ಸಾಂಪ್ರದಾಯಿಕ-ಅಭಿಜಾತವಾದಿ ಅಭಿವೃದ್ಧಿ ಸಿದ್ಧಾಂತಗಳನ್ನು ಸಾಮಾನ್ಯವಾಗಿ ಲಿಂಗ ನಿರಪೇಕ್ಷ ಸಿದ್ಧಾಂತಗಳೆಂದು ಕರೆಯಲಾಗಿದೆ. ಏಕೆಂದರೆ ಅವು ಮಹಿಳೆಯರು ನಿರ್ವಹಿಸುತ್ತಿರುವ ಅನೇಕ ಮನೆವಾರ್ತೆ ಚಟುವಟಿಕೆಗಳನ್ನು ಅರ್ಥಶಾಸ್ತ್ರದ-ಅಭಿವೃದ್ಧಿಯ ಪರಿಧಿಯಿಂದ ಹೊರಗಿಟ್ಟಿವೆ.ಮಹಿಳೆಯರ ಸ್ಥಿತಿಗತಿಗಳನ್ನು ಅಲ್ಲಿ ವಿಶ್ಲೇಷಿಸಲು ಸಾಧ್ಯವಿಲ್ಲ. ಮಹಿಳೆಯರ ದುಡಿಮೆಯನ್ನು ಸಂಗೋಪನಾ ದುಡಿಮೆಯೆಂದೂ ಮತ್ತು ಪುರುಷರು ಮಾತ್ರ ಸಂಪಾದನಾ ದುಡಿಮೆಯನ್ನು ಮಾಡಬಲ್ಲರೆಂದೂ ಅವು ಪ್ರತಿಪಾದಿಸಿಕೊಂಡು ಬರುತ್ತಿವೆ. ಅಭಿವೃದ್ಧಿ ಕುರಿತ ಸಿದ್ಧಾಂತಗಳಲ್ಲಿ ಮಹಿಳೆಯರ ಸಂಗತಿಯನ್ನು ಪ್ರತ್ಯೇಕವಾದ ಮಹತ್ವವಾದ ಸಂಗತಿಯೆಂದು ಪರಿಗಣಿಸುವುದರ ಬಗ್ಗೆ ಅಲ್ಲಿ ಹಿಂಜರಿಕೆಯಿದೆ. ಇಲ್ಲಿ ಮಹಿಳೆಯರ ಪಾತ್ರವು ಪ್ರಾಸಂಗಿಕವಾಗಿದೆ ಮತ್ತು ಆನುಷಂಗಿಕವಾಗಿದೆ. 

ವರಮಾನ ವರ್ಧನಾ ಅಭಿವೃದ್ಧಿ ಪ್ರಣಾಳಿಕೆಯಲ್ಲಿ ಮಹಿಳೆಯರ ದುಡಿಮೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಈ ಲಿಂಗ ನಿರಪೇಕ್ಷ ಧೋರಣೆ ಬಗ್ಗೆ ತೀವ್ರ ಟೀಕೆಗಳು ಕೇಳಿಬರುತ್ತಿವೆ. ಇದರ ಹಿನ್ನೆಲೆಯಲ್ಲಿ ಮಹಿಳೆಯರ ದುಡಿಮೆಯನ್ನು ಉತ್ಪಾದನಾ ದುಡಿಮೆಯೆಂದು ಪರಿಗಣಿಸುವ ಲಿಂಗ ಸ್ಪಂದಿ ಅಭಿವೃದ್ಧಿ ಸಿದ್ಧಾಂತವನ್ನು ರೂಪಿಸುವ ಪ್ರಯತ್ನಗಳು ನಡೆಯುತ್ತಿವೆ. ಜನರ ಧಾರಣಾ ಸಾಮರ್ಥ್ಯವನ್ನು ಆಧರಿಸಿದ ಮಾನವ ಅಭಿವೃದ್ಧಿ ವಿಚಾರ ಪ್ರಣಾಳಿಕೆಯು ಮಹಿಳೆಯರ ದುಡಿಮೆಯನ್ನು ಅಂದರೆ ಅವರ ಸಂಗೋಪನಾ ಚಟುವಟಿಕೆಗಳನ್ನು ಅಭಿವೃದ್ಧಿ ಸಿದ್ಧಾಂತದಲ್ಲಿ ವೀಲಿನಗೊಳಿಸುವ ಬಗ್ಗೆ ಪ್ರಯತ್ನವನ್ನು ನಡೆಸುತ್ತಿದೆ. ಪ್ರಸ್ತುತ ಈ ಭಾಗದಲ್ಲಿ ಅಭಿವೃದ್ಧಿಯ ಲಿಂಗ ಸಂಬಂಧಿ ನೆಲೆಗಳನ್ನು ಸ್ಥೂಲವಾಗಿ ಗುರುತಿಸುವ ಪ್ರಯತ್ನ ಮಾಡಲಾಗಿದೆ. ಕರ್ನಾಟಕ ವನ್ನು ಮುಖ್ಯವಾಗಿ ಗಮನದಲ್ಲಿಟ್ಟುಕೊಂಡು ಇಲ್ಲಿನ ಪ್ರಬಂಧವನ್ನು ಕಟ್ಟಲಾಗಿದೆ.

ಅಭಿವೃದ್ಧಿಯ ಪ್ರಕ್ರಿಯೆಯಲ್ಲಿ ಮಹಿಳೆಯು ಜೈವಿಕ ಘಟಕವೋ ಅಥವಾ ಸಾಮಾಜಿಕ ಘಟಕವೋ?

ಇದು ಬಹಳ ಮುಖ್ಯವಾದ ಪ್ರಶ್ನೆಯಾಗಿದೆ. ಲಾಗಾಯ್ತಿನಿಂದ ಮಹಿಳೆಯರನ್ನು ಜೈವಿಕ ಘಟಕಗಳಾಗಿ ಪರಿಭಾವಿಸಿಕೊಂಡು ಬರಲಾಗಿದೆ. ಅವರ ಕಾರ್ಯಕ್ಷೇತ್ರವನ್ನು ಖಾಸಗಿಯೆಂದು ಪರಿಭಾವಿಸಿಕೊಂಡು ಅವರನ್ನು ಮನೆಯೊಳಗಿನ ಚಟುವಟಿಕೆಗಳಿಗೆ ಮಾತ್ರ ಮೀಸಲಿಡಲಾಗಿದೆ. ಮಹಿಳೆಯರನ್ನು ಕುಟುಂಬಕ್ಕೆ, ಗಂಡನಿಗೆ, ಮಕ್ಕಳಿಗೆ ಸಂವಾದಿಯಾಗಿ ಪರಿಭಾವಿಸಿಕೊಳ್ಳಲಾಗಿದೆ. ಅವಳಿಗೆ ತನ್ನದೇ ಆದ ಅಸ್ತಿತ್ವವಿದೆ ಎಂಬುದನ್ನು ಒಪ್ಪಿಕೊಳ್ಳಲು ಜನರು ಮತ್ತು ಸಮಾಜ ಸಿದ್ದವಿಲ್ಲ. ಹೀಗೆ ಕುಟುಂಬಕ್ಕೆ ಅವಳನ್ನು ಸಂವಾದಿಯನ್ನಾಗಿ ಮಾಡುವ ಕ್ರಮವು ಅವರು ಹುಟ್ಟಿದಾರಂಭದಿಂದಲೆ ಶುರುವಾಗುತ್ತದೆ. ಉದಾಹರಣೆಗೆ ನಮ್ಮ ಸಮಾಜದಲ್ಲಿ ಎಳೆ ಕೂಸು ಅಳುವ ಪರಿಯನ್ನು ಪರಿಭಾವಿಸಿಕೊಳ್ಳುವ ಕ್ರಮವು ಇದಕ್ಕೆ ಒಳ್ಳೆಯ ಸಾಕ್ಷಿಯಾಗಬಹುದಾಗಿದೆ. ಅಳುವ ಮಗು ಹೆಣ್ಣಾಗಿದ್ದರೆ ಅದು ಹೆದರಿಅಳುತ್ತಿದೆಯೆಂತಲೂ ಮತ್ತು ಅದು ಗಂಡು ಮಗುವಾಗಿದ್ದರೆ ಕೋಪದಿಂದ ಅಳುತ್ತಿದೆಯೆಂತಲೂ ಭಾವಿಸಲಾಗುತ್ತದೆ. ಕೋಪ ವೆಂಬುದು ಪುರುಷ ಲಕ್ಷಣವೆಂತಲೂ ಮತ್ತು ಹೆದರಿ ಮುದುಡಿಕೊಂಡಿರುವುದು ಮಹಿಳೆಯರ ಲಕ್ಷಣವೆಂತಲೂ ಪರಿಗಣಿಸಲಾಗಿದೆ. ಅವು ಕೇವಲ ಲಕ್ಷಣಗಳಾಗಿ ಉಳಿದಿಲ್ಲ. ಅವು ಸಾಮಾಜಿಕ ಮೌಲ್ಯಗಳ ಸ್ಥಾನವನ್ನು ಪಡೆದುಕೊಂಡುಬಿಟ್ಟಿವೆ.  ಇದು ನಮ್ಮ ಮಕ್ಕಳನ್ನು ಬೆಳೆಸುತ್ತಿರುವ ಾಮಾಜಿಕೀಕರಣದ ಒಂದು ನಿದರ್ಶನವಾಗಿದೆ. ಇಂತಹ ಅನೇಕ ಇತರೆ ನಿದರ್ಶನಗಳನ್ನು ನೀಡಲು ಸಾಧ್ಯ. ಈ ಬಗೆಯ ಸಾಮಾಜಿಕೀ ಕರಣದಿಂದಾಗಿ ಕೋಪವು ಪುರುಷರ ಗುತ್ತಿಗೆಯಾಗಿ ಭಯ, ಸೌಮ್ಯ ಸ್ವಭಾವ, ಸಂಯಮಶೀಲ ನಡತೆ ಮತ್ತು ಸಹನಶೀಲತೆ’ಯು ಮಹಿಳೆಯರ ಸ್ವತ್ತಾಗಿಬಿಟ್ಟಿದೆ. ಹೀಗೆ ಜನರ ಅಂತರ್ಗತ ಗುಣಗಳನ್ನು ಲಿಂಗ ಸಂಬಂಧಿ ನೆಲೆಗಳಲ್ಲಿ ವರ್ಗೀಕರಿಸುವುದ ರಿಂದಾಗಿ ಮಹಿಳೆಯರು ಅನೇಕ ಅನ್ಯಾಯಗಳಿಗೆ ಒಳಗಾಗಬೇಕಾಗಿದೆ. ಈ ಬಗೆಯ ವರ್ಗೀಕರಣದಿಂದಾಗಿ ಮಹಿಳೆಯರಿಗೆ ಮಾತ್ರವಲ್ಲ, ಇಡೀ ಸಮಾಜಕ್ಕೆ ಹಾನಿ ಉಂಟಾಗಿದೆ. ಇಂದಿನ ನಮ್ಮ ಸಮಾಜದ ಸಂದರ್ಭದಲ್ಲಿ ಸಂಯಮಶೀಲ ನಡತೆಯು ಎಲ್ಲರಿಗೂ ಅಗತ್ಯವಾಗಿದೆ. ಆದರೆ ಅದನ್ನು ಪೋಷಿಸುವ ಕೆಲಸ ಇಂದು ಸಮರ್ಪಕವಾಗಿ ನಡೆಯುತ್ತಿಲ್ಲ. ಅದನ್ನು ಮಹಿಳೆಯರಿಗೆ ಮಾತ್ರ ಮೀಸಲಿಡಲಾಗಿದೆ. ಇದರಿಂದ ಪುರುಷಶಾಹಿ ಸಮಾಜವು ಹೆಚ್ಚು ಹೆಚ್ಚು ಅಸಹನೆಯನ್ನು ಮತ್ತು ಅಸಹಿಷ್ಣತೆಯನ್ನು ಮೈಗೂಡಿಸಿಕೊಳ್ಳುತ್ತಿದೆ.

