಂತೆ
ಉರಿ ಉರಿಯೆಡೆ ಸುಡಲಿಲ್ಲದ ತೆಱನಂತೆ
ಮುಕುರ ಮುಕುರಕ್ಕೆ ಕಳೆಬೆಳಗೊಡಗೊಡಿದಂತೆ
ಇಂತೀ ಪ್ರಸಾದ ಅಂಗವಾದ ನಿರಂಗಿಯ ತೆಱ
ದಹನಚಂಡಿಕೇಶ್ವರಲಿಂಗವ ಅಂಗವಾದವನಂಗಾ.      

೨೪

ತುಷವಿದ್ದಲ್ಲಿ ಭತ್ತವಾಯಿತ್ತು; ತುಷ ಹೆರೆಹಿಂಗೆ ತಂಡುಲವಾಯಿತ್ತು
ತಂಡುಲದಗ್ಧವಾದಲ್ಲಿ ಬ್ರಹ್ಮವಾಯಿತ್ತು
ಆ ಗುಣ ಒಂದನೊಂದ ಬಿಟ್ಟು ನಿಂದುದನಱಿತಲ್ಲಿ
ಜಂಗಮ ಪ್ರಸಾದ ಲಿಂಗಕ್ಕರ್ಪಿತ
ಈಶಾನ್ಯಮೂರ್ತಿ ಮಲ್ಲಿಕಾರ್ಜುನ ಲಿಂಗಕ್ಕೆ
ಅಱಿತಲ್ಲಿಯೆ ಅರ್ಪಿತ.

೨೫

ಪ್ರಸಾದವೆ ಅಂಗವಾದವನ ಇರವೆಂತುಂಟೆಂದಡೆ
ಒಳಗಿಲ್ಲದ ಕುಂಭ ಹೊಡದು ಹೋಳಾದಂತೆ
ಮರೀಚಿಕಾ ಜಲವ ತುಂಬಿ ಸುರಿದ ಅಂಗದಂತಿರಬೇಕು
ಉರಿಯ ಮಧ್ಯದಲ್ಲಿ ನಷ್ಟವಾದ ಕರ್ಪುರದ ಗಿರಿಯಂತಿರಬೇಕು
ಮಹಾಪ್ರಸಾದವ ಕೊಂಡಲ್ಲಿ ಇದಿರು ಮೈಯಿಲ್ಲದೆ ಹರವರಿ ನಷ್ಟವಾಗಿ
ದಹನ ಚಂಡಿಕೇಶ್ವರಲಿಂಗದಲ್ಲಿ ಒಡಗೊಡಿರಬೇಕು.

೨೬

ಗುರುವಿಂಗೆ ಜೀವ ಪ್ರಸಾದ, ಚರಕ್ಕೆ ಭಾವಪ್ರಸಾದ
ಜೀವಭಾವದಲ್ಲಿ ಕೊಡಲಿಕ್ಕಾಗಿ ಪರಮ ಪ್ರಸಾದ
ಆ ಪರಮ ಪ್ರಸಾದ ವ್ಯತಿರಿಕ್ತವಾಗಿ ಕಾಣಿಸಿಕೊಂಡಲ್ಲಿ ಲಿಂಗನ
ಪ್ರಸಾದವಾಯಿತ್ತು.
ಆ ಲಿಂಗ ಪ್ರಸಾದ ತನಗಾಗಲಾಗಿ ಸ್ವಯಪ್ರಸಾದವಾಯಿತ್ತು
ಇಂತೀ ಪ್ರಸಾದ ಸ್ಥಲಂಗಳ ವಿವರಂಗಳಂ ತಿಳಿದು
ಲಿಂಗಕ್ಕೆ ಕೊಟ್ಟುಕೊಳಬೇಕು,
ದಹನ ಚಂಡಿಕೇಶ್ವರಲಿಂಗಕ್ಕೆ ಅಱಿದರ್ಪಿಸಬೇಕು.

