೨೮

ನಾ ಮಾಱಬಂದೆ ಸುಧೆಯ ಕೊಂಬವರಾರು ಇಲ್ಲ
ಒಳಗಣ ಇಂದ್ರಿಯಕ್ಕೆ ಹೊಱಗಣ ಭಾಜನಕ್ಕೆ
ಉಂಡು ದಣಿದು, ಕಂಡು ದಣಿದು, ಸಂದೇಹವ ಬಿಟ್ಟು ದಣಿದು
ಕಂಡುದ ಕಾಣದೆ ಸಂದೇಹದಲ್ಲಿ ಮಱಿಯದೆ
ಆನಂದವೆಂಬ ಆಲಿಂಗನವಂ ಮಾಡಿ ಆ ಕಣ್ಣಂ ಮುಚ್ಚಿ
ಮತ್ತಮಾ ಕಣ್ಣಂ ತಱೆದು ನೋಡಲಾಗಿ ಧಮೇಶ್ವರಲಿಂಗವ
ಕಾಣಬಂದಿತ್ತು.

೨೯

ಶರಣನ ಸರ್ವಾಂಗವೆಲ್ಲವು ಲಿಂಗವಾದ ಕ್ರಮವೆಂತೆಂದಡೆ
ಶ್ರೀ ಗುರು ಬಸವಣ್ಣನು ಉಪದೇಶಿಸಿದ ಷಟಸ್ಥಲ ಲಿಂಗವೆ
ಎನ್ನ ಸರ್ವಾಂಗದಲ್ಲಿ ಭಿನ್ನನಾಮಂಗಳಿಂದ ಪ್ರಕಾಶಿಸುತ್ತಿಹುದು.
ಅದು ಹೇಗೆಂದಡೆ:
ಸ್ಥೂಲಾಂಗದಲ್ಲಿ ಇಷ್ಟಲಿಂಗವೆಂದು, ಸೂಕ್ಷ್ಮಾಂಗದಲ್ಲಿ ಪ್ರಾಣಲಿಂಗವೆಂದು
ಕಾರಣಾಂಗದಲ್ಲಿ ಭಾವಲಿಂಗವೆಂದು ತ್ರಿವಿಧವಾಗಿಪ್ಪುದು.
ಇಂತು ಅಂಗವ ಕುಱಿತು ಮೂಱು ತೆಱನಾಯಿತ್ತು
ಇಂದ್ರಿಯಂಗಳ ಕುಱಿತು ಅಱು ತೆಱನಾಯಿತ್ತು.
ಅದು ಹೇಗೆಂದಡೆ:
ಹೃದಯದಲ್ಲಿ ಮಹಾಲಿಂಗವೆಂದು, ಶ್ರೋತ್ರದಲ್ಲಿ ಪ್ರಸಾದಲಿಂಗವೆಂದು,
ತ್ವಕ್ಕಿನಲ್ಲಿ ಚರಲಿಂಗವೆಂದು, ದೃಕ್ಕಿನಲ್ಲಿ ಶಿವಲಿಂಗವೆಂದು,
ಜಿಹ್ವೆಯಲ್ಲಿ ಗುರುಲಿಂಗವೆಂದು, ಘ್ರಾಣದಲ್ಲಿ ಆಚಾರಲಿಂಗವೆಂದು,
ಇಂತು ಷಡಂಗದಲ್ಲಿ ಷಡುಲಿಂಗವಾಗಿ ತೋಱುತ್ತಿಹುದು.
ಈ ಮರಿಯಾದಿಯಲ್ಲಿ ಕರ್ಮೇಂದ್ರಿಯ ಜ್ಞಾನೇಂದ್ರಿಯಂಗಳೊಳಗೆಯು
ಲಿಂಗವೇ ಪ್ರಕಾಶಿಸುತ್ತಿಹುದು. ಅದು ಹೇಗೆಂದಡೆ:
ಕರ್ಮೇಂದ್ರಿಯ ಜ್ಞಾನೇಂದ್ರಿಯಂಗಳಿಗೆ ಭೇದವಿಲ್ಲ.
