೪೮

ಅಮೃತದೊಳಗೆ ಜನಿಸಿ ಅಮೃತದೊಳಗೆ ವರ್ತಿಸುವ
ಅಮೃತದೇಹಿಗೆ ಹಸಿವು ತೃಷೆಗೆ ಆ ಅಮೃತವೆ ಆಧಾರ.
ಆ ಅಮೃತ ಸೇವನೆಗೆ ಬೆಱೊಂದು ವಸ್ತುವುಂಟೆ ? ಇಲ್ಲ.
ಆ ಅಮೃತವೆ ಸರ್ವ ಪ್ರಯೋಗಕ್ಕೆ.
ಇದಕ್ಕೆ ಕಟ್ಟಳೆಯುಂಟೆ ? ಕಾಲವುಂಟೆ ? ಆಜ್ಞೆಯುಂಟೆ ?
ಬೇರೆ ಕರ್ತರು ಉಂಟೆ ? ಇಲ್ಲ.
ಮನವೆ ಮೇರೆ ಪರಿಣಾಮವೇ ಅವಧಿ ನೋಡಾ.
ಶ್ರೀಗುರುಲಿಂಗದಲ್ಲಿ ಜನಿಸಿ ಶಿವಲಿಂಗದಲ್ಲಿ ಬೆಳೆದು
ಜಂಗಮಲಿಂಗದಲ್ಲಿ ವರ್ತಿಸಿ ಪ್ರಸಾದಲಿಂಗದಲ್ಲಿ ಪರಿಣಾಮಿಸಿ,
ಶ್ರೀಗುರು ಲಿಂಗ ಜಂಗಮ ಪ್ರಸಾದವೆಂದಱಿದು
ಆ ಚತುರ್ವಿಧವೇಕವಾದ ಲಿಂಗವೆ ಪ್ರಾಣವಾ ಪ್ರಾಣವೆ ಲಿಂಗ
ಆ ಲಿಂಗವೆ ಅಂಗವಾಗಿ ಲಿಂಗ ಸ್ವಾಯತವಾದ ಲಿಂಗಾನುಭಾವಿ ಲಿಂಗೈಕ್ಯಂಗೆ
ಜಪ, ಧ್ಯಾನ, ತಪಕ್ಕೆ; ಅರ್ಚನೆ ಪೂಜೆಗೆ.
ಆಗಮವುಂಟೆ ? ಕಾಲವುಂಟೆ ? ಕರ್ಮವುಂಟೆ ?
ಕಲ್ಪಿತವುಂಟೆ ? ಇಲ್ಲ.
ಸರ್ವವು ಲಿಂಗಮಯವಾದ ಆ  ಲಿಂಗವಂತಂಗೆ
ನಡೆವುದೆ ಆಗಮ ಪೂಜಿಸುವುದೆ ಕಾಲ
ಮಾಡಿದ್ದೆ ಕ್ರಿಯೆ ನುಡಿದುದೆ ಜಪ
ನೆನೆದುದೆ ಧ್ಯಾನ ವರ್ತಿಸುವುದೆ ತಪಸ್ಸು
ಇದಕ್ಕವಧಿಯುಂಟೆ ? ಮೇರೆಯುಂಟೆ ? ಇಲ್ಲವು.
ಮನವೆ ಮೇರೆ ಪರಿಣಾಮವೇ ಅವಧಿ ನೋಡಾ
ಪೃಥ್ವಿ ಅಪ್ಪು ತೇಜ ವಾಯುವಾಕಾಶ ರವಿ ಶಶಿ ಆತ್ಮ
ಮನೋವಾಕ್ಕಾಯ ಹೊನ್ನ ಹೆಣ್ಣು ಮಣ್ಣು ಮೊದಲಾಗಿ
ಸರ್ವ ಪದಾರ್ಥವನರ್ಪಿಸಿ
ಗುರುಲಿಂಗಜಂಗಮದ ಪ್ರಸನ್ನತೆಯ ಪಡೆದ ಮಹಾಪ್ರಸಾದಿಗೆ
ಸರ್ವವು ಪ್ರಸಾದವಲ್ಲದೆ ಮತ್ತೊಂದಿಲ್ಲ
ಆ ಪ್ರಸಾದಿಗೆ ಪದಾರ್ಥ ಪ್ರಸಾದವೆಂದು ಬೇರುಂಟೆ ?
ಅರ್ಪಿತವೆಂಬ ಸಂದೇಹವುಂಟೆ ?
ಕೊಡುವಲ್ಲಿ ಕೊಂಬಲ್ಲಿ ಸೀಮೆಯುಂಟೆ ? ನಿಸ್ಸೀಮ ಪ್ರಸಾದಿಗೆ
ಸರ್ವವು ಪ್ರಸಾದ, ಆ ಭೋಗಕ್ಕೆ ಅವಧಿಯುಂಟೆ ? ಮೇರೆಯುಂಟೆ ? ಇಲ್ಲ.
ಮನವೆ ಮೇರೆ ಪರಿಣಾಮವೆ ಅವಧಿ ನೋಡಾ.
ವೇದಶಾಸ್ತ್ರ ಪುರಾಣಾಗಮಂಗಳು ಮೊದಲಾದ ಸರ್ವವಿದ್ಯಂಗಳ ತಾತ್ಪರ್ಯ
ವರ್ಮಕಳೆಗಳನಱಿದ ಮಹಾ ಜ್ಞಾತ್ರುವಿಂಗೆ ಆ ಮಹಾ ಜ್ಞಾನವೆ ದೇಹ ಅಜ್ಞಾನವೆ ಪ್ರಾಣ.
ಈ ಮಹತ್ತಪ್ಪ ಜ್ಞಾತ್ರು ಜ್ಞಾನ ಜ್ಞೇಯ ಒಂದಾದ ಮಹಾ ಬೆಳಗಿನ ಸುಖ ಸ್ವರೂಪಂಗೆ
ಮರ್ತ್ಯ ಸ್ವರ್ಗ ಶಿವಲೋಕವೆಂಬ ಫಲಪದದಾಸೆಯುಂಟೆ ? ಇಲ್ಲ
ನಿರಂಜನ ತೋಜೋಮಯ ಸುಖಸ್ವರೂಪ ನಿತ್ಯಾನಂದಮಯನು.
ಆ ಮಹಾಮಹಿಮನ ಸುಖಕ್ಕೆ ಅವಧಿಯುಂಟೆ ? ಮೇರೆಯುಂಟೆ ? ಇಲ್ಲ.
ಮನವೇ ಮೇರೆ ಪರಿಣಾಮವೇ ಅವಧಿ ನೋಡಾ.
ಆ ಮಹಾಮಹಿಮ ಅನುಭಾವಿ ತಾನೆ ನಿರುಪಮ ಜ್ಯೋತಿರ್ಲಿಂಗವಯ್ಯಾ
ಉರಿಲಿಂಗಪದ್ದಿಪ್ರಿಯ ವಿಶ್ವೇಶ್ವರಾ.

