ಈಗಾಗಲೆ ದೃಢಪಟ್ಟ್ಟಿರುವಂತೆ ನಮ್ಮ ಜ್ಞಾನಶಿಸ್ತುಗಳು, ಅದರಲ್ಲೂ ಸಮಾಜ ವಿಜ್ಞಾನಗಳು ಲಿಂಗ ನಿರಪೇಕ್ಷ ಧೋರಣೆ ತಳೆದಿವೆ (ಕಬೀರ್, ನೈಲಾ ೧೯೯೪:೨೦-೨೧). ಈ ಜ್ಞಾನ ಶಿಸ್ತುಗಳಲ್ಲಿ ಮಹಿಳೆಯರನ್ನು ಸಾಮಾಜಿಕ ಘಟಕವಾಗಿ ಪರಿಭಾವಿಸಿ ಕೊಳ್ಳುವುದಕ್ಕೆ ಪ್ರತಿಯಾಗಿ ಜನಸಂಖ್ಯಾ ಘಟಕವಾಗಿ, ಜೈವಿಕ ಘಟಕವಾಗಿ ಪರಿಭಾವಿಸಿಕೊಳ್ಳಲಾಗಿದೆ. ಮಹಿಳೆಯನ್ನು ಒಬ್ಬ ವ್ಯಕ್ತಿಯಾಗಿ ಪರಿಭಾವಿಸಿಕೊಳ್ಳುವ ಕ್ರಮ ಸಮಾಜ ವಿಜ್ಞಾನಗಳಲ್ಲಿ ಕಂಡುಬರುವುದಿಲ್ಲ.

[1] ಅವು ಅವರನ್ನು ತಾಯಿಯಾಗಿ, ಹೆಂಡತಿಯಾಗಿ, ಗೃಹಿಣಿಯಾಗಿ ಮಾತ್ರ ಪರಿಭಾವಿಸಿಕೊಳ್ಳುತ್ತವೆ. ಅಂದರೆ ಅವಳನ್ನು ಕೇವಲ ಆನುಷಂಗಿಕವಾಗಿ ಮಾತ್ರ ನೋಡಲಾಗುತ್ತದೆ. ಸರಿಯಾಗಿ ಹೇಳಬೇಕೆಂದರೆ ಮಹಿಳೆಯರನ್ನು ಕುಟುಂಬಕ್ಕೆ ಸಂವಾದಿಯಾಗಿ ಪರಿಭಾವಿಸಿಕೊಳ್ಳುವುದು ರೂಢಿಯಲ್ಲಿದೆ.[2] ಸಮಾಜ ವಿಜ್ಞಾನಗಳಲ್ಲಿ ಮಹಿಳೆಗೆ ಯಾವುದೆ ಸ್ಥಾನವಿಲ್ಲವಾಗಿದೆ. ಲಿಂಗ ಸಂಬಂಧಗಳ ದೃಷ್ಟಿಯಿಂದ ನೋಡಿದಾಗ ಸಮಾಜ ವಿಜ್ಞಾನಗಳು ಏಕಾಕಾರಿ ಜ್ಞಾನಶಿಸ್ತುಗಳಂತೆ ಕಂಡುಬರುತ್ತವೆ. ಪ್ರಸ್ತುತ ಪ್ರಬಂಧದಲ್ಲಿ ಅರ್ಥಶಾಸ್ತ್ರವು ಮಹಿಳೆಯರನ್ನು ಹೇಗೆ ಪರಿಭಾವಿಸಿಕೊಂಡಿದೆೆ ಮತ್ತು ಅವರನ್ನು ಹೇಗೆ ಪರಿಭಾವಿಸಿಕೊಳ್ಳಬೇಕು ಎಂಬು ದನ್ನು ಚರ್ಚಿಸಲು ಪ್ರಯತ್ನಿಸಲಾಗಿದೆ. ಅರ್ಥಶಾಸ್ತ್ರದ ಸಾಂಪ್ರದಾಯಿಕ ನಿರ್ವಚನದ ಮಿತಿಗಳನ್ನು ಗುರುತಿಸುವುದರ ಜೊತೆಗೆ ಅದನ್ನು ವಿಸ್ತತನೆಲೆಯಲ್ಲಿ  ಹೇಗೆ ನಿರ್ವಚಿಸಬೇಕೆಂಬುದನ್ನು ಇಲ್ಲಿ ಪರಿಶೀಲಿಸಲಾಗಿದೆ. ಮನೆವಾರ್ತೆ, ಲಾಲನೆ-ಪಾಲನೆ, ಶುಶ್ರೂಷೆ, ನೆರೆಹೊರೆಯವರಿಗೆ ನೆರವಾಗುವುದು, ಆರೈಕೆ, ಪರೋಪಕಾರ ಮುಂತಾದವುಗಳನ್ನು ಇಲ್ಲಿ ಸಂಗೋಪನಾ ದುಡಿಮೆಯೆಂದು ನಿರ್ವಚಿಸಿಕೊಳ್ಳಲಾಗಿದೆ. ಈ ಬಗೆಯ ದುಡಿಮೆಯನ್ನು ಒಳಗೊಂಡ ಉತ್ಪಾದನೆಯನ್ನು ಸಂಗೋಪನಾ ಆರ್ಥಿಕತೆಯೆಂದು ಕರೆಯಲಾಗಿದೆ.[3] ಸಂಗೋಪನಾ ದುಡಿಮೆ-ಸಂಪಾದನಾ ದುಡಿಮೆ ಹಾಗೂ ಸಂಗೋಪನಾ ಆರ್ಥಿಕತೆ-ಸಂಪಾದನಾ ಆರ್ಥಿಕತೆಗಳನ್ನು ಇಲ್ಲಿ ಕ್ರಮವಾಗಿ ಸಮಾನಾಂತರವಾಗಿ ಅಂದರೆ ಸಮಾನವಾಗಿ ಬಳಸಲಾಗಿದೆ. ಸಂಪಾದನಾ ದುಡಿಮೆ-ಸಂಪಾದನಾ ಆರ್ಥಿಕತೆಗಳನ್ನು ಮಾತ್ರ ಒಳಗೊಂಡ ಅರ್ಥಶಾಸ್ತ್ರವನ್ನು ಅಪೂರ್ಣವೆಂದೂ, ಅದು ಅಪರಿಪೂರ್ಣವೆಂದೂ ಪ್ರತಿಪಾದಿಸಲು ಇಲ್ಲಿ ಪ್ರಯತ್ನಿಸಲಾಗಿದೆ. ಅರ್ಥಶಾಸ್ತ್ರವು ಸಂಪಾದನಾ ದುಡಿಮೆ ಮತ್ತು ಸಂಗೋಪನಾ ದುಡಿಮೆಗಳೆರಡನ್ನು ಒಳಗೊಳ್ಳಬೇಕಾಗುತ್ತದೆ.[4] ಏಕೆಂದರೆ ಸಂಗೋಪನಾ ದುಡಿಮೆಯಿಲ್ಲದೆ ಸಂಪಾದನಾ ದುಡಿಮೆಯು ನಡೆಯುವುದು ಸಾಧ್ಯವಿಲ್ಲ (ಅಮರ್ತ್ಯಸೆನ್ ೧೯೯೦. ಮಾರ್ತನು ಸುಬೌಮ್ ೨೦೦೦, ಡೆಸ್ ಗ್ಯಾಸ್ಪರ್ ಮತ್ತು ಐರನಿ ವಾನ್ ಸ್ಟೆವರಿನ್ ೨೦೦೬).

