ಭಾರತದಲ್ಲಿ ಬರವಣಿಗೆಯು ಆರಂಭವಾಗುವುದು ಐತಿಹಾಸಿಕವಾಗಿ ಅಶೋಕನ ಕಾಲಕ್ಕಾದರೂ ಅದಕ್ಕಿಂತ ಹಿಂದೆ ಬರವಣಿಗೆ ಇತ್ತೇ ಇಲ್ಲವೇ ಎಂಬ ಜಿಜ್ಞಾಸೆ ಇದೆ. ಆದಿಮಾನವ ಈ ಭರತ ಖಂಡದಲ್ಲಿ ಜೀವಿಸಿದ್ದ ಬಗ್ಗೆ ಅನೇಕ ಕುರುಹುಗಳು ದೊರೆಯುತ್ತವೆ. ಅವರು ನೆಲೆಸಿದ್ದ ಕಲ್ಲಾಸರೆಗಳಲ್ಲಿ ರೇಖಾಕೃತಿಯ ಚಿತ್ರಗಳೂ ಕಾಣಬರುತ್ತವೆ. ಆದರೆ ಬರವಣಿಗೆಯೆಂಬುದು ದೊರೆತಿರಲಿಲ್ಲ. ಸಿಂಧೂ ನಾಗರಿಕತೆಯಲ್ಲಿ ದೊರೆತ ಮುದ್ರಿಕೆಗಳು ಇನ್ನೂ ಒಗಟಾಗಿದ್ದು ಅವುಗಳಿಂದ ಇಂದಿನ ಬ್ರಾಹ್ಮಿಲಿಪಿ ಉದಯಿಸಿದೆಯೆಂಬುದಕ್ಕೆ ಸ್ಪಷ್ಟವಾದ ಆಧಾರಗಳು ದೊರೆಯುವುದಿಲ್ಲ. ಹೀಗಾಗಿ ಪ್ರಾಚೀನ ಭಾರತದಲ್ಲಿ ಬರವಣಿಗೆಯ ಕುರುಹು ಕಾಣದಿರುವುದರಿಂದ ಹಿಂದಿನಿಂದ ಭಾರತದಲ್ಲಿ ಬರವಣಿಗೆಯಿರಲಿಲ್ಲವೆಂದು ವಾದಿಸುವವರೂ ಇದ್ದಾರೆ. ಇದಕ್ಕೆ ಆಧಾರವಾಗಿ ಬೇರೆ ನಾಗರಿಕತೆಗಳಲ್ಲಿ ಕಾಣಬರುವಂತೆ ಚಿತ್ರಲಿಪಿಯಾಗಲೀ, ಭಾವಲಿಪಿ ಯಾಗಲೀ ಇಲ್ಲಿ ಕಾಣಬರದಿರುವುದು. ವ್ಯವಸ್ಥಿತವಾದ ವರ್ಣಲಿಪಿಯೊಂದು ಇದ್ದಕ್ಕಿದಂತೆ ಅಶೋಕನ ಕಾಲದಲ್ಲಿ ಕಾಣಿಸಿಕೊಂಡದ್ದು.

ಕ್ರಿಸ್ತಪೂರ್ವ ಮೂರನೆಯ ಶತಮಾನಕ್ಕೆ ಹಿಂದೆ ಲಿಪಿ ಇತ್ತೇ ಇಲ್ಲವೇ ಎಂಬ ಬಗ್ಗೆ ನಡೆದಿರುವ ಜಿಜ್ಞಾಸೆಯಲ್ಲಿ ಇತ್ತೆಂದು ವಾದಿಸುವ ವಿದ್ವಾಂಸರು ಅನೇಕ ಆಧಾರಗಳನ್ನು ನೀಡುತ್ತಾರೆ.

ಲಲಿತವಿಸ್ತರವೆಂಬ ಬೌದ್ಧ ಗ್ರಂಥವು ಬುದ್ಧನ ಕಾಲದಲ್ಲಿ ಬಳಕೆಯಲ್ಲಿದ್ದ 64 ಬಗೆಯ ಲಿಪಿಗಳನ್ನು ಹೆಸರಿಸುತ್ತದೆ. ಈ 64 ಲಿಪಿಗಳಲ್ಲಿ ಕೆಲವನ್ನು ಗುರುತಿಸಬಹುದಾಗಿದೆ. ಅವು ಬಾಂಬಿ ಅಥವಾ ಬ್ರಾಹ್ಮಿ, ಖರೊಠ್ಠಿ – ಖರೋಷ್ಠಿ, ಗ್ರೀಕ್, ದ್ರಮಳಿ – ದ್ರಾವಿಡ. ಉಳಿದ ಲಿಪಿಗಳನ್ನು ಗುರುತಿಸುವುದು ಕಷ್ಟ. ಈ ಪುಸ್ತಕ ಬುದ್ಧನ ಕಾಲದಲ್ಲೇ ರಚಿತವಾಗಿರಬಹುದಾದರೂ ದೊರೆತಿರುವ  ಸಂಸ್ಕೃತ ಹಾಗೂ ಟಿಬೆಟ್ ಭಾಷೆಯ ಗ್ರಂಥಗಳು ಸು ಕ್ರಿ.ಶ. ಏಳನೆಯ ಶತಮಾನಕ್ಕೆ ಸೇರುವ ಗ್ರಂಥವಾಗಿದೆ. ಬುದ್ಧನು ಚಿನ್ನದ ಹಲಗೆಯ ಮೇಲೆ ಅಕ್ಷರಾಭ್ಯಾಸ ಮಾಡಿದನೆಂಬ ಉಲ್ಲೇಖ  ದೊರೆಯುತ್ತದೆ. ಅಲ್ಲದೆ ಬಿದಿರಿನ ದಬ್ಬೆಗಳ ಮೇಲೆ ಬೌದ್ಧ ಭಿಕ್ಷುಗಳು ಬರೆಯುತ್ತಿದ್ದರೆಂಬ ಉಲ್ಲೇಖಗಳು ದೊರೆಯುತ್ತವೆ.

ಈ ಬಗ್ಗೆ ವೈದಿಕ ಗ್ರಂಥಗಳು ಮೌನ ವಹಿಸಿವೆ. ಆದರೂ ಕಠಿಣವಾದ ವೇದ ಪಾಠಗಳನ್ನು ಕಲಿಯಲು ಅವಶ್ಯವಾದೊಂದು ಲಿಪಿ ಇರಬೇಕೆಂದು, ಹೇಳಿ ವೇದ, ಉಪನಿಷತ್ ಮತ್ತು ಬ್ರಾಹ್ಮಣಗಳನ್ನು ಕಲಿಯಲು ಬಾಯಿಪಾಠವನ್ನೇ ಅವಲಂಬಿಸಿದ್ದರು. ಇವರು ಯಾವ ಲಿಪಿಯಲ್ಲಿ ಅವನ್ನು ಬರೆದು ಕಲಿಯುತ್ತಿರೆಂಬುದು ತಿಳಿಯುವುದಿಲ್ಲ. ಲಿಪಿಯನ್ನು ಸಾರ್ವತ್ರಿಕವಾಗಿ ಬಳಸುವಲ್ಲಿನ ಅಸಡ್ಡೆಯೂ ಇದಕ್ಕೆ ಕಾರಣವಿರಬೇಕು. ಪಾರಂಪರಿಕವಾಗಿ ಮೌಖಿಕ ವಿದ್ಯಾಭ್ಯಾಸಕ್ಕೆ ಒತ್ತು ನೀಡಿದ ಕಾರಣದಿಂದ ವೇದಗಳ ಕಾಲದಲ್ಲಿ ಬಳಕೆಯಲ್ಲಿದ್ದ ಲಿಪಿಗಳು ನಮಗೆ ಅಗೋಚರವಾದವು. ಇದರೊಂದಿಗೆ ಬರವಣಿಗೆಯಲ್ಲಿ ವೇದಗಳನ್ನು ಬರೆದಿಡಬಾರದೆಂಬ ನಂಬಿಕೆ ಸು. 19 ನೆಯ ಶತಮಾನದವರೆಗೂ ಇದ್ದು, ಬಹಳಷ್ಟು ಪ್ರಾಚೀನ ಗ್ರಂಥಗಳು ಮೌಖಿಕ ವಾಗಿಯೇ ಉಳಿದು ಬಂದವು.

ನಮ್ಮವರು ಬರವಣಿಗೆಗೆ ಬಳಸುತ್ತಿದ್ದುದು ಭೂರ್ಜ ಇಲ್ಲವೇ ತಾಳಪತ್ರ. ನಮ್ಮ ಭಾರತದ ವಾತಾವರಣದಲ್ಲಿ ಇವು ಹೆಚ್ಚು ಕಾಲ ಬಾಳುವುದಿಲ್ಲ. ನಾಶ ಹೊಂದುವುದೇ ಜಾಸ್ತಿ. ಬಹುಶಃ ಪ್ರಾಚೀನ ಗ್ರಂಥಗಳು ಉಳಿದುಬಾರದಿರಲು ಇದೂ ಒಂದು ಕಾರಣ. ಅಶೋಕನವರೆಗೆ ಯಾರೂ ಗಟ್ಟಿ ವಸ್ತುಗಳನ್ನು ಬರವಣಿಗೆಗೆ ಬಳಸಿರಲಿಲ್ಲ. ಅಶೋಕನು ತಾನು ತನ್ನ ಸಂದೇಶ ಸ್ಥಿರವಾಗಿರ ಬೇಕೆಂದು ಬಂಡೆಗಳ ಮೇಲೆ ಬರೆಸಿರುವುದಾಗಿ ಹೇಳಿದ್ದಾನೆ. ಈ ಕಾರಣಗಳಿಂದ ಪ್ರಾಚೀನ ಸಾಹಿತ್ಯ ನಶಿಸಿರಬೇಕು.

ವೈದಿಕ ಪರಂಪರೆಯಲ್ಲಿ ಅಕ್ಷರಾಭ್ಯಾಸವು ಒಂದು ಮಹತ್ವದ ಕಾರ್ಯ ವಾಗಿತ್ತು. ಬಾಲಕರ ಕೈಲಿ ಮೊದಲು ಅಕ್ಷರ ಬರೆಸುತ್ತಿದ್ದುದು ಅಕ್ಕಿಯ ಮೇಲೆ ಅಥವಾ ಮರಳಿನ ಮೇಲೆ. ಇಂದಿಗೂ ಈ ಪದ್ಧತಿ ಜಾರಿಯಲ್ಲಿದೆ. ಅಂದರೆ ಹಿಂದೆ ಮರಳಿನ ಮೇಲೆ ಅಕ್ಷರಾಭ್ಯಾಸ ಆರಂಭಿಸುತ್ತಿದ್ದರು. ಅಕ್ಷರಾಭ್ಯಾಸವಾದ ಮೇಲೆ ಅವರು ವೇದ ಇತ್ಯಾದಿಗಳನ್ನು ಕಲಿಯುತ್ತಿದ್ದರು. ಸಹಜವಾಗಿ ಮರಳಿನ ಮೇಲೆ ಬರೆದ ಅಕ್ಷರ ಅಂದೇ ಅಳಿಸಿ ಹೋಗುತ್ತಿತ್ತು. ಈ ಆಧಾರಗಳಿಂದ ಅಕ್ಷರಾಭ್ಯಾಸ ನಮ್ಮ ಭಾರತದಲ್ಲಿ ಮರಳಿನ ಮೇಲೆ ನಡೆಯುತ್ತಿದ್ದುದರಿಂದ ಪ್ರಾಚೀನ ಲಿಪಿ ನಮ್ಮಲ್ಲಿ ಉಳಿದು ಬರಲಿಲ್ಲ. ಸಿಂಧೂ ನಾಗರಿಕತೆಯಲ್ಲಿ ಸುಟ್ಟ ಮಣ್ಣಿನ ಮುದ್ರಿಕೆಗಳು ದೊರಕಿವೆಯಾದರೂ ಆರ್ಯಾವರ್ತ ಅಥವಾ ಗಂಗಾ ನದೀ ಬಯಲಿನ ನಾಗರೀಕತೆಯಲ್ಲಿ ಈ ಬಗೆಯ ಮುದ್ರೆಗಳು ಅಥವಾ ಬರವಣಿಗೆಯಿರುವ ಇಟ್ಟಿಗೆಗಳು ದೊರೆಯುವುದು ಕ್ರಿ.ಪೂ. ಒಂದು ಅಥವಾ ಕ್ರಿ.ಶ. ಒಂದನೆಯ ಶತಮಾನದ ನಂತರ. ಇತರೆ ನಾಗರಿಕತೆಗಳಲ್ಲಿ ಈ ಬಗೆಯ ಸುಟ್ಟ ಮಣ್ಣಿನ ಮುದ್ರಿಕೆಗಳು ಹಾಗೂ ಇಟ್ಟಿಗೆ ಗಳು ಪ್ರಧಾನ ಪಾತ್ರ ಹೊಂದಿವೆ.

