ಮಹಿಳೆಯರ ದುಡಿಮೆ

ಮಹಿಳೆಯರು ನಿರ್ವಹಿಸುತ್ತಿರುವ ಚಟುವಟಿಕೆಗಳನ್ನು  ಸಾಮಾನ್ಯವಾಗಿ ಜೈವಿಕ ವೆಂದೂ, ಸಂಗೋಪನೆಯೆಂದೂ ಮತ್ತು ಅದು ನೈಸರ್ಗಿಕವೆಂದೂ ಪರಿಭಾವಿಸಿಕೊಂಡು ಬರಲಾಗಿದೆ.ಅವರ ಚಟುವಟಿಕೆಗಳು ಮನೆಯೊಳಗೆ ಖಾಸಗಿ ಪ್ರಪಂಚಕ್ಕೆ ಸೇರಿದ್ದಾವೆಂದು ತಿಳಿಯಲಾಗಿದೆ. ಅವುಗಳಿಗೆ ಮಾರುಕಟ್ಟೆ ಮೌಲ್ಯವಿಲ್ಲ. ಅವುಗಳಿಗೆ ಮಾರುಕಟ್ಟೆಯೇ ಇಲ್ಲ. ಅವು ಕ್ರಯರಹಿತ ದುಡಿಮೆಯಾಗಿವೆ. ಮಹಿಳೆಯರನ್ನು ಕೇವಲ ಗೃಹಿಣಿಯರೆಂದು ಪರಿಭಾವಿಸಿಕೊಳ್ಳಲಾಗಿದೆ ವಿನಾ ದುಡಿಮೆಗಾರರನ್ನಾಗಿಯಲ್ಲ. ಅದಕ್ಕೆ ಪ್ರತಿಯಾಗಿ ಪುರುಷರು ನಿರ್ವಹಿಸುವ ಚಟುವಟಿಕೆಗಳನ್ನು ಉತ್ಪಾದನಾ ಕಾರ್ಯವೆಂದೂ, ಸಂಪಾದನಾ ದುಡಿಮೆಯೆಂದೂ ಪರಿಗಣಿಸಲಾಗಿದೆ. ಅವುಗಳ ಪ್ರಮುಖ ಲಕ್ಷಣವೆಂದರೆ ಅವುಗಳಿಗಿರುವ ಮಾರುಕಟ್ಟೆ ಮೌಲ್ಯವಾಗಿದೆ. ಅವರ ಚಟುವಟಿಕೆಗಳು ಸಾರ್ವಜನಿಕ ಕ್ಷೇತ್ರಕ್ಕೆ ಸೇರಿರುವ ಸಂಗತಿಗಳಾಗಿವೆ.

ಯಾವ ಚಟುವಟಿಕೆಗಳಿಗೆ ಮಾರುಕಟ್ಟೆ ವ್ಯಾಪ್ತಿಯಿರುತ್ತದೊ, ಯಾವುದಕ್ಕೆ ಕ್ರಯಪಟ್ಟಿಯಿರುತ್ತದೊ, ಯಾವುದು ಸಾರ್ವಜನಿಕ ಪ್ರಪಂಚಕ್ಕೆ ಸೇರಿರುತ್ತದೊ ಅಂತಹವನ್ನು ಮಾತ್ರ ಅರ್ಥಶಾಸ್ತ್ರದಲ್ಲಿ ದುಡಿಮೆಯೆಂದು, ಅದರಲ್ಲೂ ಉತ್ಪಾದನಾ ದುಡಿಮೆಯೆಂದು ಪರಿಗಣಿಸಲಾಗಿದೆ. ದುಡಿಮೆಯನ್ನು ಹೀಗೆ ಪರಿಭಾವಿಸಿಕೊಂಡಾಗ ಮಹಿಳೆಯರು ನಿಭಾಯಿಸುವ ಅನೇಕ ಚಟುವಟಿಕೆಗಳು ಸಹಜವಾಗಿ  ಅದರ ವ್ಯಾಖ್ಯೆಯ ಹೊರಗುಳಿಯುತ್ತವೆ. ಪುರುಷರ ಪರಿಶ್ರಮ ಮಾತ್ರ ಇಲ್ಲಿ ದುಡಿಮೆಯೆನಿಸಿಕೊಳ್ಳುತ್ತದೆ. ಮಹಿಳೆಯರು ಬೆವರು ಬಸಿದು (ಉತ್ಪಾದನಾ ದುಡಿಮೆ), ಕಣ್ಣೀರು ಹಾಕಿ (ಕೌಟುಂಬಿಕ ದುಡಿಮೆ)ಮತ್ತು ರಕ್ತ ಹರಿಸಿ (ಸಂತಾನೋತ್ಪತ್ತಿ ದುಡಿಮೆ) ದುಡಿಯುವ ದುಡಿಮೆಯು ಅರ್ಥಶಾಸ್ರ್ತದಲ್ಲಿ ದುಡಿಮೆಯೆನಿಸಿಕೊಳ್ಳುವುದಿಲ್ಲ. ವಾಸ್ತವವಾಗಿ ಮಹಿಳೆಯರು ಮೂರು ಬಗೆಯ ದುಡಿಮೆಯನ್ನು ನಿಭಾಯಿಸುತ್ತಿದ್ದಾರೆ. ಮೊದಲನೆಯದು ಉತ್ಪಾದನಾ ದುಡಿಮೆ (ಬೆವರು). ಎರಡನೆಯದು ಕೌಟುಂಬಿಕ ಅಥವಾ ಮನೆವಾರ್ತೆ ದುಡಿಮೆ (ಕಣ್ಣೀರು) ಮತ್ತು ಮೂರನೆಯದು ಸಂತಾನೋತ್ಪತ್ತಿ ಅಥವಾ ಸಂಗೋಪನಾ ದುಡಿಮೆ (ರಕ್ತ). ಈ ಮೂರು ಬಗೆಯ ದುಡಿಮೆ ಪೈಕಿ ಪುರುಷರು ಕೇವಲ ಮೊದಲನೆಯ ಬಗೆಯನ್ನು ಮತ್ತು ಸ್ವಲ್ಪಮಟ್ಟಿಗೆ ಎರಡನೆಯ ಬಗೆಯನ್ನು ನಿಭಾಯಿಸುತ್ತಿದ್ದಾರೆ. ಮೂರೂ ಬಗೆಯ ದುಡಿಮೆಯನ್ನು ಮಹಿಳೆಯರು ನಿರ್ವಹಿಸುತ್ತಿರುವುದುರಿಂದ ದುಡಿಮೆಯ ಬಾರ ಅವರ ಮೇಲೆ ಸಾಪೇಕ್ಷವಾಗಿ ಅಧಿಕವಾಗಿದೆ. ಈ ಬಗ್ಗೆ ನಡೆದಿರುವ ಅಧ್ಯಯನಗಳೆಲ್ಲವೂ ತೋರಿಸಿರುವ ಸಂಗತಿಯೆಂದರೆ ಮಹಿಳೆಯರು ಸರ್ವೆಸಾಮಾನ್ಯವಾಗಿ ಪ್ರತಿದಿನ ೧೨ ರಿಂದ ೧೫ ಗಂಟೆಯವರೆಗೆ ದುಡಿಮೆ ಮಾಡುತ್ತ್ತಾರೆ. ಅಂದರೆ ಅವರು ಪ್ರತಿದಿನ ಎರಡು ದುಡಿಮೆ ದಿನಗಳನ್ನು ಬದುಕುತಿದ್ದಾರೆ. ಆದರೂ ಅದನ್ನು ದುಡಿಮೆಯೆಂದು ನಮ್ಮ ಜ್ಞಾನ ಶಿಸ್ತುಗಳು ಪರಿಗಣಿಸಿಲ್ಲ. ಮಹಿಳೆಯರು ಇಂದು ಎರಡು ಬಗೆಯ ಹೊಣೆಗಾರಿಕೆಯನ್ನು ನಿರ್ವಹಿಸುತ್ತಿದ್ದಾರೆ. ಒಂದನೆಯದು ಕೌಟುಂಬಿಕ ಹೊಣೆಗಾರಿಕೆ ಯಾದರೆ ಎರಡನೆಯದು ಮನೆಯ ಹೊರಗಿನ ಹೊಣೆಗಾರಿಕೆ. ಮನೆಯ ಹೊರಗೆ ನೌಕರಿ ದೊರೆತ ಮಾತ್ರದಿಂದ ಮಹಿಳೆಯರಿಗೆ ಮನೆವಾರ್ತೆಯಿಂದ ಬಿಡುಗಡೆಯೇನು ಸಿಗುವುದಿಲ್ಲ. ಮನೆಯ ಹೊರಗೆ ನೌಕರಿ ಹಿಡಿದ ಮಹಿಳೆಯರು ಅದರ ಜೊತೆಯಲ್ಲಿ ಮನೆಯೊಳಗಿನ ಜವಾಬುದಾರಿಯನ್ನು ನಿಭಾಯಿಸಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಇಂತಹ ಕುಟುಂಬವೇನಾದರೂ ಮುರಿದು ಬಿದ್ದರೆ ಅದಕ್ಕೆ ಮಹಿಳೆಯನ್ನು, ಅವಳ ಮನೆಯ ಹೊರಗಿನ ದುಡಿಮೆಯನ್ನು ಕಾರಣ ಮಾಡಲಾಗುತ್ತದೆ. ಅಂದರೆ ಕುಟುಂಬದ ಎಲ್ಲ ಜವಾಬುದಾರಿಗಳನ್ನು ಅದರ ಸದಸ್ಯರಾಗಿದ್ದರೂ ಪುರುಷರಿಗೆ ಅದರಿಂದ ವಿನಾಯಿತಿ ಕೊಟ್ಟು ಮಹಿಳೆಯರಿಗೆ ವಹಿಸಿ ಕೊಡಲಾಗಿದೆ. ಇದನ್ನು ಜೈವಿಕ ನಿಯತಿಯ ದೃಷ್ಟಿಕೋನವೆಂದು ಹೇಳಬಹುದು. ಆದರೆ ಪುರುಷರು ಮನೆ ಹೊರಗಿನ ಹೊಣೆಗಾರಿಕೆ ಯನ್ನು ಮಾತ್ರ ನಿಭಾಯಿಸುತ್ತಿರುತ್ತಾರೆ. ಕುಟುಂಬದ ಅವಿಭಾಜ್ಯ ಅಂಗವಾಗಿದ್ದರೂ ಪುರುಷರಿಗೆ ಕುಟುಂಬದ ನಿರ್ವಹಣೆಯ ಜವಾಬುದಾರಿಯಿಂದ ವಿನಾಯಿತಿ ನೀಡಲಾಗಿದೆ.