೪೯

ಅಱಿವಾಗ ಆ ತನುವಿನಲ್ಲಿದ್ದೆ ಅಱಿಯಿತ್ತು
ಮಱೆವಾಗ ಆ ತನುವಿನಲ್ಲಿದ್ದೆ ಮಱಿಯಿತ್ತು.
ಅಱಿವು ಮಱವೆ ಎರಡಾಯಿತ್ತು; ಉಭಯವ ತಾನಳಿದ ಘಟ ಒಂದಾಯಿತ್ತು.
ಇಂತೀ ಭೇದ ವಿಷದ ಬೇರಿನಂತೆ ಸಂಚಾರದೊಳಗಾಡುವುದು
ವಿಷಮಯವಾಯಿತ್ತು.
ಗೋಪ್ಯಕೊಳಗಾದುದು ಅಮೃತಮಯವಾಯಿತ್ತು.
ಇಂತೀ ಸಂಚಾರವುಳ್ಳನ್ನಕ್ಕ ಸಂಚಿತ ಕರ್ಮ ಸಂಚಾರ ನೀವೆ
ಆತ್ಮನೀಮುಕ್ತೆಯಾದಲ್ಲಿಯೆ ಸದಾಶಿವಮೂರ್ತಿಲಿಂಗವು ತಾನೆ.