ಮಹಿಳೆಯರನ್ನು ಜೈವಿಕ ಘಟಕವಾಗಿ ಪರಿಭಾವಿಸಿಕೊಳ್ಳುವುದರ ಹಿಂದೆ ಪುರುಷಶಾಹಿಯ ಪಾತ್ರವಿದೆ. ಸಂತಾನೋತ್ಪತ್ತಿಯೆಂಬುದು ಪ್ರಧಾನವಾಗಿ ಸಾಮಾಜಿಕ ವಾದ ಹೊಣೆಗಾರಿಕೆಯಾಗಿದೆ. ಮಹಿಳೆಯರು ಸಾಮಾಜಿಕವಾದ ಜವಾಬುದಾರಿಯನ್ನು ಸಂತಾನೋತ್ಪತ್ತಿ ಮೂಲಕ ನಿಭಾಯಿಸುತ್ತಿದ್ದಾರೆ. ಇದನ್ನು ಪ್ರಕೃತಿಗೆ ಸಂವಾದಿಯನ್ನಾಗಿ ಮಾಡುವುದು ಸರಿಯಲ್ಲ. ಮಕ್ಕಳಿಗೆ ಜನ್ಮ ನೀಡುವುದರ ಮೂಲಕ ಮಹಿಳೆಯರು ಸಾಮಾಜಿಕ ಹೊಣೆಗಾರಿಕೆಯನ್ನು ನಿಭಾಯಿಸುತ್ತಿದ್ದಾರೆ. ಇದನ್ನು ಜೈವಿಕವೆಂದೂ, ಪ್ರಾಕೃತಿಕವೆಂದೂ, ನೈಸರ್ಗಿಕವೆಂದೂ, ಖಾಸಗಿಯಾದುದೆಂದೂ ಪರಿಗಣಿಸುವುದರ ಮೂಲಕ ಮಹಿಳೆಯರಿಗೆ ಅನ್ಯಾಯ ಮಾಡಲಾಗುತ್ತ್ತಿದೆ.

ಸಂತಾನೋತ್ಪತ್ತಿ ಜವಾಬುದಾರಿಯನ್ನು, ಸಂಗೋಪನಾ ಜವಾಬುದಾರಿಯನ್ನು ಮಹಿಳೆಯರಿಗೆ ಸಂಪೂರ್ಣವಾಗಿ ವಹಿಸಿಕೊಟ್ಟು ಪುರುಷರು ಅದಕ್ಕೆ ಸಂಬಂಧಿಸಿದ ಜವಾಬುದಾರಿಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಈ ಜವಾಬುದಾರಿಯನ್ನು ಪುರುಷರೂ ನಿರ್ವಹಿಸುವ ಅಗತ್ಯವಿದೆ. ಮಹಿಳೆಯರು ಸಂತಾನೋತ್ಪತ್ತಿ ಜವಾಬುದಾರಿಯನ್ನು ಸಮರ್ಪಕವಾಗಿ ನಿಭಾಯಿಸಲು ಅಗತ್ಯವಾದ ಸಾಮಾಜಿಕ ಸೌಲಭ್ಯಗಳನ್ನು ಸರಿಯಾಗಿ ನೀಡಲಾಗುತ್ತಿಲ್ಲ. ಹೀಗೆ ಹೇಳಿದ ಮಾತ್ರಕ್ಕೆ ಸಂತಾನೋತ್ಪತ್ತಿಯನ್ನು ಜೈವಿಕತೆಯ ಚೌಕಟ್ಟಿನಿಂದ ಬೇರ್ಪಡಿಸುವುದು ಸಾಧ್ಯವಿಲ್ಲ. ಅಲ್ಲಿ ಜೈವಿಕತೆಯ ಸಂಗತಿಯಿದೆ. ಆದರೆ ಅದು ನೂರಕ್ಕೆ ನೂರರಷ್ಟು ಜೈವಿಕವಾದುದಲ್ಲ. ಸಮಾಜದಲ್ಲಿ ಮಾನವ ಜನಾಂಗದ ಮುಂದುವರಿಕೆಗೆ ಮಹಿಳೆಯರು ಸಂತಾನೋತ್ಪತ್ತಿ ಜವಾಬುದಾರಿಯನ್ನು ನಿರ್ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ಮಹಿಳೆಯರನ್ನು ಅವರು ನಿರ್ವಹಿಸು ತ್ತಿರುವ ಸಂತಾನೋತ್ಪತ್ತಿ ಜವಾಬುದಾರಿಯನ್ನು ಪರಿಭಾವಿಸಿಕೊಳ್ಳಬೇಕಾಗಿದೆ. ಅವರನ್ನು ಕೇವಲ ಜೈವಿಕ ಘಟಕವಾಗಿ ಪರಿಭಾವಿಸಿಕೊಳ್ಳುವುದರಿಂದ ಅವರಿಗೆ ಮತ್ತು ಸಮಾಜಕ್ಕೆ ಅನ್ಯಾಯವಾಗುತ್ತದೆ. ಮನುಜ ಸಂತತಿಯನ್ನು ಮುಂದುವರಿಸುವುದು ಕೇವಲ ಜೈವಿಕ ವಾದ ಜವಾಬುದಾರಿ ಮಾತ್ರವಲ್ಲ ಮತ್ತು ಅದು ಮಹಿಳೆಯರ ಹೊಣೆಗಾರಿಕೆ ಮಾತ್ರವಾಗ ಬಾರದು. ಅಲ್ಲಿ ಸಾಮಾಜಿಕತೆಯ ಸಂಗತಿ ಅಡಗಿದೆ. ಅದನ್ನು ಪುರುಷರು ಹಂಚಿಕೊಳ್ಳ ಬೇಕಾಗಿದೆ.

ಮಹಿಳೆಗೆ ಸಾಮಾಜಿಕ ಅಸ್ತಿತ್ವವನ್ನು ನೀಡುವಲ್ಲಿ ನಮ್ಮ ಸಮಾಜ ಸಿದ್ಧವಿಲ್ಲ. ಖಾಸಗಿ-ಸಾರ್ವಜನಿಕವೆಂಬ ವರ್ಗೀಕರಣದಲ್ಲಿ ಮಹಿಳೆಯರಿಗೆ ಖಾಸಗಿ ಕ್ಷೇತ್ರವನ್ನು ಮೀಸಲಿಡಲಾಗಿದೆ. ಅವರಿಗೆ ಯಾವುದೆ ಸಾರ್ವಜನಿಕ ಅವಕಾಶವನ್ನು ನೀಡಿಲ್ಲ. ಅಂದರೆ ಅವಳನ್ನು ಸಾಮಾಜಿಕ ಘಟಕವೆಂದು ಒಪ್ಪಿಕೊಳ್ಳುವಲ್ಲಿ ಅನೇಕ ಸಮಸ್ಯೆಗಳಿವೆ. ಮಹಿಳೆಯನ್ನು ಜೈವಿಕ ಘಟಕವೆಂದು ಪರಿಗಣಿಸಿರುವುದರಿಂದ ಅವರು ಅನೇಕ ಅವಕಾಶಗಳಿಂದ ವಂಚಿತರಾಗಿದ್ದಾರೆ. ಅವರ ಬದುಕು ಕೇವಲ ಸಂತಾನೋತ್ಪತ್ತಿಗೆ ಸೀಮಿತವಾಗಿಬಿಟ್ಟಿದೆ. ಇದರಿಂದಾಗಿ ಮಹಿಳೆಯರು ಅನೇಕ ನಾಗರಿಕ ಹಕ್ಕುಗಳಿಂದ ವಂಚಿತರಾಗಿದ್ದಾರೆ. ಜೈವಿಕ ನಿಯತಿಯ ಚೌಕಟ್ಟಿಗೆ ಮಹಿಳೆಯರನ್ನು ಕಟ್ಟಿಹಾಕಿದರೆ ಅವರ ಸ್ವಾತಂತ್ರ್ಯದ ವ್ಯಾಪ್ತಿ, ಅವರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಲಭ್ಯವಿರುವ ಅವಕಾಶಗಳ ವ್ಯಾಪ್ತಿ ಸೀಮಿತವಾಗಿ ಬಿಡುತ್ತದೆ.  ಮಹಿಳೆಯರನ್ನು ಪ್ರಜೆಗಳೆಂದು ಒಪ್ಪಿಕೊಳ್ಳುವಲ್ಲಿಯೂ ಸಮಾಜಗಳು ಹಿಂದೆ ಮುಂದೆ ನೋಡುತ್ತಿವೆ.