ದುಡಿಮೆ ಬಗ್ಗೆ ಸಮಾಜದಲ್ಲಿ ನೆಲೆಗೊಂಡಿರುವ ಇಂತಹ ನಂಬಿಕೆಯನ್ನು ಸಮಾಜ ವಿಜ್ಞಾನಗಳು ಊರ್ಜಿತಗೊಳಿಸುತ್ತಿವೆ. ಏಕೆಂದರೆ ಇಂತಹ ನಂಬಿಕೆಗಳನ್ನು ಆಧರಿಸಿಯೆ ಸಮಾಜ ವಿಜ್ಞಾನಗಳನ್ನು ಕಟ್ಟಲಾಗುತ್ತದೆ. ಅಲ್ಲಿ ಸಿದ್ಧಾಂತಗಳನ್ನು ಲಿಂಗ ತಾರತಮ್ಯವಾದಿ ನೆಲೆಯಿಂದಲೆ ರೂಪಿಸಲಾಗುತ್ತಿದೆ. ಲಿಂಗ ಸಂಬಂಧಿ ಶ್ರಮ ವಿಭಜನೆಯೆಂಬುದು ಇಂದಿಗೂ ಗಟ್ಟಿಯಾಗಿ ಸಮಾಜದಲ್ಲಿ ನೆಲೆಯೂರಿದೆ ಮತ್ತು ಅದು ಭಿನ್ನ ಭಿನ್ನ ರೂಪದಲ್ಲ್ಲಿ ಗಟ್ಟಿಯಾಗುತ್ತಾ ನಡೆದಿದೆ. ಲಾಲನೆ, ಪಾಲನೆ, ಪೋಷಣೆ, ಮನೆವಾರ್ತೆ, ಸಂಗೋಪನೆ ಮುಂತಾದ ಚಟುವಟಿಕೆಗಳು ಮಹಿಳೆಯರಿಗೆ ಮೀಸಲಾಗಿ ಬಿಟ್ಟಿವೆ. ಈ ಬಗೆಯ ಲಿಂಗ ಸಂಬಂಧಿ ಶ್ರಮವಿಭಜನೆಯನ್ನು ಒಪ್ಪಿಕೊಂಡಿರುವುದರಿಂದ ಹಾಗೂ ಮಹಿಳೆಯರನ್ನು ಕೇವಲ ಗೃಹಿಣಿಯರನ್ನಾಗಿ ಮಾತ್ರ ಪರಿಭಾವಿಸಿಕೊಂಡಿ ರುವುದರಿಂದ ಅವರ ದುಡಿಮೆ ಅರ್ಥಶಾಸ್ತ್ರದಲ್ಲಿ ಮತ್ತು ವರಮಾನದ ಗಣನೆಯಲ್ಲಿ ತಿರಸ್ಕೃತವಾಗಿದೆ, ಮಹಿಳೆಯರೂ ಸಹ ತಮ್ಮ ದುಡಿಮೆಯನ್ನು ದುಡಿಮೆಯೆಂದು ಪರಿಗಣಿಸಲು ಸಿದ್ಧರಿಲ್ಲ. ಏಕೆಂದರೆ ಪುರುಷಶಾಹಿಯ ನಿರ್ದೇಶನದಲ್ಲಿ ನಡೆಯುತ್ತಿರುವ ಸಾಮಾಜಿಕೀಕರಣದಿಂದಾಗಿ ಅದರ ನೆಲೆಯಲ್ಲಿಯೆ ಅವರು ಅದನ್ನು ಪರಿಭಾವಿಸಿ ಕೊಳ್ಳುವುದು ಅನಿವಾರ್ಯವಾಗಿ ಬಿಟ್ಟಿದೆ. ಪುರುಷಶಾಹಿಯ ಪ್ರಭಾವ ಮತ್ತು ಪರಿಣಾಮ ಹಾಗೂ ಸಾಮಾಜಿಕೀಕರಣದ ತಿೀಕ್ಷ್ಣತೆ  ಅಷ್ಟೊಂದು ತೀವ್ರವಾಗಿದೆ.

ದೈನಂದಿನ ಹಿತಾಸಕ್ತಿಗಳು v\s ಸಂಘರ್ಷಣಾತ್ಮಕ ಅಗತ್ಯಗಳು

ಮಹಿಳೆಯರ ಹಿತಾಸಕ್ತಿಯನ್ನು ಎರಡು ನೆಲೆಗಳಲ್ಲಿ ಪರಿಭಾವಿಸಿಕೊಳ್ಳಲಾಗುತ್ತಿದೆ. ಮೊದಲನೆಯದು ಅವರ ದೈನಂದಿನ ಅಗತ್ಯಗಳು. ಎರಡನೆಯದು ಅವರ ಸಂಘರ್ಷಣಾತ್ಮಕ ಅಗತ್ಯಗಳು. ಯಾವುದನ್ನು ಮಹಿಳೆಯರನ್ನು ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಸಂಯೋಜಿಸಬೇಕು ಎಂಬ ಪ್ರಣಾಳಿಕೆಯಾಗಿ ೭೦ರ ದಶಕದಲ್ಲಿ ಪ್ರಚುರಕ್ಕೆ ತರಲಾಯಿತೋ ಅದು ಪ್ರಧಾನವಾಗಿ ಮಹಿಳೆಯರ ದೈನಂದಿನ ಅಗತ್ಯಗಳನ್ನು ಮಾತ್ರ ಪೂರೈಸುವ ನೆಲೆಯನ್ನು ಹೊಂದಿತ್ತು. ಮಹಿಳೆಯರಿಗೆ ಶಿಕ್ಷಣ ಒದಗಿಸುವುದು, ಕೂಲಿಯಲ್ಲಿ ತಾರತಮ್ಯವನ್ನು ನಿವಾರಿಸುವುದು, ಹೆರಿಗೆ ಭತ್ಯೆ ನೀಡುವುದು, ಅದಕ್ಕೆ ಸಂಬಂಧಿಸಿದಂತೆ ರಜೆ ನೀಡುವುದು, ಆರೋಗ್ಯ ಸೌಲಭ್ಯ ಒದಗಿಸುವುದು, ಉದ್ಯೋಗ ವನ್ನು ನೀಡುವುದು ಮುಂತಾದವು ಮಹಿಳೆಯರ ದೈನಂದಿನ ಅಗತ್ಯಗಳಿಗೆ ಸಂಬಂಧಿಸಿದ ಸಂಗತಿಗಳಾಗಿವೆ. ಇಂತಹ ಸಂಗತಿಗಳು ಮಹಿಳೆಯರ ಸ್ಥಿತಿಗತಿಗಳನ್ನು ಉತ್ತಮಪಡಿಸ ಬಲ್ಲವೇ ವಿನಾ ಅವರ ಸ್ಥಾನಮಾನವನ್ನು ಪರಿವರ್ತಿಸಲು ಸಾಧ್ಯವಿಲ್ಲ. ಇಂತಹ ಅಗತ್ಯಗಳನ್ನು, ಅಂದರೆ ಮಹಿಳೆಯರ ದೈನಂದಿನ ಅಗತ್ಯಗಳನ್ನು ಈಡೇರಿಸಲು ಸರ್ಕಾರಗಳಿಗೆ ಯಾವುದೆ ಹಿಂಜರಿತವಿರುವುದಿಲ್ಲ. ಏಕೆಂದರೆ ಅವುಗಳನ್ನು ಈಡೇರಿಸಲು ಸಮಾಜದಲ್ಲಿ ಯಾವುದೇ ರೀತಿಯ  ಅಧಿಕಾರ ಸಂಬಂಧಿ ಬದಲಾವಣೆ ತರುವ ಅತ್ಯವಿರುವುದಿಲ್ಲ. ಈ ಬಗೆಯ ಅಗತ್ಯಗಳ ಬಗ್ಗೆ ಸರ್ಕಾರಗಳು ತಮಗೆ ತಾವೆ ಮುತವರ್ಜಿವಹಿಸಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತವೆ. ಉದಾಹರಣೆಗೆ ಭಾಗ್ಯಲಕ್ಷ್ಮಿ ಯೋಜನೆ, ಬಾಲಕಿಯರಿಗೆ ಬೈಸಿಕಲ್ಲನ್ನು ನೀಡುವುದು ಮುಂತಾದವು.

ಮಹಿಳೆಯರನ್ನು ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಸಂಯೋಜಿಸಬೇಕು (ಡಬ್ಲುಐಡಿ) ಎಂಬ ವಿಚಾರ ಪ್ರಣಾಳಿಕೆಯನ್ನು ಆಧರಿಸಿ ರೂಪಿಸಲಾದ ಲಿಂಗ ಸಂಬಂಧಿ ಅಭಿವೃದ್ಧಿ ಸಿದ್ಧಾಂತಗಳು ಕೇವಲ ಮಹಿಳೆಯರ ದೈನಂದಿನ ಅಗತ್ಯಗಳನ್ನು ಮಾತ್ರ ಗುರುತಿಸುವಲ್ಲಿ ಯಶಸ್ವಿಯಾದವು. ಆ ಸಿದ್ಧಾಂತಗಳು ಮಹಿಳೆಯರ ಸ್ಥಿತಿಗತಿಗಳನ್ನು ಮಾತ್ರ  ಉತ್ತಮ ಪಡಿಸುವ ದಿಶೆಯಲ್ಲಿ ಕ್ರಿಯಾಶೀಲವಾದವು. ಅಲ್ಲಿ ಸ್ತ್ರೀ ಸಮಾನತೆಯೆಂಬುದನ್ನು ವ್ಯವಸ್ಥೆಯಲ್ಲಿ ಯಾವುದೇ ರೀತಿಯ ಸಾಮಾಜಿಕ-ಆರ್ಥಿಕ ಬದಲಾವಣೆಯಿಲ್ಲದೆ ಸಾಧಿಸಿಕೊಳ್ಳಲು ಸಾಧ್ಯವೆಂದು ಅಲ್ಲಿ ನಂಬಲಾಯಿತು.

