|| ವೃತ್ತ ||           

ಆದಿಯನಾದಿ ಮಧ್ಯಮವಸಾನವೆನಿಪ್ಪವನೊಂದುಗೂಡಿಸಾ
ಕ್ಷಾದಮೃತ ಪ್ರಸಾದ ಪರಿಪೂರ್ಣ ಭವತ್ಕರುಣಾಲಸತ್ಕಟಾ
ಕ್ಷೋದಯವಾರಿಗಾದ ಪುದವರ್ಗರಿದೇ ಶಿವಯೋಗಸಿದ್ಧಿನಿ
ರ್ಭೇದಸುಖಾಭಿವೃದ್ಧಿ ಪರಮಪ್ರಭುವೇ ಮಹದೈಪುರೀಶ್ವರಾ ||    

        

|| ವಚನ ||

ಶುದ್ಧಾತ್ಮ ಪರಮಾತ್ಮರಿಬ್ಬಾರೊಂದು ರತ್ಮಕ್ಕೆ ಹೆಣಗಾಟವನಾಡಿಹರು
ಅವರ ಹೆಣಗಾಟವ ನೋಡಿ ಆ ರತ್ಮವ ಸೆಳೆದುಕೊಂಡದೆ
ಕೂಡಲಸಂಗಮದೇವರಿಗಾರೋಗಣೆಯಾಯಿತ್ತು.

ಮಾಣಿಕ್ಯದ ಮಂಟಪದೊಳಗೆ ಏಳು ಚಿತ್ರಿಕದೊಡನೆ
ಮೇಳವಿಸಿದನು ಮಹಾಮಂತ್ರಂಗಳ.
ಮೂಲ ಮಂತ್ರದ ಮೇಲೆ ಪ್ರಾಣಲಿಂಗದ ಬೆಳಗು;
ಆಲಿಕಲ್ಲಲ್ಲಿ ವಜ್ರದ ಕೀಲಕೂಟ
ಜಾಳಂಧ್ರದೊಳಗೆ ಮಾಣಿಕ್ಯದ ಪ್ರತಿಬಿಂಬ,
ಏಳು ರತ್ಮದ ಪುತ್ಥಳಿಗಳಾಟದ ಮಣಿ ಮಾಲೆಗಳ ಹಾರ ಹೊಳೆವ
ಮುತ್ತಿನ ದಂಡೆ    ಎಳೆಯ ನೀಲದ ತೊಡಿಗೆಯನೆ ತೊಟ್ಟು ಸುಳಿದು
ಮದ್ದಳೆಗಾಱರೊಳಗೆ ದಂದಿಳಮೆನಲು
ಕುಣಿವ ಪಡಿ ಬಹುರೂಪುಗಳ ನಾಟಕ
ತಾಳಧಾರಿಯ ಮೇಳ ಕಹಳೆ ಕಾಱನ ನಾದ
ಕೊಳಲ ವಶದೊಲಗಾಡುತ್ತ ಒಳಹೊಱಗೆ ಕಾಣಬರುತ್ತಿದೆ ಚಿತ್ರದ ಬೊಂಬೆ,
ಫಣಿಪತಿಯ ಕೋಣೆ ಸಂದಣಿಸುತ್ತಿರಲು ಗಣ ಮೇಳಾಪ
ಕೂಡಲಚನ್ನಸಂಗನಲ್ಲಿ ಪ್ರಾಣಲಿಂಗದ ಬೆಳಗಿನೊಳು ಬೆಳಗಿತ್ತು.

         

ಭೂಮಿ ನಿನ್ನದಲ್ಲ, ಹೇಮ ನಿನ್ನದಲ್ಲ, ಕಾಮಿನಿ ನಿನ್ನವಳಲ್ಲ.
ಅವು ಜಗಕ್ಕಿಕ್ಕಿದ ವಿಧಿ ನಿನ್ನೊಡವೆಯೆಂಬುದು ಜ್ಞಾನರತ್ನ.
ಅಂತಪ್ಪ ಜ್ಞಾನರತ್ನವ ಕೆಡಗೊಡದೆ ಆ ರತ್ನವ ನೀನಲಂದರಿಸಿದೆಯಾದಡೆ
ನಮ್ಮ ಗುಹೇಶ್ವರಲಿಂಗದಲ್ಲಿ ನಿನ್ನಿಂದ ಬಿಟ್ಟು ಸಿರಿವಂತರಿಲ್ಲ ಕಾಣಾ,
ಎಲೆ ಮನವೇ.

ಕನಕಾಚಲದಲ್ಲಿ ದಿನನಾಯಕನೆಂಬ ರತ್ನ ಹುಟ್ಟಿ
ಅಹುದಲ್ಲಾ ಎಂಬ ಕೊಳಗದ ಕೊರಳಿನಲ್ಲಿ ಅಳೆವುತ್ತೈದಾರೆ.
ಕೊಳಗದ ಕೊರಳು ತುಂಬಿ, ಅಳೆವಾತನ ಹೃದಯ ತುಂಬಿ
ಗುಹೇಶ್ವರಲಿಂಗದ ಕಂಗಳು ತುಂಬಿ ಮಂಗಳಮಯವಾಯಿತ್ತು.