ಕುಸಿಯುತ್ತಿರುವ ಲಿಂಗ ಅನುಪಾತ

ಅಮರ್ತ್ಯಸೆನ್ ಸಮಾಜದಲ್ಲಿ ನೆಲೆಗೊಂಡಿರುವ ಲಿಂಗ  ತಾರತಮ್ಯವನ್ನು ಲಿಂಗ ಅನುಪಾತದ ಮೂಲಕ ಮಾಪನ ಮಾಡುತ್ತಾನೆ. ಸಮಾಜದಲ್ಲಿ ಮಹಿಳೆಯರು ಮತ್ತು ಪುರುಷರ ನಡುವೆ ಸಮಾನತೆ ಇದ್ದ ಪಕ್ಷದಲ್ಲಿ ಲಿಂಗ ಅನುಪಾತವು ಸಾವಿರಕ್ಕಿಂತ ಅಧಿಕವಿರಬೇಕು. ಆದರೆ ಕರ್ನಾಟಕದಲ್ಲಿ ಲಿಂಗ ಅನುಪಾತವು ೨೦೦೧ರಲ್ಲಿ ೯೬೫ರಷ್ಟಿದೆ. ಅಂದರೆ ಇಲ್ಲಿ ಕಾಣೆಯಾದ ಮಹಿಳೆಯರ ಸಂಖ್ಯೆ ಪ್ರತಿ ಸಾವಿರಕ್ಕೆ ೩೫. ಇದಕ್ಕಿಂತ ಆತಂಕಕಾರಿಯಾದ ಸಂಗತಿಯೆಂದರೆ ೨೦೦೧ರಲ್ಲಿ ೦-೬ ವಯೋಮಾನದ ಮಕ್ಕಳ ಲಿಂಗ ಅನುಪಾತವು ತೀವ್ರಗತಿಯಲ್ಲಿ ಕುಸಿತಕ್ಕೆ ಒಳಗಾಗಿದೆ. ಅದು ೧೯೯೧ರ ೯೬೫ರಷ್ಟಿದ್ದುದು ೨೦೦೧ರಲ್ಲಿ ೯೫೦ಕ್ಕೆ ಇಳಿದಿದೆ. ಇದು ಸಮಾಜದಲ್ಲಿ ನೆಲೆಗೊಂಡಿರುವ ಲಿಂಗ ಅಸಮಾನತೆಯ ಸೂಚಿಯಾಗಿದೆ. ಇಲ್ಲಿನ ಮಹಿಳೆಯರ ಕೊರೆತೆಯನ್ನು ಅಮರ್ತ್ಯಸೆನ್ ಕಾಣೆಯಾದ ಮಹಿಳೆಯರು ಎಂದು ಕರೆದಿದ್ದಾನೆ. ಈ ದೃಷ್ಟಿಯಿಂದ ಕರ್ನಾಟಕದಲ್ಲಿ ಮೂರು ಜಿಲ್ಲೆಗಳಲ್ಲಿ ಮಾತ್ರ ಲಿಂಗ ಅನುಪಾತವು ಸಾವಿರಕ್ಕಿಂತ ಅಧಿಕವಾಗಿದೆ. ಅವು ಯಾವುವೆಂದರೆ ಉಡುಪಿ (೧೧೨೭), ದಕ್ಷಿಣ ಕನ್ನಡ (೧೦೨೩) ಮತ್ತು ಹಾಸನ (೧೦೦೫).ಈ ಮೂರು ಜಿಲ್ಲೆಗಳಲ್ಲೂ ೦-೬ ವಯೋಮಾನದ ಮಕ್ಕಳ ಲಿಂಗ ಅನುಪಾತವು ೧೯೯೧ ರಿಂದ ೨೦೦೧ರ ಅವಧಿಯಲ್ಲಿ ಕಡಿಮೆಯಾಗಿದೆ (ಟಿ.ಆರ್. ಚಂದ್ರಶೇಖರ : ೨೦೦೩). ಇದು ಆತಂಕಕ್ಕೆ ಕಾರಣವಾಗಿದೆ. ಒಟ್ಟು ಜನಸಂಖ್ಯೆಯ ಲಿಂಗ ಅನುಪಾತಕ್ಕಿಂತ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ ೦-೬ ವಯೋಮಾನದ ಮಕ್ಕಳ ಲಿಂಗ ಅನುಪಾತವು  ಕಡಿಮೆಯಿದೆ.ಕರ್ನಾಟಕದಲ್ಲಿನ ಜಿಲ್ಲಾವಾರು ಒಟ್ಟು ಜನಸಂಖ್ಯೆಯ ಮತ್ತು ೦-೬ ವಯೋಮಾನದ ಮಕ್ಕಳ ಲಿಂಗ ಅನುಪಾತದ ವಿವರಗಳನ್ನು ೧೯೯೧ ಮತ್ತು ೨೦೦೧ ಜನಗಣತಿಗೆ ಸಂಬಂಧಿಸಿದಂತೆ  ಅನುಬಂಧದಲ್ಲಿ ನೀಡಲಾಗಿದೆ (ನೋಡಿ:ಅನುಬಂಧ:೧).

ಒಟ್ಟು ಜನಸಂಖ್ಯೆಯ ಲಿಂಗ ಅನುಪಾತದ ದೃಷ್ಟಿಯಿಂದ ಅದು ೯೫೦ಕ್ಕಿಂತ ಕಡಿಮೆಯಿರುವ ಮತ್ತು ಸಮಸ್ಯಾತ್ಮಕವಾಗಿರುವ ಜಿಲ್ಲೆಗಳೆಂದರೆ ವಿಜಾಪುರ(೯೪೮), ಧಾರವಾಡ (೯೪೮), ಹಾವೇರಿ (೯೪೨) ಮತ್ತು ಬೀದರ್ (೯೪೮). ಅದೇ ರೀತಿಯಲ್ಲಿ ೦-೬ ವಯೋಮಾನದ ಮಕ್ಕಳ ಲಿಂಗ ಅನುಪಾತಕ್ಕೆ ಸಂಬಂಧಿಸಿದಂತೆ ಅದು ೯೪೦ಕ್ಕಿಂತ ಕಡಿಮೆಯಿರುವ ಜಿಲ್ಲೆಗಳೆಂದರೆ ಬೆಳಗಾವಿ (೯೨೪), ಬಾಗಲಕೋಟೆ (೯೩೯), ಗುಲಬರ್ಗಾ (೯೩೭), ಕೊಪ್ಪಳ (೯೩೮) ಮತ್ತು ಮಂಡ್ಯ (೯೩೭).

ಭಾರತದಲ್ಲಿನ ೧೯೯೧-೨೦೦೧ರ ನಡುವಿನ ಅವಧಿಯಲ್ಲಿನ ೦-೬ ವಯೋಮಾನದ ಮಕ್ಕಳ ಲಿಂಗ ಅನುಪಾತದಲ್ಲಿನ ಕುಸಿತವನ್ನು ಜನಸಂಖ್ಯಾ ದೃಷ್ಟಿಯಿಂದ ಅಮರ್ತ್ಯಸೆನ್ ಭೌಗೋಳಿಕವಾಗಿ ವಿಭಜಿತ ಭಾರತವೆಂದು ಕರೆಯುತ್ತಾನೆ. ಏಕೆಂದರೆ ಉತ್ತರ ಮತ್ತು ಪಶ್ಚಿಮ ಭಾರತದ ರಾಜ್ಯಗಳಲ್ಲಿ ಲಿಂಗ ತಾರತಮ್ಯದ ತೀವ್ರತೆಯು ದಕ್ಷಿಣ ಮತ್ತು ಪೂರ್ವ ಭಾರತದಲ್ಲಿನ ರಾಜ್ಯಗಳಲ್ಲಿನ ಸ್ಥಿತಿಗಿಂತ ಅಧಿಕವಾಗಿದೆ. ಈ ಬಗ್ಗೆ ಚರ್ಚೆ ಮಾಡುತ್ತ ಅವನು ಇದು ಹೆಣ್ಣು ಶಿಶುಗಳ ಮರಣ ಪ್ರಮಾಣದಲ್ಲಿನ ಏರಿಕೆಯನ್ನು ಸೂಚಿಸುವುದಕ್ಕೆ ಪ್ರತಿಯಾಗಿ ಅದು ಹೆಣ್ಣು ಶಿಶುಗಳು ಹುಟ್ಟುವ ಪ್ರಮಾಣದಲ್ಲಿನ  ಕುಸಿತವನ್ನು ಸೂಚಿಸುತ್ತದೆಯೆಂದು ಹೇಳುತ್ತಾನೆ. ಅವನ ಪ್ರಕಾರ ೯೦ರ ದಶಕದಲ್ಲಿ ಭಾರತದಲ್ಲಿ ಮಹಿಳೆಯರಿಗೆ ಸಂಬಂಧಿಸಿದಂತೆ ಮರಣ ಪ್ರಮಾಣದಲ್ಲಿನ ಅಸಮಾನತೆಯು ಜನನ ಪ್ರಮಾಣದಲ್ಲಿನ ಅಸಮಾನತೆಯಾಗಿ ಪರಿವರ್ತನೆಗೊಂಡಿದೆ. ಇದು ನಾವು ಗಂಭೀರವಾಗಿ ಪರಿಗಣಿಸಬೆಕಾದ ಸಂಗತಿಯಾಗಿದೆ.

