ಜನರನ್ನು ಒಳಗೊಳ್ಳುವ ಅರ್ಥಶಾಸ್ತ್ರ

ಜನರನ್ನು ಮೂಲ ಧಾತುವನ್ನಾಗಿ ಮಾಡಿಕೊಂಡು ಅಮರ್ತ್ಯಸೆನ್ ಅರ್ಥಶಾಸ್ತ್ರವನ್ನು ಹೀಗೆ ನಿರ್ವಚಿಸಿದ್ದಾನೆ.

ಅರ್ಥಶಾಸ್ತ್ರದ ಬಹುಪಾಲು ಸಂಗತಿಗಳು ಒಂದು ಕಡೆ ಸರಕು, ಸಾಮಗ್ರಿ, ಸೇವೆಗಳು ಮತ್ತು ಇನ್ನೊಂದು ಕಡೆ ಜನರು-ಇವೆರಡರ ನಡುವೆ ಇರುವ ಸಂಬಂಧದ ಜಗತ್ತಿಗೆ ಸೇರುತ್ತವೆ. ಸರಕು,ಸಾಮಗ್ರಿಗಳು ಮತ್ತು ಸೇವೆಗಳನ್ನು ಉತ್ಪಾದಿಸಲು ಜನರು ಹೇಗೆ ವ್ಯವಸ್ಥೆ ಮಾಡಿಕೊಳ್ಳುತ್ತಾರೆ, ಅವುಗಳ ಮೇಲೆ ಜನರು ಹೇಗೆ ತಮ್ಮ ಹಕ್ಕುದಾರಿಕೆ ಸ್ಥಾಪಿಸಿಕೊಳ್ಳುತ್ತಾರೆ, ಅವುಗಳನ್ನು ಜನರು ಏನು ಮಾಡುತ್ತಾರೆ ಮತ್ತು ಅವುಗಳಿಂದ ಜನರು ಏನನ್ನು ಪಡೆಯುತ್ತ್ತಾರೆ ಎಂಬ ಸಂಗತಿಗಳನ್ನು ಅರ್ಥಶಾಸ್ತ್ರವು ಅಧ್ಯಯನ ಮಾಡುತ್ತದೆ(೧೯೮೫).

[1]

ಈ ವಾಖ್ಯೆಯಲ್ಲಿ ಉತ್ಪಾದನೆ ಬಗ್ಗೆ ಉಲ್ಲೇಖವಿದೆ. ಆದರೆ ಅದನ್ನು ಜನರ ನೆಲೆಯಿಂದ ಪರಿಭಾವಿಸಿಕೊಳ್ಳಲಾಗಿದೆ. ಇಲ್ಲಿ ಜನರು ಎಂದಾಗ ಅದರಲ್ಲಿ ಮಹಿಳೆಯರು ಸೇರುತ್ತಾರೆ. ಅಂದಮೇಲೆ ಮಹಿಳೆಯರು ನಿರ್ವಹಿಸುವ ಸಂಗೋಪನಾ ದುಡಿಮೆ-ಸಂಗೋಪನಾ ಉತ್ಪಾದನೆಗಳನ್ನು ಈ ವ್ಯಾಖ್ಯೆಯು ಒಳಗೊಳ್ಳುತ್ತದೆ. ಇಲ್ಲಿ ವಿನಿಮಯ-ಮಾರುಕಟ್ಟೆಗಳ ಉಲ್ಲೇಖವಿಲ್ಲ. ಬಹಳ ಮುಖ್ಯವಾಗಿ ಇಲ್ಲಿ ಸರಕು,ಸಾಮಗ್ರಿ ಮತ್ತು ಸೇವೆಗಳ ಮೇಲೆ ಜನರು ತಮ್ಮ ಹಕ್ಕುದಾರಿಕೆಯನ್ನು ಹಾಗೆ ಸ್ಥಾಪಿಸಿಕೊಳ್ಳುತ್ತಾರೆ ಎಂಬುದರ ಬಗ್ಗೆ ಇಲ್ಲಿ ಅವಧಾರಣೆ ನೀಡಲಾಗಿದೆ. ಒಟ್ಟಾರೆ ಅರ್ಥಶಾಸ್ತ್ರವು ಜನರನ್ನು ಒಳಗೊಳ್ಳುವಂತೆ ಮಾಡಲಾಗಿದೆ.

ಸಂಗೋಪನೆ, ಲಾಲನೆ, ಪಾಲನೆ, ಆರೈಕೆ, ಪೋಷಣೆ, ಶುಶ್ರೂಷೆ, ಮನೆವಾರ್ತೆ, ಅನುಕಂಪ, ಅನುರಾಗ ಮುಂತಾದ ಸಂಗತಿಗಳನ್ನು ಆಧಾರವಾಗಿಟ್ಟುಕೊಂಡು ಜೂಲಿ ನೆಲ್‌ಸನ್ ಅರ್ಥಶಾಸ್ತ್ರವನ್ನು ಕೆಳಕಂಡಂತೆ ನಿರ್ವಚಿಸಿದ್ದಾಳೆ.

ಬದುಕನ್ನು ನಡೆಸಲು ಅಗತ್ಯವಾದ ಸಂಗತಿಗಳನ್ನು ಜನರಿಗೆ ಒದಗಿಸುವುದು ಎಂಬ ದೃಷ್ಟಿಯಿಂದ  ಅರ್ಥಶಾಸ್ತ್ರವನ್ನು ನಿರ್ವಚಿಸುವುದಕ್ಕೂ(ಬದುಕನ್ನು ನಡೆಸಲು ಅಗತ್ಯವಾದ ಸಂಗತಿಗಳು ಅಂದಾಗ ಅಲ್ಲಿ ಸರಕು,  ಸಾಮಗ್ರಿ ಮತ್ತು ಸೇವೆಗಳಲ್ಲದೆ ಸಂಗೋಪನೆ, ಲಾಲನೆ, ಪಾಲನೆ, ಶುಸ್ರೂಷೆ, ಆರೈಕೆ, ಪರೋಪಕಾರ, ಮನೆವಾರ್ತೆ ಮುಂತಾದವು ಸೇರುತ್ತವೆ. ಇಲ್ಲಿನ ಉತ್ಪಾದನೆಯ ವ್ಯಾಪ್ತಿಯು ವಿಶಾಲವಾದುದಾಗಿದೆ. ಇಲ್ಲ್ಲಿ ಉತ್ಪಾದನೆಯನ್ನು ಕೇವಲ ವಿನಿಮಯ, ಮಾರುಕಟ್ಟೆಗಳ ಚೌಕಟ್ಟಿಗೆ ಸೀಮಿತ ಗೊಳಿಸಿಲ್ಲ) ಮತ್ತು ಅದು ಪ್ರಧಾನವಾಗಿ ವಿನಿಮಯ ಚಟುವಟಿಕೆಗಳಿಗೆ ಸಂಬಂಧಿ ಸಿದ್ದೆಂದು ಪರಿಭಾವಿಸಿಕೊಳ್ಳುವುದಕ್ಕೂ ನಡುವೆ ಭಿನ್ನತೆಯಿದೆ. ಎರಡನೆಯ ರೀತಿಯ ನಿರ್ವಚನದಲ್ಲಿ ಸರಕು, ಸಾಮಗ್ರಿ ಮತ್ತು ಸೇವೆಗಳು ಮಾರುಕಟ್ಟೆಯಲ್ಲಿ ವಿನಿಮಯವಾಗುತ್ತವೋ ಅಥವಾ ಇಲ್ಲವೊ ಎಂಬುದು ಮುಖ್ಯವಾಗುತ್ತದೆ ವಿನಾ ಅವು ಜನರ ಯಾವ ಬಗೆಯ ಆಸೆ-ಆಕಾಂಕ್ಷೆಗಳನ್ನು, ಅಪೇಕ್ಷೆಗಳನ್ನು ಈಡೇರಿಸುತ್ತವೆ ಎಂಬುದಲ್ಲ. ಸರಕಿನ ಜಗತ್ತಿನಿಂದ ಜನರನ್ನು ಅಲಾಯದ ಮಾಡಿಬಿಟ್ಟರೆ  ಅರ್ಥಶಾಸ್ತ್ರವು ಬರಡಾಗಿಬಿಡುತ್ತದೆ. ಇದಕ್ಕೆ ಪ್ರತಿಯಾಗಿ ಬದುಕನ್ನು ನಡೆಸಲು ಅಗತ್ಯವಾದ ಸಂಗತಿಗಳನ್ನು ಜನರಿಗೆ ಒದಗಿಸುವುದು ಎಂಬ ನೆಲೆಯಿಂದ ಅರ್ಥಶಾಸ್ತ್ರವನ್ನು ಪರಿಭಾವಿಸಿಕೊಂಡರೆ ಆಗ ಸರಕು, ಸಾಮಗ್ರಿ ಮತ್ತು ಸೇವೆಗಳನ್ನು ಪ್ರತಿನಿಧಿಸುವ ಗುಂಪಿನೊಳಗೆ ಗುಣಾತ್ಮಕ ಭಿನ್ನತೆ-ದ್ವಯತೆ ಇರುವುದು ತಿಳಿಯುತ್ತದೆ. (ಉಲ್ಲೇಖ: ಐರನಿ ವಾನ್ ಸ್ಟೆವರಿನ್ ೨೦೦೪:೯೬).[2]

