|| ವೃತ್ತ ||

ಅರ್ಪಿತದ ಪ್ರಸಾದದ ಸುಸೂಕ್ಷ್ಮಕಳಾ ವ್ಯವಧಾನಯೋಗವೆಂ
ತಿರ್ಪುದೊ ವಾಙ್ಮನಕ್ಕನುಪಮಂ ಗುರುವಾಕ್ಯಾನಿರೂಪದಿಂ ಕರಂ
ತೋರ್ಪುದನನ್ಯಭಾವ ಮನುಭೂತಿ ಪದೈಕಸುಸಾಧ್ಯವನಾತ್ಮವಿ
ತ್ಕರ್ಪುರವಹ್ನಿಯಂತೆಸೆವ ಲಿಂಗ ನಿಜೈಕ್ಯತೆಯಿಂ ಶಿವಾಧವಾ ||  

|| ವಚನ ||

        

ಪ್ರಸಾದಿಯ ಪ್ರಸಾದದಲೊದಗಿದ ಪ್ರಸಾದಿಯ
ನೇನೆಂದುಪಮಿಸುವೆನಯ್ಯಾ ?
ಏನೆಂದು ಸ್ತುತಿಸುವೆನಯ್ಯ ?
ಪ್ರಸಾದಕ್ಕೆ ಮಹಾಪ್ರಸಾದಿಯಾದ ಪ್ರಸಾದಿಯು.
ಅಗಮ್ಯಪ್ರಸಾದದಲ್ಲಿ ಸ್ವಾಯತವಾದ ಕೂಡಲ ಸಂಗಮದೇವರಲ್ಲಿ
ಚನ್ನಬಸವಣ್ಣಂಗೆ ನಮೋ ನಮೋ ಎನುತಿರ್ದೆನು.

ಕಾಣಬಾರದ ಘನವ ಕರದಲ್ಲಿ ಧರಿಸಿದ,
ಹೇಳಬಾರದ ಘನವ ಮನದಲ್ಲಿ  ತೊಱಿದ.
ಉಪಮಿಸಬಾರದ ಘನವ ನಿಮ್ಮ ಪ್ರಸಾದದಲ್ಲಿ ತೋಱಿದ.
ಇಂತೀ ತ್ರಿವಿಧವು ಏಕಾರ್ಥವಾಗಿಹ ಭೇದವ
ಬಸವಣ್ಣ ತೋಱಿಕೊಟ್ಟನಾಗಿ ನಾನು ಬದುಕಿದೆನು ಕಾಣಾ
ಕೂಡಲಸಂಗಮದೇವಾ.

ಬೆಳಗಿನೊಳಗಣ ರೂಪ ತಿಳಿದು ನೋಡಿಯೆ ಕಳೆದು
ಹಿಡಿಯದೆ ಹಿಡಿದುಕೊಳಬಲ್ಲನಾಗಿ.   ಆತ ಲಿಂಗಪ್ರಸಾದಿ,
ಜಾತಿ ಸೂತಕವಳಿದು, ಶಂಕೆ ತಲೆದೋಱದೆ ನಿಶ್ಯಂಕನಾದೆ.
ಆತ ಸಮಯಪ್ರಸಾದಿ.
ಸಕಲ ಭ್ರಮೆಯ ಜಱೆದು ಗುಹೇಶ್ವರ ಲಿಂಗದಲ್ಲಿ
ಸಂಗನ ಬಸವಣ್ಣನೊಬ್ಬನೆ ಮಹಾಪ್ರಸಾದಿ.

ಕಾಯವೆಂಬ ಘಟಕ್ಕೆ ಚೈತನ್ಯವೆ ಸಯಿದಾನ.
ಸಮತೆಯೆಂಬ ಜಲ, ಕರಣಾದಿಗಳೆ ಕಾಲ.
ಜ್ಞಾನವೆಂಬ ಅಗ್ನಿಯನಿಕ್ಕಿ ಮತಿಯೆಂಬ ಸಟ್ಟುಗದಲ್ಲಿ
ಘಟ್ಟಿಸಿ, ಪಕ್ಕಕ್ಕೆ ತಂದು,
ಭಾವದಲ್ಲಿ ಕುಳ್ಳಿರಿಸಿ,
ಪರಿಣಾಮದೋಗರವ ನೀಡಿದಡೆ
ಕೂಡಲ ಸಂಗಮದೇವರಿಗಾರೋಗಣೆಯಾಯಿತ್ತು.