ಲಿಂಗ ಸಂಬಂಧಿ ಅಸಮಾನತೆಗಳ  ವಿರಾಟ್ ಸ್ವರೂಪ

ಅಮರ್ತ್ಯಸೆನ್ ಅಸಮಾನತೆಯನ್ನು ಕೇವಲ ವರಮಾನಕ್ಕೆ ಸೀಮಿತಗೊಳಿಸಿ ಏಕನೆಲೆಯಲ್ಲಿ ಅದನ್ನು ಪರಿಭಾವಿಸಿಕೊಳ್ಳುವುದಕ್ಕೆ ಪ್ರತಿಯಾಗಿ ಅದರ ವಿವಿಧ ಆಯಾಮಗಳನ್ನು ಬಹುರೂಪಿ ನೆಲೆಗಳಲ್ಲಿ ಗುರುತಿಸಲು ಪ್ರಯತ್ನಿಸುತ್ತಾನೆ (ಅಮರ್ತ್ಯಸೆನ್:೨೦೦೧). ಲಿಂಗ ಸಂಬಂಧಗಳನ್ನು ಅಭಿವೃದ್ಧಿ ಕುರಿತ ಸೈದ್ಧಾಂತಿಕ ಚರ್ಚೆಗಳಲ್ಲಿ ಹಾಗೂ ನೀತಿ ನಿರೂಪಣೆಗಳಲ್ಲಿ  ಪ್ರತ್ಯೇಕವಾಗಿ ಮಹತ್ವದ ಸಂಗತಿಯನ್ನಾಗಿ ಪರಿಶೀಲಿಸಬೇಕೆಂಬ ಮತ್ತು ಅದನ್ನು ಅರ್ಥಶಾಸ್ತ್ರದ ಅಂತರ್ಗತ ಭಾಗವನ್ನಾಗಿ ಪರಿಗಣಿಸಬೇಕೆಂಬ ಸಂಗತಿಯನ್ನು ಅಮರ್ತ್ಯಸೆನ್ ತನ್ನ ಪ್ರಸಿದ್ದ ಕೃತಿ (೧೯೯೯:೯) ಸ್ವಾತಂತ್ರ್ಯವಾಗಿ ಅಭಿವೃದ್ಧಿಯಲ್ಲಿ ಪ್ರತಿಪಾದಿಸಿದ್ದಾನೆ. ಅರ್ಥಶಾಸ್ತ್ರ ಮತ್ತು ಅಭಿವೃದ್ಧಿ ಸಿದ್ಧಾಂತಗಳನ್ನು ಲಿಂಗ ಸಂಬಂಧಿ ಉಪಚಾರಕ್ಕೆ ಒಳಪಡಿಸಿದ ಕೀರ್ತಿ ಅಮರ್ತ್ಯಸೆನ್‌ಗೆ ಸಲ್ಲಬೇಕು. ಲಿಂಗ ಸಂಬಂಧಿ ಅಸಮಾನತೆಯೆಂಬುದು ಕೇವಲ ಕೆಲವು ದೇಶಗಳಿಗೆ ಅಥವಾ ಕೆಲವು ಸಂದರ್ಭಗಳಿಗೆ ಅಥವಾ ಕೇವಲ ವರಮಾನಕ್ಕೆ ಅಥವಾ ಆರ್ಥಿಕ ಸಂಗತಿಗಳಿಗೆ ಸಂಬಂಧಿಸಿದ ಸಮಸ್ಯೆಯಲ್ಲ. ಅದು ಏಕರೂಪಿ ಸ್ವರೂಪದಲ್ಲಿಲ್ಲ. ಲಿಂಗ ಸಂಬಂಧಿ ಅಸಮಾನತೆಗಳ ವಿರಾಟ್ ಸ್ವರೂಪವನ್ನು ಸೆನ್ ತನ್ನ ಲಿಂಗ ಅಸಮಾನತೆಯ ವಿವಿಧ ಮುಖಗಳು ಎಂಬ ಪ್ರಬಂಧದಲ್ಲಿ (೨೦೦೧) ವಿವರವಾಗಿ ಚರ್ಚಿಸಿದ್ದಾನೆ. ಅವನು ಅಂತಹ ಏಳು ಬಗೆಯ ಲಿಂಗ ಸಂಬಂಧಿ ಅಸಮಾನತೆಯ ನೆಲೆಗಳನ್ನು ಹಿಡಿದಿಟ್ಟಿದ್ದಾನೆ. ಇವೆಲ್ಲವು ಪ್ರತ್ಯೇಕವಾದ ಸಂಗತಿಗಳೇನಲ್ಲ. ಅವುಗಳ ನಡುವೆ ಅಂತರ್‌ಸಂಬಂಧವಿದೆ.

. ಮರಣ ಪ್ರಮಾಣದಲ್ಲಿ ಲಿಂಗ ಅಸಮಾನತೆ

ಲಿಂಗ ಅಸಮಾನತೆಯೆಂಬುದು ಮಹಿಳೆಯರ ಸಂಬಂಧದಲ್ಲಿ ಅವರು ಗರ್ಭಾವಸ್ಥೆಯಲ್ಲಿರುವಾಗಲೇ ಆರಂಭವಾಗಿ, ಹುಟ್ಟಿನಲ್ಲಿ ಮುಂದುವರಿದು, ಬಾಲ್ಯದಲ್ಲಿ ಸ್ವೌಮ್ಯ ರೂಪದಲ್ಲಿದ್ದು, ಅವರ ತಾಯಿತನದಲ್ಲಿ ಬಲಿತು ಅವರು ವೃದ್ಧಾಪ್ಯದಲ್ಲಿ ಕಣ್ಮುಚ್ಚಿ ಮಣ್ಣಿನ ಗರ್ಭ ಸೇರುವವರೆಗೆ ಮುಂದುವರಿಯುತ್ತದೆ. ಲಿಂಗ ಅಸಮಾನತೆ ಯೆಂಬುದು ಮಹಿಳೆಯರ ಹುಟ್ಟು ಹಾಗೂ ಸಾವಿನ ಸಂಗತಿಗಳೊಂದಿಗೆ ತಳುಕು ಹಾಕಿಕೊಂಡಿರುವ ಸಂಗತಿಯಾಗಿದೆ. ಲಿಂಗ ಅನುಪಾತವು ಸಾಮಾನ್ಯವಾಗಿ ಮಹಿಳೆಯರಿಗೆ ಅನುಕೂಲಕರವಾಗಿರಬೇಕಾದುದು ಕ್ರಮ. ಅಂದರೆ ಅದು ಸಾವಿರಕ್ಕಿಂತ ಅಧಿಕವಾಗಿರಬೇಕಾದುದು ಸಹಜವಾದ ಸಂಗತಿಯಾಗಿದೆ. ಭಾರತದಲ್ಲಿ,ಅದರಂತೆ ಕರ್ನಾಟಕದಲ್ಲಿ ಲಿಂಗ ಅನುಪಾತವು ಸಾವಿರಕ್ಕಿಂತ ಕಡಿಮೆಯಿರುವುದಕ್ಕೆ ಅಮರ್ತ್ಯಸೆನ್ ಅವರು ಮಹಿಳೆಯರು ಮರಣ ಪ್ರಮಾಣಕ್ಕೆ ಸಂಬಂಧಸಿದಂತೆ ಎದುರಿಸುತ್ತಿರುವ ತಾರತಮ್ಯವೇ ಕಾರಣವೆಂಬುದನ್ನು ತೋರಿಸಿಕೊಟ್ಟಿದ್ದಾನೆ. ಮಹಿಳೆಯರು ಇಂದು ಬದುಕುಳಿಯುವುದೆ ದುರ್ಲಭವಾಗಿಬಿಟ್ಟಿದೆ. ಶಿಶು ಮರಣ ಪ್ರಮಾಣಕ್ಕೆ ಸಂಬಂಧಿಸಿದಂತೆ, ಐದು ವರ್ಷಕ್ಕಿಂತ ಕಡಿಮೆ ವಯೋಮಾನದ ಮಕ್ಕಳ ಮರಣ ಪ್ರಮಾಣಕ್ಕೆ ಸಂಬಂಧಿಸಿ ದಂತೆ ಮತ್ತು ಮೂವತ್ತೈದರಿಂದ-ನಲವತ್ತರವರೆಗಿನ ವಯೋಮಾನದ ಮಹಿಳೆಯರ ಮರಣ ಪ್ರಮಾಣಕ್ಕೆ ಸಂಬಂಧಿಸಿದಂತೆ ಮಹಿಳೆಯರು ಅನವಶ್ಯಕವಾದ ಮತ್ತು ಸಹಜ ಪ್ರವೃತ್ತಿಗೆ ವಿರುದ್ಧವಾಗಿ ಪುರುಷರಿಗಿಂತ ಅಧಿಕ ಮರಣ ಪ್ರಮಾಣವನ್ನು ಅನುಭವಿ ಸುತ್ತಿದ್ದಾರೆ. ಈ ಕಾರಣಕ್ಕೆ ಅವರ ಪ್ರಮಾಣವು ಜನಸಂಖ್ಯೆಯಲ್ಲಿ ಸಾಪೇಕ್ಷವಾಗಿ ಕಡಿಮೆಯಿದೆ ಮತ್ತು ೦-೬ ವಯೋಮಾನದ ಮಕ್ಕಳಿಗೆ ಸಂಬಂಧಿಸಿದಂತೆ ಲಿಂಗ ಅನುಪಾತವು ಕುಸಿಯುತ್ತಿದೆ. ಜೀವನಾಯುಷ್ಯಕ್ಕೆ ಸಂಬಂಧಿಸಿದಂತೆ ಮಹಿಳೆಯರ ಆಯಸ್ಸು ಪುರುಷರ ವಯಸ್ಸಿಗಿಂತ ಅಧಿಕವಾಗಿದ್ದರೂ ಅವರ ಮರಣ ಪ್ರಮಾಣವು ಶಿಶುಗಳ ಹಂತದಲ್ಲಿ, ಐದು ವರ್ಷಗಳ ವಯೋಮಾನದ ಹಂತದಲ್ಲಿ ಮತ್ತು ನಲವತ್ತರ ವಯೋಮಾನದ ಹಂತದಲ್ಲಿ ಯಾಕೆ ಪುರುಷರ ಮರಣ ಪ್ರಮಾಣಕ್ಕಿಂತ ಅಧಿಕವಾಗಿ ರುತ್ತದೆ?. ಅಮರ್ತ್ಯಸೆನ್ ಪ್ರಕಾರ ಇದಕ್ಕೆ ಮುಖ್ಯ ಕಾರಣವೆಂದರೆ ಮಹಿಳೆಯರು ಬದುಕಿನಲ್ಲಿ ಅನುಭವಿಸುತ್ತಿರುವ ಲಿಂಗ ಸಂಬಂಧಿ ತಾರತಮ್ಯ ಮತ್ತು ಅಸಮಾನತೆ.