ಅಶೋಕನು ಬೌದ್ಧ ಧರ್ಮವನ್ನು ಸ್ವೀಕರಿಸದಿದ್ದರೆ ನಮ್ಮ ಬರವಣಿಗೆಯ ಇತಿಹಾಸ ಇನ್ನೂ ಹಿಂದಕ್ಕೆ ಇರುತ್ತಿತ್ತು. ಇವನು ಬೌದ್ಧ ಧರ್ಮವನ್ನು ಸ್ವೀಕರಿಸಿದುದರಿಂದ, ವೈದಿಕ ಧರ್ಮದಲ್ಲಿದ್ದ ಬರವಣಿಗೆಯ ನಿಷೇಧ ಇವನಿಗೆ ತಾಗಲಿಲ್ಲ. ಹೀಗಾಗಿ ತಾನು ನಂಬಿದ್ದ ತತ್ವಗಳ ಪ್ರಚಾರಕ್ಕಾಗಿ ಆತ ಶಿಲಾ ಮಾಧ್ಯಮವನ್ನು ಆರಿಸಿಕೊಂಡ. ಹುಟ್ಟು ಬಂಡೆಗಳು, ಸ್ಥಂಭಗಳು ಗವಿಗಳ ಗೋಡೆಗಳು, ಚಪ್ಪಡಿಗಳು ಮೊದಲಾದವುಗಳ ಮೇಲೆ ಶಾಸನಗಳನ್ನು ಕೆತ್ತಿಸಿದ. ಹಾಗೆಯೇ ಬಹು ಲಿಪಿ ಮತ್ತು ಭಾಷೆಗಳಲ್ಲಿ ಅಂದರೆ ತನ್ನ ರಾಜ್ಯದಲ್ಲಿ ಬಳಕೆಯಲ್ಲಿದ್ದ ಪ್ರಾಕೃತ, ಗ್ರೀಕ್, ಅರಾಬಿಕ್ ಭಾಷೆಗಳಲ್ಲದೆ, ಬ್ರಾಹ್ಮೀ, ಖರೋಷ್ಠಿ, ಗ್ರೀಕ್ ಮತ್ತು ಅರಾಮಿಕ್ ಲಿಪಿಗಳಲ್ಲಿ ಶಾಸನಗಳನ್ನು ಬರೆಸಿದ. ಇಡೀ ಭರತಖಂಡದಲ್ಲಿ ಏಕಕಾಲಕ್ಕೆ ಹಲವು ಭಾಷೆ ಹಲವು ಲಿಪಿಗಳಲ್ಲಿ ಶಾಸನಗಳನ್ನು ಬರೆಸಿದ ಕೀರ್ತಿ ಇವನದು. ಇದಕ್ಕಾಗಿ ಲಿಪಿಕಾರರನ್ನು ನೇಮಿಸಿದ್ದ. ಭಾರತದಲ್ಲೇ ಅಲ್ಲದೆ ಹೊರಗಿನ ದೇಶಗಳಾದ ಈಜಿಪ್ತ್, ಗ್ರೀಕ್, ಮಖಸ್ ಮುಂತಾದ ದೇಶಗಳಲ್ಲಿ ತನ್ನ ಧರ್ಮ ಸಂದೇಶವನ್ನು ಸಾರಿದಂತೆ ಹೇಳಿಕೊಂಡಿದ್ದಾನೆ. ಈ ದೇಶಗಳ ಸಂಪರ್ಕದಿಂದ, ಮುಖ್ಯವಾಗಿ ಪರ್ಷಿಯಾ ಮತ್ತು ಗ್ರೀಕ್ ದೇಶಗಳ ಸಂಪರ್ಕದಿಂದ ಅಲ್ಲಿ ಸಾರ್ವತ್ರಿಕವಾಗಿ ಬಳಕೆಯಾಗುತ್ತಿದ್ದ ಬರವಣಿಗೆಯನ್ನು ಅಶೋಕ ಗಮನಿಸಿರಬೇಕು. ಮುಂದೆ ತನ್ನ ಧರ್ಮ ಲಿಪಿಗಳನ್ನು ಬಂಡೆಗಳ ಮೇಲೆ ಬರೆಸಲು ಇದು ಸ್ಫೂರ್ತಿ ನೀಡಿರಬೇಕು.

ಅಶೋಕ ಬಳಸಿದ ಲಿಪಿಗಳು ಭಾರತದಲ್ಲಿ ಆ ವೇಳೆಗಾಗಲೇ ಪರಿಚಯ ದಲ್ಲಿದ್ದವು. ಒಂದು ಲಿಪಿ ಇನ್ನೊಂದಕ್ಕಿಂತ ಭಿನ್ನವೆಂಬ ಅರಿವಿತ್ತು. ಹೀಗಾಗಿ ತನ್ನ ರಾಜ್ಯದಲ್ಲಿದ್ದ ಜನರ ಭಾಷೆ ಹಾಗೂ ಅವರು ಸಾರ್ವಜನಿಕವಾಗಿ ಬಳಸುತ್ತಿದ್ದ ಲಿಪಿಗಳನ್ನು ತನ್ನ ಧರ್ಮ ಲಿಪಿಗಳಿಗಾಗಿ ಬಳಸಿದ. ಹೀಗಾಗಿ ಅಶೋಕನು ಹಾಕಿಸಿದ ಗ್ರೀಕ್, ಅರಾಬಿಕ್, ಬ್ರಾಹ್ಮಿ, ಖರೋಷ್ಠಿ ಭಾಷೆಯ ಮತ್ತು ಲಿಪಿಯ ಶಾಸನಗಳು ಬಳಕೆಗೆ ಬಂದವು.

ಹಿಂದಿನ ಕಾಲದಲ್ಲಿ ಬರಹದ ಅರಿವು ಎಲ್ಲರಿಗೂ ಇದ್ದಿರಲಿಲ್ಲ. ಹೀಗಾಗಿ ಎಲ್ಲರಿಂದಲೂ ಬರವಣಿಗೆಯನ್ನು ಓದಲು ಹಾಗೂ ಅರ್ಥೈಸಲು ಆಗುತ್ತಿರಲಿಲ್ಲ. ಚಿತ್ರಲಿಪಿ ಮುಂತಾದವು ಹೀಗೆಯೇ ಇದ್ದದ್ದು. ಚಿತ್ರಲಿಪಿಯನ್ನು ಪುರೋಹಿತ ಅಥವಾ ಮಾಂತ್ರಿಕ ಆರ್ಥೈಸುತ್ತಿದ್ದ. ಅಶೆೋಕನ ಕಾಲದವರೆಗೆ ಈ ಪದ್ಧತಿ ಜಾರಿಯಲ್ಲಿತ್ತು. ಅಶೋಕನು ತಿಸ್ಸ ನಕ್ಷತ್ರದಂದು ತಾನು ಹಾಕಿಸಿರುವ ಧರ್ಮಲಿಪಿಯನ್ನು ಧರ್ಮ ಮಹಾಮಾತ್ರರು ಓದಿ ಅದರ ಅರ್ಥವನ್ನು ಸಾರ್ವಜನಿಕರಿಗೆ ತಿಳಿಸಿಬೇಕಿತ್ತು. ಅಶೋಕನ ನಂತರ ಎಲ್ಲಾ ಧರ್ಮದವರೂ ಧರ್ಮ ಹಾಗೂ ರಾಜಕೀಯಕ್ಕೆ ಈ ಲಿಪಿ ಬಳಸಿಕೊಳ್ಳ ಲಾರಂಭಿಸಿದ ಮೇಲೆ ಈ ಲಿಪಿಗಳನ್ನು ಓದಿ ಅರ್ಥೈಸುವ ಪದ್ಧತಿ ಕಡಿಮೆಯಾಗುತ್ತಾ ಬಂತು. ಹೀಗಾಗಿ ಮುಂದೆ ಲಿಪಿಯ ರೂಪಗಳು ವ್ಯತ್ಯಾಸ ವಾದಂತೆ ಅವನ್ನು ಓದುವುದು ಕಷ್ಟವಾಗಿ ಶಾಸನಗಳ ಸುತ್ತ ಮೂಢನಂಬಿಕೆಯ ಕಥೆಗಳು ಬೆಳೆದವು. ನಿಧಿ ನಿಕ್ಷೇಪದ ತಾಣಗಳೆಂಬಂತೆ ಚಿತ್ರಿತವಾಗಿ ಅವುಗಳ ನಾಶಕ್ಕೆ ಕಾರಣವಾದವು.

ಭಾರತದಲ್ಲಿ ಅಶೋಕನು ಶಿಲೆಗಳ ಮೇಲೆ, ಹುಟ್ಟು ಗುಂಡುಗಳ ಮೇಲೆ, ಶಿಲಾ ಸ್ತಂಭಗಳ ಮೇಲೆ, ಶಿಲಾ ಚಪ್ಪಡಿಗಳ ಮೇಲೆ ಶಾಸನಗಳನ್ನು ಬರೆಸಿದ್ದಾನೆ. ಆತನೇ ಹೇಳಿರುವಂತೆ ತನ್ನ ಧರ್ಮ ಲಿಪಿ ತನ್ನೊಂದಿಗೆ ನಾಶವಾಗದೆ ತನ್ನ ನಂತರವೂ, ಉಳಿಯಬೇಕೆಂಬ ಉದ್ದೇಶವಾಗಿತ್ತು. ಬುದ್ಧನ ಜನ್ಮಸ್ಥಳವಾದ ಲುಂಬಿಣಿವನ, ಉಪದೇಶ ನೀಡಿದ ವಾರಣಾಸಿ, ತಾನು ಯುದ್ಧ ಮಾಡಿ ಜಯವನ್ನು ಪಡೆದ ಕಳಿಂಗದೇಶ, ತನ್ನ ರಾಜ್ಯದ ಅಂತಿಮ ಗಡಿಗಳಾದ ಕರ್ನಾಟಕದ ರಾಯಚೂರು, ಚಿತ್ರದುರ್ಗದ ಜಿಲ್ಲೆ, ಆಂಧ್ರಪ್ರದೇಶದ ಎರ‌್ರಗುಡಿ, ಪಶ್ಚಿಮದಲ್ಲಿ ಗುಜರಾತಿನ ಗಿರಿನಾರ್, ಪಾಕಿಸ್ಥಾನದ ಷಹಬಾಜ್‌ಘರ್, ಕಂದಹಾರ್ (ಈಗಿನ ಆಫ್ಘನ್ ಪ್ರದೇಶ) ಈ ಮಧ್ಯೆ ಬರುವ ಅನೇಕ ಸ್ಥಳಗಳಲ್ಲಿ ಆತ ತನ್ನ ಧರ್ಮ ಲಿಪಿಗಳನ್ನು (ಶಾಸನ) ಬರೆಸಿದ್ದಾನೆ. ಹೀಗಾಗಿ ಏಕಕಾಲಕ್ಕೆ ಭಾರತದಲ್ಲಿ ಬರವಣಿಗೆಯನ್ನು ಸಾರ್ವತ್ರಿಕ ಉದ್ದೇಶಕ್ಕೆ ಆತ ಬಳಸಿದ. ಆ ಧೈರ್ಯವನ್ನು ಇವನು ತೋರಿಸಿದ. ಇವನ ನಂತರ ಬಂದ ಮೌರ್ಯ ಅರಸರು ಈ ಧೈರ್ಯವನ್ನು ತೋರಿಸಲಿಲ್ಲ.