ಧರೆಯ ಮೇಲುಳ್ಳ ಅಱುಹಿರಿಯರೆಲ್ಲರು ನೆರೆದು
ಪರಿಯಾಯ ಪರೀಕ್ಷೆಯನೊರೆದು ಬಣ್ಣವ ನೋಡಿ
ಸರವರದ ಪುಷ್ಫದೊಳು ಭರಿತ ಪರಿಮಳ ತುಂಬಿ
ಪರಮಜ್ಞಾನ ಜ್ಯೋತಿ ಪರಮಜ್ಞಾನವನು ಮೀಱೆ
ಪುರುಷರತ್ನದೊಡಗಿ ಗುಹೇಶ್ವರನಿಂದ ನಿಲವು
ಮೇರು ಗಗನವ ನುಂಗಿತ್ತು.

        

ಇರುಳಿನ ಮುಖದೊಳಗೆ ಒಂದು ನವರತ್ನ ಖಂಡಿತಹಾರವಡಗಿತ್ತು.
ಹಗಲಿನ ಮುಖದೊಳಗೆ ಒಂದು ನವಚಿತ್ರಪತ್ರದ ವೃಕ್ಷವಡಗಿತ್ತು.
ರತ್ನದ ಹಾರವ ವೃಕ್ಷಕ್ಕಾಹಾರವನಿಕ್ಕಿದಡೆ ಗುಹೇಶ್ವರ ಲಿಂಗದಲ್ಲಿ
ಪ್ರಾಣಲಿಂಗಕ್ಕೆ ಸುಖವಾಯಿತ್ತು.

         

ಅನಾಯಾಸದಿಂದ ಮನೆಯಮಾಡಿ ನಿರಾಯಾಸದಿಂದ ಪರಮಸುಖಿ.
ರೂಪಿಸುವಲ್ಲಿ ರೂಪಾಧಿಕ, ನೋಡುವಲ್ಲಿ ನೋಟಕ್ಕೆ ಘನ.
ಇಂತಹ ಸಹಜಸಂಗಿಯ ನಿಲವಿನ ಪರಿ ಉದಕದೊಳಗನಬಿಂದು
ಉದಯರತ್ನದಂತೆ ಕೂಡಲಸಂಗನ ಶರಣರ ನಿಲುವು.

ನೀಲದ ಮಣಿಯೊಂದು ಮಾಣಿಕ್ಯವ ನುಂಗಿದಡೆ
ವಜ್ರ ಬಂದು ಅದು ಬೇಡಬೇಡವೆಂದು ಉಗುಳಿಸಿತ್ತು ನೋಡಾ.
ಅಡಗಿದ ಮಾಣಿಕ್ಯ ನೀಲನ ತಲೆಮೆಟ್ಟಿ ಆನಂದನಾಟ್ಯವನಾಡುತ್ತಿದ್ದಿತು.
ಅಂಬರದೊಳಗಣ ಮುಗ್ಧೆ ಕಂಗಳ ಮುತ್ತಿನ ಮಣಿಯಮಥನವಿಲ್ಲದೆ
ನುಂಗಿ ಉಗುಳುತಿದ್ದಳು.
ಲಿಂಗಜಂಗಮವೆಂಬುದಱಿದು ಸುಖಿಯಾದೆನು ನಮ್ಮ
ಕೂಡಲಸಂಗಮದೇವರಲ್ಲಿ ಪ್ರಭುವಿನ ಕೃಪೆಯಿಂದಲಾನು ಬದಿಕಿದೆನು.

ಕುಂಡಲಿಯೆಂಬ ಆಧಾರದಲ್ಲಿ ಜಲತೇಜ ವಾಯುವೆಂಬ ತ್ರಿವಿಧ ಕೂಡಿ
ಕಮಂದಲು ಹುಟ್ಟಿತು.
ಅದಕ್ಕೆ ಬಾಯಿ ಮೂಱು, ಹಿಡಿಯಾಱು, ಜೋಳಿವೊಂದಱಲ್ಲಿ ಉದಕವ
ಕೊಳುತ್ತಿರಲಾಗಿ ಆ ಅಸುವಿನ ತೃಷೆಯಡಗಿ ಬಾಯಾರಿಕೆ ಸಲೆಬತ್ತಿದಲ್ಲಿ
ಮಹಾಗಣನಾಥನ ಐವತ್ತೆರಡು ಸರಹರಿದವು, ಮುವ್ವತ್ತಱು ಮಣಿ
ಕೆಟ್ಟವು. ಇಪ್ಪತ್ತೈದು ಮಣಿ ಪುಂಜವಾಯಿತ್ತು.
ಅಱು ನಾಯಕರತ್ನ ಎಲ್ಲಿ ಅಡಗಿದವೆಂದಱಿಯೆ.
ಮೂಱುರತ್ನವ ಕಂಡೆ. ಒಂದು ಉರಿವುದು, ಒಂದು ಉರಿಯದು,
ಒಂದು ಬೆಳಗುನಂದಿಹುದು. ಇಂತೀತ್ರಿವಿಧಂಗವ ಕಂಡು
ಈ ಅಂಗದ ಮಣಿ ಒಂದೊಂದ್ ಪವಣಿಸಲಾಱದೆ ಈ ದಿನಮಣಿಯ.
ವಿರಳವ ತೋಱಿಸಾ ಗೋರಕ್ಷಪಾಲಕ ಮಹಾಪ್ರಭು
ಸಿದ್ಧಸೋಮನಾಥಲಿಂಗವೇ.