. ಜನನ ಪ್ರಮಾಣದಲ್ಲಿನ ಲಿಂಗ ಸಂಬಂಧಿ ಅಸಮಾನತೆ

ನಮಗೆಲ್ಲ ಗೊತ್ತಿರುವಂತೆ ನಮ್ಮ ಸಂದರ್ಭದಲ್ಲಿ ಮಹಿಳೆಯರಿಗೆ ಆಯ್ಕೆಯ ಸ್ವಾತಂತ್ರ್ಯವನ್ನು ನೀಡಿದರೆ ಅವರು ಸಾಮಾನ್ಯವಾಗಿ ಗಂಡು ಮಕ್ಕಳನ್ನು ಆಯ್ಕೆ ಮಾಡಿಕೊಳ್ಳಲು ಬಯಸುತ್ತಾರೆ. ಅಂದರೆ ಲಿಂಗ ತಾರತಮ್ಯವೆನ್ನುವುದು ಮಹಿಳೆಯರಲ್ಲೂ ನೆಲೆಗೊಂಡಿದೆ.ಒಂದು ಕಾಲದಲ್ಲಿ ಇದು ಕೇವಲ ಬಯಕೆ ಅಥವಾ ಆಸೆಯಾಗಿರುತ್ತಿತ್ತು. ಆದರೆ ಇಂದು ಆಧುನಿಕ ತಂತ್ರಜ್ಞಾನದ ನೆರವಿನಿಂದ ಭ್ರೂಣದ ಹಂತದಲ್ಲೇ ಲಿಂಗವನ್ನು ಪತ್ತೆ ಹಚ್ಚಿ ಅದು ಹೆಣ್ಣಾಗಿದ್ದರೆ ಅದನ್ನು ತೆಗೆದುಹಾಕುವುದು ಅಥವಾ ತೆಗೆಸಿಹಾಕುವುದು ಸಾಧ್ಯವಾಗಿಬಿಟ್ಟಿದೆ. ಕರ್ನಾಟಕದಲ್ಲಿ ೧೯೯೧-೨೦೦೧ರ ದಶಕದಲ್ಲಿ ೦-೬ ವಯೋಮಾನದ ಮಕ್ಕಳ ಲಿಂಗ ಅನುಪಾತವು ೯೪೫ರಿಂದ ೯೨೭ಕ್ಕೆ ಕುಸಿದಿದೆ. ಅಂದರೆ ೧೯೯೧ರಲ್ಲಿ ಪ್ರತಿ ಸಾವಿರ ಗಂಡು ಮಕ್ಕಳಿಗೆ ಪ್ರತಿಯಾಗಿ ೯೪೫ ಹೆಣ್ಣು ಮಕ್ಕಳು ಜನಿಸುತ್ತಿದ್ದರೆ ಇಂದು ೨೦೦೧ರಲ್ಲಿ ಪ್ರತಿ ಸಾವಿರ ಗಂಡು ಮಕ್ಕಳಿಗೆ ಪ್ರತಿಯಾಗಿ ಹುಟ್ಟುತ್ತಿರುವ ಹೆಣ್ಣು ಮಕ್ಕಳ ಸಂಖ್ಯೆ ಕೇವಲ ೯೨೭. ಮಹಿಳೆಯರು ಹುಟ್ಟುವುದು ಕಷ್ಟಸಾಧ್ಯವಾಗುತ್ತಿದೆ. ಹುಟ್ಟಿದ ಮೇಲೆ ಬದುಕುಳಿಯುವುದು ಹೆಚ್ಚು ಯಾತನಾಮಯವಾಗುತ್ತಿದೆ.

. ಅಭಿವೃದ್ಧಿ ಮೂಲ ಸೌಲಭ್ಯಗಳಲ್ಲಿ ಲಿಂಗ ಸಂಬಂಧಿ ಅಸಮಾನತೆ

ಅಭಿವೃದ್ಧಿಯ ಪ್ರಾಥಮಿಕ ಸಂಗತಿಗಳಾದ ಸಾಕ್ಷರತೆ, ಪ್ರಾಥಮಿಕ ಶಿಕ್ಷಣ, ಆರೋಗ್ಯ, ಆಹಾರ ಭದ್ರತೆ, ದೈಹಿಕ ಘನತೆ, ಸ್ವಾಯತ್ತತೆಗಳಿಂದ ಮಹಿಳೆಯರು ವ್ಯವಸ್ಥಿತವಾಗಿ ವಂಚಿತರಾಗುತ್ತಿದ್ದಾರೆ. ಅಮರ್ತ್ಯಸೆನ್ ಪ್ರಕಾರ ಸಮಾಜದಲ್ಲಿ ಪುರುಷರು ಮತ್ತು ಮಹಿಳೆಯರ ನಡುವೆ ಸಮಾನತೆಯಿದ್ದಿದ್ದರೆ ಅಭಿವೃದ್ಧಿಯ ಪ್ರಾಥಮಿಕ ಸಂಗತಿಗಳಾದ ಸಾಕ್ಷರತೆ, ಪ್ರಾಥಮಿಕ ಶಿಕ್ಷಣ, ಪೌಷ್ಟಿಕತೆ, ಉದ್ಯೋಗ, ಕೂಲಿ ಮುಂತಾದ ಸಂಗತಿಗಳಲ್ಲಿ ಮಹಿಳೆಯರು ತಾರತಮ್ಯ ಎದುರಿಸಬೇಕಾಗಿರಲಿಲ್ಲ. ಯುಎನ್‌ಡಿಪಿಯು ೧೯೯೦ರಿಂದ ಪ್ರಕಟಿಸುತ್ತಿರುವ ಮಾನವ ಅಭಿವೃದ್ಧಿ ವರದಿಗಳಲ್ಲಿ ಕಂಡು ಬರುವಂತೆ ಪ್ರಪಂಚದ ಯಾವುದೆ ದೇಶದಲ್ಲ್ಲೂ ಮಹಿಳೆಯರ ಸಾಕ್ಷರತೆ ಪ್ರಮಾಣವು ಪುರುಷರ ಸಾಕ್ಷರತೆ ಪ್ರಮಾಣಕ್ಕೆ ಸಮನಾಗಿಲ್ಲ. ಮಹಿಳೆಯರು ಮನೆಯೊಳಗೆ ಮತ್ತು ಮನೆಯ ಹೊರಗೆ ದುಡಿಮೆ ಮಾಡಬೇಕಾಗಿರುವುದರಿಂದ ಉದ್ಯೋಗದಲ್ಲಿ ವೃತ್ತಿ ನೈಪುಣ್ಯತೆಯನ್ನು ಗಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಾಮಾನ್ಯವಾಗಿ ಮಹಿಳೆಯರು ತಮ್ಮ ಗೃಹಿಣಿಯ ಜವಾಬುದಾರಿಯನ್ನು ನಿರ್ವಹಿಸುವ ಸಲುವಾಗಿ ತಮ್ಮ ವೃತ್ತಿ ಸಂಬಂಧಿ ಔನ್ನತ್ಯಗಳನ್ನು ಬಿಟ್ಟು ಕೊಡುತ್ತಾರೆ.