ಈ ವಾಖ್ಯೆಯು ಅನೇಕ ದೃಷ್ಟಿಯಿಂದ ಕುತೂಹಲಕಾರಿಯಾಗಿದೆ. ಈ ವಾಖ್ಯೆಯಲ್ಲಿ ಜನರು ಮತ್ತು ಸರಕು- ಸೇವೆಗಳೆರಡನ್ನು ಏಕಕಾಲಕ್ಕೆ ಒಳಗೊಳ್ಳುವಂತೆ ಮಾಡಲಾಗಿದೆ. ಈ ವಾಖ್ಯೆಯ ಮಹತ್ವ ಅದು ಸರಕು-ಸಾಮಗ್ರಿಗಳ ಬಹುಳತೆಯನ್ನು ಗುರುತಿಸಿ ರುವುದರಲ್ಲಿದೆ. ಅಂದರೆ ಸಂಪಾದನಾ ದುಡಿಮೆಗೆ ಸಂಬಂಧಿಸಿದ ಉತ್ಪಾದನೆ ಹಾಗೂ ಸಂಗೋಪನಾ ದುಡಿಮೆಗೆ ಸಂಬಂಧಿಸದ ಉತ್ಪಾದನೆಗಳೆರಡನ್ನು ಸಮಾನವಾಗಿ ಇಲ್ಲಿ ಪರಿಗಣಿಸಲಾಗಿದೆ. ಗುಣಾತ್ಮಕ ಭಿನ್ನತೆಯೆಂದಾಗ ಅದು ಈ ಬಗೆಯ ಸರಕುಗಳ ವರ್ಗೀಕರಣಕ್ಕೆ ಅನ್ವಯವಾಗುತ್ತದೆ. ಮಾರುಕಟ್ಟೆಯು ಇಲ್ಲಿ ಅರ್ಥಶಾಸ್ತ್ರದ ನಿಕಷವಲ್ಲ. ಎರಡೂ ಬಗೆಯ ಉತ್ಪಾದನೆಗಳನ್ನು(ಸಂಪಾದನೆ ಮತ್ತು ಸಂಗೋಪನೆ)ಒಳಗೊಳ್ಳುವಂತೆ  ಇಲ್ಲಿ ಅರ್ಥಶಾಸ್ತ್ರವನ್ನು ನಿರ್ವಚಿಸಲಾಗಿದೆ.

ಪ್ರಕರಣ

ಸುಖಮಯಸಮೃದ್ದ ಬದುಕು ಎಂದರೇನು?