೧೦

ತಾ ನಿಜವಿಟ್ಟ ಆ ನೆಲೆಯಲ್ಲಿ ತನ್ನ ವಿಶ್ವಾಸದೆಂದೆ
ದೇವತಾಕಲೇ ಕುಱುಹುಗೊಂಡಿತ್ತು.
ದೇವತಾಕಲೆ ತನ್ನ ತಾನಹಲ್ಲಿ ಇದಿರೆಡೆಯುಂಟೆ ?
ಸ್ಫಟಿಕದ ಘಟ ವರ್ತಿಯ ನೊಳಕೊಂಬುದಲ್ಲದೆ
ರತ್ನ ಬಹುವರ್ಣಕ್ಕೊಳಗಪ್ಪುದೆ ?
ಇಂತಿವ ತಿಳಿದ ಸ್ವಾನು ಭಾವಾತ್ಮಕನು ಲಕ್ಷಾಲಕ್ಷಂಗಳೆಂಬ
ಭಿತ್ತಿಯ ಮೆಟ್ಟದೆ.
ನಿಶ್ಚಯನಿಜಶರಣನೋಡಾ
ಲಲಾಮ ಭೀಮ ಸಂಗಮೇಶ್ವರ ಲಿಂಗವು ತಾನಾದ ಶರಣ.

೧೧

ರತ್ನದ ಕಾಂತಿಯ ಕಳೆಯಿಂದ ತನ್ನಂಗದಲ್ಲಿ ಹುಟ್ಟಿದ ಜರಿ ಕಾಣಿಸಿಕೊಂಬಂತೆ
ಇಂತೀವಸ್ತು ವಸ್ತುಕದಲ್ಲಿ ವಿಸ್ತರಿಸಲಾಗಿ ಪರಮ ಜೀವನಾದುದ ತಿಳಿದು
ನೋಡಿ ಕೊಳ್ಳೀ ಗೆಲ್ಲಸೋಲದ ಮಾತಲ್ಲಾ, ವಾಗ್ವಾದರ ಸೊಲ್ಲಲ್ಲಾ.
ಆಗಮದ ಮಾತಿನ ಮಾಲೆಯ ನೀತಿಯಲ್ಲಾ,
ಬೆಂಕಿಕೆಟ್ಟಡೆ ಉರುಹಿದಡೆ ಹೊತ್ತುವುದಲ್ಲದೆ
ದೀಪಕೆಟ್ಟು ಮತ್ತೆ ಉರುಹಿದಡೆ ಹೊತ್ತಿದುದುಂಟೆ ?
ಕ್ರಿಯಾವಂತ ಮಱೆದಡೆ ಆಱುವನಲ್ಲದೆ
ಮಱೆದಱಿದವ ಮತ್ತೆ ಮಱೆದಡೆ ನೆಱೆಯಱಿಯಬಲ್ಲನೆ ?
ಬೆಳಗದ ಕಂಚು, ತೊಳೆಯದ ಕುಂಭ, ಪಕ್ವಕಳೆಯದ ಫಲ,
ನೆಱೆಯಱಿಯದವನ ಸತ್ಕ್ರಿಯೆ ಮೋಟ ಬರುಕೆಟ್ಟು
ವೃಥಾಹೋಯಿತ್ತು.
ಇಂತೀ ಗುಣವ ತಿಳಿದು ಅಱಿದವರಲ್ಲಿ ತಾನಱಿದು ಕೂಡಬೇಕು,
ಕೂಳಬೇಕು, ಕೊಡಬೇಕು, ಎಡೆದೆಱಹಿಲ್ಲದೆ
ಊರ್ಧ್ವರೇತೋ ಮೂರ್ತಿಶ್ವೇತಸ್ವಯಂಭು ಕಪಿಲೇಶ್ವರಲಿಂಗವ
ಕೂಡಬೇಕು.