. ವೃತ್ತಿ ಸಂಬಂಧಿ ಲಿಂಗ ಅಸಮಾನತೆ

ಈಗಾಗಲೆ ತಿಳಿಸಿರುವಂತೆ ಉತ್ಪಾದನೆ, ಮನೆವಾರ್ತೆ ಮತ್ತು ಸಂತಾನೋತ್ಪತ್ತಿ ದುಡಿಮೆಗಳನ್ನು ನಿರ್ವಹಿಸುತ್ತಿರುವ ಮಹಿಳೆಯರು ಅನೇಕ ಬಗೆಯ ವೃತ್ತಿ ಸಂಬಂಧಿ ತಾರತಮ್ಯಗಳನ್ನು ಎದುರಿಸುತ್ತಿದ್ದಾರೆ. ಆಕೆಯನ್ನು ದುಡಿಮೆಗಾರಳೆಂದು ಪರಿಗಣಿಸುವುದಕ್ಕೆ ಮೀನಮೇಷವೆಣಿಸುವ ಸಮಾಜವು ಆಕೆಯ ಗೃಹಿಣಿ ಪಾತ್ರವನ್ನು ಇನ್ನಿಲ್ಲದಂತೆ ವೈಭವೀಕರಿಸುತ್ತದೆ. ಇದರಿಂದಾಗಿ ಅವಳು ಸಾಮಾನ್ಯವಾಗಿ ತನ್ನ ವೃತ್ತಿ ಸಂಬಂಧಿ ಔನ್ನತ್ಯಗಳನ್ನು ಸಾಧಿಸಿಕೊಳ್ಳುವುದಕ್ಕೆ ಪ್ರತಿಯಾಗಿ ಅದನ್ನು ಮನೆ, ಕುಟುಂಬ, ಮಕ್ಕಳು ಇವರಿಗಾಗಿ ತ್ಯಾಗ ಮಾಡಿ ಬಿಡುತ್ತಾಳೆ. ದುಡಿಯುವ ಮಹಿಳೆಯರು ಸಾಮಾನ್ಯವಾಗಿ ಇಬ್ಬಗೆಯ ಹೊಣೆಗಾರಿಕೆಯನ್ನು ನಿಭಾಯಿಸಬೇಕಾಗಿರುವುದರಿಂದ ಅವರು ವೃತ್ತಿ ಸಂಬಂಧಿ ಔನ್ನತ್ಯದ ಕಡೆ ಗಮನಕೊಡಲು ಮತ್ತು ಅದರ ನಿಮಿತ್ತ ಸಿದ್ಧತೆ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ ಈ ವಿಷಯದಲ್ಲಿ ಪುರುಷರು ಎಲ್ಲ ಬಗೆಯ ಸ್ವಾತಂತ್ರ್ಯವನ್ನು ಮತ್ತು ತಮ್ಮ ಹೆಂಡತಿಯರ ನೆರವನ್ನು ಸಂಪೂರ್ಣವಾಗಿ ಪಡೆಯುತ್ತಾರೆ.ಈ ಕಾರಣ ಗಳಿಂದಾಗಿ ಮಹಿಳೆಯರು ವೃತ್ತಿ ಸಂಬಂಧಿ ಅಸಮಾನತೆಯನ್ನು ಎದುರಿಸಬೇಕಾಗಿದೆ.

. ವಿಶೇಷ ಅವಕಾಶಗಳಲ್ಲಿ ಲಿಂಗ ಸಂಬಂಧಿ ಅಸಮಾನತೆ

ಪ್ರಾಥಮಿಕವೆನ್ನಬಹುದಾದ ಸಂಗತಿಗಳಿಂದಲೇ ವಂಚಿತರಾದ ಮಹಿಳೆಯರು ಅಭಿವೃದ್ಧಿ ಸಂಬಂಧಿ ವಿಶೇಷ ಅವಕಾಶಗಳನ್ನು ಪಡೆದುಕೊಳ್ಳುವುದರಲ್ಲಿ ತೀವ್ರ ಅಸಮಾನತೆಯನ್ನು ಎದುರಿಸುತ್ತಿದ್ದಾರೆ. ಉನ್ನತ ಶಿಕ್ಷಣವು ಅವರಿಗೆ ಗಗನಕುಸುಮವಾಗಿ ಬಿಟ್ಟಿದೆ. ವಿಜ್ಞಾನ–ತಂತ್ರಜ್ಞಾನ ಕ್ಷೇತ್ರಗಳಲ್ಲಿ ಅವರ ಪ್ರವೇಶ ಅತ್ಯಂತ ನಿಕೃಷ್ಟವಾಗಿದೆ. ಮಹಿಳೆಯರು ಅನುಭವಿಸುತ್ತಿರುವ ವಿಶೇಷ ಅವಕಾಶಗಳಲ್ಲಿನ ಅಸಮಾನತೆಯು ಕೇವಲ ಭಾರತಕ್ಕೆ ಅಥವಾ ಕರ್ನಾಟಕಕ್ಕೆ ಮಿಸಲಾದ ಸಂಗತಿಯೆನಲ್ಲ. ಶ್ರಮ ಮಾರುಕಟ್ಟೆ ಯಲ್ಲಿ ಮಹಿಳೆಯರ ಚೌಕಾಸಿ ಸಂಧಾನದ ಸಾಮರ್ಥ್ಯ ಅತ್ಯಂತ ಕಡಿಮೆ. ವಿಶೇಷ ಅವಕಾಶಗಳಲ್ಲಿನ ಅಸಮಾನತೆಗೆ ಕೇವಲ ಮಹಿಳೆಯರ ಮಾನವ ಬಂಡವಾಳದಲ್ಲಿನ ಕೊರತೆಯು ಮಾತ್ರ ಕಾರಣವಲ್ಲ.ಅಲ್ಲಿ ಮಹಿಳೆಯರನ್ನು ಪರಿಭಾವಿಸಿಕೊಳ್ಳುವುದರಲ್ಲಿಯೇ ಸಮಸ್ಯೆಯಿದೆ. ಅವಳ ಬದುಕನ್ನು ಖಾಸಗಿಯೆಂದು ಪರಿಗಣಿಸಿರುವುದರಲ್ಲಿ, ಅವಳ ಪ್ರಪಂಚ ಕೇವಲ ಕುಟುಂಬಕ್ಕೆ ಮೀಸಲೆಂಬ ನಂಬಿಕೆಯಲ್ಲಿ, ಮಹಿಳೆಯರಲ್ಲೆ ಮನೆಮಾಡಿ ಕೊಂಡಿರುವ ಮಹಿಳೆಯರ ಬಗೆಗಿನ ಅಸಹಾಯಕ ಮನೋಭಾವದಲ್ಲಿ, ತಮ್ಮ ದುಡಿಮೆಯ ಆರ್ಥಿಕ ಮಹತ್ವದ ಬಗ್ಗೆ ಮಹಿಳೆಯರಿಗೆ ನಂಬಿಕೆಯಿಲ್ಲದಿರುವುದು, ಸಮಾಜದಲ್ಲಿ ಅನೂಚಾನವಾಗಿ ಹರಿದುಕೊಂಡು ಬರುತ್ತಿರುವ ಲಿಂಗ ಸಂಬಂಧಿ ತಾರತಮ್ಯವನ್ನು ಊರ್ಜಿತಗೊಳಿಸುವಂತಹ ಸಮಾಜ ವಿಜ್ಞಾನಗಳಲ್ಲಿನ ಸೈದ್ಧಾಂತಿಕ ನಿಲವಿನಲ್ಲ್ಲಿ ಇದಕ್ಕೆ ಕಾರಣವನ್ನು ಕಾಣಬಹದಾಗಿದೆ.

. ಆಸ್ತಿಯ ಹಕ್ಕು ಸಂಬಂಧಿ ಅಸಮಾನತೆ

ನಮ್ಮ ಸಮಾಜದಲ್ಲಿ ಮಹಿಳೆಯರಿಗೆ ಆಸ್ತಿ-ಪಾಸ್ತಿ ಹಕ್ಕಿನ ಬಗ್ಗೆ ಯೋಚಿಸಲು ಸಾಧ್ಯವಿಲ್ಲದಂತಹ ಪರಿಸ್ಥಿತಿಯಿದೆ. ಈ ಬಗೆಯ ನಂಬಿಕೆಯಿಂದಾಗಿ ಮಹಿಳೆಯರು ಆರ್ಥಿಕ ಕ್ಷೇತ್ರವನ್ನು ಪ್ರವೇಶಿಸುವುದೆ ದುರ್ಲಬವಾಗಿ ಬಿಟ್ಟಿದೆ. ಕಾನೂನಿನ ಪ್ರಕಾರ ಅವರಿಗೆ ಆಸ್ತಿಯ ಹಕ್ಕಿದೆ. ತಂದೆ-ತಾಯಿಯರ ಆಸ್ತಿಯಲ್ಲಿ ಗಂಡು ಮಕ್ಕಳಿಗಿದ್ದಂತೆ ಹೆಣ್ಣ್ಣು ಮಕ್ಕಳಿಗೂ ಸಮಾನ ಹಕ್ಕಿದೆ. ಆದರೆ ಅದನ್ನು ಚಲಾಯಿಸುವ ಸಾಮರ್ಥ್ಯ ಮಹಿಳೆಯರಿಗಿಲ್ಲವಾಗಿದೆ. ವ್ಯವಹಾರ ಜ್ಞಾನ ಮಹಿಳೆಯರಿಗೆ ದಕ್ಕುವುದಿಲ್ಲವೆಂದು ವಾದಿಸಲಾಗುತ್ತಿದೆ. ದುಡಿಯುವ ಮಹಿಳೆಯರಿಗೆ ತಮ್ಮ ದುಡಿಮೆಯ ಸಂಪತ್ತಿನ ಮೇಲೆ ನಿಯಂತ್ರಣ ಸಾಧ್ಯವಾಗಿಲ್ಲ. ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ಉದ್ದಿಮೆ, ಶೇರು ವ್ಯವಹಾರ, ವಾಣಿಜ್ಯ, ಬ್ಯಾಂಕಿಂಗ್ ಮುಂತಾದ ಕ್ಷೇತ್ರಗಳಲ್ಲಿ ಮಹಿಳೆಯರ ಪ್ರಮಾಣ ಅತ್ಯಂತ ಕಡಿಮೆ. ಇದಕ್ಕೆ ಮುಖ್ಯಕಾರಣವೆಂದರೆ ಮಹಿಳೆಯರಿಗೆ ವ್ಯವಹರ ಜ್ಞಾನವಿಲ್ಲವೆಂಬ ನಂಬಿಕೆ.

