(ಕ್ರಿ.ಶ. ೧೬೩೨-೧೭೨೩) (ಸೂಕ್ಷ್ಮದರ್ಶಕ ಸಲಕರಣೆಗಳು)

ಬುಟ್ಟಿ ಹೆಣೆಯುವ, ಸಾರಾಯಿ ಮಾರುವ ಕುಟುಂಬಕ್ಕೆ ಸೇರಿದ್ದ. ಉಪಜೀವನಕ್ಕಾಗಿ ಕಿರಾಣಿ ಅಂಗಡಿಯನ್ನು ನಡೆಸುತ್ತಿದ್ದ ಹುಡುಗ ಮಹಾವಿಜ್ಞಾನಿಯಾದನೆಂದರೆ ನಂಬಲು ಸಾಧ್ಯವೆ? ಆದರೆ ಲುವೆನ್ ಹೊಕ್ ನ ವಿಷಯದಲ್ಲಿ ಇದು ಸತ್ಯ.

ಆಂಟೋನಿ ಲುವೆನ್ ಹೊಕ್ ೧೬೩೨ರಲ್ಲಿ ಹಾಲೆಂಡಿನ ಡೆಲ್ಫ್ ಪಟ್ಣಣದಲ್ಲಿ ಜನಿಸಿದರು. ಈತ ಬೇರೆ ಅನೇಕ ವಿಜ್ಞಾನಿಗಳಂತೆ ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳಿಗೆ ಹೋದವನಲ್ಲ. ಬುಟ್ಟಿಗಳನ್ನು ಹೆಣೆಯುವುದು, ಸಾರಾಯಿ ತಯಾರಿಸುವುದು ಈತನ ಕುಟುಂಬದ ವೃತ್ತಿಯಾಗಿತ್ತು. ಈತ ಇನ್ನೂ ಚಿಕ್ಕವನಿದ್ದಾಗಲೇ ತಂದೆಯನ್ನು ಕಳೆದುಕೊಂಡ. ಮಗ ಓದಲೆಂದು ತಾಯಿ ಅವನನ್ನು ಶಾಲೆಗೆ ಸೇರಿಸಿದಳು. ಆದರೆ ಕೌಟುಂಬಿಕ ಭಾರ ಹೆಚ್ಚಿದಾಗ ತನ್ನ ಹದಿನಾರನೆಯ ವಯಸ್ಸಿನಲ್ಲೇ ಶಾಲೆಗೆ ಶರಣು ಹೊಡೆದ. ಆತನಿಗೆ ಡಚ್ ಭಾಷೆಯೊಂದನ್ನು ಬಿಟ್ಟರೆ ಬೇರೆ ಯಾವ ಭಾಷೆಯೂ ಗೊತ್ತಿರಲಿಲ್ಲ. ಉಪಜೀವನಕ್ಕಾಗಿ ಕಿರಾಣಿ ಅಂಗಡಿಯೊಂದನ್ನು ತೆರೆದ. ಹಾಗಾದರೆ ಈತ ಮಹಾ ವಿಜ್ಞಾನಿಗಳ ಸಾಲಿಗೆ ಸೇರಿದ್ದು ಹೇಗೆ?

ಗಾಜು ತೆಗೆದುಕೊಂಡು ಅದಕ್ಕೆ ಸಾಣೆ ಹಿಡಿಯುವುದು, ಉಜ್ಜುವುದು ಇವರ ಹವ್ಯಾಸವಾಗಿತ್ತು. ಬೇರೆ ಬೇರೆ ಬಗೆಯ ಗಾಜುಗಳನ್ನು ಸಂಗ್ರಹಿಸಿ, ಉಜ್ಜಿ ಲೆನ್ಸ್ ಗಳಾಗಿ ಮಾರ್ಪಡಿಸುತ್ತಿದ್ದರು. ಅವುಗಳ ಮೂಲಕ ನೋಡಿದಾಗ ಸಣ್ಣ ವಸ್ತುಗಳು ದೊಡ್ಡದಾಗಿ ಕಾಣುತ್ತಿದ್ದವು. ಅವರು ಲೆನ್ಸ್ ಗಳನ್ನು ಮತ್ತೂ ಸಾಣೆ ಹಿಡಿದು ಉಜ್ಜಿ ಮತ್ತೆ ಮತ್ತೆ ವಸ್ತುಗಳನ್ನು, ಸೂಕ್ಷ್ಮ ವಸ್ತುಗಳನ್ನು ನೋಡತೊಡಗಿದರು. ಕಣ್ಣಿಗೆ ಕಾಣದ ಜೀವಿಗಳು ಲೆನ್ಸ್ ನಲ್ಲಿ ಕಾಣತೊಡಗಿದಾಗ ಸಂತೋಷಪಟ್ಟರು, ಆಶ್ಚರ್ಯಪಟ್ಟರು. ಜೀವಿಗಳು ದೈವ ಸೃಷ್ಟಿ ಅಲ್ಲ ಎಂಬುದನ್ನು ತನ್ನ ಸೂಕ್ಷ್ಮದರ್ಶಕ ಲೆನ್ಸ್ ಗಳಿಂದಲೇ ಖಚಿತ ಮಾಡಿಕೊಂಡರು. ಸೂಕ್ಷ್ಮದರ್ಶಕವೊಂದನ್ನು ತಯಾರು ಮಾಡಿ ತಾನು ನೀರು, ಗಾಳಿ, ಕಲ್ಮಶಗಳಲ್ಲಿ ಅಸಂಖ್ಯಾತ ಸೂಕ್ಷ್ಮ ಜೀವಿಗಳನ್ನು ಅದರ ಮೂಲಕ ನೋಡಿದ ಅಂಶವನ್ನು ಇಂಗ್ಲೆಂಡಿನ ರಾಯಲ್ ಸೊಸೈಟಿಗೆ ಬರೆದು ತಿಳಿಸಿದರು. ಲುವೆನ್ ಹೊಕ್ ರ ಅಪೂರ್ವ ಶೋಧನೆಯನ್ನು ಮೆಚ್ಚಿ ರಾಯಲ್ ಸೊಸೈಟಿ ಅವರನ್ನು ಅದರ ಫೆಲೊ ಆಗಿ ಆರಿಸಿತು.

ವಿಜ್ಞಾನಿಗಳ ಕಣ್ಣೆದುರು ಸೂಕ್ಷ್ಮಜೀವಿಗಳ ಜಗತ್ತನ್ನು ತೆರೆದಿಟ್ಟ ಲುವೆನ್ ಹೊಕ್ ೧೭೨೩ರಲ್ಲಿ ನಿಧನ ಹೊಂದಿದರು.