ಇದಕ್ಕೆ ಪ್ರತಿಯಾಗಿ ಬಂದ ಮಹಿಳೆ ಮತ್ತು ಅಭಿವೃದ್ಧಿ(ಡಬ್ಲುಎಡಿ)ಯೆಂಬ ವಿಚಾರ ಪ್ರಣಾಳಿಕೆಯ ಚೌಕಟ್ಟಿನಲ್ಲಿ ರೂಪುಗೊಂಡ ಸಿದ್ಧಾಂತಗಳು ಮಹಿಳೆಯರು ಅನುಭವಿಸುತ್ತಿರುವ ಎಲ್ಲ ಬಗೆಯ ಅಸಮಾನತೆ,ತಾರತಮ್ಯ, ಶೋಷಣೆ ಮುಂತಾದ ವುಗಳಿಗೆ ಬಂಡವಾಳಶಾಹಿ ವ್ಯವಸ್ಥೆಯನ್ನು ಕಾರಣ ಮಾಡಿ ಅದರ ವಿನಾಶದಲ್ಲಿ ಮಹಿಳೆಯರ ವಿಮೋಚನೆ ಸಾಧ್ಯವೆಂಬ ವಿಚಾರವನ್ನು ಪ್ರಚುರಪಡಿಸಿದವು. ಮಹಿಳೆಯರು ಹೆಚ್ಚು ಹೆಚ್ಚಾಗಿ ಶ್ರಮ ಮಾರುಕಟ್ಟೆಯನ್ನು ಪ್ರವೇಶಿಸುವುದರಿಂದ, ಕಾರ್ಮಿಕ ವರ್ಗದ ಭಾಗವಾಗುವುದರಿಂದ ಅವರ ಸಮಸ್ಯೆ ಬಗೆಹರಿದು ಬಿಡುತ್ತದೆಯೆಂದು ಅಲ್ಲಿ ಪ್ರತಿಪಾದಿಸ ಲಾಯಿತು.

ಇಂದು ಹೆಚ್ಚು ಮನ್ನಣೆ ಪಡೆದಿರುವ ಲಿಂಗ ಸಂಬಂಧಗಳು ಮತ್ತು ಮಹಿಳೆ (ಜಿಎಡಿ) ಎಂಬ ವಿಚಾರ ಪ್ರಣಾಳಿಕೆಯನ್ನಾಧರಿಸಿದ ಲಿಂಗ ಸಂಬಂಧಿ ಅಭಿವೃದ್ಧಿ ಸಿದ್ಧಾಂತಗಳು ಬಂಡವಾಳಶಾಹಿ ಮತ್ತು ಪುರುಷಶಾಹಿ ಎರಡನ್ನು ನಾಶ ಮಾಡಿದಾಗ ಮಾತ್ರ ಮಹಿಳೆಯರಿಗೆ ನಿಜವಾದ ಬಿಡುಗಡೆ ಸಾಧ್ಯವೆಂಬ ವಿಚಾರವನ್ನು ಮಂಡಿಸುತ್ತಿವೆ. ಬಂಡವಾಳಶಾಹಿಯನ್ನು ನಾಶ ಮಾಡಿಬಿಟ್ಟರೆ ಮಹಿಳೆಯರಿಗೆ ವಿಮೋಚನೆ ದೊರೆಯುತ್ತದೆಯೆಂಬುದಕ್ಕೆ ನಮಗೆ ನಿದರ್ಶನಗಳು ದೊರೆಯುವುದಿಲ್ಲ. ಊಳಿಗಮಾನ್ಯ ವ್ಯವಸ್ಥೆಯಿರಲಿ, ಬಂಡವಾಳಶಾಹಿ ವ್ಯವಸ್ಥೆಯಿರಲಿ ಅಥವಾ ಅದು ಸಮಾಜವಾದಿ ವ್ಯವಸ್ಥೆಯಿರಲಿ ಲಿಂಗ ಸಂಬಂಧಿ ತಾರತಮ್ಯ, ಮಹಿಳೆಯರ ಶೋಷಣೆ ಮತ್ತು ಅವರ ದುಡಿಮೆಯ ಅಪಮೌಲ್ಯ ಅನೂಚಾನವಾಗಿ ಹರಿದುಕೊಂಡು ಬರುತ್ತಿರುತ್ತವೆ. ಈ ಎಲ್ಲ ವ್ಯವಸ್ಥೆಗಳಿಗೂ ಅದು ಸಾಮಾನ್ಯವಾದ ಒಂದು ಗುಣವಾಗಿ ಬಿಟ್ಟಿದೆ. ಆದ್ದರಿಂದ ಪುರುಷಶಾಹಿಯನ್ನು ನೇರವಾಗಿ ಎದುರಿಸಬೇಕಾಗುತ್ತದೆ. ಅದರ ವಿನಾಶ ವಾಗದೆ ಮಹಿಳೆಯರ ವಿಮೋಚನೆ ಸಾಧ್ಯವಾಗುವುದಿಲ್ಲ. ಇಲ್ಲಿ ಲಿಂಗ ಸಮಾನತೆ ಮುಖ್ಯವಾಗುವುದಿಲ್ಲ. ಮಹಿಳೆಯರ ಸ್ವಾಯತ್ತ ಬದುಕು ನಿರ್ಣಾಯಕವಾಗುತ್ತದೆ. ಮಹಿಳೆಯರ ಸಂಘರ್ಷಣಾತ್ಮಕ ಹಿತಾಸಕ್ತಿಗಳು ಮುಖ್ಯವಾಗುತ್ತವೆ.

ಆದರೆ ಸಂಘರ್ಷಣಾತ್ಮಕ ಗುಂಪಿನ ಅಗತ್ಯಗಳನ್ನು ಪೂರೈಸಲು ಸಮಾಜದಲ್ಲಿನ ಅಧಿಕಾರ ಸಂಬಂಧಗಳಲ್ಲಿ ಬದಲಾವಣೆಗಳನ್ನು ಉಂಟುಮಾಡಬೇಕಾಗುತ್ತದೆ. ಇವು ಮಹಿಳೆಯರ ಆಸ್ತಿಯ ಹಕ್ಕಿನ ಪ್ರಶ್ನೆಯನ್ನು ಒಳಗೊಂಡಿವೆ. ಇವು ಮನೆವಾರ್ತೆಯನ್ನು ಪುರುಷರು ಹಂಚಿಕೊಳ್ಳುವ ಸಂಗತಿಯನ್ನು ಒಳಗೊಂಡಿವೆ. ಅವು ಲಿಂಗ ಸಂಬಂಧಿ ಶ್ರಮ ವಿಭಜನೆಯನ್ನು ತಿರಸ್ಕರಿಸುವ ಸಂಗತಿಯನ್ನು ಒಳಗೊಂಡಿವೆ. ಮಹಿಳೆಯರನ್ನು ಅಭಿವೃದ್ಧಿಯ ಕರ್ತೃಗಳಾಗಿ ಒಪ್ಪಿಕೊಳ್ಳುವ ಸಂಗತಿಯನ್ನು ಒಳಗೊಂಡಿವೆ. ಮಹಿಳೆಯರನ್ನು ಸಾಮಾಜಿಕ ಘಟಕವಾಗಿ ನೋಡುವ ನೆಲೆಯನ್ನು ಒಳಗೊಂಡಿವೆ. ಸಂತಾನೋತ್ಪತ್ತಿಯನ್ನು ಸಾಮಾಜಿಕ ಜವಾಬುದಾರಿಯೆಂದು ಪರಿಭಾವಿಸಿಕೊಳ್ಳುವ ನೆಲೆೆಯನ್ನು ಹೊಂದಿವೆ. ಮಹಿಳೆಯರ ಇಂತಹ ಅಗತ್ಯಗಳನ್ನು ಸರ್ಕಾರಗಳು ಹೆಚ್ಚು ಹಚ್ಚಿಕೊಳ್ಳುವುದಿಲ್ಲ. ಇಲ್ಲಿ ಸಂರ್ಷದ ಸಂಗತಿಗಳಿವೆ-ಪರಿವರ್ತನೆಯ ಪ್ರಕ್ರಿಯೆಯಿದೆ. ಅಧಿಕಾರದ ಮರುಹೊಂದಾಣಿಕೆಯನ್ನು ಮಾಡಿಕೊಳ್ಳಬೇಕಾಗುತ್ತದೆ.