. ಕುಟುಂಬದೊಳಗಿನ ಲಿಂಗ ಸಂಬಂಧಿ ಅಸಮಾನತೆ

ಕುಟುಂಬವೆಂಬುದನ್ನು ನಮ್ಮ ಸಂದರ್ಭದಲ್ಲಿ ಅತಿಯಾಗಿ ವೈಭವೀಕರಿಸಲಾಗಿದೆ. ಅದು ತನ್ನ ಎಲ್ಲ ಸದಸ್ಯರ ಹಿತಾಸಕ್ತಿಗಳನ್ನು ಕಾಪಿಡುವ ಸಂಸ್ಥೆಯೆಂದು ವರ್ಣಿಸ ಲಾಗುತ್ತಿದೆ. ಒಂದು ನೆಲೆಯಲ್ಲಿ ಇದು ಸರಿಯಿರಬಹುದು. ಅದು ತನ್ನ ಸದಸ್ಯರೆಲ್ಲರಿಗೂ ಭದ್ರತೆಯನ್ನು ಒದಗಿಸುತ್ತಿರಬಹುದು. ಆದರೆ ಅದರ ಲಿಂಗ ಸಂಬಂಧಿ ಆಯಾಮಗಳು ನಾವು ತಿಳಿದುಕೊಂಡಿರುವಷ್ಟು ಅಥವಾ ಅದಕ್ಕೆ ಆರೋಪಿಸುತ್ತಿರುವುವಷ್ಟು ಆದರ್ಶ ರೂಪದಲ್ಲೇನು ಇಲ್ಲ.

ಅಮರ್ತ್ಯಸೆನ್ ಅದನ್ನು  ಸಹಕಾರ  ಮತ್ತು  ಸಂಘರ್ಷ-ಎರಡೂ  ಗುಣಗಳಿಂದ  ಕೂಡಿರುವ ಸಂಸ್ಥೆಯೆಂದು ಪರಿಭಾವಿಸಿಕೊಳ್ಳುತ್ತಾರೆ.ಕುಟುಂಬದೊಳಗೆ ಮಹಿಳಾ ಸದಸ್ಯರಿಗೆ ಪುರುಷ ಸದಸ್ಯರಿಗಿದ್ದಷ್ಟು ಅಧಿಕಾರವಾಗಲಿ ಅಥವಾ ಸಾಮರ್ಥ್ಯವಾಗಲಿ ಇರುವುದಿಲ್ಲ. ಕುಟುಂಬದೊಳಗೆ ಆಹಾರ ಹಂಚಿಕೊಳ್ಳುವುದರಲ್ಲಾಗಲಿ, ಕುಟುಂಬ ಸಂಬಂಧಿ ತೀರ್ಮಾನ ತೆಗೆದುಕೊಳ್ಳುವುದರಲ್ಲಾಗಲಿ, ಹಣಕಾಸು ವ್ಯವಹಾರದಲ್ಲಾಗಲಿ, ಆಸ್ತಿ-ಪಾಸ್ತಿ ವಿಷಯದಲ್ಲಾಗಲಿ ಮಹಿಳೆಯರಿಗೆ ಸಹಭಾಗಿತ್ವದ ಅವಕಾಶವಿಲ್ಲವಾಗಿದೆ. ಅನೇಕ ಅಧ್ಯಯನಗಳು ತೋರಿಸಿಕೊಟ್ಟಿರುವಂತೆ ಮಹಿಳೆಯರು ಮನೆಯ ಹೊರಗೆ ಎದುರಿಸುತ್ತಿರುವುದಕ್ಕಿಂತ ಹೆಚ್ಚು ಕುಟುಂಬಗಳಲ್ಲಿ ಲಿಂಗ ಸಂಬಂಧಿ ದೌರ್ಜನ್ಯ ಎದುರಿ ಸುತ್ತಿದ್ದಾರೆ. ಅಲ್ಲಿ ಮಹಿಳೆಯರಿಂದ ಸಹಕಾರವನ್ನು ಮಾತ್ರ ಅಪೇಕ್ಷಿಸಲಾಗುತ್ತದೆ ವಿನಾ ಅವರಿಗೆ ಹಕ್ಕುಬದ್ಧವಾಗಿ ದೊರೆಯಬೇಕಾದ ಅವಕಾಶಗಳು ಮತ್ತು ಸವಲತ್ತುಗಳು ದೊರೆಯುತ್ತಿಲ್ಲ. ಕುಟುಂಬಕ್ಕೆ ಅವರನ್ನು ಸಂವಾದಿಯನ್ನಾಗಿ ಮಾಡಿರುವುದರಲ್ಲೇ ಅವರು ಅಲ್ಲಿ ಎದುರಿಸುತ್ತಿರುವ ಅಸಮಾನತೆಯ ನೆಲೆಗಳನ್ನು ಊಹಿಸಿಕೊಳ್ಳಬಹುದಾಗಿದೆ (ಈ ಬಗ್ಗೆ ಮುಂದಿನ ಭಾಗದಲ್ಲಿ ವಿವರವಾಗಿ ಚರ್ಚಿಸಲಾಗಿದೆ).

ಮಹಿಳೆಯರಿಗೆ ತನ್ನವೂ ಅಂತ ಹಿತಾಸಕ್ತಿಗಳಿರುವುದಿಲ್ಲ!

 ಈಗಾಗಲೆ ತಿಳಿಸಿರುವಂತೆ ಮಹಿಳೆಯನ್ನು ತಾಯಿಗೆ, ಮಕ್ಕಳಿಗೆ, ಹೆಂಡತಿಗೆ, ಕುಟುಂಬಕ್ಕೆ ಸಂವಾದಿಯಗಿ ಪರಿಭಾವಿಸಿಕೊಂಡು ಬರಲಾಗಿದೆ. ಅವಳ ಬದುಕು ಕುಟುಂಬದ ಜೊತೆಯಲ್ಲಿ ಲೀನವಾಗಿ-ವಿಲೀನವಾಗಿ  ಹೋಗಿದೆ. ಅವಳಿಗೆ ತನ್ನವೂ ಅಂತ  ಹಿತಾಸಕ್ತಿಗಳಿರುವುದಿಲ್ಲವೆಂದು ವಾದಿಸಲಾಗುತ್ತದೆ. ಅವಳ ಹಿತಾಸಕ್ತಿಗಳೇನಿದ್ದರೂ ಕುಟುಂಬ, ಗಂಡ, ಮಕ್ಕಳು ಆಗಿರುತ್ತವೆ ವಿನಾ ಅವಳವೂ ಅನ್ನುವವು ಇರುವುದಿಲ್ಲ ವೆನ್ನಲಾಗಿದೆ. ಇದು ಪುರುಷಶಾಹಿಯು ರೂಪಿಸಿರುವ ಸಂಕಥನವಾಗಿದೆ. ಮನುಷ್ಯ ಜೀವಿಯಾದ ಮಹಿಳೆಗೆ ಅವಳವೇ ಆದ ಹಿತಾಸಕ್ತಿಗಳಿರಲು ಸಾಧ್ಯ. ಆದರೆ ಅವಳು ಅಂತಹ ಆಕಾಂಕ್ಷೆಗಳನ್ನು ಇಟ್ಟುಕೊಳ್ಳಬಾರದೆಂದು ಭಾವಿಸಲಾಗಿದೆ. ಒಂದು ವೇಳೆ ಹಾಗೇನಾದರೂ ಅವಳು ಸ್ವಂತ ಹಿತಾಸಕ್ತಿಗಳನ್ನು, ಆಸೆ-ಆಕಾಂಕ್ಷೆಗಳನ್ನು ಇಟ್ಟುಕೊಳ್ಳು ವುದಾದರೆ ಅವಳು ನಮ್ಮ ಸಮಾಜದ ನಂಬಿಕೆಗೆ ವಿರುದ್ಧ ನಡೆದುಕೊಂಡಂತಾಗುತ್ತದೆ. ಅವಳು ತ್ಯಾಗಮಯಿಯಾಗಿ ಮನ್ನಣೆ ಪಡೆಯಬೇಕಾದರೆ ಅವಳು ಪರರ ಹಿತಾಸಕ್ತಿಗಾಗಿ ಮಾತ್ರ ದುಡಿಮೆ ಮಾಡಬೇಕಾಗುತ್ತದೆ. ತ್ಯಾಗಮಯಿ ಗುಣವನ್ನು ಪುರುಷಶಾಹಿಯು ಮಹಿಳೆಯರ ಮೇಲೆ ಹೇರಿದೆ. ತ್ಯಾಗದ ಗುಣ ಒಳ್ಳೆಯದು ಮತ್ತು ಅದು ಅಪೇಕ್ಷಣೀಯ. ಆದರೆ ಅದು ಮಹಿಳೆಯರಿಗೆ ಆಯ್ಕೆಯ ಸಂಗತಿಯಾಗಬೇಕೆೆ ವಿನಾ ಅನಿವಾರ್ಯದ ಸಂಗತಿಯಾಬಾರದು. ಆದರೆ ನಮ್ಮ ಸಂದರ್ಭದಲ್ಲಿ ಅದು ಆಯ್ಕೆಯಾಗುವುದಕ್ಕೆ ಪ್ರತಿಯಾಗಿ ಅನಿವಾರ್ಯವಾಗಿ ಬಿಟ್ಟಿದೆ. ಇಂತಹ ಗುಣವು ಪುರುಷರಿಗೂ ಅಗತ್ಯವೆಂದು ನಮ್ಮ ಸಮಾಜ ಯಾಕೆ ಭಾವಿಸುವುದಿಲ್ಲ?   