೨೭      

ಕಾಯದಲ್ಲಿ ಸೋಂಕಳೀದು ಕೊಂಬುದು ಶುದ್ಧ ಪ್ರಸಾದಿಯಂಗ
ಕರಣಂಗಳಿಚ್ಚೆಯಿಲ್ಲದೆ ಕೊಂಬುದು ಸಿದ್ಧಪ್ರಸಾದಿಯಂಗ
ಭಾವ ತಲೇದೊಱದೆ ಜನನ ಮರಣಾದಿಗಳಿಲ್ಲ ನಾಮರೂಪು ಕ್ರಿಯೆಗೆ ಬಾರದೆ
ನಿಶ್ಚಯ ನಿಜಾಂಗ ಲೇಪವಾಗಿ ಕೊಂಬುದು ಪ್ರಸಿದ್ಧ ಪ್ರಸಾದಿಯಂಗ
ಇಂತೀ ತ್ರಿವಿಧ ಪ್ರಸಾದಂಗಳಲ್ಲಿ
ಹೊಱಗೆ ವಿಚಾರಿಸಿ ಒಳಗೆ ಕಂಡು
ಒಳಗಿನ ಗುಣದಲ್ಲಿ ಕಳೆನಿಂದು ನಿಷ್ಪತಿಯಾಗಿ
ದೃಷ್ಟ ತನ್ನಷ್ಟವಾದುದು ಸ್ವಯ ಪ್ರಸಾದಿಯಂಗ
ಇಂತಿವಱಲ್ಲಿ ತಿಳಿದುಳಿದವಂಗಲ್ಲದೆ
ಜಂಗಮ ಪ್ರಸಾದವ ಲಿಂಗಕ್ಕೆ ಕೊಟ್ಟಿಹೆನೆಂಬುದು ದೃಷ್ಟಾಂತವಲ್ಲ
ಕೊಟ್ಟುಕೊಂಡಿಹೆನೆಂದೆಡೆ ಆ ಗುರುವಿಂಗು ಲಿಂಗವೆಂಬುದೊಂದು ಕುಱುಹು,
ಜಂಗಮಕ್ಕೆಯು ಲಿಂಗವೆಂಬುದೊಂದು ಕುಱುಹು.
ಕೊಟ್ಟುಕೊಂಡೆಹೆವೆಂಬ ಭಕ್ತಂಗು ಲಿಂಗವೆಂಬುದೊಂದು ಕುಱುಹು.
ಇಂತೀ ಬೀಜ ಬೀಜದಂಕುರ ಅಂಕುರದಿಂಗ ಫಲಭೋಗ
ಫಲಭೋಗದಿಂ ಮತ್ತೆ ಫಲವಪ್ಪುದು ಕಂಡು
ಒಂದಱಿಂದೊಂದು ಗುಣವನಱಿದೆನೆಂದೆನ್ನದೆ
ಸಂದನಳಿದು ಸದಮಳಾನಂದಂಗೆ
ಒಂದು ಸೂತಕವೆಂದುರುಳಿದು ಕೊಡಲಿಲ್ಲ
ಎರಡು ಸೂತಕವೆಂದು ಮುಟ್ಟೆ ಅರ್ಪಿಸಲಿಲ್ಲ.
ಮೂಱನೊಡಗೂಡಿ ಪ್ರಸಾದವಿದೆಯೆಂದು
ಬೇಱಿಯರ್ಪಿಸಿಕೊಂಬವರಿನ್ನಾರೋ
ಇಂತೀ ಪ್ರಸಾದಿಯ ಪ್ರಸನ್ನವ ತಿಳಿದಲ್ಲಿ
ದಹನ ಚಂಡಿಕೇಶ್ವರಲಿಂಗವು ಪ್ರಸನ್ನಪ್ರಸಾದಿಕಾಯನೂ.