ಸಾಂಪ್ರದಾಯಿಕ ಅರ್ಥಶಾಸ್ತ್ರದಲ್ಲಿ ಅನುಭೋಗಿಯು ತಾನು ಬಯಸಿದ ಸರಕು-ಸಾಮಗ್ರಿಗಳನ್ನು ಅನುಭೋಗಿಸುವುದರ ಮೂಲಕ ಗರಿಷ್ಟ ತೃಪ್ತಿಯನ್ನು ಪಡೆದರೆ ಅದನ್ನು ಸುಖಮಯ ಅಥವಾ ಸಮೃದ್ಧ ಬದುಕು ಎಂದು ಕರೆಯಲಾಗುತ್ತದೆ. ಸರಕು, ಸಾಮಗ್ರಿ, ಸೇವೆಗಳ ಅನುಭೋಗದಿಂದ ವ್ಯಕ್ತಿಯೊಬ್ಬ ಗಳಿಸುವ ಗರಿಷ್ಟ ತುಷ್ಟಿಗುಣವು ಸುಖಮಯ ಬದುಕನ್ನು ಅಳೆಯುವ ಮಾಪನವಾಗಿದೆ. ಸರಕು, ಸಾಮಗ್ರಿ, ಸೇವೆಗಳ ಮೊತ್ತ ಮತ್ತು ಅವುಗಳ ಅನುಭೋಗದಿಂದ ಪಡೆಯುವ ತೃಪ್ತಿ-ತುಷ್ಟಿಗುಣದ ಗರಿಷ್ಟ ಮೊತ್ತವೆ ಸುಖಮಯ-ಆನಂದಮಯ ಬದುಕು. ಸರಕು, ಸಾಮಗ್ರಿ, ಸೇವೆಗಳ ಅನುಭೋಗದ ವ್ಯಾಪ್ತಿಯನ್ನು ಬಿಟ್ಟು ಅದರಾಚೆಗೆ ಅರ್ಥಶಾಸ್ತ್ರವು ಹೋಗುವುದಿಲ್ಲ. ಈ ಬಗೆಯ ಅರ್ಥಶಾಸ್ತ್ರದ ನಿಯಮಗಳಿಂದಾಗಿ ಸರಕು, ಸಾಮಗ್ರಿ, ಸೇವೆಗಳ ಉತ್ಪಾದನೆ, ಅವುಗಳ ವಿನಿಮಯ, ಮಾರಾಟ, ಅನುಭೋಗ ಮುಂತಾದ ಸಂಗತಿಗಳೇ ಅರ್ಥಶಾಸ್ತ್ರ ವೆನಿಸಿಕೊಂಡು ಬಿಟ್ಟಿವೆ. ಅವುಗಳಲ್ಲಿ ಉಂಟಾಗುವ ವರ್ಧನೆಯೇ ಅಭಿವೃದ್ಧಿಯೆನಿಸಿ ಕೊಂಡು ಬಿಟ್ಟಿದೆ. ವರಮಾನದ ಮೊತ್ತವೆ ಜನರ ಜೀವನವಾಗಿ ಬಿಟ್ಟಿದೆ (ಮೆಹಬೂಬ್ ಉಲ್ ಹಕ್ ತಮ್ಮ ಮೊದಲ ಮಾನವ ಅಭಿವೃದ್ದಿ ವರದಿಯಲ್ಲಿ (೧೯೯೦) ಸುಖಮಯ ಬದುಕನ್ನು ಸಾಧ್ಯ ಮಾಡಿಕೊಡುವ ಅನೇಕ ಅವಕಾಶಗಳಲ್ಲಿ ವರಮಾನವು ಒಂದಾಗಿದೆ. ವರಮಾನದ ಒಟ್ಟು ಮೊತ್ತವೆ ಜನರ ಬದುಕಲ್ಲವೆನ್ನುವುದನ್ನು ಅತ್ಯಂತ ಸ್ಪಷ್ಟವಾಗಿ ತೋರಿಸಿಕೊಟ್ಟಿದ್ದಾನೆ). ಸಂಪಾದನಾ ದುಡಿಮೆಯನ್ನು ಬಿಟ್ಟು ಆಚೆಗೆ ಅರ್ಥಶಾಸ್ತ್ರವೆ ಇಲ್ಲವೆನ್ನುವಂತೆ ಮಾಡಲಾಗಿದೆ. ಗರಿಷ್ಟ ತೃಪ್ತಿಯ ಸ್ಥಾನದಲ್ಲಿ ಅನುಭೋಗಿಗಳು ಸಮತೋಲನವನ್ನು ಸಾಧಿಸಿಕೊಂಡಿರುತ್ತಾರೆ. ಈ ಸಮತೋಲನದ ಸ್ಥಿತಿಯಲ್ಲಿ ಅನುಭೋಗಿಗಳು ತಾವು ಈಗ ಅನುಭೋಗಿಸುತ್ತಿರುವ ಸರಕನ್ನು ಬಿಟ್ಟು ಅದಕ್ಕೆ ಪ್ರತಿಯಾಗಿ ಮತ್ತೊಂದನ್ನು ಅನುಭೋಗಿಸಬಹುದು. ಆದರೆ ಇಲ್ಲಿನ ಷರತ್ತೇನೆಂದರೆ ತಾವು ಬಿಟ್ಟುಕೊಟ್ಟ ಸರಕಿನಿಂದ ಎಷ್ಟು ತೃಪ್ತಿಯನ್ನು ಕಳೆದುಕೊಳ್ಳುತ್ತಾರೋ ಅದಕ್ಕೆ ಸಮನಾದ ಅಥವಾ ಅದಕ್ಕಿಂತ ಅಧಿಕವಾದ ತೃಪ್ತಿಯನ್ನು ತಾವು ಆಯ್ಕೆ ಮಾಡಿಕೊಂಡ ಹೊಸ ಸರಕಿನಿಂದ ಪಡೆದುಕೊಳ್ಳುವಂತಿರಬೇಕು. ಅಂದರೆ ಅನುಭೋಗಿಗಳು ತಮ್ಮ ಸಮತೋಲನದ ಸ್ಥಿತಿಯಲ್ಲಿ ಅನುಭೋಗಿಸುವ ಸರಕುಗಳನ್ನು ಅದಲು-ಬದಲು ಮಾಡಿಕೊಳ್ಳಬಹುದು. ಇಲ್ಲಿನ ಷರತ್ತೇನೆಂದರೆ ತಾವು ಬಿಟ್ಟುಕೊಡುತ್ತಿರುವ ಸರಕಿನಿಂದ ಉಂಟಾಗುವ ತೃಪ್ತಿಯ ನಷ್ಟವನ್ನು ಹೊಸದಾಗಿ ಆಯ್ಕೆ ಮಾಡಿಕೊಂಡ ಸರಕು ತುಂಬಿಕೊಡಬೇಕು. ಹೀಗೆ ನಷ್ಟವನ್ನು ತುಂಬಿಕೊಡುವುದಾದರೆ ಸರಕುಗಳನ್ನು ಬದಲಾಯಿಸಿಕೊಳ್ಳಬಹುದು. ಇಲ್ಲಿ ಅನುಭೋಗವೆನ್ನುವುದು ಭೌತಿಕ ಸರಕಾಗಬಹುದು ಅಥವಾ ಅಭೌತಿಕ ಸರಕಾಗಬಹುದು.

ಹೀಗೆ ಅನುಭೋಗಿಯು ಸರಕು-ಸೇವೆಗಳ ಮೂಲಕ ತೃಪ್ತಿಯನ್ನು ಗರಿಷ್ಟಗೊಳಿಸಿ ಕೊಳ್ಳುವ ಕ್ರಮವನ್ನು ವಿವೇಕಯುತ ವರ್ತನೆಯೆಂದು ವೈಚಾರಿಕವರ್ತನೆ ಯೆಂದು(ರ‌್ಯಾಷನಲ್ ಬಿಹೇವಿಯರ್)ಕರೆಯಲಾಗಿದೆ.[3]