ಅಭಿವೃದ್ಧಿಯ ಕರ್ತೃಗಳಾಗಿ ಮಹಿಳೆಯರು

ಲಾಗಾಯ್ತಿನಿಂದಲೂ ಅಭಿವೃದ್ಧಿ ಕುರಿತ ಚರ್ಚೆಗಳಲ್ಲಿ ಮಹಿಳೆಯರನ್ನು ಕೇವಲ ಅದರ ಫಲಾನುಭವಿಗಳನ್ನಾಗಿ, ಗ್ರಾಹಕರನ್ನಾಗಿ, ಅನುಭೋಗಿಗಳನ್ನಾಗಿ  ಮಾತ್ರ ಪರಿಗಣಿಸಿಕೊಂಡು ಬರಲಾಗಿದೆ. ಇದನ್ನು ಅಮರ್ತ್ಯಸೆನ್ ಅಸ್ವಸ್ಥತೆಯ ದೃಷ್ಟಿಕೋನ (patient approach)ವೆಂದು ಕರೆದಿದ್ದಾನೆ (ಇದನ್ನು ಇನ್ನೊಂದು ಬಗೆಯಲ್ಲಿ ವೆಲ್‌ಬೀಯಿಂಗ್ ಅಪ್ರೊಚ್ ಎಂದು ಕರೆಯಬಹುದಾಗಿದೆ). ಮಹಿಳೆ ಯರನ್ನು ಹೀಗೆ ಅಭಿವೃದ್ಧಿ ಸಿದ್ಧಾಂತಗಳಲ್ಲಿ ಫಲಗಳನ್ನು ಸ್ವೀಕರಿಸುವ ಗ್ರಾಹಕರೆಂದು ಪರಿಭಾವಿಸಿ ಕೊಂಡು ಬರಲಾಗಿದೆ. ಇದರಿಂದ ಮಹಿಳೆಯರಿಗೆ ತೀವ್ರ ಅನ್ಯಾಯವಾಗಿದೆ. ಈ ಬಗೆಯ ದೃಷ್ಟಿಕೋನವು ಕಲ್ಯಾಣವಾದಿನೆಲೆಗಳನ್ನು ಹೊಂದಿರುವುದು ಕಂಡುಬರುತ್ತದೆ. ಅಮರ್ತ್ಯಸೆನ್ ಇದಕ್ಕೆ ಪ್ರತಿಯಾಗಿ ಪರಿವರ್ತನಾವಾದಿ ದೃಷ್ಟಿಕೋನವನ್ನು ಪ್ರತಿಪಾದಿಸುತ್ತಿದ್ದಾನೆ. ಮಹಿಳೆಯರನ್ನು ಅವನು ಬದಲಾವಣೆಯ ಹರಿಕಾರರೆಂದು ಪರಿಗಣಿಸುತ್ತಾನೆ. ಅವರು ಅಭಿವೃದ್ಧಿಯ ಫಲಾನುಭವಿಗಳೂ ಹೌದು-ಅವರು ಅಭಿವೃದ್ಧಿಯ ವಸ್ತುವೂ ಹೌದು ಮತ್ತು ಅವರು ಅಭಿವೃದ್ಧಿಯ ಕರ್ತೃಗಳೂ ಹೌದು. ಇದನ್ನು ಸೆನ್ ಕರ್ತೃತ್ವವಾದಿ ದೃಷ್ಟಿಕೋನವೆಂದು (agency approach) ಕರೆಯುತ್ತಾನೆ. ಅಮರ್ತ್ಯಸೆನ್ ವೆಲ್‌ಬೀಯಿಂಗ್ ಅಪ್ರೋಮತ್ತು ಏಜೆನ್ಸಿ ಅಪ್ರೋನಡುವೆ ಭಿನ್ನತೆಯನ್ನು ಗುರುತಿಸುತ್ತ್ತಾನೆ. ಈ ಬಗೆಯ ದೃಷ್ಟಿಕೊನದಲ್ಲಿನ  ಬದಲಾವಣೆಯ ಪರಿಣಾಮವಾಗಿ ಮಹಿಳೆಯರಲ್ಲಿ  ಅಭಿವೃದ್ಧಿಗೆ ತಾವು ನೀಡುತ್ತಿರುವ ಕಾಣಿಕೆ ಬಗ್ಗೆ ಅರಿವು ಮೂಡುತ್ತದೆ ಮತ್ತು ಅರು  ಆರ್ಥಿಕತೆಗೆ ಹಾಗೂ ಅಭಿವೃದ್ಧಿಗೆ ನೀಡುತ್ತಿರುವ ಕಾಣಿಕೆಯ ಮಹತ್ವ ಅವರಿಗೆ ತಿಳಿಯುವಂತಾಗುತ್ತದೆ. ಈ ಬಗೆಯ ಅರಿವನ್ನು ಮಹಿಳೆಯರಲ್ಲಿ ಮೂಡಿಸುವ ಅಗತ್ಯವಿದೆ. ತಮ್ಮ ಬದುಕು ಅರ್ಥವಿಲ್ಲದ ಸಂಗತಿಯೆಂಬ ಭಾವನೆ ಅವರ ಮನಸ್ಸಿನಲ್ಲಿ ಭದ್ರವಾಗಿ ಕುಳಿತುಕೊಂಡು ಬಿಟ್ಟಿದೆ. ಆದರೆ ಮಹಿಳೆಯನ್ನು ಕರ್ತೃತ್ವವಾದಿ ದೃಷ್ಟಿಕೋನದಿಂದ ಪರಿಭಾವಿಸಿಕೊಳ್ಳುವುದರ ಮೂಲಕ ಅವರಲ್ಲಿ ಮನೆಮಾಡಿಕೊಂಡಿರುವ ಲಿಂಗ ತಾರತಮ್ಯವಾದಿ ಮನೋಭಾವ ವನ್ನು ಮತ್ತು ಅವರಲ್ಲಿ ಮನೆಮಾಡಿಕೊಂಡಿರುವ ತಮ್ಮ ದುಡಿಮೆಗೆ, ತಮ್ಮ ಬದುಕಿಗೆ ಅರ್ಥವಿಲ್ಲವೆಂಬ ತಪ್ಪು ಭಾವನೆಯನ್ನು ಹೋಗಲಾಡಿಸಬಹುದು. ಅರಿವು ಮತ್ತು ಜಾಗೃತಿ-ಎರಡೂ ಇರುವಂತಹ ಒಂದು, ಅಂದರೆ ಯಾವುದನ್ನು ಇಂಗ್ಲೀಷ್‌ನಲ್ಲಿ ಕಾನ್‌ಸೆಂಟೈಸೇಶನ್ ಅಂತಾ ಕರೆಯುತ್ತಾರೋ, ಅಂತಹ ಪ್ರಕ್ರಿಯೆಗೆ ಮಹಿಳೆಯರನ್ನು ಒಳಪಡಿಸಬೇಕಾಗಿದೆ. ಈ ಬಗೆಯ ಅರಿವು+ಜಾಗೃತಿಗಳಿರುವ ಗುಣವನ್ನು ಮಹಿಳೆಯರು ಬೆಳೆಸಿಕೊಂಡರೆ ಅದು ಮಹಿಳೆಯರಿಗೆ ಪೂರಕವಾದ ಸಾಮಾಜಿಕ ಪರಿವರ್ತನೆಯನ್ನು ಮತ್ತು ಲಿಂಗ ಸಂಬಂಧಿ ಅಭಿವೃದ್ಧಿಯನ್ನು ಸಾಧಿಸಿಕೊಳ್ಳಲು ನೆರವಾಗುತ್ತದೆ.

ಮಹಿಳೆಯರ ಬದುಕನ್ನು ಕೇವಲ ಲೋಕಹಿತಾರ್ಥ ನೆಲೆಯಲ್ಲಿ ಪರಿಭಾವಿಸಿ ಕೊಂಡರೆ ಉಪಯೋಗವಿಲ್ಲ. ಏಕೆಂದರೆ ಅಂತಹ ದೃಷ್ಟಿಕೋನದಿಂದ, ಅಂದರೆ ವೆಲ್‌ಬೀಯಿಂಗ್ ದೃಷ್ಟಿಕೋನದಿಂದ, ಕಲ್ಯಾಣವಾದಿ ದೃಷ್ಟಿಕೋನದಿಂದ,ಅವರಿಗೆ ಒಳ್ಳೆಯ ದಾಗಲೆಂಬ ಅನುಕಂಪವಾದಿ ದೃಷ್ಟಿಕೋನದಿಂದ  ಮಹಿಳೆಯರ ಬದುಕಿನ ಸ್ಥಾನಮಾನ ವನ್ನು ಪರಿವರ್ತಿಸಲು ಸಾಧ್ಯವಿಲ್ಲ. ಏಕೆಂದರೆ ಅಲ್ಲಿ ಅಧಿಕಾರದ ಪ್ರಶ್ನೆಯಿದೆ ಮತ್ತು ಅದಕ್ಕೆ ಅಂಟಿಕೊಂಡಂತೆ ಸಂಘರ್ಷದ ಸಂಗತಿಗಳಿವೆ. ಆದ್ದರಿಂದ ಅವರನ್ನು ಸಂಘರ್ಷಣಾವಾದಿ, ಅಂದರೆ ಮಹಿಳೆಯರ ಸ್ವಹಿತಾಸಕ್ತಿ ನೆಲೆಯಿಂದ ಅದನ್ನು ಪರಿಭಾವಿಸಿಕೊಳ್ಳಬೇಕಾಗಿದೆ. ಯಾವುದನ್ನು ಚೌಕಾಸಿ ಸಂಧಾನದ ದೃಷ್ಟಿಕೋನವೆಂದು ಕರೆಯಲಾಗಿದೆಯೋ ಅಂತಹ ಸಿದ್ಧಾಂತದ ನೆಲೆಯಿಂದ ಮಹಿಳೆಯರ ಬದುಕನ್ನು ಪರಿಭಾವಿಸಿಕೊಳ್ಳುವ ಅಗತ್ಯವಿದೆ. ಮಹಿಳೆಯರ ಬದುಕು ಕೇವಲ ಪರರ ಹಿತಾಸಕ್ತಿಗಾಗಿದೆ ಯೆಂಬುದು ಪುರುಷಶಾಹಿಯು ಕಟ್ಟಿರುವ ಒಂದು ಭ್ರಮೆಯಾಗಿದೆ. ಅದು ಒಂದು ನೆಲೆಯವರೆಗೆ ಸರಿಯಿರಬಹುದು. ಆದರೆ ಅದೇ ಸಾರ್ವತ್ರಿಕ ಸಂಗತಿಯಾಗಬಾರದು. ಮಹಿಳೆಯರ ಮನಸ್ಸ್ಸಿನಲ್ಲಿ ಆಳವಾಗಿ ಬೇರು ಬಿಟ್ಟಿರುವ, ಅಂದರೆ ಅವರಲ್ಲಿ ರಕ್ತಗತವಾಗಿ ಬಿಟ್ಟಿರುವ  ತಮ್ಮ ಬಗೆಗಿನ ನಿರಾಶವಾದಿ ಮತ್ತು ಅಸಹಾಯಕವಾದಿ ದೃಷ್ಟಿಕೋನವನ್ನು ಸರಿಪಡಿಸಬೇಕಾಗಿದೆ. ಅಮತ್ಯ್ಸೆನ್ ಮತ್ತು ಮಾರ್ತ ನುಸ್‌ಬೌಮ್ ವಾದಿಸುತ್ತಿರುವಂತೆ ಮಹಿಳೆಯರು ತಮ್ಮಷ್ಟಕ್ಕೆ ತಾವು ಹಕ್ಕುದಾರಿಕೆಯೆಂಬುದು ಪುರುಷರಿಗೆ ಮಾತ್ರವೆಂಬ ನಂಬಿಕೆಯನ್ನು ಬಲವಾಗಿ ರಕ್ತಗತ ಮಾಡಿಕೊಂಡುಬಿಟ್ಟಿದ್ದಾರೆ. ಈ ಬಗೆಯ ನಂಬಿಕೆ ಯಿಂದಾಗಿ ಮಹಿಳೆಯರಿಗೆ ತಮ್ಮ ದುಡಿಮೆಯ ಮಹತ್ವದ ಬಗ್ಗೆ ತಮಗೆ ವಿಶ್ವಾಸವಿಲ್ಲ ದಿರುವುದರಿಂದಾಗಿ ಲಿಂಗ ಸಮಾನತೆಯನ್ನು ಸಾಧಿಸಿಕೊಳ್ಳುವುದು ಸುಲಭದ ಸಂಗತಿ ಯಲ್ಲ. ಈ ಭ್ರಮೆಯನ್ನು ಹೊಡೆದೋಡಿಸಬೇಕಾಗಿದೆ. ಮಹಿಳೆಯರ ಚೌಕಾಸಿ ಸಂಧಾನದ ಸಾಮರ್ಥ್ಯವನ್ನು ಅಧಿಕಗೊಳಿಸಬೇಕಾಗಿದೆ. ಮಹಿಳೆಯರಿಗೆ ಅಂತಹ ಚೌಕಾಸಿ ಸಂಧಾನಾತ್ಮಕ ದೃಷ್ಟಿಕೋನದ ಅಗತ್ಯವಿಲ್ಲವೆಂದು ಹೇಳಲಾಗುತ್ತಿದೆ. ಈ ಬಗೆಯ ಉಪದೇಶವನ್ನು ಕೈಬಿಡಬೇಕು. ಅವರು ಅಂತಹ ವ್ಯಾವಹಾರಿಕ ದೃಷ್ಟಿಕೋನವನ್ನು ಅಂದರೆ ಸ್ವಹಿತಾಸಕ್ತಿ ಪರವಾದ ಧೋರಣೆಯನ್ನು ಪ್ರಜ್ಞಾಪೂರ್ವಕವಾಗಿ ಬೆಳೆಸಿಕೊಳ್ಳ ಬೇಕಾಗಿದೆ.