ಈ ಬಗೆಯ ನಂಬಿಕೆಯಿಂದಾಗಿ ಮಹಿಳೆಯರು ಸ್ವಂತ ಅಸ್ತಿತ್ವವೆ ಇಲ್ಲದಂತಹ  ಬದುಕನ್ನು ನಡೆಸಬೆಕಾದ ಪರಿಸ್ಥಿತಿ ಉಂಟಾಗಿದೆ. ನಾವು ಅಭಿವೃದ್ಧಿಯನ್ನು ಅಮರ್ತ್ಯಸೆನ್ ಪರಿಭಾಷೆಯಲ್ಲಿ ಸ್ವಾತಂತ್ರ್ಯವೆಂದು ನಿರ್ವಚಿಸುವುದಾದರೆ ಆಗ ಮಹಿಳೆಯರಿಗೆ ಸಂಬಂಧಿಸಿದಂತೆ ಅದರ ವ್ಯಾಪ್ತಿಯು ತುಂಬಾ ಸೀಮಿತವಾಗಿರುವುದು ತಿಳಿದು ಬರುತ್ತದೆ. ಅಭಿವೃದ್ಧಿಯನ್ನು ಆಯ್ಕೆಗಳ ವ್ಯಾಪ್ತಿಯ ವಿಸ್ತರಣೆಯೆಂದು ಯುಎನ್‌ಡಿಪಿ ಪರಿಭಾಷೆಯಲ್ಲಿ ನಿರ್ವಚಿಸಿದರೆ ಮಹಿಳೆಯರ ಆಯ್ಕೆಯ ವ್ಯಾಪ್ತಿಯು ತುಂಬಾ ಸೀಮಿತ ವಾಗಿರುವುದು ಕಂಡು ಬರುತ್ತದೆ. ಮಹಿಳೆಯರು ತಮ್ಮ ಬದುಕಿಗೆ ಸಂಬಂಧಿಸಿದಂತೆ ಸ್ವಂತ ಹಿತಾಸಕ್ತಿಗಳನ್ನು ಗುರುತಿಸಿಕೊಳ್ಳಲು ಸಾಧ್ಯವಿಲ್ಲದಂತಹ ಸಾಮಾಜಿಕೀಕರಣವನ್ನು ರೂಪಿಸಲಾಗಿದೆ.ಆದರೆ ವಿಕಲ್ಪಗಳೇ ಇಲ್ಲದ, ಏಕತಾನತೆಯಿಂದ ಕೂಡಿದ ಮತ್ತು ಅನಿವಾರ್ಯವಾಗಿ ಬಿಟ್ಟಿರುವ ಬದುಕನ್ನು ಬದುಕುವ ಸ್ಥಿತಿ ಮಹಿಳೆಯರಿಗೆ ನಿರ್ಮಾಣ ವಾಗಿಬಿಟ್ಟಿದೆ.

ಅಮರ್ತ್ಯಸೆನ್ ಅಭಿವೃದ್ದಿಯನ್ನು ಜನರು ತಾವು ಏನು ಮಾಡಬೇಕೆಂದಿದ್ದಾರೋ ಅದನ್ನು ಮಾಡಲು ಮತ್ತು ಅವರು ಏನು ಆಗಬೇಕೆಂದಿದ್ದಾರೋ ಅದರಂತಾಗಲು ಅಗತ್ಯವಾದ ಜನರ ಸಾಮರ್ಥ್ಯ ಮತ್ತು ಸ್ವಾತಂತ್ರ್ಯವೆಂದು ನಿರ್ವಚಿಸಿದ್ದಾನೆ. ಈ ದೃಷ್ಟಿಯಿಂದ ನಮ್ಮ ಸಂದರ್ಭದಲ್ಲಿ ಮಹಿಳೆಯರಿಗೆ ಅಂತಹ ಸಾಮರ್ಥ್ಯ ಮತ್ತು ಸ್ವಾತಂತ್ರ್ಯವಿದೆಯೇ ಎಂದು ಕೇಳಿದರೆ ಉತ್ತರ ನೀಡುವುದು ಕಷ್ಟವಾಗುತ್ತದೆ. ಇಲ್ಲಿ ಸ್ವಾತಂತ್ರ್ಯವೆಂಬುದನ್ನು ಅಮರ್ತ್ಯಸೆನ್ ವಿಶಿಷ್ಟ ಅರ್ಥದಲ್ಲಿ ಬಳಸುತ್ತಿದ್ದಾನೆ. ನಿಯಂತ್ರಣ ಗಳಿಲ್ಲದ ಮತ್ತು ನಿರ್ಬಂಧಗಳಿಲ್ಲದ ಸ್ಥಿತಿಯನ್ನು ಸಾಮಾನ್ಯವಾಗಿ ಸ್ವಾತಂತ್ರ್ಯವೆಂದು ತಿಳಿಯಲಾಗಿದೆ. ಇದು ನೇತ್ಯಾತ್ಮಕ ಸ್ವಾತಂತ್ಯ್ರ. ಆದರೆ ಅಮರ್ತ್ಯಸೆನ್ ಅದನ್ನು ಜನರಿಗೆ ಹಸಿವಿನಿಂದ ಬಿಡುಗಡೆ ಪಡೆದುಕೊಳ್ಳಲು ಸಾಮರ್ಥ್ಯವಿದೆಯೆ? ಅನಕ್ಷರತೆಯಿಂದ ಸ್ವಾತಂತ್ರ್ಯ ಪಡೆಯಲು ಅವರಿಗೆ ಅವಕಾಶಗಳಿವೆಯೆ? ಹಿಂಸೆ-ದೌರ್ಜನ್ಯದಿಂದ ವಿಮೋಚನೆ ಪಡೆಯಲು ಮಹಿಳೆಯರಿಗೆ ಸಾಧ್ಯವಿದೆಯೆ? ಈ ಅರ್ಥದಲ್ಲಿ ಅಮರ್ತ್ಯಸೆನ್ ಸ್ವಾತಂತ್ರ್ಯವನ್ನು ಬಳಸಿದ್ದಾನೆ. ಇದು ಇತ್ಯಾತ್ಮಕ ಸ್ವಾತಂತ್ರ್ಯ.

ಇಲ್ಲ್ಲಿ ನಾನು ಮಂಡಿಸುತ್ತಿರುವ ವಿಚಾರಗಳನ್ನು ಕರ್ನಾಟಕದ ಸರಿಸುಮಾರು ೩೫ ರಿಂದ ೪೦ ಲಕ್ಷದಷ್ಟಿರುವ ಮಹಿಳಾ ದಿನಗೂಲಿ ಕೂಲಿಕಾರರ ನೆಲೆಯಿಂದ ಪರಿಭಾವಿಸಿ ಕೊಳ್ಳಲಾಗಿದೆ. ನಗರ ಪ್ರದೇಶದಲ್ಲಿರುವ, ಶಿಕ್ಷಿತರಾಗಿರುವ ಮತ್ತು ಸ್ತ್ರೀವಾದದ ಬಗ್ಗೆ ಒಂದಿಷ್ಟಾದರೂ ತಿಳುವಳಿಕೆಯಿರುವ ಕಾಲೇಜು ಮೆಟ್ಟಲೇರಿರುವ ಅಂದರೆ ಅರಿವು-ಜಾಗೃತಿ ಎರಡನ್ನು ಪಡೆದಿರುವ ಮಹಿಳೆಯರನ್ನು ಕುರಿತು ಇಲ್ಲಿ ನಾನು ಚರ್ಚೆ ಮಾಡುತ್ತಿಲ್ಲ. ಆದರೆ ಇಲ್ಲಿ ನಾನು ಚರ್ಚಿಸುತ್ತಿರುವ ವಿಚಾರದ ಬಗ್ಗೆ ಕಾಲೇಜು ಕಲಿಯುತ್ತಿರುವವರು ಗಮನ ನೀಡಬೇಕಾಗುತ್ತದೆ. ಕಾಲೇಜು ಮೆಟ್ಟಲೇರುವ ಅವಕಾಶ ದೊರೆತಿರುವವರು ಅಭಿವೃದ್ಧಿಯ ಲಿಂಗ ಸಂಬಂಧಿ ನೆಲೆಗಳ ಬಗ್ಗೆ, ದುಡಿಮೆಯ ಲಿಂಗ ಸಂಬಂಧಿ ಆಯಾಮಗಳ ಬಗ್ಗೆ ಯೋಚಿಸಬೇಕಾಗುತ್ತದೆ. ಇದು ನಮ್ಮ ಜವಾಬುದಾರಿ. ಬದುಕಿನಲ್ಲ್ಲಿ ವಿಕಲ್ಪಗಳೇ ಇಲ್ಲದಿರುವ ಮಹಿಳೆಯರ ಬದುಕಿನ ಬಗ್ಗೆ ಚಿಂತಿಸುವ ಅಗತ್ಯವಿದೆ.  ಇಲ್ಲಿ ನಾನು ಮಂಡಿಸುತ್ತಿರುವ ಸಂಗತಿಗಳನ್ನು ಈ ವಿಶಾಲ ನೆಲೆಯಲ್ಲಿ  ಪರಿಭಾವಿಸಿಕೊಳ್ಳುವ ಅಗತ್ಯವಿದೆ.