ಒಬ್ಬ ವ್ಯಕ್ತಿಯು ಸರಕೊಂದನ್ನು ಖರೀದಿಸುವಾಗ ಅದರಿಂದ ತನಗೆ ಎಷ್ಟು ತೃಪ್ತಿ ಬರುತ್ತದೆಯೆಂದು ಲೆಕ್ಕಾಚಾರ ಹಾಕಿಕೊಂಡು ಖರೀದಿಸುತ್ತಾನೆಂದು ಇಲ್ಲಿ ಊಹಿಸಿಕೊಳ್ಳಲಾಗಿದೆ. ಹೀಗೆ ಲೆಕ್ಕಾಚಾರದ ಮೇಲೆ ಬದುಕನ್ನು ನಿರ್ವಹಿಸುವವರನ್ನು ಆರ್ಥಿಕ ಮನುಷ್ಯರೆಂದು ಕರೆಯಲಾಗಿದೆ. ಹೇಗೆ ಜನರು ಲೆಕ್ಕಹಾಕಿಕೊಂಡೆ ಬದುಕು ನಡೆಸುತ್ತಾರೆ ಮತ್ತು ನಡೆಸಬೇಕು ಎಂಬುದು ಇಲ್ಲಿನ ಗೃಹೀತವಾಗಿದೆ. ಈ ಬಗೆಯಲ್ಲಿ ಜನರು ವರ್ತಿಸುವುದನ್ನು ವಿವೇಚನಾಯುತ ವರ್ತನೆಯೆಂದು ಕರೆಯಲಾಗಿದೆ. ಹಾಗೆ ಲೆಕ್ಕಾಚಾರ ಹಾಕದೆ ಬದುಕನ್ನು ನಿರ್ವಹಿಸುವ ಪರಿಯನ್ನು ಅರ್ಥಶಾಸ್ತ್ರ ಮತ್ತು ಅಭಿವೃದ್ಧಿ ಅಧ್ಯಯನಗಳು ಸಾಂಪ್ರದಾಯಿಕವೆಂದೂ, ಪ್ರತಿಗಾಮಿಯೆಂದೂ ಆಧುನಿಕ ಪೂರ್ವಕಾಲದ ಪಳೆಯುಳಿಯುವಿಕೆಯೆಂದೂ ಅಭಿವೃದ್ಧಿಗೆ ಮಾರಕವೆಂದೂ ಗುರುತಿಸುತ್ತವೆ. ಈ ಬಗೆಯ ವಿವೇಕಯುತ, ವೈಚಾರಿಕ, ಲೆಕ್ಕಾಚಾರ ಆಧರಿತ ವರ್ತನೆಗೆ ಸಂಬಂಧಿಸಿದ ಅರ್ಥಶಾಸ್ತ್ರದ ಸೈದ್ಧಾಂತಿಕ ನೆಲೆಗಳನ್ನು ಅಮರ್ತ್ಯಸೆನ್,ಮಾರ್ತ ನುಸುಬೌಮ್, ಐರನಿ ವಾನ್ ಸ್ಟೆವರಿನ್, ಡೆಸ್ ಗ್ಯಾಸ್‌ಫರ್ ಮುಂತಾದವರು ತೀವ್ರವಾಗಿ ಟೀಕಿಸಿದ್ದಾರೆ. ಸಾಂಪ್ರದಾಯಿಕ ಅರ್ಥಶಾಸ್ತ್ರವು ಜನರನ್ನು ವೈಚಾರಿಕ ಪ್ರಾಣಿಗಳೆಂದು, ಆರ್ಥಿಕ ಜೀವಿಗಳೆಂದು ಗುರುತಿಸುತ್ತದೆ. ಅದರಿಂದಾಚೆಗೆ ಜನರ ಬದುಕು ಅಲ್ಲಿ ಇಲ್ಲವಾಗಿದೆ. ಇದಕ್ಕೆ ಪ್ರತಿಯಾಗಿ ಸಂಗೋಪನಾ ಅರ್ಥಶಾಸ್ತ್ರವು ವೈಚಾರಿಕ-ಆರ್ಥಿಕ ನೆಲೆಗಳನ್ನು ಮೀರಿದ ರೀತಿಯಲ್ಲಿ ಜನರನ್ನು ಪರಿಭಾವಿಸಿಕೊಳ್ಳುತ್ತದೆ.[4] ಅಂದರೆ ಜನರನ್ನು ಅತ್ಯಂತ ವಿಸ್ತೃತ ನೆಲೆಯಲ್ಲಿ ಅಂದರೆ ಬಹುಳಾಕಾರಿಯಾಗಿ ಬಹುಳತೆಯ ನೆಲೆಯಲ್ಲಿ ಜನರನ್ನು ಇಲ್ಲಿ ಪರಿಭಾವಿಸಿಕೊಳ್ಳಲಾಗಿದೆ. ಸರಕಿನಿಂದ ತಮಗೆ ಬರಬಹುದಾದ ತೃಪ್ತಿ ಹಾಗೂ ಅದಕ್ಕೆ ತಾನು ನೀಡುವ ಬೆಲೆಗಳನ್ನು ಸದಾಕಾಲ ತುಲನೆ ಮಾಡಿಕೊಂಡೆ ಜನರು ಸರಕುಗಳನ್ನು ಖರೀದಿಸುವುದಿಲ್ಲ. ಇದಕ್ಕಿಂತ ಮುಖ್ಯ ವಾಗಿ ಗರಿಷ್ಟ ತೃಪ್ತಿಯನ್ನು ಸಾಧಿಸಿಕೊಂಡ ಸಮತೋಲನದ ಹಂತದಲ್ಲಿ ಜನರು ತಾವು ಸೇವಿಸುತ್ತಿರುವ ಒಂದು ಸರಕನ್ನು ಬಿಟ್ಟು ಅದರಷ್ಟೇ ತೃಪ್ತಿಯನ್ನು ನೀಡಬಲ್ಲ ಅಥವಾ ಅದಕ್ಕಿಂತ ಅಧಿಕ ತೃಪ್ತಿ ನೀಡಬಲ್ಲ ಮತ್ತೊಂದು ಸರಕನ್ನು ಪಡೆದುಕೊಳ್ಳ ಬಹುದೆಂಬ ಸಾಂಪ್ರದಾಯಿಕ ಅರ್ಥಶಾಸ್ತ್ರಜ್ಞರ ಸಿದ್ಧಾಂತವನ್ನು ತೀವ್ರವಾಗಿ ಟೀಕಿಸ ಲಾಗುತ್ತಿದೆ. ಏಕೆಂದರೆ ಕೆಲವು ಸರಕು-ಸೇವೆಗಳು ಹೇಗಿರುತ್ತವೆಂದರೆ ಅವುಗಳನ್ನು ಒಂದಕ್ಕೆ ಮತ್ತೊಂದನ್ನು ಬದಲಾಯಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಕೆಲವು ಸರಕುಗಳು ಹೇಗಿರುತ್ತವೆಂದರೆ ಅವುಗಳಿಂದ ಬರಬಹದಾದ ತೃಪ್ತಿಯನ್ನು ಲೆಕ್ಕಾಚಾರ ಹಾಕಿ ಪರಿಮಾಣಾತ್ಮಕವಾಗಿ ಅಳೆಯಲು ಸಾಧ್ಯವಿಲ್ಲ. ಇದು ಒಂದು ಸಮಸ್ಯೆ. ಮತ್ತೊಂದು ಸಮಸ್ಯೆಯೆಂದರೆ ಕೆಲವು ಸರಕುಗಳನ್ನು ಒಂದೇ ಕ್ರಿಯೆಯ ಮೂಲಕ ಖರೀದಿಸುವುದು ಮತ್ತು ಅನುಭೋಗಿಸುವುದು ಸಾಧ್ಯವಿಲ್ಲ. ಸಾಮಾಜಿಕ-ಚಾರಿತ್ರಿಕ ಪ್ರಕ್ರಿಯೆಯ ಮೂಲಕ ವಾತ್ರವೆ ಅವುಗಳನ್ನು ಪಡೆದುಕೊಳ್ಳುವುದು ಸಾಧ್ಯ. ಇನ್ನೂ ಕೆಲವು ವಸ್ತುಗಳನ್ನು ಅನುಭವಿಸಲು ಸಾಧ್ಯವೆ ವಿನಾ ಖರೀದಿಸಲು ಸಾಧ್ಯವಿಲ್ಲ. ಉದಾಹರಣೆಗೆ ಗೆಳೆತನ, ತಾಯಿಯ ವಾತ್ಸಲ್ಯ ಮುಂತಾದವು.  