ಸಮಾಜ ವಿಜ್ಞಾನಗಳು ಮಹಿಳೆೆಯರನ್ನು ನಾಗರಿಕರೆಂದು, ಉತ್ಪಾದಕರೆಂದು, ಘನತೆಯುಳ್ಳ ವ್ಯಕ್ತಿಗಳೆಂದು ಪರಿಭಾವಿಸಿಕೊಳ್ಳುವುದಕ್ಕೆ ಪ್ರತಿಯಾಗಿ ಅವರನ್ನು ಗ್ರಾಹಕ ರೆಂದು, ಪುರುಷರಿಗೆ ಅಧೀನರೆಂದು, ಕೇವಲ ಅನುಭೋಗಿಗಳೆಂದು ಪರಿಭಾವಿಸಿ ಕೊಂಡಿವೆ. ಮಹಿಳೆಯರ ಅನುಭೋಗಿ-ಗ್ರಾಹಕ ನೆಲೆಗಳನ್ನು ವಿಪರೀತ ಹಿಗ್ಗಿಸಲಾಗಿದೆ. ಅವರ ಉತ್ಪಾದನಾ-ನಾಗರಿಕ ನೆಲೆಗಳನ್ನು ಸೀಮಿತಗೊಳಿಸಲಾಗಿದೆ ಮತ್ತು ಸಂಕುಚಿತ ಗೊಳಿಸಲಾಗಿದೆ. ಈ ರೀತಿ ಜ್ಞಾನಶಿಸ್ತುಗಳು ಸಮಾಜದಲ್ಲಿ ಈಗಾಗಲೇ ದೃಢವಾಗಿರುವ ಲಿಂಗ ಅಸಮಾನತೆ-ಲಿಂಗ ತಾರತಮ್ಯವನ್ನು ಮತ್ತು ಮಹಿಳೆಯರ  ಅಧೀನ ಸ್ಥಿತಿಯನ್ನು ಊರ್ಜಿತಗೊಳಿಸುವ ನೆಲೆಯಲ್ಲಿ ಕೆಲಸಮಾಡುತ್ತಿವೆ. ಜ್ಞಾನವೆನ್ನುವುದನ್ನು ಪುರುಷರ ನೆಲೆಯಿಂದ ಪರಿಭಾವಿಸಿಕೊಳ್ಳುವುದರಿಂದ ಅದು ಮಹಿಳೆಯರಿಗೆ ನ್ಯಾಯ ಒದಗಿಸುವುದು ಸಾಧ್ಯವಿಲ್ಲ (ಕಬೀರ್, ನೈಲಾ ೧೯೯೪). ಜ್ಞಾನವೆನ್ನುವುದನ್ನು ಪುರುಷರು ಮಾತ್ರ ಪರಿಭಾವಿಸಿಕೊಳ್ಳಲು ಸಾಧ್ಯವೆನ್ನಲಾಗಿದೆ. ಏಕೆಂದರೆ ಅವರು ಮಾತ್ರ ಮನೆಯ ಹೊರಗೆ ಅಂದರೆ ಸಾರ್ವಜನಿಕವಾಗಿ ದುಡಿಮೆ ಮಾಡುತ್ತಾರೆ.[5] ಪ್ರಪಂಚದ ವಿದ್ಯಮಾನಗಳ ಜೊತೆ ವ್ಯವಹಾರ ಮಾಡುವವರು ಪುರುಷರೆ ಆಗಿರುತ್ತಾರೆ. ಆದ್ದರಿಂದ ಪ್ರಪಂಚ ಜ್ಞಾನವೆಂಬುದು, ಲೌಕಿಕ ಜ್ಞಾನವೆಂಬುದು ಪುರುಷರಿಗೆ ಮಾತ್ರ ದಕ್ಕುವ ಸಂಗತಿಯಾಗಿದೆ. ಜ್ಞಾನದ ಉತ್ಪಾದನೆ ಮಹಿಳೆಯರಿಂದ ಸಾಧ್ಯವಿಲ್ಲವೆನ್ನಲಾಗಿದೆ. ಅವರ ಜಗತ್ತೇನಿದ್ದರು ನಾಲ್ಕು ಗೋಡೆಗಳ ನಡುವೆ ಮನೆವಾರ್ತೆ, ಸಂಗೋಪನೆಗಳಿಗೆ ಮೀಸಲಾದುದಾಗಿದೆ. ಅಂದ ಮೇಲೆ ಪುರುಷರಿಗೆ ಮಾತ್ರ ಪ್ರಪಂಚ ತಿಳುವಳಿಕೆ ಸಾಧ್ಯವೆನ್ನಲಾಗಿದೆ. ಸಾರ್ವಜನಿಕತೆಯೆಂಬುದು ಮಹಿಳೆಯರಿಗೆ ಸಾಧ್ಯವಿಲ್ಲವಾಗಿದೆ. ಈ ರೀತಿಯ ಜ್ಞಾನ ಶಿಸ್ತುಗಳ ಲಿಂಗ ಸಂಬಂಧಿ ತಾರತಮ್ಯವಾದಿ ಧೋರಣೆಯಿಂದಾಗಿ ಸಂಗೋಪನಾ ದುಡಿಮೆಗೆ ಸಂಬಂಧಿಸಿದ ಚಟುವಟಿಕೆಗಳಾದ ಮನೆವಾರ್ತೆ, ಲಾಲನೆ-ಪಾಲನೆ, ಆರೈಕೆ, ಪರೋಪಕಾರ ಮುಂತಾದವುಗಳು ನೈಸರ್ಗಿಕವೆಂದು ಪ್ರಾಕೃತಿಕವೆಂದೂ, ಜೈವಿಕವೆಂದೂ ನಿರ್ಲಕ್ಷಕ್ಕೆ ಒಳಪಡಿಸಲಾಗಿದೆ (ಮಾರ್ತ ನುಸುಬೌಮ್ ೨೦೦೦). ಸಂಗೋಪನಾ ದುಡಿಮೆಯನ್ನು ಸಾಂಪ್ರದಾಯಿಕವಾಗಿ ಅರ್ಥಶಾಸ್ತ್ರದ ಚೌಕಟ್ಟಿನಿಂದ ಹೊರಗಿಡಲಾಗಿದೆ. ಅರ್ಥಶಾಸ್ತ್ರವನ್ನು ಕೇವಲ ಸಂಪಾದನಾ ದುಡಿಮೆಯನ್ನು ಒಳಗೊಂಡ ಸಂಪಾದನಾ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ನಿರ್ವಚಿಸಿಕೊಂಡು ಬರಲಾಗಿದೆ. ಇದರಿಂದ ಸ್ಪಷ್ಟವಾಗುವ ಸಂಗತಿಯೆಂದರೆ ನಮ್ಮ ಜ್ಞಾನಶಿಸ್ತುಗಳು ಸಮಾಜದಲ್ಲಿ ಅನೂಚಾನವಾಗಿ ಹರಿದುಕೊಂಡು ಬರುತ್ತಿರುವ ಲಿಂಗ ಸಂಬಂಧಿ ಶ್ರಮ ವಿಭಜನೆಯನ್ನು ಗಟ್ಟಿಗೊಳಿಸುತ್ತಾ ನಡೆದಿವೆ.

ಈ ಅಧ್ಯಯನದಲ್ಲಿ ಸಂಗೋಪನಾ ದುಡಿಮೆಗೆ ಸಂಬಂಧಿಸಿದ ಚಟುವಟಿಕೆಗಳು ಸಂಪಾದನಾ ದುಡಿಮೆಗಳಂತೆ ಉತ್ಪಾದನಾ ಕಾರ್ಯಗಳಾಗಿವೆಯೆಂದು ಪ್ರತಿಪಾದಿಸಲು ಪ್ರಯತ್ನಿಸಲಾಗಿದೆ. ಸಂಗೋಪನಾ ದುಡಿಮೆಯು ಸಂಪಾದನಾ ದುಡಿಮೆಯಷ್ಟೇ ಮಹತ್ವವಾದುದೆಂದು ಇಲ್ಲಿ ತೋರಿಸಿಕೊಡಲಾಗಿದೆ.[6] ಇವರಡೂ ಆರ್ಥಿಕತೆಗಳನ್ನು ಸಂಯೋಜಿಸಿಕೊಂಡೆ ಅರ್ಥಶಾಸ್ತ್ರವನ್ನು ನಿರ್ವಚಿಸಿಕೊಳ್ಳಬೇಕಾಗಿದೆ. ಸಂಗೋಪನಾ ದುಡಿಮೆಯನ್ನು ಅರ್ಥಶಾಸ್ತ್ರದ ವ್ಯಾಪ್ತಿಯಿಂದ ಹೊರಗಿಟ್ಟಿರುವುದರಿಂದ ಮಹಿಳೆಯರಿಗೆ ಮಾತ್ರವಲ್ಲ, ಇಡೀ ಆರ್ಥಿಕತೆಗೆ ಹಾನಿ ಉಂಟಾಗಿದೆ ಹಾಗೂ ಅರ್ಥಶಾಸ್ತ್ರಕ್ಕೆ ನಷ್ಟವಾಗಿದೆ.  ಜ್ಞಾನಶಿಸ್ತುಗಳಲ್ಲಿನ ತಾರತಮ್ಯವಾದಿ ಗುಣದಿಂದಾಗಿ ಸಮಾಜದಲ್ಲಿ ಆರೈಕೆಯ ಮತ್ತು ಶುಶ್ರೂಷೆಯ ಗುಣಗಳು ಕಮರಿಹೋಗುತ್ತಿವೆ.[7] ಸಂಗೋಪನೆಯೆಂಬುದು ಕೇವಲ ಕುಟುಂಬಕ್ಕೆ ಮಾತ್ರ ಸೀಮಿತಗೊಂಡ ಸಂಗತಿಯಾಗಬಾರದು. ಸಂಪಾದನಾ ದುಡಿಮೆಯು ಸಾರ್ವಜನಿಕವಾದುದು, ಸಂಗೋಪನಾ ದುಡಿಮೆಯು ಖಾಸಗಿಯಾದುದು ಎಂಬ ವಿಂಗಡಣೆಯು ಇಂದು ಅರ್ಥ ಕಳೆದುಕೊಳ್ಳುತ್ತಿದೆ. ಇವೆರಡರ ನಡುವಿನ ಅಂತರವು ಇಂದು ತುಂಬಾ ತೆಳುವಾಗುತ್ತಿದೆ. ಇಂದು ನಮ್ಮ ಸಮಾಜವು ಹೆಚ್ಚು-ಹೆಚ್ಚು ಹಿಂಸಾತ್ಮಕ ವಾಗುತ್ತಿದ್ದರೆ ಮತ್ತು ಅದು ಹೆಚ್ಚು ಹೆಚ್ಚು ಅಸಹನೀಯತೆಯನ್ನು ಸ್ಪೋಟಿಸುತ್ತಿದ್ದರೆ ಅದಕ್ಕೆ ಕಾರಣವಾಗಿರುವ ಒಂದು ಸಂಗತಿಯೆಂದರೆ ಸಮಾಜವು ಸಂಗೋಪನಾ ಗುಣವನ್ನು ಪೋಷಿಸದಿರುವುದು. ಅದು ಕೇವಲ ಮಹಿಳೆಯರಿಗೆ ಮೀಸಲಾದುದೆಂದು ತಿಳಿದಿರುವುದು.