ಆಕಾಶದ ಉರಿ ನೆಲದ ಮಡಕೆಯಲ್ಲಿ ಬಯಲ ನೀರನೆ ತುಂಬಿ,
ಇಲ್ಲದಕ್ಕಿಯ ಹಾಕಿ ಮೂಱು ನೆಲೆಯಲ್ಲಿ ಕುದಿವುತ್ತಿದ್ದಿತ್ತು.
ಪಾದವನಱಿದು ನೀರ ಹೊಯ್ದು, ಗಂಜಿ ಅಲ್ಲಿಯೇ ಹಿಂಗಿತ್ತು,
ಏಣಾಂಕಧರ ಸೋಮೇಶ್ವರಲಿಂಗಕ್ಕೆ ಓಗರವಾಗಬೇಕೆಂದು.

ನಿಶ್ಚಲವೆಂಬ ಭಾಜನದಲ್ಲಿ ನಿಜಜ್ಞಾನವೆಂಬ ಅಕ್ಕಿಯ ತುಂಬಿ.
ಪರಮಾನಂದವೆಂಬ ಜಲವನೆಱಿದು,
ಸ್ವಯಂಪ್ರಕಾಶವೆಂಬ ಅಗ್ನಿಯಿಂದ ಪಾಕವಾದ
ಲಿಂಗದೋಗರವು ಮಹದಲ್ಲಿ ಒಂದು  ಘನತೃಪ್ತಿಯ ನೀಗುತ್ತಿದ್ದಿತ್ತು, ಕಾಣಿರೇ
ಅದ ಕಣ್ಣಿಲ್ಲದೆ ಕಂಡು, ಕೈಯಿಲ್ಲದೆ ಕೊಂಡು, ಬಾಯಿಲ್ಲದೆ ಉಂಡು ತೃಪ್ತಿ
ಅಱುಹಿಲ್ಲದಱುಹಿನಿಂದಱುದು ಸುಖಿಯಾದೆನು ಕಾಣಾ ಗುಹೇಶ್ವರ.

 

ಶರಣನೆ ಸನ್ನಹಿತಲಿಂಗವಾಗಿ, ಲಿಂಗವೆ ಸನ್ನಹಿತ ಶರಣನಾಗಿ,
ಸಂಗವೆ ಸನುಮತವಾಯಿತ್ತಾಗಿ
ಮತ್ತೂಂದನಱಸಲಿನ್ನೆಲ್ಲಿಯದೋ;
ಅಯ್ಯ, ಶರಣನೆ, ಓಗರ, ಲಿಂಗವೆ ಪ್ರಸಾದ,
ಕೂಡಲ ಚನ್ನ್ನಸಂಗಮದೇವಾ, ನಿಮ್ಮ ಶರಣಂಗೆ.

ಮಾಯೆವಿಡಿದು ಜೀವಿಸುವ ಜೀವಕನಲ್ಲ,
ಅದೇನು ಕಾರಣ ?
ಆತ ಘನಲಿಂಗವಿಡಿದು ಜೀವಿಸುವ ಜೀವಕನಾಗಿ.
ಅಸುವಿಡಿದು ಭುಂಜಿಸುವ ಭುಂಜಕನಲ್ಲ,
ಅದೇನು ಕಾರಣ ?
ಆತ ಮಹಾಪ್ರಸಾದವಿಡಿದು ಭುಂಜಿಸುವ ಭುಂಜಕನಾಗಿ.
ವಿಷಯವಿಡಿದು ರಂಜಿಸುವ ರಂಜಕನಲ್ಲ.
ಅದೇನು ಕಾರಣ ?
ಆತ ಸಹಜವಿಡಿದು ರಂಜಿಸುವ ರಂಜಕನಾಗಿ.
ಇಂತೀ ತ್ರಿವಿಧವೆಂಱಿದು, ಪರಮಾರ್ಥದಲ್ಲಿ ಚರಿಸುವ ಶರಣಂಗೆ
ಶರಣೆನುತಿರ್ದೆನಯ್ಯಾ ಕೂಡಲಸಂಗಮದೇವಾ !

