ಸಮಾಜ ವಿಜ್ಞಾನಗಳಲ್ಲಿ ಅರ್ಥಶಾಸ್ತ್ರಕ್ಕೆ ಮತ್ತು ಅಭಿವೃದ್ಧಿ ಅಧ್ಯಯನಗಳಿಗೆ ಪ್ರತಿಷ್ಟಿತ ಸ್ಥಾನವನ್ನು ನೀಡಲಾಗಿದೆ.ನೀತಿ ನಿರೂಪಣೆ, ಬಜೆಟ್ಟು, ಚುನಾವಣೆ, ಆಹಾರ, ವ್ಯಾಪಾರ, ವಾಣಿಜ್ಯ ಮಾರುಕಟ್ಟೆ ಮುಂತಾದ ಕ್ಷೇತ್ರಗಳಲ್ಲಿ ಅರ್ಥಶಾಸ್ತ್ರ ಮತ್ತು ಅಭಿವೃದ್ಧಿ ಸಿದ್ಧಾಂತಗಳ ಪ್ರಭಾವ ತೀವ್ರವಾಗಿದೆ. ಸರ್ಕಾರಗಳು ಇಂದು ಅವುಗಳನ್ನು ನಿರ್ಲಕ್ಷಿಸುವುದು ಸಾಧ್ಯವಿಲ್ಲ. ಇಂದು ನಾವು ಜಾಗತಿಕ ಬಿಕ್ಕಟ್ಟು-ಮುಗ್ಗಟ್ಟು ಎದುರಿಸುತ್ತಿದ್ದೇವೆ. ಈ ವಿಷಯದಲ್ಲಿ ವಿಶ್ವಾದ್ಯಂತ ಅರ್ಥಶಾಸ್ತ್ರಜ್ಞರದ್ದೇ ಮೊದಲಮಾತು ಎನ್ನುವಂತಿದೆ. ಅದರ ಪರಿಹಾರಕ್ಕೆ ಜನರು ಅರ್ಥಶಾಸ್ತ್ರಜ್ಞರ ಸಲಹೆ, ಸೂಚನೆಗಾಗಿ ಎದಿರು ನೋಡುತ್ತಿದ್ದಾರೆ.

ಅತ್ಯಂತ ವಿಷಾದದ ಸಂಗತಿಯೆಂದರೆ ಇವೆರಡೂ ಜ್ಞಾನಶಿಸ್ತುಗಳು ಲಿಂಗ ನಿರಪೇಕ್ಷತೆಯನ್ನು ಗಟ್ಟಿಯಾಗಿ ಅಂತರ್ಗತ ಮಾಡಿಕೊಂಡಿವೆ. ಅವು ಪುರುಷಶಾಹಿ ಜ್ಞಾನಶಿಸ್ತುಗಳಾಗಿವೆ. ಈಗ ನಮ್ಮ ಮುಂದಿರುವ ಪ್ರಶ್ನೆಯೆಂದರೆ ಅವುಗಳನ್ನು ಪುರುಷಶಾಹಿಯ ಕಬಂಧ ಬಾಹುಗಳಿಂದ ಬಿಡುಗಡೆಗೊಳಿಸುವುದು ಹೇಗೆ ಎಂಬುದಾಗಿದೆ. ಈ ದಿಶೆಯಲ್ಲಿ ಅನೇಕರು ಪ್ರಯತ್ನ ಮಾಡುತ್ತಿದ್ದಾರೆ. ಲಿಂಗ ಸಂಬಂಧಿ ಅಭಿವೃದ್ಧಿ ಮೀಮಾಂಸೆಯನ್ನು ಬೆಳೆಸುವ ಕೆಲಸ ಕಳೆದ ೨೫-೩೦ ವರ್ಷಗಳಿಂದ ತೀವ್ರಗತಿಯಲ್ಲಿ ನಡೆಯುತ್ತಿದೆ. ಈ ಜ್ಞಾನಶಿಸ್ತುಗಳನ್ನು ಪುರುಷಶಾಹಿಯ ಸಂಕೋಲೆಯಿಂದ ಬಿಡುಗಡೆಗೊಳಿಸಲು ನಡೆದಿರುವ ಪ್ರಯತ್ನಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಪರಿಶೀಲಿಸುವ ಉದ್ಧೇಶದಿಂದ ಇಲ್ಲಿನ ಪ್ರಬಂಧಗಳನ್ನು ಸಿದ್ಧಪಡಿಸಲಾಗಿದೆ. ಇಲ್ಲಿ ಎರಡು ಭಾಗಗಳಿವೆ. ಮೊದಲನೆಯ ಭಾಗದಲ್ಲಿ ಅರ್ಥಶಾಸ್ತ್ರದ ಪುರುಷಶಾಹಿ ನೆಲೆಗಳನ್ನು ಗುರುತಿಸಲು ಪ್ರಯತ್ನಿಸಲಾಗಿದೆ. ಅದಕ್ಕಿಂತ ಮುಖ್ಯವಾಗಿ ಅಲ್ಲಿ ಅರ್ಥಶಾಸ್ತ್ರವನ್ನು ಹೇಗೆ ಲಿಂಗ ಸಂಬಂಧಿ ಮಿಮಾಂಸೆಗೆ ಒಳಪಡಿಸಬೇಕು ಎಂಬುದರ ಬಗ್ಗೆ ಚರ್ಚೆ ಮಾಡಲಾಗಿದೆ. ಸಂಗೋಪನಾ ಅರ್ಥಶಾಸ್ತ್ರ ವೆನ್ನುವ ಶೀರ್ಷಿಕೆಯಲ್ಲಿ ಅರ್ಥಶಾಸ್ತ್ರವನ್ನು ಲಿಂಗ ಸಂಬಂಧಿ ನೆಲೆಯಲ್ಲಿ ನಿರ್ವಚಿಸಿ ಕೊಳ್ಳುವ ಪರಿ ಯಾವುದು ಎಂಬುದನ್ನು ಕುರಿತಂತೆಯೂ ಅಲ್ಲಿ ಅನುಂಧಾನ ನಡೆಸಲಾಗಿದೆ. ಎರಡನೆಯ ಭಾಗದಲ್ಲಿ ಅಭಿವೃದ್ಧಿಯ ಲಿಂಗ ಸಂಬಂಧಿ ಆಯಾಮಗಳನ್ನು ಅನಾವರಣ ಮಾಡಲಾಗಿದೆ. ಮಾನವ ಅಭಿವೃದ್ಧಿ ವಿಚಾರ ಪ್ರಣಾಳಿಕೆಯ ನೆಲೆಯಲ್ಲಿ ಇಲ್ಲಿನ ಪ್ರಬಂಧಗಳನ್ನು ಕಟ್ಟಲಾಗಿದೆ.