ಈ ಪ್ರಬಂಧದ  ಮೊದನೆಯ ಪ್ರಕರಣದಲ್ಲಿ ಅರ್ಥಶಾಸ್ತ್ರದ ವ್ಯಾಖ್ಯೆಯು ಲಿಂಗ ಸಂಬಂಧದ ದೃಷ್ಟಿಯಿಂದ ಹೇಗೆ ಸೀಮಿತವಾದುದು ಎಂಬುದನ್ನು ತೋರಿಸಲು ಪ್ರಯತ್ನಿಸಲಾಗಿದೆ. ಸ್ತ್ರೀವಾದಿ ಅರ್ಥಶಾಸ್ತ್ರಜ್ಞರು (ಅಮರ್ತ್ಯಸೆನ್, ಮಾರ್ತ ನುಸುಬೌಮ್, ಐರನಿ ವಾನ್ ಸ್ಟೆವರಿನ್, ಡೆಸ್ ಗ್ಯಾಸ್ಪರ್ ಮುಂತಾದವರು ಹಾಗೂ ಮಾನವ ಅಭಿವೃದ್ಧಿ ವರದಿಗಳು,) ಸಂಪಾದನಾ ಮತ್ತು ಸಂಗೋಪನಾ ದುಡಿಮೆ ಮತ್ತು ಉತ್ಪಾದನೆಗಳನ್ನು ಒಳಗೊಂಡಂತೆ ಅರ್ಥಶಾಸ್ತ್ರದ ವ್ಯಾಪ್ತಿಯನ್ನು ಹೇಗೆ ವಿಸ್ತರಿಸುತ್ತಿದ್ದಾರೆಂಬುದನ್ನು ಇಲ್ಲಿ ಚರ್ಚಿಸಲಾಗಿದೆ. ಎರಡನೆಯ ಪ್ರಕರಣದಲ್ಲ್ಲಿ ಜನರ ಸುಖಮಯ-ಸಮೃದ್ದ ಬದುಕು(flourishing lives) ಎಂಬುದನ್ನು ಅರ್ಥಶಾಸ್ತ್ರವು ಈಗ ಪರಿಭಾವಿಸಿ ಕೊಂಡಿರುವ ಕ್ರಮವು ಹೇಗೆ ಸೀಮಿತವಾದುದು ಮತ್ತು ಅದನ್ನು ಲಿಂಗ ಸಂಬಂಧಿ ವಿಶ್ಲೇಷಣೆ ಮೂಲಕ ಹೇಗೆ ವಿಸ್ತತಗೊಳಿಸಬಹುದು ಎಂಬುದನ್ನು ಇಲ್ಲಿ ಚರ್ಚೆಗೆ ಒಳಪಡಿಸಲಾಗಿದೆ. ಮೂರನೆಯ ಪ್ರಕರಣದಲ್ಲಿ ಸಂಗೋಪನಾ ದುಡಿಮೆಗೆ ಸಂಬಂಧಿಸಿ ದಂತೆ ನಿರ್ವಚನವನ್ನು ನೀಡಲು ಪ್ರಯತ್ನಸಲಾಗಿದೆ. ಈ ಪ್ರಬಂಧದ ಸೈದ್ಧಾಂತಿಕ ನೆಲೆಗಳನ್ನು ಅಮರ್ತ್ಯಸೆನ್ (೧೯೯೦, ೧೯೯೯, ೨೦೦೨), ಮಾರ್ತನುಸುಬೌಮ್ (೨೦೦೦), ಡೆಸ್ ಗ್ಯಾಸಫರ್ (೨೦೦೬), ಐರನಿ ವಾನ್ ಸ್ಟೆವರಿನ್ (೨೦೦೪). ನೈಲಾ ಕಬೀರ್ (೧೯೯೪), ಮೆಹಬೂಬ್ ಉಲ್ ಹಕ್ (೧೯೯೬)ಮುಂತಾದವರ ವಿಚಾರಗಳನ್ನು ಉಪಯೋಗಿಸಿ ಕೊಂಡು ಕಟ್ಟಲಾಗಿದೆ.

ಪ್ರಕರಣ

ಅರ್ಥಶಾಸ್ತ್ರದ ವ್ಯಾಖ್ಯೆಯ ಲಿಂಗ ಸಂಬಂಧಿ ನೆಲೆಗಳು

ವಿಶ್ವಾದ್ಯಂತ ವಿದ್ವಾಂಸರು ಮತ್ತು ವಿದ್ಯಾರ್ಥಿಗಳು ಬಳಸುತ್ತಿರುವ ಪಾಲ್.ಎ. ಸಾಮುಯಲ್‌ಸನ್(೧೯೮೯) ರಚಿಸಿರುವ ಅರ್ಥಶಾಸ್ತ್ರದ ಪಠ್ಯದಲ್ಲಿ ಅರ್ಥಶಾಸ್ತ್ರವನ್ನು ಹೀಗೆ ನಿರ್ವಚಿಸಲಾಗಿದೆ.[8]

ಸಮಾಜದಲ್ಲಿ ಲಭ್ಯವಿರುವ, ಆದರೆ ಕೊರತೆಯಿಂದಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಮೌಲ್ಯವುಳ್ಳ ಸರಕು,ಸಾಮಗ್ರಿ, ಸೇವೆಗಳನ್ನು ಹೇಗೆ ಉತ್ಪಾದಿಸಲಾಗುತ್ತದೆ ಮತ್ತು ಸಮಾಜದಲ್ಲಿನ ವಿವಿಧ ವರ್ಗಗಳ ನಡುವೆ ಅವುಗಳನ್ನು ಹೇಗೆ ವಿತರಿಸಲಾಗುತ್ತದೆ ಎಂಬುದರ ಅಧ್ಯಯನವೇ ಅರ್ಥಶಾಸ್ತ್ರ. ಮತ್ತೊಂದು ಕಡೆ ಅವನು ಅರ್ಥಶಾಸ್ತ್ರವನ್ನು ಹೀಗೆ ನಿರ್ವಚಿಸಿದ್ದಾನೆ.

ಸರಕು-ಸಾಮಗ್ರಿಗಳ ಉತ್ಪಾದನೆ ಮತ್ತು ವಿನಿಮಯಗಳನ್ನು ಒಳಗೊಂಡ ಚಟುವಟಿಕೆಗಳ ಅಧ್ಯಯನವೇ ಅರ್ಥಶಾಸ್ತ್ರ (ಪು:೪).

ಅರ್ಥಶಾಸ್ತ್ರದ ಯಾವುದೇ  ಪಠ್ಯವನ್ನು ತೆಗೆದುಕೊಂಡರೂ ಅದರ ನಿರ್ವಚನವು ಸಾಮುಯಲ್‌ಸನ್‌ದಕ್ಕಿಂತ ಭಿನ್ನವಾಗಿರಲು ಸಾಧ್ಯವಿಲ್ಲ. ಯಾವುದೇ ನಿರ್ವಚನವನ್ನು ತೆಗೆದುಕೊಂಡರು ಅರ್ಥಶಾಸ್ತ್ರವು ಉತ್ಪಾದನೆ ಮತ್ತು ವಿತರಣೆಗಳೊಂದಿಗೆ ತಳುಕುಹಾಕಿ ಕೊಂಡಿರುವುದನ್ನು ನೋಡಬಹುದಾಗಿದೆ. ಸಾಮ್ಯುಯಲ್‌ಸನ್‌ನ ನಿರ್ವಚನದಲ್ಲಿ ಎರಡು ಸಂಗತಿಗಳಿವೆ.

೧. ಸಂಪನ್ಮೂಲಗಳನ್ನು ಬಳಸಿಕೊಂಡು ನಡೆಸುವ ಉತ್ಪಾದನೆ

೨. ಉತ್ಪಾದಿಸಿದ ಸರಕು-ಸೇವೆಗಳ ವಿನಿಮಯಮಾರಾಟ.

ಇವೆರಡೂ ಅರ್ಥಶಾಸ್ತ್ರದ ಆಧಾರಸ್ತಂಬಗಳಾಗಿವೆ. ಉತ್ಪಾದನೆಯೆಂಬುದು ಮಾರುಕಟ್ಟೆಗೆ ಸಂಬಂಧಿಸಿದೆ. ಆರ್ಥಿಕತೆಯಲ್ಲಿ ಉತ್ಪಾದನೆಯಾದ ಸರಕು-ಸಾಮಗ್ರಿಗಳನ್ನು ಮಾರಾಟಕ್ಕಾಗಿ ಮಾರುಕಟ್ಟೆಗೆ ಸರಬರಾಜು ಮಾಡಲಾಗುತ್ತದೆ. ಇದನ್ನು ವಿನಿಮಯ ವೆಂದು ಕರೆಯಲಾಗಿದೆ. ಉತ್ಪಾದನೆ,ವಿನಿಮಯ,ಮಾರಾಟ ಮುಂತಾದ ಚಟುವಟಿಕೆಗಳ ನಿರ್ವಹಣೆಗೆ ಏರ್ಪಡಿಸಿಕೊಂಡಿರುವ ಸಂಘಟನೆ, ಸಾಂಸ್ಥಿಕ ರಚನೆ, ನೀತಿ-ನಿಯಮ ಮುಂತಾದವುಗಳ ಜಾಲಕ್ಕೆ ಆರ್ಥಿಕತೆಯೆಂದು ಕರೆಯಲಾಗಿದೆ.[9] ಅಮೆರಿಕೆಯ ಆರ್ಥಿಕತೆ, ಭಾರತೀಯ ಆರ್ಥಿಕತೆ, ಕರ್ನಾಟಕದ ಆರ್ಥಿಕತೆ ಎಂದಾಗ ಅದನ್ನು ಇದೇ ಅರ್ಥದಲ್ಲಿ ಬಳಸಲಾಗಿದೆ. ನಿರ್ದಿಷ್ಟವಾಗಿ ದೇಶ-ಪ್ರದೇಶಗಳಲ್ಲಿ ನಡೆಯುವ ಉತ್ಪಾದನಾ – ವಿನಿಮಯ – ಮಾರಾಟ ವ್ಯವಸ್ಥೆಗೆ – ಅದರ ಸಾಂಸ್ಥಿಕ ರಚನೆಗೆ ಇದು ಅನ್ವಯವಾಗುವ ಸಂಗತಿಯಾಗಿದೆ

 ಮೇಲೆ ಚರ್ಚಿಸಿರುವ ಉತ್ಪಾದನೆ-ವಿನಿಮಯಗಳನ್ನೊಳಗೊಂಡ ಅರ್ಥಶಾಸ್ತ್ರದ ನಿರ್ವಚನಕ್ಕೆ ಸಂಬಂಧಿಸಿದಂತೆ ಎರಡು ಸಮಸ್ಯೆಗಳಿವೆ.