ಅಂಗವನಂಗವೆಂಬೆರಡರ ಸಂಗವನಱಿದ ಮಹಾತ್ಮನ
ಅಂಗ ಸೋಂಕಿತೆಲ್ಲ ಪವಿತ್ರಕಾಣಿರೇ  ಪವಿತ್ರವಿದ್ದಲ್ಲಿ ಪದಾರ್ಥವಿಹುದು;
ಪದಾರ್ಥವಿದ್ದಲ್ಲಿ ಮನವಿಹುದು.
ಮನವಿದ್ದಲ್ಲಿ ಹಸ್ತವಿಹುದು;
ಹಸ್ತವಿದ್ದಲ್ಲಿ ಜಿಹ್ವೆಯಿಹುದು, ಜಿಹ್ವೆಯಿದ್ದಲ್ಲಿ ರುಚಿಯಿಹುದು
ರುಚಿಯಿದ್ದಲ್ಲಿ ಅವಧಾನವಿಹುದು, ಅವಧಾನವಿದ್ದಲ್ಲಿ ಭಾವವಿಹುದು,
ಭಾವವಿದ್ದಲ್ಲಿ ಲಿಂಗವಿಹುದು, ಲಿಂಗವಿದ್ದಲ್ಲಿ ಅರ್ಪಿತವಿಹುದು,
ಅರ್ಪಿತವಿದ್ದಲ್ಲಿ ಪ್ರಸಾದವಿಹುದು, ಪ್ರಸಾದವಿದ್ದಲ್ಲಿ ಪರಿಣಾಮವಿಹುದು.
ಇದು ಕಾರಣ, ಮಹಾಘನಸದ್ಗುರು ಸಿದ್ಧಸೋಮನಾಥ,
ನಿಮ್ಮ ಶರಣರು ಪ್ರಾಣಲಿಂಗಪ್ರವೇಶಿಗಳಾಗಿ ಪರಿಣಾಮಪ್ರಸಾದಿಗಳು.

೧೦

ಆತ್ಮನ ನಿಜವನಱಿದು ಪರಮಾತ್ಮ ತಾನೆಂದಱುದ ಶರಣಂಗೆ
ಎಂತಿರ್ದಂತೆ ಪೂಜೆ ನೋಡಾ;
ಆ ಶರಣ ಭೋಗಿಸಿತ್ತೆಲ್ಲವು ಲಿಂಗಾರ್ಪಿತ
ರುಚಿಸಿತ್ತೆಲ್ಲವು ಪ್ರಸಾದ,
ಆ ಶರಣ ನಡೆದುದೆಲ್ಲವು ಪರಬ್ರಹ್ಮ
ನುಡಿದುದೆಲ್ಲವು ಶಿವತತ್ವ,
ಆ ಶರಣ ತಾನೆ ಕೂಡಲಚನ್ನಸಂಗಯ್ಯನು.

೧೧
ಆಜಾತಲಿಂಗ ಸುಕ್ಷೇತ್ರದಲ್ಲಿ ಪವಿತ್ರ ಶರಣ
ಪದಾರ್ಥವ ಬಿತ್ತಿ ಪ್ರಸಾದವ ಬೆಳೆದ. ಅಂದಂದಿಗೆ ಹೊಸಫಲವನುಂಬ.
ಅನ್ಯವ ಮುಟ್ಟನಾ ಶರಣ.
ಕೂಡಲಚನ್ನಸಂಗಯ್ಯ,
ನಿಮ್ಮ ಶರಣ ಮರ್ತ್ಯಜನೆಂದಡೆ
ನರಕ ತಪ್ಪದು.

೧೨

ಕಾಣದುದಕಂಡ, ಕೇಳದುದ ಕೇಳಿದ,
ಮುಟ್ಟಬಾರದುದ ಮುಟ್ಟಿದ, ಅಸಾಧ್ಯವ ಸಾಧಿಸಿದ,
ತಲೆಗಟ್ಟುದ ತಲೆವಿಡಿದ, ನೆಲೆಗಟ್ಟುದ ನಿರ್ಧರಿಸಿದ,
ಗುಹೇಶ್ವರನ ಶರಣ ಅಜಗಣ್ಣಂಗೆ
ಶರಣೆಂದು ಶುದ್ಧನಾದೆ.