೫೦

ಪಂಚಬ್ರಹ್ಮಮೂರುತಿ ಪ್ರಣವ ಮಂತ್ರ ರೂಪ
ಪಂಚಮುಖ ದಶಭುಜ ಫಣಿಯ ಹಣಿಯ ಮೇಲೆ ನೋಡುತೈದಾನೆ.
ಸಮತೆ ಸಮಾಧಾನವೆಂಬ ನಿಜಸುಖಾನಂದದೊಳಗೆ
ಚಂದ್ರಕಾಂತದ ಕೊಡದಲ್ಲಿ ಅಮೃತತುಂಬಿ
ಕೊಡನೊಡೆಯದೆ ಬೆಳಗುತ್ತದೆ ಗುಹೇಶ್ವರಾ.

೫೧

ಕಂಗಳನೋಟ ಹೃದಯದ ಜ್ಞಾನ
ಮನದಲ್ಲಿ ಮಾತನಾಡುತ್ತಿರ್ದೆನಯ್ಯಾ.
ಜೇನ ಮಳೆಗಳು ಕಱೆದವು ಅಮೃತ ಕಳೆಗಳು ಸುರಿದವು
ಕೂಡಲಸಂಗಮದೇವನೆಂಬರಸ ಸಾಗರದೊಳೋಲಾಡುತಿರ್ದೆನಯ್ಯಾ.

೫೨

ಕತ್ತಲೆಯೊಳಡಗಿದ ಬೆಳಗಿನ ಬೀಜ  ಬಿತ್ತದಮುನ್ನ ಮಾಮರನಾಯಿತ್ತು
ತನ್ನ ನೆಳಲೆಲ್ಲಾ ಬೆಳದೊಂಗಳು ನೋಡಾ
ಹೋದವರ ಕಂಗಳೆಲ್ಲಾ ಒಡೆದವು
ಉಲುಹಿದ್ದು ಉಲುಹಿಲ್ಲ
ಕಪಿಲಸಿದ್ಧ ಮಲ್ಲಿಕಾರ್ಜುನಯ್ಯನು ಮರದಹೊಟ್ಟೆಯೊಳಗಣ
ಮಧುವಿನಂತಿದ್ದನು.

೫೩

ಕಾಳಿಯ ಕಡೆಗಣ್ಣ ಕಿತ್ತು. ಏಡಿಯ ಸರ್ವಾಂಗವ ಸೀಳಿ
ಅಚ್ಚ ಬೆಳ್ಳಗೆಯ ಹಾಲ ನಿಶ್ಚಯದಲ್ಲಿ ನೆನೆದು ತೃಪ್ತಿಯಾಗಿ ಕೊಳಬಲ್ಲಡೆ
ಸದಾಶಿವಮೂರ್ತಿಲಿಂಗವು ತಾನೆ.