೧. ಅಮರ್ತ್ಯಸೆನ್‌ನ ಪರಿಭಾಷೆಯಲ್ಲಿ ಹೇಳುವುದಾದರೆ ಮೇಲಿನ ನಿರ್ವಚನದಲ್ಲಿ ಸರಕು-ಸಾಮಗ್ರಿ-ಸೇವೆಗಳಿವೆ ವಿನಾ ಮನುಷ್ಯರಿದ್ದಂತೆ ಕಾಣುವುದಿಲ್ಲ. ಜನರ ಬದುಕು ಇಲ್ಲಿ ಮಾಯವಾಗಿಬಿಟ್ಟಿದೆ. ಜನರ ಸುಖಮಯ ಬದುಕಿಗೆ ಸಾಧನವಾಗಿರುವ ಸರಕು, ಸಾಮಗ್ರಿ,ಸೇವೆಗಳು ಅರ್ಥಶಾಸ್ತ್ರದ ವಿಷಯವಸ್ತುಗಳಾಗಿವೆ. ಆದರೆ ಅಲ್ಲಿ ಜನರು ಮಾತ್ರ ಇಲ್ಲವಾಗಿದ್ದಾರೆ. ಅರ್ಥಶಾಸ್ತ್ರವನ್ನು ಮತ್ತು ಅಭಿವೃದ್ಧಿ ಅಧ್ಯಯನವನ್ನು ಅಮರ್ತ್ಯಸೆನ್ ಜನರನ್ನು ಒಳಗೊಳ್ಳುವ ರೀತಿಯಲ್ಲಿ ನಿರ್ವಚಿಸಲು ಪ್ರಯತ್ನಿಸಿದ್ದಾರೆ. ಅಭಿವೃದ್ಧಿ ಅಧ್ಯಯನಕ್ಕೆ ಸಂಬಂಧಿಸಿದ ಸಿದ್ಧಾಂತಗಳಲ್ಲಿ ಅಭಿವೃದ್ಧಿಯ ಸಾಧನ ಮತ್ತು ಅದರ ಸಾಧ್ಯಗಳ ನಡುವಿನ ಸಂಬಂಧ ಕುರಿತಂತೆ ಗೊಂದಲವಿದ್ದಂತೆ ಕಾಣುತ್ತದೆ. ನಿಜವಾಗಿ ಅಭಿವೃದ್ಧಿಯ ಗುರಿ ಜನರ ಬದುಕು ಸಮೃದ್ದವಾಗಬೇಕೆಂಬುದೇ ವಿನಾ ಅದರ ಸಾಧನವಾದ ಸರಕು-ಸಾಮಗ್ರಿಗಳ ಸರಬರಾಜನ್ನು ಅಧಿಕಗೊಳಿಸುವುದಲ್ಲ. ಅತ್ಯಂತ ದುರದೃಷ್ಟದ ಸಂಗತಿಯೆಂದರೆ ಅಭಿವೃದ್ಧಿ ಸಂಬಂಧಿ ಸಿದ್ಧಾಂತಗಳಲ್ಲಿ ಅದರ ಸಾಧನವು ಸಾಧ್ಯವಾಗಿ ಬಿಟ್ಟಿದೆ ಮತ್ತು ಅದರ ಸಾಧ್ಯವಾಗಬೇಕಾದ ಸಂಗತಿಯು ಅಲ್ಲಿ ಸಾಧನವಾಗಿಬಿಟ್ಟಿದೆ. ಜನರು ಇಲ್ಲಿ ಮಾಯವಾಗಿಬಿಟ್ಟಿದ್ದಾರೆ. ಇದನ್ನು ಸರಿಪಡಿ ಸುವ ಉದ್ದೇಶದಿಂದ ಅಮರ್ತ್ಯಸೆನ್ ಜನರನ್ನು ಧಾತು ಬಿಂದುವನ್ನಾಗಿ ಮಾಡಿಕೊಂಡು ಅರ್ಥಶಾಸ್ತ್ರವನ್ನು ನಿರ್ವಚಿಸಲು ಪ್ರಯತ್ನಿಸಿದ್ದಾನೆ.

೨. ಇದರ ಎರಡನೆಯ ಟೀಕೆಯೆಂದರೆ ಅರ್ಥಶಾಸ್ತ್ರವು ಕೇವಲ ಸಂಪಾದನಾ ದುಡಿಮೆಗೆ ಸಂಬಂಧಿಸಿದ ಉತ್ಪಾದನೆಯನ್ನು ಮಾತ್ರ ಒಳಗೊಂಡಿದೆ. ಏಕೆಂದರೆ ಅಂತಹ ಉತ್ಪಾದನಾ ವಲಯದಿಂದ ಹರಿದುಬಂದ ಸರಕು, ಸಾಮಗ್ರಿಗಳು ಮಾತ್ರ ಮಾರುಕಟ್ಟೆ ಪ್ರವೇಶಿಸಬಲ್ಲವು. ಆದರೆ ಅದರಷ್ಟೆ ಮಹತ್ವದ ಅಥವಾ ಅದಕ್ಕಿಂತ ಹೆಚ್ಚು ಮಹತ್ವದ  ಸಂಗೋಪನಾ ದುಡಿಮೆಗೆ ಸಂಬಂಧಿಸಿದ ಉತ್ಪಾದನೆಯನ್ನು ಅರ್ಥಶಾಸ್ತ್ರವು ಒಳಗೊಳ್ಳುವುದಿಲ್ಲ. ಸ್ತ್ರೀವಾದಿಗಳ ಪ್ರಕಾರ ಈಗಿರುವುದು ಸಂಪಾದನಾ ಸಂಬಂಧಿ ಉತ್ಪಾದನಾ ಆರ್ಥಿಕತೆ. ಅದು ಸಂಗೋಪನಾ ಸಂಬಂಧಿ ಉತ್ಪಾದನಾ ಆರ್ಥಿಕತೆಯನ್ನು ಒಳಗೊಳ್ಳುವುದಿಲ್ಲ. ಈ ಬಗೆಯ ಅರ್ಥಶಾಸ್ತ್ರದ ವ್ಯಾಪ್ತಿಯು ತುಂಬಾ ಸೀಮಿತ ವಾದುದಾಗಿದೆ. ಆರ್ಥಿಕತೆಯಲ್ಲಿ ಸಂಗೋಪನಾ ದುಡಿಮೆಯ ಪಾತ್ರವು ಮಹತ್ವ ವಾದುದೆಂದು ಅಧ್ಯಯನಗಳು ತೋರಿಸಿಕೊಟ್ಟಿವೆ. ಸಂಗೋಪನಾ ದುಡಿಮೆಗೆ ಸಂಬಂಧಿಸಿದ ಉತ್ಪಾದನೆಯಿಲ್ಲದೆ ಸಂಪಾದನಾ ಉತ್ಪ್ಪಾದನೆ  ನಡೆಯುವುದು ಸಾಧ್ಯವಿಲ್ಲ. ಈ ಸಂಗೋಪನಾ ದುಡಿಮೆಗೆ ಸಂಬಂಧಿಸಿದ ಚಟುವಟಿಕೆಗಳನ್ನು ಅಮರ್ತ್ಯಸೆನ್ (೧೯೯೦) ಸಾಮಾಜಿಕ ತಂತ್ರಜ್ಞಾನವೆಂದು ಕರೆದಿದ್ದಾನೆ.[10] ಡೆಸ್‌ಗ್ಯಾಸ್ಪರ್ ಮತ್ತು ಸ್ಟೇವರಿನ್ (೨೦೦೬) ಸಂಗೋಪನಾ ದುಡಿಮೆಯಲ್ಲಿ ಮಹಿಳೆಯರ ಪಾತ್ರವನ್ನು ಮಾರುಕಟ್ಟೆ ಸಂಬಂಧಿಸಿದ ಉತ್ಪಾದನೆಗೆ ಪೂರಕವೆಂದು ಬಣ್ಣಿಸಿದ್ದಾರೆ. ಅವನ ಪ್ರಕಾರ ಮನೆವಾರ್ತೆ, ಸಂತಾನೋತ್ಪತ್ತಿ ದುಡಿಮೆ, ಹೊಲ ಗದ್ದೆಗಳಲ್ಲಿ ದುಡಿಯುತ್ತಿರು ವವರಿಗೆ ಬುತ್ತಿ, ಊಟ, ಒಯ್ಯವುದು, ಬಟ್ಟೆ ತೊಳೆಯುವುದು, ಗಂಡನ ಸೇವೆ, ಮಕ್ಕಳ ಪಾಲನೆ, ಶುಶ್ರೂಷೆ ಮುಂತಾದವುಗಳು ಸಂಪಾದನೆಗೆ ಸಂಬಂಧಿಸಿದ ದುಡಿಮೆಗೆ ಪೂರಕವಾಗಿ ಕೆಲಸ ಮಾಡುತ್ತವೆ. ಈ ಚಟುವಟಿಕೆಗಳನ್ನು ಸಂಪಾದನಾ ದುಡಿಮೆ ಯೆಂದು, ಉತ್ಪಾದನಾ ದುಡಿಮೆಯೆಂದು ಪರಿಗಣಿಸುವ ಅಗತ್ಯದ ಬಗ್ಗೆ ಸ್ರ್ತೀವಾದಿಗಳು ಒತ್ತಾಯಿಸುತ್ತಿದ್ದಾರೆ. ನೈಲಾ ಕಬೀರ್(೧೯೯೪:೮೪-೮೫) ಪ್ರತಿಪಾದಿಸುವಂತೆ ಜನರ ಅಗತ್ಯಗಳನ್ನು ಈಡೇರಿಸಲು ಮಾರುಕಟ್ಟೆ ಆಧರಿತ ಸರಕುಗಳಲ್ಲದೆ ಸಂಗೋಪನಾ ಚಟುವಟಿಕೆಗಳ ಮೂಲಕ ಹರಿದು ಬರುವ ಲಾಲನೆ, ಪಾಲನೆ, ಶುಶ್ರ್ರೂಷೆ, ಆರೈಕೆ, ಮನೆವಾರ್ತೆ ಮುಂತಾದ ಸಂಗತಿಗಳೂ ಮುಖ್ಯ. ಜನರ ಸಂತೋಷ, ನೆಮ್ಮದಿ, ಸೌಖ್ಯ ಮುಂತಾದ ಸಂಗತಿಗಳು ಮಾರುಕಟ್ಟೆ ಮೂಲಕ ಹರಿದು ಬರುವುದಿಲ್ಲ. ಅಂದ ಮಾತ್ರಕ್ಕೆ ಅವು ಮುಖ್ಯವಲ್ಲವೆಂದು ತಳ್ಳಿಹಾಕುವುದು ಸರಿಯಲ್ಲ. ಜನರ ಅಗತ್ಯಗಳನ್ನು ಈಡೇರಿಸಿಕೊಡುವ ಅನೇಕ ಸಂಗತಿಗಳಲ್ಲಿ ಮಾರುಕಟ್ಟೆ ಆಧರಿತ ಉತ್ಪಾದನೆಯು ಒಂದು ಭಾಗ ಮಾತ್ರವಾಗಿದೆ. ಅದೇ ಸರ್ವಸ್ವವಲ್ಲ. ಜನರನ್ನು ಮೂಲ ಧಾತುವನ್ನಾಗಿ ಮಾಡಿಕೊಂಡಿರುವ ಸಂಗೋಪನಾ ದುಡಿಮೆಗೆ ಮಹತ್ವದ ಸ್ಥಾನ ನೀಡುವುದರಿಂದ ಮಹಿಳೆಯರ ದುಡಿಮೆಗೆ ಒಂದು ಮನ್ನಣೆ ದೊರೆತಂತಾಗುತ್ತದೆ. ಏಕೆಂದರೆ ಸಂಗೋಪನಾ ದುಡಿಮೆಯಲ್ಲಿ ಮುಕ್ಕಾಲು ಮೂರು ವೀಸೆ ಪಾಲನ್ನು ಮಹಿಳೆಯರು ನಿಭಾಯಿಸುತ್ತಿದ್ದಾರೆ.[11] ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಇವುಗಳ ಉತ್ಪಾದನೆಗೂ ಮಹತ್ವ ಕೊಡುವುದರ ಮೂಲಕ ಜನರ ಬದುಕನ್ನು ಸಮೃದ್ಧಗೊಳಿಸಬಹುದಾಗಿದೆ. ಉತ್ಪಾದನೆಯನ್ನು ಸಾಂಪ್ರದಾಯಿಕವಾಗಿ ಪರಿಭಾವಿಸಿಕೊಂಡಿರುವ ಪರಿಗಿಂತ ಭಿನ್ನವಾಗಿ ಪರಿಭಾವಿಸಿಕೊಳ್ಳಬೇಕೆಂದು ನೈಲಾ ಕಬೀರ್ ಪ್ರತಿಪಾದಿಸುತ್ತಿದ್ದಾಳೆ.