೧೨

ಬ್ರಹ್ಮಾಂಡದಲ್ಲಿ ಹುಟ್ಟಿದ ಲಕ್ಷಣ ಪಿಂಡಾಂಡದಲ್ಲಿ ಉಂಟೆಂಬರು
ಆ ಬ್ರಹ್ಮಾಂಡಕ್ಕೆ ತ್ರಿಜಾತಿವರ್ಗ-ಚರಸ್ಥಾವರ ಮೂಲಾದಿಭೇದ
ಸಪ್ತಸಿಂಧು ಸಮಾಲಕ್ಷ ಮುಂತಾದ ಮಹಾಮಱವೆ
ಅಷ್ಟಾಷಷ್ಟಿ ಗಂಗಾನದಿಗಳು ಮುಂತಾದ,
ನವಪಾಷಾಣದೊಳಗಾದ ರತಿಸಂಭವ ಮುಂತಾದ,
ಷಟ್ ಕರ್ಮ ಮುಂತಾದ
ಇಂತೀ ಬ್ರಹ್ಮಾಂಡದೊಳಗಾದ ವಸ್ತುಕ ವರ್ಣಕ ಇವೆಲ್ಲವೂ
ಲಕ್ಷಿಸಿಕೊಂಡು ಪ್ರಮಾಣಾದವೋ!
ಈ ಪಿಂಡಾಂಡಕ್ಕೆ ಬ್ರಹ್ಮಾಂಡವ ಸರಿಗಾಬಲ್ಲಿ
ನಾನಾವರ್ಣದ ಭೇದಂಗಳೆಲ್ಲವ ವಿಚಾರಿಸಲಿಕ್ಕುಂಟು.
ಘಟಭೇದದಲ್ಲಿಲ್ಲ, ಜ್ಞಾನಭೇದದಿಂದುಂಟೆಂದು,
ಕರ್ಮವ ವಿಚಾರಿಸಲಿಕ್ಕೆ.
ಪೃಥ್ವೀತತ್ತ್ವದೊಲಗಾದುದೆಲ್ಲವೂ ವಸ್ತುಕ ರೂಪು;
ಅಪ್ಪುತತ್ತ್ವದೊಳಗದುದೆಲ್ಲವೂ ವರ್ಣಕ ರೂಪು;
ತೇಜಗೊಳಗಾದುದೆಲ್ಲವೂ ದೃಶ್ಯಾಂತರ ಭಾವ;
ವಾಯುತತ್ತ್ವದೊಳಗದುದೆಲ್ಲವೂ ಖೇಚರ ಸಂಚೀಭಾವ.
ಆಕಾಶತತ್ತ್ವದೊಳಗದುದೆಲ್ಲವೂ……..
ಇಂತೀಚತುರ್ಗುಣಭಾವವನೊಳಕೊಂಡು ಶಬ್ದ ಗಮ್ಯವಾಗಿ
ಮಹದಾಕಾಶವನೈದುತ್ತಿಹುದಾಗಿ
ಇಂತೀ ಅಂಡ ಪಿಂಡವ ವಿವರಿಸಿ ನೋಡಿಹೆನೆಂದಡೆ
ಅಗ್ನಿಗೆ ಆಕಾಶದುದ್ದ ಕಾಷ್ಠವನೊಟ್ಟಿದಡೂ
ಅಲ್ಲಿಗೆ ಹೊತ್ತುವುದಲ್ಲದೆ ಸಾಕೆಂದು ಒಪ್ಪುವುದಿಲ್ಲ.
ಇಂತೀ ಭೇದದಂತೆ ಸಕಲವ ನೋಡಿಹೆನೆಂದಡೆ
ನಾಲ್ಕು ವೇದದೊಳಗಾಗಿ ಹದಿನಾಱು ಶಾಸ್ತ್ರಮುಂತಾಗಿ
ಇಪ್ಪತ್ತೆಂಟು ದಿವ್ಯಾಗಮಂಗಳು ಕಡೆಯಾಗಿ
ಇಂತಿವಱೊಳಗಾದ ಉಪಮನ್ಯುಶಾಂಕರಸಂಹಿತೆ ಚಿಂತನೆ
ಉತ್ತರ ಚಿಂತನೆ, ಪ್ರತ್ಯುತ್ತರ ಚಿಂತನೆ, ಸಂಕಲ್ಪಸಿದ್ದಿ
ಇಂತಿವಱೊಳಗೆ ತಿಳಿದಿಹೆನೆಂದಡೆ ಕಲಿ[ಕೆ]ಗೆ ಕಡೆಯಿಲ್ಲ,
ಅಱುಹಿಗೆ ತುದಿಮೊದಲಿಲ್ಲ.
ಇಂತಿವೆಲ್ಲವ ಕಳೆದುಳಿದು ನೀ ಬಲ್ಲಡೆ ವರ್ಮಸ್ಥಾನ,
ಶುದ್ಧಾತ್ಮಕನಾಗಿಪ್ಪ ಭೇದವ ಹಿಡಿದು ಮಾಡುವಲ್ಲಿ
ದೃಢಾತ್ಮಕನಾಗಿ ಲಿಂಗವನರ್ಚಿಸಿ ಪೂಜಿಸುವಲ್ಲಿ
ನೈಷ್ಠಿಕೆವಂತನಾಗಿ ತ್ರಿವಿಧವ ಕುಱೆತು ಅಱಿತು ಮಾಡುವಲ್ಲಿ
ನಿಶ್ಚಯವಂತನಾಗಿ ಅಶ್ವತ್ಥ ವೃಕ್ಷದ ವರ್ಣದ ಅಗ್ರದ ತುದಿಯ ಮೊನೆಯಲ್ಲಿ
ಬಿಂದು ಸಾ[ಗ]ರಕ್ಕೆ ಮುನ್ನಡೆ ಬಿದ್ದಂತೆ
ಇಂತೀ ಕರ್ಮಕಾಂಡದಲ್ಲಿದ್ದ ಆತ್ಮನು ಹಾಗಾಯಿತೆಂಬುದ ಹೀಗಱಿದು
ಇಂತೀ ಉಭಯದಲ್ಲಿ ಚೋದ್ಯವಾಗಿ ಸದ್ಯೋಜಾತ ಲಿಂಗವ ಕೊಡಬೇಕು.