ಮೌರ್ಯ ಸಾಮ್ರಾಜ್ಯದ ಕುಸಿತದ ನಂತರ ಹರಿದು ಹಂಚಿ ಹೋದ ಭಾರತದಲ್ಲಿ ಮುಂದೆ ಸುಮಾರು 100 ವರ್ಷಗಳ ನಂತರ ತಲೆಯೆತ್ತಿದ ಸಣ್ಣ ಪುಟ್ಟ ರಾಜ್ಯಗಳ ರಾಜರು, ಹಾಗೂ ಹೊರಗಿನಿಂದ ಬಂದು ಇಲ್ಲೇ ನೆಲೆಸಿದ ಆಕ್ರಮಣಕಾರರು ಮುಂದೆ ಅಶೋಕನು ಬಳಸಿದ ಲಿಪಿಯನ್ನೇ ಬಳಸತೊಡಗಿದರು. ಇಲ್ಲಿಂದ ಮುಂದೆ ರಾಜರಲ್ಲದೆ ಸಾರ್ವಜನಿಕರೂ ಈ ಲಿಪಿಯನ್ನು ಬಳಸತೊಡಗಿದರು. ಹೀಗೆ ಭಾರತದಲ್ಲಿ ಲಿಪಿಗಳು ಬಳಕೆಗೆ ಬಂದುವು. ಭಾರತದಲ್ಲಿ ಲಿಪಿಗಳು ಸಾರ್ವತ್ರಿಕ ಬಳಕೆಗೆ ಉಪಯೋಗವಾಗ ತೊಡಗಿದ ಮೇಲೆ ಬರವಣಿಗೆಯ ಸಾಧನಗಳ ಕಾರಣದಿಂದ, ರಾಜಕೀಯ, ಭೌಗೋಳಿಕ ಹಿನ್ನೆಲೆ, ಜನ ಸಂಪರ್ಕ ಮುಂತಾದ ಕಾರಣಗಳಿಂದ ಭಿನ್ನತೆ ಕಾಣತೊಡಗಿತು. ಬಂಡೆಗಳ ಮೇಲೆ ಬರೆಯಬೇಕಿದ್ದರೆ ಕುಂಚ ಮತ್ತು ಬಣ್ಣವನ್ನು ಉಪಯೋಗಿಸಿ ಬರೆದ ಮೇಲೆ ಉಳಿ ಸುತ್ತಿಗೆಯ ಸಹಾಯದಿಂದ ಕೆತ್ತುತ್ತಿದ್ದರು. ಅಶೋಕನು ತನ್ನ ನಾಡಿನಲ್ಲಿ ಧರ್ಮಲಿಪಿಗಳನ್ನು ಬರೆಸಲು ಪಾಟಲೀಪುತ್ರದಿಂದಲೇ ಲಿಪಿಕಾರರನ್ನು ಕಳುಹಿಸಿದ್ದ. ಆದರೆ ಈ ಕಾಲಕ್ಕೆ ಸ್ಥಳೀಯರೂ ಈ ಲಿಪಿಯನ್ನು ಕಲಿತಿದ್ದುದ್ದರಿಂದ ಆ ಲಿಪಿಕಾರರೇ ಸ್ಥಳೀಯ ಅವಶ್ಯಕತೆಯನ್ನು ಪೂರೈಸುತ್ತಿದ್ದರು. ಹೀಗಾಗಿ ಇಡೀ ಭಾರತದ ಲಿಪಿಕಾರರಿಗೆ ಪರಸ್ಪರ ಪರಿಚಯವಿರಲಿಲ್ಲ. ಇದರೊಂದಿಗೆ ಬರವಣಿಗೆಯನ್ನು ಧಾರ್ಮಿಕ ಗ್ರಂಥಗಳಿಗೆ ಬಳಸತೊಡಗಿದ ಮೇಲೆ ಈ ತೊಡಕು ಇನ್ನೂ ಹೆಚ್ಚಾಯಿತು. ಅದೆಂದರೆ ಉತ್ತರದ ಭೂರ್ಜ ಮರದ ತೊಗಟೆಯನ್ನು ಸಂಸ್ಕರಿಸಿ ಹಾಳೆಗಳನ್ನಾಗಿ ಮಾಡಿಕೊಂಡು ಅದರ ಮೇಲೆ ಮಸಿಯನ್ನು ಬಳಸಿ ಲೇಖನಿಯಿಂದ ಬರೆಯುತ್ತಿದ್ದರು. ದಕ್ಷಿಣದಲ್ಲಿ ಇದಕ್ಕೆ ತದ್ವಿರುದ್ಧ ವಸ್ತು ಬಳಕೆಯಲ್ಲಿತ್ತು. ಅದೆಂದರೆ ದಕ್ಷಿಣದಲ್ಲಿ ಹೇರಳವಾಗಿ ದೊರೆಯುವ ತಾಳೆಗರಿ. ಈ ತಾಳೆಗರಿಯನ್ನು ಸಂಸ್ಕರಿಸಿ ಬೇಕಾದ ಅಳತೆಗೆ ಕತ್ತರಿಸಿ ಬರವಣಿಗೆಗೆ ಸಿದ್ಧಪಡಿಸಿಕೊಂಡು ಅದರ ಮೇಲೆ ಮೊನಚಾದ ಉಕ್ಕಿನ ಕಂಠದಿಂದ ಕೊರೆಯುತ್ತಿದ್ದರು. ಬರವಣಿಗೆಯನ್ನು ಬರೆಯುವ ಮತ್ತು ಕೊರೆಯುವ ಪ್ರಕ್ರಿಯೆಯೂ ಭಾರತದಲ್ಲಿ ಲಿಪಿಯ ಬದಲಾವಣೆಗೆ ಮಹತ್ತರ ಕಾಣಿಕೆ ನೀಡಿದೆ. ಕ್ರಿ.ಪೂ. ಒಂದನೆಯ ಶತಮಾನದ ನಂತರ ಧಾರ್ಮಿಕ ಗ್ರಂಥಗಳ ಬರವಣಿಗೆ ಹೆಚ್ಚಾಯಿತು. ಶಾಸನಗಳಂತೆ ಇವುಗಳ ಬಳಕೆ ಜಾಸ್ತಿಯಾಯಿತು. ಶಾಸನಗಳು ಕೇವಲ ರಾಜಕೀಯಕ್ಕಾಗಿ ಮಾತ್ರ ಸೀಮಿತವಾದವು. ಧಾರ್ಮಿಕ ಮಹತ್ವವನ್ನು ಕಳೆದುಕೊಂಡವು. ಮೊದಲು ಶಿಲೆಯೊಂದೇ ಮಾಧ್ಯಮವಾಗಿತ್ತು. ಕಾಲ ಕಳೆದಂತೆ ಲೋಹ, ಮರ, ಬಟ್ಟೆ, ಮಣ್ಣು ಈ ಶಾಸನಗಳ ಬರವಣಿಗೆಯ ಮಾಧ್ಯಮಗಳಾದವು. ಲೋಹದಲ್ಲಿ ಹೆಚ್ಚಾಗಿ ತಾಮ್ರದ ಬಳಕೆಯಾಗಿದೆ. ಇದನ್ನು ಆರಂಭದಲ್ಲಿ ಉತ್ತರದಲ್ಲಿ ಭೂರ್ಜ ಪತ್ರದ ಆಕಾರದಲ್ಲಿ ರಚಿಸಿದ್ದರೆ ದಕ್ಷಿಣದಲ್ಲಿ ತಾಳೆಗರಿ ಆಕಾರವನ್ನನುಸರಿಸುತ್ತಿದ್ದರು. ಇವುಗಳ ಮೇಲೆ ಅಕ್ಷರಗಳನ್ನು ಬರೆದು ಅದಕ್ಕೆ ರಾಜಮುದ್ರೆಯನ್ನು ಒತ್ತುತ್ತಿದ್ದರು. ಒಂದು ಪಟದಿಂದ ಅನೇಕ ಪಟಗಳವರೆಗೆ ಈ ತಾಮ್ರ ಶಾಸನಗಳು ಇದ್ದು ಶಾಸನದ ಪಾಠದ ಉದ್ದದ ಮೇಲೆ ಈ ಪಟಗಳ ಸಂಖ್ಯೆ ಹೆಚ್ಚು ಕಡಿಮೆಯಾಗುತ್ತಿತ್ತು. ಹೆಚ್ಚು ಪಟಗಳಿದ್ದಾಗ ಇವುಗಳನ್ನು ಉಂಗುರದಲ್ಲಿ ಸೇರಿಸಿ ರಾಜಮುದ್ರೆಯೊಂದಿಗೆ ಬಂಧಿಸುತ್ತಿದ್ದರು. ಚಿನ್ನ ಬೆಳ್ಳಿಯನ್ನು ಬಳಸಿದ್ದರೂ ಅವು ದೊರೆತಿರುವ ಸಂಖ್ಯೆ ಕಡಿಮೆ.

ಮರದ ಬಳಕೆ ನಮ್ಮಲ್ಲಿ ಹೆಚ್ಚಾಗಿದ್ದರೂ ಶಾಸನಗಳು ಕೊರೆಸಿರುವುದು ಕಡಿಮೆ. ದೊರೆತಿರುವ ಶಾಸನಗಳ ಸಂಖ್ಯೆ ಕೂಡ ಕಡಿಮೆಯೇ. ಇದಕ್ಕೆ ಭಾರತದಲ್ಲಿರುವ ಹವಾಮಾನ ವೈಪರೀತ್ಯವೇ ಕಾರಣ. ಮರವನ್ನು ದೇವಾಲಯ ಗಳ, ಮನೆಗಳ, ಮೂರ್ತಿಗಳ ನಿರ್ಮಾಣಕ್ಕೆ ಬಳಸಿದ್ದಾರೆ. ಕೆಲವೊಮ್ಮೆ ದೇವಾಲಯದ ಮುಂದಿನ ಧ್ವಜ ಸ್ತಂಭ, ತೊಲೆ, ರಥದ ತೊಲೆಗಳಲ್ಲಿ ಶಾಸನಗಳು ಕಂಡುಬರುತ್ತವೆ. ಬೆಂಗಳೂರಿನ ಟಿಪ್ಪೂ ಅರಮನೆಯ ತೊಲೆಯಲ್ಲಿ ಇಂತಹ ಶಾಸನಗಳನ್ನು ಗಮನಿಸಬಹುದಾಗಿದೆ.

ಭೂರ್ಜ ಪತ್ರ ಮತ್ತು ತಾಳೆಗರಿ ಉತ್ಪನ್ನಗಳು. ಭೂರ್ಜ ಮರದ ತೊಗಟೆಯನ್ನು ತೆಗೆದು ಅದನ್ನು ನೆರಳಲ್ಲಿ ಒಣಗಿಸಿ ಪದರುಗಳನ್ನು ಬಿಡಿಸಿ ಹಾಳೆಗಳನ್ನಾಗಿ ಸಿದ್ಧಪಡಿಸುತ್ತಿದ್ದರು. ಅವುಗಳನ್ನು ಬೇಕಾದ ಆಕಾರಕ್ಕೆ ಕತ್ತರಿಸಿ ಹಸ್ತಪ್ರತಿಯನ್ನು ಸಿದ್ಧಪಡಿಸುತ್ತಿದ್ದರು. ಮಸಿಯಲ್ಲಿ ಅದ್ದಿದ ಲೇಖನಿಯಿಂದ ಬರೆಯುತ್ತಿದ್ದರು. ಬಣ್ಣಬಣ್ಣದ ಮಸಿ ತಯಾರಿಸಿಕೊಂಡು ಬಣ್ಣದ ಚಿತ್ರಗಳನ್ನೂ ರಚಿಸುತ್ತಿದ್ದರು. ಅಲ್ಲದೆ ಬರವಣಿಗೆಯ ಸ್ಥಳದ ಸುತ್ತಲೂ ಗೆರೆಯೆಳೆಯಲು ಈ ಬಣ್ಣಗಳನ್ನು ಬಳಸಿರುತ್ತಾರೆ. ಉತ್ತರ ಭಾರತದ ಅನೇಕ ಧಾರ್ಮಿಕ ಗ್ರಂಥಗಳು ಮುದ್ರಣ ಬಂದ ಮೇಲೂ ಈ ಆಕಾರಗಳನ್ನು ಉಳಿಸಿಕೊಂಡಿದ್ದವು. ಕಾಗದದ ಬಳಕೆ ಬಂದಮೇಲೂ ಈ ಅಳತೆಗಳನ್ನು ಮತ್ತು ಮಾದರಿಗಳನ್ನು ಬಳಸಿ ಪುಸ್ತಕಗಳ ರಚನೆಯಾಗಿರುತ್ತದೆ.