೨೮

ಅವಿನಾಶಂಗೆ ವಿನಾಶವನರ್ಪಿತವ ಮಾಡಬಲ್ಲಡೆ ಪ್ರಸಾದಿ.
ಆ ಪ್ರಸಾದವ ವರ್ಣ ನಾಸ್ತಿಯಾಗಿ ಕೊಳಬಲ್ಲಡೆ ಪ್ರಸಾದಿ.
ಆ ಅವಿನಾಶಂಗೆ ನಮೋ ನಮೋ ಎಂಬೆ
ಕೂಡಲಚನ್ನಸಂಗಯ್ಯ.

೨೯

ಹೆಡ ತಲೆಯ ಮಾತಬಲ್ಲಡೆ ಪ್ರಸಾದಿ ನಡುನೆತ್ತಿಯ ವರ್ಮವನಱಿದಡೆ ಪ್ರಸಾದಿ
ಕಂಗಳ ಮೇಲೆ ಕೂರ್ಮನಾಪ್ಯಾಯನವ ಬಲ್ಲಡೆ ಪ್ರಸಾದಿ
ಅಂಗೇಂದ್ರಿಯಂಗಳನೊಂದು ಮುಖವ ಮಾಡಬಲ್ಲಡೆ ಪ್ರಸಾದಿ
ನಿರಂಜನ ಜಂಗಮವನಾರಾಧಿಸಬಲ್ಲಡೆ ಪ್ರಸಾದಿ
ನಿರಾಲಂಬ ಪ್ರಣಮವನುಚ್ಚರಿಸಬಲ್ಲಡೆ ಪ್ರಸಾದಿ
ಹ್ರೀಂಶಕ್ತ್ಯಾರೂಢವಾದ ಚರಪಾದಾಂಬುವ ಹ್ರೀಂಶಕ್ತಿ ಶಬ್ದವಾದ ಲಿಂಗಕ್ಕೆ
ಶಾಂತಿಯ ಮಾಡಬಲ್ಲಡೆ ಪ್ರಸಾದಿ
ಆಧಾರ ಬ್ರಹ್ಮಾಂಡದೊಳಗೆ ಅಡಗಿದ ಅಕ್ಷರವ ನೋಡಿ ಓದಬಲ್ಲಡೆ ಪ್ರಸಾದಿ
ಭಾವಕ್ರೀಯಲ್ಲಿ ತಂದು ಕ್ರಿಯಾ ಭಾವವ ನೆಲೆಗೊಳಿಸಬಲ್ಲಡೆ ಪ್ರಸಾದಿ
ಹೊಱ ಒಳಗೆಂಬ ಭಾವಗೆಟ್ಟು ಸುಳುಹಿನ ಕಳೆ ಪ್ರಸಾದದಿ ಬೆಳಗು ನುಂಗಿದ
ಲಿಂಗಕ್ಕೆ ಅರ್ಪಿಸಿ ಸುಖಿಸಬಲ್ಲಡೆ ಪ್ರಸಾದಿ
ಸ್ಥಾವರ ಜಂಗಮದೊಳಡಗಿಸಿ ಜಂಗಮವ ಸ್ಥಾವರವ ಮಾಡಬಲ್ಲಡೆ ಪ್ರಸಾದಿ
ಇದು ಕಾರಣ, ನಿಜಗುಣನೆಂಬ ಮಹಾ ಜಂಗಮದ ನಿಜಾನಂದವೆಂಬ
ಒಕ್ಕಮಿಕ್ಕ ಮಹಾಪ್ರಸಾದವ ಕೊಂಬೆನಾಗಿ
ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗವ ಹಿಂಗದಾಲಿಂಗಿಸಿದೆನಾಗಿ
ಮಹಾಪ್ರಸಾದಿಯಾದೆನು.