೧೩

ಹಾವಿನ ಬಿಲದಲ್ಲಿ ಕೋಲನಿಕ್ಕಲಾಗಿ ಕೋಲಬೆಂಬಳಿಯಲ್ಲಿ
ಹಾಯುವ ಹಾವಿನ ತೆಱನಂತೆ ನಿಶ್ಚಯವಸ್ತು.
ಇದನಱಿಯುತ್ತೆವೆ ನಿಜವಸ್ತುವಿನ ಗುಣ ಮೋಹದಲ್ಲಿ ಅಚ್ಚೊತ್ತಿ ಬೆಚ್ಚಂತೆ
ಎಱಡಳಿಯಬೇಕು ವೀರಸೂರ ರಾಮೇಶ್ವರನಲ್ಲಿ.

೧೪

ಹರಿವ ಹಾವು ಉರಿವ ಕಿಚ್ಚೆಂದಡೆ ಮುಟ್ಟುವರಿಗೆ ಭೀತಿಯಲ್ಲವೆ ?
ಅಱಿದು ಹಿಡಿದಡೆ ಉರಗ ವಳ್ಳಿಗೆ ಸರಿ.
ಅಗ್ನಿಸ್ತಂಭನಕ್ಕೆ ಅಗ್ನಿ ಚಂದನದವುಡು
ನಿಂದು ನಿಜವಸ್ತುವನಱಿದು ಹಿಡಿಯಬಲ್ಲವಗೆ ನಿರಂಗದ ಕೂಟ.
ಈ ಉಭಯದ ಸಂಗವನಾಱಿದಲ್ಲಿ ಮನಸಂದಿತ್ತು ಮಾರೇಶ್ವರಾ.

೧೫

ದುಷ್ಟನಿಗ್ರಹ ಶಿಷ್ಟಪರಿಪಾಲಕನಪ್ಪ ದಿವ್ಯವಸ್ತು ಶಕ್ತಿಗೊಳಗಾಯಿತ್ತಾಗಿ
ಬಚ್ಚಲಱಿಯ ಬಯಲೆಂಬುದಕ್ಕುಪಮಾನವಿಲ್ಲನಯ್ಯ
ಶಿವಶಕ್ತಿಸಂಪುಟಕೇನೆಂದೆಂತು ಹೇಳಿರಣ್ಣಾ,
ಶಿವನೇ ಚೈತನ್ಯಾತ್ಮಕನು, ಶಕ್ತಿಯೆ ಚಿತ್ತು
ಇಂತು ಚೈತನ್ಯಾತ್ಮಕ ಚಿತ್ಸ್ವರೂಪನೆಂದಱಿಯ ಬಲ್ಲಡೆ,
ಭಿನ್ನವೆಲ್ಲಿಯದೋ ಗುಹೇಶ್ವರಾ.

೧೬

ಕಾಯದೊಳಗಣ ಜೀವವ ಮೀಱಿಹೋಹ ಕಳ್ಳನ ಸಂಗ ಬೇಡ.
ನಿಮ್ಮ ನಿಮ್ಮ ವಸ್ತುವ ಸುಯಿದಾನವಾ ಮಾಡಿ.
ಗುಹೇಶ್ವವನೆಂಬ ಕಳ್ಳನಕೊಂದಡೆ ಅಳುವರಾರೂ ಇಲ್ಲ.

೧೭

ಆದಿವಸ್ತು ಅನಾದಿವಸ್ತು ಎಂದೆರಡು ಭೇದವ ಮಾಡಿದಲ್ಲಿ
ತನ್ನಿರವಿನ ಭೇದವೋ ! ವಸ್ತುವಿನ ಸ್ವರೂಪದಂಗವೋ ?
ಇಕ್ಷುದಂಡಕ್ಕೆ ಕಡೆ ನಡು ಮೊದಲಲ್ಲದೆ ಸಕ್ಕುರಿಗುಂಟೆ ?
ಆದಿಯನಾದಿ ವಸ್ತುವೆಂಬುದು ತನ್ನಯ ಚಿತ್ತದ ಗೊತ್ತಲ್ಲದೆ
ಅದು ನಿಶ್ಚಯವಲ್ಲ. ಈಶಾನ್ಯ ಮೂರ್ತಿ ಮಲ್ಲಿಕಾರ್ಜುನಲಿಂಗ ಏಕಮೂರ್ತಿಸ್ವಯಂಭು.