ತಾಳೆಗರಿಯು ಸಹ  ಮರದ ಉಪ ಉತ್ಪನ್ನ. ತಾಳೆಮರದ ಗರಿಗಳನ್ನು ತಂದು ಅವುಗಳನ್ನು ನೆರಳಿನಲ್ಲಿ ಒಣಗಿಸಿ, ನೀರನಲ್ಲಿ ಕುದಿಸಿ ಮತ್ತೆ ಒಣಗಿಸಿ ಬೇಕಾದ ಆಕಾರಕ್ಕೆ ಕತ್ತರಿಸಿ ನಯವಾದ ಗಾರೆಯ ಕಲ್ಲಿನಿಂದ ಉಜ್ಜುತ್ತಿದ್ದರು. ಗರಿಗಳ ಮಧ್ಯೆ ತೂತು ಕೊರೆದು ದಾರದಲ್ಲಿ ಒಂದೆಡೆ ಸೇರಿಸಿ ಬಿಗಿಯಾಗಿ ಕಟ್ಟುತ್ತಿದ್ದರು. ಗರಿಗಳಿಗೆ ಅಂಕಿಗಳನ್ನು ನೀಡಿ ಉಕ್ಕಿನ ಕಂಠದಿಂದ ಪಾಠವನ್ನು ಕೊರೆಯುತ್ತಿದ್ದರು. ಹೀಗೆ ಕೊರೆದ ಅಕ್ಷರಗಳ ಮೇಲೆ ದೀಪದ ಕಾಡಿಗೆಯನ್ನು ಸವರಿದಾಗ ಅಕ್ಷರದ ಭಾಗ ಕಪ್ಪಾಗುತ್ತಿತ್ತು. ಓದಲು ಅನುಕೂಲವಾಗುತ್ತಿತ್ತು. ತಾಳೆ ಮರದಲ್ಲಿ ಎರಡು ಜಾತಿಗಳಿದ್ದು ಶ್ರೀತಾಲದ ಮರದ ಗರಿಗಳು ತೆಳ್ಳಗೆ ಅಗಲವಾಗಿ ಉದ್ದವಾಗಿರುತ್ತಿದ್ದವು. ಅಪರೂಪಕ್ಕೆ ಬಣ್ಣದಲ್ಲಿ ಬರೆದಿರುವ ಉದಾಹರಣೆಗಳೂ ಇವೆ. ಕೊರೆದು ಮೂಡಿಸುವ ಲಿಪಿಯಾಗಿದ್ದರಿಂದ ಜ್ಯಾಮಿತಿಯ ವೃತ್ತಗಳ ಅಲಂಕಾರಗಳನ್ನು ತಾಳೆಗರಿಗಳ ಮೇಲೆ ಕಾಣುತ್ತೇವೆ.

ಬಟ್ಟೆಯನ್ನು ಬರವಣಿಗೆಗೆ ಬಳಸಿರುವುದು ಕಡಿಮೆ. ಕಾರಣ ಇದರ ಎಳೆಗಳು ಲೇಖನಿಯನ್ನು ಹಿಡಿಯುತ್ತವೆ. ಬರವಣಿಗೆ ಸುಗಮವಾಗಿ ಸಾಗುವುದಿಲ್ಲ. ಕುಂಚದಲ್ಲಿ ಬರೆಯಲು ಮಾತ್ರ ಸಾಧ್ಯ. ಆದರೂ ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಬಟ್ಟೆಯನ್ನು ಸಂಸ್ಕರಿಸಿ ಬರವಣಿಗೆಗೆ ಸಿದ್ಧಪಡಿಸಿ ಬಳಸಿರುತ್ತಾರೆ. ಇದನ್ನು ಕಡಿತವೆಂದು ಕರೆಯುತ್ತೇವೆ. ಇಂದಿಗೂ ಕಛೇರಿಯ ಫೈಲುಗಳಿಗೆ ‘ಕಡಿತ’ವೆಂದು ಕರೆಯುವುದು ಇದೇ ಹಿನ್ನೆಲೆಯಲ್ಲಿ. ಸಾಹಿತ್ಯ ಕೃತಿಗಳಲ್ಲಿ ಇದು ಕಡಿತವೆಂದು ಉಲ್ಲೇಖವಾಗಿದೆ. ಸುಮಾರು ಒಂದು ಅಡಿ / ಅರ್ಧ ಅಡಿ ಅಗಲದ ಸುಮಾರು 10 ಅಡಿ ಉದ್ದದ ಬಟ್ಟೆಯನ್ನು ತಯಾರಿಸಿ ಅದಕ್ಕೆ ಹುಣಸೆ ಬೀಜದಿಂದ ಮಾಡಿದ ಅಂಟನ್ನು ಸವರುತ್ತಿದ್ದರು. ಅನಂತರ ನೆರಳಿನಲ್ಲಿ ಒಣಗಿಸಿ ಅದನ್ನು ಗಾರೆಯ ಕಲ್ಲಿನಿಂದ ಉಜ್ಜಿ ನಯಗೊಳಿಸುತ್ತಿದ್ದರು. ಹುಣಸೆಯ ಅಂಟಿಗೆ ಮೊದಲೇ ಕಪ್ಪು ಮಸಿಯನ್ನು ಸೇರಿಸುತ್ತಿದ್ದುದರಿಂದ ಇದು ಕಪ್ಪಾಗಿರುತ್ತಿತ್ತು. ಇದನ್ನು ಒಂದು ಅಳತೆಗೆ ಒಂದರ ಮೇಲೊಂದು ಬರುವಂತೆ ಮಡಚುತ್ತಿದ್ದರು. ಇದರ ಮೇಲೆ ಬಳಪದಿಂದ ಬರೆಯುತ್ತಿದ್ದರು. ಕಡಿತದ ಎರಡೂ ಕಡೆ ಬರೆಯಬಹುದಿತ್ತು. ಇದರ ಎರಡೂ ಅಂಚುಗಳನ್ನು ಹಲಗೆಗೆ ಅಂಟಿಸಿ ಹಲಗೆಯನ್ನು ಬಣ್ಣದ ಚಿತ್ರಗಳಿಂದ ಅಲಂಕರಿಸುತ್ತಿದ್ದರು. ಈ ಕಡಿತಗಳನ್ನು ಸಾಮಾನ್ಯವಾಗಿ ಲೆಕ್ಕ ಪತ್ರಗಳಿಗೆ ಬಳಸಿರುತ್ತಾರೆ.

ಮಣ್ಣನ್ನು ಬರವಣಿಗೆಯ ಸಾಧನವಾಗಿ ಬಳಸಿರುವುದು ಸಿಂಧೂ ನಾಗರಿಕತೆಯಲ್ಲಿಯೇ ಕಂಡುಬಂದಿದೆ. ಆದರೂ ಮುಂದೆ ಇದರ ಬಳಕೆ ಅಷ್ಟಾಗಿ ಕಂಡುಬರುವುದಿಲ್ಲ. ಉತ್ತರ ಭಾರತದಲ್ಲಿ ಕ್ರಿ.ಶ. ಒಂದನೆಯ ಶತಮಾನದಲ್ಲಿ ಇಟ್ಟಿಗೆಗಳ ಮೇಲೆ ಬರೆದಿರುವ ಬರವಣಿಗೆಗಳು ಕಂಡುಬಂದಿವೆ. ಮಣ್ಣು ಹಸಿಯಾಗಿರುವಾಗ ಅದನ್ನು ಬೇಕಾದ ಆಕಾರ ಮಾಡಿ ಮೊನಚಾದ ಮೊಳೆಯಿಂದ ಅದರ  ಮೇಲೆ ಬರೆದು ಸುಡುತ್ತಿದ್ದರು. ಮಥುರಾ ಮುಂತಾದ ಉತ್ಖನನಗಳಲ್ಲಿ ಈ ಬಗೆಯ ಇಟ್ಟಿಗೆಗಳು ಕಂಡುಬಂದಿವೆ. ಮಡಿಕೆಗಳ ಮೇಲೆಯೂ ಅಪರೂಪಕ್ಕೆ ಬರವಣಿಗೆ ಇರುವುದು ಕಾಣಬರುತ್ತದೆ.

ಮೇಲೆ ತಿಳಿಸಿದ ವಸ್ತುಗಳಲ್ಲದೆ ಚರ್ಮ, ಶಂಖ ಮುಂತಾದವುಗಳ ಮೇಲೆ ಬರೆದಿರುವ ಬರವಣಿಗೆಗಳು ಕಾಣಬರುತ್ತವೆ. ಚರ್ಮ ನಿಷಿದ್ಧ ವಸ್ತುವಾಗಿರುವುದರಿಂದ ವೈದಿಕರಲ್ಲಿ ಅದರ ಬಳಕೆ ಕಡಿಮೆ.

ಉತ್ತರ ಭಾರತದ ಲಿಪಿಗಳು : ಭಾರತದಲ್ಲಿದ್ದ ಪ್ರಾಕೃತ ಅಥವಾ ಸಂಸ್ಕೃತ ಭಾಷಾ ಜನ್ಯವಾದ ಪ್ರಮುಖ ಭಾಷೆಗಳಿಗೆ ಬಳಸುವ ಲಿಪಿಗಳೇ ಉತ್ತರ ಭಾರತದ ಲಿಪಿಗಳು. ಮರಾಠಿ, ಗುಜರಾತಿ, ಒರಿಯಾ, ಬಂಗಾಳಿ, ಅಸ್ಸಾಮಿ, ನೇಪಾಳಿ, ಬಿಹಾರಿ, ರಾಜಸ್ಥಾನಿ, ಹಿಂದಿ, ಪಂಜಾಬಿ, ಸಂಸ್ಕೃತ ಭಾಷೆಗಳಿಗೆ ಬಳಸುವ ಲಿಪಿಗಳು ಗುಪ್ತರ ಕಾಲದಿಂದಲೂ ಭಿನ್ನವಾಗಿ ತೊಡಗಿ ಈಗಿನ ರೂಪವನ್ನು ತಾಳಿವೆ. ವಿದ್ವಾಂಸರು ಅಶೋಕನ ಶಾಸನಗಳಲ್ಲಿಯೇ ಲಿಪಿಗಳಲ್ಲಿನ ಅಲ್ಪ ಪ್ರಭೇದಗಳನ್ನು ಗುರುತಿಸುತ್ತಾರೆ.

ಅಶೋಕನ ಕಾಲದಲ್ಲಿ ಭಾರತದಲ್ಲಿ ಬಳಕೆಗೆ ಬಂದ ಬ್ರಾಹ್ಮಿ ಲಿಪಿಯನ್ನು ವಿದ್ವಾಂಸರು ಸ್ವರ, ವ್ಯಂಜನಗಳೆಂದು ವಿಂಗಡಿಸಿದ್ದರೂ ಅವುಗಳನ್ನು ಬರೆಯುವ ರೀತಿ ಹಾಗೂ ಉಚ್ಚಾರಾಂಶಗಳನ್ನು ಗಮನಿಸಿ ಭಾರತೀಯ ಲಿಪಿಗಳಲ್ಲಿ ಸ್ವತಂತ್ರ ವ್ಯಂಜನಗಳಿಲ್ಲವೆಂದು ಕೆಲವು ವಿದ್ವಾಂಸರು ಅಭಿಪ್ರಾಯ ಪಟ್ಟಿರುತ್ತಾರೆ. ಸ್ವಲ್ಪ ಮಟ್ಟಿಗೆ ಇದು ನಿಜವಾದರೂ ಪೂರ್ಣ ಸತ್ಯವಲ್ಲ. ಇಂದಿಗೂ ಉತ್ತರದ ಭಾಷೆಗಳಲ್ಲಿ ಪದದ ಅಂತ್ಯಾಕ್ಷರವನ್ನು ಸ್ವರ ರಹಿತವಾಗಿ ಉಚ್ಚರಿಸುವುದನ್ನು ಗಮನಿಸಬಹುದಾಗಿದೆ. ಉದಾಹರಣೆಗೆ ಕಮಲ ಕಮಲ್. ಹೀಗಾಗಿ ಪೂರ್ಣವಾಗಿ ಶುದ್ಧವ್ಯಂಜನಗಳಾಗಿ ಬಳಸುವುದು ಕಡಿಮೆ. ಸ್ವರ ಸಮೇತವಾಗಿ ಮುಖ್ಯವಾಗಿ ‘ಅ’ ಕಾರ ಸಮೇತವಾಗಿ ವರ್ಣಮಾಲೆಯನ್ನು ಗುರುತಿಸುವುದು ಪದ್ಧತಿಯಲ್ಲಿದೆ.