ಇದೇ ರೀತಿಯಲ್ಲಿ ಲಿಯೊನೆಲ್ ರಾಬಿನ್ಸ್ ತನ್ನ ಪ್ರಸಿದ್ಧ ನಿರ್ವಚನದಲ್ಲಿ ಜನರ ವರ್ತನೆಯನ್ನು ಅರ್ಥಶಾಸ್ತ್ರವು ಅಧ್ಯಯನ ಮಾಡುತ್ತದೆಯೆಂದು ಹೇಳುತ್ತಾನೆ. ಆದರೆ ಅಲ್ಲಿ ಜನರು ತಮ್ಮ ಅಪರಿಮಿತವಾದ ಬಯಕೆಗಳನ್ನು ಈಡೇರಿಸಿಕೊಳ್ಳಲು ಕೊರತೆಯಿಂದಿರುವ ಮತ್ತು ಪರ್ಯಾಯ ಉಪಯೋಗಗಳಿರುವ ಸಂಪನ್ಮೂಲಗಳನ್ನು ಹೇಗೆ ಬಳಸಿ ಕೊಳ್ಳುತ್ತಾರೆ ಮತ್ತು ಅವುಗಳನ್ನು ಬಳಸಿಕೊಂಡು ಅಗತ್ಯವಾದ ಸರಕು-ಸಾಮಗ್ರಿಗಳನ್ನು ಹೇಗೆ ಉತ್ಪಾದಿಸಿಕೊಳ್ಳುತ್ತಾರೆ ಎಂಬುದನ್ನು ಅರ್ಥಶಾಸ್ತ್ರವು ಅಧ್ಯಯನ ಮಾಡುತ್ತದೆಯೆಂದು ಹೇಳುತ್ತಾನೆ. ಇಲ್ಲಿ ಮತ್ತೆ ಒತ್ತು ಸರಕು-ಸಾಮಗ್ರಿಗಳ ಮೇಲೆ ಇದೆ. ಅವುಗಳ ಉತ್ಪ್ಪಾದನೆಯನ್ನು ಗರಿಷ್ಟೀಕರಿಸಿಕೊಳ್ಳಲು ಮತ್ತು ತೃಪ್ತಿಯನ್ನು ಗರಿಷ್ಟೀಕರಿಸಿಕೊಳ್ಳಲು ಸಂಪನ್ಮೂಲಗಳನ್ನು ಹೇಗೆ ಬಳಸಿಕೊಳ್ಳುತ್ತಾರೆಂಬುದೇ ಇಲ್ಲ್ಲಿ ಮುಖ್ಯವಾಗುತ್ತದೆ.

ಪಾಲ್ ಸಾಮ್ಯುಯಲ್‌ಸನ್‌ನ ವ್ಯಾಖ್ಯೆಯಲ್ಲಿ ಸಂಪನ್ಮೂಲಗಳ ವಿವೇಚನಾಪೂರ್ಣ ಬಳಕೆ ಮುಖ್ಯವಾಗುತ್ತದೆ ವಿನಾ ಜನರಲ್ಲ. ರಾಬಿನ್ಸನ ವ್ಯಾಖ್ಯೆಯಲ್ಲಿ ಸಂಪನ್ಮೂಲಗಳ ಆಯ್ಕೆಯು ಪ್ರಧಾನವಾದ ಸಂಗತಿಯಾಗಿ ಬಿಡುತ್ತದೆ. ಈ ಕಾರಣಗಳಿಂದಾಗಿ ಅರ್ಥಶಾಸ್ತ್ರದ ಭಿನ್ನ ವ್ಯಾಖ್ಯೆಯ ಅಗತ್ಯ ಉಂಟಾಯಿತು.[1]       ಸಾಂಪ್ರದಾಯಿಕ ಅಭಿವೃದ್ಧಿ ಸಿದ್ಧಾಂತಗಳನ್ನು ಅಂದರೆ ವರಮಾನ ವರ್ಧನಾ ಆರ್ಥಿಕ ಅಭಿವೃದ್ಧಿ ವಿಚಾರ ಪ್ರಣಾಳಿಕೆಯನ್ನು ಲಿಂಗ ನೀರಪೇಕ್ಷ ಸಿದ್ಧಾಂತಗಳೆಂದು ಕರೆಯಲಾಗಿದೆ.ಮಹಿಳೆಯರು ಅಭಿವೃದ್ಧಿಗೆ ಸಂಬಂಧಿಸಿದಂತೆ ನಿರ್ವಹಿಸುತ್ತಿರುವ ಚಟುವಟಿಕೆಗಳನ್ನು ಆರ್ಥಿಕ ಅಭಿವೃದ್ಧಿ ಸಿದ್ಧಾಂತಗಳು ಗಣನೆಗೆ ತೆಗೆದುಕೊಳ್ಳ್ಳುವುದಿಲ್ಲ. ಮಹಿಳೆಯರ ಸಂತಾನೋತ್ಪತ್ತಿ ಚಟುವಟಿಕೆಗಳನ್ನು, ಅವರ ಮನೆವಾರ್ತೆ ಜವಾಬುದಾರಿಗಳನ್ನು, ಲಾಲನೆ-ಪಾಲನೆ ಕೆಲಸಗಳನ್ನು ಅರ್ಥಶಾಸತ್ತದ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಅವುಗಳ ಆರ್ಥಿಕ ಮಹತ್ವವನ್ನು ಅರ್ಥಶಾಸತ್ತವು ಮನ್ನಿಸುತ್ತಿಲ್ಲ. ಅವುಗಳಿಗೆ ಜೈವಿಕ ಸಂಗತಿಗಳಾಗಿ ಮಾತ್ರ ಅಲ್ಲಿ ಮನ್ನಣೆ ನೀಡಲಾಗಿದೆ. ಈ ಬಗೆಯ ನಂಬಿಕೆಗಳಿಂದಾಗಿ ಮತ್ತು ಸಾಮಾಜೀಕರಣದಿಂದಾಗಿ ಮಹಿಳೆಯರಿಗೆ ತಮ್ಮ ದುಡಿಮೆಯ ಮಹತ್ವವು ಅವರಿಗೆ ತಿಳಿಯುತ್ತಿಲ್ಲ. ಇಂತಹ ಧೋರಣೆಯ ಅಭಿವೃದ್ಧಿ ಸಿದ್ಧಾಂತಗಳನ್ನು ಲಿಂಗ ನಿರಪೇಕ್ಷ ಸಿದ್ಧಾಂತಗಳೆಂದು ಕರೆಯಲಾಗಿದೆ.