ಶ್ರೋತಕ್ಕೆ ವಾಚ್ಯಕ್ಕೆ ಭೇದವಿಲ್ಲ. ಶಬ್ಧಕ್ಕೆ ವಚನಕ್ಕೆ ಭೇದವಿಲ್ಲ.
ತ್ವಕ್ಕಿಂಗೆ ಪ್ರಾಣಿಗೆ ಭೇದವಿಲ್ಲ. ಸ್ಪರ್ಶನಕ್ಕೆ, ಆನಂದಕ್ಕೆ ಭೇದವಿಲ್ಲ.
ನೇತ್ರಕ್ಕೆ ಪಾದಕ್ಕೆ ಭೇದವಿಲ್ಲ. ರೂಪಿಂಗೆ ಗಮನಕ್ಕೆ ಭೇದವಿಲ್ಲ.
ಜಿಹ್ವೆಗೆ ಗುಹ್ಯಕ್ಕೆ ಭೇದವಿಲ್ಲ. ರಸಕ್ಕೆ ಆನಂದಕ್ಕೆ ಭೇದವಿಲ್ಲ.
ಘ್ರಾಣಕ್ಕೆ ಗುದಕ್ಕೆ ಭೇದವಿಲ್ಲ, ಗಂಧಕ್ಕೆ ವಿಸರ್ಜನಕ್ಕೆ ಭೇದವಿಲ್ಲ.
ಇನ್ನು ಶ್ರೋತ್ರವೆಂಬ ಜ್ಞಾನೇಂದ್ರಿಯಕ್ಕೂ ವಾಕೆಂಬ ಕರ್ಮೇಂದ್ರಿಯಕ್ಕೂ
ಶಬ್ದ ವಿಷಯ, ಮೂಲಭೂತ ಆಕಾಶ, ಈಶಾನ್ಯ ಮೂರ್ತಿಯೇ ಅಧಿದೇವತೆ.
ತ್ವಕ್ಕೆಂಬ ಜ್ಞಾನೇಂದ್ರಿಯಕ್ಕೂ ಪಾಣಿಯೆಂಬ ಕರ್ಮೇಂದ್ರಿಯಕ್ಕೂ
ಸ್ಪರ್ಶನ ವಿಷಯ, ಮೂಲಭೂತ ವಾಯು, ತತ್ಪುರುಷ ಮೂರ್ತಿಅಧಿದೇವತೆ.
ದೃಕ್ಕೆಂಬ ಜ್ಞಾನೇಂದ್ರಿಯಕ್ಕೂ ಪಾಯುವೆಂಬ ಕರ್ಮೇಂದ್ರಿಯಕ್ಕೂ
ರೂಪ ವಿಷಯ, ಮೂಲಭೂತ ಅಗ್ನಿ, ಅಘೋರ ಮೂರ್ತಿಯೇ ಅಧಿದೇವತೆ.
ಜಿಹ್ವೇಂದ್ರಿಯೆಂಬ ಜ್ಞಾನೇಂದ್ರಿಯಕ್ಕೂ, ಗುಹ್ಯವೆಂಬ ಕರ್ಮೇಂದ್ರಿಯಕ್ಕೂ
ರಸ ವಿಷಯ ಮೂಲಭೂತ ಅಪ್ಪು, ವಾಮದೇವ ಮೂರ್ತಿಯೇ ಅಧಿದೇವತೆ.
ಘ್ರಾಣವೆಂಬ ಜ್ಞಾನೇಂದ್ರಿಯಕ್ಕೂ ಪಾಯುವೆಂಬ ಕರ್ಮೇಂದ್ರಿಯಕ್ಕೂ
ಆ ಗಂಧ ವಿಷಯ, ಮೂಲಭೂತ ಪೃಥ್ವಿ, ಸದ್ಯೋಜಾತಮೂರ್ತಿಯೇ ಅಧಿದೇವತೆ.
ಇಂತೀ ಜ್ಞಾನೇಂದ್ರಿಯ ಕರ್ಮೇಂದ್ರಿಯಂಗಳಿಗೆ ಹೃದಯವೇ ಸ್ಥಾನವಾದ ಕಾರಣ
ಹೃದಯಾಕಾಶವೆನಿಸಿತ್ತು. ಅಲ್ಲಿ ಸ್ಥೂಲ ಸೂಕ್ಷ್ಮ ಕಾರಣ ರೂಪಿನಿಂದ ಇಂದ್ರಿಯಂಗಳಿರುತ್ತಿಹವು.