ಬೇರೆ ಲಿಪಿಗಳಲ್ಲಿರುವಂತೆ ವ್ಯಂಜನಗಳ ಪಕ್ಕದಲ್ಲಿ ನೇರವಾಗಿ ಸ್ವರಗಳನ್ನು ಸೇರಿಸದೆ ಸ್ವರ ಸಂಕೇತಗಳನ್ನು ಗೆರೆಗಳನ್ನು ಹಿಂದೆ ಮುಂದೆ ಮೇಲೆ ಕೆಳಗೆ ತೋರಿಸುವ ಮೂಲಕ ಕಾಗುಣಿತಗಳನ್ನು ಸೂಚಿಸಿರುತ್ತಾರೆ.

ಅಶೋಕನ ಲಿಪಿಗಳಲ್ಲಿ ಸ್ವರ, ವ್ಯಂಜನಗಳಿಗೆ ಪ್ರತ್ಯೇಕ ವರ್ಣಗಳಿವೆ. ಪೂರ್ಣ ವರ್ಣಮಾಲೆ ಅವನ ಶಾಸನಗಳಲ್ಲಿ ಕಾಣದಿರಲು ಕಾರಣ ಅವನ ಶಾಸನಗಳ ಭಾಷೆ ಪ್ರಾಕೃತ. ಮುಂದೆ ಸಂಸ್ಕೃತ ಭಾಷೆಯಲ್ಲಿ ಶಾಸನಗಳು ಆರಂಭವಾದ ಮೇಲೆ ಉಳಿದ ವರ್ಣಗಳು ಅದರಲ್ಲಿ ಕಾಣಿಸಿಕೊಂಡವು.

ಈ ವರ್ಣಮಾಲೆಯಲ್ಲಿ ಈ, ಊ, ಋ, ಋೂ, ಎ, ಒ, ಕಾರಗಳು ಕಾಣುವುದಿಲ್ಲ. ಉತ್ತರಭಾರತದ ಭಾಷೆಗಳಲ್ಲಿ ಹ್ರಸ್ವ ಎ ಮತ್ತು ಒ ಕಾರಗಳು ಇಲ್ಲ. ಅವು ದಕ್ಷಿಣದ ಕನ್ನಡ ತಮಿಳು, ತೆಲುಗು ಮತ್ತು ಮಲೆಯಾಳ ಭಾಷೆ ಮತ್ತು ಅವುಗಳ ಜನ್ಯಭಾಷೆಗಳಲ್ಲಿ ಮಾತ್ರ ಕಾಣಬರುತ್ತವೆ. ಹೀಗಾಗಿ ಅಶೋಕನ ಬ್ರಾಹ್ಮಿಯಲ್ಲಾಗಲೀ, ಮುಂದಿನ ಸಂಸ್ಕೃತ ಬ್ರಾಹ್ಮಿಲ್ಲಾಗಲೀ, ಈ ಲಿಪಿಗಳು ಕಾಣಬರುವುದಿಲ್ಲ. ಈ ಅಕ್ಷರಗಳನ್ನು ಗಮನಿಸಿದಾಗ ಅವುಗಳಲ್ಲಿ ಹೆಚ್ಚಾಗಿ ಸರಳ ರೇಖೆಗಳಲ್ಲಿರಚಿತವಾಗಿದ್ದು ಕೆಲವು ಮಾತ್ರ ದುಂಡಗಿವೆ. ಈ ಲಿಪಿಗಳು ಸರಿಸುಮಾರು ಕ್ರಿ.ಪೂ. 100 ರವರೆಗೆ ಎದ್ದು ಕಾಣುವಷ್ಟು ಬದಲಾಗಿರುವುದಿಲ್ಲ. ಆದರೆ ಮುಂದೆ ಲಿಪಿಗಳು ಅಶೋಕನ ಲಿಪಿಗಳಿಗಿಂತ ಸ್ವಲ್ಪ ಭಿನ್ನತೆಯನ್ನು ತೋರಿಸಲಾರಂಭಿಸುತ್ತವೆ. ಈ ವ್ಯತ್ಯಾಸ ಸ್ಪಷ್ಟವಾಗಿ ಸುಮಾರು ಕ್ರಿ.ಶ. ಒಂದನೆಯ ಶತಮಾನದಲ್ಲಿ ಎದ್ದು ಕಾಣುತ್ತವೆ. ಉತ್ತರದಲ್ಲಿ ಕುಶಾನ ಅರಸರೂ ದಕ್ಷಿಣದಲ್ಲಿ ಶಾತವಾಹನ ಅರಸರೂ ಬಳಸಿದ ಶಾಸನ ಲಿಪಿಗಳಲ್ಲಿ ಇದನ್ನು ಸ್ಪಷ್ಟವಾಗಿ ಗುರುತಿಸಬಹುದು. ಇಲ್ಲಿ ಅಕ್ಷರ ಮೇಲ್ಭಾಗದಲ್ಲಿ ಗೆರೆಗಳು ತ್ರಿಕೋಣ ಆಕಾರಕ್ಕೆ ತಿರುಗಿವೆ ಹಾಗೂ ಅಕ್ಷರದ ಕೆಳಮುಖ ಗೆರೆಗಳು ಕೆಳಕ್ಕೆ ಮೂಲಾಕ್ಷರಕ್ಕಿಂತ ಉದ್ದವಾಗಿವೆ. ಈ ಲಿಪಿಗಳನ್ನು ಪ್ರಧಾನ ಅರಸರಾದ ಕುಶಾನರ ಅಕ್ಷರಗಳೆಂದೂ ದಕ್ಷಿಣದಲ್ಲಿ ಶಾತವಾಹನರ ಕಾಲದ ಲಿಪಿಗಳೆಂದು ಗುರುತಿಸುತ್ತೇವೆ. ಕುಶಾನರ ಕಾಲದ ಲಿಪಿಗಳನ್ನು ಶಕಕ್ಷತ್ರಪರೂ ಬಳಸಿರುತ್ತಾರೆ.  ಮುಂದೆ ಕುಶಾನರ ನಂತರ ಬಂದ ಅರಸರಲ್ಲಿ ಗುಪ್ತರು ಪ್ರಮುಖರು. ಉತ್ತರ ಭಾರತವನ್ನಲ್ಲದೆ ದಕ್ಷಿಣದ ಕಡೆಗೂ ದಿಗ್ವಿಜಯ ಬಂದು ಭಾರತ ಖಂಡವನ್ನು ಗೆದ್ದರು. ಅಲ್ಲಿಯವರೆಗೆ ಸಿಕ್ಕಿದ ಶಾಸನಗಳು ಪ್ರಾಕೃತ ಹಾಗೂ ಸ್ವಲ್ಪಮಟ್ಟಿಗೆ ಸಂಸ್ಕೃತದಲ್ಲಿದ್ದವು. ಇವರ ಆಳ್ವಿಕೆಯಲ್ಲಿ ಪೂರ್ಣವಾಗಿ ಸಂಸ್ಕೃತ ಶಾಸನಗಳನ್ನು ಹಾಕಿಸಲಾಯಿತು. ಅನೇಕ ಸಂಸ್ಕೃತ ಶಾಸನಗಳನ್ನು ಇವರ ಕಾಲದಲ್ಲಿ ಕಾಣಬಹುದು. ಪ್ರಮುಖ ರಾಜರಾಗಿದ್ದರಿಂದ ಸಣ್ಣ ರಾಜರ ಮೇಲೆ ತಮ್ಮ ಪ್ರಭಾವವನ್ನು ಬೀರಿದರು. ಹೀಗಾಗಿ ಉತ್ತರದಲ್ಲಿ ತಾವು ಬಳಸಿದ ಲಿಪಿಗಳನ್ನೇ ಬಳಸಿರುತ್ತಾರೆ. ದಕ್ಷಿಣದಲ್ಲಿ ಕದಂಬರ ಕೆಲವು ಶಾಸನಗಳು ಇವರಿಂದ ಪ್ರಭಾವಿತವಾಗಿವೆ. ಹೀಗಾಗಿ ಅಶೋಕನ ಕಾಲದ ಲಿಪಿಗಳು ಸ್ಪಷ್ಟವಾಗಿ ಇವರ ಕಾಲದಲ್ಲಿ ಎರಡು ಕವಲಾಗಿ ಒಡೆದಿರುವುದನ್ನು ಕಾಣಬಹುದು. ಈ ಲಿಪಿಗಳಲ್ಲಿ ಗುಂಡಾದ ರೇಖೆಗಳು ಕಡಿಮೆಯಾಗಿ ಆದಷ್ಟು ಸರಳ ರೇಖೆಗಳನ್ನು ಬಳಸಿರುತ್ತಾರೆ. ಇವರ ನಂತರ ಬಂದ ಕನೋಜದ ಅರಸರು, ವಾಕಾಟಕರು, ದಕ್ಷಿಣದಲ್ಲಿ ರಾಷ್ಟ್ರಕೂಟರು ಸಂಸ್ಕೃತ ಶಾಸನಗಳಿಗೆ ಆ ಲಿಪಿಯನ್ನೇ ಬಳಸಿರು ತ್ತಾರೆ. ಗುಪ್ತರ ಅಂತ್ಯಕಾಲಕ್ಕೆ ಅಶೋಕನ ಬ್ರಾಹ್ಮಿಲಿಪಿಗೂ ಗುಪ್ತರ ಲಿಪಿಗೂ ಸಾಮ್ಯವಿಲ್ಲದಷ್ಟು ಬದಲಾವಣೆಗಳು ಕಾಣಿಸಿಕೊಂಡಿದ್ದವು.

ಗುಪ್ತರು ಬಳಸಿದ ಲಿಪಿಯನ್ನೇ ಉತ್ತರ ಭಾರತವನ್ನಾಳಿದ ಪಾಲರು, ಸೇನರು ಬಳಸಿ ಮತ್ತಷ್ಟು ವ್ಯತ್ಯಾಸಗಳಾಗಿ ಈಗಿನ ನಾಗರೀ ಲಿಪಿ ಜನ್ಯ ಲಿಪಿಗಳಾದವು.