[2]       ಕನ್ನಡದ ಪ್ರಸಿದ್ಧ ಕಾದಂಬರಿ ಗ್ರಾಮಾಯಣದಲ್ಲಿ ಮಾಮಲೆದಾರರೊಬ್ಬರ ಪಾತ್ರವೊಂದರ ಪತ್ನಿಯನ್ನು ಪರಿಚಯಿಸುವಾಗ ಲೇಖಕರು ಅವಳನ್ನು ಮಾಮಲೆದಾರರ ಕುಟುಂಬ ವೆಂದು ಪರಿಚಯಿಸುತ್ತಾರೆ. ಅಂದರೆ ಅಲ್ಲಿ ಮಹಿಳೆಗೆ ತನ್ನದೇ ಆದ  ವ್ಯಕ್ತಿತ್ವವೆನ್ನುವುದು ಇಲ್ಲವೆಂದಾಯಿತು. ಅವಳು ಕುಟುಂಬಕ್ಕೆ ಸಂವಾದಿಯಾದ ಒಂದು ಜೀವಿ ಮಾತ್ರ. ಅವಳಿಗೆ ಅಲ್ಲಿ ಹೆಸರಿಲ್ಲ (ಈ ಬಗ್ಗೆ ವಿವರವಾದ ಚರ್ಚೆಗೆ ನೋಡಿ: ಟಿ.ಆರ್. ಚಂದ್ರಶೇಖರ, ೨೦೦೬).

[3]       ಸಂಗೋಪನೆ ಎಂಬುದನ್ನು ಪ್ರಜ್ಞಾಪೂರ್ವಕವಾಗಿ ಅರ್ಥಶಾಸ್ತ್ರದ ಚರ್ಚೆಯೊಳಗೆ ಅಂದರೆ ಇದು ಅರ್ಥಶಾಸ್ತ್ರವು ಒಳಗೊಳ್ಳಬೇಕಾದ ಒಂದು ಸಂಗತಿಯೆಂಬುದನ್ನು ತೋರಿಸಿಕೊಟ್ಟ ಕೀರ್ತಿ ಅಮರ್ತ್ಯಸೆನ್‌ಗೆ ಸಲ್ಲಬೇಕು. (ನೋಡಿ:ಸೆನ್ ೧೯೯೯: ೯). ಅವನ ಪ್ರಕಾರ ಬಂಡವಾಳ ವಿನಿಯೋಜನೆ, ಉಳಿತಾಯ, ಉತ್ಪಾದನೆ, ಕೈಗಾರಿಕೆಗಳು, ಬ್ಯಾಂಕುಗಳು, ಹಣಕಾಸು ಕಂಪನಿಗಳು, ಮಾರುಕಟ್ಟೆ ಮುಂತಾದವುಗಳ ಚಟುವಟಿಕೆಗಳಷ್ಟೆ ಮನೆವಾರ್ತೆ, ಸಂತಾನೋತ್ಪತ್ತಿ, ಪಾಲನೆ, ಸಂಗೋಪನೆ, ಮುಂತಾದ ಚಟುವಟಿಕೆಗಳೂ ಉತ್ಪಾದನೆಯಲ್ಲಿ ಮಹತ್ವ ಪಡೆದಿದ್ದಾವೆ. ಈ ಸಂಗತಿಯನ್ನು ಅನೇಕ ಸ್ತ್ರೀವಾದಿ ಅಭಿವೃದ್ಧಿ ಅಧ್ಯಯನಗಳು ತೋರಿಸಿಕೊಟ್ಟಿವೆ.

ಅಮರ್ತ್ಯಸೆನ್ ಸಂಗೋಪನಾ ದುಡಿಮೆಯನ್ನು ಸಾಮಾಜಿಕ ತಂತ್ರಜ್ಞಾನವೆಂದು ಕರೆದಿದ್ದಾನೆ(೧೯೯೦).ಯಂತ್ರಗಳು, ತಂತ್ರಜ್ಞಾನ ಮತ್ತು ತಾಂತ್ರಿಕತೆ ಹೇಗೆ ಉತ್ಪಾದನೆಗೆ ನೆರವಾಗುತ್ತವೆಯೋ ಅದೇ ರೀತಿಯಲ್ಲಿ ಸಾಮಾಜಿಕ ತಂತ್ರಜ್ಞಾನವು ಉತ್ಪಾದನೆಗೆ ಸಹಾಯಕವಾಗುತ್ತದೆಯೆಂದು ಸೆನ್ ವಾದಿಸುತ್ತಿದ್ದಾನೆ. ಸಂಪಾದನಾ ದುಡಿಮೆಯಲ್ಲಿ ಸಾಮಾಜಿಕ ತಂತ್ರಜ್ಞಾನದ ಪಾತ್ರವನ್ನು ಅವನು ವಿವರವಾಗಿ ತನ್ನ ೧೯೯೦ರ ಪ್ರಸಿದ್ಧ ಪ್ರಬಂಧವೊಂದರಲ್ಲಿ ಚರ್ಚಿಸಿದ್ದಾನೆ. ಇಲ್ಲಿ ಎರಡು ಬಗೆಯ ಆರ್ಥಿಕತೆಗಳನ್ನು ಗುರುತಿಸಬಹುದಾಗಿದೆ.

ಮೊದಲನೆಯದು ಸಂಪಾದನಾ ಆರ್ಥಿಕತೆಯಾದರೆ ಎರಡನೆಯದು ಸಂಗೋಪನಾ ಆರ್ಥಿಕತೆ. ಉತ್ಪಾದನೆ, ಬಂಡವಾಳ, ಉಳಿತಾಯ, ವ್ಯಾಪಾರ, ತಂತ್ರಜ್ಞಾನ ಮುಂತಾದವು ಗಳನ್ನೊಳಗೊಂಡದ್ದು ಸಂಪಾದನಾ ಆರ್ಥಿಕತೆ. ಇದಕ್ಕೆ ಪ್ರತಿಯಾಗಿ ಮಹಿಳೆಯರು ಪ್ರಧಾನವಾಗಿ ನಿರ್ವಹಿಸುವ ಮನೆವಾರ್ತೆ, ಸಂತಾನೋತ್ಪತ್ತಿ, ಲಾಲನೆ-ಪಾಲನೆ, ಸಂಗೋಪನೆ ಮುಂತಾದ ಚಟುವಟಿಕೆಗಳನ್ನೊಳಗೊಂಡದ್ದೇ ಸಂಗೋಪನಾ ಆರ್ಥಿಕತೆ. ಅರ್ಥಶಾಸ್ರ್ತವು ಸಂಪಾದನಾ ಚಟುವಟಿಕೆಗಳನ್ನು ಮಾತ್ರ ಒಳಗೊಳ್ಳುತ್ತದೆ. ಸಂಗೋಪನಾ ಚಟುವಟಿಕೆಗಳನ್ನು ಅದು ಒಳಗೊಳ್ಳುವುದಿಲ್ಲ.

[4]       ಅರ್ಥಶಾಸ್ತ್ರವನ್ನು ಕೇವಲ ಆರ್ಥಿಕ ಸಂಗತಿಗಳಿಗೆ ಅಂದರೆ ಉತ್ಪಾದನೆ, ಮಾರುಕಟ್ಟೆ, ವಿನಿಮಯ, ಮುಂತಾದ ಚಟುವಟಿಕೆಗಳಿಗೆ ಮೀಸಲಿರಿಸಿಕೊಳ್ಳುವ ಕ್ರಮವನ್ನು ಅಮರ್ತ್ಯಸೆನ್ ಒಪ್ಪುವುದಿಲ್ಲ. ಅವನು ಅರ್ಥಶಾಸ್ತ್ರವನ್ನು ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸಂಗತಿಗಳನ್ನು ಒಳಗೊಳ್ಳುವ ಜ್ಷಾನದ ಶಾಖೆಯನ್ನಾಗಿ ಮಾಡಲು  ಪ್ರಯತ್ನಿ ಸುತ್ತಿದ್ದಾನೆ. ಅರ್ಥಶಾಸ್ತ್ರವು ಸಾಮಾಜಿಕ ಮೌಲ್ಯಗಳನ್ನು, ಆಚರಣೆಗಳನ್ನು, ನಂಬಿಕೆಗಳನ್ನು ಒಳಗೊಳ್ಳಬೇಕಾಗುತ್ತದೆಯೆಂದು ವಾದಿಸುತ್ತಿದ್ದಾನೆ. ಹೀಗೆ ಅದು ಒಳಗೊಳ್ಳುವ ಸಂಗತಿಗಳಲ್ಲಿ ಸಂಗೋಪನೆಯನ್ನು ಅವನು ಸೇರಿಸುತ್ತಾನೆ (ನೋಡಿ: ಅಮರ್ತ್ಯಸೆನ್ ೧೯೯೯: ೯). ಇದೇ ಬಗೆಯ ವಾದವನ್ನು ಐರನಿ ವಾನ್ ಸ್ಟೆವರಿನ್ ಕೂಡ ಮಂಡಿಸುತ್ತಾಳೆ (೨೦೦೬).