೧೮

ಹಿಟ್ಟಿನ ಲಪ್ಪದಲ್ಲಿ ಚಿತ್ರದ ಕರಚರಣಾದಿಗಳ ಮಾಡಿ
ತಪ್ಪದ ಮಧುರದ ಸಾರವ ಕೂಡಿ ಕಿಚ್ಚಿನಲ್ಲಿ ಸುಟ್ಟು ಮೆಲಿದಲ್ಲಿ
ಮತ್ತೆ ಕೈ ಕಾಲಿನ ಚಿತ್ರದ ಸವಿಯುಂಟೆ ?
ಇದು ನಿಶ್ಚಯ ವಸ್ತು ಸ್ವರೂಪು ಮತ  ” ಸರುದ್ರಸ್ತಸ್ಯತೇ ” ನಿಶ್ಚಯವಾಗಿಯನು.
ಏಕಲಿಂಗ ನಿಷ್ಠವಂತರಲ್ಲಿ ಕಟ್ಟಣೆಯಾಗಿಹನು
ಆತ ನಿರ್ಲಕ್ಷ ಗೋರಕ್ಷಪಾಲಕ ಮಹಾಪ್ರಭುಸಿದ್ಧ ಸೋಮನಾಥ
ಲಿಂಗವು.

೧೯      

ಪುರನುರಿದು ಬೆಂದು ಕಱಿಯಾದ ಮತ್ತೆ
ಉರಿಗೊಡಲಾದುದ ಕಂಡು ಆತ್ಮಪರಿಭವಕ್ಕೆ ಬರಲಿಲ್ಲ
ಉರಿಯೊಳಗೊಡಗೂಡಿದ ತಿಲಸಾರ ತುಪ್ಪ ಮರಳಿ ಅಳತಕ್ಕುಂಟೆ ?
ವಸ್ತುವಿಕರಿಗೊಂಡ ಚಿತ್ತ ತ್ರಿವಿಧ ಮಲಕ್ಕೆ ಮರಳಿಮರುಳುವದೆ ?
ಈ ಗುಣ ನಡೆನುಡಿ ಸಿದ್ಧಾಂತವಾದವನ ಇರವು ಗಾರುಡೇಶ್ವರಲಿಂಗವ
ಕೂಡಿದವನ ಕೂಟ.

೨೦

ಅಪ್ಪುವಿನ ಸಂಯೋಗದಿಂದ ಮೃತ್ತಿಕೆ ಮಡಕೆಯಾಗಿ
ಮತ್ತೆ ಅಪ್ಪುವನೊಡಗೂಡಿ ತುಂಬಲಿಕ್ಕಾಗಿ
ಮತ್ತಾ ಅಪ್ಪುವಿನ ಮೃತ್ತಿಕೆ ಕರಗಿದುದಿಲ್ಲ.ಅನಲಮುಟ್ಟಿದ ದೆಶೆಯಿಂದ
ಇಂತೀ ವಸ್ತುವಿನ ದೆಶೆಯಿಂದ ಸತ್ಕೃಯಾಮಾರ್ಗಂಗಳು ಭಾವದ
ತೊಟ್ಟುಬಿಟ್ಟವು.
ಇಂತೀ ದೃಷ್ಟವನಱಿದು ಸರ್ವಕ್ರಿಯೆಗಳೆಲ್ಲವು ವಸ್ತು ಮುಟ್ಟಲಿಕ್ಕಾಗಿ
ಪೂರ್ವಗುಣತಂನಷ್ಟವಾಯಿತ್ತು ಭೋಗ ಬಂಕೇಶ್ವರಲಿಂಗವನಱಿದ
ಕಾರಣ.