ನರ್ಮದೆಯ ದಕ್ಷಿಣಕ್ಕೆ ರಾಜ್ಯವಾಳುತ್ತಿದ್ದ ಶಾತವಾಹನರು ಅಶೋಕನ ಕಾಲದಿಂದ ಮುಂದುವರಿದಿದ್ದ ಲಿಪಿಯನ್ನೇ ಬಳಸಿದ್ದರು. ಸು. 300 ವರ್ಷಗಳಲ್ಲಿ ಪ್ರಾದೇಶಿಕ ಭಿನ್ನತೆಯಿಂದ ಅಲ್ಪಸ್ವಲ್ಪ ಬದಲಾವಣೆಗಳು ಕಾಣಿಸಿಕೊಂಡಿದ್ದವು. ಅದೆಂದರೆ ಅಕ್ಷರದ ಮೇಲ್ಭಾಗದ ಗೆರೆಗಳು ತ್ರಿಕೋನಾಕಾರದ ಮೊಳೆಯಂತೆ ಕಾಣಿಸಿಕೊಂಡದ್ದು, ಕೆಳಭಾಗದ ಗೆರೆಗಳು ಕೆಳಮುಖವಾಗಿ ಬೆಳೆಯಲು ಆರಂಭವಾದದ್ದು ಇವು ಆರಂಭದ ಲಕ್ಷಣಗಳಾದರೆ ಶಾತವಾಹನರ ಅಂತ್ಯದ ವೇಳೆಗೆ ಅಂದರೆ ಕ್ರಿ.ಶ. 3 ನೆಯ ಶತಮಾನದ ವೇಳೆಗೆ ಈ ಪ್ರಕ್ರಿಯೆ ಇನ್ನೂ ಸ್ಪಷ್ಟವಾಗಿ ಕಾಣತೊಡಗಿತು. ಕೆಳಮುಖವಾಗಿ ಗೆರೆಗಳನ್ನು ಹೊಂದಿದ್ದ ಅ, ಆ, ಕ, ಙ, ಮುಂತಾದ ಅಕ್ಷರಗಳ ಎಡಗಡೆಗೆ ತಿರುಗಿ ಮತ್ತೆ ಮೇಲ್ಮುಖವಾಗಿ ಬೆಳೆಯಲಾರಂಭಿಸಿತು. ಅಲ್ಲದೆ ವ್ಯಂಜನಗಳಿಗೆ ಸ್ವರಗಳ ಜೋಡಣೆ ತೋರಿಸುವ ಚಿಹ್ನೆಗಳು ಪ್ರಧಾನವಾಗಿ ಕಾಣಿಸಲಾರಂಭಿಸಿದವು. ಮ, ವ, ಅಕ್ಷರಗಳು ತ್ರಿಕೋನಾಕಾರಕ್ಕೆ ತಿರುಗಿದರೆ ಘ, ಪ, ಫ, ಜ, ಯ ಮುಂತಾದವು ಆಯತಾಕಾರದ ಸರಳ ರೇಖೆಗಳಿಗೆ ಮಾರ್ಪಾಟಾದವು. ಇದೇ ಲಿಪಿಯನ್ನು ಪೂರ್ವ ಸಮುದ್ರ ತೀರದ ಇಕ್ಷ್ವಾಕುಗಳು, ಪಲ್ಲವರು ಮುಂದು ವರಿಸಿದರು. ಇವರ ಕಾಲಕ್ಕೆ ತಲೆಯ ಮೇಲಿನ ತ್ರಿಕೋಣಾಕಾರ ಇನ್ನೂ ಸ್ಪಷ್ಟವಾಗಿ ಅಕ್ಷರದ ಕೆಳರೇಖೆಗಳು ಹೆಚ್ಚು ಬಾಗಿ ಸುರುಳಿಯಂತೆ ಅಲಂಕೃತ ವಾಗಿರುವುದನ್ನು ಕಾಣಬಹುದಾಗಿದೆ.

ಶಾತವಾಹನರ ನಂತರ ಕರ್ನಾಟಕದ ಬನವಾಸಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಕದಂಬರು ಆಳ್ವಿಕೆಯನ್ನು ಆರಂಭಿಸಿದರು. ಇವರಲ್ಲಿ ಕಾಕುಸ್ಥವರ್ಮನು ಪ್ರಖ್ಯಾತ ಅರಸ. ಈತನು ವೈವಾಹಿಕ ಸಂಬಂಧದ ಮೂಲಕ ಉತ್ತರ ಭಾರತದ ಗುಪ್ತ ಹಾಗೂ ವಾಕಾಟಕ ಅರಸರೊಡನೆ ವೈವಾಹಿಕ ಸಂಬಂಧ ಬೆಳೆಸಿದನು. ಈ ಮೂಲಕ ಸಾಂಸ್ಕೃತಿಕ ವಿನಿಮಯ ವೆಂಬಂತೆ ಆ ಪ್ರದೇಶದಲ್ಲಿನ ಲಿಪಿಗಳ ಪ್ರಭಾವ ಕದಂಬರ ಲಿಪಿಗಳ ಮೇಲೆ ಆಯಿತು. ಉತ್ತರದಿಂದ ಕವಿಗಳು ಲಿಪಿಕಾರರು ಕದಂಬರ ರಾಜ್ಯಕ್ಕೆ ಬಂದಿದ್ದು ಅವರಿಂದ ಸುಂದರವಾದ ಶಿಲಾಶಾಸನಗಳೇ ಅಲ್ಲದೆ ಕಾವ್ಯಮಯವಾದ ಶಾಸನಗಳ ರಚನೆಯಾಗಿದೆ. ಇಲ್ಲಿನ ಲಿಪಿಗಳ ಮೇಲೆ ಉತ್ತರದ ಲಿಪಿಗಳ ಪ್ರಭಾವ ಬಿದ್ದು ತ್ರಿಕೋಣಾಕಾರದ ತಲೆಕಟ್ಟಿದ್ದ ಶಾತವಾಹನರ ಲಿಪಿ ಈಗ ಪೆಟ್ಟಿಗೆಯಾಕಾರದ ಲಿಪಿಗೆ ತಿರುಗಿತು. ಅಂದರೆ ಲಿಪಿಯ ಮೇಲ್ಭಾಗದ ಗೆರೆಯ ತಲೆಯ ಮೇಲೆ ಚೌಕಾಕಾರದ ತಲೆಕಟ್ಟು ಕಾಣಬರುವುದಿಲ್ಲ. ತಲಕಾಡನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳ್ವಿಕೆ ನಡೆಸಿದ ಗಂಗರ ಲಿಪಿಗಳೂ ತಲೆಕಟ್ಟಿನಿಂದ ಹೊರತಾಗಿವೆ. ಮುಂದೆ ಬಾದಾಮಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ರಾಜ್ಯಭಾರ ಆರಂಭಿಸಿದ ಚಾಲುಕ್ಯರು ಕದಂಬರನ್ನು ಸೋಲಿಸಿ ಅವರ ರಾಜ್ಯವನ್ನು ತಮ್ಮ ರಾಜ್ಯಕ್ಕೆ ಸೇರಿಸಿಕೊಂಡರು. ಆದರೆ ಅವರ ಲಿಪಿಯನ್ನು ಮುಂದುವರಿಸಲಿಲ್ಲ. ಚೌಕಾಕಾರದ ತಲೆಕಟ್ಟ ಮಾಯವಾಗಿ ಅದರ ಜಾಗದಲ್ಲಿ ಸಣ್ಣ ತಲೆಕಟ್ಟು ಅಡ್ಡಗೆರೆಯ ರೂಪದಲ್ಲಿ ಕಾಣಬರುತ್ತದೆ. ಅಕ್ಷರಗಳು ಮೈ ಕೊಡವಿ ತಮ್ಮ ಉದ್ದವನ್ನು ಬಿಟ್ಟು ಅಡ್ಡಡ್ಡ ಬೆಳೆಯುತ್ತವೆ. ಕಾಗುಣಿತದ ಗೆರೆಗಳು ಎದ್ದು ಕಾಣುವಂತೆ ಉದ್ದವಾಗುತ್ತವೆ. ಚಾಲುಕ್ಯರು ಮತ್ತು ರಾಷ್ಟ್ರಕೂಟರು ಆಂಧ್ರಪ್ರದೇಶದ ಬಹು ಭಾಗವನ್ನು ಆಳುತ್ತಿದ್ದ ಕಾರಣ ಕರ್ನಾಟಕದ ಆಂಧ್ರ ಪ್ರದೇಶದ ಲಿಪಿಗಳು ಒಂದೇ ರೀತಿಯ ಬೆಳವಣಿಗೆ ಪಡೆಯಲು ಕಾರಣ ವಾಯಿತು. ಎರಡೂ ನಾಡುಗಳ ಲಿಪಿಗಳಲ್ಲಿ ಅಲ್ಪಸ್ವಲ್ಪ ವ್ಯತ್ಯಾಸ ಮಾತ್ರವಿದೆ. ಈ ಬಗೆಯ ಅಲ್ಪಸ್ವಲ್ಪ ವ್ಯತ್ಯಾಸದೊಂದಿಗೆ ವಿಜಯನಗರದ ಕಾಲದವರೆಗೆ ಮುಂದುವರಿಯುತ್ತದೆ.

ಮುಂದೆ 8ನೆಯ ಶತಮಾನದಲ್ಲಿ ಚಾಲುಕ್ಯರನ್ನು ಮೂಲೆಗೊತ್ತಿ ರಾಷ್ಟ್ರಕೂಟರು ಚಾಲುಕ್ಯರ ಆಡಳಿತ ಪ್ರದೇಶಗಳ ಉತ್ತರಾಧಿಕಾರಿಗಳಾದರು. ಈ ಸಮಯದಲ್ಲಿ ಇವರು ಚಾಲುಕ್ಯರ ಲಿಪಿಗಳನ್ನೇ ಮುಂದುವರೆಸಿದರು. ಆದರೆ ಚಾಲುಕ್ಯರ ಆರಂಭ ಕಾಲದ ಅಕ್ಷರಗಳಿಗೂ (ಸುಮಾರು 6 ನೆಯ ಶತಮಾನ) ಒಂಭತ್ತನೆಯ ಶತಮಾನದ ಅಕ್ಷರಗಳಿಗೂ ಬೆಳವಣಿಗೆ ವ್ಯತ್ಯಾಸ ಕಂಡುಬರುತ್ತದೆ. ತಲೆಕಟ್ಟುಗಳು ಲಿಪಿಗಳಲ್ಲಿ ಕಡ್ಡಾಯವಾಗಿದ್ದುದರ ಜೊತೆಗೆ ಕೆಳಗೆ ಇಳಿಬಿದ್ದ ಗೆರೆ ಮೇಲಕ್ಕೆ ಅಡ್ಡ ಬಂದ ಗೆರೆಯನ್ನು ಸೇರಿಸಿಕೊಳ್ಳುತ್ತದೆ. ರಾಷ್ಟ್ರಕೂಟರ ಅಂತ್ಯದವರೆಗೆ ಅವರ ಮಾಂಡಲೀಕರೂ ಇದೇ ಲಿಪಿಯನ್ನು ಬಳಸಿರುತ್ತಾರೆ. ಈ ಕಾಲಕ್ಕೆ ಕಾಗುಣಿತಗಳು ಅಕ್ಷರದ ಭಾಗವಾಗಿ ಅವುಗಳ ಚಿಹ್ನೆಗಳು ಸಾಕಷ್ಟು ಬೆಳವಣಿಗೆಯನ್ನು ತೋರಿಸುತ್ತವೆ. ಗ, ಸ, ಯ, ರ, ಕ, ನ, ತ ಮುಂತಾದ ಅಕ್ಷರಗಳು ಈಗಿನ ಲಿಪಿಗೆ ಸಮೀಪದ ರೂಪವನ್ನು ಪಡೆದಿರುತ್ತವೆ.

