ನೃತ್ಯ ಕೇವಲ ಸೃಜನಾತ್ಮಕ ಅಭಿವ್ಯಕ್ತಿಯಲ್ಲ; ಅದೊಂದು ಅನಂತದೊಂದಿಗೆ ಒಂದಾಗುವ ಕಲೆ ಎಂಬ ಸಿದ್ದಾಂತದಲ್ಲಿ ಅಪಾರ ನಂಬಿಕೆ ಹೊಂದಿರುವ ನೃತ್ಯ ಕಲಾವಿದೆ ಶ್ರೀಮತಿ ಲೀಲಾ ರಾಮನಾಥನ್. ನಾಡಿನ ಹಿರಿಯ ಕಲಾವಿದೆಯಾಗಿರುವ ಲೀಲಾ ರಾಮನಾಥನ್ ಕೋಲಾರದ ಪುಟ್ಟಪ್ಪ, ರಾಂಗೋಪಾಲ್, ಬಾಲಸುಬ್ರಹ್ಮಣ್ಯ ಪಿಳ್ಯೆ, ಮೈಲಾಪುರ ಗೌರಿ ಅಮ್ಮಾಳ್, ಮೀನಾಕ್ಷಿ ಸುಂದರಂ ಪಿಳ್ಳೆ ಮುತ್ತಯ್ಯ ಪಿಳ್ಳೆ ಹಾಗೂ ಕೆ.ಪಿ. ಕಿಟ್ಟಪ್ಪ ಪಿಳ್ಳೆ ಇವರುಗಳ ಬಳಿ ಭರತ ನಾಟ್ಯ ಶಿಕ್ಷಣ ಪಡೆದು ಕಲೆಯ ಅಂತರಂಗ-ಬಹಿರಂಗ ಅರಿತಿದ್ದಾರೆ. ಹಾಗೆಯೇ ಭೌರಿ ಪ್ರಸಾದರಿಂದ ಕಥಕ್ ನೃತ್ಯವನ್ನೂ -ಚೆಂದೂ ಪಣಿಕ್ಕರ್ ಅವರಿಂದ ಕಥಕ್ಕಳಿ ನೃತ್ಯವನ್ನೂ ಹಾಗೂ ದೇವಿಪ್ರಸಾದ್‌ರಿಂದ ಓಡಿಸ್ಸಿ ನೃತ್ಯವನ್ನು ಕಲಿತಿದ್ದಾರೆ.

ಇಂದು ಪಂದನಲ್ಲೂರು ಎಂ. ಗೋಪಾಲಕೃಷ್ಣ ಅವರೊಂದಿಗೆ ಲೀಲಾ ರಾಮನಾಥನ್ ನೃತ್ಯ ಕಲೆಯ ಬಹುಮುಖ ಪ್ರಗತಿಗಾಗಿ ದುಡಿಯುತ್ತಿದ್ದಾರೆ. ವಿಶ್ವದ ಬಹುತೇಕ ಕಲಾ ವೇದಿಕೆಗಳಲ್ಲಿ ಲೀಲಾ ರಾಮನಾಥನ್ ತಮ್ಮ ನೃತ್ಯ ಕಲೆಯ ಪರಿಚಯವನ್ನು ಮಾಡಿದ್ದಾರೆ.

ಮೈಸೂರು ವಿಶ್ವವಿದ್ಯಾಲಯದ ಇಂಗ್ಲೀಷ್ ಎಂ.ಎ.(ಆನರ್ಸ್) ಪದವಿ ಗಳಿಸಿರುವ ಲೀಲಾ ರಾಮನಾಥನ್ ಅನೇಕ ನೃತ್ಯ ರೂಪಕಗಳನ್ನು ರೂಪಿಸಿದ್ದಾರೆ. ಕಲೆಯ ಬಗ್ಗೆ ಉತ್ತಮ ಲೇಖನಗಳನ್ನೂ ಸಹ ಆಗಿಂದಾಗ್ಗೆ ಬರೆಯುತ್ತಿದ್ದಾರೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಲ್ಲಿ ಸುದೀರ್ಘ ಕಾಲ ಸದಸ್ಯರಾಗಿ ಸೇವೆ ಸಲ್ಲಿಸಿದ ಹಿರಿಮೆ ಇವರದಾಗಿದೆ.

ನೃತ್ಯ ಶಿಕ್ಷಣಕ್ಕಾಗಿ ಬೆಂಗಳೂರಿನಲ್ಲಿ ಲೀಲಾ ರಾಮನಾಥನ್ ಸ್ಥಾಪಿಸಿರುವ ಮೀನಾಕ್ಷಿ ಸುಂದರಂ ಸೆಂಟರ್ ಆಫ್ ಪರ್ಫಾಮಿಂಗ್ ಆರ್ಟ್ಸ್‌’ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಪ್ರತಿಷ್ಠಿತ ಸಂಘ-ಸಂಸ್ಥೆಗಳ ಗೌರವಗಳಿಗೆ ಈಗಾಗಲೇ ಪಾತ್ರರಾಗಿರುವ ಈ ನೃತ್ಯ ಕಲಾವಿದೆಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ೧೯೮೮-೮೯ನೇ ಸಾಲಿನ ಗೌರವ ಪ್ರಶಸ್ತಿ ಹಾಗೂ “ಕರ್ನಾಟಕ ಕಲಾ ತಿಲಕ” ಬಿರುದನ್ನು ಶ್ರೀಮತಿ ಲೀಲಾರಾಮನಾಥನ್ ರವರಿಗೆ ನೀಡಿ ಗೌರವಿಸಿದೆ. ಮುಂದೆ ಶ್ರೀಮತಿ ಲೀಲಾ ರಾಜ್ಯದ ಅತ್ಯುನ್ನತ ’ಶಾಂತಲಾ’ ಪ್ರಶಸ್ತಿಗೂ ಪಾತ್ರರಾಗಿದ್ದಾರೆ.