೨೧

ತತ್ತ್ವವಿದೆಂದು ಮಿಕ್ಕಾದವರಿಗೆ ಹೇಳುವಾಗ
ಆ ಗುಣ ಚೇತನವೋ ಅಚೇತನವೋ ?
ಮದೋನ್ಮತ್ತಂಗೆ, ಸರ್ಪದಷ್ಟಂಗೆ, ತ್ರಿವಿಧಮಲಲೋಲುಪ್ತಂಗೆ
ಮತ್ತೆ ತನ್ನ ಕೊಱತೆಯಱಿಯದ ದುಶ್ಚರಿತ್ರಕುಹಕಿ ಕ್ಷುದ್ರಂಗೆ
ಮತ್ತೆ ನಿಜವಸ್ತುವಲ್ಲಿ ಹೊತ್ತು ನಿತ್ತರಿಸಿಪ್ಪುದೆ ?  ನಿಜನಿಃಕಲದಲ್ಲಿ,
ನಿರ್ದೇಹಿಗಳಲ್ಲಿ, ನಿರಾಲಂಬರಲ್ಲಿ,
ಸರ್ವಕ್ರಿಯಾ ಸಂಪೂರ್ಣರಲ್ಲಿ, ಆಕುಟಲರಲ್ಲಿ ಇಪ್ಪುದು.
ಇಂತೀ ಉಭಯದಿರವ ತಿಳಿದು ಮಾಡುವ ಭಕ್ತಂಗೆ
ಗುರುವಿನ ಇರವು, ಚರದ ಸುಲಕ್ಷಣ ಪರೀಕ್ಷೆ
ತ್ರಿವಿಧದ ಬಿಡುಗಡೆಯ ಒಳಗಱುಹಿಡುವ
ಮುಡಿಯಲ್ಲಿ ಕೊಡುವ ಕೊಂಬ ಎಡೆಗಳಲ್ಲಿ ಅಡಿಗಡಿಗೆ ಒಡಗೊಡಿ
ನೋಡುತ್ತಿರಬೇಕು.
ಮರ್ಪುದ ಬಿಡುಗಡೆಯಲ್ಲಿ ಮಾಡುವ ಭಕ್ತನ ಕೂಡಿಹ ವಿರಕ್ತನ ತೆಱ
ಊರ್ಧ್ವರೇತೋಮೂರ್ತಿ ಶ್ವೇತಸ್ವಯಂಭು ಕಪಿಲೇಶ್ವರಲಿಂಗವು
ತಾನಾದ ಭಕ್ತನ ಇರವು.

೨೨      

ಕಂಡ ಚಿತ್ತವಸ್ತುವಿನಲ್ಲಿ ಮಗ್ನನಾದ ಮತ್ತೆ
ಸಂಸಾರವಿಷಯಕ್ಕೆ ಮತ್ತನಪ್ಪುದೆ ಪುನರಪಿಯಾಗಿ
ಇದು ನಿಶ್ಚಯ ನಿಜಲಿಂಗಾಂಗನಿರ್ಲೇಪನ ಹೊಲಬು
ಮತ್ತೆ ಜಗದ ಮೊತ್ತದವನಲ್ಲ.
ನಿಷ್ಕಳಂಕ ಕೂಡಲಚನ್ನಸಂಗಮದೇವ ತಾನಾದ ಶರಣ.

೨೩      

ಉದರಿ ಬೀಳುವನ್ನಕ್ಕ ನಿನ್ನ ಹಂಗು.
ಉದರಿ ಬಿದ್ದಬಳಿಕ ಎನ್ನೊಡವ. ನಾ ಪೂಜಿಸುವನ್ನಕ್ಕ ದೇವ.
ಎನ್ನ ಪೂಜೆಗೊಳಗಾದಲ್ಲಿ ನೀ ಭಕ್ತ ನಾನಿತ್ಯ.
ಇಂತೀ ಸರ್ವರವಯವಸ್ತು ಬೀಜವಲಾ
ಗರ್ವಮಲತ್ರಯದೂರ ಸರ್ವಾಂಗ ಸಂತೋಷನಿಗರ್ವದ
ಸರ್ವೇಶ್ವರಲಿಂಗವು ತಥ್ಯವಿಥ್ಯದವನಲ್ಲ.

೨೪

ಒಂದೆಱಡಾದುದನಾತು ಅಱಿಯರು. ಒಂದೆ ಒಂದಾಯಿತ್ತು, ತ್ರಿತತ್ವವಾಯಿತ್ತು,
ವೇದಾತೀತವಾಯಿತ್ತು, ಭರಿತವಾಯಿತ್ತು,
ಪ್ರಾದೇಶಿಕವಾಯಿತ್ತು, ಭಕ್ತಿಗೆ ಸಾಧ್ಯವಾಯಿತ್ತು,
ಆಧಾರಾಧೇಯವಾಗಿತ್ತು.
ಅದು ಅಷ್ಟವಿಗ್ರಹರೂಪಾಗಿಪ್ಪುದು.
ಮತ್ತಿದ್ದದೊಂದು ಮಾಯಶಕ್ತಿಯಂ ಕೂಡಿ ಗುಣತ್ರಯಂಗಳಂ ಕೂಡಿ
ನಾನಾತ್ಮನೆನಿಸಿಕೊಂಡು, ವಿಷಯಾತ್ಮ ಇಂದ್ರಿಯಾತ್ಮ, ಭೂತಾತ್ಮ,
ಜೀವಾತ್ಮ ಪರಮಾತ್ಮನೆನಿಸಿಕೊಂಡು
ಪ್ರಾಣಾದಿ ವಾಯುಗಳ ಕೂಡಿಕೊಂಡು
ಜಡಪ್ರಕ್ಯತಿಗಳಂ ಹೊತ್ತುಕೊಂಡು
ಸಂಕಲ್ಪ ವಿಕಲ್ಪವೆಂಬುಭಯವ ಕಲ್ಪಿಸಿ ನಾನಾಯೋನಿ
ಪ್ರಾಪ್ತವಾಗುತಿರ್ದುದು
ಲೋಕಾದಿ ಲೋಕಂಗಳ ತೊಳಲಿಬಳಲಿ ತನ್ನ ಮೊದಲಕೂಡುವ
ಪ್ರಕಾಶವೆಂಬಯಸಿ
ನಾನಾಪದದಿಂದಱಸಿ ಹರಿವುತಿರ್ಪರಖಿಳ ಜೀವಿಗಳೆಲ್ಲರು
ಇದ ಬೆಱಸಿದ ಸಂಗನಬಸವಣ್ಣನ ನೆನೆದವಂಗೆ
ಇದು ಸಾದ್ಯವಾಹುದೆಂದಱಿದೆನಾಗಿ ನಾನಾ ಬಸವಣ್ಣನ ನೆನೆನೆನೆದು ಶರಣೆಂದು ಶುದ್ಧನಾದೆನು ಕಾಣಾ, ಗುಹೇಶ್ವರಾ.