೫೪

ಐದು ಪರಿಯ ಬಣ್ಣವ ತಂದುಕೊಟ್ಟಡೆ ನಾಲ್ಕು ಮೂಲೆಯ ಹಸುವಾಯಿತ್ತು
ಹಸುವಿನ ಬಸುಱಲ್ಲಿ ಕಱುಹುಟ್ಟಿತ್ತು.
ಕಱುವ ಮುಟ್ಟಲೀಯದೆ ಹಾಲು ಕಱೆದುಕೊಂಡಡೆ ಕರ ರುಚಿಯಾಯಿತ್ತು.
ಮಧುರ ತಲೆಗೇಱು ಆ ಹಾಲೆಂದಱುದು ಅರ್ಥವನೀಗಾಡಿ,
ಆ ಕಱುವಿನ ಬೆಂಬಳಿವಿಡಿದು ಭವ ಹಱಿಯಿತ್ತು ಚನ್ನಮಲ್ಲಿಕಾರ್ಜುನಾ.

೫೫     

ಕರಿಯ ತಲೆಯ ಅರಮನೆಯ ಸುರಧೇನು ಹಯನಾಯಿತ್ತು
ಕಱೆದುಂಬಾತಂಗೆ ಕೈಕಾಲಿಲ್ಲ.
ಕಱುನಾಲ್ವೆರಳಿನ ಪ್ರಮಾಣಿನಲ್ಲಿಹುದು.
ಇದ ಕಱೆದುಂಬಾತನೆ ದೇವ ಗುಹೇಶ್ವರಾ.

೫೬

ಮೂಲೆಯಿಲ್ಲದವಿಂಗೆ ತಲೆಮೊಲೆ ಮನದಲ್ಲಿ ಉಣ್ಣು ಕಂಡಾ..
ಸತ್ತು ಹಾಲಕುಡಿಯಬಲ್ಲಡೆ ಗುಹೇಶ್ವರನೆಂಬಲಿಂಗವು ತಾನೆ ಕಂಡಾ.

೫೭

ಶಿವಕ್ಷೇತ್ರದಲಾದ ಪದಾರ್ಥವ
ಕಿಂಕಿಲದಿಂದ ಅತಿ ಪ್ರೇಮದಿಂದ
ತನುಮುಟ್ಟಲೀಯದೆ ನಾಶಿಕ ಮುಟ್ಟಲೀಯದೆ ಲಿಂಗಾರ್ಪಿತ ಮಾಡುವುದು.
ಆ ಪ್ರಸಾದವ ಸತಿಸುತರಿಗೆಂದೆನ್ನದೆ ಭೃತ್ಯಾಚಾರದಲ್ಲಿ ಗ್ರಹಿಸುವದು
ಪ್ರಸಾದವು ಬೀಸರವಾದಡೆ ಭಕ್ತಿಗೆ ಸಹಜವಾಗದು
ನಿಮಗೆಂದೆಂದು ದೂರ ಕೂಡಲಚನ್ನಸಂಗಮದೇವಾ.

೫೮

ಜಪತಪ ಮಾಡಿದಡೇನಯ್ಯಾ ತಾನು
ನೇಮ ಸಮಾಧಿಯ ಮಾಡಿದಡೇನಯ್ಯ ತಾನು
ನಿಮ್ಮ ಪಾದೋದಕ ಪ್ರಸಾದದ ವರ್ಮವನಱಿಯದನ್ನಕ್ಕ ?
ಮುಂಡೆಯ ಬದುಕಿಂಗೆ ಮೂಲಸ್ವಾಮಿಯ ಕರವಿಡವಹುದೆ
ಕಪಿಲಸಿದ್ಧ ಮಲ್ಲಿಕಾರ್ಜುನಾ.

೫೯      

ಮಂಜರ ನೇತ್ರದಂತೆ ಉಭಯಚಂದ್ರರ ಕಾಬವರರೋ ?
ಕಂಡುದ ಶಶಿ ರವಿ ರತರದಲ್ಲಿ ಪಿಡಿದು ಅಗ್ನಿಮುಖಕ್ಕೆ ಸಲಿಸುವರಲ್ಲಾದೆ
ಲಿಂಗಮುಖಕ್ಕೆ ಸಲಿಸವಲ್ಲವರರೋ ?
ತದನಂತರ ಲಿಂಗಕ್ಕೆ ಕೊಟ್ಟುಕೊಂಬಲ್ಲಿ ನಿರಂತರ ಸಾವಧಾನಿ
ಗುಹೇಶ್ವರ ನಿಮ್ಮ ಪ್ರಸಾದಿ.