ಇವೆಲ್ಲ ಸಂಗೋಪನಾ ದುಡಿಮೆಗೆ ಸಂಬಂಧಿಸಿದ ಸಂಗತಿಗಳಾಗಿವೆ. ಉದಾಹರಣೆಗೆ ತಾಯಿಯ ಅನುರಾಗ, ಗೆಳೆಯರ ವಿಶ್ವಾಸ, ವಾತ್ಸಲ್ಯ ಮುಂತಾದವುಗಳನ್ನು ಒಂದೇ ಸಾರಿಯ ಕ್ರಿಯೆಯ ಮೂಲಕ ಪಡೆದುಕೊಳ್ಳುವುದು ಅಸಾಧ್ಯ. ಇವುಗಳನ್ನು ಅನೇಕ ವರ್ಷಗಳ ಪ್ರಯತ್ನ ಮತ್ತು ಪರಿಶ್ರಮದ ಮೂಲಕ ಪ್ರಕ್ರಿಯೆಯೋಪಾದಿಯಲ್ಲಿ ಪಡೆದುಕೊಳ್ಳಬೇಕಾಗುತ್ತದೆ. ಮರ್ಯಾದೆಯನ್ನು ಪಡೆದುಕೊಳ್ಳಬಹುದೆ ವಿನಾ ಅದನ್ನು ಖರೀದಿಸಲು ಬರುವುದಿಲ್ಲ. ವಿಶ್ವಾಸವನ್ನು ಗೆಳೆಯನಾಗುವುದರ ಮೂಲಕ ಪಡೆದುಕೊಳ್ಳಬಹುದೆ ವಿನಾ ಅದರಿಂದ ಎಷ್ಟು ತ್ರೃಪ್ತಿ ದೊರಕಿತೆಂದು ಲೆಕ್ಕಾಚಾರ ಹಾಕುವುದು ಸಾಧ್ಯವಿಲ್ಲ. ಬದುಕು ಎನ್ನುವುದು ಕೇವಲ ಮಾರುಕಟ್ಟೆ-ಸರಕು-ಸಂಪತ್ತು-ವರಮಾನ ಮುಂತಾದವುಗಳ ಮೊತ್ತವಲ್ಲ. ಬದುಕು ಎನ್ನುವುದು ಏಕಪಕ್ಷೀಯವಾದ ಏಕಾಕಾರಿಯಾದ ಲೌಕಿಕ-ಭೌತಿಕ ಸಂಗತಿ ಮಾತ್ರವಲ್ಲ. ಅದು ಬಹುಳಾಕಾರಿಯಾದುದು. ಭೌತಿಕದ ಜೊತೆಗೆ ಅದು ಅನುಕಂಪ, ಅನುರಾಗ, ವಾತ್ಸಲ್ಯ, ಪರೋಪಕಾರ, ಶುಶ್ರೂಷೆ,ಮನೆವಾರ್ತೆ, ಲಾಲನೆ-ಪಾಲನೆ ಮುಂತಾದ ೌಕಿಕೇತರ ಸಂಗತಿಗಳನ್ನು ಬದುಕು ಒಳಗೊಂಡಿರುತ್ತದೆ. ಜನರ ಬದುಕು ಸದಾ ಆರ್ಥಿಕ ಲೆಕ್ಕಾಚಾರದ ಮೇಲೆ ನಿಂತಿರುವುದಿಲ್ಲ. ವೈಯುಕ್ತಿಕ ಸ್ವಾರ್ಥವೆ ಬದುಕಿನ ಅಂತಿಮ ಗಂತವ್ಯವಲ್ಲ. ಕೆಲವು ಸಂಗತಿಗಳನ್ನು ಮಾರುಕಟ್ಟೆಯಿಂದ ಪಡೆದುಕೊಳ್ಳುವುದು ಸಾಧ್ಯವಿಲ್ಲ. ಬದುಕು ಅನ್ನೋದು ಮೌಲ್ಯಗಳ, ಮೌಲ್ಯಗಳಿಗೆ ಬದ್ದವಾದ ಸಂಗತಿಯಾಗಿದೆ. ಅವು ಮಾರಾಟ ಮಾಡಬಲ್ಲ ಅಥವಾ ಒಂದನ್ನು ಮತ್ತೊಂದಕ್ಕೆ ಬದಲಾಯಿಸಿಕೊಳ್ಳಬಲ್ಲ ಸಂಗತಿಗಳಲ್ಲ. ಸಂಪಾದನಾ ದುಡಿಮೆಗೆ ಸಂಬಂಧಿಸಿದ ಉತ್ಪಾದನೆಯನ್ನು ಮಾತ್ರ ಪರಿಗಣಿಸುವ ಅರ್ಥಶಾಸ್ತ್ರವು ಜನರ ಬದುಕನ್ನು ಸಂಪೂರ್ಣವಾಗಿ ಒಳಗೊಳ್ಳುವುದು ಸಾಧ್ಯವಿಲ್ಲ. ಜನರ ವರ್ತನೆಯೆನ್ನುವುದು, ವಿವೇಕಯುತ, ವೈಚಾರಿಕ ವರ್ತನೆಯೆನ್ನುವುದು ಮೌಲ್ಯಗಳಿಗೆ ಬದ್ದವಾಗಿರಬೇಕು. ಅದು ಮಾರುಕಟ್ಟೆ ನಿಯಮಗಳಿಗೆ ಬದ್ಧವಾಗಿ ನಡೆಯುವ ಸಂಗತಿ ಮಾತ್ರವಾಗಿ ಬಿಡಬಾರದು. ಅಲ್ಲಿ ವಿಶ್ವಾಸ, ನಂಬಿಕೆ, ಅನುಕಂಪ, ವಾತ್ಸಲ್ಯ ಮುಂತಾದ ಸಂಗತಿಗಳನ್ನು ಅಲಾಯದ ಮಾಡಿ ಸಮೃದ್ಧ ಬದುಕು ಮಾಡು ವುದು ಸಾಧ್ಯವಿಲ್ಲ. ಬದುಕಿನ ವಿದ್ಯಮಾನಗಳು, ಪ್ರಾಪಂಚಿಕ ಘಟನೆಗಳು ಯಂತ್ರದ ರೀತಿಯಲ್ಲಿ ನಿಯಮದ ಚೌಕಟ್ಟಿನಲ್ಲಿ ನಡೆಯುತ್ತವೆ ಎಂಬ ಅತ್ಯಂತ ಸಂಕುಚಿತ ವಿವರಣೆಯನ್ನು ಇಂದು ತಿರಸ್ಕರಿಸಲಾಗಿದೆ.

