|| ವೃತ್ತ ||           

ದ್ವೈತಂನೋಳ್ಪಡೆ ಬೊಮ್ಮವಂ ನುಡಿವ ವಾಗಾದ್ವೈತಿಗಳ್ಗೆಲ್ಗವಂ
ಮಾತೊಂದಲ್ಲದೆ ಮಿಕ್ಕವರ್ತನಮದೆಂ ಸದ್ಭಕ್ತನಂತಲ್ಲ ಕೇಳ್
ದ್ವೈತಾದ್ವೈತ ವಿಹೀನವೇನುವಱಿಯಂ ತಾನೆಂಬ ಹಮ್ಮಿಲ್ಲಮಾಯಾ
ತೀತಂಬಱಿ ಬೊಮ್ಮಾಗಿಮ್ಮ ತೊಡಕಂಪೊರ್ದಂ ಶಿವಾವಲ್ಲಭಾ. 

ಅಱಿದೆಹೆನೆಂದಡೆ ಅಱುಹಿಂಗಸಾಧ್ಯ
ನೆನದೆಹೆನೆಂದಡೆ ನೆನಹಿಂಗಸಾಧ್ಯ
ಭಾವಿಸಿಹೆನೆಂದಡೆ ಭಾವಕ್ಕ ಸಾಧ್ಯ
ವಾಙ್ಮನಕ್ಕಗೋಚರವನಱಿವ
ಪರಿಯಂತಯ್ಯ ಗುರುತೋಱದನ್ನಕ್ಕ
ಗುರುಶಿಷ್ಯರ ಮಧ್ಯದಲ್ಲಿ ಸ್ವಯಂಜೋತಿ ನಿಜ ಉದಯವಪ್ಪುದೆಂಬ
ಶೃತಿ ಹುಸಿಯೆ
ಕೂಡಲಸಂಗಮದೇವಾ,
ನಿಮ್ಮ ಮಹಾನುಭಾವರ ಮಥುನದಿಂದ
ಎನ್ನಲ್ಲಿ ನಿಜವ ನೆಲೆಗೊಳಿಸಾ ಪ್ರಭುವೆ.

ಸುಖವಾವದು ಸುಖಿಯಾವನು ಸುಖದನುಭಾವವಾವದು
ಸುಖ ಲಿಂಗ, ಸುಖಿಶರಣ, ಸುಖದ ಸುಭವ
ಸುಸಂಗ ಕೂಡಲಚನ್ನಸಂಗಾ ಪರಮ ವಿಲಾಸಿ.

ನಚ್ಚು ಮಚ್ಚಿನ ಲಿಂಗವನವಗ್ರಹಿಸಿ ಮಚ್ಚುವೊಳಕೊಂಡಿತ್ತಯ್ಯ
ಕರ್ಪುರದ ಕರಡಿಗೆಯ ಘಾಸಿಮಾಡಿದಂತಾಯಿತ್ತಯ್ಯ
ಲಿಂಗಾನುಭಾವಿಗಳ ಸಂಗದಿಂದ ನಾನು ಕಣ್ದೆಱೆದನು ಕಾಣಾ
ಗುಹೇಶ್ವರಾ.

ಬೆಳೆದು ಬೆಳಗ ಹಳಚುವಲ್ಲಿ ಕತ್ತಲೆ ಉಳಿವುದೆ ಅಯ್ಯಾ
ಶರಣರು ಶರಣರು ಮಹಾನುಭಾವಗೀಷ್ಟಿಯ ಮಾಡುವಲ್ಲಿ
ಸಂಗದೊಳಿದ್ದವರ ಅಜ್ಞಾನವಳಿದು, ನಿಜವನೈದುವರಯ್ಯ.
ನಿಮ್ಮ ಮಹಾನುಭಾವದ ಸೋಂಕಿನ ಸೆಱಗಿನೊಳಗಿರ್ದು
ನನು ಪರಮಸುಖಿಯಾಗಿ ಮಡಿವಾಳನ ಪಾದದಲ್ಲಿ ಮಗ್ನನದೆನು ಕಾಣಾ
ಪ್ರಭುವೆ, ಕಪಿಲಸಿದ್ಧ ಮಲ್ಲಿಕಾರ್ಜುನಾ.

ಅನುಭಾವವಿಲ್ಲದೆ ಈ ತನು ಎಳಲಾಟವಾದುದಯ್ಯಾ
ಅನುಭಾವವೀತನು ಲಿಂಗಾಧಾರ
ಅನುಭಾವರ ಅನುಭಾವವ ಮನೆವಾರೆ ವೇದಿಸಿದವರಿಗೆ
ಜನನವಿಲ್ಲ ಕಾಣಾ ರಾಮನಾಥಾ.