೬೦

ಲಿಂಗ ಗಂಭೀರ ನಿಸ್ಸಂಗಿಯ ಸಂಗ ನಾನೆಂಬೆನಯ್ಯಾ
ಪರಮಾರ್ಥದಿಂದ ಗಮಿಸುವ ಗಮನವ ನನೆಂಬೆನಯ್ಯಾ
ಕೂಡಲಸಂಗನಶರಣರು ಕಾಯವ ನೆವದಿಂದರ್ಪಿಸುವ
ಬೆಡಗ ನನೆಂಬೆನಯ್ಯಾ.

೬೧

ಅಯ್ಯಾ ನಿಮ್ಮ ಪ್ರಸಾದದ ಮಹಿಮೆಯನೇನೆಂಬೆನಯ್ಯಾ
ವೇದಂಗಳಱಿಯವು ಶಾಸ್ತ್ರಂಗಳಱಿಯವು
ಛಲವ ಸಾಧಿಸಿ ತನುದಂಡಣೆಯಂ ಮಾಡಿ
ಸಕಲ ಭೋಗಂಗಳಂ ಬಿಟ್ಟು ದುಃಖವನನುಭಿವಿಸಿ
ತಪ್ಪಿಲ್ಲದೆ ನಡದಡೆ ಹಡೆವರಯ್ಯಾ ಸ್ವರ್ಗದ ಭೋಗವ
ಒಂದುವನು ಬಿಡಲಿಲ್ಲ ಸಂದೇಹ ಮಾತ್ರವಿಲ್ಲ.
ಆಗ ಬಿತ್ತಿ ಆಗ ಬೆಳೆವಂತೆ
ರೋಗಿ ಬಯಸಿತ್ತ ವೈದ್ಯಕೊಡುವಂತೆ,
ಪಾಪದಂತಾದುದನು ಪುಣ್ಯವನೆ ಮಾಡುವದು,
ಉಂಡುಪವಾಸಿ ಬಳಸಿ ಬ್ರಹ್ಮಚಾರಿ ಎನಿಸುವದು
ಹಿಡಿದಡೆ ಇಲ್ಲ ನಡೆದುದೆ ಬಟ್ಟೆಯಾದ ಕಾರಣ
ಪ್ರಸಾದಿಯಿಂದ ಪರವಿಲ್ಲ ಪ್ರಸಾದಿಯಿಂದ ಮುಕ್ತರಿಲ್ಲ.
ಇಂತಪ್ಪ ಪ್ರಸಾದವನು ನಿಮ್ಮ ಶರಣ ಬಸವಣ್ಣ ತೋಱಿದನಾಗಿ
ಎನ್ನ ಭವ ನಾಸ್ತಿಯಾಯಿತ್ತು ಕಾಣಾ ಕಲಿದೇವರದೇವಾ.

೬೨

ವೇದ ಪ್ರಮಾಣವಲ್ಲ, ಶಾಸ್ತ್ರ ಪ್ರಮಾಣವಲ್ಲ
ಶಬ್ಧ ಪ್ರಮಾಣವಲ್ಲ ಕಾಣಿರೋ
ಲಿಂಗಕ್ಕೆ ಅಂಗಸಂಗದ ಮಧ್ಯದಲ್ಲಿದ್ದುದ ಬೈಚಿಟ್ಟು
ಬಳಸಿದ ಗುಹೇಶ್ವರ ನಿಮ್ಮ ಶರಣ.