೨೫

ಪರದಿಂದಲಾದ ಶಕ್ತಿ ಪರಶಕ್ತಿಯಾಯಿತು.
ಪರಶಕ್ತಿಯಿಂದೊದಗಿದ ಭೂತಂಗಳು
ಭೂತಂಗಳಿಂದೊದಗಿದ ಅಂಗ, ಅಂಗಕ್ಕಾದ ಕರಣೇಂದ್ರಿಯಂಗಳು.
ಇಂದ್ರಿಯಂಗಳಿಂದೊದಗಿದ ವಿಷಯಂಗಳು
ಆ ವಿಷಯ ಪರಮನ ಮುಖಕ್ಕೆ ತಾಶಕ್ತಿಯಾಗಿ ಭೋಗಿಸಬಲ್ಲಡೆ
ಆತ ನಿರ್ಲೇಪಿ ಮಸಣಯ್ಯಪ್ರಿಯಗಜೇಶ್ವರಾ.

೨೬      

ಅಷ್ಟೋತ್ತರಶತ ವ್ಯಾಧಿಗಳ ಧರಿಸಿಕೊಂಡಿಪ್ಪ ಆತ್ಮನೋ ಘತವೋ ?
ಆತ್ಮನೆಂದಡೆ ಸಾಯದ ಚಿತ್ತ, ಘಟವೆಂದಡೆ ಆತ್ಮನಿಲ್ಲದೆ ಅಱಯದು ದೇಹ
ಇಂತೀ ಒಂದ ಕಳೆದು ಒಂದಕ್ಕೆ ಔಷಧಿಯ ಕೊಟ್ಟೆಹೆನೆಂದಡೆ
ಆ ಎರಡರಸಂಗದಿಂದ ರಜಪ್ರಮಾಣು.
ಇಂತೀ ಶರೀರಾತ್ಮ ಆದಿಯಾಗಿ ಬಂದ ವ್ಯಾಧಿಗೆ ನನೊಂದು ಭೇದವ
ಹೇಳಿಹೆ ಆಧಾರದಲ್ಲಿ ಮೂಲಿಕೆಯ ಬೇರನಱಿದು
ಐದಿಂದ್ರಿಯವ ಮಾಡಿಕೊಂಡು ಮೂಱು ಮುಟ್ಟಿದ ತಟ್ಟೆಯಲ್ಲಿ
ಬೇಗ ಕೊಳ್ಳಿ
ಆ ಮದ್ದು ವಾಂತಿಗೆ ಸಲ್ಲ ವಿರೋಚನವಿಲ್ಲ.
ನಾನಾ ವೈಧ್ಯರ ಭೇದ ಸಾಹಿನ ಕ್ರಮ ಸಿದ್ಧಾಂತ ಮೂಲಿಕೆ.
ಇದ ಸಾಧಿಸಿಕೊಳ್ಳಿ ಎಂದೆಂದಿಗೆ ರುಜೆಯಿಲ್ಲ, ಸಂದು ಸಂಶಯವಿಲ್ಲ
ಮರುಳುಶಂಕರಪ್ರಿಯ ಸಿದ್ಧರಾಮೇಶ್ವರಲಿಂಗದಲ್ಲಿ.

೨೭

ಕೈದು ಮೊನೆದೋಱುವದಕೆ ಮೊದಲೆ ತಟ್ಟಬಲ್ಲಡೆ
ಕೈದುವನೇನಮಾಡುವುದು ?
ಹಾವು ಬಾಯ ಬಿಡುವದಕ್ಕೆ ಮೊದಲೆ ಹಿಡಿದ ಮತ್ತೆ ವಿಷವೇನ ಮಾಡುವುದು ?
ಮನ ವಿಕರಿಸುವದಕ್ಕೆ ಮೊದಲೆ ಮಹದಲ್ಲಿನಿಂದಮತ್ತೆ
ಇಂದ್ರಿಯಂಗಳೇನ ಮಾಡಲಾದಪವು ಜಾಂಬೇಶ್ವರಾ.