ಪ್ರಕರಣ

ಸಂಗೋಪನಾ ದುಡಿಮೆಯ ವ್ಯಾಖ್ಯೆ

ಮಾನವನ ಧಾರಣಾ ಸಾಮರ್ಥ್ಯವನ್ನು ನಿರ್ಧರಿಸುವ ಬಹುಮುಖ್ಯ ಸಂಗತಿಯೆಂದರೆ ಸಂಗೋಪನಾ ದುಡಿಮೆಯಾಗಿದೆ. ಸಂಗೋಪನಾ ದುಡಿಮೆಯಿಲ್ಲದೆ ಸುಖಮಯ-ಸಮೃದ್ದ ಬದುಕು ಎಂಬುದು ಸಾಧ್ಯವಿಲ್ಲ. ಸಂಗೋಪನೆಯೆಂಬುದು ಕೇವಲ ಸಂಪನ್ಮೂಲವಲ್ಲ. ಅದು ಅಭಿವೃದ್ಧಿಯ ಫಲವೂ ಹೌದು ಮತ್ತು ಅದು ಅಭಿವೃದ್ಧಿಯ ಉತ್ಪನ್ನವೂ ಹೌದು. ಆದರೆ ಅದು ಅಗೋಚರವಾಗಿರುತ್ತದೆ. ಜನರು ಸಮೃದವಾದ ಬದುಕನ್ನು ಸಾಗಿಸುವ ಪ್ರಕ್ರಿಯೆಯಲ್ಲಿ ಸಂಗೋಪನಾ ಚಟುವಟಿಕೆಗಳಾದ ಶುಶ್ರೂಷೆ, ಪಾಲನೆ, ಮನೆವಾರ್ತೆ, ಕಕ್ಕುಲತೆ ಮುಂತಾದವುಗಳ ಪಾತ್ರ ತುಂಬಾ ಮಹತ್ವದ್ದಾಗಿದೆ. ಇವು ಕೇವಲ ಮಕ್ಕಳಿಗೆ, ರೋಗಿಗಳಿಗೆ, ವೃದ್ದರಿಗೆ ಮಾತ್ರ ಸಂಬಂಧಿಸಿದ ಸಂಗತಿಗಳಲ್ಲ. ವಯಸ್ಕರಿಗೂ ಪಾಲನೆ, ಲಾಲನೆ, ಶುಶ್ರೂಷೆಯ ಅಗತ್ಯವಿರುತ್ತದೆ. ವಿಶ್ವಾಸದ ಸೆಲೆಯ ಅಗತ್ಯವಿರುತ್ತದೆ. ಭಾವನಾತ್ಮಕವಾಗಿ ವ್ಯಕ್ತಿಯೊಬ್ಬ ವ್ಯಕ್ತಿಯಾಗಿ ರೂಪುಗೊಳ್ಳಲು ಸಂಗೋಪನೆಯ ಪಾತ್ರ ತುಂಬಾ ಮಹತ್ವದ್ದಾಗಿದೆ. ಮಕ್ಕಳ ಆರೋಗ್ಯ, ಅವರ ಭಾವನಾತ್ಮಕ ಬೆಳವಣಿಗೆ, ಅವರ ವ್ಯಕ್ತಿತ್ವ, ಬೌದ್ಧಿಕ ಬೆಳವಣಿಗೆ, ನಾಗರಿಕ ಪ್ರಜ್ಞೆ ಮುಂತಾದವುಗಳು ಸಂಗೋಪನಾ ದುಡಿಮೆಯನ್ನು ಅವಲಂಬಿಸಿವೆ. ಮಕ್ಕಳ ಅಪೌಷ್ಟಿಕತೆಯ ನಿವಾರಣೆಯಲ್ಲಿ ಲಾಲನೆ-ಪಾಲನೆಯ ಪಾತ್ರ ಮಹತ್ವದ್ದಾಗಿದೆ. ಆಹಾರ, ಆರೋಗ್ಯ, ಅಕ್ಷರ, ಆಶ್ರಯ, ಆರೈಕೆ ಮುಂತಾದವುಗಳು ಜನರ ಬದುಕಾಗಿ ಪರಿವರ್ತನೆಗೊಳ್ಳುವಲ್ಲಿ ಸಂಗೋಪನಾ ದುಡಿಮೆಯು  ಮಹತ್ವದ ಪಾತ್ರ ನಿರ್ವಹಿಸುತ್ತವೆ. ಸರಕು, ಸಾಮಗ್ರಿ ಮತ್ತು ಸೇವೆಗಳು ಜನರ ಬದುಕಾಗಿ, ಜನರ ಧಾರಣಾ ಶಕ್ತಿಯಾಗಿ ಪರಿವರ್ತನೆಯಾಗುವ ಪ್ರಕ್ರಿಯೆಯನ್ನೇ ಅಭಿವೃದ್ಧಿಯೆಂದು ಕರೆಯಬಹುದು. ಈ ಪರಿವರ್ತನೆಯ ಪ್ರಕ್ರಿಯೆಯಲ್ಲಿ ಸಂಗೋಪನಾ ದುಡಿಮೆಯ ಪಾತ್ರ ತುಂಬಾ ಮಹತ್ವವಾದುದಾಗಿದೆ.

 ಸಂಗೋಪನಾ ದುಡಿಮೆ-ಶುಶ್ರೂಷಾ ದುಡಿಮೆಗಳಿಗೆ ಸಂಬಂಧಿಸಿದಂತೆ ಬಹಳ ಮುಖ್ಯವಾದ ಸಂಗತಿಯೆಂದರೆ ಅವುಗಳನ್ನು ಸರ್ವೆ ಸಾಮಾನ್ಯವಾಗಿ ನಿರ್ವಹಿಸುವವರು ಮಹಿಳೆಯರಾಗಿದ್ದಾರೆ. ಈ ಬಗೆಯ ದುಡಿಮೆಯನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಇದನ್ನೇ ಇಂದು ಲಿಂಗ ಸಂಬಂಧಿ ಶ್ರಮ ವಿಭಜನೆಯೆಂದು ಕರೆಯಲಾಗಿದೆ. ಈ ಬಗೆಯ ದುಡಿಮೆಯ ವಿಭಜನೆಯನ್ನು ಮತ್ತು ಇಂತಹ ಉತ್ಪಾದನೆಯ ವರ್ಗೀಕರಣ ವನ್ನು ಜೈವಿಕ ನಿಯತಿಯ ಆಧಾರದ ಮೇಲೆ ಮಾಡಲಾಗುತ್ತಿದೆ. ಅನೇಕ ಸ್ತ್ರೀವಾದಿಗಳು ವಿವರಿಸಿರುವಂತೆ ಇಂತಹ ವರ್ಗೀಕರಣವು ಸಾಮಾಜಿಕವಾಗಿ ಕಟ್ಟಿಕೊಂಡ ಸಂಗತಿ ಯಾಗಿದೆ. ಇದೊಂದು ಸಾಂಸ್ಕೃತಿಕ ರಚನೆಯಾಗಿದೆ. ಅದರ ಜೈವಿಕ ನಿಯತಿ ಆಧರಿತ ವಿವರಣೆಯು ಕೇವಲ ಪುರುಷಶಾಹಿಯು ರೂಪಿಸಿರುವ ಹುನ್ನಾರವಾಗಿದೆ. ಸಂಗೋಪನಾ ದುಡಿಮೆಯ ವ್ಯಾಪ್ತಿಯು ತುಂಬಾ ವಿಶಾಲವಾದುದು. ಅದನ್ನು ಕೇವಲ ಮನೆವಾರ್ತೆ, ಲಾಲನೆ, ಪಾಲನೆ, ಶುಶ್ರೂಷೆ, ಆರೈಕೆಗಳಿಗೆ ಮಾತ್ರ  ಸೀಮಿತಗೊಳಿಸು ವುದರಲ್ಲಿ ಅರ್ಥವಿಲ್ಲ. ಅದು ಇತರೆ ಅನೇಕ ಸಂಗತಿಗಳನ್ನು ಒಳಗೊಂಡಿದೆ. ಅನುಕಂಪ, ಮಮತೆ, ಪರೋಪಕಾರ, ನಿಸ್ವಾರ್ಥ ಸೇವೆ ಮುಂತಾದವುಗಳನ್ನು ಅದು ಒಳಗೊಂಡಿದೆ. ಸಂಗೋಪನಾ ದುಡಿಮೆಯನ್ನು ಕೇವಲ ಮನೆವಾರ್ತೆಗೆ ಸೀಮಿತಗೊಳಿಸಿಕೊಳ್ಳುವುದ ರಿಂದ ಅದರ ಮಹತ್ವ ಅರ್ಥವಾಗುವುದಿಲ್ಲ. ಇಂದು ಈ ಬಗೆಯ ಚಟುವಟಿಕೆಗಳು ಉದ್ಯೋಗದ ಸ್ವರೂಪ ಪಡೆದುಕೊಳ್ಳುತ್ತಿವೆ. ಶುಶ್ರೂಷೆೆಯೆಂಬುದು ಇಂದು ಬೃಹತ್ ಉದ್ದಿಮೆಯಾಗಿ ಬೆಳೆದು ಬಿಟ್ಟಿದೆ. ಅವು ಉದ್ಯೋಗದ ಸ್ವರೂಪ ಪಡೆದು ಬಿಟ್ಟರೆ ಅಲ್ಲಿ ಪುರುಷರು ಪ್ರವೇಶಿಸಿ ಬಿಡುತ್ತಾರೆ. ಅವು ಎಲ್ಲಿಯವರೆಗೆ ಸಂಗೋಪನೆಯ ಸ್ವರೂಪದಲ್ಲಿರುತ್ತವೆಯೋ ಅಲ್ಲಿಯವರೆಗೆ ಅವು ಕೇವಲ ಮಹಿಳೆಯರ ಗುತ್ತಿಗೆ ಯಾಗಿರುತ್ತವೆ.