ಮಹಿಳೆಯರಿಗೆ ಒಳ್ಳೆಯದಾಗಬೇಕೆಂದು ಬಯಸುವುದು ಬೇರೆ. ಅವರನ್ನು ಅಭಿವೃದ್ಧಿಯ ಕರ್ತೃಗಳೆಂದು ಪರಿಗಣಿಸುವುದು ಬೇರೆ. ಮಹಿಳೆಯರಿಗೆ ಗೌರವ ಕೊಡಬೇಕೆಂದು ಒತ್ತಾಯಿಸುವುದು ಬೇರೆ. ಅವರಿಗೆ ಆಸ್ತಿಯ ಹಕ್ಕನ್ನು ನೀಡುವುದು ಬೇರೆ. ಇದು ಸಂಘರ್ಷವಾದಿ ದೃಷ್ಟಿಕೋನ. ಅವರಿಗೆ ಒಳ್ಳೆಯದಾಗಬೇಕೆಂದು ಬಯ ಸುವುದು ಅಗತ್ಯ. ಅವರಿಗೆ ಗೌರವ ನೀಡಬೇಕೆಂದು ಒತ್ತಾಯಿಸುವುದು ಅಪೇಕ್ಷಣೀಯ. ಅವರ ಸಾಮಾಜಿಕ ಸ್ಥಾನಮಾನ ಉತ್ತಮಗೊಳ್ಳಲು ಮೇಲೆ ತಿಳಿಸಿರುವ ಗೌರವ ನೀಡಬೇಕು ಮತ್ತು ಒಳ್ಳೆಯದಾಗಬೇಕು ಎಂಬ ಸದಾಶಯಗಳು ಬೇಕಾಗುತ್ತವೆ. ಆದರೆ ಅವೆರಡೂ ಒಂದೇ ಅಲ್ಲ. ಅಂದರೆ ಸಹಕಾರವಾದಿ ಮತ್ತು ಸಂಘರ್ಷವಾದಿ ದೃಷ್ಟಿಕೋನಗಳ ನಡುವೆ ಸಂಬಂಧವಿದ್ದರೂ ಅವೆರಡೂ ಒಂದೇ ಅಲ್ಲ. ಅವುಗಳ ನಡುವೆ ಸಂಬಂಧವಿದೆ. ಆದರೆ ಅದು ಬಿಂಬಕ ಸ್ವರೂಪದ್ದಲ್ಲ. ಮಹಿಳೆಯರ ಬಗೆಗಿನ ಸದಾಶಯ ಮತ್ತು ಮಹಿಳೆಯರ ಸ್ಥಾನಮಾನ ಇವೆರಡರ  ನಡುವೆ ಅನುಲೋಮ ಸಂಬಂಧವಿದೆಯೆಂದು ಭಾವಿಸುವುದಕ್ಕೆ ನಮಗೆ ಆಧಾರಗಳೇನಿಲ್ಲ. ಸದಾಶಯಗಳಿಂದ ಮಹಿಳೆಯರ ಬದುಕು ಉತ್ತಮಗೊಂಡುಬಿಡುವುದಿಲ್ಲ. ಸರ್ಕಾರಗಳು ಮಹಿಳೆಯರ ಅಭಿವೃದ್ಧಿಗೆ ಸಂಬಂಧಿಸಿದಂತೆ ಕಲ್ಯಾಣವಾದಿ ದೃಷ್ಟಿಕೋನವನ್ನು ಬಿಟ್ಟುಬಿಡಬೇಕು. ಇಲ್ಲಿನ ಅಗತ್ಯವೆಂದರೆ ಪರಿವರ್ತನಾಶೀಲ ದೃಷ್ಟಿಕೋನ. ಅವರ ಸ್ಥಿತಿಗತಿ ಬದಲಾದರೆ ಸಾಕಾಗುವುದಿಲ್ಲ. ಅವರ ಸ್ಥಾನಮಾನ ಬದಲಾಗಬೇಕು. ಅಭಿವೃದ್ಧಿಯಲ್ಲಿ ಅವರ ಸಹಭಾಗಿತ್ವವು ಪುರುಷರ ಸಹಭಾಗಿತ್ವದಷ್ಟೇ ಮಹತ್ವವಾದುದೆಂಬ ಸ್ಥಿತಿಯನ್ನು ನಿರ್ಮಿಸಬೇಕಾಗಿದೆ. ಮಹಿಳೆಯರು ತಾವೇನಾಗಬೇಕೆಂದಿದ್ದಾರೊ ಅದರಂತಾಗುವುದಕ್ಕೆ ಮತ್ತು ತಾವು ಏನು ಮಾಡಬೇಕೆಂದಿದ್ದಾರೋ ಅದನ್ನು ಮಾಡುವುದಕ್ಕೆ ಅಗತ್ಯವಾದ ಸ್ವಾತಂತ್ರ್ಯ ಮತ್ತು ಸಾಮರ್ಥ್ಯ ಒದಗಿಸುವ ಪ್ರಕ್ರಿಯೆಯನ್ನು ಲಿಂಗ ಸಂಬಂಧಿ ಅಭಿವೃದ್ಧಿಯೆಂದು ಹೇಳಬಹುದು. ಈ ದಿಶೆಯಲ್ಲಿ ಮಹಿಳೆಯರ ಅಭಿವೃದ್ಧಿಗೆ ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಸಮಾಜದಲ್ಲಿ ಒದಗಿ ಬರುವ ಅವಕಾಶಗಳನ್ನು ಧಾರಣೆ ಮಾಡಿಕೊಳ್ಳಲು ಅಗತ್ಯವಾದ ‘ಸಾಮರ್ಥ್ಯ ಹಾಗೂ ಸ್ವಾತಂತ್ರ್ಯವನ್ನು ಮಹಿಳೆಯರಿಗೆ ಒದಗಿಸಿ ಕೊಡುವ ಬಗ್ಗೆ ಮತ್ತು ಅವು ಅವರಿಗೆ ಒದಗಿ ಬರುವಂತೆ ಮಾಡುವ ಬಗ್ಗೆ ನಾವು ಚಿಂತಿಸಬೇಕಾಗಿದೆ. 