೩೦

ತ್ರಿವಿಧವೆ ನಿತ್ಯವೆಂದು ತ್ರಿವಿಧಕ್ಕೆ ತ್ರಿವಿಧವನಿತ್ತು
ತ್ರಿವಿಧ ಪ್ರಸಾದವ ಕೊಳಬಲ್ಲಡೆ ಆತನ ವೀರನೆಂಬೆ
ಆತನಧೀರನೆಂಬೆ.
ಆತನ ಗುಹೇಶ್ವರ ಲಿಂಗದಲ್ಲಿ ಮಹಾ ಪ್ರಸಾದಿಯೆಂಬೆ.

೩೧
ನಿರ್ಲೇಪಕನಾಗಿ ನಿಜಗುಣಿಯಾದ ನೋಡಯ್ಯಾ
ಕಾಮಿಸದ ಕಲ್ಪಿಸದ ಪ್ರಸಾದಿ ನೋಡಯ್ಯ
ಭಾವಿಸದ ಬಯಸಲಿಲ್ಲದ ಪ್ರಸಾದಿ ನೋಡಯ್ಯಾ
ಪ್ರಸಾದದಿಂದ ಬಂದ ಪ್ರಸಾದವಲ್ಲದೆ ಮತ್ತೇನನು ಮುಟ್ಟಲೀಯನು
ಕೂಡಲಸಂಗಮದೇವರಲ್ಲಿ ಚನ್ನಬಸವಣ್ಣನು.

೩೨

ಮನಮಥನವಲ್ಲದೆ ಸೈದಾನ ಮಥನವಲ್ಲದೆ
ಶರೀರಾರ್ಧದಲ್ಲಿ ದ್ರವ್ಯವು ತಾನದಲ್ಲದೆ
ಅರ್ಪಿತ ಮುಖವಱತ ಪ್ರಸಾದಿ,
ಸಕಲ ಸುಖವಳಿದ ಪ್ರಸಾದಿ,
ಶುಕ್ಲ ಶೋಣಿತದ ಇಚ್ಚಾದಿಗಳ ಸುಖವಳಿದ ಪ್ರಸಾದಿ,
ಖಂಡಿತ ಭೋಗವಳಿದ ಪ್ರಸಾದಿ,
ಪ್ರಸಾದವೆ ಭಾವ ನಡೆನುಡಿಯ ಚೈತನ್ಯ ಪ್ರಸಂಗ ಸಂಗ
ಮಹಾಸಂಗದಲ್ಲಿ ಮನದಿಂದ ಪ್ರಸಾದಿ,
ಇದು ಕಾರಣ ಕೂಡಲ ಚನ್ನಸಂಗಯ್ಯ
ಶಬ್ದಾರ್ಥದಲ್ಲಿ ನಿಜವಾದ ಪ್ರಸಾದಿ.

೩೩       

ಆಯತ ಪ್ರಸಾದಿ ಸ್ವಾಯತ ಪ್ರಸಾದಿ ಸನ್ನಹಿತ ಪ್ರಸಾದಿ
ಸಮಭೋಗ ಪ್ರಸಾದಿ.
ಪ್ರಸಾದವೆ ಮಹಾ ಪ್ರಾಣವಾಗಿ ಪ್ರಸಾದವು,
ಪ್ರಸಾದಿಯನವಗ್ರಹಿಸಿಕೊಂಡಿಪ್ಪುದು ಪ್ರಸಾದವು.
ಪ್ರಸಾದಿ ಏಕವಾಗಿರ್ದುಡಾನು ನಮೋ ನಮೋ ಎಂಬೆನು
ಕೂಡಲಚನ್ನಸಂಗಯ್ಯ.