ಗುರೂಪದೇಶದಿಂದ ಇಂದ್ರಿಯಂಗಳಲ್ಲಿ ಲಿಂಗವೆ ಪ್ರಕಾಶಿಸುತ್ತಿಹವು.
ಅದು ಹೇಗೆಂದಡೆ:
ಘ್ರಾಣದ ಘ್ರಾಣವೆ ಆಚಾರಲಿಂಗ, ಜಿಹ್ವೆಯ ಜಿಹ್ವೆಯೆ ಗುರುಲಿಂಗ,
ನೇತ್ರದ ನೇತ್ರವೆ ಶಿವಲಿಂಗ, ತ್ವಕ್ಕಿನ ತ್ವಕ್ಕೆ ಜಂಗಮಲಿಂಗ,
ಶ್ರೀತ್ರದ ಶ್ರೋತ್ರವೇ ಪ್ರಸಾದಲಿಂಗ, ಹೃದಯದ ಹೃದಯವೇ ಮಹಾಲಿಂಗ.
ಈ ಅಱು ಲಿಂಗಸ್ಥಲಕ್ಕೆ ಅಂಗಸ್ಥಲವಾಱು.
ಅದಕ್ಕೆ ವಿವರ-
ಐಕ್ಯ ಶರಣ ಪ್ರಾಣಲಿಂಗ ಪ್ರಸಾದಿ ಮಹೇಶ್ವರ ಭಕ್ತನೆಂದು
ಈ ಅಱು ಸ್ಥಲಂಗಳು.
ಇದಱ ಭೇದವೆಂತೆಂದೆಡೆ:
ಆತ್ಮಾಂಗದಲ್ಲಿ ಭಾವದ ಹಸ್ತದಿಂದ ಎಲ್ಲ ಇಂದ್ರಿಯಂಗಳ
ಪರಿಣಾಮವನು ಸಮರಸಭಕ್ತಿಯಿಂದ ಮಹಾಲಿಂಗಕ್ಕೆ ಅರ್ಪಿಸಿವಾತನೆ ಐಕ್ಯ.
ವ್ಯೋಮಾಂಗದಲ್ಲಿ ಸುಜ್ಞಾನ ಹಸ್ತದಿಂದ ಸುಶಬ್ದವನು.
ಆನಂದ ಭಕ್ತಿಯಿಂದ ಪ್ರಸಾದಲಿಂಗಕ್ಕೆ ಅರ್ಪಿಸುವಾತನೆ ಶರಣ.
ಅನಿಲಾಂಗದಲ್ಲಿ ಮನೋಹಸ್ತದಿಂದ ಸುಸ್ಪರ್ಶನವನು
ಅನುಭವ ಭಕ್ತಿಯಿಂದ ಚರಲಿಂಗಕ್ಕರ್ಪಿಸುವಾತನೆ ಪ್ರಾಣಲಿಂಗಿ.
ಅನಲಾಂಗದಲ್ಲಿ ನಿರಹಂಕಾರ ಹಸ್ತದಿಂದ ಸುರೂಪವನು
ಅವಧಾನಭಕ್ತಿಯಿಂದ ಶಿವಲಿಂಗಕ್ಕರ್ಪಿಸುವಾತನೆ ಪ್ರಸಾದಿ.
ಜಲಾಂಗದಲ್ಲಿ ಸುಬುದ್ಧಿ ಹಸ್ತದಿಂದ ಸುರುಚಿಯನು
ನೈಷ್ಠಿಕಾ ಭಕ್ತಿಯಿಂದ ಗುರುಲಿಂಗಕರ್ಪಿಸುವಾತನೆ ಮಹೇಶ್ವರನು.
ಭೂಮ್ಯಂಗದಲ್ಲಿ ಸುಚಿತ್ತ ಹಸ್ತದಿಂದ ಸುಗಂಧವನು
ಶ್ರದ್ಧಭಕ್ತಿಯಿಂದ ಆಚಾರಲಿಂಗಕ್ಕೆ ಅರ್ಪಿಸುವಾತನೆ ಭಕ್ತ.
ಇನ್ನು ಷಡಕ್ಷರವೆ ಷಡುಲಿಂಗವಾಗಿಹವು.
ಅದು ಹೇಗೆಂದಡೆ-           