ಕುಟುಂಬ : ಸಹಕಾರ ಮತ್ತು ಸಂಘರ್ಷಗಳನ್ನೊಳಗೊಂಡ ಸಂಯುಕ್ತ ಸಂಸ್ಥೆ

ಕುಟುಂಬ, ಕುಟುಂಬ ಸಂಬಂಧಗಳು-ಇವುಗಳನ್ನು ನಮ್ಮ ಸಮಾಜದ ಸಂದರ್ಭದಲ್ಲಿ ಅತಿಯಾಗಿ ವೈಭವೀಕರಿಸಲಾಗಿದೆ. ಅದಕ್ಕೆ ಪವಿತ್ರವಾದ ಮತು ಒಂದು ಬಗೆಯಲ್ಲಿ ಧಾರ್ಮಿಕವಾದ, ಸಾಂಸ್ಥಿಕವಾದ ರೂಪವನ್ನು ನೀಡಲಾಗಿದೆ. ಕುಟುಂಬವು ಅದರ ಎಲ್ಲ ಸದಸ್ಯರ ಹಿತಾಸಕ್ತಿಗಳನ್ನು ಕಾಪಿಡುತ್ತದೆಯೆಂದು ನಂಬಲಾಗಿದೆ. ಒಂದು ನೆಲೆಯಲ್ಲಿ ಇವೆಲ್ಲ ಸರಿಯಿರಬಹುದು. ಅದು ತನ್ನ ಸದಸ್ಯರಿಗೆ ಒಂದು ರೀತಿಯ ಭದ್ರತೆಯನ್ನು ನೀಡುತ್ತಿರಬಹುದು. ಆದರೆ ಅದರ ಲಿಂಗ ಸಂಬಂಧಿ ಆಯಾಮವು ನಾವು ತಿಳಿದು ಕೊಂಡಿರುವಷ್ಟು ಅಥವಾ ಅದನ್ನು ವೈಭವೀಕರಿಸಿರುವಂತೆ ಅದು ಆದರ್ಶ ಸ್ವರೂಪದಲ್ಲೇನು ಕೆಲಸ ಮಾಡುತ್ತಿಲ್ಲ. ಅಮರ್ತ್ಯಸೆನ್ ಅದನ್ನು ಸಹಕಾರ-ಸಂಘರ್ಷಗಳ  ಸಂಯುಕ್ತ ಸಂಸ್ಥೆಯೆಂದು ಪರಿಭಾವಿಸಿಕೊಳ್ಳುತ್ತಾನೆ. ಅಲ್ಲಿ ಕುಟುಂಬ ಸದಸ್ಯರ ನಡುವೆ ಸಹಕಾರವಿರುತ್ತದೆ. ಅಲ್ಲಿ ಸಹಬಾಳ್ವೆಯ ಸಂಗತಿಗಳಿರುತ್ತವೆ. ಸದಸ್ಯರು ಸಹಕಾರಿ ಧೋರಣೆ ತಳೆಯುವುದರಿಂದ ಅವರಿಗೆ ಅಲ್ಲಿ ಭದ್ರತೆ ದೊರೆಯುತ್ತದೆ. ಇದು ನಿಜ. ಆದರೆ ಅಲ್ಲಿ ಸದಸ್ಯರ ನಡುವೆ ಸಂಘರ್ಷದ, ಚೌಕಾಸಿಯ ಸಂಗತಿಗಳು ಇಲ್ಲವೆಂದು ತಿಳಿಯುವುದು ಸರಿಯಲ್ಲ. ಏಕೆಂದರೆ ಕುಟುಂಬದ ಮಹಿಳಾ ಸದಸ್ಯರು ಅನೇಕ ಬಗೆಯ ತಾರತಮ್ಯಗಳನ್ನು ಕುಟುಂಬದೊಳಗೆ ಎದುರಿಸುತ್ತಿರುತ್ತಾರೆ. ಅವರನ್ನು ಕುಟುಂಬದ ಜೊತೆ ಸಮೀಕರಿಸಲಾಗುತ್ತದೆ. ಮಹಿಳೆಯರನ್ನು ಕುಟುಂಬಕ್ಕಾಗಿ, ಅದರ ಏಳಿಗೆಗಾಗಿ ಬದುಕಿರುವ ಜೀವಿಯೆಂದು, ಅದಕ್ಕಾಗಿ ಅವಳು ತ್ಯಾಗಮಾಡಬೇಕೆಂದು ಪ್ರತಿಪಾದಿಸಲಾಗುತ್ತಿದೆ. ಕುಟುಂಬದ ಏಳಿಗೆಯಲ್ಲಿ ಮಹಿಳೆಯರ ಬದುಕಿನ ಸಾರ್ಥಕತೆ ಅಡಗಿದೆಯೆಂದು ತಿಳಿಯಲಾಗಿದೆ. ಕುಟುಂಬದಲ್ಲಿ ಅದರ ಮಹಿಳಾ ಸದಸ್ಯರಿಗೆ ಅನ್ಯಾಯ ಅಥವಾ ಶೋಷಣೆ ಸಾಧ್ಯವೇ ಇಲ್ಲವೆಂದು ವಾದಿಸಲಾಗುತ್ತಿದೆ. ಒಂದು ವೇಳೆ ಅಂತಹದ್ದೇನಾದರೂ ಇದ್ದರೆ ಅದು ಕೇವಲ ಕುಟುಂಬದ ಅಂದರೆ ಅದರ ಎಲ್ಲ ಸದಸ್ಯರ ಹಿತಾಸಕ್ತಿಗಳನ್ನು ರಕ್ಷಿಸುವ ಸಲುವಾಗಿರುತ್ತದೆ. ಮಹಿಳೆಯರನ್ನು ಕುಟುಂಬ ದೊಂದಿಗೆ ಸಮೀಕರಿಸಿದ್ದರೆ, ಅವರ ಬದುಕನ್ನು ಕುಟುಂಬದ ಏಳಿಗೆಯೊಂದಿಗೆ ತಳುಕು ಹಾಕಿದ್ದರೆ ಅದು ಸಹಜವಾದ ಸಂಗತಿಯೇ ವಿನಾ ಅದು ಅವಳಿಗೆ ಮಾಡಿದ ತಾರತಮ್ಯವಲ್ಲವೆಂದು ಹೇಳಲಾಗುತ್ತಿದೆ. ಒಂದು ವೇಳೆ ಹಾಗೇನಾದರು ತಾರತಮ್ಯ ಅಥವಾ ಅನ್ಯಾಯ ಸಂಭವಿಸಿದರೆ ಅದು ಕುಟುಂಬದ ಹಿತಕ್ಕಾಗಿ ನಡೆದಿರುತ್ತದೆ.ಅದನ್ನು ಮಹಿಳೆಯರ ಶೋಷಣೆಯೆಂದು ಹೇಳುವುದು ಸರಿಯಲ್ಲವೆಂದು ಸಮಜಾಯಿಷಿ ನೀಡಲಾಗುತ್ತಿದೆ. ಕುಟುಂಬ ಹಿತಕ್ಕಾಗಿ ಅಲ್ಲಿನ ತಾರತಮ್ಯವನ್ನು ಮಹಿಳೆಯರು ಸಹಿಸಿಕೊಳ್ಳಬೇಕೆಂದು ಹೇಳಲಾಗುತ್ತಿದೆ. ಇಂತಹ ಕುಟುಂಬ ಸಂಬಂಧಗಳನ್ನು ಬದಲಾಯಿಸಬೇಕೆಂದರೆ ಅಲ್ಲಿ ಸಂಘರ್ಷಗು ಅನಿವಾರ್ಯವಾಗಿಬಿಡುತ್ತವೆ. ಮಹಿಳೆ ಯರು ಅಲ್ಲಿ ತಾರತಮ್ಯವನ್ನು, ಶೋಷಣೆಯನ್ನು, ದೌರ್ಜನ್ಯವನ್ನು, ಹಿಂಸೆಯನ್ನು ಸಹಿಸಿಕೊಳ್ಳುತ್ತಿದ್ದರೆ ಅದು ಅವರ ಜೈವಿಕ ಗುಣದಿಂದಾಗಿಯಲ್ಲ. ಅದು ಕೇವಲ ಅವರಿಗೆ ಅದನ್ನು ಪ್ರಶ್ನಿಸುವದಕ್ಕಾಗುತ್ತಿಲ್ಲವೆಂಬ ಕಾರಣಕ್ಕೆ ಮಾತ್ರವೆ ವಿನಾ ಅಥವಾ ಅಲ್ಲಿ ಸಹಕಾರದ ಧೋರಣೆಗೆ ಪ್ರತಿಯಾಗಿ ಸಂಘರ್ಷದ ಧೋರಣೆಯನ್ನು ತಳೆಯುವುದು ಅವರಿಗೆ ಸಾಧ್ಯವಿಲ್ಲವೆಂಬ ಕಾರಣಕ್ಕೆ ವಿನಾ ಅದು ತನ್ನ ವಿಧಿ ಅಥವಾ ಅದು ತಾನು ಸಹಿಸಿಕೊಳ್ಳಬೇಕಾದ ಜೈವಿಕ ನಿಯತಿಯೆಂಬ ಕಾರಣಕ್ಕಲ್ಲವೆಂಬುದನ್ನು ನಾವು ತಿಳಿದುಕೊಳ್ಳಬೇಕು. ಲಿಂಗ ಸಂಬಂಧಿ ಅಭಿವೃದ್ಧಿಯೆಂದರೆ ಮಹಿಳೆಯರಿಗೆ ಕುಟುಂಬದಲ್ಲಿರುವ ಲಿಂಗ ಸಂಬಂಧಿ ತಾರತಮ್ಯವಾದಿ ನೆಲೆಗಳನ್ನು ಮತ್ತು ಅದರ ಪುರುಷಶಾಹಿ ನೆಲೆಗಳನ್ನು ಪ್ರಶ್ನಿಸಲು, ಅದನ್ನು ದಿಕ್ಕರಿಸಲು, ಅದಕ್ಕೆ ಸವಾಲೊಡ್ಡುಲು ಅಗತ್ಯವಾದ ಸಾಮರ್ಥ್ಯ ಮತ್ತು ಸ್ವಾತಂತ್ರ್ಯಗಳನ್ನು ಒದಗಿಸುವುದೇ ಆಗಿದೆ. ಮಹಿಳೆಯರು ಅನೇಕ ಕುಟುಂಬ ಸಂಬಂಧಿ ಅಸಮಾನತೆಗಳನ್ನು ಎದುರಿಸುತ್ತಿದ್ದಾರೆ. ಅಲ್ಲಿ ಹಿಂಸೆಯನ್ನು, ಶೋಷಣೆೆಯನ್ನು, ದೌರ್ಜನ್ಯವನ್ನು, ದೈಹಿಕ ಅಭದ್ರತೆಯನ್ನು ಅವರು ಎದುರಿಸುತ್ತಿದ್ದರೆ ಅದು ಅವರ ಆಯ್ಕೆಗೆ ಪ್ರತಿಯಾಗಿ ಅವು ಅವರಿಗೆ ಅನಿವಾರ್ಯವಾಗಿರುತ್ತವೆ. ಪುರುಷಶಾಹಿಯು ಅದನ್ನು ಮಹಿಳೆಯ ಆಯ್ಕೆಯೆಂದು, ಅದು ಇರಬೇಕಾದುದೇ ಆ ರೀತಿಯಲ್ಲೆಂದು ಪ್ರತಿಪಾದಿಸುತ್ತಿದೆ. ನಿಜಕ್ಕೂ ಮಹಿಳೆಯರಿಗೆ ಅಲ್ಲಿ ಅಂದರೆ ಕುಟುಂಬದೊಳಗೆ ಆಯ್ಕೆಯ ಸ್ವಾತಂತ್ರ್ಯವನ್ನು ಮತ್ತು ಅದಕ್ಕೆ ಸಂಬಂಧಿಸಿದಂತೆ ಸಾಮರ್ಥ್ಯವನ್ನು ಒದಗಿಸಿದರೆ ಅವರು ಅಂತಹ ಹಿಂಸಾತ್ಮಕ ಸಂಬಂಧಗಳನ್ನು ತಿರಸ್ಕರಿಸುವುದು ಸಹಜ. ಆದರೆ ಇಂದು ಮಹಿಳೆಯರು ಅಂತಹ ಸಂಬಂಧಗಳನ್ನು ತಿರಸ್ಕರಿಸುವ ಸ್ಥಿತಿಯಲ್ಲಿಲ್ಲ. ಅವರು ಅನಿವಾರ್ಯವಾಗಿ ಕುಟುಂಬ ಸಂಬಂಧಿ ಹಿಂಸೆ, ದೌರ್ಜನ್ಯ, ತಾರತಮ್ಯಗಳನ್ನು ಹಾಗೂ ಅಸಮಾನತೆಗಳನ್ನು  ಎದಿರಿಸಬೇಕಾಗಿದೆ. ಇದು ಮಹಿಳೆಯರು ಪ್ರಕೃತಿದತ್ತವಾಗಿ ಅನುಭವಿಸಬೇಕಾದ ಸಂಗತಿಯೆಂದು ಹೇಳಲಾಗುತ್ತಿದೆ. ಆದರೆ ಅದು ಸರಿಯಲ್ಲ.

