ಒಂದಿರುಳು ಬಂದೆ, ಅಂಗಳದ ತುಂಬ
ಗೂಡಾರವನ್ನು ಹೊಡೆದೆ
ನಾ ಬೇಡ ಅಂದೆ, ನೀ ಕೇಳಲಿಲ್ಲ
ಶೃತಿಮಾಡಿಕೊಂಡು
ತಂಬೂರಿಯನ್ನು ಮಿಡಿದೆ.

ತಣ್ಣಗಾದ ಹಣೆಗಣ್ಣಿನಂತೆ
ತೇಲಿರಲು ಚಂದ್ರ ಮೇಲೆ
ಕಾಮ ಬಿಟ್ಟ ಹೂ ಬಾಣದಂತೆ
ತುಳುಕಿರಲು ರಾಗಮಾಲೆ.

ಆ ರಾಗ ರಸದ ತಿಳಿಗೊಳಗಳಲ್ಲಿ
ನೂರಾರು ಪದ್ಮವರಳಿ
ಒಂದೊಂದರಲ್ಲು ಅಪ್ಸರೆಯರಾಡಿ

ಬಿಚ್ಚಿದರು ಹೊನ್ನ ಸುರುಳಿ.
ಬೆಚ್ಚಿದೆನು ನಾನು ಬಿಚ್ಚಿದ್ದ ಸುರುಳಿ-
ಯೊಳಗಿದ್ದ ಲಿಖಿತ ನೋಡಿ :
“ನೀ ನನಗೆ ಬೇಕು, ನಾ ನಿನಗೆ ಬೇಕು
ನಾವಿಬ್ಬರೊಂದು ಜೋಡಿ.”