೧೩

ಕಬ್ಬುನದ ಗುಂಡಿಗೆಯಲ್ಲಿ ರಸಭಾಂಡವ ತುಂಬಿ
ಹೊನ್ನಮಾಡಬಲ್ಲಡೆ ಪರುಷ ಕಾಣಿರಣ್ಣಾ.
ಲಿಂಗ ಬಂದುಂಬಡೆ, ಪ್ರಸಾದ ಕಾಯವಪ್ಪಡೆ
ಎಂದೆಂದಿಗು ಭವ ಮುಟ್ಟಲಮ್ಮವು ಕಾಣಿರೆ !
ಆದಿಯ ಪ್ರಸಾದಕ್ಕೆ ವ್ಯಾಧಿಯಿಲ್ಲ, ಕಾಣಿರೆ !
ಹಸಿಯಲ್ಲಿ ಕರಗದು, ಬಿಸಿಲಲ್ಲಿ ಕೊರಗದು.
ರಸವುಂಡ ಹೊನ್ನ ಗುಹೇಶ್ವರ ನಿಮ್ಮ ಶರಣ.

೧೪

ಪ್ರಸಾದವನೆ ಬಿತ್ತಿ ಪ್ರಸಾದವನೆ ಬೆಳೆವವನ
ಫಲಪದದ ಸಿರಿಯ ಬೆಸಗೊಳಲಿಲ್ಲ
ಪದಾರ್ಥ ಕಾಯಪ್ರಸಾದಕ್ಕೆ ಭೇಧವಿಲ್ಲ.
ಕೂಡಾಲಚನ್ನಸಂಗಯ್ಯ ನಿಮ್ಮ ಶರಣಂಗೆ.

೧೫

ಆತ್ಮಲಿಂಗಕ್ಕೆ ಪರಮಾತ್ಮ ಜಂಗಮ  ತನುಮಧ್ಯ ಪ್ರಸಾದವಾಯಿತ್ತು
ಕೂಡಲಸಂಗನ ಶರಣರ ಸಂಗದಿಂದ
ನಿಶ್ಚಿಂತ ನಿವಾಸವಾಯಿತ್ತು.

೧೬

ಮಹವನೊಡಗೂಡಿಹೆವೆಂದೆಂಬಿರಿ
ಮಹವೇನುತ್ತಮದಲ್ಲಿಪ್ಪುದೊ
ಮಧ್ಯದಲ್ಲಿಪ್ಪುದೊ, ಅಧಮದಲ್ಲಿಪ್ಪುದೋ ?
ಇಪ್ಪುದಿಪ್ಪುದುತ್ತಮದಲ್ಲಿ
ಬಪ್ಪುದಿಪ್ಪುದು ಮಧ್ಯಮದಲ್ಲಿ
ಇಪ್ಪುದಿಪ್ಪುದು ಅಧಮದಲ್ಲಿ
ಮಹಾಪ್ರಸಾದ ಸಂಪನ್ನರಾದವರಿಗೆ
ಮಹವು ಸರ್ವಾಂಗದಲ್ಲಿಪ್ಪುದೈ ಕಪಿಲಸಿದ್ಧಮಲ್ಲಿಕಾರ್ಜುನಾ.

೧೭

ಹುಸಿಯಿಂದೆ ಜನಿಸಿದೆನಯ್ಯಾ ಮರ್ತ್ಯಲೋಕದೊಳಗೆ
ಹುಸಿಯಿಂದ ಲಿಂಗದ ಹೆಸರುಗೊಂಡು ಕರೆದೆನಯ್ಯಾ
ಅದೆನಗೆ ಭಾವವು ಅಲ್ಲ ನಿರ್ಭಾವವಲ್ಲದೆ ನಿಂದಿತ್ತಯ್ಯಾ
ಅದರವಯವಂಗಳೆಲ್ಲವು ಜಂಗಮವವಯ್ಯಾ
ಆದಕ್ಕೆ ಎನ್ನಲ್ಲುಳ್ಳ ಸಯಿದಾನ ಮಾಡಿ ನೀಡಿದೆನಯ್ಯಾ
ಆ ಪ್ರಸಾದಕ್ಕೆ ಶರಣೆಂದೆನಯ್ಯಾ
ಅದು ಸಾರವು ಅಲ್ಲ ನಿಸ್ಸಾರವೂ ಅಲ್ಲ
ಪ್ರಸಾದದಲ್ಲಿ ನಾನೆ ತದುಗತನಾದೆ ಕಾಣಾ,
ಕೂಡಲಸಂಗಮದೇವಾ.

೧೮

ಒಳಗೆ ಪ್ರಾಣಲಿಂಗ ಹೊಱಗೆ
ಅಂಗಲಿಂಗ ಗುರುಲಿಂಗ ಜಂಗಮಲಿಮ್ಗ ಪಾದೋದಕ ಪ್ರಸಾದವೆಂದು
ಆದ್ಯರ ಬಳಿವಿಡಿದು ಮಱೆಗೊಂಡಾಡುವದೇನಯ್ಯಾ
ಇದರ ನಿರ್ಣಯಕ್ಕೆ ಅದೊಂದೇ ಎಂದರಿದಡೆ ಅದೇ ಪಥ ಗುಹೇಶ್ವರಾ.