ನಕಾರವೇ ಆಚಾರಲಿಂಗ, ಮಕಾರವೇ ಗುರುಲಿಂಗ, ಶಿಕಾರವೇ ಶಿವಲಿಂಗ,
ವಕಾರವೇ ಜಂಗಮಲಿಂಗ, ಯಕಾರವೇ ಪ್ರಸಾದಲಿಂಗ, ಓಂಕಾರವೇ ಮಹಾಲಿಂಗ.
ಈ ಆಱುರೆಱನಾಗಿಹವು.
ಇನ್ನು ಷಡಕ್ಷರಗಳೆ ಷಡುಚಕ್ರಂಗಳಲ್ಲಿ ಸ್ಥಾಪ್ಯವಾಗಿಪ್ಪವು.
ಆಧಾರದಲ್ಲಿ ನಕಾರ, ಸ್ವಾಧಿಷ್ಥಾನದಲ್ಲಿ ಮಕಾರ, ಮಣಿಪೂರಕದಲ್ಲಿ ಶಿಕಾರ,
ಅನಾಹತದಲ್ಲಿ ವಕಾರ, ವಿಶುದ್ಧಿಯಲ್ಲಿ ಯಕಾರ, ಆಜ್ಞೆಯಲ್ಲಿ ಓಂಕಾರ.
ಇನ್ನು ಷಡ್ಧಾತುವಿನಲ್ಲಿ ಈ ಷಡಕ್ಷರ ರೂಪಿನಿಂದ ಷಡುಲಿಂಗಸ್ಥಾಪ್ಯವಾಗಿಹವು.
ಅದೆಂತೆಂದಡೆ-
ತ್ವಙ್ಮಯವಾಗಿ ಓಂಕಾರ, ರುಧಿರಮಯವಾಗಿ ನಕಾರ,
ಮಾಂಸಮಯವಾಗಿ ಮಕಾರ, ಮೇಧಸ್ಸುಮಯವಾಗಿ ಶಿಕಾರ,
ಅಸ್ಥಿಮಯವಾಗಿ ವಕಾರ, ಮಜ್ಜಾಮಯವಾಗಿ ಯಕಾರ,
ಇಂತೀ ಷಡುಚಕ್ರಂಗಳಲ್ಲಿ, ಷಡ್ಧಾತುಗಳಲ್ಲಿ, ಈ ಷಡಿಂದ್ರಿಯತ್ವಂಗಳಲ್ಲಿ
ಈ ಷಡಕ್ಷರ ಮಯವಾಗಿ ಅವೆ ಲಿಂಗಂಗಳಾಗಿ ಒಳಹೊರಗೆ ತೆಱಹಿಲ್ಲದಿಪ್ಪವು.
ಇಂತೀ ಸರ್ವಾಂಗವೆಲ್ಲವು ಲಿಂಗವಾದ ಇಱವು ಅದು ತಾನೆ ಶಿವನ ಇಱವು.
ಅದೇ ಶಿವನ ಭವನ, ಶಿವನ ವಿಶ್ರಾಮಸ್ಥಾನ
ಇಂತೀ ಷಟಸ್ಥಲ ಬ್ರಹ್ಮವನಱುಸಿದಾತನೆ ಶರಣ.
ಆತನೆ ಲಿಂಗೈಕ್ಯನು.
ಇಂತೋ ಷಟಸ್ಥಲ ಬ್ರಹ್ಮವೆಂಬುದು ಅಪ್ರಮಾಣ, ಅಗೋಚರ
ಅನಿರ್ವಾಚ್ಯವಾದ ಕಾರಣ ವಚಿಸುತ್ತ ವಚಿಸುತ್ತ
ವಚನಗೆಟ್ಟಿತ್ತು. ಉಪ್ಪು ನೀರೊಳಗೆ ಕೂಡಿದಂತೆ
ವಾರಿಕಲ್ಲಿ ಅಂಬುಧಿಯೊಳಗೆ ಬೆಱಸಿದಂತೆ
ಶಿಖಿಕರ್ಪುರಯೋಗದಂತಾದೆನಯ್ಯ
ಕೂಡಲಚನ್ನಸಂಗಯ್ಯನಲ್ಲಿ
ಬಸವಣ್ಣನ ಭಾವ ಹಸ್ತ ಮುಟ್ಟಿದ ಕಾರಣ.