೬೩

ಇಹಪರನಲ್ಲ ಪರಾಪರನಲ್ಲ ಕಾಮಿಯಲ್ಲ ನಿಷ್ಕಾಮಿಯಲ್ಲ
ಅನಾಯಸ ನಿರಂಜನನು
ಸಿದ್ಧಸೋಮನಾಥ ನಿಮ್ಮ ಶರಣ ಬಳಸಿ ಬಳಸುವನಲ್ಲ.

೬೪

ತನಗೆ ತಾನೆ ಹುಟ್ಟಿದನಾಗಿ ತಾನೆ ಸ್ಥಾವರವಾದ ಅ ಲಿಂಗವು
ತನ್ನಲ್ಲಿದ್ದ ರುಚಿಯ ಅವ್ಯಕ್ತ ಕ್ರಿಯೆಯಿಂದ
ಮನವೆ ಬಾಯಾಗಿ ಉಂಬೋ ಲಿಂಗವು
ಇತರಸುಖವ ಬಲ್ಲದೆ ಕೂಡಲಚನ್ನಸಂಗಮದೇವಾ ?

೬೫

ತನು ನೇಹದ ಸುರುಚಿಯ ತೋಱಲಿಕ್ಕಾರಿಗೂ ಬಾರದು
ಅದು ಸಕ್ಕರೆಯಂತುಟಲ್ಲ, ಅದು ತವರಜದಂತುಟಲ್ಲ.
ಭಾವದ ಸುಖ ಭವಗೆಡಿಸಿತ್ತು, ಮಹಾಲಿಂಗ ಕಲ್ಲೇಶ್ವರ ನೇನೆ ಬಲ್ಲೆ.

೬೬

ಧರೆಯಾಕಾಶಾದ ನಡುವೆ ಒಂದು ಮಾಮರ ಹುಟ್ಟುತ್ತು
ಆ ಮಮರಕ್ಕೆ ಕೊಂಬೆರಡು ಎಲೆ ಮೂರು ಮೂವತ್ತಱು ಪುಷ್ಪ
ಕಾಯೊಂದು
ಹಣ್ಣು ರಸ ತುಂಬಿದಲ್ಲಿ ಏನನು ಕಾಣೆ,
ಎಲೆಯುದರಿದಡೆ ಹೆಣ್ಣು ತೊಟ್ಟುಬಿಟ್ಟು ಬಿದ್ದಿತ್ತು
ಆ ಹಣ್ಣು ಪ್ರಭುದೇವರು ಆರೋಗಣೆಯ ಮಾಡಿ
ನಿಜದಲ್ಲಿ ನಿರ್ವಯಲಾದರು.
ಪ್ರಭುವಿನ ಕಾರುಣ್ಯ ಪ್ರಸಾದವ ನಾ ಕೊಂಡೆನಾಗಿ.
ಕೂಡಲಸಂಗಮದೇವರು ಇತ್ತ ಬಾರೆಂದು
ತಮ್ಮ ಹೃದಯಕಮಲದಲ್ಲಿ ಇಂಬಿಟ್ಟುಕೊಂಡರು.

೬೭

ಕರಿ ದಾನವನ ಶಿರದಲ್ಲಿ ಮರುಜವಣಿಯ ಹಣ್ಣಿಪ್ಪುದ ಕಂಡೆ
ಇಱುಹೆ ಬಂದು ಮುತ್ತಲು ಮರುಜವಣಿ ಯಾರಿಗೂ ಕಾಣಬಾರದಯ್ಯಾ
ಇಱುಹಿನ ಬಾಯ ಟೊಣೆದು ಮರುಜವಣಿಯ ಹಣ್ಣ ಸವಿಯಬಲ್ಲಾತಂಗೆ
ಮರಣವಿನ್ನೆಲ್ಲಿಯದೋ ?
ಮರಣವ ಗೆಲಿದಾತರ ಮಹಾಲಿಂಗೈಕ್ಯನೆಂಬೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೆ.

