(ಕ್ರಿ. ಶ. ೧೪೫೨-೧೫೧೯) (ಓಡೊಮೀಟರ್, ಮಾಯಾಲಾಂದ್ರ ಮತ್ತು ರೆಂಚ್)

ಆಡು ಮುಟ್ಟದ ಗಿಡವಿಲ್ಲ ಲಿಯೊನಾರ್ಡೊ ಡ ವಿಂಚಿ ಮಾಡದ ಕಾರ್ಯವಿಲ್ಲ! ಅಷ್ಟು ಬಹುಮುಖ ಪ್ರತಿಭೆಯ ವ್ಯಕ್ತಿಯಾಗಿದ್ದ ಲಿಯೊನಾರ್ಡೊ ಡ ವಿಂಚಿ, ವರ್ಣಚಿತ್ರಕಾರ, ಸಂಶೋಧಕ, ಗಣಿತಜ್ಞ, ಎಂಜಿನೀಯರ‍್, ಸಂಗೀತಗಾರ, ಅಂಗರಚನಾಶಾಸ್ತ್ರಜ್ಞ… ಹೀಗೆಯೇ ಮುಂದುವರಿಯುತ್ತದೆ ಆತನ ಬಗೆಗಿನ ವಿವರಣೆ.

ಲಿಯೊನಾರ್ಡೊ ಡ ವಿಂಚಿ ೧೪೫೨ರಲ್ಲಿ ಇಟಲಿಯ ವಿಂಚಿ ಎಂಬ ಊರಿನಲ್ಲಿ ಜನಿಸಿದರು. ಮುಂದೆ ಇಟಲಿಯ ಪುನರುತ್ಥಾನ ಕಾರ್ಯದ ಕೇಂದ್ರವಾಗಿದ್ದ ಫ್ಲಾರೆನ್ಸಿನಲ್ಲಿ ನೆಲೆಸಿ ಈತ ತನ್ನ ಕಾರ್ಯಕ್ಷೇತ್ರಗಳನ್ನು ವಿಸ್ತರಿಸಿಕೊಂಡರು. ಪ್ಯಾರಿಸ್ಸಿನ ಲವ್ರೆ ವಸ್ತು ಸಂಗ್ರಹಾಲಯದಲ್ಲಿ ಸುರಕ್ಷಿತವಾಗಿ ಇಡಲಾದ, ಈತ ತಯಾರಿಸಿದ ವರ್ಣಚಿತ್ರ “ಮೋನಾ ಲಿಸ್” ಇಂದಿಗೂ ಕಲಾ ಪ್ರೇಮಿಗಳ ಮನಸ್ಸನ್ನು ಸೂರೆಗೊಳ್ಳುತ್ತಿದೆ. ಮೂಲತಃ ಈ ವರ್ಣಚಿತ್ರದಿಂದಾಗಿಯೇ ಲಿಯೊನಾರ್ಡೊ ಡ ವಿಂಚಿ ಜಗದ್ವಿಖ್ಯಾತರಾಗಿದ್ದರೂ ಅವರ ಸಂಶೋಧನೆಗಳು ಕೂಡ ಮುಖ್ಯವಾದವುಗಳೆಂಬುದನ್ನು ಮರೆಯುವಂತಿಲ್ಲ. ಓಡೊಮೀಟರ‍್, ರೆಂಚ್ ಮತ್ತು ಮ್ಯಾಜಿಕ್ ಲ್ಯಾಂಟರ್ನ್ (ಮಾಯಾಲಾಂದ್ರ)-ಇವು ಈತ ಮಾಡಿದ ಸಂಶೋಧನೆಗಳ ಫಲಗಳೆ. ಟ್ಯಾಂಕು, ಪ್ಯಾರಾಚ್ಯೂಟ್, ಕ್ರೇನು, ಮುದ್ರಣ ಯಂತ್ರ ಮೊದಲಾದವುಗಳನ್ನು ತಯಾರಿಸುವ ಕನಸು ಕಂಡಿದ್ದ ಈತ ಅವುಗಳಲ್ಲಿ ಕೆಲವು ವಸ್ತುಗಳ ಮಾದರಿಗಳನ್ನು ಕೂಡ ತಯಾರಿಸಿದ್ದರು. ಈತನ ಪ್ರತಿಭೆ ಖಗೋಳ ವಿಜ್ಞಾನ ಕ್ಷೇತ್ರದಲ್ಲೂ ಪ್ರದರ್ಶನಗೊಂಡಿದೆ. ಖಗೋಳ ವಿಜ್ಞಾನಿಯಾಗಿ ಈತ ಹಲವು ಖಗೋಳ ವೈಜ್ಞಾನಿಕ ವಿಧಾನಗಳನ್ನು ಕೂಡ ರೂಪಿಸಿದ್ದಾರೆ.

ಲಿಯೊನಾರ್ಡೊ ಡ ವಿಂಚಿಯಂಥ ಬಹುಮುಖ ಪ್ರತಿಭೆಯ ವ್ಯಕ್ತಿಗಳು ದೊರಕುವುದು ವಿರಳ. ಈ ಪ್ರತಿಭಾ ಸಂಪನ್ನ ವ್ಯಕ್ತಿ ೧೫೧೯ರಲ್ಲಿ ನಿಧನ ಹೊಂದಿದರು.

ಎಲ್ಲ ಬಲ್ಲವರಿಲ್ಲ. ಎಲ್ಲ ಬಲ್ಲವರು ಬಹಳಿಲ್ಲ. ಎಲ್ಲ ಬಲ್ಲ ಅಲ್ಪಸಂಖ್ಯಾತರ ಗುಂಪಿಗೆ ಸೇರಿದ ವ್ಯಕ್ತಿ ಡ ವಿಂಚಿ.