೩೦

ನಾದಬಿಂದುನೊಳಗಣ ಪದ್ಮಾಸನದ ಮೇಲೆ ಕುಳ್ಳಿರ್ದು
ಘಳಿಗೆಗೊಮ್ಮೆ ಸುಳಿದು ಹೋಹ ಕಳ್ಳನಾಱಯ್ಯ ಬಲ್ಲವರಾರು.
ಹಂಸನು ತಲೆಗಿಂಬು ಮಾಡಿದವರ ಬಸವ ಬಲ್ಲಕಾಣಾ, ಗುಹೇಶ್ವರಾ.

೩೧

ವೀರ ಧಾರುಣಿಯೊಳಗೆ ನಾರಿ ಶೃಂಗಾರವ ಮಾಡಿ
ಈರೇಳು ಭುವನವದಾಂಟಿ ಬಿಂದುಶಕ್ತಿಯೆ ಭೇದ
ಸಂದಸಂಯೋಗದ ಸುಖವ ತಂದು ಮೂರ್ತಿಗೊಳಿಸಿದವರಾರು ?
ಒಂದೆಱಡರ ನುಡಿಯ ಮತ್ತೂಂದ ಗ್ರಹಿಸಿತ್ತ ಕಂಡೆ.
ಬಿಂದುವಿನರಸದ ಪರೀಕ್ಷೆಯ ಭೇದವ ಚಂದ್ರಕಾಂತದ ಗಿರಿಯರುಣ.
ಚಂದ್ರರೂಡನೆ ಇಂತಿನಲ್ಲಿಪ್ಪ ಪರಿಯನೋಡಾ.
ಅಂಗಯ್ಯ ತಳದೊಳು ಮೊಲೆ, ಕಂಗಳಲ್ಲಿ ಕರಸನ್ನೆ ಇಂಬಿನಲ್ಲಿ ನೆಱಿವ ಸುಖ ಒಂದೆ
ಆದಿಯನಾದಿಯ ಪ್ರತಿಬಿಂಬವೆಂದೆನಗೆ ತೋಱಿತ್ತು.
ಗುಹೇಶ್ವರನ ಶರಣ ಚನ್ನಬಸವಣ್ಣಂಗೆ ಶರನೆನುತಿರ್ದೆನು.


೩೨      

ಊರ್ಧ್ವಬಿಂದು ನಾದ ಮುಟ್ಟಲಿಕೆ ಜಂಗಮ.
ಮಧ್ಯಬಿಂದು ಊರ್ಧ್ವಮುಟ್ಟಲಿಕೆ ಸ್ಥಾವರ
ಸ್ಥಾವರಬಿಂದು ಸ್ಥಾವರನಾಮ ಊರ್ಧ್ವಮುಟ್ಟಲಿಕೆ ಭಕ್ತ
ಭಕ್ತಬಿಂದು ಊರ್ಧ್ವಮುಟ್ಟಲಿಕೆ ಭವಿ.
ಇಂತೀ ಜಾತಿಸೂತಕಪ್ರಸೂತವಾದವಂಗೆ ಕಾಲವಿಲ್ಲ ಕರ್ಮವಿಲ್ಲ,
ಭಕ್ತಂಗೆ ಒಡಲಿಲ್ಲ.
ಇದುಕಾರಣ ಕೂಡಲಚನ್ನಸಂಗಯ್ಯ ನಿಮ್ಮ ಶರಣಂಗಲ್ಲದೆ
ಉಳಿದವರಿಗಸಾಧ್ಯ.

೩೩       

ಉದಯ ಬಿಂದು ರೂಪಾಯಿತ್ತು
ಅಂತರ ಬಿಂದು ನಿರೂಪಾಯಿತ್ತು
ಊರ್ಧ್ವ ಬಿಂದು ನಿಶ್ಯೂನ್ಯವಾಯಿತ್ತು  ತ್ರಿವಿಧ ಲಿಂಗವ ಕೂಡಿ ಬಯಲಾಯಿತ್ತು
ಗುಹೇಶ್ವರಲಿಂಗದಲ್ಲಿ.

೩೪

ತಿಳಿದಿರ್ದ ಮಡುವಿನಲ್ಲಿ ಸುಳಿದಾಡುತ್ತದೆ
ಒಂದು ಸುವರ್ಣದ ಬಿಂದು
ಅದು ಹಿಂದು ಮುಂದಾಗಿ ನೋಡಿದವರಿಗಲ್ಲದೆ ಕಾಣಬಾರದು
ಮಡುವ ತುಳುಕದೆ ಗಿಡವ ಸೋಂಕದೆ ಹಿಡಿಯಬಲ್ಲದೆ
ಗುಹೇಶ್ವವರನೆಂಬಲಿಂಗವೀಗಳೆ ಸಾಧ್ಯ.

೩೫

ಆದಿಯಾಧಾರವೆ ಏಕ ಅನುಭಾವ ಸಂಬಂಧವೆಂತೆಂದಡೆ
ಆದಿಯೆ ದೇಹ; ಅನಾದಿಯೆ ಆತ್ಮ.
ಇಂತೀಯಾದಿಯಾಧಾರದ ಮೇಲಿಪ್ಪುದೆ ಪರಮ ಪ್ರಣವ
ಆ ಪರಮ ಪ್ರಣವದ ಚಿತ್ತವಿಕ್ಕಿ ಸುವರ್ಣದ್ ಪ್ರಭೆಯ ಮೇಗಳ
ಸೂಕ್ಷ್ಮಲಿಂಗವೇ ನಾದ ಬಿಂದು ಕಳಾತೀತವಾದ ಜೋತಿರ್ಮಯಲಿಂಗ
ದೇಹ ಮನ ಪ್ರಾಣ ಇಂದ್ರಿಯಂಗಳೆಲ್ಲವು
ಆ ಲಿಂಗಕ್ಕೆ ಭಿನ್ನವೆಂಬ ಅಜ್ಞಾನಿಗಲ ಮೆಚ್ಚನು
ಕೂಡಲ ಚನ್ನಸಂಗಮದೇವಾ.