೩೪

ಅರ್ಪಿಸಿದ ಸುಖ ತಪ್ಪದೆ ಇಂಬುಗೊಂಡಿತ್ತಾಗಿ
ಅಲ್ಲಿಯೆ ಅರ್ಪಿತವಾಯಿತ್ತು.
ಅಂಗವೆಂಬ ಶಂಕೆಯನರ್ಪಿತವೆತ್ತ ಹೋಯಿತ್ತೆಂದಱಿಯೆ
ಕಾಯದ ಸುಖವೆ ಲಿಂಗಸುಖಕ್ಕೆ ಈಡಾಯಿತ್ತಾಗಿ
ತನಗಱಿದರ್ಪಿವಾದಪ್ಪಾದಲ್ಲಿ ನೀನು ಮುಂತಾಗಿರ್ದೆ
ಕೂಡಲ ಚನ್ನಸಂಗಾ.

೩೫

ಅಂಗವ ಲಿಂಗ ಮುಖದಲ್ಲಿ ಅರ್ಪಿಸಿ ಅಂಗವನಂಗವಾಯಿತ್ತು.
ಮನವನಱಿದು ಲಿಂಘಕರ್ಪಿಸಿ ಮನ ಲಯವಾಯಿತ್ತು.
ಅಂಗಭಾವ ಮನ ಭಾವವಳಿದ ಕಾರಣ,
ಕಾಯ ಅಕಾಯವಾಯಿತ್ತು.
ಎನ್ನ ಅಕಾಯದ ಸುಖಭೋಗವ ಲಿಂಗವೆ ಭೋಗಿಸುವನಾಗಿ,
ಶರಣಸತಿ ಲಿಂಗಪತಿಯಾದೆನು.
ಇದು ಕಾರಣ, ಚನ್ನಮಲ್ಲಿಕಾರ್ಜುನನೆಂಬ ಗಂಡನ ಒಳಹೊಕ್ಕು ಬೆರಸಿದೆನು.

೩೬

ಸರ್ವಸುಯಿಧಾನದಿಂದ ಸಾವಧಾನಿಯೆನಿಸಿಕೊಂಬಡೆ
ಕಾಮಿಸುವ ಕಾಮವ ಲಿಂಗಾರ್ಪಿತವ ಮಾಡಬೇಕು.
ಕ್ರೋಧಿಸುವ ಕ್ರೋಧವ ಲಿಂಗಾರ್ಪಿತವ ಮಾಡಬೇಕು.
ಲೋಭಿಸುವ ಲೋಭದ ಲಿಂಗಾರ್ಪಿತವ ಮಾಡಬೇಕು.
ಮೋಹಿಸುವ ಮೋಹವ ಲಿಂಗಾರ್ಪಿತವ ಮಾಡಬೇಕು.
ಮದಿಸುವ ಮದವ ಲಿಂಗಾರ್ಪಿತವ ಮಾಡಬೇಕು.
ಮತ್ಸರಿಸುವ ಮತ್ಸರವ ಲಿಂಗಾರ್ಪಿತವ ಮಾಡಬೇಕು
ಅಲಗಿನ ಮೊನಿಯಮೇಲಣ ಸಿಂಹಾಸನ ಹೊರಳಿ ಹೋಗಬಾರದು
ಶಿವಾಚಾರ ಸಾವಧಾನ ಸನ್ಮತವಾದ ಸಾರ್ವಾರ್ಪಿತವ ಬಲ್ಲಡೆ
ಭಿನ್ನಭಾವವೆಲ್ಲಿಯದೋ ಗುಹೇಶ್ವರಾ.

೩೭

ಉಂಬುವದು ಉಣ್ಣಲೇಬೇಕು.
ಮುಟ್ಟುವದು ಮುಟ್ಟಲೇಬೇಕು.
ಮಾಡುವದು ಮಾಡಲೇಬೇಕು.
ನೋಡುವದ ನೋಡಲೇಬೇಕು.
ಕೂಡುವದ ಕೂಡಲೇಬೇಕು.
ಉಂಡುಟ್ಟು ಕಂಡುಕೇಳಿಯು ಹೇಳಿಬಿಟ್ಟು ಬಿಡದಾತ ಕಾಣಾ ಗುಹೇಶ್ವರಾ.