೬೮

ತಲೆವಾಲೊಸರಲು ನೆಲ ಬೆಂದು ನೀರಱತು ಕಿಚ್ಚು ಕೆಟ್ಟಿತ್ತು ನೋಡಾ
ಘಾಳಿಯ ಧೂಳಿಯ ದಾಳಿನಿಂದು ಅಂಬರದ ಸಂಭ್ರಮವಡಗಿತ್ತು ನೋಡಾ.
ಹಾಲ ಕುಡಿದಡೆ ಶಿಸು ಸತ್ತು
ತಾನು ತಾನಾದುದನೇನೆಂದುಪಮಿಸುವೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೆ.

೬೯

ಪಿಂಡಾಂಡದ ಮೇಲೊಂದು ತುಂಬಿದ ಭಾಂಡವ ಕಂಡೆನಯ್ಯಾ
ಪಿಂಡಾಂಡವ ಹೊದ್ದದೆ ಅಖಂಡಮಯವಾಗಿದೆ ನೋಡಾ
ಆ ಭಾಂಡೆಯ ಎನ್ನ ಮಂಡೆಯಲ್ಲಿ ಹೊತ್ತಿಪ್ಪೆನಯ್ಯಾ
ಮೂಲ ಜ್ಞಾನಾಗ್ನಿ ಎದ್ದು ಮೇಲಣ ಕಮಲವತಾಗಲು
ಕಮಲದೊಳಗಣ ಕೊಡಕೊಡದೊಳಗಣ ಉದಕ ಉಕ್ಕಿ
ಶರೀರದ ಮೇಲೆ ಹೋಗಲು ಪಿಂಡ ಕರಣ ಅಖಂಡಮಯವಾದೆನು.
ಅಮೃತ ಬಿಂದುವಿನ ಸೇವಿಸಿ ನಿತ್ಯಾನಿತ್ಯವಾ ಗೆದ್ದು
ನಿರ್ಮಲ ನಿರಾವರಣನಾದೆನು.
ಸೀಮೆಯ ಮೀಱೆ ನಿಸ್ಸೀಮನಾದೆನು ಪರಮ
ನಿರಂಜನನೊಡಗೂಡಿ ಮಾಯಾರಂಜನೆಯಳಿದು
ನಿರಂಜನನಾಗಿರ್ದೆನು ಕಾಣಾ
ಸಮಸ್ತ ವಿಶ್ವಪ್ರಪಂಚಿಗೆ ಹೊಱಗಾಗಿ
ನಿಷ್ಪ್ರಪಂಚಕ ನಿರ್ಲೇಪಕನಾಗಿರ್ದೆನು ಕಾಣಾ
ಮಹಾಲಿಂಗ ಗುರುಶಿವಸಿದ್ಧೇಶ್ವರ ಪ್ರಭುವೆ.

೭೦      

ಶಿಖಾಚಕ್ರದಲ್ಲಿ ಅಕಳಂಕ ಅದ್ವಯ ಅಪ್ರಮೇಯ ಶುದ್ಧಸೂಕ್ಷ್ಮ
ಚಿನ್ಮಯನು ನೋಡಾ
ಆ ಚಿದಮೃತ ಕಳಪ್ರಸಾದವನೊಡಗೂಡಿ ಶುದ್ಧಪ್ರಣವ
ಪ್ರಸಾದಿಯಾದೆನು ಕಾಣಾ,
ಮಹಾಲಿಂಗ ಗುರು ಶಿವ ಸೆದ್ಧೇಶ್ವರಪ್ರಭುವೆ.