[5]       ಮಹಿಳೆಯರ ಜಗತ್ತು ಕೇವಲ ಮನೆ, ಮಕ್ಕಳು ಮತ್ತು ಕುಟುಂಬವಾಗಿದೆ. ಅವರದು ಕೇವಲ ಖಾಸಗಿಯಾದ ಪ್ರಪಂಚ.ಅವರಿಗೆ ಸಾರ್ವಜನಿಕವಾದ ಪಾತ್ರವಾಗಲಿ ಅಥವಾ ಸ್ಥಾನವಾಗಲಿ ಇಲ್ಲ. ಸಾರ್ವಜನಿಕ ಸ್ಥಾನವಿಲ್ಲದ ಮೇಲೆ ಅವರಿಗೆ ಪ್ರಪಂಚ ಜ್ಞಾನ ವೆಂಬುದು ಬರಲು ಸಾಧ್ಯವಿಲ್ಲ. ಜ್ಞಾನವೆಂಬುದು ಜನರು ಲೌಕಿಕ ಜಗತ್ತಿನೊಂದಿಗೆ ನಡೆಸುವ ಅನುಸಂಧಾನದಿಂದ ಹುಟ್ಟುವ ಸಂಗತಿಯಾಗಿದೆ. ಜ್ಞಾನವೆಂಬುದು ಜನರು  ಕಟ್ಟುವ ಅಥವಾ ರೂಪಿಸು ಒಂದು ಸಂಗತಿಯಾಗಿದೆ.ಆದ್ದರಿಂದ ಸಾರ್ವಜನಿಕ ಪಾತ್ರ ಅಥವಾ ಸ್ಥಾನವಿಲ್ಲದ ಮಹಿಳೆಯರಿಗೆ ಜ್ಞಾನವೆಂಬುದು ಪ್ರಾಪ್ತವಾಗುವುದು ಸಾಧ್ಯವಿಲ್ಲವಾಗಿದೆ. ಜ್ಞಾನವೆಂಬುದು ಪುರುಷರ ಗುತ್ತಿಗೆಯಾಗಿ ಬಿಟ್ಟಿದೆ. ಲಿಂಗ ಸಂಬಂಧಿ ಶ್ರಮ ವಿಭಜನೆಯನ್ನು ಪ್ರಾಕೃತಿಕವೆಂದೂ, ಜೈವಿಕವೆಂದೂ ಪರಿಗಣಿಸಿಕೊಂಡು ಬರಲಾಗಿದೆ. ಅದರ ಜೈವಿಕ ನೆಲೆಯನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಅದಕ್ಕೆ ಸಾಮಾಜಿಕ ಆಯಾಮವೂ ಇದೆಯೆಂಬುದು ಅಪ್ಪಟ್ಟ ಸತ್ಯವಾದ ಸಂಗತಿಯಾಗಿದೆ. ಆದರೆ ಸಮಾಜ ವಿಜ್ಞಾನಗಳು ಅದರ ಸಾಮಾಜಿಕ ಮತ್ತು ಆರ್ಥಿಕ ನೆಲೆಗಳನ್ನು ಗುರುತಿಸುವ ಕೆಲಸವನ್ನು ಮಾಡುತ್ತಿಲ್ಲ. ಸಂತಾನೋತ್ಪತ್ತಿಯನ್ನು ಸಂಪೂರ್ಣವಾಗಿ ಜೈವಿಕವೆಂದು ಪರಿಗಣಿಸಲಾಗಿದೆ. ಅನೇಕ ತತ್ವಶಾಸ್ತ್ರಜ್ಞರು ಮತ್ತು ಇಂದಿನ ಸ್ತ್ರೀವಾದಿಗಳು ಅದೊಂದು ಅತ್ಯಂತ ಸ್ಪಷ್ಟವಾಗಿ ಸಾವಾಜಿಕ ಜವಾಬುದಾರಿಯೆಂಬುದನ್ನು ತೋರಿಸಿಕೊಟ್ಟಿದ್ದಾರೆ. ಮಹಿಳೆಯರು ಅಲ್ಲಿ ನಿಭಾಯಿಸುತ್ತಿರುವುದು ಸಾಮಾಜಿಕ ಜವಾಬುದಾರಿಯಾಗಿದೆ. ಆದರೆ ಅದನ್ನು ಪುರುಷ ಶಾಹಿಯು ಜೈವಿಕವೆಂದು ಮಹಿಳೆಯರಿಗೆ ಅದನ್ನು ತಳುಕು ಹಾಕಿಬಿಟ್ಟಿದೆ. ಈ ಬಗೆಯ ಲಿಂಗ ಸಂಬಂಧಿ ಶ್ರಮ ವಿಭಜನೆಯನ್ನು ಸಮಾಜ-ವಿಜ್ಞಾನಗಳು ತಿರಸ್ಕರಿಸದೆ ಇರುವುದ ರಿಂದ ಮಹಿಳೆಯರ ದುಡಿಮೆಯು ದುಡಿಮೆಯಾಗಿ ಪರಿಗಣನೆಯಾಗುತ್ತಿಲ್ಲ. ನಮ್ಮ ಪರಂಪರೆಯಲ್ಲೂ ಮಹಿಳೆಯರಿಗೆ ಆದರ್ಶ ಗೃಹಿಣಿಯರಾಗಲು ಅಗತ್ಯವಾದ ಪಾತ್ರ ಗಳು ನಮ್ಮ ಸಾಹಿತ್ಯ ಕೃತಿಗಳಲ್ಲಿ ಸಿಗುತ್ತವೆ ವಿನಾ ದುಡಿಮೆಗಾರಳಾಗುವುದಕ್ಕೆ ಸಂಬಂಧಿಸಿದಂತೆ ನಮಗೆ ನಮ್ಮ ಸಾಹಿತ್ಯ ಕೃತಿಗಳಲ್ಲಿ ಆದರ್ಶ ಪಾತ್ರ ದೊರೆಯುವುದಿಲ್ಲ (ಈ ವಿವರಗಳಿಗೆ ನೋಡಿ: ಟಿ. ಸ್ಕಾರಲೆಟ್ ಎಪಿಸ್ಟೀನ್ ೧೯೯೬).

[6]       ಈ ಸಂಗತಿಯನ್ನು ಕುರಿತಂತೆ ಅಮರ್ತ್ಯಸೆನ್ ತನ್ನ ಪ್ರಸಿದ್ದ ಪ್ರಬಂಧವೊಂದರಲ್ಲಿ(೧೯೯೦) ವಿವರವಾಗಿ ಚರ್ಚಿಸಿದ್ದಾನೆ. ಮಹಿಳೆಯರು ನಿರ್ವಹಿಸುವ ಅನೇಕ ಚಟುವಟಿಕೆಗಳು ಉತ್ಪಾದನೆಗೆ ಪೂರಕವಾಗಿ ಅಪಾರ ಕಾಣಿಕೆ ನೀಡುತ್ತವೆ.ಇದನ್ನು ಸೆನ್ ಸೋದಾಹರಣ ವಾಗಿ ತೋರಿಸಿಕೊಟ್ಟಿದ್ದಾನೆ. ಮಹಿಳೆಯರು ನಿರ್ವಹಿಸುವ ಹೊಲ ಗದ್ದೆಗಳಿಗೆ ಬುತ್ತಿ ಒಯ್ಯುವ, ದನ-ಕರುಗಳಿಗೆ ನೀರುಣಿಸುವ, ಮೇವು ಹಾಕುವ, ಹಾಲು-ಹೈನು ಕರೆಯುವ ಚಟುವಟಿಕೆಗಳನ್ನು ಸೆನ್ ಸಾಮಾಜಿಕ ತಂತ್ರಜ್ಞಾನವೆಂದು ಕರೆಯುತ್ತಾನೆ. ಯಂತ್ರೋಪಕರಣಗಳು, ಹಣಕಾಸು ಸಂಸ್ಥೆಗಳು, ಮೂಲ ಸೌಲಭ್ಯಗಳು, ಶಿಕ್ಷಣದ ಅವಕಾಶಗಳು ಮುಂತಾದವು ಹೇಗೆ ಉತ್ಪಾದನೆಗೆ ಪೂರಕವಾಗಿರುತ್ತವೊ ಅದೇ ರೀತಿಯಲ್ಲಿ ಮಹಿಳೆಯರು ನಿರ್ವಹಿಸುತ್ತಿರುವ ಅನೇಕ ಬಗೆಯ ದುಡಿಮೆಗಳು ಉತ್ಪಾದನೆಗೆ ಅಪಾರ ಕಾಣಿಕೆ ನೀಡುತ್ತವೆ ಎಂಬುದು ಸೆನ್‌ನ ಅಭಿಮತವಾಗಿದೆ.