೩೮

ಜೀವಕ್ಕೆ ಜೀವವೆ ಆಧಾರ.   ಜೀವತಪ್ಪಿಸಿ ಜೀವಿಸಬಾರದು.
ಪೃಥ್ವೀಬೀಜಂ ತಥಾಮಾಂಸಂ ಅಪ್ ದ್ರವ್ಯಂ ಸುರಾಮಯಂ ||
ಆತ್ಮಾ ಜೀವಸಮಾಯುಕ್ತಂಜೀವೋಜೀವೇನ ಭಕ್ಷಯೇತ್ ||
ಎಂದುದಾಗಿ
ಅಹಿಂಸಾ ಪರಮೋಧರ್ಮವೆಂಬ ಶ್ರಾವಕರನು ಕಾಣೆ.
ಲಿಂಗಾರ್ಪಿತವಾದುದೆಲ್ಲ ಶುದ್ಧ; ಉಳಿದುದೆಲ್ಲ ಜೀವನ್ಮಯ ಕಾಣಾ,
ಗುಹೇಶ್ವರ.

೩೯

ಅಹುದೆಂಬುದ ಬಸವಣ್ಣ ಕೊಂಡ.
ಅಲ್ಲ ಎಂಬುದ ಪ್ರಭುದೇವರು ಕೊಂಡರು.
ಇನ್ನವುದನಹುದೆಂಬೆನು ?
ಇನ್ನಾವುದನಲ್ಲಾ ಎಂಬೆನು ?
ಇವರೆಲ್ಲ ಸದರ್ಥರಲ್ಲದೆ ಲಿಂಗ ಸದರ್ಥರೊಬ್ಬರೂ ಇಲ್ಲ
ಕೂಡಲ ಚನ್ನಸಂಗಾ, ನಿಮ್ಮಾಣೆ.

೪೦

ನಿನ್ನಱಿಕೆಯ ನರಕವೇ ಮೋಕ್ಷ ನೋಡಯ್ಯಾ.
ನಿನ್ನನಱಿಯದ ಮುಕ್ತಿಯೇ ನರಕ ಕಂಡಯ್ಯಾ
ನೀನೊಲ್ಲದ ಸುಖವೇ ದುಃಖ ಕಂಡಯ್ಯಾ.
ನೀನೊಲಿದ ದುಃಖವೇ ಪರಮಸುಖ ಕಂಡಯ್ಯಾ.
ಚನ್ನಮಲ್ಲಿಕಾರ್ಜುನಯ್ಯ ನೀ ಕಟ್ಟಿ ಕೆಡಹಿದ
ಬಂಧನವೇ ನಿರ್ಬಂಧವನೆಂದಿಪ್ಪೆನು.

೪೧

ಅನಾದಿಕುಳವಾದ ಏಕಾದಶ ಪ್ರಸಾದದ ಭೇದವ ತಿಳಿದಡೆ,
ಪ್ರಥಮದಲ್ಲಿ ಗುರುಪ್ರಸಾದ, ದ್ವಿತೀಯದಲ್ಲಿ ಲಿಂಗಪ್ರಸಾದ
ಪಂಚಮದಲ್ಲಿ ಅಪ್ಯಾಯನ ಪ್ರಸಾದ, ಷಷ್ಟದಲ್ಲಿ ಸಮಯಪ್ರಸಾದ,
ಸಪ್ತಮದಲ್ಲಿ ಪಂಚೇಂದ್ರಿಯ ವಿರಹಿತ ಪ್ರಸಾದ,
ಅಷ್ಟಮದಲ್ಲಿ ಅಂತಃಕರಣ ಚತುಷ್ಟಯ ವಿರಹಿತ ಪ್ರಸಾದ,
ನವಮದಲ್ಲಿ ಸದ್ಭಾವ ಪ್ರಸಾದ, ದಶಮದಲ್ಲಿ ಸಮತಾ ಪ್ರಸಾದ,   ಏಕಾದಶದಲ್ಲಿ ಜ್ಞಾನ ಪ್ರಸಾದ
ಇಂತೀ ಏಕಾದಶ ಪ್ರಸಾದವನತಿಗಳೆದು, ಕೂಡಲ ಚನ್ನಸಂಗಯ್ಯನಲ್ಲಿ
ಐಕ್ಯಪ್ರಸಾದಿಗೆ ನಮೋ ನಮೋ ಎಂಬೆನು.