೧೯

ಅಂಗಲಿಂಗವ ಪೂಜಿಸುವೆನೆ ಅಯ್ಯಾ ?
ಅದು ಅಂಗಲಿಂಗವಲ್ಲ
ಅದು ಅಂಗದಮೇಲೆಯಱತು ಮುಂದೆ ಜಂಗಮವೆಂದು ತೋಱಿತ್ತಾಗಿ
ಜಂಗಮಲಿಂಗವೆಂದಾರಾಧಿಸುವೆನೆ ?
ಅದು ಜಂಗಮಲಿಂಗವಲ್ಲ
ಅದು ಮುಂದೆ ಪ್ರಸಾದ ಲಿಂಗವೆಂದು ತೋಱಿತ್ತಾಗಿ
ಪ್ರಸಾದ ಲಿಂಗವೆಂದರ್ಚಿಸುವೆನೆ ? ಅದು ಪ್ರಸಾದ ಲಿಂಗವಲ್ಲ
ಅದು ಮಹಾಪ್ರಸಾದವಾಗಿ ತೋಱಿತ್ತಾಗಿ.
ಆ ಮಹಾಪ್ರಸಾದವೇ ನೀವಾಗಿ ಸುಖಿಯಾದೆನಯ್ಯಾ
ಕೂಡಲಸಂಗಮದೇವಾ.

೨೦

ಸ್ಪಯಪ್ರಸಾದಿ ಗುರುಪ್ರಸಾದವನೊಲ್ಲ, ಲಿಂಗ ಪ್ರಸಾದವಕೊಂಬ
ಜ್ಞಾನ ಪ್ರಸಾದಿ ಲಿಂಗ ಪ್ರಸಾದವನೊಲ್ಲ, ಜಂಗನ ಪ್ರಸಾದವಕೊಂಬ
ಮಹಾಪ್ರಸಾದಿ ಜಂಗಮ ಪ್ರಸಾದವನೊಲ್ಲ, ಪ್ರಸನ್ನ ಪ್ರಸಾದವಕೊಂಬ
ಇಂತೀ ತ್ರಿವಿಧ ಪ್ರಸಾದದ ಭೇದವನಱಿದು
ಒಂದನೊಡಗೂಡಿ ಒಂದನರ್ಪಿಸಬೇಕು
ಆ ಉಭಯವನೊಡಗೂಡಿ ಪ್ರಸನ್ನ ಪ್ರಸಾದವ
ಲಿಂಗಕ್ಕೆ ಕೊಟ್ಟುಕೊಳಬಲ್ಲ ಮಹಾಪ್ರಸಾದಿಗೆ
ಕುಂಭೇಶ್ವರ ಲಿಂಗದಲ್ಲಿ ಜಗನ್ನಾಥಂಗೆ ನಮೋ ನಮೋ ಎನುತಿರ್ದೆನು.

೨೧

ಕಾಯ ಪ್ರಸಾದಿಯಾದಲ್ಲಿ ಗುರುಪ್ರಸಾದವನೊಲ್ಲ
ಭಾವ ಪ್ರಸಾದಿಯಾದಲ್ಲಿ ಲಿಂಗಪ್ರಸಾದವನೊಲ್ಲ
ಜ್ಞಾನ ಪ್ರಸಾದಿಯಾದಲ್ಲಿ ಜಂಗಮ ಪ್ರಸಾದವನೊಲ್ಲ
ಇಂತೀ ತ್ರಿವಿಧ ಪ್ರಸಾದವಬಲ್ಲ
ಮಹಾಪ್ರಸಾದವ ಕೊಂಬ   ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನೇತಿ ಪ್ರಸಾದವ
ಚತುರ್ಭವದಲ್ಲಿ
ಗುರುವಿಂಗೆ ತನುವಳಿದು
ಲಿಂಗಕ್ಕೆ ಮನವಳಿದು
ಜಂಗಮಕ್ಕೆ ತ್ರಿವಿಧ ಮಲವಳಿದು
ಅಱುಹಿಂಗೆ ಕುಱುಹಳಿದು
ಸ್ವಯಮೌನಾಗಿ ಇದಿರೆಡೆಗೆಟ್ಟ ಐಕ್ಯಪ್ರಸಾದಿಗೆ
ಕುಂಭೇಶ್ವರ ಲಿಂಗದಲ್ಲಿ ಜಗನ್ನಾಥನ ಸಾಕ್ಷಿಯಾಗಿ
ನಮೋ ನಮೋ ಎನುತಿರ್ದೆನು.