ಸಂಗೋಪನಾ ದುಡಿಮೆಯನ್ನು ಖಾಸಗಿಯೆಂದು ಸಂಪಾದನಾ ದುಡಿಮೆಯು ಸಾರ್ವಜನಿಕವಾದುದೆಂದು ಪರಿಭಾವಿಸಿಕೊಳ್ಳಲಾಗಿದೆ . ಇದು ಸರಿಯಲ್ಲ. ಏಕೆಂದರೆ ಅತ್ಯಂತ ವ್ಯಕ್ತಿಗತವೆನ್ನಬಹುದಾದ ಸಂತಾನೋತ್ಪತ್ತಿ, ಮಕ್ಕಳ ಲಾಲನೆ, ಪಾಲನೆ, ಶುಶ್ರೂಷೆ ಮುಂತಾದವು ಕೂಡ ವಿಶಾಲ ಅರ್ಥದಲ್ಲಿ ಸಾರ್ವಜನಿಕವಾದ ಕಾರ್ಯಗಳಾಗಿವೆ. ಸಂತಾನೋತ್ಪತ್ತಿ, ಮಕ್ಕಳ ಲಾಲನೆ, ಪಾಲನೆ ಎಷ್ಟರಮಟ್ಟಿಗೆ ವ್ಯಕ್ತಿಗತ ಸಂಗತಿಗಳಾಗಿವೆಯೊ ಅಷ್ಟರಮಟ್ಟಿಗೆ ಅವು ಸಾಮಾಜಿಕ ಜವಾಬುದಾರಿಗಳಾಗಿವೆ. ಸಮಾಜದ ಸುಸ್ಥಿರಗತಿ ಬೆಳವಣಿಗೆಯಲ್ಲಿ ಸಂತಾನೋತ್ಪತ್ತಿ-ಸಂಗೋಪನೆಯ ಕಾರ್ಯ-ಕೊಡುಗೆ ಮಹತ್ವದ್ದಾಗಿದೆ. ಮಹಿಳೆಯರು ಅದನ್ನು ವ್ಯಕ್ತಿಗತವೆಂದು ನಿಭಾಯಿಸುತ್ತಿದ್ದರೂ ಅಲ್ಲಿನ ಸಾಮಾಜಿಕ ಆಯಾಮವನ್ನು ನಾವು ಗುರುತಿಸದಿದ್ದರೆ ತಪ್ಪಾಗುತ್ತದೆ. ಸಂಗೋಪನೆಯ ದುಡಿಮೆಯಲ್ಲಿ ಮಹಿಳೆಯರಿಗೆ ಸಂತೋಷ ದೊರೆಯುತ್ತದೆ, ನಿಜ. ಆದರೆ ಅದನ್ನು ನಿಭಾಯಿಸುವ ಮಹಿಳೆಯರಿಂದ ಅವು ಸಮಯ, ಶ್ರಮ ಮತ್ತು ಮಾನಸಿಕ ಬದ್ಧತೆಯನ್ನು ಬಯಸುತ್ತವೆ. ಮಕ್ಕಳ ಪೌಷ್ಟಿಕತೆಯಲ್ಲಿ ತಾಯಂದಿರ ಲಾಲನೆ-ಪಾಲನೆಗಳ ಪಾತ್ರ ಮಹತ್ವವಾದುದೆಂದು ಅನೇಕ ಅಧ್ಯಯನಗಳು ದೃಢಪಡಿಸಿವೆ.

 ಸಂಪಾನೆಯಿಲ್ಲದ ದುಡಿಮೆ ಮಾತ್ರ ಸಂಗೋಪನಾ ದುಡಿಮೆಯಲ್ಲ. ದುಡಿಮೆ, ಬದುಕು, ತೃಪ್ತಿ ಮುಂತಾದವುಗಳನ್ನು ಸಂಪಾದನೆಗೆ ಸೀಮಿತಗೊಳಿಸಿರುವುದು ಸಾಂಪ್ರದಾಯಿಕ ಅರ್ಥಶಾಸ್ತ್ರದ ಬಹುಮುಖ್ಯ ಮಿತಿಯಾಗಿದೆ. ಈ ದುಡಿಮೆಯು ದುಡಿಮೆಗಾರರಿಂದ ಅನುಕಂಪ, ಮಮತೆ, ಪರೋಪಕಾರಿ ಮನೋಧರ್ಮ, ಅನುರಾಗ, ಸಾಂತ್ವನ ಮುಂತಾದವುಗಳನ್ನು ಬಯಸುತ್ತದೆ. ಆದ್ದರಿಂದ ಇವುಗಳನ್ನು ಅರ್ಥಶಾಸ್ತ್ರದಲ್ಲಿ ಪರಿಭಾವಿಸಿಕೊಂಡಿರುವಂತೆ ಉಚಿತ ಸರಕುಗಳೆಂದು ಪರಿಭಾವಿಸಿಕೊಳ್ಳುವುದು ಸಾಧುವಲ್ಲ.

ಸಂಗೋಪನಾ ದುಡಿಮೆ-ಪರೋಪಕಾರ ಮುಂತಾದವು ಜೈವಿಕವಾಗಿ ದತ್ತವಾದ ಸಂಗತಿಗಳೇನಲ್ಲ. ಈ ಗುಣಗಳನ್ನು ಜನರು ಪ್ರಜ್ಞಾಪೂರ್ವಕವಾಗಿ ಬೆಳೆಸಿಕೊಳ್ಳ ಬೇಕಾಗುತ್ತದೆ. ಅದನ್ನು ರೂಢಿಸಿಕೊಳ್ಳಬೇಕಾಗುತ್ತದೆ. ಈ ದುಡಿಮೆಗೆ ಸಂಬಂಧಿಸಿದಂತೆ ಶ್ರಮ ವಿಭಜನೆಯೆಂಬುದು ಅರ್ಥರಹಿತ ಸಂಗತಿಯಾಗಿದೆ. ಆದ್ದರಿಂದ ಸಂಗೋಪನಾ ದುಡಿಮೆಯೆಂಬುದನ್ನು ಮಹಿಳೆಯರಿಗೆ ಸೀಮಿತಗೊಳಿಸುವುದು ತರವಲ್ಲ. ಅವುಗಳನ್ನು ಮಹಿಳೆಯರು ನಿರ್ವಹಿಸುತ್ತಿದ್ದಾರೆ ಎಂಬ ಕಾರಣಕ್ಕೆ ಅವುಗಳನ್ನು ಮಹಿಳೆಯರಿಗೆ ಅಂಟಿಸುವುದು ನ್ಯಾಯವಲ್ಲ. ಅವುಗಳನ್ನು ಪುರುಷರೂ ಹಂಚಿಕೊಳ್ಳಬಹುದಾಗಿದೆ ಹಾಗೂ ನಿರ್ವಹಿಸಬಹುದಾಗಿದೆ.