ರಾಷ್ಟ್ರಕೂಟರನ್ನು ಸೋಲಿಸಿ ಕಲ್ಯಾಣದ ಚಾಲುಕ್ಯರು ಕಲ್ಯಾಣವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳ್ವಿಕೆ ಪ್ರಾರಂಭಿಸಿದರು. ರಾಷ್ಟ್ರಕೂಟರಂತೆ ಇವರೂ ಕರ್ನಾಟಕ ಮತ್ತು ಆಂಧ್ರಪ್ರದೇಶಗಳೆರಡನ್ನೂ ಆಳುತ್ತಿದ್ದರು. ಹೀಗಾಗಿ ಎರಡೂ ಲಿಪಿಗಳು ಅಲ್ಪಸ್ವಲ್ಪ ಬದಲಾವಣೆಯೊಂದಿಗೆ ಒಂದೇ ರೀತಿ ಇವೆ. ಆರಂಭದ ಅರಸರು ರಾಷ್ಟ್ರಕೂಟರು ಬಳಸಿದ ಲಿಪಿಯನ್ನೇ ಬಳಸಿರುತ್ತಾರೆ. ಆದರೆ ಮುಂದೆ ಬರವಣಿಗೆಯ ಶಿಲಾಮಾಧ್ಯಮ ಬಿಳಿಯ ಚಪ್ಪಡಿ ಕಲ್ಲಿನಿಂದ ಬಳಪದ ಕಲ್ಲಿಗೆ ವರ್ಗಾವಣೆಯಾಗುತ್ತದೆ. ಇದರಿಂದ ಕಲ್ಲಿನಲ್ಲಿ ಕೆತ್ತುವ ಸಲಕರಣೆಗಳು ಬದಲಾಗುತ್ತವೆ. ಆ ಮೊದಲು ಕಠಿಣ ಕಲ್ಲನ್ನು ಕಡಿಯಲು ಬಳಸುತ್ತಿದ್ದ ಉಳಿ ಸುತ್ತಿಗೆಗಳು ನಯವಾದ ಹಾಗೂ ಮೃದುವಾದ ಕಲ್ಲಿಗೆ ಬಳಕೆಯಾಗಲಿಲ್ಲ. ಆದ್ದರಿಂದ ಸೂಕ್ಷ್ಮವಾದ ಆಯುಧಗಳನ್ನು ಬಳಸಿದ್ದುದರಿಂದ ಶಿಲೆಯಲ್ಲಿ ಮೂಡಿದ ಲಿಪಿಗಳೂ ಸೂಕ್ಷ್ಮವಾದವು. ಕಡಿಮೆ ಜಾಗದಲ್ಲಿ ಸಣ್ಣ ಅಕ್ಷರಗಳನ್ನು ಬರೆದು ಹೆಚ್ಚಿನ ಸಾಲುಗಳು ಬರೆದಿರುವುದು ಕಾಣಬರುತ್ತದೆ. ಹಾಗೆಯೇ ಅಲ್ಪಸ್ವಲ್ಪ ದುಂಡಗಿದ್ದ ಅಕ್ಷರಗಳು ಪೂರ್ಣ ದುಂಡಗಾಗಿ ವೃತ್ತಾಕಾರವಾಗಿ ಕಾಣಿಸಿ ಕೊಂಡವು. ತಲೆಕಟ್ಟುಗಳು, ಕಾಗುಣಿತಗಳು ಸ್ಪಷ್ಟವಾಗಿ ತಲೆಯ ಮೇಲೆ ಹಾಗೂ ಅಕ್ಷರದ ಪಕ್ಕಕ್ಕೆ ಬಂದವು. ಅನುಸ್ವಾರಕ್ಕೆ ಬಳಸುತ್ತಿದ್ದ ಚುಕ್ಕೆ ಅಕ್ಷರದ ತಲೆಯ ಮೇಲಿನಿಂದ ಅಕ್ಷರದ ಪಕ್ಕಕ್ಕೆ ಬಂತು. ‘ಉ’ ಕಾರ ಮತ್ತು ‘ಓ’ ಕಾರದ ಕಾಗುಣಿತ ಅಕ್ಷರದ ಪಕ್ಕಕ್ಕೆ ಬಂತು. ಚ, ಭ, ಮ, ವ ಈ ಅಕ್ಷರಗಳು ಮೂಲ ಗೆರೆಯಿಂದ ಹೊರಬಂದು ಬಾಯಿಬಿಟ್ಟು ಕೊಳ್ಳುತ್ತವೆ. ಹೀಗೆ ಬಹಳಷ್ಟುಬದಲಾವಣೆಗಳು ಈ ಕಾಲಕ್ಕೆ ಕಾಣಿಸಿಕೊಂಡವು. ಬಹಳಷ್ಟು ಅಕ್ಷರಗಳು ಈಗಿನ ಕಾಲದ ರೂಪಕ್ಕೆ ಸಮೀಪವಾಗಿವೆ.

ಮುಂದೆ ಇವರ ಮಾಂಡಳಿಕರಾಗಿದ್ದ ಹೊಯ್ಸಳರು, ಕಾಕತೀಯರು, ದೇವಗಿರಿಯ ಯಾದವರು ಸ್ವತಂತ್ರರಾಗಿ ಆಡಳಿತ ಮುಂದುವರಿಸಿದರು. ಇವರು ಕಲ್ಯಾಣದ ಚಾಳುಕ್ಯರ ಕಾಲದಲ್ಲಿ ಬಳಕೆಯಲ್ಲಿದ್ದ ಲಿಪಿಗಳನ್ನೇ ಬಳಸಿದರು. ಅಲ್ಲದೆ ದೇವಾಲಯ ನಿರ್ಮಾಣ ಕಾರ್ಯದಲ್ಲಿ ತೊಡಗುತ್ತಿದ್ದ ಕುಶಲ ಶಿಲ್ಪಿಗಳು ಶಾಸನ ಅಕ್ಷರಗಳನ್ನು ಕೆತ್ತಲು ಆರಂಭಿಸಿದರು. ಹೀಗಾಗಿ ಅಕ್ಷರಗಳು ಮುದ್ದಾಗಿ, ಅಲಂಕಾರಿಕವಾಗಿ ಮೂಡಲು ಕಾರಣವಾಯಿತು. ಹೊಯ್ಸಳರ ಕಾಲದ ಶಾಸನಗಳು ಕಲಾತ್ಮಕತೆಯ ಪರಾಕಾಷ್ಠೆಯನ್ನು ಮುಟ್ಟಿವೆ. ಅಕ್ಷರಗಳಲ್ಲಿ ಹೂಗಳನ್ನು ಹಂಸಗಳನ್ನು ಪ್ರಾಣಿಗಳನ್ನು ಬಿಡಿಸಿ ಅಕ್ಷರಗಳ ಬರವಣಿಗೆಗೆ ಮೆರಗು ತುಂಬಿರುತ್ತಾರೆ. ಹೊಯ್ಸಳರ ಶಿಲ್ಪಗಳಷ್ಟೇ ಅವರ ಶಾಸನಗಳೂ ಕಲಾತ್ಮಕತೆಯ ದೃಷ್ಠಿಯಿಂದ ಪ್ರಸಿದ್ಧವಾಗಿವೆ.

13ನೆಯ ಶತಮಾನದ ಅಂತ್ಯ ಹಾಗೂ 14ನೆಯ ಶತಮಾನದ ಆರಂಭ ಕಾಲದಲ್ಲಿ ದಕ್ಷಿಣ ಭಾರತಕ್ಕೆ ಆಘಾತವನ್ನುಂಟುಮಾಡಿದ ಮುಸ್ಲಿಂ ದಾಳಿಯು ಕೇವಲ ದಕ್ಷಿಣದ ರಾಜಕೀಯದ ಮೇಲೆ ಮಾತ್ರ ಪ್ರಭಾವವನ್ನು ಬೀರಲಿಲ್ಲ. ವಾಸ್ತು, ಶಿಲ್ಪ, ಹಾಗೂ ಶಾಸನಗಳ ಬರವಣಿಗೆ ಮೇಲೆಯೂ ಪ್ರಭಾವ ಬೀರಿತು. ಕುಶಲ ಕರ್ಮಿಗಳು ಕೆಲಸವಿಲ್ಲದವರಾಗಿ ತಮ್ಮ ವೃತ್ತಿಯನ್ನೇ ತೊರೆದರು. ನಯಗಾರಿಕೆಯ ಶಿಲೆಯ ಬಳಕೆ ತಪ್ಪಿ ಮತ್ತೆ ಒರಟು ಚಪ್ಪಡಿ ಕಲ್ಲಿನ ಬಳಕೆ ಆರಂಭವಾಯಿತು. ಅಕ್ಷರಗಳು ಗಾತ್ರದಲ್ಲಿ ದೊಡ್ಡದಾದವು. ದೇವಾಲಯದ ಮುಂದೆ ಆಲಂಕಾರಿಕವಾಗಿ ನಿಲ್ಲಿಸುತ್ತಿದ್ದ ಶಾಸನಗಳು ಕ್ರಮೇಣ ಮಾಯವಾಗತೊಡಗಿ ದೇವಾಲಯದ ಗೋಡೆಗಳ ಮೇಲೆ ಶಾಸನಗಳನ್ನು ಕೆತ್ತಿದರು. ಆದರೂ ಆಂಧ್ರ ಮತ್ತು ಕರ್ನಾಟಕದ ಭಾಗಗಳು ವಿಜಯನಗರ ಕಾಲದಲ್ಲಿಯೂ ಒಂದೇ ಆಗಿತ್ತು. ವಿಜಯನಗರದ ಅರಸರ ನಂತರ ದಕ್ಷಿಣ ಭಾರತ ಅನೇಕ ಸಣ್ಣ ಪುಟ್ಟ ಅರಸರ ಪಾಲಾಯಿತು. ಅಲ್ಲಲ್ಲಿ ಮುಸ್ಲಿಂ ಆಡಳಿತಗಾರರೂ ಆಡಳಿತ ಸೂತ್ರಗಳನ್ನು ಹಿಡಿದಿದ್ದರು. ಈ ಕಾಲದಲ್ಲಿ ಅರಾಬಿಕ್ ಹಾಗೂ ಪರ್ಷಿಯನ್ ಶಾಸನಗಳಲ್ಲದೆ ಮರಾಠರ ಆಡಳಿತ ಪ್ರದೇಶ ದಲ್ಲಿ ಮರಾಠಿ ಭಾಷೆ ಮತ್ತು ಲಿಪಿಯ ಶಾಸನಗಳು ಕಾಣಬರುತ್ತವೆ. ಮರಾಠರ ಆಗಮನದೊಂದಿಗೆ ಕನ್ನಡದಲ್ಲಿ ಮೋಡಿ ರೀತಿಯ ಬರವಣಿಗೆ ಆರಂಭವಾಗುತ್ತದೆ.

ತಮಿಳುನಾಡಿನ ಶಾಸನ ಲಿಪಿಗಳು ನೇರವಾಗಿ ಅಶೋಕನ ಶಾಸನಗಳಿಂದ ಬಂದಿದ್ದರೂ ಅವು ದಕ್ಷಿಣದಲ್ಲಿ ಬಳಕೆಯಾಗಿ ಅಲ್ಲಿಂದ ತಮಿಳುನಾಡಿನಲ್ಲಿ ಬಳಕೆಗೆ ಬಂದು ಸಾಮಾನ್ಯವಾಗಿ ತಮಿಳು ವಿದ್ವಾಂಸರು ಭಟ್ಟಿಪ್ರೋಶಾಸನ ಲಿಪಿಗಳಿಂದ ತಮಿಳು ಲಿಪಿಗಳು ವಿಕಾಸವಾಗಿವೆಯೆಂದು ಹೇಳುತ್ತಾರೆ. ತಮಿಳುನಾಡಿನಲ್ಲಿ ದೊರೆತಿರುವ ತಮಿಳು ಬ್ರಾಹ್ಮಿ ಶಾಸನಗಳನ್ನು ಸ್ಥಳೀಯ ಉಚ್ಚಾರಕ್ಕೆ ತಕ್ಕಂತೆ ಬರೆಯಲಾಗಿದೆ. ಅಶೋಕನ ಬ್ರಾಹ್ಮಿ ಲಿಪಿಗಳಿಗಿಂತ ಉದ್ದವಾಗಿದ್ದು ಅಗಲ ಕಡಿಮೆಯಾಗಿದೆ. ಅಲ್ಲಿಂದ ಮುಂದೆ ಬಹಳ ವರ್ಷಗಳು ತಮಿಳಿನಲ್ಲಿ ಶಾಸನಗಳು ದೊರೆಯುವುದಿಲ್ಲ. ಕ್ರಿ.ಶ. 3 ನೆಯ ಶತಮಾನದಿಂದೀಚೆಗೆ ಕಂಚಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ರಾಜ್ಯಭಾರ ಮಾಡಿದ ಪಲ್ಲವರು ಹಾಕಿಸಿರುವ ಶಾಸನಗಳ ಲಿಪಿಗಳೇ ತಮಿಳುನಾಡಿನಲ್ಲಿ ಬಳಕೆಯಲ್ಲಿರುವ ಗ್ರಂಥಲಿಪಿಗೆ ಕಾರಣವಾಗಿದೆ. ಪಲ್ಲವರು ಅಶೋಕನ ಬ್ರಾಹ್ಮಿಯಿಂದ ವಿಕಸನಗೊಂಡ ಶಾತವಾಹನರ ಲಿಪಿಯನ್ನೇ ಪಡೆದುಕೊಂಡು ಗುಪ್ತರ ಹಾಗೂ ವಾಕಟಕರ ಲಿಪಿಯ ಪ್ರಭಾವದಿಂದ ದೂರ ಉಳಿದರು. ಹೀಗಾಗಿ ಕರ್ನಾಟಕದಲ್ಲಿ ಬಳಕೆಗೆ ಬಂದ ಲಿಪಿಗಿಂತ ಸ್ವಲ್ಪ ಬೆಳೆಯತೊಡಗಿತು. ಕ, ರ, ಅ, ಮೊದಲಾದ ಅಕ್ಷರಗಳು ಉದ್ದವಾಗಿ  ಬೆಳವಣಿಗೆಯನ್ನು  ಪಡೆದಿದ್ದು ಉಳಿದ ಅಕ್ಷರಗಳು ರೇಖೆಗಳ ಬೆಳವಣಿಗೆ ಬಿಟ್ಟು ದುಂಡು ರೇಖೆಗಳಲ್ಲಿ ಬೆಳೆದಿರುವುದನ್ನು ಗಮನಿಸಬಹುದು. ‘ಆ’ ಕಾರ ‘ಎ’ ಕಾರ ‘ಒ’ ಕಾರದ ಕಾಗುಣಿತಗಳು ಪಲ್ಲವರ ಕಾಲದವರೆಗೆ ಅಕ್ಷರಗಳಿಗೆ ಅಂಟಿಕೊಂಡಂತಿದ್ದು ಅಲ್ಲಿಂದ ವ್ಯಂಜನದ ಮುಂದೆ, ಹಿಂದೆ ಪ್ರತ್ಯೇಕವಾಗಿ ಸೂಚಿತವಾಗುತ್ತದೆ. ತಮಿಳುನಾಡಿನ ಶಾಸನ ಲಿಪಿಗಳನ್ನು ತಮಿಳು ಗ್ರಂಥ ಮತ್ತು ತಮಿಳು ‘ವಟ್ಟೆಳತ್ತು’ ಎಂದು ಕರೆಯುತ್ತಾರೆ. ಮಲೆಯಾಳ ಭಾಷೆಗೆ ಬಳಸುವ ಲಿಪಿ ತಮಿಳು ಗ್ರಂಥದಿಂದಲೇ ಉದಿಸಿದ್ದು. ಮಲೆಯಾಳ ಅಕ್ಷರಗಳು ತಮಿಳು ಗ್ರಂಥಾಕ್ಷರಗಳಿಗಿಂತ ಹೆಚ್ಚು ದುಂಡಗಿವೆ. ತಮಿಳು ಗ್ರಂಥಲಿಪಿಯಲ್ಲಿ ಬರೆದ ಅನೇಕ ಹಸ್ತಪ್ರತಿಗಳು ಕರ್ನಾಟಕದ ಮಲೆನಾಡು ಪ್ರದೇಶದಲ್ಲಿ ದೊರೆತಿದ್ದು ಆ ಲಿಪಿಯನ್ನು ‘ತಿಗಳಾರಿ’ ಎಂದು ಕರೆಯುತ್ತಾರೆ.