[7]       ಇಂದು ಸಮಾಜದಲ್ಲಿ ಅಸಹನೆ, ಅಸಹಿಷ್ಣುತೆ, ಕ್ರೌರ್ಯ, ಹಿಂಸೆ, ದ್ವೇಷ, ಆಕ್ರಮಣಕಾರಿ ಮನೋಭಾವ ಮುಂತಾದವು ಮೆರೆಯುತ್ತಿವೆ. ಇವೆಲ್ಲವನ್ನು ಪುರುಷ ಗುಣವೆಂದು ಪರಿಭಾವಿಸಿಕೊಳ್ಳಲಾಗಿದೆ. ಇದಕ್ಕೆ ಪ್ರತಿಯಾಗಿ ಸಹನೆ, ಸಹಿಷ್ಣುತೆ, ಮಿತ್ರತ್ವ, ವಾತ್ಸಲ್ಯ, ಸಹಕಾರಿ ಮನೋಭಾವ ಮುಂತಾದವುಗಳು ಮಹಿಳೆಯರ ಗುಣವೆಂದು ಪರಿಗಣಿಸ ಲಾಗಿದೆ. ನಾವು-ಅವರು  ಎಂಬ ಭಿನ್ನತೆಯನ್ನು ಸೃಷ್ಟಿ ಮಾಡಿ ಜನರಲ್ಲಿ ವಿದ್ವೇಷದ, ಅಮಾನವೀಯತೆಯ,ವಿನಾಶದ ಗುಣಗಳನ್ನು ಬಿತ್ತಲಾಗುತ್ತಿದೆ. ಇಂತಹ ವಿನಾಶಕಾರಿ ಪ್ರವೃತ್ತಿಯನ್ನು ತಡೆಗಟ್ಟಲು ಇರುವ ಏಕೈಕ ಪರಿಹಾರವೆಂದರೆ ಸಹನೆ, ತಾಳ್ಮೆ, ಸಹೋದರತ್ವ, ಮಾನವೀಯತೆಗಳನ್ನು ಸಮಾಜದಲ್ಲಿ ಬಿತ್ತುವುದು ಮತ್ತು ಬೆಳೆಸುವುದು. ಇವೆಲ್ಲವು ಮಹಿಳೆಯರಲ್ಲಿ ಕಂಡು ಬರುವ ಗುಣಗಳು, ನಿಜ. ಆದರೆ ಅವುಗಳನ್ನು ಪುರುಷರು ಮೈಗೂಡಿಸಿಕೊಳ್ಳಲು ಪ್ರಯತ್ನಿಸುತ್ತಿಲ್ಲ. ಈ ಬಗೆಯ ಗುಣಗಳನ್ನು ಬೆಳೆಸಿಕೊಳ್ಳಲು ಪುರುಷರು ಪ್ರಯತ್ನಿಸಬೇಕು.

[8]       ಪಾಲ್.ಎ. ಸಾಮ್ಯುಯಲ್‌ಸನ್‌ನ ಅರ್ಥಶಾಸ್ತ್ರ ಕೃತಿಯು ಪ್ರಸಿದ್ಧ ಪಠ್ಯವಾಗಿ ವಿಶ್ವಾದ್ಯಂತ ಮನ್ನಣೆ ಗಳಿಸಿಕೊಂಡಿದೆ. ಅದನ್ನು ಅಧ್ಯಯನ ಮಾಡದೆ ಅರ್ಥಶಾಸ್ತ್ರದ ಅಧ್ಯಯನ ಮುಗಿಯುವುದು ಸಾಧ್ಯವಿಲ್ಲ. ಅಂತಹ ಮನ್ನಣೆಯನ್ನು ಅದು ಪಡೆದುಕೊಂಡಿದೆ. ಅವನಿಗೆ ೧೯೭೧ರಲ್ಲಿ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿಯು ಪ್ರಾಪ್ತವಾಯಿತು. ಅವನ ಕೃತಿಯಲ್ಲಿ ಅರ್ಥಶಾಸ್ತ್ರದ ವ್ಯಾಖ್ಯೆಯನ್ನು ಉತ್ಪಾದನೆ – ವಿನಿಮಯ – ಮಾರುಕಟ್ಟೆಗಳ ಸುತ್ತ ಕಟ್ಟಲಾಗಿದೆ. ತನ್ನ ಕೃತಿಯಲ್ಲಿ ಅವನು ಅರ್ಥಶಾಸ್ತ್ರಕ್ಕೆ ಆರು ಬಗೆಯ ವ್ಯಾಖ್ಯೆಗಳನ್ನು ನೀಡಿದ್ದಾನೆ.

[9]       ಅರ್ಥಶಾಸ್ತ್ರವನ್ನು ಪೂರೈಕೆ-ಬೇಡಿಕೆಗಳ ಶಾಸ್ತ್ರವೆಂದು ಕರೆಯಬಹದಾಗಿದೆ. ಏಕೆಂದರೆ ಇವೆರಡು ಇಲ್ಲದಿದ್ದರೆ ಅರ್ಥಶಾಸ್ತ್ರಕ್ಕೆ ಅಸ್ತಿತ್ವವೆ ಇಲ್ಲವಾಗಿದೆ. ಈ ಪೂರೈಕೆ-ಬೇಡಿಕೆಗಳು ಮಾರುಕಟ್ಟೆಯಲ್ಲಿ ಅಸ್ತಿತ್ವ ಪಡೆದುಕೊಂಡಿವೆ. ಮಾರುಕಟ್ಟೆಯಿಲ್ಲದಿದ್ದರೆ ಪೂರೈಕೆ-ಬೇಡಿಕೆಗಳಿಲ್ಲ. ಅವಿಲ್ಲದಿದ್ದರೆ ಅರ್ಥಶಾಸ್ತ್ರವಿಲ್ಲ. ಈ ಬಗೆಯ ಚಿಂತನೆಗೆ ಪ್ರತಿಯಾಗಿ ಸ್ತ್ರೀವಾದಿಗಳು ಅರ್ಥಶಾಸ್ತ್ರವು ಮಹಿಳೆಯರು ಪ್ರಧಾನವಾಗಿ ನಿರ್ವಹಿಸುವ ಸಂಗೋಪನಾ -ಸಂತಾನೋತ್ಪತ್ತಿ ಚಟುವಟಿಕೆಗಳನ್ನು ಒಳಗೊಳ್ಳುವಂತಾಗಬೇಕೆಂದು ಅವರು ಪ್ರತಿಪಾದಿ ಸುತ್ತಿದ್ದಾರೆ.

[10]      ಅಡಿಟಿಪ್ಪಣಿ-೭ ನೋಡಿ.

[11]      ಸಂಗೋಪನಾ ಮತ್ತು ಸಂತಾನೋತ್ಪತ್ತಿ ದುಡಿಮೆಯನ್ನು ಮುಕ್ಕಾಲು ಮೂರು ವೀಸೆ ಪಾಲು ಮಹಿಳೆಯರು ನಿಭಾಯಿಸುತ್ತಿದ್ದಾರೆ. ಈ ಚಟುವಟಿಕೆಗಳಿಗೆ ಮಾರುಕಟ್ಟೆಯೂ ಇಲ್ಲ, ಮಾರುಕಟ್ಟೆ ಮೌಲ್ಯವೂ ಇಲ್ಲ. ಅವುಗಳನ್ನು ಹಣಕೊಟ್ಟು ಖರೀದಿಸುವುದು ಸಾಧ್ಯವಿಲ್ಲ. ಆದರೆ ಅವುಗಳಿಗೆ ಛಾಯಾ ಬೆಲೆಗಳನ್ನು ನೀಡಿ ಅವುಗಳ ಆರ್ಥಿಕ ಮೌಲ್ಯವನ್ನು ಗಣನೆ ಮಾಡವುದು ಸಾಧ್ಯ. ಅನೇಕ ಅಧ್ಯಯನಗಳು ತೋರಿಸಿಕೊಟ್ಟಿರುವಂತೆ ಮಹಿಳೆಯರು ನಿರ್ವಹಿಸುವ ದುಡಿಮೆಯಲ್ಲಿ ಮುಕ್ಕಾಲು ಪಾಲು ಕ್ರ್ರಯ ರಹಿತವಾಗಿದ್ದರೆ ಉಳಿದದ್ದು ಕ್ರಯ ಸಹಿತವಾಗಿರುತ್ತದೆ. ಆದರೆ ಪುರುಷರ ದುಡಿಮೆಯಲ್ಲಿ ಮುಕ್ಕಾಲು ಪಾಲು ಕ್ರಯ ಸಹಿತವಾಗಿದ್ದರೆ ಕಾಲು ಭಾಗ ಮಾತ್ರ ಕ್ರಯರಹಿತವಾಗಿರುತ್ತದೆ. ಹೀಗೆ ಮಹಿಳೆಯರ ಮುಕ್ಕಾಲು ಪಾಲು ದುಡಿಮೆಯನ್ನು ಕ್ರಯರಹಿತ ಮಾಡಿರುವುದರಿಂದ ಅವರ ದುಡಿಮೆಗೆ ಆರ್ಥಿಕವಾದ, ಸಾಮಾಜಿಕವಾದ ಮನ್ನಣೆ ದೊರೆಯದಂತಾಗಿದೆ. ತಮ್ಮ ದುಡಿಮೆಯ ಮಹತ್ವದ ಬಗ್ಗೆ ಮಹಿಳೆಯರಿಗೆ ಕಲ್ಪನೆಯಿಲ್ಲದಂತಾಗಿದೆ. ತಮ್ಮ ದುಡಿಮೆಗೆ ಆರ್ಥಿಕ ಮಹತ್ವವಿಲ್ಲವೆಂಬ ಭಾವನೆ ಮಹಿಳೆಯರಲ್ಲಿ ಆಳವಾಗಿ ನೆಲೆಗೊಂಡು ಬಿಟ್ಟಿದೆ.