ಪರತತ್ವ ನಿಜ ಸಂಯುಕ್ತರ ಅನು ನೀ ನೆನ್ನದ ಶಬ್ದ ಸುಖಿಗಳ
ತೋಱಾ ಎನಗೆ
ಮಹಾನುಭಾವರ ತೋಱಾ ಎನಗೆ
ಲಿಂಗ ಲಿಂಗೈಕ್ಯರ ಲಿಂಗ ಸುಖಿಗಳ ಲಿಂಗವೆ ಗೂಡಾಗಿಪ್ಪವರ
ಲಿಂಗಾಭಿಮಾನಿಗಳ ತೋಱೌಎನಗೆ
ಅಹೋರಾತ್ರಿ ನಿಮ್ಮ ಶರಣರ ಸಂಗಮದಲ್ಲಿರಿಸು
ಕೂಡಲಸಂಗಮದೇವಾ.

ಸನ್ಮಣಿಯಂತು ಹೊದ್ದಿದಂತೆ ತೋಱುತಿಪ್ಪುದು ನಿಜ
ತನ್ನಂತೆ ಅನುಭಾವಿಯ ವರವರಂತೆ ತೋಱುವ ತಾ ತನ್ನಂತೆ
ಮತ್ತರಂತೆಯು ಆಗ
ಸನ್ಮಾತ್ರ ಚಿನ್ಮಯ ಪರಮಾನಂದ ತಿಳಿದು ನೋಡುವಡೆ
ನಿಜಗುಣ ತಾನೆ ಸಿಮ್ಮಲಿಗೆಯ ಚೆನ್ನಾರಾಮಾ .

ಕಾಯವೆ ಕೆಳೆಯಾಗಿ ಪ್ರಾಣಲಿಂಗವಾಗಿ
ಭಾವ ಭಾವಿಸುತ್ತಿದ್ದಿತ್ತು ನೋಡಾ
ಅನುಭಾವ ಕರಸ್ಥಲವಾಗಿ ಭಾವಭಾವಿಸುತ್ತಿದ್ದಿತ್ತು ನೋಡಾ
ದೇಹೋ ದೇವಾಲಯಃ ಪ್ರೊಕ್ತಃ ಜೀವೋ ದೇವಃ ಸದಾಶಿವಃ
ತ್ಯಜೇಜ್ಞಾನ ನಿರ್ಮಾಲ್ಯಂ ಸೋಹಂಭಾವೇ ನಪೂಜೆಯೇತ್
ಎಂದುದಾಗಿ ಇದುಕಾರಣ ಕೂಡಲಚನ್ನಸಂಗಯ್ಯಾ
ಮಹವನುಂಗಿದ ಮಹಂತನ ಇರುವು.

ಆಡೋದು ಹಾಡೋದು ಹೇಳೋದು ಕೇಳೋದು
ನಡೆನುಡಿ ಸರಸ ಸಮೇಳ ವಾಗಿಹುದು
ಶರಣರೊಡನೆ
ಚನ್ನಮಲ್ಲಿಕಾರ್ಜುನ ಕೊಟ್ಟು ಅಯುಷ್ಯ ಉಳ್ಳನ್ನಕರ
ಲಿಂಗ ಸುಖದಲ್ಲಿ ದಿನಂಗಳ ಕಳೆವುದು.

೧೦

ಮನದ ಕಾಲಿತ್ತಲು ತನುವಿನ ಕಾಲತ್ತಲು
ಅನುಭಾವದ ಅನುಭವ ನೆನೆವುತ್ತ ನೆನೆವುತ್ತ ಗಮನಗೆಟ್ಟುದೋ
ಲಿಂಗಮುಖದೊಳಾದ ಸೂಚನೆಯ ಸುಖವಕಂಡು ಅನುವಾಯಿತ್ತು
ಅಲ್ಲಿಯೇ ತಲ್ಲೀಯವಾಯಿತ್ತು ಗುಹೇಶ್ವರಾ.

೧೧

ಶಬ್ದವು ಅಶಬ್ದವು ಶಬ್ದದಲ್ಲಿಯೆ ಕಾಣಬಹುದು
ಇದ್ದವರು ಇದ್ದುಸ್ಥಲವ ನುಡಿವದನು ಅದಕ್ಕದು ಸಹಜ
ಲಿಂಗದನೆಡೆ, ಲಿಂಗದನುಡಿ,
ಲಿಂಗದ ನೋಟ   ಕೂಡಲಚನ್ನಸಂಗಯ್ಯ
ನಿಮ್ಮ ಶರಣಂಗೆ.

ಶ್ರೀ ಶಕ ೧೭೯೪ ಅಂಗೀರಸನಾಮ ಸಂವತ್ಸರ ಮಿತಿ ಚೈತ್ರ ಶುದ್ಧ ೫ (ಪಂಚಮಿ) ಭಾನುವಾರ
ಶ್ರೀ ಶ್ರೀ ಶ್ರೀ ಶ್ರೀ ಶ್ರೀ