೪೨

ಊಟ(ದ) ದೆಸೆಯಿಂದ ಹೆಚ್ಚಿ, ಉಡಿಗೆ ತೊಡಿಗೆಯ ಮೇಲೆ
ಮೆಱಿವ ತನುವ ಕಂಡು,
ರೂಪಲಾವಣ್ಯಸುಖಿಭೋಗಿಗಳೆಂಬರಯ್ಯಾ !
ಈ ಲೋಕವ ಮಾನವರು ಸುಖಿಗಳಾದಡೆ,
ತನುವ ತಾಪತ್ರಯಾದಿಗಳು ಮುಟ್ಟಬಲ್ಲವೆ ?
ಮಾಯಾಮೋಹವೆಂಬ ಮಲೆನಾಗರು ಹಿಡಿದು ಬಿಡದು, ನೋಡಾ;
ಸುಖಗಳೆಂಬ ಈ ಲೋಕದ ಕಾಕುವಿಚಾರವನೇನೆಂಬೆನಯ್ಯಾ ?
ಭಕ್ತಿಯೆ ರೂಪು, ನಿತ್ಯವೆ ಲಾವಣ್ಯ,
ಮುಕ್ತ್ಯಂಗನೆಯ ಕೂಡಿ ಸುಖಿಸುವದೆ ಸುಖ,
ಲಿಂಗಭೋಗೋಪಭೋಗಿಯಾದ ಪ್ರಸಾದ ಭೋಗವೆ ಭೋಗ,
ಇಂತಪ್ಪ ಲಿಂಗಸಂಗಿಗಳೂ ಆವಲೋಕದಲ್ಲಿಯೂ ಇಲ್ಲ, ನೋಡಾ !
ಮಹಾಲಿಂಗಗುರುಶಿವಸಿದ್ಧೇಶ್ವರ ಪ್ರಭುವೇ.

೪೩      

|| ತ್ರಿವಿಧಿ ||

ಎಸಳಿಂದ ಪರಿಭವದ ಪಸರವಾಯಿತು ನೋಡ
ಪರೀಕ್ಷಿಸುವ ಪ್ರಸಾದವೆಲ್ಲಿ ರೂಪೇ !
ಆ ರೂಪಣರೂಪನೊಂದು ಮಾಡಿದ ಬಳಿಕ
ಪ್ರಸನ್ನ ಪ್ರಸಾದವೈ ಯೋಗಿನಾಥಾ.

೪೪

ಬಂದುದನು ಅತಿಯಗಳೆಯ, ಬಾರದುದ ಬಯಸನೈ
ಹಿಂದುಮುಂದಱಿಯ ಪ್ರಸಾದದಲ್ಲಿ
ಸಂದಳಿದ ಬಣ್ಣವನು ಒಂದು ಮಾಡಿದ ಬಳಿಕ
ಹಿಂದುಮುಂದಱಿತೆನೈ ಯೋಗಿನಾಥಾ.

೪೫

ಶುದ್ಧ ಪ್ರಸಾದ ಮೂಱಚ್ಚಪ್ರಸಾದ ಮೂ.
ಱುತ್ತಪ್ರಸಾದವ ಮತ್ತೈದುಭವಿಸಿ
ಇಂತು ಪ್ರಸಾದ ಹನ್ನೊಂದಕ್ಕೆ ಜನನವೈ
ಚಿತ್ತದಲಿ ಗ್ರಹಿಸಿದೆನು ಯೋಗಿನಾಥಾ.