[1]       ಸರಕು-ಸಾಮಗ್ರಿಗಳು,ಉತ್ಪಾದನೆ, ಪೂರೈಕೆ ಮುಂತಾದವುಗಳಿಗಿಂತ ಅವುಗಳ ಮೇಲೆ ಜನರು ಸಾಧಿಸುವ ಹಕ್ಕುದಾರಿಕೆಯು ಮುಖ್ಯವೆಂಬುದನ್ನು ಅಮರ್ತ್ಯಸೆನ್ ತನ್ನ ಬರಹಗಳ ಮೂಲಕ, ತನ್ನ ನಿರ್ವಚನದ ಮೂಲಕ, ತನ್ನ ತತ್ವಗಳ ಮೂಲಕ ಪ್ರತಿಪಾದಿಸುತ್ತಿದ್ದಾನೆ. ಇದಕ್ಕೆ ಸಂಬಂಧಿಸಿದಂತೆ ಅವನು ಹಕ್ಕುದಾರಿಕೆಯ ನಿಯಮವನ್ನು ರೂಪಿಸಿದ್ದಾನೆ (ಎನ್‌ಟೈಟಲ್‌ಮೆಂಟ್ ಪ್ರಿನ್ಸಿಫಲ್:೧೯೮೧). ಈ ನಿಯಮದ ಮೂಲಕ ಅವನು ಉತ್ಪಾದನೆಯಲ್ಲಿನ ಸಾಮಾಜಿಕ-ರಾಜಕೀಯ ಆಯಾಮಗಳನ್ನು ಅರ್ಥಶಾಸ್ತ್ರದ ಚೌಕಟ್ಟಿನೊಳಗೆ ತರಲು ಪ್ರಯತ್ನಿಸುತ್ತಿದ್ದಾನೆ. ಸರಕು-ಸಾಮಗ್ರಿಗಳ ಲಭ್ಯತೆಯೇ ಅಭಿವೃದ್ಧಿಯ ಮಾನದಂಡವಲ್ಲ. ಅವುಗಳನ್ನು ಪಡೆದುಕೊಳ್ಳಬಲ್ಲ ಜನರ ಹಕ್ಕುದಾರಿಕೆ ಇಲ್ಲಿ ಮುಖ್ಯವಾಗುತ್ತದೆ.

[2]       ಸರಕು-ಸಾಮಗ್ರಿಗಳನ್ನು ಏಕಾತ್ಮಕವಾಗಿ, ಏಕ ಪ್ರಕಾರವಾಗಿ ಪರಿಭಾವಿಸಿಕೊಳ್ಳುವುದಕ್ಕೆ ಪ್ರತಿಯಾಗಿ ಅವುಗಳನ್ನು ಬಹುಳಾಕಾರಿಯಾಗಿ, ವಿವಿಧ ಪ್ರಕಾರಗಳಾಗಿ ಪರಿಭಾವಿಸಿ ಕೊಳ್ಳುವುದಕ್ಕೆ ಈ ನಿರ್ವಚನದಲ್ಲಿ ಜೂಲಿ ಜಾನ್‌ಸನ್ ಪ್ರಯತ್ನಿಸಿದ್ದಾಳೆ. ಸಂಪಾದನೆ-ಸಂಗೋಪನೆ ಹೀಗೆ ಎರಡು ವಿಭಾಗಗಳಲ್ಲಿ ಉತ್ಪಾದನೆ ನಡೆಯುತ್ತದೆಯೆಂಬ ಧೋರಣೆಯ ನೆಲೆಯಿಂದ ಅವಳು ತನ್ನ ಅರ್ಥಶಾಸ್ತ್ರದ ವ್ಯಾಖ್ಯೆಯನ್ನು ರೂಪಿಸಿದ್ದಾಳೆ. ಸರಕು-ಸಾಮಗ್ರಿಗಳ ಗುಣಾತ್ಮಕ ಭಿನ್ನತೆಯೆಂಬ ನುಡಿಗಟ್ಟು ಸಂಪಾದನಾ ನೆಲೆಯ ಉತ್ಪಾದನೆ ಮತ್ತು ಸಂಗೋಪನಾ ನೆಲೆಯ ಉತ್ಪಾದನೆಗಳೆರಡನ್ನೂ ಒಳಗೊಳ್ಳುತ್ತದೆ.

[3]       ವಿವೇಕಯುತ ವರ್ತನೆ, ವೈಚಾರಿಕ ವರ್ತನೆ ಎಂಬುದನ್ನು ಇಲ್ಲಿ rational behaviour’ಗೆ ಸಮಾನ ಅರ್ಥದಲ್ಲಿ ಬಳಸಲಾಗಿದೆ. ಸಂಪಾದನಾ ದುಡಿಮೆಯ ಬಹುಮುಖ್ಯ ಲಕ್ಷಣ ಇದಾಗಿದೆ. ಇದನ್ನು ಬಲವಾಗಿ ಟೀಕಿಸುವ ಐರನಿ ವಾನ್ ಸ್ಟೆವರಿನ್ ಅದಕ್ಕೆ ಪ್ರತಿಯಾಗಿ ಜನರು ಮೌಲ್ಯಗಳಿಗೆ ಬದ್ದರಾಗಿ ಬದುಕುವುದು ಮುಖ್ಯವೆನ್ನುತ್ತಾಳೆ. ಅದು ನಮ್ಮ ಬದುಕಿನ ಕೈಪಿಡಿಯಾಗಬೇಕು. ಮೌಲ್ಯಗಳಿಗೆ ಬದ್ಧವಾದ ಬದುಕೆಂದರೆ ಅದು ಸಂಪಾದನೆ ಜೊತೆಗೆ ಸಂಗೋಪನೆಯನ್ನು ಒಳಗೊಳ್ಳುತ್ತದೆ. ಆದರೆ rational behaviour ಎಂಬುದು ಸಂಗೋಪನಾ ದುಡಿಮೆಯನ್ನು ಒಳಗೊಳ್ಳು ವುದಿಲ್ಲ. ಆದ್ದರಿಂದ ಅದು ಅಪೂರ್ಣ.

[4]       ಜೈವಿಕ ನಿಯತಿಯ ಆಧಾರದ ಮೇಲೆ ಚಟುವಟಿಕೆಗಳನ್ನು ವರ್ಗೀಕರಿಸುವ ಕ್ರಮವನ್ನು ಲಿಂಗ ಸಂಬಂಧಿ ಶ್ರಮ ವಿಭಜನೆಯೆನ್ನಬಹುದು. ವಾಸ್ತವವಾಗಿ ಇಂತಹ ವರ್ಗೀಕರಣಕ್ಕೆ ಯಾವುದೆ ಅರ್ಥವಿಲ್ಲ. ಈ ಬಗೆಯ ವರ್ಗಿಕರಣವನ್ನು ಸಾಮಾಜಿಕ ನೆಲೆಯಿಂದ ಪರಿಭಾವಿಸಿಕೊಳ್ಳಬೇಕಾಗಿದೆ. ಇಲ್ಲಿ ಮಹಿಳೆಯರು ನಿರ್ವಹಿಸುವ ಚಟಿವಟಿಕೆಗಳು ಸಾಮಾನ್ಯವಾಗಿ ಕ್ರಯ ರಹಿತವೆಂದು ಭಾವಿಸಲಾಗಿದೆ. ಆದರೆ ಅವು ಕ್ರಯರಹಿತವಾಗಿರ ಬೇಕಾಗಿಲ್ಲ. ಇಂದು ಶುಶ್ರೂಷಾ ಚಟುವಟಿಕೆಗಳು ಆರ್ಥಿಕ ಮಹತ್ವ ವನ್ನು ಮತ್ತು ಉದ್ಯೋಗದ ಸ್ವರೂಪವನ್ನು ಪಡೆದುಕೊಂಡು ಬಿಟ್ಟಿವೆ.ಇಲ್ಲಿ ತಾಯಿಯ ವಾತ್ಸಲ್ಯದ ಅಗತ್ಯವಿದೆ, ನಿಜ. ಆದರೆ ಅದು ಕ್ರಯರಹಿತವಾಗಿರಬೇಕಾಗಿಲ್ಲ. ಇವು ಮಹಿಳೆಯರಿಗೆ ದುಡಿಮೆಯ ಆಕರಗಳಾಗಬಹುದು.