೩೬

ಅಂತರಂಗ ಬಹಿರಂಗ ಆತ್ಮಸಂಗ ಒಂದೆಯಯ್ಯ
ನಾದಬಿಂದು ಕಳಾತೀತ ಆದಿಯಾಧಾರ ನೀನೆ ಅಯ್ಯಾ
ಆರೂಢದ ಕೂಟದ ಸುಖವ
ಕೂಡಲಸಂಗಯ್ಯಾ ತಾನೆ ಬಲ್ಲ.

೩೭      

ನಾದ ಬಿಂದುವಿನಲ್ಲಿ ಆದಿ ಬ್ರಹ್ಮನ ಕೂಟವಾದ
ಸಾದಾಖ್ಯಗಳ ನೊಡಗೂಡಿದ ಆನಂದ ತುಂಬಿಗಲ ಭೇದ ಭೇದಿಯ ಕೂಟವೋ
ಮೂವತ್ತಾಱು ತತ್ವಂಗಳ ಭೇದಂಗಳ ಭೇದಿಸಿ
ಅಕ್ಷರದ್ವಯದಲ್ಲಿ ತಾನು ಸಂಗಮವಾದ ನಿಶ್ಚಯದಲ್ಲಿ
ತವಕಿಸುವ ಕರಣವನು ಹರಿವ ಪ್ರಪಂಚವನು
ಒಸರುವ ಬಿಂದುವನು ಪಸರಿಸುವ ಭೇದವನು
ದೆಶೆಗೆಟ್ಟು ಕಂಡೆ ಕಪಿಲಸಿದ್ಧ ಮಲ್ಲೇಶ್ವರಾ.

೩೮

ಮದ್ದ ನಂಬಿಕೊಂಡಡೆ ರೋಗ ಮಾಣಧಿಪ್ಪುದೆ ?
ಸಜ್ಜನತ್ವವುಳ್ಳಡೆ ಪ್ರಸಾದ ಕಾಯಕೆಡುವದೆ ?
ಪ್ರಾಣಲಿಂಗವಾದಡೆ ಪ್ರಾಣ ಬೇರಿಪ್ಪುದೆ ?
ಪ್ರಾಣಲಿಂಗ ಪ್ರಸಾದವನು ನೀವು ತಿಳಿದು ನೋಡಿರೆ,
ನಾದ ಬಿಂದು ಸೂಸದ ಮುನ್ನ
ಆದಿಲಿಮ್ಗವ ಭೇದಿಸಿಕೊಂಡರು ಗುಹೇಶ್ವರಾ ನಿಮ್ಮ ಶರಣರು.

೩೯

ತತ್ವವೆಂಬುದ ನೀನೆತ್ತ ಬಲ್ಲಿಯೋ
ಸತ್ತುಮುಂದೆ ನೀನೆತ್ತ ಕಾಬೆಯೋ
ಇಂದೆ ಇಂದೆಯೋ ಮಾನವಾ
ಮಾತಿನಂತುಟಲ್ಲ ಶಿವಾಚಾರದ ಸರಿದೊಡಕು ಕಾಣಿರಣ್ಣಾ
ರಚ್ಚೆಯ ಮಾತಲ್ಲ; ಬೀದಿಯ ಮಾತಲ್ಲ
ಏಕೋರಾತ್ರಿ ಬಿಂದು ನೋಡಾ
ಗುಹೇಶ್ವರನ ಕೂಡಿದ ಕೂಟ ಇಂದು ಸುಖ ಮುಂದೆ ಲೇಸು.