೨೨      

ಆಚಾರಲಿಂಗ ಗುರುಲಿಂಗ ಶಿವಲಿಂಗ
ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗ ಮುಂತಾಗಿದ್ದ
ದೃಷ್ಟ ಅರ್ಪಿತಂಗಳ ಅರ್ಪಿಸುವಲ್ಲಿ
ಗಂಧದಿಂದ ಸುಳಿವ ನಾನಾ ಸುಗಂಧವ
ರಸದಿಂದ ಬಂದ ನಾನಾ ರಸಂಗಳ
ರೂಪಿನಲ್ಲಿ ಕಾಣಿಸಿಕೊಂಬ ನಾನಾ ಚಿತ್ರವಿಚಿತ್ರ ಖಂಡಿತ ಅಖಂಡಿತಮಪ್ಪ
ದೃಷ್ಟಾಂತರಂಗಗಳಲ್ಲಿ
ಸ್ಪರ್ಶನದಲ್ಲಿ ಮೃದು ಕಠಿಣದೊಳಗಾದ
ಮುಟ್ಟುತಟ್ಟಿನ ಭೇದವ ಲಕ್ಷಿಸುವಲ್ಲಿ
ಶಬ್ದದಿಂದ ಸಪ್ತ ಸ್ವರದೊಳಗಾದ ನಾನಾ ಘೋಷ ವಾಸನಂಗಳ
ಅಳಿದುಳಿದು ತೋಱುವ ಸುನಾದ ಸಂಚುಗಳಲ್ಲಿ
ಇಂತೀ ಪಂಚೇಂದ್ರಿಯಂಗಳಲ್ಲಿ
ಪ್ರಸಾದ ಮುಂತಾಗಿ ಅರ್ಪಿಸಿಕೊಂಡೆಹೆವೆಂಬಲ್ಲಿ
ಗುರುಪ್ರಸಾದಿಗೆ ಲಿಂಗ ಪ್ರಾಸಾದವಿಲ್ಲ.
ಲಿಂಗ ಪ್ರಸಾದಿಗೆ ಜಂಗಮ ಪ್ರಸಾದವಿಲ್ಲ
ಜಂಗಮಪ್ರಸಾದಿಗೆ ಮಹಾಪ್ರಸಾದವಿಲ್ಲ
ಮಹಾಪ್ರಸಾದಿಗೆ ಪರಿಪೂರ್ಣ ಪ್ರಸಾದವಿಲ್ಲ
ಪರಿಪೂರ್ಣ ಪ್ರಸಾದಿಗೆ ಪಂಚೇಂದ್ರಿಯದೊಳಗಾದ
ಮುಟ್ಟಿನ ಪ್ರಸಾದ ಕಟ್ಟಿನ ಸೂತಕವಿಲ್ಲ.
ಅದೆಂತೆಂದಡೆ;
ಕರ್ಪುರದ ಚಿತ್ರಸಾಲೆಯಲ್ಲಿ ಕಿಚ್ಚು ಮುಟ್ಟಿದ
ಮತ್ತೆ ಚಿತ್ರವಲ್ಲಿಯೆ ನಿರ್ಲಕ್ಷವಾದಂತೆ
ಪತ್ರಂಗಳಲ್ಲಿ ನಾನಾ ಅಕ್ಷರಂಗಳ ಲಕ್ಷಿಸಿ ಬರೆದು
ಅವು ಕಿಚ್ಚು ಮುಟ್ಟಿ ಸುಟ್ಟಲ್ಲಿ  ಎತ್ತಿ ಪ್ರತಿ ಲಕ್ಷಿಸಬಹುದೆ
ಇಂತೀ ಅಱಿದಱುಹಿನಲ್ಲಿ ಎಡೆದೆಱಪಿಲ್ಲದೆ
ಪ್ರಸಾದಿಗೆ ಆ ಗುಣ ಪ್ರಸನ್ನ ಪ್ರಸಾದಿಯ ಇರವು;
ದಹನಚಂಡಿಕೇಶ್ವರಲಿಂಗದಿರವು.