೭೧

ಆಜ್ಞಾ ಚಕ್ರದ ದ್ವದಳ ಪದ್ಮದಲ್ಲಿ ಅವಿರಲ ಸುಜ್ಞಾನ ಪೀಠದೊಳಗೆ
ಅಮೃತಮಯ ಲಿಂಗವಕಂಡೆನು ನೋಡಾ.
ಆ ಲಿಂಗಸಂಗದಿಂಗ ಉತ್ಪತ್ಯಸ್ಥಿತಿ ಪ್ರಳಯವ ಗೆಲಿದು
ನಿತ್ಯನಿರಂಜನ ಪ್ರಸಿದ್ಧ ಪ್ರಸಾದಿಯಾದೆನು ಕಾಣಾ
ಆ ಪ್ರಸಿದ್ಧ ಪ್ರಸಾದವ
ಒಂದೆರಡಾಗಿ, ಎರಡುಮೂಱಾಗಿ
ಆ ಮೂಱು ಅಱಾಗಿ; ಆಱು ಮೂವತ್ತಾಱಾಗಿ
ಮೂವತ್ತಾಱು ಇನ್ನೂಱ ಹದಿನಾಱಾಗಿ
ಅ ಇನ್ನೂಱ ಹದಿನಾಱರ ಬೆಳಗು ಪಿಂಡಾಂಡದಲ್ಲಿ ಪರಿಪೂರ್ಣವಾಗಿ
ಸದಾಸನ್ನಹಿತವಾಗಿಪ್ಪುದು
ನಿಮ್ಮ ಶರಣಸಂಗಬಸವಣ್ಣ ಮೊದಲಾದ ಪ್ರಮಥರಿಗೆ ಸಾಧ್ಯವಲ್ಲದೆ
ಅಜಹರಿಸುರ ಮನುಮುನಿಗಳಿಗೆ ಅಗಮ್ಯ ಅಗೋಚರ ಅಪ್ರಮಾಣ
ಅಸಾಧ್ಯ ನೋಡಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೆ.

೭೨

|| ತ್ರಿವಿಧಿ ||

ಕುಂಭಿನಿಯ ಮಸ್ತಕದ ಇಂಬಿಪ್ಪ ಅಕ್ಷರವ
ಶಂಭುಕಂಡನು ತನ್ನ ಅಂತ್ಯದಲ್ಲಿ
ಕರಿಯ ಕೂಪದೊಳಗೆ ಬಿಳಿಯ ಜಲ ಪ್ರಜ್ವಲಿಸಿ
ಅದಕಂಡು ಮುಕ್ತನೈ ಯೋಗಿನಾಥಾ.

೭೩

ಕೆಲಬಲದ ಮಧ್ಯದಲಿ ಹವಣುನಾದವಿಂದು
ಕಳೆಯ ಮೀಱಿಪ್ಪುದದು ಶ್ವೇತವಾಗಿ
ಧಾತು ಬಣ್ಣವನುಂಗಿ ಮಾತುಮಾತೆಯಕಂಡು
ನೀತಿ ಮುಕ್ತನು ಆದೆ ಯೋಗಿನಾಥಾ.

೭೪      

ಮಯೂರ ಮಧ್ಯದಲಿ ಮುನ್ನುಱು ಅಕ್ಷರದ
ಮೂಱು ಬೆಟ್ಟದ ನಡುವೆ ಅಮೃತ ಒಸರೆ
ಅಱೂಢದ ಕೂಟದಾನತ ಕಂಡೀಗ
ಆನು ಬೆಱಗಾದೆನೈ ಯೋಗಿನಾಥಾ.

೭೫      

ಎಸಳ ಕುಸುಮಂಗಳಲಿ ಪಸರಿಸಿತು ಪೂರ್ವದಲಿ
ದೆಸೆಗೆಟ್ಟೆ ದೆಸೆಗೆಟ್ಟೆ ನಿರ್ದೆಶೆಯಲಿ
ಪಸರಿಸುವ ಮಸ್ತಕದ ಒಸರುವಾಮೃತದಲ್ಲಿ
ದೆಸೆಗೆಟ್ಟೆನೈ ಲಿಂಗ ಯೋಗಿನಾಥಾ.