೪೦     

ದ್ರವ್ಯ ನೀನು ದ್ರವ್ಯಾರ್ಥಿ ನೀನು
ಪದ ನೀನು ಪದಾರ್ಥ ನೀನು
ಸಕಲ ನೀನು ನಿಷ್ಕಲ ನೀನು
ಸಕಲ ನಿಷ್ಕಲಾತ್ಮಕ ಪರಿಪೂರ್ಣ ಶಿವನಲ್ಲದೆ
ಅನ್ಯ ಭಿನ್ನಭಾವನೆ ಉಂಟೆ ?
ಸಕಲ ಪದಾರ್ಥಂಗಳೆಲ್ಲ ನಿನ್ನ ಸಾಮರಸ್ಯ ಭಾವವನೈದಿಹನೆಂದು
ತಮ್ಮ ತಮ್ಮ ಲಿಂಗದ ಮೇಲೆ ಹೆಸರಿಟ್ಟು ಹೊತ್ತುಕೊಂಡೈದಾವೆ ನೋಡಾ
ಅದೆಂತೆಂದಡೆ:
ದ್ರವ್ಯಾರ್ಥಶ್ಚ ಮಹಾದೇವಃ | ದ್ರವ್ಯರೂಪೋ ಮಹೇಶ್ವರಃ
ಇತಿ ಮಾಂ ಭೇದನೋನಾಸ್ತಿ | ಸರ್ವರೂಪಸ್ಸದಾ ಶಿವಃ || ಎಂದುದಾಗಿ
ನಾದ ನೀನು ಬಿಂದು ನೀನು ಕಳೆ ನೀನು ಕಳಾತೀತ ನೀನು ಗುಹೇಶ್ವರಾ.

೪೧

ಎಲೆ ನಿರಾಳ ನಿರ್ಮಾಯ ಶಿವನೆ
ನಿನ್ನ ಬೆಳಗನುಗುಳಿದಡೆ ಎಂಜಲಾಯಿತ್ತಲ್ಲಾ
ನುಂಗಿದವರುಗುಳಿದುದುಂಟೆ?
ಇದು ಕರ ಚೋದ್ಯ ಚೋದ್ಯ
ನಿನ್ನ ಉಗುಳಿನ ಬಿಂದುವಿನಲ್ಲಿ ಅಕ್ಷರಂಗಳು ಮೂಱು ಹುಟ್ಟಿದವು
ನಿನ್ನ ಉಗುಳಿನ ಸಿಲುಕಿಂದ ನಾದ ಬಿಂದು ಕಳೆಗಳಾದವು;
ನಿನ್ನ ಉಗುಳಿನ ಬಸುಱಿಂದ ಆನಂಗಿ ಹುಟ್ಟಿ ಗಂಡು ಹೆಣ್ಣಾದುದು.
ಆ ಗಂಡು ಹೆಣ್ಣಿನಿಂದ ಹಲಬರು ಮಕ್ಕಳು ಹುಟ್ಟಿದರು.
ಆ ಮಕ್ಕಳಿಗೈವರು ಮಕ್ಕಳಾದರು.
ನಿನ್ನ ಉಗುಳು ಎಂಜಲೆಂದವರ ಕಣ್ಣು ಕಪ್ಪಾದವು.
ನಿನ್ನ ಉಗುಳೆನಗೆ ಪ್ರಸಾದವೆಂದಱಿದೆ ಕಾಣಾ ಕಲಿದೇವರದೇವಾ.

೪೨

ಅಕ್ಕನ ಅದ್ಭುತದಲ್ಲಿ ಕೆಟ್ಟರು ಹಲಬರು.
ತಪ್ಪುಕರಾದರು ಹಲಬರು.
ಬಿಂದು ಬಿಂದನೆ ಕೂಡಿ ಲಿಂಗಲೀಯ್ಯವಾಯಿತ್ತು.
ನಿಂದ ಗುಹೇಶ್ವರನೆನ್ನೊಳಗೆ ಭರಿತನಾಗಿ.

೪೩      

ಭವಿ ಬೀಜದ ವೃಕ್ಷದ ಫಲದೊಳಗೆ ಭಕ್ತಿ ಬೀಜದ ವೃಕ್ಷ ಪಲ್ಲವಿಸಿತ್ತು.
ಭಕ್ತಿ ಬೀಜದ ವೃಕ್ಷದೊಳಗೆ ಶರಣ ಬೀಜದ ವೃಕ್ಷದ ಫಲದೊಳಗೆ
ಕುಲನಾಶಕನಾದ ಶರಣ ಒಂದೆ ಬಸುಱಲ್ಲಿ ಬಂದಾ
ಬಂಧುಬಳಗಕ್ಕೆ ತನ್ನ ಕುಲಕ್ಕೆ ತಾನೆ ಮಾರಿಯಾದ ಶರಣ.
ಭವಿ ಭಕ್ತ ಭವಿ ಬೀಜದ ವೃಕ್ಷದ ತಂಪನೆಳಲು ಬಿಟ್ಟು
ಕುಳ್ಳಿರ್ದಲ್ಲಿಯೆ ಬಳಿಬಳಿಯ ಬಯಲಾದ ಶರಣ            ನಾದ ಬಿಂದು ಬೀಜನಪ್ಪ.
ಹೊಳ್ಳಾಗಿ ಹಾರಿಹೋದಲ್ಲಿ ಇನ್ನೇನ ಹೇಳಲುಂಟು !
ಗುಹೇಶ್ವರನೆಂಬ ಲಿಂಗವನೆಱಿದು ಭವಿಗೆ ಭವಿಯಾದಾತಂಗೆ
ಇನ್ನೇನು ಪದವುಂಟಯ್ಯ!