ಆಗ್ನೇಯ ಏಷಿಯಾದಲ್ಲಿ ಅಂದರೆ ಈಗಿನ ಮಲೇಶಿಯಾ, ಥಾಯ್ ಲ್ಯಾಂಡ್, ಕಾಂಬೋಡಿಯ, ವಿಯಟ್ನಾಂ, ಶ್ರೀಲಂಕಾ ಮತ್ತು ಮ್ಯಾನ್ಮಾರ್ ದೇಶಗಳ ಲಿಪಿಗಳಿಗೆ ಮೂಲ ಅಶೋಕನ ಬ್ರಾಹ್ಮೀಲಿಪಿ ಜನ್ಯ ಲಿಪಿಗಳೇ ಆಗಿವೆ. ಭಾರತದ ವ್ಯಾಪಾರಿಗಳು ವ್ಯಾಪಾರಕ್ಕಾಗಿ ಆ ದೇಶಗಳಿಗೆ ಹೋದಾಗ ಅಲ್ಲಿ, ಇಲ್ಲಿನ ಸಂಸ್ಕೃತಿಯನ್ನು ಹರಡಿದಂತೆ ಲಿಪಿಯನ್ನು ಬಳಕೆಗೆ ತಂದರು. ಮುಖ್ಯವಾಗಿ ಗುಪ್ತರ ಕಾಲದ ಲಿಪಿಗಳು ಕಂಡು ಬಂದಿವೆ. ಹಾಗಾಗಿ ಕ್ರಿ.ಶ. ಸು. 5ನೆಯ ಶತಮಾನದಿಂದಲೇ ಈ ಸಂಪರ್ಕವಿದ್ದು ಲಿಪಿ ಆ ಕಾಲಕ್ಕೆ ಅಲ್ಲಿ ಹರಡಿರಬೇಕು. ಈಗಿನ ಲಿಪಿಗಳು ಈ ಲಿಪಿಗಳಿಂದಲೇ ರೂಪುಗೊಂಡಿವೆ. ಈ ದೇಶಗಳಲ್ಲಿ ದೊರೆತ ಆರಂಭಿಕ ಲಿಪಿಗಳು ಹೆಚ್ಚಾಗಿ ದಕ್ಷಿಣ ಭಾರತದಲ್ಲಿ ಬಳಕೆಯಲ್ಲಿದ್ದ ಲಿಪಿಗಳನ್ನೇ ಹೋಲುತ್ತವೆ. ಹೀಗಾಗಿ ಈ ಲಿಪಿಗಳಿಗೆ ಮೂಲ ದಕ್ಷಿಣ ಭಾರತದಲ್ಲಿ ಬಳಕೆಯಲ್ಲಿದ್ದ ಲಿಪಿಗಳೆಂದೇ ಹೇಳಬಹುದಾಗಿದೆ.

ಶ್ರೀಲಂಕಾ ಭಾರತ ಉಪಖಂಡಕ್ಕೆ ಅತಿ ಸಮೀಪವಿರುವ ದೇಶ. ಅಶೋಕನು ಕ್ರಿ.ಪೂ. 3ನೆಯ ಶತಮಾನದಲ್ಲಿಯೇ ಈ ದೇಶಕ್ಕೆ ಧರ್ಮ ಪ್ರಸಾರಕ್ಕಾಗಿ ಧರ್ಮ ಮಹಾಮಾತ್ರರನ್ನು ಕಳುಹಿಸಿದ್ದ. ಬಹುಶಃ ಅವರೊಂದಿಗೇ ಇಲ್ಲಿ ಅಶೋಕನ ಬ್ರಾಹ್ಮಿಲಿಪಿ ಬಳಕೆಗೆ ಬಂದಿರಬೇಕು. ಇಲ್ಲಿ ದೊರೆಯುವ ಪ್ರಾಚೀನ ಶಾಸನ ಕ್ರಿ.ಶ. ಒಂದನೆಯ ಶತಮಾನಕ್ಕೆ ಸೇರಿದ್ದು. ಪಲ್ಲವ ಲಿಪಿಯ ರೀತಿಯಲ್ಲಿ ಎಂಟು ಒಂಭತ್ತನೆಯ ಶತಮಾನದವರೆಗೆ ಬೆಳವಣಿಗೆಯನ್ನು ತೋರಿ ಮುಂದೆ ದುಂಡಾಕೃತಿಯನ್ನು ಪಡೆಯುತ್ತವೆ.

ಹಿಂದೆ ಆಫ್ಘಾನಿಸ್ತಾನ, ಏಷಿಯಾ ಮೈನರ್ ದೇಶಗಳಲ್ಲೂ ಈ ಲಿಪಿ ಬಳಕೆಯಲ್ಲಿತ್ತು. ಅಲ್ಲೆಲ್ಲಾ ಬೌದ್ಧ ಧರ್ಮದ ಯತಿಗಳು ಈ ಲಿಪಿಯ ಹರಡುವಿಕೆಗೆ ಕಾರಣರಾಗಿದ್ದರು. ಅರಬರ ಆಕ್ರಮಣದೊಂದಿಗೆ ಅಲ್ಲಿ ಈ ಲಿಪಿ ಕಾಣೆಯಾಗುತ್ತಾ ಬಂತು. ಟಿಬೆಟ್ಟಿನಲ್ಲಿ ಈಗ ಬಳಕೆಯಲ್ಲಿರುವ ಲಿಪಿಗಳು ಗುಪ್ತರ ಲಿಪಿಯಿಂದ ಬೆಳೆದ ಲಿಪಿಗಳಾಗಿವೆ.

ಪಾರಂಪರಿಕವಾಗಿ ತಾಳೆಗರಿಯ ಮೇಲೆ ಕಂಠದಿಂದ ಬರೆಯುತ್ತಿದ್ದ ಬರವಣಿಗೆ ಕಾಗದದ ಆಗಮನದ ನಂತರ ಲೇಖನಿಯಲ್ಲಿ ಬರೆಯತೊಡಗಿದ ಮೇಲೆ ಲಿಪಿಗಳಲ್ಲಿ ಸ್ವಲ್ಪ ಬದಲಾವಣೆಗಳು ಕಾಣಿಸಿಕೊಂಡವು. ಅಕ್ಷರಗಳನ್ನು ಒಂದರೊಡನೊಂದು ಸೇರಿಸಿ ಬರೆಯುವುದು. ‘ತ’ ಕಾರದ ಒತ್ತಕ್ಷರಗಳನ್ನು ಉದ್ದಕ್ಕೆ ಎಳೆಯುವುದು ಮುಂತಾದ ಬೆಳವಣಿಗೆಗಳು ಕಂಡುಬಂದವು. ಕಲ್ಲಚ್ಚು ಮುದ್ರಣ ಯಂತ್ರ ಬಂದಾಗಲೂ ಪಾರಂಪರಿಕವಾಗಿ ರೂಢಿಯಲ್ಲಿದ್ದ ಲಿಪಿಗಳನ್ನೇ ಬಳಸಿದರು. ಅದು ಬರವಣಿಗೆಯ ಯದ್ವತ್ ರೂಪದಂತಿತ್ತು. 1850 ರ ಸುಮಾರಿಗೆ ಮುದ್ರಣ ಯಂತ್ರಗಳಲ್ಲಿ ಅಚ್ಚಿನ ಮೊಳೆಯ ಜೋಡಣೆ ಬಂದಾಗ ಅಚ್ಚಿನಲ್ಲಿ ಆರಂಭಕ್ಕೆ ಬರಹದ ಲಿಪಿ ಮಾದರಿಗಳನ್ನೆಲ್ಲ ಅನುಸರಿಸಿದರೂ ಅಕ್ಷರಗಳನ್ನು ದುಂಡಗೆ ತಿದ್ದಿಕೊಂಡರು. ಮುದ್ರಣದ ಅಚ್ಚಿನ ಮೊಳೆಗಳು ಸುಧಾರಿಸುತ್ತಿದ್ದಂತೆ ‘ಹ’ ಕಾರವನ್ನು ಮೊದಲಿನ ರೂಪವನ್ನು ಬಿಟ್ಟು ಎರಡು ದುಂಡಗಿನ ವೃತ್ತಗಳ ಮೇಲೆ ತಲೆಕಟ್ಟು ನೀಡಿ ಸುಧಾರಿಸಿಕೊಂಡರು. ಬೆರಳಚ್ಚು ಯಂತ್ರ ಬಳಕೆಗೆ ಬಂದಾಗ ಇಂಗ್ಲಿಶ್ ಬೆರಳಚ್ಚು ಯಂತ್ರದ ಗುಂಡಿಗಳಿಗೆ ಕನ್ನಡ ಲಿಪಿಗಳನ್ನು ಅಳವಡಿಸಿದಾಗ  ‘ಭ’ ಕಾರದ ತಲೆಕಟ್ಟು, ಹಾಗೆಯೇ ಅನೇಕ ಒತ್ತಕ್ಷರಗಳು ಸರಿಯಾಗಿ ಮೂಡುತ್ತಿರಲಿಲ್ಲ. ಆದರೂ ಜನ ಸುಧಾರಣೆಯನ್ನು ಬಯಸುತ್ತಿದ್ದುದರಿಂದ ಆ ಬದಲಾವಣೆಗಳನ್ನು ಸ್ವೀಕರಿಸಿದರು. ಈಗ ಕಂಪ್ಯೂಟರ್ ಬಂದಿದ್ದು ಇದರಲ್ಲಿ ಕನ್ನಡ ಲಿಪಿಯ ಅಳವಡಿಕೆಯಾಗಿದ್ದು ಪೂರ್ಣವಾಗಿ ಲೋಪವಿಲ್ಲದೆ ಅಕ್ಷರಗಳನ್ನು ಒತ್ತಬಹುದಾಗಿದೆ.