ಸಾಂಪ್ರದಾಯಿಕ ಕುಟುಂಬ ವ್ಯವಸ್ಥೆಯಲ್ಲಿ ಮಹಿಳೆಯನ್ನು ಕೇವಲ ಸಾಧನವಾಗಿ, ಕೇವಲ ಒಂದು ವಸ್ತುವಾಗಿ, ಸಂಪನ್ಮೂಲವಾಗಿ ನೋಡಲಾಗುತ್ತದೆ. ಅವಳನ್ನು ಕುಟುಂಬದ ಗುರಿಯನ್ನಾಗಿ ಅಥವಾ ಕುಟುಂಬದ ಅವಿಭಾಜ್ಯ ವ್ಯಕ್ತಿಯಾಗಿ ನೋಡುವ ಪರಿಪಾಠ ಅಲ್ಲಿ ಕಂಡು ಬರುವುದಿಲ್ಲ. ಆಕೆಯನ್ನು ಕುಟುಂಬಕ್ಕಾಗಿ ಮೀಸಲಿಟ್ಟ ಉಪಕರಣ ವೆಂಬಂತೆ ಕಾಣಲಾಗುತ್ತದೆ. ಅವಳು ಕೇವಲ ಸಂತಾನೋತ್ಪತ್ತಿಯ ಸಾಧನ ಮಾತ್ರ ವಾಗಿದ್ದಾಳೆ. ಆಕೆಯನ್ನು ಒಬ್ಬ ವ್ಯಕ್ತಿಯನ್ನಾಗಿ, ಆಸೆ-ಆಕಾಂಕ್ಷೆಗಳಿರಬಹುದಾದ ಜೀವಿಯಾಗಿ, ಅವಳಿಗೂ ಒಂದು ಸ್ವಂತದ್ದು ಎನ್ನಬಹುದಾದ ಬದುಕು ಇರುತ್ತದೆಯೆಂಬ ನೆಲೆಯಿಂದ, ಕುಟುಂಬದ ಹಿತದಂತೆ  ಅವಳ ಹಿತವೂ ಒಂದಿರುತ್ತದೆಯೆಂಬ ನೆಲೆಯಲ್ಲಿ ಪರಿಭಾವಿಸಿಕೊಳ್ಳುವ ಕ್ರಮವು ಸಂಪೂರ್ಣವಾಗಿ ಮಾಯವಾಗಿ ಬಿಟ್ಟಿದೆ. ಮಾರ್ತ ನುಸ್‌ಬೌಮ್ ತನ್ನ ಕೃತಿಯೊಂದರಲ್ಲಿ ಕುಟುಂಬವೆಂಬುದು ವಾತ್ಸಲ್ಯದ ಗೂಡು ಹೌದು ಮತ್ತು ಅದು ಹಿಂಸೆಯ, ದೌರ್ಜನ್ಯದ ಆಕರವೂ ಹೌದು ಎಂಬುದನ್ನು ತೋರಿಸಿ ಕೊಟ್ಟಿದ್ದಾಳೆ (೨೦೦೦:೨೪೧-೨೯೭). ಅದು ಸದ್ಗುಣಗಳ ಗನಿಯೂ ಹೌದು ಮತ್ತು ಲಿಂಗ ಸಂಬಂಧಿ ಅಸಮಾನತೆಗಳನ್ನು ಹಡೆಯುವ ಗಣಿಯೂ ಹೌದು. ಲಿಂಗ ಸಂಬಂಧಿ ಅಭಿವೃದ್ಧಿ ಮೀಮಾಂಸೆಯು ಯಾವುದೇ ಸಂದರ್ಭದಲ್ಲೂ ಮಹಿಳೆಯರನ್ನು ಸಾಧನವನ್ನಾಗಿ ಪರಿಭಾವಿಸಿಕೊಳ್ಳುವುದನ್ನು ವಿರೋಧಿಸುತ್ತದೆ. ಕುಟುಂಬದ ಎಲ್ಲ ಸದಸ್ಯರನ್ನು ಅಲ್ಲಿ ಅಭಿವೃದ್ಧಿಯು ಒಳಗೊಳ್ಳಬೇಕಾದ ಗುರಿಯೆಂದೂ ಮತ್ತು ಅವರು ಅಂತಹ ಬದಲಾವಣೆಯ ಕರ್ತೃಗಳೆಂದು ಇಲ್ಲಿ ಪರಿಭಾವಿಸಿಕೊಳ್ಳಲಾಗುತ್ತದೆ. ಅಭಿವೃದ್ಧಿ ಪ್ರಕ್ರಿಯೆಯು ಮಹಿಳೆಯರನ್ನು ವಸ್ತುಗಳಾಗಿ ಮತ್ತು ವ್ಯಕ್ತಿಗಳಾಗಿ ಎರಡೂ ನೆಲೆಗಳಲ್ಲಿ  ಒಳಗೊಳ್ಳುತ್ತದೆ ಎಂಬ ಸಂಗತಿಯನ್ನು ಲಿಂಗ ಸಂಬಂಧಿ ಅಭಿವೃದ್ಧಿ ಸಿದ್ಧಾಂತವು ಪ್ರತಿಪಾದಿಸುತ್ತದೆ. ಅಮರ್ತ್ಯಸೆನ್ ಮತ್ತು ಮಾರ್ತ್ ನುಸ್‌ಬೌಮ್ ಅಭಿವೃದ್ಧಿ ಕುರಿತಂತೆ ರೂಪಿಸಿರುವ ಧಾರಣಾ ಸಾಮರ್ಥ್ಯ ವರ್ಧನಾ ಸಿದ್ಧಾಂತದಲ್ಲಿ  ಕುಟುಂಬದ ಎಲ್ಲ ಸದಸ್ಯರನ್ನು ಅಭಿವೃದ್ಧಿಯ ಅಂತಿಮ ಗುರಿಯೆಂದು ಪರಿಗಣಿಸಲಾಗುತ್ತದೆ. ಪುರುಷರ ನೆಲೆಯಿಂದಲೆ ಮಹಿಳೆಯರ ಬದುಕಿಗೆ ಅರ್ಥ ಬರಬೇಕಾಗಿಲ್ಲ. ಅವರವರ ಬದುಕಿಗೆ ಅವರವರ ಕರ್ತೃತ್ವದಿಂದ, ಅವರವರ ಧಾರಣಾ ಸಾಮರ್ಥ್ಯದಿಂದ ಅವರವರ ಬದುಕು ಸಾರ್ಥಕ್ಯವನ್ನು ಕಂಡುಕೊಳ್ಳಬಹುದು. ಕುಟುಂಬದ ಮೂಲದಲ್ಲಿರುವ ಸಂಘರ್ಷದ ಸಂಗತಿಗಳನ್ನು ಮರೆಮಾಚಿ ಅಥವಾ ಹತ್ತಿಕ್ಕಿ  ಅದರ ಸಹಕಾರದ ನೆಲೆಗಳನ್ನು ಮಾತ್ರ ವೈಭವೀಕರಿಸುವುದರಿಂದ ಮಹಿಳೆಯರಿಗೆ ಅಲ್ಲಿ ನ್ಯಾಯ ದೊರೆಯುವುದು ಸಾಧ್ಯವಿಲ್ಲ. ಕುಟುಂಬವನ್ನು ಹೀಗೆ ಸಹಕಾರದ ಮತ್ತು ಸಂಘರ್ಷದ ಮೂಲವನ್ನಾಗಿ ಪರಿಭಾವಿಸಿಕೊಂಡಾಗ ಮಾತ್ರ ನಮಗೆ ಅಲ್ಲಿ ುಹಿಳೆಯರ ಸ್ಥಿತಿಗತಿಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಇಂತಹ ದೃಷ್ಟಿಕೋನವನ್ನು ಧಾರಣಾ ಸಾಮರ್ಥ್ಯ ವರ್ಧನಾ ಸಿದ್ಧಾಂತವನ್ನು ಆಧರಿಸಿದ ಲಿಂಗ ಸಂಬಂಧಿ ಅಭಿವೃದ್ಧಿ ಮೀಮಾಂಸೆ ಪ್ರತಿಪಾದಿಸುತ್ತದೆ (ನೋಡಿ : ಅನುಬಂಧ : ೨).

ಮುಂದಿನ ಗುರಿ ಮತ್ತು ಅದರ  ದಾರಿ

ಕರ್ನಾಟಕವು ಲಿಂಗ ಸಮಾನತೆಯ ದೃಷ್ಟಿಯಿಂದ ಉತ್ತಮ ಸಾಧನೆಯನ್ನು ಸಾಧಿಸಿಕೊಂಡಿದೆ. ಈಗ ಸಾಧಿಸಿಕೊಂಡಿರುವ ಪ್ರಗತಿಯನ್ನು ಅದು ಕಾಯ್ದುಕೊಂಡು ಹೋಗಬೇಕು ಹಾಗೂ ಲಿಂಗ ಸಮಾನತೆಗೆ ಸಂಬಂಧಿಸಿದಂತೆ ಹೆಚ್ಚಿನ ಸಾಧನೆಗಾಗಿ ಪ್ರಯತ್ನಿಸಬೇಕು. ಅಭಿವೃದ್ಧಿಯು ತನ್ನಷ್ಟಕ್ಕೆ ತಾನು ಲಿಂಗ ಸಮಾನತೆಯನ್ನು ತಂದು ಕೊಡುತ್ತದೆಯೆಂಬ ನಂಬಿಕೆಯು  ಇಂದು ಹುಸಿಯಾಗಿಬಿಟ್ಟಿದೆ. ಲಿಂಗ ಸಮಾನತೆಗಾಗಿ ಪ್ರಜ್ಞಾಪೂರ್ವಕ ಪ್ರಯತ್ನ ಮಾಡಬೇಕಾಗುತ್ತದೆ ಮತ್ತು ಅಂತಹ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಮಹಿಳೆಯರ ಸಂಘರ್ಷಣಾತ್ಮಕ ಅಗತ್ಯಗಳನ್ನು ಗುರುತಿಸಿಕೊಂಡು ಅವುಗಳನ್ನು ಪೂರೈಸಿಕೊಳ್ಳಲು ಅಗತ್ಯವಾದ ಕ್ರಮಗಳ ಬಗ್ಗೆ ನಾವು ಯೋಚಿಸಬೇಕಾಗಿದೆ. ಲಿಂಗ ಸಮಾನತೆಯ ಗುರಿಗಿಂತ ನಾವು ಮುಂದೆ ಹೋಗಬೇಕಾಗಿದೆ. ಮಹಿಳೆಯರ ಸ್ವಾಯತ್ತ ಬದುಕಿನ ಬಗ್ಗೆ ನಮ್ಮ ಗುರಿಯಿರಬೇಕು. ಮಹಿಳೆಯರು ಪುರುಷರಂತಾಗುವುದು ಲಿಂಗ ಸಮಾನತೆಯ ಉದ್ಧೇಶವಾಗಬಾರದು. ಲಿಂಗ ಸಮಾನತೆಯೆಂಬುದು ಕೇವಲ ಮಹಿಳೆಯರಿಗೆ ಸಂಬಂಧಿಸಿದ ಸಂಗತಿಯಲ್ಲ.  ಅದು ಸಮಾಜಕ್ಕೆ ಮತ್ತು ಪುರುಷರಿಗೂ ಸಂಬಂಧಿಸಿದ ಸಂಗತಿಯಾಗಿದೆ. ಲಿಂಗ ತಾರತಮ್ಯವಾದಿ ಮನೋಭಾವವೆಂಬುದು ಮಹಿಳೆಯರಲ್ಲೂ ಕಂಡು ಬರುತ್ತದೆ. ಗಂಡು ುಗುವಿನ ಬಗ್ಗೆ ಮಹಿಳೆಯರಿಗಿರುವ ವ್ಯಾಮೋಹದಲ್ಲಿ ಇದನ್ನು ಕಾಣಬಹುದು. ಮಹಿಳೆೆಯರಲ್ಲೂ ಲಿಂಗ ತಾರತಮ್ಯ ಮನೋಭಾವವಿದ್ದರೆ ಅದಕ್ಕೆ ಸಾಮಾಜಿಕೀಕರಣವು ಕಾರಣವಾಗಿರುತ್ತದೆ.