೪೪     

ಗಗನ ಮಂಡಳ ಸೂಕ್ಷ್ಮನಾಳದಲ್ಲಿ ಸೋಹಂ ಸೋಹಮೆನುತ್ತಿರ್ದುದೊಂದು ಬಿಂದು.
ಅಮೃತಧಾರೆಯ ದಣಿಯುಂಡ ತೃಪ್ತಿ ಇಂದು
ಗುಹೇಶ್ವರ ನಿಂದಲ್ಲಿಯೆ ಎನಗೆ ನಿವಾಸವಾಯಿತ್ತು.

೪೫

ಮಾಣಿಕವೆಂಬ ಆಱು ವರ್ಣ,
ಅದಕ್ಕೆ   ಬ್ರಹ್ಮ, ವಿಷ್ಣು, ರುದ್ರ, ಈಶ್ವರ, ಸದಾಶಿವ ಶ್ರೀಗುರುವೆಂಬ
ಆಱು ಅಧಿದೇವತೆ ಈ ಭೇದವನೆಲ್ಲವ ತಿಳಿದು ನೋಡಿ
ಉನ್ಮನಿಯ ಜೋತಿಯ ಬ್ರಹ್ಮರಂಧ್ರದ ಸಹಸ್ರದಳ ಪದದ
ಅಮೃತ ಬಿಂದುವಿನೊಳಗೆ ಪ್ರಾಣವೆ ರೂಪಾಗಿ,
ಪ್ರಾಣಲಿಂಗದಲ್ಲಿ ಒಡಗೂಡ ಬಲ್ಲ ಗುಹೇಶ್ವರಾ,
ನಿಮ್ಮ ಶರಣ.

೪೬

ಬೇರಿಲ್ಲದ ಗಿಡುವಿಗೆ ಪರಿಮಲವಿಲ್ಲದ ಪುಷ್ಪ ಹುಟ್ಟಿ
ರೂಹಿಲ್ಲದನಲನು ಅವಗ್ರಹಿಸಿತ್ತು ನೋಡಾ
ವೃಕ್ಷವಿಲ್ಲದ ದಳದಲ್ಲಿ ಒಂದು ಪಕ್ಷಿಯು ಹುಟ್ಟಿತ್ತು ನೋಡಾ
ಅತ್ತಲಿತ್ತಲು ಕಾಣದೆ ನೆತ್ತಿಯ ನಯನದಲ್ಲಿ ನೋಡಿತಲ್ಲಾ,
ನಿತ್ಯಾನಂದ ಪರಿಪೂರ್ಣನಿಲವಿನ ಅಮೃತ ಬಿಂದುವಿನ ರಸವ ದಣಿಯುಂಡು
ಪಶ್ಚಿಮದಲ್ಲಿ ಗುಹೇಶ್ವರಲಿಂಗವ ಸ್ವೀಕರಿಸಿತಲ್ಲಾ.

೪೭

ನಾಭಿಮಂಡಲದೊಳಗೆ ಈರೈದು ಪದ್ಮದಳ
ಸದಮಲ ಗಜಮಸ್ತಕದೊಳಗೆ ತೋಱುತ್ತದೆ.
ಆಕಾರ ಉಕಾರ ಮಕಾರ ಮಮಸ್ಥಾನ ತ್ರಿಕೂಟ ಸ್ಥಾನದ
ಸಮರಸದ ಸುಖದಲ್ಲಿ ಬೆಳೆದ ಕಂದ ಮೂಲಾದಿಗಳ
ಹೊಸರಸದ ಅಮೃತವನು ಒಸಱಿದಣಿಯುಂಡ ತೃಪ್ತಿಯಿಂದ
ಸುಖಿಯಾದೆನು ಗುಹೇಶ್ವರಾ.