ಮಹಿಳೆಯರ ಅನೇಕ ಗುಣಗಳನ್ನು ಪುರುಷರು ಮೈಗೂಡಿಸಿಕೊಳ್ಳಬೇಕಾಗುತ್ತದೆ. ಒಟ್ಟಾರೆ ಮಹಿಳೆಯರಿಗೂ ಒಂದು ಬದುಕಿದೆ ಎಂಬುದನ್ನು ನಾವು ಮೊದಲು ಅರ್ಥ ಮಾಡಿಕೊಳ್ಳಬೇಕು. ಅವರಿಗೂ ಆಸೆ-ಆಕಾಂಕ್ಷೆಗಳಿರಬಹುದೆಂಬ ಸಂಗತಿಯನ್ನು ನಾವು ತಿಳಿದುಕೊಳ್ಳಬೇಕಾಗಿದೆ. ಈ ದಿಶೆಯಲ್ಲಿ ಪ್ರಸ್ತುತ ಪ್ರಬಂಧ, ಇಲ್ಲಿನ ಚರ್ಚೆ ಮತ್ತು ಇಲ್ಲಿ ಎತ್ತಿರುವ ಪ್ರಶ್ನೆಗಳು ಅಭಿವೃದ್ಧಿಯ ಲಿಂಗ ಸಂಬಂಧಿ ಆಯಾಮಗಳನ್ನು ಸರಿಯಾದ ಚೌಕಟ್ಟಿನಲ್ಲಿ ಅರ್ಥ ಮಾಡಿಕೊಳ್ಳಲು ಸಹಾಯಕವಾಗುತ್ತದೆಯೆಂದು ಭಾವಿಸಲಾಗಿದೆ. ಈ ಪ್ರಬಂಧದಲ್ಲಿ ಎತ್ತಿರುವ ವಿಷಯ ಕುರಿತಂತೆ ಸಹೃದಯರು  ಅನುಸಂಧಾನ ನಡೆಸಬಹುದಾಗಿದೆ, ಇದಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಎತ್ತಬಹುದಾಗಿದೆ ಮತ್ತು ತಮ್ಮ ನಿಲವನ್ನು ಹಾಗೂ ವಿಚಾರಗಳನ್ನು  ಮಂಡಿಸಬಹುದಾಗಿದೆ. ಪ್ರಶ್ನೆ ಮಾಡುವುದೆ ನಮ್ಮ ತಿಳುವಳಿಕೆಯ ವ್ಯಾಪ್ತಿಯನ್ನು ವಿಸ್ತತಗೊಳಿಸಿಕೊಳ್ಳಲು ಇರುವ ಪ್ರಧಾನ ಮಾರ್ಗವಾಗಿದೆ. ಪ್ರಜಾಪ್ರಭುತ್ವದ ಅಡಿಪಾಯವೆಂದರೆ ಭಿನ್ನಾಭಿಪ್ರಾಯವನ್ನು ಸಹಿಸಿ ಕೊಳ್ಳುವುದು ಮತ್ತು ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಲು ಅಗತ್ಯವಾದ ಸ್ವಾತಂತ್ರ್ಯವನ್ನು ನೀಡುವುದು. ಅನುಸಂಧಾನಾತ್ಮಕ ಸರ್ಕಾರವಿರುವ ವ್ಯವಸ್ಥೆಯನ್ನೇ ಅಮರ್ತ್ಯಸೆನ್ ಪ್ರಜಾಪ್ರಭುತ್ವವೆಂದು ಕರೆಯುತ್ತಾನೆ (ಜೀನ್‌ಡೀಜ್, ಅಮತ್ಯರ್ಸೆನ್: ೨೦೦೨). ಮಹಿಳೆ ಯರು ತಮ್ಮ ಬದುಕನ್ನು ಕುರಿತಂತೆ ತೀರ್ಮಾನಗಳನ್ನು ತೆಗೆದುಕೊಳ್ಳಲು ಅಗತ್ಯವಾದ ಅವಕಾಶ, ಸಾಮರ್ಥ್ಯ ಮತ್ತು ಸ್ವಾತಂತ್ರ್ಯವನ್ನು ಒದಗಿಸುವುದು ಅಭಿವೃದ್ಧಿಗೆ ಸಂಬಂಧಿಸಿದ ಪ್ರಾಥಮಿಕ ಅಗತ್ಯವಾಗಿದೆ. ಲಿಂಗ ಸಮಾನತೆ ಬಗ್ಗೆ ನಾವೇನು ಮಾಡಬಹುದೆಂಬುದಕ್ಕೆ ಸಿದ್ಧ ಮಾರ್ಗಸೂಚಿಗಳೇನು ಇರುವುದಿಲ್ಲ. ನಮ್ಮ ಮಟ್ಟದಲ್ಲಿ ಲಿಂಗ ಸಮಾನತೆ ಬಗ್ಗೆ ಚಿಂತಿಸಬೇಕು, ಲಿಂಗ ಅಸಮಾನತೆ ಬಗ್ಗೆ ಸುದ್ಧಿ ಮಾಧ್ಯಮಗಳಲ್ಲಿ ಬರೆಯಬೇಕು, ಚರ್ಚೆಗಳಲ್ಲಿ ಪ್ರಶ್ನೆ ಮಾಡಬೇಕು ಮತ್ತು ನಮ್ಮ ನಮ್ಮ ಮನೆಗಳಲ್ಲಿ ಈ ಕುರಿತು ತಂದೆ-ತಾಯಿಯರ ಜೊತೆ ಮಾತನಾಡಬೇಕು. ಜೋರಾಗಿ ಮಾತನಾಡಬಾರದು, ಹಿರಿಯರ ಎದುರಾಡಬಾರದು, ಎಲ್ಲ ವಿಷಯಗಳ ಬಗ್ಗೆ ಮೂಗು ತೂರಿಸಬಾರದು, ತಲೆ ತಗ್ಗಿಸಿ ನಡೆಯಬೇಕು,  ಹೆಚ್ಚು ನಗಬಾರದು, ಮನೆಗೆ ತಡವಾಗಿ ಬರಬಾರದು ಮುಂತಾದವು ಮಹಿಳೆಯರನ್ನು ಕುರಿತಂತೆ ನಾವು ಪೋಷಿಸಿಕೊಂಡು ಬಂದಿರುವ ಕೆಲವು ಮೌಲ್ಯಗಳು, ಕೆಲವು ಶಿಷ್ಟಾಚಾರಗಳು.ಅವು ಮುಖ್ಯ. ಆದರೆ ಅವು ಮಹಿಳೆಯರ ಸ್ವಾಭಿಮಾನಕ್ಕೆ, ಸ್ವಾತಂತ್ರ್ಯಕ್ಕೆ, ಸ್ವಂತ ವಿವೇಚನೆಗೆ, ಸಮಾನತೆಗೆ, ಸ್ವಹಿತಾಸಕ್ತಿಗೆ ಮತ್ತು ಅವರ ಕರ್ತೃತ್ವ ಶಕ್ತಿಗೆ ಅಡ್ಡಿಯಾಗಬಾರದು. ಮಹಿಳೆಯರಿಗೆ ಸಂಬಂಧಿಸಿದ ಇಂತಹ ನಿರ್ಬಂಧಗಳು, ಮೂಗುದಾರಗಳು, ಕಡಿವಾಣಗಳು ಪುರುಷರಿಗೆ ಯಾಕೆ ಇಲ್ಲ? ಅವರಿಗೆ ಇಲ್ಲದ್ದನ್ನು ಮಹಿಳೆಯರ ಮೇಲೇಕೆ ವಿಧಿಸಲಾಗುತ್ತಿದೆ? ಸರ್ವತಂತ್ರ ಸ್ವತಂತ್ರ, ಸ್ವಾಭಿಮಾನಿ ಮತ್ತು ಸಮಾನತಾ ಪ್ರಣಾಳಿಕೆಯ ಚೌಕಟ್ಟಿನಲ್ಲಿ ನಾವು ನಮ್ಮ ಬದುಕನ್ನು ರೂಪಿಸಿಕೊಳ್ಳಬೇಕಾಗಿದೆ. ನಮ್ಮ ಬದುಕು ನಮ್ಮ ಕೈಯಲ್ಲಿರಬೇಕು.ಅದು ನಮ್ಮದಾಗಿರ ಬೇಕು. ಅದು ನಮ್ಮ ಆಯ್ಕೆಯಾಗಿರಬೇಕು.  ನಮ್ಮ ಬದುಕು ಯಾರೋ ಮತ್ತೊಬ್ಬರ ಸಾಧನವಾಗಕೂಡದು. ಮತ್ತೊಬ್ಬರ ನಿರೀಕ್ಷೆಗೆ ಅನುಗುಣವಾಗಿ ಬದುಕುವ ಬದುಕು ಅದಾಗಬಾರದು. ನಮ್ಮ ಬದುಕು ಯಾರೋ ಮತ್ತೊಬ್ಬರ ಬದುಕಿನ ಬಾಲಂಗೋಚಿ ಯಾಗಬಾರದು. ನಮ್ಮ ಬದುಕನ್ನು ಕಟ್ಟಿಕೊಳ್ಳುವ ಸ್ವಾತಂತ್ರ್ಯ ನಮಗಿರಬೇಕು. ಅರಿಸ್ಟಾಟನ ಪರಿಭಾಷೆಯಲ್ಲಿ ಸಮೃದ್ಧವಾದ ಬದುಕನ್ನು (flourishing lives) ಅಭಿವೃದ್ಧಿಯೆಂದು ಕರೆಯಬಹುದು. ಸಮೃದ್ಧ, ಸ್ವತಂತ್ರ್ರ, ಸ್ವಾಭಿಮಾನಿ, ಸ್ವಾಯತ್ತ ಬದುಕನ್ನು ಮಹಿಳೆಯರು ಹೇಗೆ ರೂಪಿಸಿಕೊಳ್ಳಬೇಕು ಎಂಬುದನ್ನು ಕುರಿತ  ಅನುಸಂಧಾನವೇ ಲಿಂಗ ಸಂಬಂಧಿ ಅಭಿವೃದ್ಧಿ ಮೀಮಾಂಸೆಯ ವಿಷಯವಸ್ತುವಾಗಿರ ಬೇಕು. ಈ ದಿಶೆಯಲ್ಲಿ ಚಿಂತಿಸಲು ಪ್ರಸ್ತುತ ಪ್ರಬಂಧವು ನೆರವಾಗುತ್ತದೆಯೆಂದು ಭಾವಿಸಲಾಗಿದೆ.ಲಿಂಗ ಸಂಬಂಧಗಳ ಮತ್ತು ಕುಟುಂಬ ಸಂಬಂಧಗಳ ಮೂಲದಲ್ಲಿರುವ ಜೈವಿಕ ನಿಯತಿ ನೆಲೆಗಳನ್ನು ಮೊದಲು ಕಿತ್ತೊಗೆಯಬೇಕು. ಈ ಎಲ್ಲ ಸಂಬಂಧಗಳು ಜನರು ಕಟ್ಟಿಕೊಂಡ ಸಂಗತಿಗಳೇ ವಿನಾ ಪ್ರಕೃತಿದತ್ತವಾಗಿ ಅಥವಾ ಜೈವಿಕವಾಗಿ ನಿಯತಿಯಾದ ಸಂಗತಿಗಳಲ್ಲ. ಅವುಗಳನ್ನು ಬದಲಾಯಿಸಬಹುದು ಮತ್ತು ಬದಲಾಯಿಸಬೇಕು.